Tuesday, February 24, 2015

ಸಿಂಗಾರದ ಹೊರೆಯೇಕೆ...-ಹವ್ಯಕ ವಾರ್ತೆ ಫೆಬ್ರವರಿ ೨೦೧೫ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಸಿಂಗಾರದ ಹೊರೆಯೇಕೆ...!?


ಈ ಡ್ರೆಸ್‍ಗಳ ಬಗ್ಗೆ,ತಲೆಕಸವಿನ ಹಲವು ನಮೂನೆ ಸ್ಟೈಲುಗಳ ಬಗ್ಗೆ, ಮೋರೆಯ ಅಂದ,ಚೆಂದ ಮಾಡ್ಸುದರ ಬಗ್ಗೆ ಕಾಳಜಿ ವಹಿಸುತ್ತ ಜೆನರ ನೋಡಿದರೆ ಆಶ್ಚರ್ಯ ಆವುತ್ತು! ಇಂತದ್ದಕ್ಕೆಲ್ಲಾ ಇವೆಲ್ಲಾ ಇಷ್ಟು ಸಮಯವ ಹೇಂಗೆ ಮಾಡಿಕೊತ್ತವು ಹೇಳಿ ಎಷ್ಟೋ ಸರ್ತಿ ಆಲೋಚನೆ ಆಯಿಕ್ಕೊಂಡಿರ‍್ತು! ಆನು ಉದಿಯಪ್ಪಗ ಎದ್ದಿಕ್ಕಿ ರಜ್ಜ ಕೆಲಸಂಗಳ ಮುಗುಶಿಕ್ಕಿ ಲಾಯ್ಕಕ್ಕೆ ಮಿಂದು ಒಂದು ತೊಳದು ಕ್ಲೀನಿಪ್ಪ ಚೂಡೀದಾರನ್ನೋ, ಸೀರೆಯನ್ನೋ ಹಾಕಿಯೊಂಡು, ಮೋರಗೆ ರಜ್ಜ ಪೌಡರ್ ಹಾಕಿದಾಂಗೆ ಮಾಡಿ ತೊಗರೀಬೇಳೆ ಗಾತ್ರದ ಒಂದು ಕೆಂಪು ಸ್ಟಿಕ್ಕರ್ ಬಿಂದಿಯ ಹಣೆಗೆ ಅಂಟಿಸಿ, ತಲೆಯ ಲಾಯ್ಕಲ್ಲಿ ಬಾಚಿ ಹೆಗಲಿಂದ ರಜ್ಜ ಕೆಳಂಗೆ ಇಪ್ಪಷ್ಟೂ ತಲೆಕಸವಿನ  ಸೇರಿಸಿ ಒಂದು ದೊಡ್ಡ ಕಪ್ಪು ರಬ್ಬರ್ ಬ್ಯಾಂಡ್ ಹಾಕಿ ಮಡಿಸಿ ಕಟ್ಟಿದರೆ ಎನ್ನ ಅಲಂಕಾರ ಮುಗುತ್ತು! ಆಫೀಸು, ಮನೆ, ಬ್ಯಾಂಕಿಂಗೆ ಪೈಸೆ ಕಟ್ಟುಲೋ, ತೆಗೆವಲೋ, ಮಕ್ಕಳ ಸಂಗೀತ, ಡ್ಯಾನ್ಸ್ ಕ್ಲಾಸಿಂಗೆ ಬಿಡ್ಲೋ, ಅಂಗಡಿಗೆ ಸಾಮಾನು ತಪ್ಪಲೆ ಹೋಪಾಗಲೋ.....ಎಲ್ಲಾ ಕಡೆಂಗೂ ಅದೇ ಡ್ರೆಸ್, ಅದೇ ಕೆಂಪು ದೊಡ್ಡ ಬಿಂದಿ, ಅದೇ ತಲೆಕಸವಿನ ಸ್ಟೈಲು....ಒಟ್ಟಾರೆ ಹೇಳ್ತರೆ ಅದೇ ಅವತಾರ! ಆ ಡ್ರೆಸ್ಸಿನ ಬದಲು ಮಾಡುದು ಇರುಳಪ್ಪಗ ಮಿಂದಿಕ್ಕಿ ನೈಟಿ ಹಾಕಿಕೊಂಬಗ ಮಾಂತ್ರ! ಅಂಬಗಂಬಗ ವಸ್ತ್ರ ಬದಲು ಮಾಡುದು, ಅಲಂಕಾರ ಮಡಿಕೊಂಬದು ಎನ್ನ ಕೈಯಲ್ಲಾಗದ ಕೆಲಸಂಗೊ! ಹಾಂಗೆ ಆನಿದ್ದೆ ಹೇಳಿ ಎನ್ನಾಂಗೆ ಎಲ್ಲೋರೂ ಇರೇಕು ಹೇಳಿ ಹೇಳುತ್ತ ಜೆನ ಆನಲ್ಲ! ಹಾಂಗೆಲ್ಲಾ ಅಲಂಕಾರ ಮಾಡಿಯೊಳ್ಳಿ ಹೇಳಿ ಪ್ರೋತ್ಸಾಹ ಮಾಡುವ ಜೆನವೂ ಆನಲ್ಲ! ಚೆಂದಕ್ಕೆ ಡ್ರೆಸ್ ಮಾಡಿದವರ ನೋಡ್ಲೆ ಮಾಂತ್ರ ಎಂತದೇ ಹೇಳಿ ಎನಗಂತೂ ಕುಶಿ ಆವುತ್ತು! ಎನ್ನಂತಾ ನಮೂನೆಯವ್ವು ಬೇಕಾಷ್ಟು ಜೆನಂಗ ಇದ್ದವು ಸಮಾಜಲ್ಲಿ! ಮದುವೆಗೆ, ಪೂಜೆಗೆ, ಇತ್ಯಾದಿ ಕಾರ್ಯಕ್ರಮಂಗೊಕ್ಕೆ ಹೋಪಾಗ ಒಳ್ಳೆ ಡ್ರೆಸ್ ಹಾಕಿಕಾ ಹೇಳಿ ಮನೆಲಿ ಆರಾದರೂ ಒತ್ತಾಯ ಮಾಡಿದರೆ ಆನು ಹೇಳುದಿಷ್ಟೇ,"ಎನಗೆ ಸರಳವಾಗಿಪ್ಪಲೆ ಇಷ್ಟ, ಪ್ಲೀಸ್ ಎನ್ನಷ್ಟಕ್ಕೆ ಎನಗಿಷ್ಟದ ಹಾಂಗಿಪ್ಪಲೆ ಬಿಡಿ, ಹರುದ್ದರ, ಕೊಳಕ್ಕಾದ್ದರ ಹಾಕುತ್ತಿಲ್ಲೆನ್ನೇ ಆನು! ನಿಂಗೊಲ್ಲಾ ಒತ್ತಾಯ ಮಾಡುದೂ, ಕೆಪ್ಪೆಯ ತಕ್ಕಡಿ ಮೇಲೆ ಕೂರುಸುದೂ ಎರಡೂ ಒಂದೇ!" ಹೇಳಿ ನೆಗೆ ಮಾಡಿಕೊಂಡು ಹೇಳಿ ತಪ್ಪಿಸಿಕೊಂಡುಬಿಡ್ತೆ! ಅಂಬಗ ಅವ್ವೆಲ್ಲಾ, "ನಿನಗೆ ಹೇಳುದು ದಂಡ" ಹೇಳಿ ಮೋರೆಯ ತಿರುಗಿಸಿ ಹೋಗಿಬಿಡ್ತವು. ಯಾವ ವಿಷಯವೇ ಇರಲಿ, ಆರು ಎಷ್ಟೇ ಸಲಹೆ, ಸೂಚನೆಗಳ ಕೊಟ್ಟರೂ ಅಂತಿಮ ತೀರ್ಮಾನ ನಮ್ಮದೇ ಆದರೆ ಮಾಂತ್ರ ತೃಪ್ತಿ ಇರ‍್ತಲ್ಲದಾ?!



     ನಮ್ಮ ಸಮಾಜಲ್ಲಿ ಮೋರೆ ನೋಡಿ, ಧರಿಸಿದ ವಸ್ತ್ರವ ನೋಡಿ ಮಣೆ ಹಾಕುವವ್ವು ಬೇಕಾದಷ್ಟು ಜೆನಂಗ ಇದ್ದವು! ಎನಗೊಂದು ನಾಲ್ಕು ಜೆನ ಫ್ರೆಂಡುಗೊ ಇದ್ದವು. ಅವ್ವು ಇದುವರೆಗೂ ಎನ್ನ ಸರಳತೆಯಿಂದಾಗಿ ಎನ್ನಂದ ದೂರ ಆಯಿದವಿಲ್ಲೆ ಹೇಳುದು ಎನ್ನ ಜೀವನಲ್ಲಿ ಅತ್ಯಂತ ಖುಷಿಯ ವಿಚಾರ. ಅವೆಲ್ಲಾ ಅತೀ ಶೃಂಗಾರ ಮಾಡಿಕೊಳ್ಳದ್ದರೂದೇ ಎನ್ನಷ್ಟು ಶೃಂಗಾರ ಮಾಡಿಕೊಂಬದರ ತಾತ್ಸಾರ ಮಡುವ ಜೆನಂಗ ಅಂತೂ ಅಲ್ಲ. ಕಣ್ಣುಗಳ ಹುಬ್ಬಿನ ಕಾಮನಬಿಲ್ಲಿನ ಹಾಂಗೆ ಮಾಡಿಯೊಂಡು, ತಲೆ ಕಸವಿನ ಕಟ್ಟುವ ಸ್ಟೈಲು, ಕೆಮಿ, ಕೈಕಾಲಿನ ಆಭರಣಂಗಳ ಕೆಲವು ಸಂದರ್ಭಗಳಲ್ಲಿ ಬದಲಿಸಿ ಹಾಕಿಕೊಂಬದು, ಹೇಳಿರೆ ಹೋಪ ಸಭೆ, ಸಮಾರಂಭಂಗೊಕ್ಕೆ ತಕ್ಕ ಹಾಂಗೆ ಎನ್ನಂದ ಹೆಚ್ಚು ಶೃಂಗಾರಕ್ಕೆ ಬೆಲೆ ಕೊಡುವ ಅಭ್ಯಾಸ ಇಪ್ಪವಷ್ಟೇ! ನಾಲ್ಕು ಜೆನದ ಆ ಟೀಮಿಲಿ ಇತ್ತೀಚೆಗಷ್ಟೇ ಎನಗೆ ಅತ್ಯಂತ ಆತ್ಮೀಯಳಾದ ಒಂದು ಗೆಳತಿ ಇದ್ದು! ಬಾಕಿ ಇಪ್ಪ ಮೂರು ಜೆನ ಫ್ರೆಂಡುಗೊ ಎನಗೆ, "ಹಾಂಗೆ ಡ್ರೆಸ್ ಮಾಡು, ಹೀಂಗೆ ಮಾಡು, ಆ ನಮೂನೆಲಿ ತಲೆ ಕಟ್ಟು, ಹೀಂಗೆಲ್ಲಾ ಮಾಡಿದರೆ ನಿನ್ನ ಲುಕ್ಕೇ ಛೇಂಜಾವುತ್ತು ಹೇಳಿ ವರ್ಷಾನುಗಟ್ಟಲೆಯಿಂದ ಪ್ರಯತ್ನಿಸುತ್ತಾ ಬಂದಿತ್ತಿದ್ದವು. ಅವು ಹೇಳುದರ ಎಲ್ಲಾ ಆಚ ಕೆಮಿಲಿ ಕೇಳಿ, ಈಚ ಕೆಮಿಲಿ ಬಿಡುದು, ಪುನ: ಅವು ಹೇಳುದು, ಆನು ಅವು ಹೇಳಿದ್ದರ ಕೇಳಿ ಹೂಂಗುಟ್ಟುದು ಇಷ್ಟೇ ಆಯಿಕ್ಕೊಂಡಿತ್ತು! ಆದರೆ ಎನ್ನ ಹೊಸಾ ಫ್ರೆಂಡ್ ಹಾಂಗಲ್ಲ! "ಮನೆಲಿ ಎಂತ ಬೇಕಾದರೂ ಹಾಕಿಕೊ ಮಾರಾಯ್ತಿ, ಸಭೆ, ಸಮಾರಂಭಂಗೊಕ್ಕೆ ಹೋಪಗಲಾದರೂ ರಜ್ಜ ಡ್ರೆಸ್ ಸೆನ್ಸ್ ಬೆಳೆಶಿಕೋ, ತಲೆಯ ಬೇರೆ ಸ್ಟೈಲಿಲಿ ಕಟ್ಟು..., ಹಣೆಗೆ ನೀನು ಹಾಕುವ ಕೆಂಪು ಬಿಂದಿಯನ್ನೇ ಹಾಕು, ಆದರೆ ಆ ಕೆಂಪು ಬಿಂದಿಯ ನಡೂಕಿಲಿ ಕಲ್ಲಿಪ್ಪದರ ಹಾಕು..., ನಿಜವಾಗಿ ನೀ ಹೀಂಗೆಲ್ಲಾ ಮಾಡಿದರಿದ್ದನ್ನೆ, ಎಷ್ಟು ಲಾಯ್ಕ ಕಾಂಬೆ ಗೊಂತಿದ್ದಾ ನಿನಗೆ, ನೀನೇ ನೋಡಿದ್ದಿಲ್ಲೆಯಾ, ಮುದಿ ಪ್ರಾಯದವಕ್ಕೆ ಕೂಡಾ ಎಷ್ಟು ಸೌಂದರ್ಯ ಕಾಳಜಿ ಇರ‍್ತು ಹೇಳಿ, ನೀನುದೇ ರಜ್ಜ ಸೌಂದರ್ಯ ಪ್ರಜ್ಜೆ ಬೆಳೆಶಿಕೋ ಪುಟ್ಟಾ" ಹೇಳಿ ಎನಗೆ ಅದರ ಅಕ್ಕರೆಯ ಸಲಹೆ! "ನೀನು ಹೇಳುದು ಸರಿ ಮಾರಾಯ್ತಿ ಪ್ರಾಯದವರ ಕೆಲವರ ನೋಡಿದ್ದೆಪ್ಪಾ ನೋಡಿದ್ದೆ, ಒಲೆಯ ಬೂದಿ ಮೇಲೆ ಮನುಗಿ, ಮೈಕೊಡಪದ್ದೇ ಎದ್ದು ಬಂದ ನಾಯಿ, ಪುಚ್ಚೆಗಳ ಹಾಂಗಿರ‍್ತು ಒಬ್ಬೊಬ್ಬನ ಮೋರೆಲಿ ಪೌಡರು..ಹ್ಹ..ಹ್ಹ..ಹ್ಹಾ... ಆದರೆ ಆನು ಹಾಂಗಪ್ಪಲೆ ತಯಾರಿಲ್ಲೆ.... ನೋಡಿ ಸ್ವಾಮಿ, ನಾವಿರೋದೇ ಹೀಗೇ" ಹೇಳಿ ತಮಾಷೆ ಮಾತಿಲಿ ತೇಲಿಸಿಬಿಟ್ಟಪ್ಪಗ, "ಎಂತ ಮಾರಾಯ್ತಿ, ಆನಿಷ್ಟು ಹೊತ್ತು ಗಾಳಿಗೆ ಗುದ್ದಿದ್ದಾ?!, ನೀನು ಹೀಂಗೆಲ್ಲಾ ಉತ್ತರ ಕೊಟ್ಟು ತಪ್ಪಿಸಿಕೊಂಬಲೆ ಸಾಧ್ಯ ಇಲ್ಲೆ, ನಿನ್ನ ಹೀಂಗೇ ಇಪ್ಪಲೆ ಬಿಡ್ತೆ ಹೇಳಿ ಕನಸ್ಸಿಲಿಯೂ ಗ್ರೇಶಡ ನೀನು!" ಹೇಳಿ ಛಲ ಬಿಡದ ತಿವಿಕ್ರಮನ ಹಾಂಗೆ ಎನ್ನ ಬೆನ್ನು ಬಿಟ್ಟಿದಿಲ್ಲೆ! ಅದು ಹಾಂಗೇ ಅಲ್ಲದಾ ನಮಗೆ ಅತ್ಯಂತ ಆಪ್ತರಾದವ್ವು ನಮ್ಮ  ವೈಯುಕ್ತಿಕ ವಿಚಾರಂಗೊಕ್ಕೆ ಮನಸ್ಸು, ತಲೆ, ಪೈಸೆ ಎಲ್ಲಾ ಹಾಕಿ ಹೇಂಗಾರೂ ನಮ್ಮ ಸಮ ಮಾಡುಲೆ ನೋಡ್ತವು! ಅದು ಅವರ ಆತ್ಮೀಯತೆಯ, ನಿಷ್ಕಲ್ಮಶ ಹೃದಯದ ಸಂಕೇತ. ಎಂಗೊ ಪ್ರತೀ ಸರ‍್ತಿ ಭೇಟಿ ಆದಿಪ್ಪಗ ಅದು ಎನಗೆ ಹಾಂಗಿರು, ಹೀಂಗಿರು ಹೇಳುದು, ಆನು ಹೂಂ ಗುಟ್ಟಿಕೊಂಡೇ ಇಪ್ಪದು....ಹೀಂಗೇ ಆಗಿ ಹೋತು!  ಅದು ರಜ್ಜ ಸಮಯ ನೋಡಿತು, ಹೇಳಿ ಹೇಳಿ ಪಾಪ ಅದಕ್ಕೆ ಬೊಡುದತ್ತು ಹೇಳಿ ಕಾಣ್ತು! ಒಂದು ದಿನ ಎಂಗಳ ಮನೆಗೆ ಬಂದಿಪ್ಪಗ ಎನ್ನ ಹತ್ತರೆ ಕೂದೊಂಡಿದ್ದ ಆ ಜೆನ ಸೀದಾ ಎನ್ನ ತಲೆಕಸವಿಂಗೆ ಕಟ್ಟಿತ್ತಿದ್ದ ಕಪ್ಪು ರಬ್ಬರ್ ಬ್ಯಾಂಡಿನ ಎಳದು ತೆಗದು, "ಇದಾ ನಿನ್ನ ತಲೆಕಸವಿನ ಕೊಡಿ ಹೇಂಗಿದ್ದು ನೋಡು, ಕೊಡಿಯ ರಜ್ಜ ಕತ್ತರಿಸಿ ತೆಗದರೆ ಲಾಯ್ಕ, ಇದೊಳ್ಳೆ ಚೈನಾ ದೇಶದವ್ವು ಉದ್ದಕ್ಕೆ ಇಳಿಬಿಟ್ಟ ಗಡ್ಡದ ಕೊಡಿಯ ಹಾಂಗಿದ್ದು ಹೇಳಿಯಪ್ಪಗ ಎನಗುದೇ, ಎನ್ನ ಮಕ್ಕಗುದೇ ನೆಗೆ ತಡಕೊಂಬಲಾಯಿದಿಲ್ಲೆ! "ಓ ಮಾರಾಯ್ತಿ...ತಲೆಕಸವಿನ ಈ ಸಪುರ ಕೊಡಿಯೇ ಮಡಿಸಿಕಟ್ಟುವ ಎನ್ನ ಜುಟ್ಟಿಂಗೆ ಆಧಾರ, ಅದು ಎನಗೆ ಬೇಕು,ಅದರ ನೀನು ಕತ್ತರಿಸಿ ತೆಗದರೆ ಎನ್ನ ಪರಿಸ್ಥಿತಿ ಎಂತಕ್ಕು? ಎನ್ನ ಕೂದಲು ಒಂದು ನಿಯಮಕ್ಕೆ ಒಗ್ಗಿ ಹೋಯಿದು, ಎಷ್ಟೋ ವರ್ಷದ ಲಾಗಾಯ್ತು ಉದ್ದವೂ ಬತ್ತಿಲ್ಲೆ, ಗಿಡ್ಡವೂ ಆವುತ್ತಿಲ್ಲೆ. ಅದು ಇದ್ದ ಹಾಂಗೇ ಇರಾಲಿ ಮಾರಾಯ್ತಿ" ಹೇಳಿ ಎನ್ನ ತಲೆಕಸವಿನ ಮೇಲೆ ಎನಗಿಪ್ಪ ಪ್ರೀತಿ ಮತ್ತು ಹಕ್ಕು ತೋರಿಸಿದೆ! ಮಕ್ಕೊ ಇಬ್ರೂ ಹೇಳಿದವು, "ಅತ್ತೆ, ಅಮ್ಮಂಗೆ ಹೇಳುದು ಸುಮ್ಮಗೆ, ಎಂಗೊಗಂತೂ ಹೇಳೀ ಹೇಳಿ ಬೊಡುದತ್ತು, ಅಮ್ಮನ ಇನ್ನೂ ಮೂರು ಫ್ರೆಂಡುಗಳ ಅವಸ್ಥೆಯೂ ಹೀಂಗೇ, ಅಮ್ಮನ ವಾದವೇ ಅಮ್ಮಂಗೆ! ಇನ್ನು ನಿಂಗೊ ಹೇಳಿ ಅಮ್ಮನ ಸರಿ ಮಾಡುಲೆ ಮಾಂತ್ರ ಬಾಕಿ ಇಪ್ಪದು"! ಅದಕ್ಕಷ್ಟೇ ಸಾಕಾತು. ಅದು ಮಕ್ಕೊ ಹೇಳಿದ್ದರ ಸವಾಲಾಗಿ ತೆಕ್ಕಂಡು, "ಇದಾ ಮಕ್ಕಳೇ ಒಂದು ಕತ್ತರಿ ತನ್ನಿ" ಹೇಳಿ ತರಿಸಿಕೊಂಡು ಎನಗೆ ಹೇಳಿ ಅದು ಪೇಟೆಂದ ಪೈಸೆ ಕೊಟ್ಟು ತಂದ ಹೊಸಾ ಕ್ಲಿಪ್ಪಿನ ತೋರಿಸಿ ಹೇಳಿತು, "ಇದಾ ಮಾರಾಯ್ತಿ, ಇದು ನಿನಗಾಗಿ ತಂದದು..ನಿನ್ನ ತಲೆಕಸವಿನ ಕೊಡಿಯ ರಜ್ಜ ಕಟ್ ಮಾಡಿ ಮತ್ತೆ ಹೇಳಿಕೊಡ್ತೆ ಹೇಂಗೆ ಕಟ್ಟಿದರೆ ನಿನಗೆ ಲಾಯ್ಕ ಕಾಣ್ತು" ಹೇಳಿ ಹೇಳಿಯಪ್ಪಗ, "ಇಷ್ಟು ಒತ್ತಾಯ ಮಾಡ್ತಾ ಇದ್ದನ್ನೆ, ಹೊಸಾ ಕ್ಲಿಪ್ಪು ಕೂಡಾ ತೈಂದನ್ನೆಪ್ಪಾ...., ಬಾಕಿ ಇಪ್ಪ ಮೂರೂ ಫ್ರೆಂಡುಗೊ ಕೂಡಾ ಎಷ್ಟೋ ಸಮಯಂದ, "ನಿನ್ನ ಸ್ಟೈಲು ಚೇಂಜು ಮಾಡು" ಹೇಳಿ ಹೇಳಿಕೊಂಡೇ ಬೈಂದವು, ಅವರನ್ನು ಒಂದರಿಯಂಗೆ ಖುಷಿ ಪಡಿಸಿದ ಹಾಂಗೂ ಆತು ಹೇಳಿ ಗೇಶಿಕೊಂಡು, "ಆತಂಬಗ" ಹೇಳಿ ಕಣ್ಣು ಮುಚ್ಚಿಯೊಂಡು ಕಷ್ಟಲ್ಲೇ ಒಪ್ಪಿಗೆ ಕೊಟ್ಟೆ! "ಜಾಣ ಮರಿ" ಹೇಳಿ ಎನ್ನ ಹೊಗಳಿ ಅಟ್ಟಕ್ಕೇರಿಸಿ ತಲೆಕಸವಿನ ಕೊಡಿಯ ಕ್ಷಣ ಮಾತ್ರಲ್ಲಿ ಕತ್ತರಿಸಿಯೇ ಬಿಟ್ಟತ್ತು!...ಹಾಂಗೇ ಬಾಚಣಿಕೆ ತೆಕ್ಕಂಡು ಎನ್ನ ತಲೆಯ ಬಾಚಿ ತಲೆಯ ಎರಡೂ ಹೊಡೆಂದ ರಜ್ಜ ರಜ್ಜ ತಲೆಕಸವಿನ ಹಿಡುದು ಅದರೆಲ್ಲಾ ತಲೆಯ ಹಿಂಭಾಗದ ಮಧ್ಯಭಾಗಕ್ಕೆ ತಂದು ಒಟ್ಟು ಮಾಡಿಕ್ಕಿ, ಅದು ತಂದ ಕ್ಲಿಪ್ಪಿನ ಸಿಕ್ಕುಸಿ, ಕ್ಲಿಪ್ಪಿನ  ಜತೆಲಿ ತಂದಿದ್ದ ನಡೂಕಿಲಿ ಕಲ್ಲಿಪ್ಪ ಕೆಂಪು ಸ್ಟಿಕ್ಕರ್ ಬಿಂದಿಯ ಎನ್ನ ಹಣೆಗೆ ಆಂಟಿಸಿಕ್ಕಿ ಎನ್ನ ಕೈಗೆ ಕನ್ನಡಿಯ ಒಡ್ಡಿ ಕೇಳಿತು, "ಈಗ ಹೇಂಗೆ ಕಾಣ್ತೆ ನೀನೇ ನೋಡು, ಷೋಡಶಿ ಹಾಂಗೆ ಕಾಣ್ತೆ ಗೊಂತಿದ್ದಾ! ಆ ನಿನ್ನ ಕಪ್ಪು ಬಣ್ಣದ ಪತಾಕೆಲಿ(ರಬ್ಬರ್ ಬ್ಯಾಂಡಿಲಿ)ಜುಟ್ಟು ಕಟ್ಟಿಕೊಂಡಿಪ್ಪಾಗ ಮುದಿ ಪ್ರಾಯದವರ ಹಾಂಗೆ ಕಂಡೊಂಡಿತ್ತೆ ಗೊಂತಿದ್ದಾ?!" ಹೇಳಿ ಹೇಳಿತು! ಕನ್ನಡಿ ಒಳಾಣ ಎನ್ನ ಚಿತ್ರವ ಕಣ್ಣಿಲಿ ಕಣ್ಣಿಟ್ಟು ನೋಡಿಯಪ್ಪಗ ಬದಲಾವಣೆ ಕಂಡದಂತೂ ನಿಜ! ಆದರೂ ಹೇಳಿದೆ, "ಈ ಚೆಂದ ಆರಿಂಗಿಪ್ಪದು ಮಾರಾಯ್ತಿ? ಅದು ಸರಿ ಈ ಕ್ಲಿಪ್ಪಿನ ಸಿಕ್ಕುಸುಲೆ ಎನಗೆ ಅರಡಿಯೇಕನ್ನೇ" ಹೇಳಿ ಹೇಳಿದೆ. ಹಾಂಗೇ ಅದು ಹಾಕಿದ್ದರ ತೆಗದು ಆನೇ ಆ ಕ್ಲಿಪ್ಪಿನ ಎನ್ನ ತಲೆಕಸವಿನ ಒಟ್ಟು ಮಾಡಿ ಸಿಕ್ಕುಸುಲೆ ಹೆರಟೆ. ಆ ಕ್ಲಿಪ್ಪಿಂಗೆ ಎನ್ನ ಅಭ್ಯಾಸ ಇಲ್ಲದ್ದ ಕಾರಣವೋ ಎಂತೋ, ಅದರ ಎರಡು ಬೆರಳುಗಳ ಸಹಾಯಂದ ಹಿಡುದು ಬಾಯಿ ಬಿಡಿಸಿ, ತಲೆಕಸವಿಂಗೆ ಸಿಕ್ಕುಸ್ಸೇಕು ಹೇಳಿ ಅಪ್ಪಾಗ ಅದು ಅಷ್ಟು ದೂರ ಹೋಗಿ ಬಿದ್ದತ್ತು!! ಎರಡು, ಮೂರು ಸಲವೂ ಹಾಂಗೇ ಆಯೇಕ್ಕಾ?! ಅದರ ಬೇಟೆ ಆಡುವ ಕೆಲಸವೇ ಆಗಿಹೋತು ಎನಗೆ! ಎನ್ನ ಫ್ರೆಂಡ್‍ದೇ, ಮಕ್ಕಳುದೇ ಎನ್ನ ಅವಸ್ಥೆ ನೋಡಿ ಬಿದ್ದು ಬಿದ್ದು ನೆಗೆ ಮಾಡುಲೆ ಶುರು ಮಾಡಿದವು! "ಅಲ್ಲಾ ಮಾರಾಯ್ತಿ, ಸ್ಕೂಟರು, ಕಾರು ಎಲ್ಲಾ ಬಿಡುವ ನಿನಗೆ ಈ ಒಂದು ಸಣ್ಣ ಕ್ಲಿಪ್ಪಿನ ಹ್ಯಾಂಡಲ್ ಮಾಡ್ಲೆಡಿತ್ತಿಲ್ಲೆಯಾ?! "ಹೇಳಿ ಫ್ರೆಂಡ್ ನೆಗೆ ತಡಕ್ಕೊಂಬಲೆ ಎಡಿಯದ್ದೇ ಕೇಳಿದ ಪ್ರಶ್ನೆ ಎನಗೆ ನೆಗೆ ಬರ‍್ಸಿತು! "ಆ ವಿದ್ಯೆಯಾದರೆ ನಮ್ಮ ಜೀವನಲ್ಲಿ ಉಪಯೋಗಕ್ಕೆ ಬತ್ತು, ಈ ಸ್ಟೈಲು ಯಾವ ಉಪಯೋಗಕ್ಕೆ, ಯಾವ ಕರ್ಮಕ್ಕೆ, ಆರಿಂಗೆ ಬೇಕಾಗಿ" ಹೇಳಿ ಅದರ ಮನಸ್ಸಿಲಿಯೇ ಬೈದೆ! ಅಂತೂ ಅದು ವಾಪಸ್ಸು ಹೋಪನ್ನಾರ ಮಹಾಭಂಗಲ್ಲಿ ಅದೇ ಕ್ಲಿಪ್ಪಿಲಿತ್ತಿದ್ದೆ. ಮನೆಗೆ ಎತ್ತಿದ ಮತ್ತೂ ಮೆಸ್ಸೇಜು ಮಾಡಿ ಕೇಳಿಕೊಂಡಿದ್ದತ್ತು, "ಅದೇ ಆನು ಹಾಕಿದ ಕ್ಲಿಪ್ಪೇ ಇದ್ದಾ ತಲೆಲಿ, ಅಲ್ಲಾ ಆ ನಿನ್ನ ಕರಿ ಪತಾಕೆಯ ಮುಡಿಗೇರಿಸಿದ್ದೆಯಾ?!" ಹೇಳಿ! ಹಾಂಗೆ ಧೈರ್ಯ ತುಂಬುಲೆ ಈ ಮೆಸ್ಸೇಜಿನ ಹಿಂದದ ಇನ್ನೊಂದು ಮೆಸ್ಸೇಜು ಬೇರೆ! "ಕ್ಲಿಪ್ಪಿನ ಹೇಂಗೆ ತಲೆಕಸವಿಂಗೆ ಸಿಕ್ಕುಸುದು ಹೇಳಿ ಆಲೋಚನೆ ಮಾಡೇಡ ಬಂಗಾರಿ....ನಾಲ್ಕು ಸಲ ತೆಗದು ಹಾಕಿ ಅಪ್ಪಾಗ ನಿನಗೆ ಅಭ್ಯಾಸ ಆವುತ್ತು ಆತ ಪುಟ್ಟಾ..." ಹೇಳಿ!



     ಎನ್ನ ಹೊಸಾ ಫ್ರೆಂಡ್, ಹಳೇ ಫ್ರೆಂಡುಗೊ, ಮಕ್ಕೊ ಎಲ್ಲಾ ಹೇಳುದರಲ್ಲಿ ಸತ್ಯಾಂಶ ಅಂತೂ ಖಂಡಿತಾ ಇದ್ದು! ಲಾಯ್ಕಲ್ಲಿ ಡ್ರೆಸ್ ಮಾಡಿ, ಅದು ಹೇಳಿದ ಹಾಂಗೆ ತಲೆ ಕಟ್ಟಿಕ್ಕಿ, ಕಲ್ಲಿಪ್ಪ ಕೆಂಪು ಬಿಂದಿಯ ಹಣೆಗಿಟ್ಟರೆ ಲಾಯ್ಕ ಕಾಣ್ತೆ! "ನಿನ್ನಲ್ಲಿ ಬದಲಾವಣೆ ತಪ್ಪಲೆ ಇಷ್ಟು ವರ್ಷಂದ ಪ್ರಯತ್ನ ಪಟ್ಟರೂ ಎಂಗಳ ಕೈಯಿಂದ ಆಗಿತ್ತಿಲ್ಲೆನ್ನೇ, ನಿನ್ನ ಹೊಸಾ ಫ್ರೆಂಡ್ ಗ್ರೇಟ್ ಮಾರಾಯ್ತಿ" ಹೇಳಿ ಎನ್ನ ಹೊಸಾ ಫ್ರೆಂಡಿನ ಸಾಹಸವ ಹೊಗಳಿದವು ಹಳೇ ಫ್ರೆಂಡುಗೊ! ಎನ್ನ ಯಜಮಾನರಂತೂ ಒಂದು ಪಂಚಿಂಗ್ ಡೈಲಾಗ್ ಹೇಳಿದವು, "ನೀನು ಮೊದಾಲು ನಾಲ್ಕು ಜೆನರಲ್ಲಿ ಎದ್ದು ಕಂಡೊಂಡಿತ್ತೆ, ಈಗಲೂ ಕೂಡಾ ನಾಲ್ಕು ಜೆನರ ಎಡೆಲಿ ಎದ್ದು ಕಾಣ್ತೆ" ಹೇಳಿ! ಈ ಮಾತಿನ ಕೂಲಂಕುಷವಾಗಿ ಪರಿಶೀಲಿಸಿದರೆ ಎಷ್ಟೂ ಅರ್ಥಂಗೊ ಇದ್ದು! ಅವ್ವು ಯಾವ ಅರ್ಥಲ್ಲಿ ಹೇಳಿದ್ದೋ ಎನಗಂತೂ ಗೊಂತಿಲ್ಲೆ, ತನಿಖೆ ಮಾಡುಲೆ ಹೆರಟರೆ ಎನ್ನ ಖುಶಿ ಪಡಿಸುವಂತಹ ಉತ್ತರ ಬಕ್ಕಷ್ಟೇ ಅವರ ಬಾಯಿಂದ!! ಒಂದೆರಡು ಕಡೆಂಗೆ ಈ ಹೊಸಾ ಸ್ಟೈಲಿಲಿ ಹೋದಿಪ್ಪಗ ಅದುವರೆಗೆ ಎನ್ನ ಗುರ‍್ತ ಇದ್ದು ಕೂಡಾ ಎಷ್ಟೋ ಸಲ ನೆಗೆ ಕೂಡಾ ಮಾಡದ್ದೆ ಕಡೆಗಣಿಸಿದ್ದ ಕೆಲವು ಜೆನಂಗ, ಹೊಸಾ ಸ್ಟೈಲಿಲಿ ಎನ್ನ ನೋಡಿ, ಪರಿಚಯದ ನಾಲ್ಕು ಮಾತಾಡಿದವು ಕೂಡಾ!! ಕೆಲವು ಜೆನಂಗ ಎನ್ನ ಬದಲಾವಣೆಯ ನೋಡಿ ಬಾಯಿ ಬಿಟ್ಟಿದವಿಲ್ಲೆ! ಹೇಳಿದರೆಲ್ಲಿ ಕಡಮ್ಮೆ ಆದರೆ ಹೇಳಿ ಹೆದರಿಕೆಯಾ ಇಲ್ಲಾ ಅಹಂ ಹೇಳಿಯಾ ಅರ್ಥ ಆಯಿದಿಲ್ಲೆ! ಇನ್ನೂ ಕೆಲವು ಜೆನಂಗ, ’ಯೌವನ್ನಲ್ಲಿ ಇಷ್ಟು ದಿನ ಶೋಕಿ ಮಾಡದ್ದ ಈ ಜೆನಕ್ಕೆ ಎಂತ ಮರುಳಪ್ಪ ನಲ್ವತ್ತು ವರ್ಷ ತುಂಬಿಕೊಂಡು ಬಂದ ಹಾಂಗೇ....’ ಹೇಳುವ ಹಾಂಗೆ ನೋಡಿದ ಹಾಂಗನ್ನಿಸಿತೆನಗೆ! ತಮ್ಮನ ಹೆಂಡತಿ ಹೇಳಿತು, "ಅತ್ತಿಗೇ..ಲಾಯ್ಕ ಕಾಣ್ತಾ ಇದ್ದೆ ಈ ಹೊಸಾ ಸ್ಟೈಲಿಲಿ...ಯು ಆರ್ ನಾಟಿ ಎಟ್ ಫಾರ‍್ಟೀ...ವೆರಿ ಗುಡ್" ಹೇಳಿ! 

     ಆದರೆ ನಾವು ಎಷ್ಟು ಲಾಯ್ಕದ ಡ್ರೆಸ್ ಹಾಕಿಕೊಂಡರೂ ಅಪರಿಚಿತರಿಂಗೆ ಅದು ಬೇಡ ಅಲ್ಲದಾ?! ಆತ್ಮೀಯರಿಂಗೆ, ಸ್ನೇಹಿತರಿಂಗೆ ನಮ್ಮ ಶೃಂಗಾರಕ್ಕಿಂತಲೂ ನಾವೇ ಮುಖ್ಯ ಹೇಳಿ ಹೇಳುದರ ಆನು ನಂಬಿದ್ದೆ...ರಾಷ್ಟಕವಿ ಕುವೆಂಪು ಅವರ ಪದ್ಯದ ಸಾಲುಗೊ, ’ನಿನ್ನೆಡೆಗೆ ಬರುವಾಗ ಸಿಂಗಾರದ ಹೊರೆಯೇಕೆ, ಸಡಗರದ ಮಾತುಗಳ ಬಿಂಕವೇಕೆ....’ಎಂತಾ ಅರ್ಥಗರ್ಭಿತ ಅಲ್ಲದಾ? ಪಾಪ ಎನ್ನಲ್ಲಿ ಬದಲಾವಣೆ ತಪ್ಪಲೆ ಹೆರಟ ಫ್ರೆಂಡಿಂಗೆ ನಿರಾಶೆ ಮಾಡದ್ದೇ, ಆನು ಹಾಕಿಕೊಂಬ ಡ್ರೆಸ್ಸಿಲಿ ವಿಶೇಷ ಬದಲಾವಣೆ ತಾರದ್ದರುದೇ, ಎನಗೆ ಅದು ಹೇಳಿಕೊಟ್ಟ ಪ್ರೀತಿಯ ಪರಿಯಿಂದಾಗಿ, ಅದು ಹೇಳಿಕೊಟ್ಟ ರೀತಿಲೇ ತಲೆಕಟ್ಟುತ್ತಾ ಇದ್ದೆ, ಹಾಂಗೇ ಅದುವೇ ಎನಗಾಗಿ ಖರೀದಿಸಿ ತಂದು, ಆತ್ಮೀಯವಾಗಿ ಆದೇಶ ನೀಡಿ ಕೊಟ್ಟ ನಡೂಕಿಲಿ ಕಲ್ಲಿಪ್ಪ ಕೆಂಪು ಬಿಂದಿಯ ಕೂಡಾ ಹಾಕುತ್ತಾ ಇದ್ದೆ ಹಣೆಗೆ ಒಂದು ತಿಂಗಳ ಲಾಗಾಯ್ತು!!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು 




No comments:

Post a Comment