Wednesday, February 25, 2015

ಹವಾನಿಯಂತ್ರಿತ ಹೊಟೇಲಿಲಿ ಒಂದು ದಿನ...-ಹವ್ಯಕ ವಾರ್ತೆ ಮಾರ್ಚ್ ೨೦೧೩ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಒಂದು ದಿನ ಮಕ್ಕೊ ಎನ್ನ ಹತ್ತರೆ ಹೇಳಿದವು,"ಅಮ್ಮಾ, ಎಂಗಳ ಕ್ಲಾಸ್ ಮೇಟ್ಸ್ ಎಲ್ಲಾ ಎಷ್ಟು ಸರ್ತಿ ದೊಡ್ಡ ದೊಡ್ಡ ಎ.ಸಿ ಹೋಟೆಲಿಂಗೆಲ್ಲಾ ಹೋವುತ್ತವು ಗೊಂತಿದ್ದಾ,ಅಲ್ಲಿಯೇ ಬರ್ತ್ ಡೇ ಪಾರ್ಟಿ,ಅಪ್ಪ ಅಮ್ಮನ ಮ್ಯಾರೇಜ್ ಆನಿವರ್ಸರಿ,ವಾರಕ್ಕೊಂದರಿ ಹಾಂಗಿಪ್ಪ ಹೋಟೇಲಿಲೆಲ್ಲಾ ಉಂಬದು ಎಲ್ಲಾ ಎಲ್ಲಾ ಮಾಡ್ತವು,ಅಲ್ಲಿಗೆ ನಾವು ಎಲ್ಲಾ ಹೋಗಿ ಸೆಲಬ್ರೇಟ್ ಮಾಡೇಕು ಹೇಳಿ ಎಂಗೊ ಹೇಳ್ತಿಲ್ಲೆಯಾ,ಬಟ್ ಒಂದರಿ ನಾವು ಹೋಪಮ್ಮಾ,ಅಪ್ಪಂಗೆ ಹೇಳಿ ಒಪ್ಪಿಸು"ಹೇಳಿ ರಾಗ ಎಳದು ಎನ್ನ ಮಧ್ಯವರ್ತಿ ಮಾಡಿ ಬಿಟ್ಟವು! ಸ್ಪೆಷಲಿ ಅಪ್ಪನ ಮೂಲಕವೇ ಮಕ್ಕೊಗೆ ಆಯೇಕ್ಕಾದ ಕೆಲಸಂಗಳ ಇಬ್ಬರಿಂಗೂ ಒಂದು ರಜ್ಜವ್ವೂ ಬೇನೆ ಆಗದ್ದ ಹಾಂಗೆ ಸಂಧಾನ ಮಾಡುವ ಈ ಅಮ್ಮನ ಬ್ರೋಕರ್ ಕೆಲಸ ಮಹಾ ಕಷ್ಟದ್ದು! ಅನುಭವಿಸಿದವಕ್ಕೆ ಗೊಂತಿಕ್ಕು!

ಎನ್ನ ಕೈಯಾರೆ ಮಾಡಿದ ಮನೆ ಊಟವೇ ಲಾಯ್ಕ ಹೇಳಿ ದ್ಯೂಟಿ ಮುಗುಶಿ ಮಧ್ಯಾನ್ಹವೋ, ಇರುಳೋ, ಹೊತ್ತು ಮೀರಿದರೂ, ಬೇರೆ ಹೋಟೆಲಿಲ್ಲೆಲ್ಲಾ ಉಣ್ಣದ್ದೆ ಸೀದಾ ಮನಗೇ ಬಂದು ಉಂಬ ಇವರ ಹತ್ತರೆ ಹೇಂಗಪ್ಪಾ ವಿಷಯ ಪ್ರಸ್ತಾಪ ಮಾಡುದು ಹೇಳಿ ಎನ್ನ ತಲೆಬೆಶಿ ಒಂದು ಹೊಡೇಲಿ, ಈ ಮಕ್ಕಳ ಒತ್ತಾಯ ಇನ್ನೊಂದು ಕರೇಲಿ. ಸಣ್ಣಂದಲೇ ಭಂಗಲ್ಲಿ ಬೆಳದು ಬಂದ ಕಾರಣ ಕಷ್ಟ ಪಟ್ಟು ದುಡುದ ಪೈಸೆಯ ಖರ್ಚು ಮಾಡುವಾಗಲೂ ರಜ್ಜ ಜಾಗ್ರತೆ ಎಂಗೊಗೆ. ಈಗಾಣ ಗಂಡುಮಕ್ಕೊಗೆಲ್ಲಾ ಅವರವರ ಹೆಂಡತಿಯಕ್ಕೊ ಅಲ್ಲಿಗೆ ಹೋಯೇಕು, ಇಲ್ಲಿಗೆ ಹೋಯೇಕು ಹೇಳಿ ಕೇಳೇಕು,ಮನವೊಲಿಸೇಕು ಹೇಳಿಯೇ ಇಲ್ಲೆ.ಅವ್ವೇ ಹೆಂಡತಿ ಮಕ್ಕಳ ಎಲ್ಲಾ ದಿಢೀರಾಗಿ ಹೆರಡುಲೆ ಹೇಳಿ,ಸರ್ ಪ್ರೈಸ್ ಕೊಟ್ಟು,ಕಾರಿಲೋ,ಸ್ಕೂಟರಿಲೋ ಕೂರಿಸಿಯೊಂಡು ರೊಂಯ್ಯನೆ ಹೋಗಿ ಬೇಕು ಬೇಕಾದ್ದರೆಲ್ಲಾ ತಿಂದು,ತೇಗಿ ಬತ್ತವು!ಆದರೆ ಈ ೬೦,೭೦ರ ದಶಕಗಳಲ್ಲಿ ಹುಟ್ಟಿದ ಕೆಲವು ಗೆಂಡಂದಿರ ಈ ಹೆಂಡತಿ, ಮಕ್ಕೊ ಹೇಂಗಾರು ಮಾಡಿ ಅವರ ಒಪ್ಪಿಸಲೇ ಬೇಕಾದಂತಹ ಪರಿಸ್ಥಿತಿ!ಅವ್ವೇ ಆಗಿ ಈಗಿನ ಕಾಲಕ್ಕನುಗುಣವಾಗಿ ನಡಕೊಂಬಂತಹ ಮನೋಭಾವವೂ ಅವರಲ್ಲಿರುತ್ತಿಲ್ಲೆ! ಈಗ ಎನಗೆ ಈ ಮಕ್ಕಳ ಅಪ್ಪನ ಒಪ್ಪಿಸುದೊಂದೇ ದೊಡ್ಡ ಕೆಲಸ!ಮುಂದಿನ ಕೆಲಸ ಸುಲಾಭವೇ ಎಂತಕೆ ಹೇಳಿರೆ ಅಂತಹ ’ಹೋಟೇಲ್’ಯಿಂಗೆ ಹೋಗಿ ಅಲ್ಲಿಯಾಣ ವ್ಯವಸ್ಥೆಗಳ ಎಲ್ಲಾ ನೋಡಿಯಾದರೂ  ಬರೇಕು ಒಂದರಿ ಹೇಳಿ ಎನಗೂ ಅಂದೇ ಮನಸ್ಸಿಲ್ಲಿ ಮೂಡಿದ ಆಸೆಯ ಒಳವೇ ಬಚ್ಚಿಟ್ಟುಕೊಂಡಿತ್ತೆ! 

     ಒಂದು ದಿನ ಮಧ್ಯಾನ್ಹ ಎನ್ನ ಅಡುಗೆಯ ಹೊಗಳಿಯೊಂಡು ಉಂಡೊಂಡಿಪ್ಪಾಗ ಇದೇ ಒಳ್ಳೇ ಟೈಂ ಹೇಳಿ ಧೈರ್ಯ ಮಾಡಿ ಇವರ ಹತ್ತರೆ ಕೇಳಿಯೇಬಿಟ್ಟೆ,"ಅಪ್ಪೋ, ಈ ಮಕ್ಕೊ ಎಲ್ಲಾ ಆಸೆ ಪಡ್ತವು, ಒಂದರಿ ಆ ದೊಡ್ಡ ಎ.ಸಿ. ಹೋಟೇಲಿಂಗೆ ಹೋಪನಾ,ಈ ಮಕ್ಕಳ ಶಾಲೆಲಿ ಬೇರೆ ಮಕ್ಕೊ ಎಲ್ಲಾ ಅಲ್ಲಿಗೆ ಹೋದ ಶುದ್ಧಿ ಹೇಳುದರ ಕೇಳೀ ಕೇಳೀ,ಇವಕ್ಕಿಬ್ರಿಂಗೂ ಅಲ್ಲಿಗೆ ಒಂದರಿ ಹೋಯೇಕು,ಅಲ್ಲಿ ಉಣ್ಣೇಕು ಹೇಳಿ ಆಸೆ ಆಯಿದು"ಹೇಳಿ ಡೈರೆಕ್ಟಾಗಿ ಮಕ್ಕಳ ಎದುರಿಂದಲೇ ವಿಷಯ ಮಂಡನೆ ಮಾಡಿದೆ!"ಆತು ಹೋಪ,ಯಾವಾಗ ಹೋಪ ಹೇಳಿ ಆಲೋಚನ ಮಾಡಿ ಹೇಳು,ಆ ದಿನವೇ ಹೋಪ"ಹೇಳಿ ಹೇಳಿದವಿವು!ಇಷ್ಟು ಸಲೀಸಾಗಿ ಒಪ್ಪುತ್ತಿದ್ದವು ಹೇಳಿ ಗೊಂತಿದ್ದರೆ ಯೇವಾಗಲೋ ಕೇಳುಲಾವುತ್ತಿತ್ತನ್ನೇ ಹೇಳಿ ಅನ್ನಿಸಿತು!ಇವಕ್ಕೆ ಆಧುನಿಕತೆಯ ಗಾಳಿ ರಜ್ಜ ಸೋಕಿದ್ದು ಹೇಳಿ ಅಂದಾಜು ಮಾಡಿದೆ ಮನಸಿಲ್ಲಿ!ಮಕ್ಕೊ ಈಗ ಲಗಾಮಿಲ್ಲದ ಮಂಗಂಗಳ ಹಾಂಗೆ ಖುಶಿ ಪಟ್ಟವು!ನಾಳೆಯೇ ಹೋಪಮ್ಮಾ ಹೇಳಿ ಗೌಜಿ ಮಾಡಿದವು!ಅಪ್ಪನೂ ಅಸ್ತು ಹೇಳಿದವು!

     ಬೆರಳೆಣಿಕೆಯಷ್ಟಿಪ್ಪ ಅಂತಹ ಹೋಟೇಲುಗಳಲ್ಲಿ ಯೇವ ಹೋಟೇಲಕ್ಕು ಹೇಳಿ ಎನ್ನತ್ತರೆ ಕೇಳಿದವಿವು. ಆನು ಅದೇ ಪ್ರಶ್ನೆಯ ದೊಡ್ಡ ಮಗಳತ್ತರೆ ಕೇಳಿದೆ.ಎಂತಕೆ ಹೇಳಿರೆ ಅದುವೇ ಎಂಗೊ ನಾಲ್ಕು ಜನಂಗಳ ಪೈಕಿ ರಜ್ಜ ಎಕ್ಸ್ ಪೀರಿಯನ್ಸ್ ಡ್!ಒಂದರಿ ಅದರ ಬೆಸ್ಟ್ ಫ್ರೆಂಡಿನ ಫ್ಯಾಮಲಿ ಒಟ್ಟಿಂಗೆ ಅಂತಹ ಒಂದು ಹೋಟೇಲಿಂಗೆ ಹೋಗಿ ಉಂಡು ಬೈಂದು!ಅದು ಒಂದು ಹೋಟೇಲಿನ ಹೆಸರು ಹೇಳಿತು.ಸರಿ ಅಲ್ಲಿಗೇ ಹೋದೆಯ.ಬಾಗಿಲಿನ ಒಳ ನುಗ್ಗೇಕಾದರೇ ಅಲ್ಲಿಯಾಣ ಸೆಕ್ಯುರಿಟಿ ನೆಗೆಮಾಡಿಕೊಂಡು,"ಬನ್ನಿ ಸರ್,ಬನ್ನಿ ಮೇಡಂ" ಹೇಳಿ ಒಳ ಕರಕೊಂಡು ತಂಪು ತಂಪು ಫ್ರಂಟ್ ಆಫೀಸಿಂಗೆ ಹೋದಪ್ಪಗ ಎನಗಂತೂ ಹಾಯೆನಿಸಿತು!"ಟೇಬಲ್ ಕಾಲಿ ಇಲ್ಲ, ಸ್ವಲ್ಪ ವೇಟ್ ಮಾಡಿ ಸರ್" ಹೇಳಿ ಅಲ್ಲಿಯಾಣ ಸಿಬ್ಭಂದಿ ಸೋಫಾಲ್ಲಿ ಕೂದು ರಜ್ಜ ಹೊತ್ತು ಕಾವಲೆ ಹೇಳಿದ.ಮೃದುವಾದ ಆ ಸೋಫಲ್ಲಿ ಕೂದ ಮತ್ತೆ ಇನ್ನಷ್ಟು ಹಾಯೆನಿಸಿತು ಎನಗೆ,ಮಕ್ಕಳ ಹತ್ತರೆ ಹೇಳಿದೆ!"ಹೂಂ ಅದಕ್ಕೆ ಹೇಳಿದ್ದು ಹೋಪಾ ಹೇಳಿ...!"ಸಣ್ಣ ಮಗಳು ಓರೆ ಕಣ್ಣಿಲಿ ಎನ್ನ ನೋಡಿ ಟೋಂಟು ಕೊಟ್ಟತ್ತು!ಅರ್ಧ ಗಂಟೆ ಕೂದೆಯ.ಹೊಟ್ಟೆಲಿಪ್ಪ ಹುಳುಗೊ ಕೂಗುಲೆ ಶುರುಮಾಡಿದವು."ಎಂಗಳ ತಾಳ್ಮೆಯ ಪರೀಕ್ಷೆ ಮಾಡುತ್ತಿದ್ದವೋ ಹೇಂಗೆ?"ಹೇಳಿ ದೊಡ್ಡ ಮಗಳ ಹತ್ತರೆ ಕೇಳಿದೆ."ಅಷ್ಟು ಡಿಮಾಂಡಮ್ಮಾ ಈ ಹೋಟೇಲಿಂಗೆ,ಅದಕ್ಕೇ ಹೇಳಿದ್ದು ಒಂದರಿ ಹೋಪಾ ಹೇಳಿ...!ಇನ್ನು ಊಟ ಉಂಡು ನೋಡು ಹೇಂಗಿರುತ್ತು ಹೇಳಿ"ಹೇಳಿ ಎನ್ನ ಆಶೆಯ,ಹಸಿವಿನ ಹೆಚ್ಚು ಮಾಡಿಸಿತು!

     ಮತ್ತೈದೇ ನಿಮಿಷ...ಎಂಗಳ ಸರದಿ ಬಂದಪ್ಪಗ ಒಳ ಹೋಗಿ ಕೂದೆಯ. ಟೇಬಲ್ ಮೇಲೆ ೨ ದೊಡ್ಡ ದೊಡ್ಡ ೬ ಪುಟಂಗಳ ಮೆನು ಪುಸ್ತಕ ಕೊಟ್ಟವು!ಒಂದರ ಮಕ್ಕೊ ತೆಗದು ಯೇವೆಲ್ಲಾ ಐಟಂಗಳ ಆರ್ಡರ್ ಮಾಡುದು ಹೇಳಿ ನೋಡುಲೆ ಶುರುಮಾಡಿದವು. "ಅಪ್ಪಾ, ಅಮ್ಮಾ, ಇನ್ನೊಂದು ಪುಸ್ತಕವ ನಿಂಗೊ ಇಬ್ರೂ ನೋಡಿ ಬೇಗ ನಿಂಗೊಗೆ ಎಂತೆಂತ ಬೇಕು ಹೇಳಿ ಸೆಲೆಕ್ಟ್ ಮಾಡಿ..."ಮಕ್ಕೊ ಅಂಬರಪು ಮಾಡಿ ಹೇಳಿದಾಗ ಆನು ಪುಸ್ತಕವ ಕೈಯಲ್ಲಿ ಹಿಡುದು ಓದುಲೆ ಶುರುಮಾಡಿದೆ.ಎಲ್ಲಾ ಇಂಗ್ಲಿಷಿಲೇ! ಸ್ಟಾರ್ ಟರ್ ಸ್, ಸಾಲಾಡ್ಸ್, ಡೆಸರ್ಟ್ಸ್, ನಾರ್ತ್ ಇಂಡಿಯನ್ ತಾಲಿ,ಸೌತ್ ಇಂಡಿಯನ್ ತಾಲಿ,ಸ್ಯಾಂಡ್ ವಿಚಸ್,ಮಿಲ್ಕ್ ಶೇಕ್.......ಹೀಂಗೆ ಗೊಂತಿಪ್ಪ ಹೆಸರುಗಳೊಟ್ಟಿಂಗೆ ಇನ್ನೂ ನೂರೆಂಟು ಬಗೆಯ ಒಂದೂ ಗೊಂತಿಲ್ಲದ ಶಾಕಪಾಕದ ಹೆಸರುಗೊ!ಹೋಟೇಲಿಂಗೆ ಉಂಬಲೆ ಬಪ್ಪವಂಗೆ ಇಂಗ್ಲಿಷ್ ಖಡ್ಡಾಯವಾಗಿ ಗೊಂತಿರಲೇಬೇಕು ಹೇಳಿ ಅಂದುಕೊಂಡೆ.ಎಂಗೊಗೆ ಇಂಗ್ಲಿಷ್ ಫಸ್ಟ್ ಕ್ಲಾಸಾಗಿ ಗೊಂತಿದ್ದರೂ ಅಲ್ಲಿ ಮಾತ್ರ ಒಂದು ಉಪಯೋಗಕ್ಕೆ ಬಯಿಂದಿಲ್ಲೆ!ಇತ್ತೀಚೆಗೆ’ಇಂಗ್ಲಿಷ್ ವಿಂಗ್ಲಿಷ್’ ಸಿನೆಮಾಲ್ಲಿ ಶ್ರೀದೇವಿ ನ್ಯೂಯಾರ್ಕಿಂಗೆ ಹೋದಿಪ್ಪಗ ಇಂಗ್ಲಿಷ್ ಗೊಂತಿಲ್ಲದೇ ಒದ್ದಾಡಿ ಭಂಗ ಬಂದ ಸೀನ್ ನೆಂಪಾಗಿ ಸಣ್ಣಕ್ಕೆ ಬೆಗರಿತು.ವೈಟರ್ ಬಂದಪ್ಪಗ ಎಂಗೊ ಹೇಂಗಪ್ಪಾ ಆರ್ಡರ್ ಮಾಡುದು ಹೇಳಿ ಗ್ರೇಶಿಯೊಂಡು ಇತ್ತೆಯ!ಮಗಳೇ ಈ ತಾಲಿ ಹೇಳಿದರೆ ಎಂತಾ?"ಹೇಳಿ ಕೇಳಿದೆ"ಅಯ್ಯೋ ಅಮ್ಮಾ,ಇಲ್ಲಿ ನಾವು ಒಂದು ಪ್ಲೇಟ್ ಊಟ ಹೇಳಿ ಹೇಳ್ತಿಲ್ಲೆಯಾ ಹಾಂಗೇ ಉತ್ತರ ಭಾರತಲ್ಲೆಲ್ಲಾ ತಾಲಿ ಹೇಳಿದರೆ ಅದೇ ಅರ್ಥ"ಹೇಳಿ ಹೇಳಿತು!"ಮಕ್ಕಳೇ,ಈ ಪುಸ್ತಕವ ಓದಿ ತಿಳ್ಕೊಳ್ಳೇಕಾರೆ ಎಟ್ ಲೀಸ್ಟ್ ಒಂದು ಗಂಟೆಯಾದರೂ ಬೇಕು,ಹಶು ತಡವಲೆಡಿತ್ತಿಲ್ಲೆ!ನಿಂಗೊ ಇಬ್ರಿಂಗು ಎಂತ ಅಕ್ಕೋ ಅದೇ ಎಂಗೊಗುದೇ ಅಕ್ಕು ಹೇಳಿ ಹೇಳಿದೆ."ಅದು ಹಾಂಗಲ್ಲಮ್ಮಾ,ಈ ಪುಸ್ತಕಲ್ಲಿಪ್ಪದರ ಓದಿ ಮೊದಾಲು ಕಾಂಬಿನೇಷನ್ ಮಾಡಿ ಮತ್ತೆ ಆರ್ಡರ್ ಮಾಡುದು ಇಲ್ಲಿಯಾಣ ಕ್ರಮ,ಕಮಾನ್ ಹರಿ ಅಪ್..."ಮಗಳು ಹೇಳಿಯೊಂಡಿದ್ದಾಂಗೆ ವೈಟರ್ ಬಕ್ಕು, ಅವು ಲಾಯ್ಕಲ್ಲಿ ಇಂಗ್ಲಿಷಿಲ್ಲಿ ಕೇಳ್ತವು ಎಂತೆಲ್ಲಾ ಬೇಕು ಹೇಳಿ.....!"ಮಗಳು ಹೇಳಿಯೊಂಡಿದ್ದಾಂಗೆ ವೈಟರ್ ಪ್ರತ್ಯಕ್ಷ್ಯ!ಒಂದು ಸಣ್ಣ ಪುಸ್ತಕ,ಪೆನ್ ಹಿಡಿದು,"ಎಸ್ ಸರ್ ಓರ್ಡರ್ ಪ್ಲೀಸ್" ಹೇಳಿ ಹೇಳಿಯಪ್ಪಗ ಇವು ಉತ್ತರ ಕೊಡದಿಪ್ಪ ಕಾರಣ ಆನೇ ಮುಂದುವರದು ಹೇಳಿದೆ"ಎರಡು ಸೌಥ್ ಇಂಡಿಯನ್ ತಾಲಿ" ದಕ್ಷಿಣ ಭಾರತದ್ದಾದರೆ ಲಾಯ್ಕಿಕ್ಕು ಹೇಳಿ ಅಂದಾಜು ಮಾಡಿ ಹೇಳಿದೆ!ಈ ’ತಾಲಿ’ ಹೇಳಿ ಆ ಊತ್ತರ ಭಾರತಲ್ಲಿ ಚಾಲ್ತಿಯಲ್ಲಿಪ್ಪ ಶಬ್ದವ ಸೌಥ್ ಇಂಡಿಯನ್ ಒಟ್ಟಿಂಗೆ ಎಂತಕೆ ಸೇರಿಸಿದವು ಹೇಳಿ ಇಂದಿಗೂ ಗೊಂತಿಲ್ಲೆ ಎನಗೆ!ದೊಡ್ಡ ಮಗಳು ಹೇಳಿತು," ನಾರ್ತ್ ಇಂಡಿಯನ್ ತಾಲಿ ಒಂದು"ಹೇಳಿ."ಮತ್ತೊಂದು ಎಕ್ಸ್ ಟ್ರಾ ಪ್ಲೇಟ್" ಹೇಳಿ ಆರ್ಡರ್ ಮಾಡಿದವಿವು!ಕಾರಣ ಸಣ್ಣ ಮಗಳು ತಿಂಬದು ಅಷ್ಟಕ್ಕಷ್ಟೇ,ಎಂಗಳ ಪಾಲಿಂದರಿಂದಲೇ ಅದಕ್ಕೂ ರಜ್ಜ ಕೊಟ್ಟರೆ ಸಾಕು,ಸುಮ್ಮಗೆ ಅದಕ್ಕೂ ಊಟ ಆರ್ಡರ್ ಮಾಡಿ ವೇಷ್ಟಪ್ಪದು ಬೇಡಾ ಹೇಳಿ ಉದ್ದೇಶ ಅಷ್ಟೇ.ಮಕ್ಕೊಗೆ ’ಎಕ್ಸ್ ಟ್ರಾ’ ಪ್ಲೇಟ್ ಆರ್ಡರ್ ಮಾಡಿದ್ದು ಖುಷಿ ಆಯಿದಿಲ್ಲೆ.ಸಣ್ಣ ಮಗಳು ಹೇಳಿತು,"ಬೇರೆ ಹೋಟೇಲುಗಳಲ್ಲಾದರೆ ಪರ್ವಾಗಿತ್ತಿಲ್ಲೆ,ಇಲ್ಲಿ ಫುಲ್ ಆರ್ಡರ್ ಕೊಡೇಕು...ಒಂದೂ ಗೊಂತಾವುತ್ತಿಲ್ಲೆ ನಿಂಗೊಗಿಬ್ರಿಂಗೆ...!"ಹೇಳಿ.ವೈಟರ್ ಪುಸ್ತಕಲ್ಲಿ ಎಲ್ಲಾ ಬರಕೊಂಡು ಕೇಳಿದ,"ಮಿನರಲ್ ವಾಟರ್ ಆರ್ ನಾರ್ಮಲ್ ವಾಟರ್...ಹಾಟ್ ಆರ್ ಕೋಲ್ಡ್?" ಬ್ಯಾಗಿಲಿ ಒಂದು ಲೀಟರು ಮನೆಂದ ತಂದ ನೀರೇ ಇತ್ತಿದು, ಹಾಂಗಾದ ಕಾರಣ ಮಗಳ ಹತ್ತರೆ ಹೇಳಿದೆ,ನೀರಿದ್ದಲ್ಲದಾ,ನೀರು ಬೇಡಾ ಹೇಳಿ.ಅದು ಹೇಳಿತು,"ಅಮ್ಮಾ,ಆ ಬಾಟ್ಲಿಯ ಹೆರ ತೆಗೆದು ಮರ್ಯಾದೆ ಕಳಕೊಳ್ಳೇಡ,ಇಲ್ಲೆಲ್ಲಾ ಆ ಕ್ರಮ ಇಲ್ಲೆ!"ಹೇಳಿ ವೈಟರ್ ನತ್ತರೆ ಸ್ಟೈಲಾಗಿ ಹೇಳಿತು,"ವಿ ವಾಂಟ್ ಮಿನರಲ್ ವಾಟರ್....ಕೋಲ್ಡ್..ಟೂ ಬಾಟಲ್ಸ್" ಹೇಳಿ!ಊಟಕ್ಕೆ ಸಂಬಂಧಪಟ್ಟ ವೈಟರಿನ ಉಪ ಪ್ರಶ್ನೆಗಳಲ್ಲಿ ಗೊಂತಿಪ್ಪದಕ್ಕೆಲ್ಲಾ ’ಎಸ್’ ಗೊಂತಿಲ್ಲದ್ದಕ್ಕೆಲ್ಲಾ ’ನೋ’ಹೇಳಿ ಹೇಂಗೋ ಸುಧರಿಸಿ ಆರ್ಡರ್ ಕೊಟ್ಟು ಕಳಿಶಿದೆಯಾ.ಇಷ್ಟೆಲ್ಲಾ ಅಪ್ಪಗ ಒಂದು ಇಂಟರ್ ವ್ಯೂವಿಂಗೆ ಹೋದ ಅನುಭವ ಆಗಿತ್ತು!ಮಕ್ಕೊಗೆ ರಜ್ಜ ಹೊತ್ತು ಪುಸ್ತಕ ನೋಡಿ ಲಾಯ್ಕಿಲಿ ಕಾಂಬಿನೇಷನ್ ಮಾಡಿ ಆರ್ಡರ್ ಮಾಡೇಕು ಹೇಳಿ ಇತ್ತಿದು.ಪಾಪ ಅವು ಅದರ ಎಂಗಳ ಎದುರು ಹೇಳುವ ಧೈರ್ಯ ಮಾಡಿದ್ದಿಲ್ಲೆ ಹೇಳಿ ಕಾಣ್ತು ಎಂಗಳ ಹಶು,ಅರ್ಜೆಂಟೆಲ್ಲಾ ಗಮನಿಸಿ!

ವೈಟರ್ ಹೋಗಿ ೫ ನಿಮಿಷದ ಮತ್ತೆ ಒಂದು ಬೋಗುಣಿಲಿ ಟೊಮೇಟೋ ಸೂಪ್ ತಂದು ಮಡುಗಿದ.ಈಗ ಎಂತರ ಮಾಡುದು?ಒಬ್ಬನೇ ತಿಂಬಲಾವುತ್ತಾ?ತಿಂತರೆ ಆರು ತಿಂಬದು ಹೇಳಿ ಮೌನವಾಗಿ ಎಲ್ಲರ ಒಳವೂ ಪ್ರಶ್ನೆ ಮೂಡಿತು!"...ಅದಕ್ಕೇ ಹೇಳಿದ್ದು ಎನಗುದೇ ಊಟ ಆರ್ಡರ್ ಮಾಡೇಕಾತು ಹೇಳಿ...,ಎನಗೆ ಬರೀ ಎಕ್ಸ್ ಟ್ರಾ ಪ್ಲೇಟ್ ಮಾತ್ರ ಅಲ್ಲದಾ ಹೇಳಿದ್ದು?!ಅಕ್ಕ ಆರ್ಡರ್ ಮಾಡಿದ’ನಾರ್ತ್ ಇಂಡಿಯನ್ ತಾಲಿ’ಯ ಒಂದು ಭಾಗ ಇದು,ಇದು ಅಕ್ಕಂದು,ಎನಗೆಲ್ಲಿದ್ದು?ಇದರೆಲ್ಲಾ ಪ್ಲೇಟಿಲಿ ಹಾಕಿ ತಿಂಬಲೆಡಿತ್ತಾ...."ಹೇಳಿ ಸಣ್ಣ ಮಗಳು ಹೇಳಿಯೊಂಡಿಪ್ಪಗ ಅದರ ಕಣ್ಣ ಕರೇಲಿ ನೀರು ಬಂದು ನಿಂದತ್ತು. ಆನು ಹೇಳಿದೆ,"ಹೇಂಗೂ ಟೇಬಲ್ ಮೇಲೆ ಪ್ರತಿಯೊಬ್ಬಂಗೂ ಎರಡೆರಡು ಸ್ಪೂನ್ ಇದ್ದಲ್ಲದಾ, ನಿಂಗೊ ಇಬ್ರೂ ಅದರಲ್ಲಿ ತೆಗದು ಕುಡೀರಿ" ಹೇಳಿ!ದೊಡ್ಡ ಮಗಳು ಹೇಳಿತು,"ಇಲ್ಲಿ ಹಾಂಗೆಲ್ಲಾ ಮಾಡ್ತ ಕ್ರಮ ಇಲ್ಲೆಮ್ಮಾ...ಛೇ ಹತ್ತರಾಣ ಟೇಬಲಿನವು ನಮ್ಮನ್ನೇ ನೋಡ್ತಾ ಇದ್ದವು...,ಇದೆಂತರ ನಾಲ್ಕು ಜನಂಗಕ್ಕೆ ಒಂದೇ ಬೌಲಿಲಿ ಸೂಪಾ ಹೇಳಿ!"ಹಾಂಗೇ ಹೇಳಿಯೊಂಡು ಬೌಲಿಂಗೆ ಮಕ್ಕೊ ಸ್ಪೂನ್ ಹಾಕಿ ಒಂದೊಂದು ಚಮಚ ಕುಡುದವು ಮತ್ತೆ ಹೇಳಿದವು,"ಅಪ್ಪಾ,ಅಮ್ಮಾ,ನಿಂಗಳೂ ಟೇಸ್ಟ್ ನೋಡಿ,ಎಂಜಲಾಯಿದಿಲ್ಲೆ ಹೇಳಿ!...." ಅಂಬಗಲೇ ಅಂದಾಜು ಮಾಡಿದೆ ಮಕ್ಕೊಗದು ಮೆಚ್ಚಿದ್ದಿಲ್ಲೆ ಹೇಳಿ!ಸರಿ ಇವುದೇ ಆನುದೇ ಒಂದೊಂದು ಸ್ಫೂನಿಲಿ ಕುಡುದೆಯಾ....ಒಂದು ಚೂರೂದೇ ಲಾಯ್ಕಿತ್ತಿಲ್ಲೆ!ಇವು ಹೇಳಿದವು,ನೀನು ಮನೆಲಿ ಮಾಡುವ ಸೂಪೇ ಸೂಪರ್ ಹೇಳಿ!ಕುಡಿವಲೆಡಿಯದ್ದೇ ಸ್ಪೂನಿನ ಕೆಳ ಮಡುಗಿ ಮಕ್ಕೊಗೆ ಕುಡಿವಲೆ ಹೇಳಿದೆಯ.ಆದರೆ ಅವಕ್ಕದು ಬೇಡ!ಹತ್ತರಿಪ್ಪವ್ವೆಲ್ಲಾ ಸಮಾ ಕುಡುದುಕೊಂಡು,ನಕ್ಕಿಕೊಂಡಿತ್ತವು!ಅದು ಹೇಂಗಾರು ಮೆಚ್ಚುತ್ತೋ ಹೇಳಿ ಗ್ರೇಶಿಯೇ ವಾಕರಿಕೆ ಬಂದ ಹಾಂಗತು ಎಂಗೊಗೆ."ಅಮ್ಮಾ ಇದರ ಮೊದಾಲು ಕುಡುದು ಮುಗುಶೇಕಾದ್ದು ಕ್ರಮ ಹೇಳಿತು ಮಗಳು!ಎಲ್ಲರೂ ಎನಗೆ ಬೇಡ,ಎನಗೆ ಬೇಡ ಹೇಳಿ ಹೇಳಿಯೊಂಡಿಪ್ಪಗಲೇ ದೊಡ್ಡ ಮಗಳು ಆರ್ಡರ್ ಮಾಡಿದ ನಾರ್ತ್ ಇಂಡಿಯನ್ ತಾಲಿ ಬಂದತ್ತು,ಮತ್ತೊಂದು ಕಾಲಿ ಪ್ಲೇಟ್ ಸಣ್ಣ ಮಗಳಿಂಗೆ!ಇಬ್ರೂ ಪಾಲು ಮಾಡಿಯೊಂಡವು,ಮತ್ತೆ ಎಂಗೊಗೆ ರುಚಿ ನೋಡುಲೆ ಹೇಳಿದವು.ಅಂಬಗ ಎಂಗಳ ದಕ್ಷಿಣ ಭಾರತದ ’ತಾಲಿ’ ಬಂತು!ಇವರ ಪ್ಲೇಟಿಂದ ಪೂರೀ ಹಾಂಗೇ ಎನ್ನ ಪ್ಲೇಟಿಂದ ಚಪಾತಿಯ ಅತ್ತಿತ್ತ ಹಂಚಿಕೊಂಡೆಯ.ಇಬ್ರಿಂಗೂ ಸಣ್ಣ ಸಣ್ಣ ಗಿಣ್ಣಾಲಿಲಿ ಒಂದೊಂದು ಮುಷ್ಠಿ ಅಶನದೇ ಇತ್ತಿದು!ಸುಮಾರು ಹತ್ತು ಗಿಣ್ಣಾಲುಗಳಲ್ಲಿ ಅದೆಂತೆಂತೋ ಅಶನಕ್ಕೆ ಕೂಡಿಕೊಂಬಲೆ ಹೇಳಿ ಬೇರೆ ಬೇರೆ ಐಟಂಗೋ!ಅಷ್ಟರ ಎಲ್ಲಾ ಹಾಕಿ ರುಚಿ ನೋಡುಲೆ ಅವು ಕೊಟ್ಟ ಅಶನ ಸಾಲ! ಪುನ: ಅಶನ ಆರ್ಡರ್ ಮಾಡದ್ದೇ ಕೆಲವುದರೆಲ್ಲಾ ಹಾಂಗೇ ತಿಂದೆಯ!ಮಕ್ಕೊ ಹೇಳಿಯೊಂಡೇ ಇತ್ತವು ಹತ್ತರಾಣವು ನಮ್ಮ ನೋಡಿ ಮಾಜಾ ತೆಕ್ಕೊತ್ತಾ ಇದ್ದವು ಹೇಳಿ!ನಮ್ಮ ಊಟವ ನಾವು ಹೇಂಗೆ ಬೇಕಾದರೂ ಮಾಡ್ತು,ಎಂತ ಬೇಕಾದರೂ ಮಾಡ್ಲಿ ಅವು,ನಮಗವರ ಪರಿಚಯ ಇಲ್ಲೆನ್ನೆ,ನಾಳಂಗೆ ಅವರ ಮೋರೆ ನಾವು ನೋಡ್ಲಿಲ್ಲೆನ್ನೇ ಹೇಳಿ ಎಂಗೊ ಇಬ್ರೂ ಸಮರ್ಥಿಸಿಕೊಂಡು ಉಂಡೊಂಡಿತ್ತೆಯ.ಮಕ್ಕಳೂ ತಿಂದೊಂಡಿತ್ತವು.ಇವು ರಜ್ಜ ಹೊತ್ತಪ್ಪಗ ಪಾಯಸ ಬಡಿಸಿಯೊಂಡು ’ಸುರ್ ಪುರ್ ಸುರ್ ಪುರ್’ಹೇಳಿ ಶಬ್ದ ಮಾಡಿಯೊಂಡು ಸುರಿವಲೆ ಶುರುಮಾಡಿದವು! "ಅಪ್ಪಾ ಇಲ್ಲಿ ಮನೇಲಿ, ಮದುವೆ,ಜೆಂಬರಲೆಲ್ಲಾ ತಿಂದ ಹಾಂಗೆ ಫಾಸ್ಟಾಗಿ,ಸೌಂಡ್ ಮಾಡಿಯೊಂಡು ತಿಂಬ ಕ್ರಮ ಇಲ್ಲೆ!...ನಿಧಾನವಾಗಿ ಸೌಂಡಿಲ್ಲದ್ದೇ ಸ್ಪೂನಿಲಿ ಸ್ಟೈಲಾಗಿ ತಿನ್ನೇಕು ಗೊಂತಿದ್ದಾ...."ಹೇಳಿ ಹತ್ತರಾಣ ಟೇಬಲ್ ನವರ ತೋರಿಸಿದವು.ಒಂದರಿ ಸುತ್ತ ನೋಡಿಯಪ್ಪಗ ಮಕ್ಕೊ ಹೇಳಿದ್ದು ಸರಿ ಹೇಳಿ ಕಂಡತ್ತು!ಅಂತೂ ಇಂತೂ ಉಂಡಾತು!ಇವು ಹೇಳಿಯೊಂಡೇ ಇತ್ತವು ಮಕ್ಕಳ ಹತ್ತರೆ,"ಇಲ್ಲಿಯಾಣ ಒಂದು ಅಡುಗೆದೇ ಅಮ್ಮನ ಕೈಅಡುಗೆಯ ರುಚಿಗೆ ಬಯಿಂದಿಲ್ಲೆ.ಬಪ್ಪಲೂ ಇಲ್ಲೆ.ಅಮ್ಮನಿಗೆ ಅಮ್ಮನೇ ಸಾಟಿ ಹೇಳಿ!ಮತ್ತೆ ಪುನ: ವೈಟರ್ ಬಂದ ಡೆಸರ್ಟ್ಸ್ ಯಾವುದಕ್ಕು ಹೇಳಿ ಕೇಳಿಯೊಂಡು! ದೊಡ್ಡ ಮಗಳು ಐಸ್ಕ್ರೀಂ ಹೇಳಿದರೆ, ಸಣ್ಣದು ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ಹೇಳಿತು. ಎಂಗೊಗೆ ಎಂತ ಬೇಡ ಹೇಳಿ ಹೇಳಿದೆಯಾ. ಮಕ್ಕೊ ಈಗ ರಜ್ಜ ಚುರುಕಾದವು.ಅವರ ಐಸ್ ಕ್ರೀಂನ ಪಾಲಾಗಲೀ,ಮಿಲ್ಕ್ ಶೇಕಿನ ಪಾಲಾಗಲೀ ಎಂಗೊಗಿಬ್ರಿಂಗೂ ಕೊಡ್ತಿಲ್ಲೆಯಾ,ನಿಂಗೊಗೆಂತಾರು ಬೇಕಾದ್ರೆ ಆರ್ಡರ್ ಮಾಡಿ,ಹತ್ತರಾಣ ಟೇಬಲ್ಲಿನವು ಇವೆಂತ ಕುರೆ ಕಟ್ಟುದು ಹೇಳಿ ಇನ್ನೂದೇ ಎಂಗಳ ನೋಡಿ ನೆಗೆ ಮಾಡುದು ಬೇಡ ಹೇಳಿ ಖಡಾಖಂಡಿತವಾಗಿ ಹೇಳಿಬಿಟ್ಟವು!ಅಲ್ಲಿ ಅವು ಕೊಟ್ಟ ಒಂದು ಮುಷ್ಠಿ ಅಶನ,ರಜ್ಜ ಪಾಯಸ ತಿಂದು ಹೊಟ್ಟೆ ತುಂಬದ್ದರುದೇ ಇನ್ನೆಂತದೂ ಬೇಡ,ಸಾಕಪ್ಪಾ ಸಾಕು ಹೇಳಿ ಅನ್ನಿಸಿಬಿಟ್ಟಿತ್ತು!ಮಕ್ಕೊಗೆ ಐಸ್ಕ್ರೀಂ, ಮಿಲ್ಕ್ ಶೇಕ್ ಬಂತು. ಅವು ಎಂಗೊಗೆ ಕೊಡ್ತಿಲ್ಲೆ ಹೇಳಿದರುದೇ ಟೇಸ್ಟ್ ನೋಡುಲೆ ಹೇಳಿದವು ಪಾಪ!ಈಗ ವೈಟರ್ ನಾಲ್ಕು ಸಣ್ಣ ಸಣ್ಣ ಗಿಣ್ಣಾಲುಗಳಲ್ಲಿ ಉಗುರು ಬೆಶ್ಚಗೆ ನೀರು,ಅದರೊಳ ಕಾಲು ಕಡಿ ನಿಂಬೆ ತುಂಡು ಹಾಕಿ ತಂದ ಎಂಗೊಗೆ ಕೈ ತೊಳವಲೆ ಹೇಳಿ.ಈ ನಾಲ್ಕು ತುಂಡುಗಳ ಸೇರಿಸಿದರೆ ಒಂದು ನಿಂಬೆಹುಳಿ!ಛೇ ನಾಲ್ಕು ಗ್ಲಾಸ್ ಶರಬತ್ತಾವುತ್ತಿತ್ತನೇ ಹೇಳಿ ಮನಸ್ಸಿಲ್ಲೇ ಗ್ರೇಶಿಕೊಂಡೆ.ಒಂದು ರಜ್ಜ ಹೊತ್ತಪ್ಪಗ ವೈಟರ್ ಒಂದು ಫೈಲಿನಾಕಾರದ ಪುಸ್ತಕ ತಂದ.ಅದರೊಳ ಒಂದು ಸಣ್ಣ ಬಿಲ್,ದೊಡ್ಡ ಮೊತ್ತದ್ದು!ಬಿಲ್ ಎದೆಯ ’ಝಲ್’ ಅನ್ನಿಸಿತು!೬೦೦ ರೂಪಾಯಿ,ಅದರಲ್ಲಿಮಿನರಲ್ ವಾಟರ್ ೨ ಬಾಟ್ಲಿಗುದೇ ತಲಾ ೨೫ ರೂಪಾಯಿ ಹಾಕಿದ್ದರ ಕಂಡು ಟೇಬಲ್ ಮೇಲಿದ್ದ ಬಾಟಲುಗಳ ನೀರು ಕುಡುದು ಕಾಲಿ ಮಾಡುಲೆ ಹೇಳಿದೆ ಇವರತ್ತರದೇ,ಮಕ್ಕೊಗುದೇ,ಹಾಂಗೇ ಆನುದೇ ಗಟಗ್ಟ ಕುಡುದೆ!ಬಿಲ್ ತಪ್ಪಾಗ ವೈಟರ್ ಅದರೊಟ್ಟಿಂಗೆ ಸಿಹಿ ಇಪ್ಪ ಸೋಂಪು ತೈಂದ, ೨ ಸಣ್ಣ ಗಿಣ್ಣಾಲಿಲಿ. ಆದರೆ ಅದು ಮಾತ್ರ ತುಂಬ ಇತ್ತಿದು!ಆನು ಹೇಳಿದೆ,"ಇದನ್ನೆಲ್ಲಾ ತಿಂದು ಕಾಲಿ ಮಾಡಿದರುದೇ ೬೦೦ ರೂಪಾಯಿ ಬಿಲ್ ಹೆಚ್ಚೇ ಆತು"ಹೇಳಿ!ಮಕ್ಕಳದ್ದೊಂದೇ ಗೌಜಿ,"ಹಾಂಗೆಲ್ಲಾ ಬಿಲ್ ಜಾಸ್ತಿ ಆತು..." ಹೇಳಿ ಎಲ್ಲಾ ಹೇಳ್ತ ಕ್ರಮ ಇಲ್ಲಿಲ್ಲೆ ಹೇಳಿ.....! ಅವ ಬಿಲ್ಲಿಲಿ ನಮೂದಿಸಿದಷ್ಟು ಪೈಸೆ ಕೊಟ್ಟು ಕಳಿಸಿದೆಯ ವೈಟರಿನ!ಪುನ: ಎಂಗಳ ಟೇಬಲಿನ ಹತ್ತರೆ ಬಂದು ರಶೀದಿ ಕೊಟ್ಟು ಅವ ಹೋದ ನಂತರ ಎಂಗೊಲ್ಲಾ ಕುರ್ಚಿಂದ ಎದ್ದೆಯಾ. ಮಕ್ಕೊ ಹೇಳಿದವು,"ಅಪ್ಪಾ ಇಲ್ಲಿಂದೆಲ್ಲಾ ಹಾಂಗೇ ಹೋವುತ್ತ ಕ್ರಮ ಇಲ್ಲೆ,ಟಿಪ್ಸ್ ಮಡುಗೇಕು ಹೇಳಿ!ಸರಿ ಹೇಳಿ ಇವು ೫ ರೂಪಾಯಿ ತೆಗದು ಮಡುಗುಲೆ ಹೆರಟವು!"ಅಪ್ಪಾ ಅಟ್ ಲೀಸ್ಟ್ ಮಿನಿಮಮ್ ೨೦ ರೂಪಾಯಿಯನ್ನಾದರೂ ಮಡುಗೇಕು ಗೊಂತಿದ್ದಾ? ಕಳುದ ಸಲ ಎನ್ನ ಫ್ರೆಂಡಿನ ಫ್ಯಾಮಲಿ ಒಟ್ಟಿಂಗೆ ಬಂದಿಪ್ಪಾಗ ಅವು ೫೦ ರೂಪಾಯಿ ಮಡುಗಿತ್ತವು ಗೊಂತಿದ್ದಾ....." ಸರಿ ಮಕ್ಕಳೇ ಈ ಲೋಕಲ್ಲಿ ಇನ್ನೂದೇ ಕಲಿಯೇಕಾದ್ದು ಸುಮಾರಿದ್ದು ಹೇಳಿಯೊಂಡು,ನಮ್ಮ ಮನಸ್ಸಿಂಗೆ ಸಾಕು ಅನ್ನಿಸಿದ ಹತ್ತು ರೂಪಾಯಿಯ ಆ ಪುಸ್ತಕಾಕಾರದ ಫೈಲಿನೆಡೆಲಿ,ಮುಚ್ಚಿ ಮಡುಗಿಕ್ಕಿ ಹೆರ ಬಂದೆಯ. ವಾಪಸ್ಸು ಹೋಯಿಯೊಂಡಿಪ್ಪಾಗ ದಾರಿಲಿ ಎನ್ನ ಹತ್ತರೆ ಕೇಳಿದವಿವು,"ಉದಿಯಪ್ಪಗ ನೀನು ಮಾಡಿದ ಇಡ್ಲಿ ಒಳುದ್ದಲ್ಲದಾ ಮನೇಲಿ? ಎನಗೆ ಹೋಗಿ ತಿನ್ನೇಕು, ಹಶು ಇನ್ನೂದೇ ಹೋಯಿದಿಲ್ಲೆ.."ಹೇಳಿ!!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು

No comments:

Post a Comment