Thursday, October 25, 2018

ಮಗಳು ಅಡುಗೆ ಕಲಿವದು ಏವಗಪ್ಪಾ...?! - Short humor


ಮಗಳು ಅಡುಗೆ ಕಲಿವದು ಏವಗಪ್ಪಾ...?!
ಮಗಳು ಅಡುಗೆ ಕಲಿವದು ಏವಗ ಹೇಳಿ ಕೆಲವು ಅಬ್ಬೆಕ್ಕೊ ತಲೆ ಕೆಡಿಸಿಕೊಂಬದು ಸಹಜವೇ! ಕೆಲವ್ಕೆ ಬಗ್ಗೆ ಚಿಂತೆಯೇ ಇರ್ತಿಲ್ಲೆ. "ಅಡುಗೆ ಮಾಡುದೆಂತ ಬ್ರಹ್ಮ ವಿದ್ಯೆಯ? ಮತ್ತೆ ಕಲ್ತರಾತು" ಹೇಳಿ ಉಪೇಕ್ಷೆ ಮಾಡಿ ಕೂಸುಗೊಕ್ಕೆ ಮದುವೆಯಪ್ಪನ್ನಾರ ಭಾರೀ ರಿಯಾಯಿತಿ ಕೊಡ್ತವು ಅಡುಗೆ ಮಾಡುದರಲ್ಲಿ ಹಾಂಗೆ ಬೇರೆ ಕೆಲಸಂಗಳಲ್ಲಿ! ಕೆಲವು ಅಬ್ಬೆ ಅಪ್ಪಂದ್ರು  ಮಗಳು ಸಣ್ಣದಿಪ್ಪಗ, "ಇಷ್ಟು ಸಣ್ಣಾದಿಪ್ಪಗಲೇ ಮನೆಕೆಲಸಲ್ಲಿ ಭಾರೀ ಇಂಟ್ರೆಸ್ಟು ಇದಕ್ಕೆ! ಮುಂದೆ ಭಾರೀ ಚುರುಕಕ್ಕು ಕೆಲಸಂಗಳಲ್ಲಿ! ಅದುವೇ ಆಗಿ ಒಳ ಬಂದು ಹಾಂಗೆ ಮಾಡುತ್ತು, ಹೀಂಗೆ ಮಾಡುತ್ತು, ಆನು ವಸ್ತ್ರವ ಮೇಗೆ ಕಟ್ಟಿ ಪಾತ್ರ, ವಸ್ತ್ರ ತೊಳದಾಂಗೆ ಅದುದೇ ಅದರ ಅಂಗಿಯ ಮೇಲೆ ಕಟ್ಟ್ಯೋಂಡು ಎಲ್ಲಾ ಮಾಡುಲೆ ಬತ್ತು, ಚಪಾತಿ ಲಟ್ಟುಸುಲೂ, ದೋಸೆ ಎರವಲೂ, ಬಳುಸುಲೂ ಎಲ್ಲಾ ಬತ್ತು, ತೋಟದ ಕೆಲಸಕ್ಕೂ ಕೂಡಿಗೊಳ್ತು, ಹಟ್ಟಿಗೆ ಹಾಲು ಕರವಲುದೇ ಬತ್ತು, ಪಾಪ ಸಣ್ಣ ಅಲ್ಲದಾ ಮುಂದೆ ದೊಡ್ಡಪ್ಪಗ ಹೇಂಗೂ ಮಾಡ್ಲಿದ್ದನ್ನೇ ಹೇಳಿ ಗ್ರೇಶಿ ಎಂಗಳೇ ಅದರ ಉಪಾಯಲ್ಲಿ ಸಾಗ ಹಾಕಿ ಹೆರ ಕಳುಶುದು, "ಆನು ಮಾಡಿದಾಂಗೆ  ಮಾಡುತ್ತು ಮಗಳು ಪಾಪ" ಹೇಳಿ ಹಾಡಿ ಹೊಗಳಿಯೊಂಡಿದ್ದ ಬಾಯಿಗೊ ಮಗಳು ದೊಡ್ಡ ಆಯಿಕ್ಕೊಂಡು ಬಂದ ಹಾಂಗೆ ಮೆಲ್ಲಾಂಗೆ ಮುಚ್ಚಿಯೇ ಹೋವುತ್ತು! ಕೂಸುಗಳ ಹೀಂಗಿಪ್ಪ ಚಟುವಟಿಕೆಗೊ ಅವಕ್ಕಿಷ್ಟ ಇಪ್ಪನ್ನಾರ ಮಾಂತ್ರ. ಮತ್ತೆ ರಜ್ಜ ಸಮಯ ಕಳುದು ಇಷ್ಟಕ್ಕೂ ಸಿಕ್ಕುತ್ತವಿಲ್ಲೆ, ಕಷ್ಟಕ್ಕೂ ಸಿಕ್ಕುತ್ತವಿಲ್ಲೆ! "ಅಮ್ಮ ಆನು ಮಾಡ್ತೆ" ಹೇಳಿ ಮಗಳು ಸೌಟು ಹಿಡುದು ಅದಕ್ಕೆ ಇಷ್ಟ ಇಪ್ಪ ಒಗ್ಗರಣೆ ಹಾಕುದೋ, ಕಸ ಉಡುಗುದೋ, ಉದ್ದುದೋ,  ಬಳುಸುದೋ, ಎಂಜಲುದ್ದುಲೋ, ಒಟ್ಟಾರೆ ಎಲ್ಲಾ ಕೆಲಸಕ್ಕೂ ಅದುವೇ ವಾಲೆಂಟರಿ ಆಗಿ ಮುಂದೆ ಬಂದು ಮಾಡಿಯೊಂಡಿತ್ತಿದ್ದ ಕೆಲಸಂಗಳ ಈಗ ನೆಂಪು ಮಾಡಿಯೊಂಬದು ಮಾಂತ್ರ ಅಷ್ಟೇ! ದೊಡ್ಡ ಆಯಿಕ್ಕೊಂಡು ಬಂದ ಹಾಂಗೆ ಉದಾಸೀನ ಅಡಿಪಾಯ ಹಾಕಿರ್ತು! ಉದಾಸೀನದ ಗಟ್ಟಿಯಾಯ್ಕೊಂಡಿದ್ದಾಂಗೆ, ಜತೆಗೆ ಓದುಲೂ ಬೇಕಾಷ್ಟಿರ್ತು ಬೇರೆ ಹೇಳಿಯೂ ಒಂದು ನೆವನ ಸೇರಿಕೊಂಡಿರ್ತು, ’ಕಳ್ಳಂಗೊಂದು ಪಿಳ್ಳೆ ನೆವಹೇಳುತ್ತ ಗಾದೆ ಮಾತಿನಾಂಗೆ!! ಕೆಲವು ಜೆನ ಸಣ್ಣಾದಿಪ್ಪಾಗ ಮಕ್ಕೊ ಕೆಲಸ ಮಾಡುವಾಗೆಲ್ಲಾ ನೆಂಪಿಂಗೆ ಹೇಳಿ ಫೋಟೋಂಗಳ ಬೇರೆ ತೆಗದು ಆಲ್ಬಂಲಿ ಹಾಕಿರ್ತವು! ವೀಡಿಯೋ ಕ್ಯಾಮರ ಇದ್ದವು ವೀಡಿಯೋವನ್ನೂ ಮಾಡಿ ತೃಪ್ತಿ ಅಪ್ಪಷ್ಟು ನೋಡಿ ಮಕ್ಕೊಗೆ ದೊಡ್ಡ ಆದ ಮತ್ತೆ ತೋರ್ಸುಲೆ ಹೇಳಿ ಮಡುಗಿರ್ತವು! ಫೋಟೋಂಗಳ ಎಲ್ಲಾ ಆಲ್ಬಂಲಿ ಹಾಕಿ ಮಕ್ಕಳ ಪ್ರತಿಯೊಂದು ಘಳಿಗೆಯನ್ನೂದೇ ದಾಖಲಿಸಿ ಚೆಂದಕ್ಕೆ ಅಲ್ಮಾರಿನ ಒಳ ಹಾಳಾಗದ್ದಾಂಗೆ ಮಡುಗಿ ಬಂದವ್ಕೆಲ್ಲಾ ತೋರ್ಸಿಯೋಂಡಿರ್ತವು! ಮನೆಯ ಆಲ್ಬಂ ಹೇಳಿರೆ ಒಂದು ಸಣ್ಣ ಮಟ್ಟಿನ ಮ್ಯೂಸಿಯಮ್ಮೇ ಆಗಿರ್ತು! ದಿನ ಇಡೀ ಕೂದರೂ ಫೋಟೋಂಗಳ ನೋಡಿ ಮುಗಿಯ, ಅಷ್ಟಿರ್ತು! ಈಗೆಲ್ಲಾ ಫೋಟೋ ತೆಗದು ಅಥವಾ ವೀಡಿಯೋ ತೆಗದು ಒಂದೇ ಕ್ಷಣಲ್ಲಿ ಸಾಮಾಜಿಕ ಜಾಲತಾಣಂಗಳಲ್ಲಿ ಅಪ್ಲೋಡ್ ಮಾಡಿ ಬರೇ ಒಂದೈದು ನಿಮಿಷಲ್ಲಿ ನೂರು ಇನ್ನೂರು ಗಟ್ಲೆ ಲೈಕುಗಳ, ಕಮೆಂಟುಗಳ ಪಡಕೊಂಡಿರ್ತವು! ಅಬ್ಬೆಗೊಕ್ಕಂತೂ ಅದುವೇ ದೊಡ್ಡ ಬಹುಮಾನ ಸಿಕ್ಕಿದಷ್ಟು ಸಂತೋಷ ಆವುತ್ತು! ಅದೆಂತದೇ ಇರಲಿ ಇಂತ ಅವಿಸ್ಮರಣೀಯ ಕ್ಷಣಂಗಳ ಸೆರೆ ಹಿಡುದ್ದರ ಮಕ್ಕೊ ದೊಡ್ಡ ಆದ ಮತ್ತೆ ನೋಡುವಾಗ ಅವಕ್ಕೊಂದು ಸಂತೋಷವೂ, ಪ್ರೋತ್ಸಾಹವೂ, ಮಾಡುವ ಕೆಲಸಲ್ಲಿ ಹುರುಪು ಎಲ್ಲಾ ಸಿಕ್ಕಿದಾಂಗಾವುತ್ತು.

ಎಲ್ಲರ ಮನೆಯ ದೋಸೆಯೂ ತೂತು ಹೇಳುವ ಗಾದೆಯ ಹಾಂಗೆ ಎಂಗಳ ಮನೆಯ ದೋಸೆಲಿ ತೂತೆ ಇಪ್ಪದು. ರಜ್ಜ ಬೇರೆ ತರದ ಕತೆಯಾದರೂ ಸಾರಾಂಶ ಎಲ್ಲಾ ಒಂದೇ! ಸಣ್ಣದಿಪ್ಪಗ ಎಲ್ಲಾ ಮಕ್ಕೊ ಮಾಡುವಾಂಗೇ ಇಲ್ಲಿಯೂ ಮಕ್ಕೊ ಇಬ್ರೂ ಮಾಡಿದ್ದೇ ಮಾಡಿದ್ದು! ರಜ್ಜ ದೊಡ್ಡ ಆಯಿಕ್ಕೊಂಡು ಬಂದ ಹಾಂಗೆ, ಅವರವರ ಸಣ್ಣ ಪುಟ್ಟ ವೈಯುಕ್ತಿಕ ಕೆಲಸಂಗಳ ಮಾಡಿಯೊಂಬ ಅವಕ್ಕೆ, ಕೆಲವು ಕೆಲಸಂಗೊಕ್ಕೆ ದಿನಿಗೇಳಿರೆ ಸೇರುವ ಅಥವಾ ಅವ್ವೇ ಆಗಿ ಕೆಲವು ಸಂದರ್ಭಲ್ಲಿ ಬಂದು ಕೆಲಸಕ್ಕೆ ಕೂಡಿಯೊಂಬ ಮಕ್ಕೊಗೆ, ಈಗ ಮಾಂತ್ರ ಓದುಲಿದ್ದು ಹೇಳುವ ನೆವಲ್ಲಿ ಅಡುಗೆ ಮನೆ ಕಡೆಂಗೆ ಉಂಬಲೆ, ತಿಂಬಲೆ ಹೊರತಾಗಿ ಬೇರೆ ಟೈಮಿಲಿ ಸುಳಿವಲೇ ಮಾಂತ್ರ ಸಮಯ ಸಿಕ್ಕಿಯೋಂಡಿಲ್ಲೆ! ಅವಕ್ಕೆ ಬೇಕಾದ ಒಂದೆರಡು ಟಿ.ವಿ ಶೋ, ವಾಟ್ಸಾಪ್, ಫೇಸ್ಬುಕ್ ಎಲ್ಲಾ ನೋಡುಲೆ ಎಲ್ಲೋರ ಹಾಂಗೆ ಹೇಂಗಾರೂ ರಜ್ಜ ಸಮಯಾವಕಾಶ ಮಾಡಿಕೊಳ್ತವು! ಒಂದು ಸಮಾಧಾನದ ವಿಷಯ ಹೇಳಿರೆ ಪ್ರತಿ ದಿನವೂ ಉಂಬಲೆ ಕೂಪಾಗ ಆನು ಮಾಡಿದ ಅಡುಗೆಯ ರೆಸಿಪಿಯ ಕೇಳಿ ತಿಳುಕೊಂಬದು ಒಂದು ಮಗಳ ಅಭ್ಯಾಸ! ಎಂಗೊಗೆ ಕೆಲವು ಸಂದರ್ಭಲ್ಲಿ ಕಾಫಿ, ಚಾಯ ಮಾಡಿಕೊಡುವ ಇದು ಎಂಗೊ ಇಲ್ಲದಿಪ್ಪಗ ರೆಸಿಪಿ ಕೇಳಿ ತಿಳುದುಕೊಂಡಿದ್ದ ಜೆನ ಕೆಲವು ಸಲ ಸಣ್ಣ ಪುಟ್ಟ ಅಡುಗೆ ಮಾಡಿ ಸೈ ಎನಿಸಿಕೊಂಡಿದು. ಅದು ಬೇರೆ ವಿಚಾರ! ಮನೆಲಿ ಎನ್ನ ಅಡುಗೆ ಹೇಳಿರೆ ಆತು ಎಲ್ಲವ್ಕೂ ಇಷ್ಟವೇ, ಎಷ್ಟರ ಮಟ್ಟಿಂಗೆ ಹೇಳಿರೆ ಬೇರೆ ಹೆರ ಹೋಟೆಲಿಲಿ ಉಂಡು ತಿಂಬದರಲ್ಲಿ ಆರಿಂಗೂ ಮನಸ್ಸೇ ಇಲ್ಲೆ. ಹಾಂಗಾಗಿ ಅಂತೂ ಇಂತೂ ಎನಗೆ ವರ್ಷದ ೩೬೫ ದಿನವೂ ಅಡುಗೆ ಡ್ಯೂಟಿ ತಪ್ಪಿದ್ದು ಹೇಳಿಯೇ ಇಲ್ಲೆ! "ಅಮ್ಮಾ, ಬೆಂಡೆಕಾಯಿ ಸಾಸಮೆ ಹೇಂಗೆ ಮಾಡುದು? ಭಾರೀ ಲಾಯ್ಕಾಯ್ದು" ಹೇಳಿ ಮಗಳು ಉಂಬಾಗ ಕೇಳಿರೆ ಆನು, "ಇದಾ ಬೆಂಡೆಕಾಯಿಯ ಲಾಯ್ಕಕ್ಕೆ ತೊಳದು ಸಣ್ಣಕ್ಕೆ ಉರುಟುರುಟಾಗಿ ಕತ್ತರಿಸಿ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಬೆಂಡೆಕಾಯಿಯ ಹೊರುದು ಮಡುಗೇಕು, ಈಚ ಹೊಡೆಲಿ ಒಂದು ಮುಷ್ಠಿ ಕಾಯಿ ಕೆರಕ್ಕೊಂಡು, ಕಾಲು ಚಮಚ ಸಾಸಮೆಕಾಳುಗಳು, ಒಂದು ಸಣ್ಣ ಹಸಿಮೆಣಸನ್ನುದೇ, ಒಂದು ಚಿಟಿಕೆ ಅರಸಿನ ಪುಡಿಯನ್ನುದೇ ಹಾಕಿ ಮಿಕ್ಸಿ ಮಾಡಿ ರಜ್ಜ ಮಜ್ಜಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಒಂದು ಒಗ್ಗರಣೆ ಕೊಟ್ಟರೆ ಮುಗುತ್ತು, ಅಷ್ಟೇ. ಬೆಂಡೆಕಾಯಿಯ ಹೊರುದು ಮಾಂತ್ರ ಅಲ್ಲ, ಬೇಶಿ ಕೂಡಾ ಮಾಡ್ಲಕ್ಕು" ಹೇಳಿ ಆನು ಹೇಳಿಯಪ್ಪಗ, " ಎಷ್ಟು ಸುಲಾಭ ಇದ್ದು ಮಾಡುಲೆ ಡಿಶ್ ಅಲ್ಲದಾಮ್ಮಾ!, ಇಷ್ಟು ಸುಲಾಭ ಆದ್ರೆ ಆನಿದ್ದನ್ನೇ ಮಾಡುದು ದೊಡ್ಡ ಆದ ಮತ್ತೆ" ಹೇಳಿ ಅದರ ಡೈಲಾಗ್. ಯೇವುದೇ ತರಕಾರಿಯ ಮೇಲಾರವನ್ನೋ, ಬೆಂದಿ, ಕೊದಿಲು, ತಿಳಿಸಾರು, ತಂಬುಳಿ, ಕಲಸು, ಅವಿಲು, ಮೆಣಸ್ಕಾಯಿ, ಚಟ್ನಿ, ಬೋಳುಕೊದಿಲು, ತೋವೆ, ಕೊಚ್ಚುಸಳ್ಳಿ, ಹಾಂಗೆ ಉದಿಯಪ್ಪಗ ಎಂತ ತಿಂಡಿ ಮಾಡಿದ್ದರುದೇ, ಹಾಂಗೆ ಒಂದೋಂದರಿ ಮಾಡುವ ಖಾರ, ಸಿಹಿ ತಿಂಡಿಗಳ, ಎಂತದೇ ಮಾಡಿದ್ದರೂ, "ಇದರ ಹೇಂಗೆ ಮಾಡುದಮ್ಮಾ?" ಹೇಳಿ ಅದು ಕೇಳುದು ಕ್ರಮ. "ಇದಾ ಹೀಂಗೀಂಗೆ" ಹೇಳಿ ಚುಟುಕಾಗಿ ರೆಸಿಪಿ ಹೇಳುವ ಕ್ರಮ ಎನ್ನದು! ಅದರೆಲ್ಲಾ ಕೇಳಿಸಿಯೊಂಡ ಜೆನದ್ದು ಯೇವಾಗಲೂ ಒಂದೇ ಡೈಲಾಗು, " ಇದರ ಮಾಡುದು ಇಷ್ಟು ಸುಲಭವಾ?! ಹಾಂಗಾರೆ ಆನು ದೊಡ್ಡ ಆದ ಮೇಲೆ ಇದನ್ನೇ ಮಾಡುದು" ಹೇಳಿ! ಯೇವಾಗಲೂ ಇದರ ಕೇಳಿಸಿಯೊಂಡ ಇವ್ವು ಮಗಳತ್ತರೆ ಕುಶಾಲಿಂಗೆ ಕೇಳುಲಿದ್ದು, "ಅಲ್ಲ ಮಗಾ ನೀನು ದೊಡ್ಡ ಆದ ಮತ್ತೆ ಒಂದು ದಿನಲ್ಲಿ ಉಂಬಲೆ, ತಿಂಬಲೆ ಬಗೆ ಬಗೆ ಐಟಂಗಳ ಮಾಡ್ತೆನ್ನೆ ವೆರ್ರಿ ಗುಡ್!" ಹೇಳಿ! ಅಂಬಗ, ಅಂಬಗ ನೆಗೆಯೊಂದೇ ಉತ್ತರ ಅದರದ್ದು. ಎಲ್ಲಾ ಅಡುಗೆ ಕ್ರಮವ ಉಂಬಗ ಕೇಳಿ ತಿಳುಕೊಂಬ ಕಾರಣ ಅಡುಗೆಯ ಥಿಯರಿಲಿ ಅದಕ್ಕೆ ಪೂರ್ತಿ ಮಾರ್ಕ್ಸ್ ಕೊಡ್ಲಕ್ಕದಕ್ಕೆ! ಪ್ರಾಕ್ಟಿಕಲ್ಸ್ ಹೇಂಗೆ ಮಾಡುತ್ತು ಹೇಳುತ್ತದು ಮಾಂತ್ರ ಕುತೂಹಲದ ವಿಚಾರ! ಎನಗೆ ನಿನಗೆ ಇಬ್ರಿಂಗೆ ಒಟ್ಟಿಂಗೆ ರಜೆ ಸಿಕ್ಕಿಪ್ಪಗ ಎಂಗೊ ಇಬ್ರೇ ಅಡುಗೆ ಮಾಡುವೊ ಆತಾ!" ಹೇಳಿ ಅಕ್ಕ ತಂಗೆಕ್ಕೊ ಇಬ್ರು ಮಾತಾಡಿಯೊಂಡಿದವ್ವು ಅಷ್ಟೇ ಅಲ್ಲದ್ದೇ ಕೈಲಿ ಹೈಫೈ ಚಪ್ಪಾಳೆ ಕೊಟ್ಟುಕೊಂಡಿದವು! ರಜೆಲಿ ನೋಡೇಕು ಇವಕ್ಕಿಬ್ರಿಂಗೂ ಅಡುಗೆಲಿ ಹೇಂಗೆ ಮಾರ್ಕು ಬತ್ತು ಹೇಳಿ!


ಸಣ್ಣಾದಿಪ್ಪಗ ಆನು ಅಡುಗೆ ಮಾಡಿದ್ದು ಕೇಳಿರೆ ನೆಗೆ ಬಕ್ಕು. ಎನಗೆ ಇಂದಿಂಗೂ ಎರಡು ಪ್ರಸಂಗಗಳ ಮರವಲೆಡಿತ್ತಿಲ್ಲೆ! ಎಂಗೊಲ್ಲಾ ಸಣ್ಣಾದಿಪ್ಪಗ ಗ್ಯಾಸ್ ಒಲೆ ಇತ್ತಿಲ್ಲೆ. ಒಂದರಿ ಆನು ಹೊತ್ತಿಯೋಂಡಿಲ್ಲದ ಒಲಗೆ ದೋಸೆ ಕಾವಲಿ ಮಡುಗಿ ದೋಸೆ ಹಿಟ್ಟಿನ ಎರಕ್ಕೊಂಡಿತ್ತೆ. ಬೇರೆ ಹೆರಾಣ ಕೆಲಸ ಮುಗುಶಿ ಬಂದ ಅಮ್ಮಂಗೆ ಗಾಬರಿ ಆಶ್ಚರ್ಯ ಒಟ್ಟೊಟ್ಟಿಂಗೆ! ಅರೆ, ದೋಸೆಗೆ ಹಿಟ್ಟು ಎಲ್ಲಿಂದ ಸಿಕ್ಕಿತ್ತಿದಿಕ್ಕೆ!? ದೋಸೆಯ ಹಿಟ್ಟೇ ಇತ್ತಿದಿಲ್ಲೆನ್ನೆ ಹೇಳಿ. ಆಶ್ಚರ್ಯಲ್ಲಿ ಎನ್ನ ಹತ್ತರೆ ಬಂದು, "ಇದೆಲ್ಲಿಂದ ಬಂತು ದೋಸೆ ಹಿಟ್ಟು?! ಎಂತ ಕತೆ ಇದು?! ಎಂತ ಮಾಡ್ತಾ ಇದ್ದೆ ನೀನು?!" ಹೇಳಿ ಎನ್ನ ಆಚ ಹೊಡಂಗೆ ಎತ್ತಿ ಕೂರ್ಸಿ ಒಂದೇ ಸಮನೆ ಗಾಬರಿಲಿ ಕೇಳಿಯಪ್ಪಗ ಮೂರು, ಮೂರೂವರೆ ವರ್ಷ ಪ್ರಾಯದ ಎನಗೆ ಬಾಯಿ ಬಿಡ್ಲೆಡಿಗಾಯಿದಿಲ್ಲೆ! ಅಮ್ಮಂಗೆ ಕೂಡ್ಲೆ ಕೋಪ ಬಂದೂ ಬೈವದು, ಕುಂಡೆಗೆರಡು ಬಡಿವದು, ಎರಡು ಅಭ್ಯಾಸ ರಜ್ಜ ಹೆಚ್ಚಿಗೆ! ಇದರೆಲ್ಲಾ ಸೂಕ್ಷ್ಮವಾಗಿ ಪ್ರಾಯಲ್ಲಿ ಗೊಂತಿದ್ದರಿಂದಲೋ ಎಂತೋ, ಅಂತೂ ಹಿಟ್ಟು ಹೇಂಗೆ ಸಿಕ್ಕಿತು ಅಥವಾ ಹೇಂಗೆ ಮಾಡಿದ್ದು ಹೇಳಿ ಬಾಯಿಬಿಟ್ಟಿದ್ದಿಲ್ಲೆ ಆನು, ಬದಲಿಂಗೆ ಕಿರ್ಚಿ ಕಿರ್ಚಿ ಕೂಗುಲೆ ಅಡಿ ಹಾಕಿದೆ, ಎಲ್ಲಿಯಾದರೂ ಪೆಟ್ಟುಗಿಟ್ಟು  ಬಿದ್ದಿಕ್ಕುಗು ಹೇಳಿ! ಅಮ್ಮ ಗಡಿಬಿಡಿಲೇ ಪಾತ್ರೆಲಿದ್ದ ಹಿಟ್ಟಿನಾಂಗಿಪ್ಪ ವಸ್ತುವಿನ  ಆನು ಹಾಕಿದ ಸೌಟಿಲಿ ಕರಡಿಸಿ ನೋಡಿತು. ಮತ್ತೆ ಅದರಲ್ಲಿ ಸಣ್ಣ ಸಣ್ಣ ಮಸಿ ತುಂಡುಗಳ ಕಂಡ ಮೇಗೆ ಗೊಂತಾತಡ, ಮಗಳು ಒಲೆಂದ ಬೂದಿ ಬಾಚಿ ಪಾತ್ರೆಗೆ ಹಾಕಿ ಕರಡಿಕ್ಕಿ ದೋಸೆ ಎರದ್ದು ಹೇಳಿ! ಎನಗೆ ಪ್ರಸಂಗದ ಬಗ್ಗೆ ರಜ್ಜ ರಜ್ಜ ಮಾಂತ್ರ ನೆಂಪಿದ್ದಷ್ಟೇ. ಆನು ಕೆಲವೊಂದರಿ ಯೋಚಿಸ್ಲಿದ್ದು, ಅಂತಾ ಬುದ್ಧಿವಂತಿಕೆ ಈಗ ಇದ್ದಿದ್ದರೆ ದೊಡ್ಡ ವಿಜ್ಞಾನಿಯೇ ಅಪ್ಪಲಾಯ್ಸಿತ್ತೋ ಏನೋ ಹೇಳಿ! ಮತ್ತಿನ್ನೊಂದು ಪ್ರಸಂಗ ಎಂತ ಹೇಳಿರೆ, ಆಗ ಎನಗೆಷ್ಟು ಪ್ರಾಯವೋ ಹೇಳಿ ನೆಂಪಿಲ್ಲೆ. ಒಟ್ಟಾರೆ ಒಲೆಲಿ ಚಪಾತಿ ಓಡಿನ ಮಡುಗಿ ಅಮ್ಮ ಇನ್ನೊಂದು ಹೊಡೆಲಿ ಚಪಾತಿ ಲಟ್ಟಿಸೀಯೋಂಡಿತ್ತು. "ಓಡು ಕಾದತ್ತೋ ಏನೋ" ಹೇಳಿ ಹೇಳಿಕೊಂಡದ್ದಷ್ಟೇ ಅಮ್ಮ! ವೆಂಕುವಿನ ಪಣಂಬೂರಿಂಗೆ ಕಳ್ಸೆಕ್ಕು ಹೇಳುದರ ಕೇಳಿದ ಕೂಡ್ಲೆ ಹೇಂಗೆ ಅಂವ ಪಣಂಬೂರಿಗೆ ಹೋಗಿ ಬಂದನೋ ಹಾಂಗೆ ಕೂಡ್ಲೇ ಅಲ್ಲೇ ನಿಂದುಕೊಂಡಿದ್ದ ಆನು ಎನ್ನ ಬಲದ ಅಂಗೈಯ ಇಡಿಯಾ ಓಡಿನ ಮೇಗೆ ಮಡುಗಿ ಓಡು ಕಾದಿದಾ ಹೇಳಿ ನೋಡಿದೆ! ಎಂತಾತು ಹೇಳಿ ಮುಂದೆ ನಿಂಗಳೇ ಗ್ರೇಶುಲಕ್ಕು! ಕಾದು ಕಾದು ಬೆಶಿ ಆಗಿತ್ತಿದ್ದ ಓಡು ಎನ್ನ ಅಂಗೈಯ ಪೊಕ್ಕುಳು ಬರ್ಸಿತ್ತು! ಅದು ಗುಣ ಆಯೇಕ್ಕಾರೆ ಸುಮಾರು ದಿನ ಬೇಕಾಯ್ದು!

ಕೂಸುಗೊ ಆಗಲಿ ಮಾಣಿಯಂಗೊ ಆಗಲಿ ಅವರ ಪಾಪ ಮುಂದೆ ಹೇಂಗಾರೂ ಕೆಲಸ ಮಾಡ್ಲಿದ್ದನೇ ಹೇಳಿ ಸುಮ್ಮಗೆ ಕೂರ್ಸದ್ದೇ ಆಯಾಯ ಪ್ರಾಯಕ್ಕೆ ತಕ್ಕ ಹಾಂಗೆ ಕೆಲಸಂಗಳ ಮಾಡಿಯೊಂಬಲೆ, ಒಳಾಣ, ಹೆರಾಣ ಕೆಲಸಂಗೊಕ್ಕೆ ಅವರೊಟ್ಟಿಂಗೆ ಸೇರಿ ಮಾಡಿ ಕಲ್ತುಗೊಂಬಲೆ ಹೆರಿಯರಾದ ಅಬ್ಬೆ ಅಪ್ಪ ಹೇಳೇಕು. ಕಲಿಯುವಿಕೆ ಒಟ್ಟೀಂಗೆ ಜೀವನ ಪಾಠದೇ ಮುಖ್ಯ. ಪ್ರೀತಿ, ಪ್ರೀತಿ ಹೇಳಿ ಪೋಚಕಾನ ಮಾಡಿಗೊಂಡು ಅವಕ್ಕೆ ಕೆಲಸಂದ ರಿಯಾಯಿತಿ ಕೊಡ್ತಾ ಹೋದರೆ ಖಂಡಿತಾ ಮುಂದೆ ಉದಾಸಿನ ಅವರಲ್ಲಿ ಮರವಾಗಿ ಬೆಳದು ಅವರ ಜೀವನಲ್ಲಿ ಕೆಲಸ ಮಾಡಿಯೊಂಬಲೆ ಭಂಗ ಬರೇಕಕ್ಕು. ಹಿಡುದಕ್ಕೂ ಮುಟ್ಟಿದಕ್ಕೂ ಬೇರೆಯವರ ಅವಲಂಬಿಸಬೇಕಾಗಿಬಕ್ಕು. ಬುದ್ಧಿವಾದ ಹೇಳುತ್ತಾ ಬೇಕು. ಈಗ ಅನುಸರಿಸದ್ದರೂ ಮುಂದೊಂದು ದಿನ ಹೇಳಿದ್ದು ನೆನಪಾಗದ್ದೇ ಒಳಿಯ.

ಅವರವರ ಕೆಲಸಂಗಳ ಅವ್ವವ್ವು ಮಾಡಿಕೊಂಬದರಲ್ಲಿ ಎಂತ ತಪ್ಪೂ ಇಲ್ಲೆ, ಅವಮಾನವೂ ಇಲ್ಲೆ. ಅವ್ವು ಸ್ವಾವಲಂಬಿಗಳಪ್ಪಾಂಗೆ ಮಾಡುದು ಅಬ್ಬೆ ಅಪ್ಪನ ಕರ್ತವ್ಯದೇ. ಅವರ ಕೆಲಸಕ್ಕೆ ಪ್ರೋತ್ಸಾಹಿಸದ್ದೇ, ಅವಕ್ಕೆಡಿಗಪ್ಪಂತಾ ಕೆಲಸಂಗಳಲ್ಲಿ ರಿಯಾಯಿತಿ ತೋರಿಸಿದರೆ ಮಕ್ಕೊಗೆ ಆರೂದೇ ನಿಜವಾದ ಪ್ರೀತಿ ಕೊಟ್ಟಾಂಗೆ ಆವುತ್ತಿಲ್ಲೆ. ಬದಲಿಂಗೆ ಅವಕ್ಕೆ ದೊಡ್ಡೊರಾದ ನಾವು ಕಷ್ಟಂಗಳ ಕೊಟ್ಟ ಹಾಂಗೆ! ಅಡುಗೆ ಕೆಲಸ ಒಂದು ಮಾಂತ್ರ ಅಲ್ಲ, ಮೊದಾಲಿಂದಲೇ ಎಲ್ಲಾ ಕೆಲಸಂಗಳ, ಕಷ್ಟಂಗಳ ಗೊಂತಿಪ್ಪ ಮಕ್ಕೊ ಮುಂದೆ ಯೇವ ಕೆಲಸಂಗಳನ್ನೂ, ಕಷ್ಟಂಗಳನ್ನೂ ನಿಭಾಯಿಸುಲೆ ಸಾಮರ್ಥ್ಯ ಹೊಂದಿರ್ತವು. ನಮ್ಮ ಈಗಾಣ, ಹಾಂಗೆ ಹಿಂದೆ ಇತ್ತಿದ್ದ ಕೆಲವು ರಾಷ್ಟ್ರ ನಾಯಕರು ಕೂಡಾ ಎಷ್ಟೋ ಜೆನಂಗ ತೀರಾ ಬಡಸ್ತಿಕೆಲೇ ಬೆಳದು ಬಂದವ್ವು, ಸಣ್ಣಾದಿಪ್ಪಗಲೇ ಕಷ್ಟಪಟ್ಟು ದುಡುದು ಕಲಿಕೆಯ ಜತೆಗೆ ಗಳಿಕೆಯನ್ನೂ ಮಾಡಿಯೊಂಡು, ಕೆಲಸಲ್ಲಿಯೂ, ಓದಿಲಿಯೂ ಸದಾ ಮುಂದೆ ಬಂದವ್ವು ನಂತರ ಅತ್ಯುನ್ನತ ಸ್ಥಾನಕ್ಕೇರಿದ್ದವ್ವು ಹಾಂಗೆ ಸಮಾಜಲ್ಲಿ ಇಂತಿಂತ ವ್ಯವಸ್ಥೆಗಳ ಅವಶ್ಯಕತೆ ಇದ್ದು ಹೇಳಿ ತಿಳುದು ಕಾರ್ಯರೂಪಕ್ಕೆ ತಪ್ಪಲ್ಲಿ ಯಶಸ್ವಿಯಾಗಿ, ಯುಗಯುಗಲ್ಲಿ ಅವರ ನೆಂಪು ಸದಾ ಉಳಿವ ಹಾಂಗೆ ಮಾಡಿದ್ದವು.

ಮಕ್ಕಳ ಅವರವರ ಪ್ರಾಯಕ್ಕೆ ತಕ್ಕ ಹಾಂಗಿಪ್ಪ ಕೆಲವು ಕೆಲಸಂಗೊಕ್ಕೆ ತೊಡಗಿಸಿಕೊಂಬಗ ಭಾರೀ ಜಾಗ್ರತೆ ಇರೇಕಾವುತ್ತು. ಸಣ್ಣ ಮಕ್ಕೊ "ಆನು ಅದು ಮಾಡ್ತೆ, ಇದು ಮಾಡ್ತೆ" ಹೇಳ್ಯೊಂಡು ಅಡುಗೆ ಮನಗೋ, ಬಾತ್ರೂಮಿಂಗೋ, ವಿದ್ಯುತ್ ಉಪಕರಣಂಗಳ ಕೆಲಸಕ್ಕೆಲ್ಲಾ ಬಂದರೆ ಹೆರಿಯರಾದವು ಭಾರೀ ಜಾಗ್ರತೆವಹಿಸಿ ನೋಡಿಗೊಳ್ಳೇಕಾವುತ್ತು. ನೀರಿನ ಟ್ಯಾಂಕಿನ ಹತ್ತರೆ, ಬಾವಿಯ ಹತ್ತರೆ, ಸಂಪಿನ ಹತ್ತರೆ, ಬಾಲ್ದಿಲಿ, ಟಬ್ಬಿಲಿ ಎಲ್ಲಾ ನೀರು ಇಪ್ಪ ಜಾಗೆಗಳಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಸಾಲ. ಎಷ್ಟೋ ದಿಕ್ಕೆ ಮುಗ್ಧ ಮಕ್ಕೊ ಬೇನೆ ಮಾಡಿಯೊಂಡದೋ, ಜೀವಕ್ಕೆ ಕುತ್ತು ಬಂದ ಶುದ್ದಿಗಳ ನಾವು ಎಷ್ಟೋ ಸಲ ದಿನಪತ್ರಿಕೆಗಳಲ್ಲಿ ಓದಿದ್ದಲ್ಲದಾ? ಅಂತಾ ದುರಾವಸ್ಥೆ ಆಗದ್ದ ಹಾಂಗೆ ಜಾಗ್ರತೆ ವಹಿಸೇಕ್ಕು ಹಾಂಗೆ ಆಗಾಗ ತಿಳಿಹೇಳ್ತಾ ಇರೇಕ್ಕು ಸಹ. ಹಾಂಗೆ ಕೆಲಸ ಕಲ್ತು, ಕಷ್ಟಂಗಳ ತಿಳುದು, ಕೆಲಸ ಮಾಡ್ತಾ ಬೆಳದು ಬಂದ ಮಕ್ಕೊ ಮುಂದೊಂದು ದಿನ," ಕಷ್ಟ, ಸುಖ ಎರಾಡು ಗೊಂತಿದ್ದವಕ್ಕೆ, ಅವರ ಅಬ್ಬೆ, ಅಪ್ಪ ಅವರ ಎಲ್ಲಾ ಕಲಿಶಿಕೊಟ್ಟು ಚೆಂದಕ್ಕೆ ಸಾಂಕಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸಿದ್ದವ್ವು, ಅವು ಹೇಂಗೂ ಬದುಕು ಸಾಗಿಸುಗು" ಹೇಳಿ ನಾಲ್ಕು ಜೆನರಿಂದ ಹೇಳಿಸಿಕೊಂಬಗ ಹೆಮ್ಮೆ ಅನ್ನುಸುಗು.

ತ್ರಿವೇಣಿ ವಿ ಬೀಡುಬೈಲು
ಮಂಗಳೂರು