Tuesday, February 24, 2015

ಸಂಶಯ ಪಿಶಾಚಿ...-ಹವ್ಯಕ ವಾರ್ತೆ ಡಿಸೆಂಬರ್ ೨೦೧೪ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಸಂಶಯ ಪಿಶಾಚಿ...!
ಪಿಶಾಚಿ, ದೆವ್ವ, ಭೂತ, ಪ್ರೇತ, ಮೋಹಿನಿ, ಬ್ರಹ್ಮರಾಕ್ಷಸ ಹೇಳಿದರೆ ಎಂತಾ ಎಂಟೆದೆ ಬಂಟಂಗಾದರೂ ಒಂದರಿ ಎದೆ ’ಝಗ್’ ಹೇಳುತ್ತು! ಇದರ ಬಗ್ಗೆ ಕುತೂಹಲ, ಆಸಕ್ತಿ ಈಗಲುದೇ ಜೆನಂಗಳಲ್ಲಿ ಇದ್ದೇ ಇದ್ದು. ನಿಜವಾಗಿ ಇದ್ದಾ? ಜೆನ ಕತೆ ಕಟ್ಟಿದ್ದಾ? ಎಂತರನ್ನೋ ನೋಡಿ ಹೆದರಿಕೆ ಹುಟ್ಟಿ ಇವೆಲ್ಲಾ ಸೃಷ್ಠಿ ಮಾಡಿದ್ದಾ ಹೇಳಿ ಸರಿಯಾದ ಮಾಹಿತಿ ಇಲ್ಲದದ್ದೇ ಈ ಕುತೂಹಲಕ್ಕೆ ಮುಖ್ಯ ಕಾರಣ, ಅದುವೇ ಎಲ್ಲೋರ ಜಿಜ್ಞಾಸೆಯಾಗಿ ಈಗಲೂ ಸಂಶೋಧನೆಗೊ ನಡೆತ್ತಾ ಇದ್ದಡ! ಹಗಲು ಹೊತ್ತಿಲೋ, ಮನೆ ಒಳಾದಿಕ್ಕೆ ಲೈಟುಗೊ ಹೊತ್ತಿಕೊಂಡಿಪ್ಪಗಲೋ, "ಭೂತವೂ ಇಲ್ಲೆ, ಪಿಶಾಚಿಯೂ ಇಲ್ಲೆ" ಹೇಳಿ ಉಪೇಕ್ಷೆ ಮಾಡಿದ್ದರೂದೇ ಎಲ್ಲಿಯಾರೂ ನಡು ಇರುಳು ಜನಸಂಚಾರವೇ ಇಲ್ಲದ್ದ, ದಾರಿದೀಪವೂ ಇಲ್ಲದ್ದ ಕಡೆಗಳಲ್ಲಿ ಒಬ್ಬನೇ ನಡಕ್ಕೊಂಡು ಹೋಪ ಅನಿವಾರ್ಯ ಸಂದರ್ಭಲ್ಲಿ ಆರು ಎಂತದೇ ಹೇಳಲಿ, ಈ ನಿಶಾಚರಿಗಳ ನೆಂಪಾಗಿ, ಒಂದರಿ ಹಿಂದೆ, ಮುಂದೆ, ಸುತ್ತಾಮುತ್ತೆಲ್ಲಾ ಹೆದರಿಕೆಲೇ ಕಣ್ಣಾಡಿಸದ್ದವು ಆರೂ ಇರವು! ಎಷ್ಟೇ ಧೈರ್ಯ ತಂದುಕೊಂಡರುದೇ ಮುಂದೆ ಹೋಯಿಕೊಂಡಿಪ್ಪಗ, ಕೆಲವು ಜೆನ ಕಣ್ಣಿಲಿ ಕಂಡಾಂಗೆ ಹೇಳಿದ ಭೂತ, ಪಿಶಾಚಿಗಳ ಕೈಲಿ ಸಿಕ್ಕಿಹಾಕಿಯೊಂಡು ಮನುಷ್ಯರು ನೆತ್ತರು ಕಾರಿ ಸತ್ತ ಕತೆಗೊ, ಇನ್ನೂ ಕೆಲವು ಜೆನ ಅದರ ಕೈಲಿ ಸಿಕ್ಕಿಹಾಕಿಯೊಂಡು, ಹೇಂಗಾರೂ ಭಂಗಲ್ಲಿ ಓಡಿ ಜೀವ ಒಳಿಶಿಕೊಂಡ ಕತೆಗೊ, ಕೆಲವು ಮನೆಗಳಲ್ಲಿ ಕಿಟಕಿ, ಬಾಗಿಲುಗಳು ತಂನ್ನಿತ್ತಾನೆ ತೆರೆದುಕೊಂಬದು, ಒಂದು ದಿಕ್ಕೆ ಮಡುಗಿದ ವಸ್ತು ಮತ್ತೆ ನೋಡುವಾಗ ಇನ್ನೊಂದು ದಿಕ್ಕೆ ಇಪ್ಪದು, ವಿಚಿತ್ರವಾದ ಶಬ್ದಂಗೊ ಬಪ್ಪದು..., ಇದೆಲ್ಲಾ ಭೂತದ ಉಪದ್ರ ಹೇಳಿ ಕಂಡು ಬಂದು ಯಂತ್ರ, ತಂತ್ರ ಮಾಡಿಸಿದ ಮತ್ತೆ ಅದರ ಉಪದ್ರ ಕಡಮ್ಮೆಯಾದ ಕತೆಗೊ, ಎಲ್ಲಾ ನೆಂಪಿಂಗೆ ಬಂದು ಒಂದರಿಯಂಗೆ ಮೈಚಳಿ ಬಿಡಿಸಿಬಿಡ್ತು! ಒಂದರಿ ಜೀವಸಹಿತ ಮನೆ ಎತ್ತಿದರೆ ಸಾಕು ಹೇಳಿ, ’ರಾಮ ರಾಮ’ ಹೇಳಿಯೋ, ’ಕೃಷ್ಣ, ಕೃಷ್ಣ’ ಹೇಳಿಯೋ, ’ನಾರಾಯಣ, ನಾರಾಯಣ’ ಹೇಳಿಯೋ, ಇಲ್ಲೆ ಹೇಳಿಯಾದರೆ ಬಾಯಿಪಾಠ ಬಪ್ಪಂತಾ ದೇವರ ಶ್ಲೋಕಂಗಳ ಹೇಳಿಯೊಂಡು, ಉಸಿರು ಬಿಗಿಹಿಡುಕೊಂಡು ಮನೆ ಎತ್ತಿದ ಮತ್ತೆ ನಿಟ್ಟುಸಿರು ಬಿಡ್ತವು! ಆ ಬಂದು ಎತ್ತಿದ ಜೆನವ ಮನೆವ್ವೆಲ್ಲಿಯಾರೂ, "ನಿಂಗೊಗೆ ಈ ಕತ್ಸಲೆಲಿ ಒಬ್ಬನೇ ಬಪ್ಪಲೆ ಹೆದರಿಕೆ ಆಯಿದಿಲ್ಲೆಯಾ?" ಹೇಳಿ ಕೇಳಿದರೆ, "ಏಯ್, ಹೆದರಿಕೆಯೂ ಆಯಿದಿಲ್ಲೆ, ಕರ್ಮವೂ ಇಲ್ಲೆ, ಎಂತರ ಹೆದರಿಕೆ? ಎಲ್ಲಾ ನಮ್ಮ ಮನಸ್ಸಿನ ಭಾವನೆಗೊ ಅಷ್ಟೇ" ಹೇಳಿ ತಪ್ಪಿಸಿಕೊಂಡುಬಿಡ್ತವು!  ಒಂದು ಮನೆಲಿ ಆರಾದರೂ ಸತ್ತಿದವು ಹೇಳಿದರೆ, ಅವರ ಅಂತ್ಯಕ್ರಿಯೆ ಆದ ಮತ್ತೆ ಕೆಲವು ದಿನಂಗಳ ಮಟ್ಟಿಂಗೆ ಅವರ ಮನುಗುಶಿದ ರೂಮಿಂಗೆ, ಅವ್ವು ತಿರುಗಾಡಿದ ಜಾಗೆಲೆಲ್ಲಾ ಹೋಪಲೆ, ಇರುಳಪ್ಪಗ ಒಬ್ಬನೇ ಒಂದು ಕೋಣೆಯಿಂದ ಮತ್ತೂಂದು ಕೋಣೆಗೆ ಹೋಪಲೇ ಜೆನ ಹೆದರುತ್ತವು! ಮತ್ತೆ ಬೇರೆದಿಕ್ಕೆಲ್ಲಾ ಹೆದರುತ್ತವಾ ಹೇಳಿ ಕೇಳೆಕ್ಕಾ?! 


ಆನು ಪ್ರೈಮರಿ ಶಾಲಗೆ ಹೋಯಿಕ್ಕೊಂಡಿದ್ದ ದಿನಂಗಳಲ್ಲಿ ದೊಡ್ದವ್ವೂ, ಮಕ್ಕೊ ಎಲ್ಲಾ ಹೇಳಿಕೊಂಡಿದ್ದದು ಹುಣಸೇ ಮರಲ್ಲಿ ಭೂತ ಪಿಶಾಚಿಗಳ ವಾಸ ಹೇಳಿ! ಆನು ಶಾಲಗೆ ನಡಕ್ಕೊಂಡು ಹೋಯಿಕ್ಕೊಂಡಿಪ್ಪಗ ದಾರಿಲಿ ಹುಣಸೇ ಮರ ಸಿಕ್ಕಿಕೊಂಡಿತ್ತು, ಎಲ್ಲಿಯಾರೂ ಎನ್ನ ಜತೆ ಆರೂ ಇಲ್ಲದ್ದರೆ ಮಾಂತ್ರ ಆ ಮರ ಸಿಕ್ಕುವ ಒಂದು ಇಪ್ಪತೈದು ಫೀಟಿಂದ ಶುರುಮಾಡಿ, ಮರ ದಾಂಟಿದ ಮತ್ತೂ ಇಪ್ಪತೈದು ಫೀಟಿಂಗೊರಗೆ ಕುಂಡಗೆ ಕಾಲು ಕೊಟ್ಟೊಂಡು ಓಡಿಯೊಂಡಿತ್ತೆ! ಮನೆಗೆ ಬಂದು, "ಈ ಭೂತ, ಪಿಶಾಚಿ ಇಪ್ಪದೆಲ್ಲಾ ನಿಜವಾ?" ಹೇಳಿ ಕೆಲವು ಸಲ ಕೇಳಿಪ್ಪೆ, ಅಂಬಗ ಅಮ್ಮ ವೀರ ಪರಾಕ್ರಮಿಗಳ ಕತೆಗಳ, ಮನುಷ್ಯರು ಕಷ್ಟಲ್ಲಿಪ್ಪಗ ದೇವರು ಸಕಾಯ ಮಾಡಿದ ಕತೆಗಳ ಎಲ್ಲಾ ಹೇಳಿಕೊಂಡಿದ್ದತ್ತು! ಆದರೂ ಈ ಅಂಬಗಂಬಗ ಒಬ್ಬಲ್ಲ ಒಬ್ಬ ಶಾಲೆಲಿ ಭೂತ, ಪಿಶಾಚಿಗಳ ಕತೆಗಳ ಹೇಳಿಯೊಂಡೇ ಇತ್ತಿದವು. ಆನು ಹಾಂಗೇ ದಿನಾ ಮನಗೆ ಬಂದು ಸಂದೇಹ ಪರಿಹಾರ ಮಾಡುಲೆ ಕೇಳಿಯೋಂಡೇ ಇದ್ದರೆ ಬೆತ್ತ ಹಿಡುದು ಓಡಿಸುಗು! ಮೆಲ್ಲಂಗೆ ಅಜ್ಜಿ ಹತ್ತರೆ ಹೋಗಿ ಕೂದೊಂಡು ಈ ಶಾಲೆ ಮಕ್ಕೊ ಹೇಳಿದ ಕತೆಗಳ ಎಲ್ಲಾ ಹೇಳುದಾನು! ಅಜ್ಜಿ, "ಅಪ್ಪೋ!?, ಅಪ್ಪೋ!?" ಹೇಳಿ ಭಾರೀ ಕುತೂಹಲಲ್ಲಿ ಕೇಳಿಯಪ್ಪಗ ಶಾಲೆಲಿ ಮಕ್ಕೊ ಹೇಳಿದ ಕತೆಗೊಕ್ಕೆ ರೇಂಕೆ, ಕೊಂಬು ಎಲ್ಲಾ ಬಂದಿರ‍್ತಿ‍ತ್ತು! ಮತ್ತೆ ಅಜ್ಜಿ ಹೇಳುಗು, "ರಾಮ ರಾಮ ಹೇಳಿರೆ ದುಷ್ಟ ಶಕ್ತಿಗೊ ಎಲ್ಲಾ ದೂರ ಹೋವುತ್ತವು, ಅದಕ್ಕೇ ಕತ್ಸಲಪ್ಪಗ ಭಕ್ತಿಲಿ ದೇವರ ದೀಪ ಹೊತ್ತುಸಿ ಶಂಖ ಊದೇಕು, ದೇವರ ಭಜನೆ ಮಾಡೇಕು ಹೇಳುದು, ಅಕೇರಿಗೆ ಜಯಗಂಟೆ ಹೆಟ್ಟಿ ಮಂಗಳಾರತಿ ಎತ್ತಿಯಪ್ಪಗ ಎಂತ ಇದ್ದರೂ ಓಡಿಹೋಕು, ಜೆನಿವಾರ ಹಾಕಿದವರ, ಗಾಯತ್ರಿ ಮಂತ್ರ, ಲಲಿತಾ ಸಹಸ್ರನಾಮ ಎಲ್ಲಾ ಹೇಳಿಕೊಂಡಿಪ್ಪವರ ಹತ್ತರೆ ಬಾರಲೇ ಬಾರ ಅದು, ಆ ದೇವರ ಶಕ್ತಿ ಮುಂದೆ ದುಷ್ಟ ಶಕ್ತಿಯ ಆಟ ನಡೆತ್ತಿಲ್ಲೆ" ಹೇಳಿ ಎಲ್ಲಾ ಹೇಳಿಯೊಂಡಿತ್ತವು. ಎನ್ನ ಹತ್ತರೆ ಅಜ್ಜಿ ಮಾಂತ್ರ ಒಂದು ದಿನವೂ "ಅಂತಹ ಯೇವುದೇ ಭೂತ ಆಗಲಿ, ಪ್ರೇತ ಆಗಲಿ ಇಲ್ಲೆ" ಹೇಳಿ ನಿಸ್ಸಂಶಯವಾಗಿ ಹೇಳಿದವ್ವೇ ಅಲ್ಲ! "ಅಜ್ಜೀ ನಿಜವಾಗಿ ಅದೆಲ್ಲಾ ಇದ್ದಾ?! ಹೇಳಿ ಅಜ್ಜಿ!, ಹೇಳಿ...!" ಹೇಳಿ ಹೆದರಿಯೊಂಡು ಕೇಳಿಯೊಂಡೇ ಇತ್ತಿದ್ದರೆ ಮಾಂತ್ರ, "ಭೂತವೂ ಇಲ್ಲೆ, ಪಿಶಾಚಿಯೂ ಇಲ್ಲೆ, ಹೋಗಿ ನೀನು ಓದಿ, ಬರದು ಎಲ್ಲಾ ಮಾಡು, ಈಗ ಬಕ್ಕು ಅಪ್ಪ, ಅಮ್ಮ ಕೋಲು ತೆಕ್ಕಂಡು, ಈ ಅಜ್ಜಿಗೂ ಪುಳ್ಳಿಗೂ ಕೆಲಸ ಇಲ್ಲೆ, ಪಟ್ಟಾಂಗ ಹೊಡಕ್ಕೊಂಡು ಕೂಯ್ದವು ಹೇಳಿಯೊಂಡು" ಹೇಳಿ ಸಣ್ಣ ಕೋಪ ಬರಿಸಿಯೊಂಡು ಹೇಳುಗಷ್ಟೇ! ಹಾಂಗೆ ಸಣ್ಣಾದಿಪ್ಪಗ ಎನ್ನ ಸಂಶಯ ಸರಿಯಾಗಿ ಪರಿಹಾರ ಆದ್ದು ಹೇಳಿಯೇ ಇಲ್ಲೆ! ಒಂದು ಹೊಡೆಂದ ಅಮ್ಮ ಎಂತದೂ ಇಲ್ಲೆ ಹೇಳುದು, ಇನ್ನೊಂದು ಹೊಡೆಂದ ಅಜ್ಜಿ ಅಂತಾ ದುಷ್ಟ ಶಕ್ತಿಗೊ ದೇವರ ಪ್ರಾರ್ಥನೆ ಮಾಡಿದರೆ ಓಡಿಹೋಕು ಹೇಳಿ, ದೇವರ ಮುಂದೆ ’ಅದರ’ ಆಟ ನಡೆತ್ತಿಲ್ಲೆ ಹೇಳಿ ಹೇಳಿಪ್ಪಗ ಆ ’ಅದು’ ಇದ್ದು ಹೇಳಿಯೇ ಆತನ್ನೇ?! ಎಲ್ಲಾ ಆಲೋಚನೆ ಮಾಡಿಯೊಂಡು ಕೆಲವು ಸಲ ಇರುಳೆಲ್ಲಾ ವರಕ್ಕು ಬಾರದ್ದ ದಿನಂಗೊ ಎಷ್ಟೋ ಏನೋ!  ಆನು ಶಾಲೆಲಿ ಫ್ರೆಂಡುಗೊ ಹೇಳುದರ, ಅಮ್ಮ, ಅಜ್ಜಿ ಹೇಳಿದ್ದರ ಎಲ್ಲಾ ಆಲೋಚನೆ ಮಾಡಿ ನೋಡಿಯಪ್ಪಗ, ಖಂಡಿತವಾಗಿಯೂ ’ಅದೆಲ್ಲಾ’ ಇದ್ದು ಹೇಳಿಯೇ ನಂಬಿಯೊಂಡಿತ್ತೆ ಏಳನೇ ಕ್ಲಾಸಿನವರೆಗೂ! ಮತ್ತೆ ಓದುಲೆ, ಬರವಲೆ ಹೆಚ್ಚಾದಾಂಗೇ ಆ ಹೆದರಿಕೆ ಎಲ್ಲಾ ಗುಡ್ಡೆ ಹತ್ತಿತು! ಆನು ಕಾಲೇಜು ವಿದ್ಯಾಭ್ಯಾಸ ಮಾಡಿಯೊಂಡಿಪ್ಪಗ ಒಂದರಿ ಅಜ್ಜಿ ಹತ್ರ ಮಾತಾಡಿಯೊಂಡಿಪ್ಪಗ ಭೂತ, ಪ್ರೇತದ ವಿಷಯವೇ ಬಂತು. "ಆರಿಂಗಾದರೂ ನಮ್ಮ ಪೈಕಿಲಿ ’ಅದು’ ಉಪದ್ರ ಕೊಟ್ಟದ್ದು ಗೊಂತಿದ್ದಾ ಅಜ್ಜೀ?" ಹೇಳಿ ಕೇಳಿದೆ. ಅಂಬಗ ಅಜ್ಜಿ ತುಂಬಾ ವರ್ಷದ ಹಿಂದೆ ನಡದ್ದರ ನೆಂಪು ಮಾಡಿಯೊಂಡು, "ಈ ವಿಷಯ ಅಜ್ಜಿ ಹೇಳಿದವು ಹೇಳಿ ಹೆದರೇಡ ಮಗಳೇ..., ಒಂದು ಕತೆ ನಡದ್ದು ಕೇಳು..., ಒಂದರಿ ನಿನ್ನ ಅಜ್ಜ ಇತ್ತಿದವನ್ನೇ ಅವ್ವು ಯೇವುದೋ ಕಾರ್ಯಕ್ರಮ ಮುಗುಶಿಯೊಂಡು ಬಪ್ಪಗ ಇರುಳಾಗಿತ್ತು, ಅಂಬಗೆಲ್ಲಾ ಈಗಾಣ ಹಾಂಗೆ ಬಸ್ಸುಗೊ ಎಲ್ಲಾ ಇತ್ತಿದಿಲ್ಲೆ, ಹಾಂಗೇ ನಡಕ್ಕೊಂಡು ಬಂದೋಂಡಿತ್ತಿದ್ದವಡ, ಕೈಲಿ ಅಂಬಗೆಲ್ಲಾ ಈಗಾಣ ಕಾಲದ ಹಾಂಗೆ ಆಸರಪ್ಪಗ ಕುಡಿವಲೆ ನೀರು ತೆಕ್ಕಂಡು ಹೋಪಲೆ ಬಾಟ್ಲಿಗೊ ಇತ್ತಿದಾ..., ಅಜ್ಜ ಎಲ್ಲಿಗೆ ಹೋವುತ್ತರೂ ಒಂದು ಕಮಂಡಲಲ್ಲಿ ನೀರು ತೆಕ್ಕೊಂಡು ಹೋಯಿಕ್ಕೊಂಡಿತ್ತಿದ್ದವು. ಹಾಂಗೇ ಅದರ ಒಂದು ಕೈಲಿ ಹಿಡ್ಕೊಂಡು, ಮತ್ತೊಂದು ಕೈಲಿ ಲಾಂಟನು ಹಿಡ್ಕೊಂಡು ದಾರಿಲಿ ನಡಕ್ಕೊಂಡು ಬಪ್ಪಾಗ ಕಸ್ತಲಾತಡ. ಮುಂದೆ ಬಂದುಕೊಂಡಿದ್ದಾಂಗೇ ಒಂದು ಬೆಳೀ ವಸ್ತ್ರ ಸುತ್ತಿದ ಹೆಂಗಸು ಅಜ್ಜನೆದುರು ಬಂದು, ’ಸ್ವಾಮೀ, ಸ್ವಲ್ಪ ನೀರು ಕೊಡ್ತೀರಾ?’ ಹೇಳಿ ಕೇಳಿತಡ. ಅಂಬಗ ಅಜ್ಜಂಗೆ ಅದು ಮನುಷ್ಯ ಅಲ್ಲ ಹೇಳಿ ಗೊಂತಾಗಿ, ಕಣ್ಣು ಮುಚ್ಚಿ ಮಂತ್ರ ಹೇಳಿಯೊಂಡು ಕಮಂಡಲಂದ ಕೈಗೆ ನೀರೆರಕ್ಕೊಂಡು ಅದರ ಮೇಲೆ ಪ್ರೋಕ್ಷಣೆ ಮಾಡಿದವಡ, ಅಷ್ಟಪ್ಪಗ ಆ ಹೆಂಗಸೇ ಅಲ್ಲಿಂದ ಮಾಯ ಆತಡ!" ಅಜ್ಜಿ ಹೇಳಿದ ಈ ಕತೆಯ ಬಾಯಿಬಿಟ್ಟೊಂಡು ಕೇಳುಲೆ ಭಾರೀ ಸ್ವಾರಸ್ಯಕರವಾಗಿದ್ದತ್ತು! ಒಂದು ಸಿನೆಮಾ ನೋಡಿ ಬಂದಷ್ಟು ಖುಷಿ ಆತೆನಗೆ! ಆದರೆ ಅಜ್ಜ, ಅಜ್ಜನ ಗಟ್ಟಿಗ ಹೇಳಿ ತೋರಿಸಿಕೊಂಬಲೆ ಅಜ್ಜಿ ಎದುರು ಬಂಡಲ್ ಬಿಟ್ಟದಾ ಅಲ್ಲಾ ನಿಜವಾಗಿ ಹೀಂಗೆಲ್ಲಾ ನಡದ್ದಾ, ಅಲ್ಲಾ ಅಜ್ಜನ ಭ್ರಮೆಯೋ ಹೇಳಿ ಮಾಂತ್ರ ಆರಿಂಗೂ ಗೊಂತಿಲ್ಲೆ! 



ಕೆಲವುದಿಕ್ಕೆಲ್ಲಾ ಹಿರಿಯರು ಅವರ ಪೈಕಿಯವರ, ಹೆಮ್ಮಕ್ಕಳ, ಮಕ್ಕಳ ಎಲ್ಲಾ ಕೆಲವು ನಿರ್ದಿಷ್ಟ ಜಾಗೆಗೆ, ಕೆಲವು ಮರಂಗಳ ಹತ್ತರೆ ಎಲ್ಲಾ ಹೋಪಲಾಗ ಹೇಳುದರ ಬಹುಶ: ನಿಂಗೊಲ್ಲಾ ಕೇಳಿಪ್ಪಿ! ಎಂತಕೆ? ಹೇಳುವ ಜಿಜ್ಞಾಸೆ ಇನ್ನೂ ಕಾಡುತ್ತಾ ಇದ್ದು ಎನ್ನ! ಹುಣಸೇ ಮರಕ್ಕೆ ಅಂದು ಸಣ್ಣಾದಿಪ್ಪಗ ಹೆದರಿಯೊಂಡಿದ್ದ ಎನ್ನನ್ನೇ ಗೇಶಿ ಜೋರಾಗಿ ನೆಗೆ ಬತ್ತು ಈಗೆಲ್ಲಾ ಊರಿಂಗೆ ಹೋದಿಪ್ಪಗ ಎಂತಕೆ ಹೇಳಿರೆ ಆನೊಬ್ಬನೇ ಹೋಗಿ ಅರೆಹಣ್ಣಾದ, ಪೂರ್ತಿ ಹಣ್ಣಾದ ಹುಣಸೇಹುಳಿಯ ತಿಂಬಲೆ ಹೇಳಿ ಅಂಬಗಂಬಗ ಹೋಯಿಕ್ಕೊಂಡಿರ‍್ತೆ ಒಬ್ಬನೇ ಆ ಮರದ ಹತ್ತರೆ! ಇದುವರೆಗೂ ಎಷ್ಟೇ ಹದ್ದಿನ ಕಣ್ಣಿಲಿ ನೋಡಿದರುದೇ ಒಂದೇ ಒಂದು ಶಕ್ತಿಯ ಆ ಮರಲ್ಲಿ ಕಂಡಿದ್ದೇ ಇಲ್ಲೆ ಆನು! ಬಾಯಿಗೆ ರುಚಿಯಾವುತ್ತು ಹೇಳಿಯೊಂಡು ಲೆಕ್ಕಂದ ಹೆಚ್ಚು ಹುಳಿ ತಿಂದರೆ ಮಾಂತ್ರ ದಿನಲ್ಲಿ ಕನಿಷ್ಠ ಪಕ್ಷ ಆರರಿಂದ ಏಳು ಸರ‍್ತಿ ಹೆರ ಹೋಯಿಕ್ಕೊಂಡಿರೇಕಾವುತ್ತು! ಅದರ ಆ ಹುಣಸೇ ಮರದತ್ತರೆ ಒಬ್ಬನೇ ಹೋದಕ್ಕೆ ಹಾಂಗಪ್ಪದು ಹೇಳಿ ಖಂಡಿತಾ ಹೇಳುಲೆಡಿತ್ತಿಲ್ಲೆ! ಎಂತ ಹೇಳುತ್ತಿ?!



ಓ ಮೊನ್ನೆ ಮೊನ್ನೆ ಎಂಗಳ ಸಣ್ಣ ಮಗಳು  ಹೊಸ್ತಿಲು ದಾಂಟಿ ಒಳ ನುಗ್ಗೇಕಾರೇ, "ಅಮ್ಮಾ ವ್ಯಾನಿಲಿ ಬಪ್ಪ ಪ್ರಿಯಾಂಕ ಹೇಳಿತು ಆ ಕಾರ್ಪೋರೇಷನ್ ವಾಟರ್ ಪಂಪಿನ ಬಿಲ್ಡಿಂಗಿನ ಹತ್ತರೆ ಪಿಶಾಚಿ ಇದ್ದಡ!" ಹೇಳಿ.

"ಅದಕ್ಕೆ ಬೇರೆ ಕೆಲಸ ಇಲ್ಲೆ ಮಗಾ, ಪಿಶಾಚಿ ಅಡ ಪಿಶಾಚಿ, ಎಂತರ ನೋಡಿದ್ದೋ, ಎಂತರ ಹೇಳುದೋ ಏನೋ, ಅದು ಹಾಂಗೆ ಹೇಳಿತು ಹೇಳಿ ನಿಂಗೊಲ್ಲಾ ನಂಬಿ ಹೆದರೇಕು ಹೇಳಿ ಇಲ್ಲೆ" ಹೇಳಿ ಹೇಳಿದೆ. ಅದು ಅದರಕ್ಕನ ಎದುರಂದ ಹೇಳಿದ್ದು ಎನಗೆ ರಜ್ಜವೂ ಕುಷಿ ಆಯಿದಿಲ್ಲೆ. ಹೋಗಿ, ಹೋಗಿ ಅಕ್ಕನೆದುರಂದ ಹೇಳಿತನ್ನೇ ಹೇಳಿ ಆತೆನಗೆ! ಅದು ಮೊದಾಲೇ ಹೆದರುಪುಕ್ಕಲಿ, ಜೇಡ, ಎಲಿ, ಹಲ್ಲಿ, ಕೆಪ್ಪೆ, ಜರಲೆಗಳ ಬಿಡಿ, ಬಸವನಹುಳು ಕಂಡರೂ ಹೆದರುವ ಜೆನ! 


"ಅಪ್ಪಾ ತಂಗೇ....?! ಎಲ್ಲಿ?! ಎಷ್ಟೊತ್ತಿಗೆ ಅದು ನೋಡಿದ್ದಡಾ? ಹೇಂಗಿತ್ತಡಾ ನೋಡುಲೆ? ಇಂದಿರುಳು ಆನು ಓದುಲೆ ಹೆರ ಇಪ್ಪ ರೂಮಿಂಗೆ ಹೇಂಗೆ ಒಬ್ಬನೇ ಹೋಗಲಿ?!....." ನಾಲ್ಕೂ ಪ್ರಶ್ನೆಗಳ ಒಟ್ಟಿಂಗೆ ಕೇಳಿ ಎದುರಿನ ಬಾಗಿಲ ಚಿಲಕ ಹಾಕಿತು! ಅದು ಬಾಗಿಲು ಹಾಕಿದ ಸ್ಟೈಲಿಲಿಯೇ ಅಂದಾಜು ಮಾಡಿದೆ ಅದು ಎಷ್ಟು ಹೆದರಿದ್ದು ಹೇಳಿ! ಮೆಲ್ಲಾಂಗೆ ಕಿಟಕಿಯ ರಜ್ಜ ತೆರದು ಮನೆ ಮುಂದೆ ಇಪ್ಪ ಆ ಕಾರ್ಪೋರೇಷನ್ ಪಂಪಿನ ಬಿಲ್ಡಿಂಗಿನ ಕಡೆ ನೋಡಿತು!

"ಓ ದೇವರೇ ಎಂತರ ಮಗಳು ನೀನು ಇಷ್ಟು ಹೆದರುದು? ಕಾಲೇಜಿಲಿ ಮೃತ ಶರೀರದ ಹತ್ತರವೇ ನಿಂದೋಂಡು ದೇಹದ ಅಂಗಾಗಗಳ ಬಗ್ಗೆ ಪಾಠ ಕಲಿತ್ತಾ ಇಪ್ಪ ನೀನು ಹೆದರುದಾ?! ಬರೇ ದಂಡ" ಹೇಳಿದೆ. ಇದರ ಓದುವ ಕೋಣೆಲಿ ಕಲಿವಲೆ ಹೇಳಿ ಖರೀದಿಸಿ ತಂದ ತಲೆಬುರುಡೆ ಕೂಡಾ ಇದ್ದು. ಎಂಗೊಲ್ಲಾ ಹನ್ನೊಂದು ಗಂಟೆಗೆ ವರಗಿದ ಮತ್ತೆ ಅದು ಅದಕ್ಕೆ ಸಾಗರದ ಹಾಂಗೆ ಓದುಲಿಪ್ಪ ಪಾಠಂಗಳ ಒಂದೂವರೆ ಗಂಟೆವರೆಗೂ ಅದೇ ತಲೆಬುರುಡೆ ಮಡುಗಿಯೊಂಡಿಪ್ಪ ಕೋಣೆಲಿಯೇ ಓದುದು! "ಅಯ್ಯೋ ಅಂತಾ ನೀನೇ ಈ ಲಾಟ್‍ಪೂಟ್ ಆರೋ ಹೇಳಿದ ವಿಷಯಕ್ಕೆ ಇಷ್ಟು ಹೆದರುತ್ತೆನ್ನೇ..." ಹೇಳಿ ಎನ್ನ ಚಿಂತೆಯ ತೋರಿಸಿಯೊಂಡೆ.
"ಅಯ್ಯೋ ಅಮ್ಮಾ ಅದಾದರೆ ಎಂತ ಆವುತ್ತಿಲ್ಲೆ...ಅದು ಎದ್ದು ಬತ್ತಿಲ್ಲೆ...ತಂಗೆ ಹೇಳುದರ ಕೇಳು... ಅದು ಬೇರೆ ವಿಷಯ" ಹೇಳಿ ನಾಲಗಗೆ ಹೇಂಗೆ ತೋಚಿತೋ ಹಾಂಗೆಲ್ಲಾ ಮಾತಾಡಿತು! ಈ ಹೆದರು ಪುಕ್ಕಲಿಯ ಅದರ ಕಾಲೇಜಿನ ಅನಾಟಮಿ ಪ್ರೊಫೆಸರುಗೊ ಹುಶಾರಿನ ಹುಡುಗಿ ಹೇಳಿ ಹೇಂಗೆ ಹೊಗಳುತ್ತವೋ ಹೇಳಿ ಒಂದರಿಯಂಗೆ ಅನ್ನಿಸಿತು! ಈ ಜೆನದ ಹತ್ತರವೇ ಇದು ಲಾಯ್ಕ ವಿವರಿಸುವ ವಿದ್ಯಾರ್ಥಿ ಹೇಳಿ ಅವಕ್ಕೆ ಕಲಿವಲಿಪ್ಪ ದೆಡ್ ಬಾಡಿಯ ಹತ್ತರ ಹೋಗಿ ಮುನ್ನಾಣ ದಿನ ಮಾಡಿದ ಪಾಠವ ವಿವರಿಸುಲೆ ಹೇಳಿಕೊಂಡಿರ‍್ತವಡ! ಇದು ಕಾಲೇಜಿಂಗೆ ಸೇರಿದ ಲಾಗಾಯ್ತು ಸಾಮಾನ್ಯವಾಗಿ ಹೇಳಿಕೊಂಡಿಪ್ಪ ಈ ವಿಚಾರವ ಗೇಶಿಯೊಂಡು ಹಣೆ ಚಚ್ಚಿಯೊಂಡೆ!
ಸಣ್ಣ ಮಗಳು ಹೇಳಿತು, "ಅಮ್ಮಾ ಕೇಳು, ಅಕ್ಕಾ ನೀನುದೇ ಕೇಳು, ನಿನ್ನೆ ಇರುಳು ಹತ್ತು ಗಂಟೆಗೆ ಪ್ರಿಯಾಂಕಂದೇ ಅದರಣ್ಣಂದೇ ಹೋಯಿಕ್ಕೊಂಡಿಪ್ಪಾಗ ಆರೋ ಬತ್ತಾ ಇಪ್ಪಾಂಗೆ ಶಬ್ದ ಅಪ್ಪಗ ಹಿಂದೆ ತಿರುಗಿ ನೋಡಿದವಡ. ಅಂಬಗ ಕಂಡದಡಾ, ಉದ್ದಕ್ಕೆ ಇತ್ತಡ, ಬೆಳ್ಳಂಗೆ ಇತ್ತಿದಡ..., ಮತ್ತೆ ಅವ್ವಿಬ್ರೂ ಪುನ: ಹಿಂದೆ ಸಹ ತಿರುಗಿ ನೋಡದ್ದೇ ಓಡಿ ಹೋಗಿ ಮನೆ ಸೇರಿದವಡ..., ಅಮ್ಮಾ ಅದು ಪಾಪ ಹಾಂಗೆಲ್ಲ ಸುಳ್ಳು ಹೇಳ್ತಿಲ್ಲೆ ಎಂಗೊಗೆಲ್ಲಾ ಗಾಡ್ ಪ್ರಾಮಿಸ್ ಹಾಕಿ ಶುದ್ಧಿ ಹೇಳಿದ್ದು ಗೊಂತಿದ್ದಾ?"
ತಂಗೆಯ ಬಾಯಿಂದ ಇಷ್ಟು ಶುದ್ಧಿ ಕೇಳಿದ ದೊಡ್ಡ ಮಗಳು ಅಂದು ಇರುಳಪ್ಪಗ ಹೆರ ಇಪ್ಪ ಅದರ ರೂಮಿಂಗೆ ಹೋಯಿದೇ ಇಲ್ಲೆ!
ಮರುದಿನ ಆ ಬಿಲ್ಡಿಂಗಿಂಗೆ ಆನುದೇ, ಎನ್ನ ನೆರೆಕರೆಯ ಫ್ರೆಂಡುದೇ ಹೋಯಿದೆಯ. ಅಲ್ಲಿ ಬೆಳಿ ಪೈಯಿಂಟ್ ಬಳುದ ಉದ್ದುದದ ಕಬ್ಬಿಣದ ಶೀಟುಗಳ ಗೋಡೆಗೆರಗಿಸಿ ಮಡುಗಿತ್ತವು.  ಅಲ್ಲಿ ಒಂದು ಜೆನ ಇತ್ತಿದು, ಅದರ ಅತ್ತಿತ್ತೆ ಹೋಪದರ ನೋಡಿ ಎಂಗೊಗೆ ಪರಿಚಯ ಇದ್ದತ್ತು. ಅದರತ್ತರೆ ಕೇಳಿದೆ, "ಆ ಶೀಟುಗಳು ಎಂತದಕ್ಕೆ ಇರೋದು? ಯಾವಾಗ ತಂದದ್ದು?" ಹೇಳಿ. 
"ಅದಿಲ್ಲಿ ಸಣ್ಣ ಟೆಂಟ್ ಹಾಕ್ಲಿಕ್ಕೆ ಮ್ಯಾಡಂ, ಇಲ್ಲಿ ಒಂದು ಏಳೆಂಟು ತಿಂಗಳಿನ ಮಟ್ಟಿಗೆ ಕೆಲಸ ಉಂಟು, ಹಾಗೆ ಕೆಲಸದವ್ರಿಗೆಲ್ಲಾ ಉಳುದುಕೊಳ್ಳಲಿಕ್ಕೆ ಬೇಕಲ್ವಾ? ಹಾಗೆ ನಿನ್ನೆ ರಾತ್ರಿ ಇದನ್ನೆಲ್ಲಾ ಒಂದೊಂದಾಗಿ ತಂದು ಇಟ್ಟದ್ದು ಆ ಲೇಬರರ‍್ಸ್" ಹೇಳಿ ಹೇಳಿತು ಆ ಜೆನ! 
ಮನೆಗೆ ಬಂದು ಮಕ್ಕೊಗೆ ಹೇಳಿದೆ, "ಇದಾ ನಿನ್ನೆ ಪಿಶಾಚಿ, ಪಿಶಾಚಿ ಹೇಳಿ ಹೆದರಿಯೊಂಡಿತ್ತಿರನ್ನೇ ಅದು ಪಿಶಾಚಿಯೂ ಅಲ್ಲ, ಪ್ರೇತವೂ ಅಲ್ಲ, ಹಾಂಗಿಪ್ಪದು ಇಲ್ಲವೂ ಇಲ್ಲೆ, ಅದಿದಾ ಉದ್ದುದ್ದದ ಬಿಳೀ ಬಣ್ಣದ ಪೈಂಟ್ ಕೊಟ್ಟ ಕಬ್ಬಿಣದ ಶೀಟುಗೊ, ನಿನ್ನೆ ಇರುಳಪ್ಪಗ ತರಿಸಿದ್ದಡ ಕೆಲಸಗಾರರಿಂಗೆ ಉಳುಕೊಂಬಲೆ ಟೆಂಟು ಕಟ್ಟುಲೆ ಹೇಳಿ, ಆನುದೇ, ಪಕ್ಕದ ಮನೆ ಆಂಟಿದೇ ಹೋಗಿ ಎಲ್ಲಾ ತಿಳುಕೊಂಡು ಬಂದೆಯ, ಆ ನಿನ್ನ ವ್ಯಾನಿನ ಫ್ರೆಂಡಿಂಗೂ ಹೇಳು ಅವ್ವು ನೋಡಿದ್ದು ಉದ್ದ ಬೆಳಿ ಪಿಶಾಚಿಯ ಅಲ್ಲ, ಉದ್ದದ ಬೆಳಿ ಪೈಯಿಂಟ್ ಕೊಟ್ಟ ಶೀಟುಗಳ ಮನುಷ್ಯರು ಹೊತ್ತೋಂಡು ಬಪ್ಪದರ ಹೇಳಿ, ಆತಾ..." ಹೇಳಿದೆ. ಒಂದೊಂದರಿ ಅನ್ಸುತ್ತು ಹೀಂಗಿಪ್ಪಾ ಘಟನೆಗೊ ಎಲ್ಲಾ ನಡದು, ಒಬ್ಬ ಇನ್ನೊಬ್ಬಂಗೆ ಹೇಳ್ತಾ ಗಾಳಿಸುದ್ಧಿಗೊ ಹಬ್ಬಿ, ಸತ್ಯಾಂಶ ಎಂತ ಹೇಳಿ ತಿಳುಕೊಳ್ಳದ್ದೇ ಪಿಶಾಚಿ, ಪ್ರೇತಗಳ ಕತೆಗೊ ಎಲ್ಲಾ ಅಸ್ತಿತ್ವಕ್ಕೆ ಬಂದದು ಹೇಳಿ! 
ಅದೇ ದಿನಂದಲೇ ಮಗಳು ಒಂದೇ ಆ ಹೆರ ಇಪ್ಪ ರೂಮಿಂಗೆ ಹಗಲಾಗಲೀ, ಇರುಳಾಗಲೀ ಒಬ್ಬನೇ ಹೋಯಿಕ್ಕೊಂಡು ಬಂದೊಂಡು ಇದ್ದು!
ಮಕ್ಕೊ ಇಬ್ರಿಂಗೂ ಈ ಮೇಲೆ ನಡೆದ ವಿಷಯಲ್ಲಿ ’ಎಂತದ್ದೂ’ ಇಲ್ಲೆ ಹೇಳಿ ಒಂದು ನಮೂನೆ ಸಮಾಧಾನ ಆದರೂ ಕೂಡಾ ಪ್ರತಿಯೊಬ್ಬರಲ್ಲಿಪ್ಪ ಹಾಂಗೆ ಈ ನಿಶಾಚರಿಗಳ ಬಗ್ಗೆ ಜಿಜ್ಞಾಸೆ, ಸಂಶಯ ಇನ್ನುದೇ ಇದ್ದು! 


ತ್ರಿವೇಣಿ ವಿ ಬೀಡುಬೈಲು,

ಮಂಗಳೂರು 

No comments:

Post a Comment