Thursday, February 26, 2015

ಸಂಗಾತಿ, ನೀನಾದೆ ನನ್ನ ಬಾಳಿನ ದೊಡ್ಡ ಸಂಗತಿ...! - ಏಪ್ರಿಲ್ ೨೦೧೪ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ


ಸಂಗಾತಿ, ನೀನಾದೆ ನನ್ನ ಬಾಳಿನ ದೊಡ್ಡ ಸಂಗತಿ...!

ಬಾಳಿಲಿ ಗೆಂಡಿಂಗೆ ಒಂದು ಹೆಣ್ಣು, ಹೆಣ್ಣಿಂಗೆ ಒಂದು ಗೆಂಡು, ಅರ್ಥಾತ್ ಮದುವೆ ಅನಿವಾರ್ಯವೇ ಅಲ್ಲದಾ? ಸರಿಯಾಗಿ ಆಲೋಚನೆ ಮಾಡಿ ನೋಡಿದರೆ ಅನಿವಾರ್ಯ ಅಪ್ಪು ಹೇಳಿದೇ ಹೇಳುಲಕ್ಕು, ಇನ್ನೂ ಕೂಲಂಕುಷವಾಗಿ ಗಮನಿಸಿ ನೋಡಿಯಪ್ಪಗ ಮದುವೆ ಆಯೇಕು ಹೇಳಿ ಏನಿಲ್ಲೆ, ಆದವರ ಅವಸ್ಥೆ ಕಾಣ್ತಿಲ್ಲೆಯಾ ಹೇಳುತ್ತ ನಿರ್ಧಾರಕ್ಕೂ ಬಪ್ಪಲಕ್ಕು! ಮದುವೆ ಆಗಿ ಒಬ್ಬನ ಒಬ್ಬ ಬೆಂಡೆತ್ತುದರ ಕಂಡು, ನೋಡಿ ನೋಡಿ ಬೊಡುದು ಬೇಸರ ಬಂದು ಹೋದವರ ಅನಿಸಿಕೆ-’ಸಂನ್ಯಾಸಿ ಸುಖಿ, ಸಂಸಾರಿ ದುಖಿ:’ ಹೇಳಿ!! ಸುತ್ತಾಮುತ್ತಾ ಇಪ್ಪ ಜೋಡಿಗಳ ಬರೇ ನೋಡಿ ಮಾಂತ್ರ ಸಂಸಾರದ ಬಗ್ಗೆ ಮನಸ್ಸಿಲಿ ಒಂದು ಕ್ಷಣಕ್ಕೆ ಬಂದು ಹೋಪಂತ ವೈರಾಗ್ಯ ಅದು!! ಬರೇ ನೋಡಿದರೆ ಅನುಭವಕ್ಕೆ ಬತ್ತೋ?! ಇಲ್ಲೆನ್ನೆ?! ನಮ್ಮದು ಹಾಂಗಾಗ, ನಾವೂ ಮದುವೆಯಾಗಿ ದಂಪತಿ ಹೇಳಿರೆ ಹೀಂಗಿರೇಕು ಹೇಳಿ ಸಮಾಜಕ್ಕೆ ತೋರಿಸಿ ಆದರ್ಶ ದಂಪತಿಗೊ ಹೇಳ್ಸಿಕೊಳ್ಳೇಕು ಹೇಳಿ ಎಲ್ಲಾ ಗ್ರೇಶುದು..ಮತ್ತೆ ಹೋಗಿ ಬೇರೆವ್ವು ಬಿದ್ದ ಗುಂಡಿಗೆ ಬಿದ್ದಪ್ಪಗ...ಬೇಡಪ್ಪಾ, ಬೇಡ ಇತ್ತು, ನೋಡಿದ ಉದಾಹರಣೆಗಳಿಂದ ಕಲಿಯೇಕಿತ್ತು, ಗೊಂತಿದ್ದೂ ಗೊಂತಿದ್ದು ಮೋಸ ಹೋದೆನ್ನೇ ಹೇಳಿ ಮತ್ತೆ ಹಲುಬುವವ್ವು ಎಷ್ಟು ಜೆನಂಗ ಇಲ್ಲೆ?! ಇನ್ನೊಂಬಂಗೆ ಮಾದರಿ ಆವುತ್ತೆಯಾ ಹೇಳಿ ಗಟ್ಟಿ ಮನಸ್ಸು ಮಾಡಿಕೊಂಡು ಮದುವೆಯೇನೋ ಆಗಿ ಬಿಡ್ತವು! ಸೃಷ್ಠಿ, ಸ್ಥಿತಿ, ಲಯಂಗೊಕ್ಕೂ ಈ ಸಂಬಂಧವೇ ಕಾರಣ! ಗೆಂಡಂಗೆ ಹೆಂಡತಿ, ಹೆಂಡತಿಗೆ ಗೆಂಡ, ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರೋ, ಒಬ್ಬನ ನೆತ್ತರ ಇನ್ನೊಬ್ಬ ಹೀರುವ ಉಂಬುಳುಗಳೋ, ಅಂತೂ ಸಂಬಂಧಲ್ಲಿ ಗೆಂಡಹೆಂಡತಿಗೊ! ’ನೀನನಗಿದ್ದರೆ ನಾ ನಿನಗೆ’ ಈ ತತ್ವವ ಪಾಲಿಸುತ್ತಾ ಪರಸ್ಪರ ಸಹಕರಿಸುತ್ತಾ, ವ್ಯವಹರಿಸುತ್ತಾ, ದಿನನಿತ್ಯ ಆದ್ದರ ಪರಸ್ಪರ ಹೇಳಿಕೊಂಡು, ಅನುಮಾನಕ್ಕೆಡೆ ಇಲ್ಲದ್ದ ಹಾಂಗೆ ನಡಕೊಂಡು, ಒಬ್ಬಂಗೊಬ್ಬ ಆಸರೆ ಆಗಿದ್ದರೆ ಮಾಂತ್ರ ಪರಸ್ಪರ ಪ್ರೀತಿ, ವಾತ್ಸಲ್ಯ, ಸಹಕಾರ, ಕರುಣೆ, ಕಾತುರ ಎಲ್ಲಾ ಇರ‍್ತು ಒಬ್ಬಂಗೆ ಇನ್ನೊಬ್ಬನ ಮೇಲೆ. ಆದರೆ ಎಲ್ಲಾ ಗೆಂಡುಮಕ್ಕೊ ಶ್ರೀರಾಮಚಂದ್ರನ ಹಾಂಗಿಪ್ಪೋರು ಇರ‍್ತವಿಲ್ಲೆ, ಎಲ್ಲಾ ಹೆಮ್ಮಕ್ಕಳುದೇ ಸತ್ಯವಾನ್ ಸಾವಿತ್ರಿ ಹಾಂಗಿಪ್ಪೋರೂ ಇರ‍್ತವಿಲ್ಲೆನ್ನೇ!! ಹಾವು-ಮುಂಗುಸಿ, ಸಿಂಹ-ಜಿಂಕೆ, ಪುಚ್ಚೆ-ಎಲಿ, ಗುರು-ಶಿಷ್ಯ, ಕಳ್ಳ-ಪೊಲೀಸ್, ನಾಯಿ-ಪುಚ್ಚೆ, ಇಲ್ಲೇ ಹೇಳಿಯಾದರೆ ಇಬ್ರೂ ಜೋರಿನವ್ವು - ಹುಲಿ, ಸಿಂಹ, ಚಿರತೆಗಳ ಹಾಂಗೆ ಗುರ್ ಗುರ್ ಹೇಳಿಕೊಂಡೇ ಇಪ್ಪಂತಾ ಗುಣದವ್ವು ಇಲ್ಲೆ ಹೇಳಿಯಾದರೆ ಇಬ್ರೂ ಬ್ಯಾಟರಿ ಮುಗುಕ್ಕೊಂಡು ಬಂದ ರೇಡಿಯೋದ ಹಾಂಗೆ, ಯೇವಾಗಲೂ, ’ಎನ್ನಂತ ಒಳ್ಳೆ ಜೆನಕ್ಕೆ ಇಂತದ್ದೇ/ಇಂತವ್ವೇ ಸಿಕ್ಕೇಕಾತಾ? ಎಲ್ಲಾ ಎನ್ನ ಪೂರ್ವ ಜನ್ಮದ ಕರ್ಮ’ ಹೇಳಿ ಚಂಯಿ ಚಂಯಿ ಹೇಳಿಕೊಂಡು, ಹಣೆ ಹಣೆ ಚಚ್ಚಿಕೊಂಡಿಪ್ಪವ್ವು! ಇನ್ನು ಕೆಲವು ಕಡೆಗಳಲ್ಲಿ ಆರಾದರೊಬ್ಬ ರೇಡಿಯೋದ ಹಾಂಗೆ ಮಾತಾಡಿಕೊಂಡೇ..., ಇನ್ನೊಬ್ಬ ಕೆಮಿಗೆ ಕೇಳಿ ಕೂಡಾ ಪ್ರತಿಕ್ರಿಯೆ ನೀಡದೇ, ಮಾತಾಡಿದರೆ ಎಂತ ಎಡವಟ್ಟಾವುತ್ತೋ, ಎಲ್ಲಿ ಸಿಕ್ಕಿಹಾಕಿಕೊತ್ತೆನೋ, ಇಲ್ಲೆ ಹೇಳಿಯಾದರೆ ಎಂತಕೆ ಸುಮ್ಮಗೆ ಉತ್ತರ ಕೊಡುದು!? ಮಾತಿಂಗೆ ಮಾತು ಕೊಟ್ಟರಲ್ಲದಾ ಈ ಜೆಗಳ ಜಂಜಾಟ ಎಲ್ಲಾ ಬಪ್ಪದು, ಬೆಂಕಿಗೆ ತುಪ್ಪ ಸುರುದಾಂಗೆ ಅಕ್ಕು ಆನುದೇ ಮಾತಾಡಿದರೆ, ಆರಿಂಗೆ ಬೇಕಪ್ಪಾ ಇದೆಲ್ಲಾ, ಮಾತಾಡುದರ ಎಲ್ಲಾ ಬೇಕಾದಷ್ಟು ಮಾತಾಡಿ ಮುಗುಶಲಿ, ಆನು ಮನಸ್ಸಿಂಗೆ ತೆಕ್ಕೊಳ್ಳದ್ದರೆ ಮುಗುದತ್ತು ಹೇಳಿ ತುಟಿ ಬಿಗಿಹಿಡುದಿಕೊಂಡಿಪ್ಪವ್ವು-ಇತ್ಯಾದಿ ಇತ್ಯಾದಿ ಬಗೆವ್ವಿರ‍್ತವು ಗೆಂಡ ಹೆಂಡತಿಯಕ್ಕೋ ಹೇಳಿ ವಿಂಗಡಿಸುಲಕ್ಕು!! ಈ ಎಲ್ಲಾ ಟೈಪಿನವ್ವು ಒಂದಲ್ಲಾ ಒಂದು ರೀತಿಲಿ ಅವರ ಕೈಹಿಡುದವಕ್ಕೆ ಡೇಂಜರೇ! ಈ ಎಲ್ಲಾ ವಿಧಂಗಳೊಟ್ಟಿಂಗೆ, ಒಂದೇ ಗುಣಂಗಳ ಹೊಂದಿದ ಇಬ್ರೂ ಪರಸ್ಪರ ವಿಧೇಯರೇ ಆಗಿಪ್ಪ, ಪರಸ್ಪರ ಹೊಂದಾಣಿಕೆ ಇಪ್ಪ, ಕಾಳಜಿ ಇಪ್ಪ, ನಮ್ಮಲ್ಲಿ ಮೇಲು-ಕೀಳು, ಭೇದ-ಭಾವ ಇಲ್ಲೆ, ನಾವಿಬ್ಬರೂ ಒಂದೇ, ದೇಹ ಎರಡು, ಪ್ರಾಣ ಒಂದು ಹೇಳಿ ಸ್ನೇಹಿತರ ಹಾಂಗಿಪ್ಪ ಎಷ್ಟೋ ಜೋಡಿಗೊ ಸುಖಲ್ಲಿದ್ದವು!  

     ಕೆಲವೊಂದು ಬಾಳಸಂಗಾತಿಗೊಕ್ಕೆ ಪರಸ್ಪರ ಒಂದೂ ಕ್ಷಣವೂ ಬಿಟ್ಟಿಪ್ಪಲೆಡಿತ್ತಿಲ್ಲೆ! ಗಳಿಗೆಗೊಂದರಿ ಫೋನು ಮೆಸೇಜು, "ಎಲ್ಲಿದ್ದೆ?", "ಹೇಂಗಿದ್ದೆ?" , "ಎಂತ ಮಾಡ್ತಾ ಇದ್ದೆ?" , "ಬೋರಾವುತ್ತಾ?" , "ಬರೇಕಾ?" , "ಹುಷಾರಿದ್ದೆಯಾ?" , "ಐ ಮಿಸ್ ಯೂ" ಹೇಳಿ ಎಲ್ಲಾ! ಇಬ್ರೂ ಹೀಂಗಿಪ್ಪ ಸ್ವಭಾವದವ್ವಾದರೆ ಪರ್ವಾಗಿಲ್ಲೆ...ಇಲ್ಲೆ ಹೇಳಿಯಾದರೆ ಗತಿ ಗೋವಿಂದ...ಎಲ್ಲಿಯಾದರು ಗೆಂಡ ಅಥವಾ ಹೆಂಡತಿ ಪ್ರೀತಿಲೇ ಹೀಂಗೆ ಅಂಬಗಂಬಗ ಸಂಪರ್ಕಿಸಿಕೊಂಡೇ ಇದ್ದತ್ತು ಹೇಳಿಯಾದರೆ ಈ ಅತಿ ಪ್ರೀತಿಯೇ ಅವಿಬ್ರಿಂಗೆ ಮುಳುವಾವುತ್ತು! "ಎಂತಕೆ ಹೀಂಗೆ ಕಾಲು, ಮೆಸ್ಸೇಜು ಮಾಡಿ ವಿಚಾರ‍್ಸಿಕೊಂಡಿಪ್ಪದು...ಆರೊಂಟ್ಟಿಂಗಾರೂ, ಎಲ್ಲಿಗಾದರೂ ಹೋದರೆ ಹೇಳಿ ಎನ್ನ ಮೇಲೆ ಅನುಮಾನವಾ?" ಹೇಳಿ ಶುರುವಾವುತ್ತು ಚರ್ಚೆ. ಹಾಂಗೆ ಹೇಳಿ ಶುರು ಅಪ್ಪ ಇವರ ಮಾತುಕತೆ ಹೋಯಿಕೈವರೆಗೂ ಹೋದರೂ ಹೋತು...! ಮತ್ತೆ ಕಣ್ಣೀರ ಧಾರೆಯೇ ಮುಂದಿನ ಕತೆ! ಒಬ್ಬನ ಒಬ್ಬ ಅರ್ಥ ಮಾಡಿಕೊಂಬ ಗೋಜಿಗೇ ಹೋವುತ್ತವಿಲ್ಲೆ!  "ಎಷ್ಟೆಲ್ಲಾ ಒಳ್ಳೊಳ್ಳೆ ಸಂಬಂಧಗಳ ಬಂದದರ ಬಿಟ್ಟು ಹೋಗಿ ಹೋಗಿ ನಿಂಗಳ ಮದುವೆ ಆದೆನ್ನೆ" ಹೇಳಿ ಹೆಂಡತಿ ಹೇಳಿದರೆ, "ಹೋಗಿ ಹೋಗಿ ನಿನ್ನ ಕಟ್ಟಿಕೊಂಡು ಸೋತೆನ್ನೇ" ಹೇಳಿ ಗೆಂಡ! ಹೀಂಗೇ ಮುಂದುವರುದು ಮೊದಾಲು ಹಾಲು ಜೇನಿನಂತಿದ್ದ ಅವರಿಬ್ಬರ ಸಂಬಂಧ ಹಾವು-ಮುಂಗುಸಿ ತರ ಆಗಿಬಿಡ್ತು! ಇನ್ನು ಸಿಂಹ-ಜಿಂಕೆಯ ಹಾಂಗಿಪ್ಪ ಸತಿಪತಿ ಕತೆಗೆ ಬಪ್ಪ! ಇಲ್ಲಿ ಒಂದೋ ಗೆಂಡ ಸಿಂಹ, ಇಲ್ಲೆ ಹೇಳಿಯಾದರೆ ಹೆಂಡತಿ ಸಿಂಹಿಣಿ, ಮತ್ತೆ ಆರು ಹೆದರುತ್ತವೋ ಅವ್ವು ಜಿಂಕೆ!! ಕೆಲವು ದಿಕ್ಕೆ ಗೆಂಡ ಜೋರು, ಕೆಲವು ದಿಕ್ಕೆ ಹೆಂಡತಿ ಜೋರು! ಈ ಎರಡೂ ಸ್ಥಿತಿ ಇಬ್ರಿಂಗೂ ಭಯಂಕರ ಅನುಭವವೇ! ಒಂದೋ ಹೆಂಡತಿ ಜೋರಿಂದಾದರೆ, ಗೆಂಡನಾದವ "ಅಮಾವ್ರ ಗೆಂಡ" ಹೇಳಿ ಬಿರುದು ಪಡೆತ್ತ ಮತ್ತೆ ಅವನ ಹಿಂದದ, ಮುಂದಂದ ಅವನ ಸಹೋದ್ಯೋಗಿಗಳ ಕೈಯಿಂದ, ಫ್ರೆಂಡ್‍ಗಳ ಕೈಯಿಂದ ಕರೆಸಿಕೊಳ್ತ! ಅವನ ಈ ಸ್ಥಿತಿ ಅವಂಗೆ ನುಂಗಲಾರದ ತುತ್ತಾಗಿರ‍್ತು! ಹೆಂಡತಿ ಜೋರಿದ್ದರೆ ಅದಕ್ಕೆ ಅದರ ಗೆಂಡನೋ, ಅವನ ಮನೆವ್ವೋ ಅಥವಾ ಆ ಹೆಮ್ಮಕ್ಕಳ ಗೊಂತಿಪ್ಪ ಜೆನಂಗಳೋ, "ಮಹಾ ಕಾಳಿ" ಹೇಳಿಯೋ, "ರಾಟಾಳಿ" ಹೇಳಿಯೋ  ನಾಮಕರಣ ಮಾಡಿಬಿಡ್ತವು! ಗೆಂಡ ಜೋರಿನವನಾದರೆ ಹೆಂಡತಿಯ ಬಗ್ಗೆ ಎಲ್ಲೋರಿಂಗೂ ಕನಿಕರ...ಅದಾದ ಕಾರಣ ಹಾಂಗಿಪ್ಪ ಜೋರಿನ ಗೆಂಡನೊಟ್ಟಿಂಗೆ ಬದುಕುತ್ತಾ ಇದ್ದು, ಆನಾದರೆ ಯೇವಾಗ್ಲೋ ನೀನಲ್ಲದ್ದರೆ ನಿನ್ನಜ್ಜ ಹೇಳಿ ಬಿಟ್ಟು ಹೋಗಿಬಿಡ್ತಿತ್ತೆ ಹೇಳಿ ಎಲ್ಲಾ ಹೇಳಿ ಅದಕ್ಕೆ ಇನ್‍ಡೈರೆಕ್ಟಾಗಿ ಕೀ ಕೊಟ್ಟು ಅದರ ತಲೆಕೆಡಿಸಿಬಿಡ್ತವು! ಮತ್ತೆ ಅದರ ಸ್ಥಿತಿ ಶೋಚನೀಯವೇ! ಈಗ ಗುರು ಶಿಷ್ಯರ ಹಾಂಗಿಪ್ಪ ಜೋಡಿಗಳ ಕಥೆ ವ್ಯಥೆ! ಇಲ್ಲಿ ಒಂದೋ ಗೆಂಡ ಗುರುವಾಗಿರ‍್ತ, ಇಲ್ಲದ್ದರೆ ಅವನ ಅರ್ಧಾಂಗಿ ಅವಂಗೆ ಗುರುವಾಗಿರ‍್ತು! ಮದುವೆಗೆ ಮೊದಾಲು ಮನೆ, ಅಬ್ಬೆ, ಅಪ್ಪಂಗೆ, ಅಣ್ಣ, ತಮ್ಮ, ಅಕ್ಕತಂಗೆಗೊಕ್ಕೆಲ್ಲಾ ಅಚ್ಚುಮೆಚ್ಚಿನವ ಆಗಿತ್ತವ, ಎಲ್ಲೋರ ಸಂಪರ್ಕ ಮಡಿಕ್ಕೊಂಡು ಪ್ರೀತಿಂದ ಅವರೊಟ್ಟಿಂಗೆ ಓಡಾಡಿಕೊಂಡಿದ್ದವ, ಮದುವೆ ಆದ ಕ್ಷಣಂದಲೇ ಹೆಂಡತಿಗೆ ದಾಸ ಆಗಿಬಿಡ್ತ! ಹೆಂಡತಿ ಹಾಕಿದ ಲಕ್ಷ್ಮಣ ರೇಖೆಯ ಅಪ್ಪಿ ತಪ್ಪಿಯೂ ದಾಂಟುತ್ತನ್ನಿಲ್ಲೆ! ಹೆಂಡತಿ ಮೇಲೆ ಅಪಾರ ನಂಬಿಕೆ, ಅದು ಹೇಳಿದ್ದೆಲ್ಲವೂ ಸತ್ಯವೇ, ವೇದವಾಕ್ಯವೇ ಅವಂಗೆ! ಅದರ ಕಣ್ಣಿಂದ ಒಂದು ಹನಿ ನೀರು ಬಂದರೂ ಸಹಿಸುಲೆಡಿತ್ತಿಲ್ಲೆ ಅವಂಗೆ! ಹುಟ್ಟಿದ ಲಾಗಾಯ್ತು ಅಬ್ಬೆ, ಅಪ್ಪನೊಟ್ಟಿಂಗೇ ಇದ್ದಲ್ಲಿಂದ, "ಬಾಡಿಗೆ ಮನೆ ಮಾಡಿ ನಾವು ಬೇರೆ ಇಪ್ಪಾ" ಹೇಳಿ ಹೆಂಡತಿ ಒಂದೇ ಒಂದು ಸಲ ರಾಗ ಎಳದರೂ "ಎಸ್" ಹೇಳಿ ಅದರ ಆರ್ಡರಿನ ಪಾಸು ಮಾಡಿ ಏಕ್‍ದಂ ಅದರ ಕಟ್ಟಿಕೊಂಡು ಹೋಗಿ ಬೇರೆ ಕೂಪವ್ವು ಎಷ್ಟು ಜೆನಂಗಳೂ ಇದ್ದವು! ಅಥವಾ ಇಪ್ಪ ಆಸ್ತಿಲಿ ಗೆಂಡನ ಕೈಲಿ ಪಾಲು ಕೇಳಿಸಿ ಬೇರೆ ಮನೆ ಮಾಡಿ ಕೂದವ್ವು ಎಷ್ಟು ಜೆನಂಗ ಇಲ್ಲೆ?! ಅಂಬಗ ಅಬ್ಬೆ, ಅಪ್ಪ, ಒಡಹುಟ್ಟಿದವರ ಕಣ್ಣೀರು ನೆಲಕ್ಕಂಗೆ ಬೀಳೇಕಷ್ಟೇ!! ಮತ್ತೆ ಎಷ್ಟೋ ವರ್ಷ ಕಳುದು ಈ ಗೆಂಡ ಮಹಾಶಯಂಗೆ ಜ್ಞಾನೋದಯ ಅಪ್ಪಾಗ ಹೆಂಡತಿ ಹೇಳಿದ್ದರ ಕೇಳಿ ಕೆಟ್ಟೆ ಹೇಳಿ ಅನ್ನಿಸಿಯಪ್ಪಗ ಸಮಯ ಮೀರಿ ಹೋಗಿರ‍್ತು, ಅಬ್ಬೆ, ಅಪ್ಪ ಫೋಟೋದೊಳಾದಿಕ್ಕಿ ಇರ‍್ತವು! ಒಡಹುಟ್ಟಿದವರೊಟ್ಟಿಂಗೆ ಸಂಪರ್ಕ ಮಡಿಕ್ಕೊಳ್ಳದ್ದೇ, ಅವ್ವೆಲ್ಲಿದ್ದವು, ಹೇಂಗಿದ್ದವು ಹೇಳಿಯೂ ಗೊಂತಿರ‍್ತಿಲ್ಲೆ!! ಇನ್ನು ಗೆಂಡ ಗುರುವಿನ ಸ್ಥಾನಲ್ಲಿ ಇದ್ದರೆ ಅವ ಹೆಂಡತಿ ಕೈಲಿ ’ಎ’ ಟೂ ’ಝೆಡ್’ ಕೆಲಸಂಗಳ ಎಲ್ಲಾ ಮಡ್ಸುದು, ಅದರ ಅಪ್ಪನ ಮನೆಂದ ಪೈಸೆ, ಒಡವೆ ತಪ್ಪಲೆ ಕಳುಸುದು, ಹೆಂಡತಿ ವಿಧೇಯ ಶಿಷ್ಯೆಯ ಹಾಂಗೆ ಅವ ಹೇಳಿದ ಕೆಲಸಂಗಳ ಎಲ್ಲಾ ಮಾಡುದು, ಅಪ್ಪನ ಮನಗೆ ಹೋಗಿ ಅವ ಕೇಳಿದ್ದರ ತಂದು ಅವನ ವಶಕ್ಕೆ ಒಪ್ಸುದು! ಅಪ್ಪನ ಮನೆವ್ವು ಪಾಪ ಮಗಳು ಸುಖವಾಗಿರಾಲಿ ಹೇಳಿ ಪೈಸೆಯನ್ನೋ, ಬಂಗಾರವನ್ನೋ, ಒಟ್ಟಾರೆ ಅದು ಕೇಳಿದ್ದರ ಕೊಟ್ಟು ಕಳುಶುದು! ಗೆಂಡನ ಆಸೆಬುರುಕುತನ, ಸ್ವಾರ್ಥ ಎಲ್ಲಾ ತಿಳುದ ಮತ್ತೆ ಹೆಂಡತಿಗೆ ಜ್ಞಾನೋದಯ ಅಪ್ಪಾಗ ಅಪ್ಪನ ಮನೆಯ ಆಸ್ತಿಯ ಪೂರಾ ನುಂಗಿ ನೀರುಕುಡುದಾಗಿರ‍್ತು ತನ್ನ ಗೆಂಡಂಗೆ! ಪರಿಸ್ಥಿತಿ ಕೈಮೀರಿ ಹೋದ ಮತ್ತೆ ಪರಿತಪಿಸಿ ಎಂತ ಪ್ರಯೋಜನ?! ಇನ್ನು ಕಳ್ಳ ಪೊಲೀಸ್ ಕತೆ! ಗೆಂಡಂಗೋ, ಇಲ್ಲೆ ಹೇಳಿಯಾದರೆ ಹೆಂಡತಿಗೆ ಒಬ್ಬನ ಮೇಲೊಬ್ಬಂಗೆ ಏವಾಗಲೂ ಡೌಟೋ ಡೌಟು! ಹೇಂಗಾರೂ ಮಾಡಿ ಸಿಕ್ಕುಸಿಬೀಳಿಸೇಕು ಹೇಳಿ ಒಬ್ಬನ ಹಿಂದಂದ ಇನ್ನೊಬ್ಬ ಪೊಲೀಸನ ಹಾಂಗೆ ಕಣ್ಣಿಟ್ಟಿರ‍್ತವು! ಹೋದಲ್ಲಿಂದ ತಪಾಸಣೆ ಮಾಡುಲೆ ಹೇಳಿ ಮನಗೆ ಬೇಗ ವಾಪಸ್ಸು ಬಪ್ಪದು, ಆರಾರತ್ತರೆ ಮಾತಾಡಿದ್ದವು ಹೇಳಿ ಮೊಬೈಲಿನ ಲಾಗಿನ ಚೆಕ್ ಮಾಡುದು, ಕೆಲಸ ಮಾಡ್ತಾ ಇಪ್ಪ ಆಫೀಸಿಂಗೂ ಬಂದು ಒಂದೆರಡು ರೌಂಡು ಹೊಡದು, ಸಹೋದ್ಯೋಗಿಗಳೊಟ್ಟಿಂಗೆ ಓರೆಯಾಗಿ ಮಾತಾಡಿಕ್ಕಿ, ರಜ್ಜ ಹೊತ್ತು ಕಾವಲು ಕೂದು ಸಿ.ಬಿ.ಐ ಕೆಲಸ ಮಾಡಿಕ್ಕಿ ಹೋಪದು, ದಾರಿಲಿ ಹೋಪ ಕೂಸುಗಳ, ಹೆಮ್ಮಕ್ಕಳ ಮೇಲೆ ಗೆಂಡನ ಕಣ್ಣು ಬೀಳುತ್ತಾ ಹೇಳಿ ಹೆಂಡತಿ ಹದ್ದಿನ ಕಣ್ಣಿಲಿ ನೋಡುದು, ಒಟ್ಟಾರೆ ಹೀಂಗೆಲ್ಲಾ ಪರಸ್ಪರ ಹೊಂಚು ಹಾಕುದು, ಆಪಾದನೆ ಹೊರುಸುದು, ವಾದ ಮಾಡುದು, ಮನೆಲಿ ಒಬ್ಬನ ಒಬ್ಬ ಕೂಡಿ ಹಾಕುದು ಇತ್ಯಾದಿ ಇತ್ಯಾದಿ! ಇಂತಹವರ ಚಾಲಾಕುತನದ ಎದುರು ನಿಜವಾದ ಕಳ್ಳ, ಪೊಲೀಸ್, ಸಿ.ಬಿ.ಐಯವ್ವು ದಂಡ! ಪಾತ್ರೆ ಪಗಡಿ, ಲಟ್ಟಣಿಗೆ, ಸಟ್ಟುಗಂಗ ಮಾತಾಡುವ ಕೆಲವು ಮನೆಯ ದಂಪತಿಗೊ,"ಜೆಗಳ, ಹುಸಿಕೋಪ, ಮುನಿಸು, ರಾಜಿ ಇಲ್ಲದ್ದ ದಾಂಪತ್ಯ ಎಂತರಾ...?!" ಹೇಳಿ ರಾಗ ಎಳಾದು, "ನಮ್ಮ ಸಂಸಾರ ಆನಂದ ಸಾಗರ" ಹೇಳಿ ಜೆಂಭಕೊಚ್ಚಿಕೊಂಬುವ್ವವ್ವಿದ್ದವು!!

    ದಿನಪತ್ರಿಕೆಗಳಲ್ಲಿ, ಮಾಸಪತ್ರಿಕೆಗಳಲ್ಲಿ, ಟಿ.ವಿಯ ಹಾಸ್ಯ ಕಾರ್ಯಕ್ರಮಂಗಳಲ್ಲಿ ಓದುಗಂಗೆ/ವೀಕ್ಷಕಂಗೆ ಹಾಸ್ಯದ ರಸದೌತಣ ಕೊಡುದು ಆ ಬರಹಗಾರರ/ಭಾಷಣಕಾರರ ಹಾಸ್ಯ! ಅವಕ್ಕೆಲ್ಲಾ ಓದುಗರ/ಸಭಿಕರ ಮನರಂಜಿಸುಲೆ ಬೇಕಾಬಿಟ್ಟಿಯಾಗಿ ಸಿಕ್ಕುವ ವಸ್ತುವೇ ಗೆಂಡ ಹೆಂಡತಿ ವಿಷಯಂಗೊ! ಅಲ್ಲಿ ಬರದ, ಭಾಷಣಲ್ಲಿ ಹೇಳುವ ಹಾಸ್ಯ ತುಣುಕುಗೊ ಎಲ್ಲಾ ದಂಪತಿಗಳ ಎಡವಟ್ಟುಗಳೇ! ಓದಿದ/ಕೇಳಿದ ಎಲ್ಲರನ್ನೂ ಒಂದು ಕ್ಷಣಕ್ಕೆ ಪೇಚಿಗೆ ಸಿಕ್ಕಿಸಿಬಿಡ್ತವು! ಎಲ್ಲವೂ ಒಂದಲ್ಲಾ ಇನ್ನೊಂದು ಮನೆಲಿ ನಿತ್ಯ ನಡವ ಘಟನೆಗಳೇ! ಎಲ್ಲೋರ ಮನೆ ದೋಸೆಯೂ ತೂತೇ! ಎಲ್ಲೋರೂ ತಮ್ಮ ತಮ್ಮ ಮನೆಲಪ್ಪ ಕತೆಗಳನ್ನೇ ಓದಿ/ಕೇಳಿ ನೆಗೆ ಮಾಡುದೇ ಮಾಡುದು! ಅಷ್ಟು ನೆಗೆಪಾಟಲಿನ ವಸ್ತುವಾಗಿ ಬಿಟ್ಟಿದು ಗೆಂಡ ಹೆಂಡತಿಯಕ್ಕಳ ಕತೆಗೊ! ಈ ಮೇಲೆ ಆನು ಕೊಟ್ಟ(ಹಾವು-ಮುಂಗುಸಿ, ಸಿಂಹ-ಜಿಂಕೆ.....) ಉದಾಹರಣೆಗಳಲ್ಲಿ ನಿಂಗೊ ಯಾವ ಗುಂಪಿಂಗೆ ಸೇರಿದವ್ವು ಹೇಳಿ ನಿಂಗಳೇ ಗೇಶಿಗೊಂಡು ಅಂತೆ ಒಂದರಿ ನೆಗೆ ಮಾಡಿಬಿಡಿ ಆತಾ? ಇಲ್ಲಿ ಬರದ್ದು ನಿಂಗಳ ಜೀವನಲ್ಲಿ ಆಗಿದ್ದರೆ ಅದು ಕಾಕತಾಳೀಯ ಅಷ್ಟೇ! ಇದು ನಮ್ಮಲ್ಲಿ ಆರನ್ನೂ ಉದ್ದೇಶಿಸಿ ಬರದ್ದಲ್ಲ ಆತಾ!

    ಕೆಲವು ಜೆನಂಗ ಗ್ರೇಶುವ ಹಾಂಗೆ ಸಂನ್ಯಾಸಿ ಸುಖಿಯೂ ಅಲ್ಲ, ಸಂಸಾರಿ ದುಖಿ:ಯೂ ಅಲ್ಲ! ಗೆಂಡ ಹೆಂಡತಿ ಮೊದಾಲು ಗೆಳೆಯರಯೇಕು, ಪರಸ್ಪರರ ಇಷ್ಟಂಗಳ, ಕಷ್ಟಂಗಳ ತಿಳುದುಕೊಳ್ಳೇಕು, ವಿಚಾರ ವಿನಿಮಯ ಮಾಡಿಕ್ಕೊಳ್ಳೇಕು, ಪರಸ್ಪರ ಕಷ್ಟಂಗಳಿಗೆ ಸ್ಪಂದಿಸೇಕು, ಅವಂಗೆ/ಅದಕ್ಕಾದ ಬೇನೆ, ಕಷ್ಟ ಎನ್ನದು ಹೇಳುತ್ತ ಕಾಳಜಿ ಇರೇಕು, ಎಲ್ಲದರಲ್ಲೂ ಸಂತೃಪ್ತಿ ಕಾಣೇಕು, ಆನೇ ಮೇಲು, ನೀನು ಕೀಳು ಹೇಳಿ ನಡಕೊಂಬಲಾಗ, ಪ್ರತಿಯೊಬ್ಬಂಗೂ ಅವಂದೇ ಆದ ಸ್ವಾತಂತ್ರ್ಯ ಇದ್ದು ಅದು ಒಂದು ಮಿತಿಲಿರೇಕು ಹಾಂಗೆ ಅದರ ಪರಸ್ಪರ ಒಪ್ಪಿಕೊಳ್ಳೇಕು, ತಾನು ಹೇಳಿದ್ದೇ ಅಂತಿಮ, ಆನು ಹಾಕಿದ ಗೆರೆಯ ಆರೂ ದಾಂಟುಲಾಗ, ಎನ್ನಿಷ್ಟದ ಹಾಂಗೇ ನಡಯೇಕು ಹೇಳುತ್ತ ಅಹಂ ಇಬ್ರಿಂಗೂ ಇಪ್ಪಲಾಗ, ಪರಸ್ಪರ ಯಾವ ವಿಷಯಲ್ಲೂ ಹದ್ದುಮೀರಿ ಹೋಪಲಾಗ, ಪರಸ್ಪರ ಸಮಯಕೊಟ್ಟುಗೊಂಡು, ಒಬ್ಬನ ಒಬ್ಬ ಸರಿಯಾಗಿ ಅರ್ಥಮಾಡಿಕೊಂಬದು-ಹೀಂಗಿಪ್ಪ ದಂಪತಿಗಳ ಜೀವನ ಸುಖಮಯವಾಗಿರ‍್ತು, ಹೀಂಗಿಪ್ಪ ಸಂಸಾರಿ ಸುಖಿ ಆಗಿಕ್ಕಲ್ಲದಾ?! ಅಲ್ಲಾ ಇದರೆಡೆಲಿಯೂ ಎಂತಾರೂ ಅಸಮಾಧಾನಕ್ಕೆ ಕಾರಣ ಅಪ್ಪಂತಾ ಸಂಗತಿ ಬಕ್ಕಾ?!

ತ್ರಿವೇಣಿ ವಿ ಬೀಡುಬೈಲು
Mangalooru.

No comments:

Post a Comment