Tuesday, February 24, 2015

ಅಲ್ಲಿಯೇ ಇದ್ದಲ್ಲದಾ...?!-ಹವ್ಯಕ ವಾರ್ತೆ ಒಕ್ಟೋಬರ್ ೨೦೧೨ ರಲ್ಲಿ ಪ್ರಕಟವಾದ ಹಾಸ್ಯ ಲೇಖನ

ಅಲ್ಲಿಯೇ ಇದ್ದಲ್ಲದಾ...?!


"ಅಪ್ಪೋ, ಒಂದರಿ ಎನ್ನ ಮೊಬೈಲಿಂಗೆ ಮಿಸ್ಡ್ ಕಾಲ್ ಕೊಡಿ ನೋಡುವ,ಇಲ್ಲೇ ಮಡುಗಿತ್ತೆ,ಕಾಣ್ತಿಲ್ಲೆ,ಮನೆ ಇಡೀ ಹುಡುಕಿ ಹುಡುಕಿ ಸಾಕಾತು!".ಇದೇ ಡೈಲಾಗಿನ ನಿಂಗೊಲ್ಲಾ ಹೇಳಿಪ್ಪಿ! ಮತ್ತೆ "ಅವ್ವು"-ನಿಂಗಳ ಯಜಮಾನರು ನಿಂಗಳ ಮೊಬೈಲಿಂಗೆ ಮಿಸ್ಡ್ ಕಾಲ್ ಕೊಟ್ಟ ಮತ್ತೆ ನಿಂಗೊಗೆ ಸುಲಾಭಲ್ಲಿ ಮೊಬೈಲು ನಿಂಗಳ ಕೈಸೇರಿರುತ್ತು!ಈ ಇನ್ಸಿಡೆಂಟ್ ಉಲ್ಟಾ,ಪಲ್ಟಾ ಆದಿಪ್ಪಲೂ ಸಾಕು. ಅವ್ವೇ ನಿಂಗಳ ಹತ್ತರೆ ಮಿಸ್ಡ್ ಕಾಲ್ ಕೊಡ್ಲೆ ಹೇಳಿ ಅವಕ್ಕೆ ಅವರ ಮೊಬೈಲಿನ ಪತ್ತೆ ಹಚ್ಚುಲೆ ಸುಲಾಭ ಆದಿಕ್ಕು! ಇಲ್ಲೆ ಹೇಳಿಯಾದರೆ ನಿಂಗಳೇ ಇನ್ನೊಂದು ಮೊಬೈಲಿಂದ ಮಿಸ್ಡ್ ಕಾಲ್ ಕೊಟ್ಟುಕೊಂಡಿಪ್ಪಿ ಅಥವಾ ಮಕ್ಕಳ ಹತ್ತರೆ ಹೇಳಿ ಮಿಸ್ಡ್ ಕಾಲ್ ಕೊಡಿಸಿಕೊಂಡಿಪ್ಪಿ! ಮಿಸ್ಡ್ ಕಾಲ್ ಕೊಟ್ಟದ್ದಾಗಲಿ, ಆರು ಆರಿಂಗೆ ಹೇಳಿದ್ದಾಗಲೀ ಇಲ್ಲಿ  ಮುಖ್ಯ ಅಲ್ಲ ಬಿಡಿ! ಮೊಬೈಲಿಂಗೆ ಕಾಲ್ ಕೊಟ್ಟಪ್ಪಗ ರಿಂಗ್ ಕೇಳುತ್ತ ಕಾರಣ ಮಡುಗಿದ ಜಾಗೆಲೇ ಮೊಬೈಲ್ ಬೇಗ ಸಿಕ್ಕುತ್ತು!ಆದರೆ ಮೊಬೈಲ್ ಒಂದೇ ಹೀಂಗೆ ಉಪದ್ರ ಕೊಡುದಾ?ಕೊಡೆ, ವಾಚ್,ಬ್ಯಾಗ್,ಪೆನ್ನು,ಪುಸ್ತಕ,ಮನೆ ವಾಹನಂಗಳ ಕೀಗೊ.....ಪಟ್ಟಿ ಮಾಡುತ್ತಾ ಹೋದರೆ ಲಿಸ್ಟು ತುಂಬಾ ಉದ್ದ ಅಕ್ಕು!ಇವೆಲ್ಲದರ ಮಡುಗಿದ ಅ ಜಾಗೆ ಮರತು ಹೋಗಿ ಸಿಕ್ಕುವನ್ನಾರ ಹುಡುಕೀ ಹುಡುಕೀ ಸಿಕ್ಕದ್ದೇ ಸಾಕುಹಿಡುದು ಹೋಪಗ ಕೆಲವೊಂದರಿ ಅನ್ನಿಸಿಬಿಡ್ತು ಅವಕ್ಕೂದೇ ಮಿಸ್ಡ್ ಕಾಲ್ ಕೊಡುವ ವ್ಯವಸ್ಥೆ ಇದ್ದಿದ್ದರೆ ಬೇಗ ಸಿಕ್ಕುತ್ತಿತ್ತನ್ನೇ ಹೇಳಿ!

ಉಂಡಾಗಿ  ಮನುಗುಲೆ ಹೋಪ ಮೊದಲು ಬಾತ್ ರೂಮಿಂದಲೇ ಕೇಳಿದವಿವು,"ಬ್ರಶ್, ಟೂತ್ ಪೇಸ್ಟ್ ಎಲ್ಲಿ ಮಡುಗಿದ್ದೆ?"ಹೇಳಿ. "ಅಲ್ಲೇ ಅದರ ಜಾಗೆಲೇ ಮಡುಗಿದ್ದೆ. ಅಲ್ಲಿಯೇ ನೋಡಿ" ಹೇಳಿ ಹೇಳಿದೆ. ಮತ್ತೆ ಕೂಡ್ಲೇ ನೆಂಪಾತು, ಚಿಕ್ಕಮ್ಮ ಕಾಲ್ ಮಾಡಿ ಹೇಳಿತ್ತು ಅರ್ಧ ದಾರಿ ಎತ್ತಿಯಪ್ಪಗ ಎಂಗೊ ಅಲ್ಲಿ ಉಳುದುಬಪ್ಪಲೆ ಹೇಳಿ ಕೊಂಡು ಹೋದ ಟೂತ್ ಪೇಸ್ಟ್, ಸಾಬೂನಿನ ಕಿಟ್ ಅವರ ಮನೇಲೇ ಬಾಕಿಯಾದ್ದರ.ಅದರ ಇವಕ್ಕೆ ಹೇಳುಲೆ ಮರತುಹೋಗಿದ್ದತ್ತು ಅಷ್ಟೇ! "....ಓ ಅದರ ಅಲ್ಲಿ ಹುಡುಕೇಡಿ, ಸಾರಿ,ಅದು ಚಿಕ್ಕಮ್ಮನಲ್ಲೇ ಬಾಕಿಯಾಯ್ದು. ಹೊಸತ್ತು ತಪ್ಪನ್ನಾರ ಬೆರಳನ್ನೇ ಬ್ರಶ್ ಮಾಡಿಯೊಳೇಕಷ್ಟೇ.ಪೇಸ್ಟಿದ್ದು ಕಳುದ ಸಲ ಪೇಟೆಂದ ತಂದು ಮಡುಗಿದ್ದು ಸ್ಟಾಕಿಲ್ಲಿ ಹೇಳಿ ಇವರ ಕೈಗೆ ತಂದುಕೊಟ್ಟಿಕ್ಕಿ,"ಉಪ್ಪಿಲೂ ತಿಕ್ಕುಲಕ್ಕು, ಕಾಯಿಸಿಪ್ಪೆ ಬೇಕಾ?"ಕೇಳಿದೆ.
"ಇನ್ನೂ ಎರಡು ವಸ್ತುಗಳ ಬಾಕಿ ಮಾಡಿದ್ದೆ ಕೇಳುಲೆ,ಮಾವಿನ ಎಲೆ,ಬೇವಿನ ಎಲೆದೇ ಜಾಲಿಲಿದ್ದಲ್ಲದಾ?!"ಮೋರೆಯ ಒಂದು ನಮೂನೆ ಮಾಡಿ ಕೇಳಿದವಿವು!ಇನ್ನು ಮುಂದಿನ ವರ್ಷವೇ ಚಿಕ್ಕಮ್ಮನಲ್ಲಿಗೆ ಹೋಪದು! ಮರೆವಿಂದಾಗಿ ಎಂಗೊ ನಾಲ್ಕು ಜನಕ್ಕೆ ಹೊಸ ಬ್ರಶ್ಶು ಖರೀದಿ ಅನಿವಾರ್ಯ ಆಗಿತ್ತು ಬೇರೆ! ಆದರೆ ಅಂಗಡಿ ಎಂತ ಮನೆ ಹತ್ತರೆ ಇದ್ದಾ?! ತಪ್ಪನ್ನಾರ ಇವರ ಮೂಡ್ ಸರಿಯಾಗ, ತಂದರೂ ಸರಿಯಾಗ, ಅಂಬಗಂಬಗ ಹೊಸಾ ಬ್ರಶ್ ತಂದ ಮತ್ತೆ ಅದಕ್ಕೆ ಎನ್ನಿಂದಾಗಿ ಖರ್ಚಾತನ್ನೇ ಹೇಳಿ ಹೇಳಿಯೊಂಡೇ ಇಕ್ಕು!
 ಮರುದಿನ ಉದಿಯಪ್ಪಗ ಎದ್ದು ಉಪ್ಪಿಲಿ ಹಲ್ಲು ತಿಕ್ಕಿ ಚಾ ಕುಡುದಾದ ಮತ್ತೆ ಕೇಳಿದವಿವು -
" ಆ ನೇಲ್ ಕಟ್ಟರಿನ ಎಲ್ಲಿ ಮಡುಗಿದ್ದೆ? ಇಲ್ಲಿ ಕಾಣುತಿಲ್ಲೆನ್ನೆ.ಉಗುರು ತೆಗೆಯೇಕು, ನಾಳಂಗೆ ಮದುವಗೆ ಹೋಪಲಿದ್ದಲ್ಲದಾ?"
"ಆಯ್ಯೋ ಅಲ್ಲೇ ಅದರ ಜಾಗೆಲೇ ಮಡುಗಿದ್ದೆ ನಿನ್ನೆ ಎನ್ನ ಉಗುರು ತೆಗೆದಿಕ್ಕಿ"
"ಅಲ್ಲಿ ಇಲ್ಲೆ ಹೇಳಿ ಕೇಳ್ತಾ ಇಪ್ಪದು"
"ಆನು ಅಲ್ಲಿಯೇ ಮಡುಗಿದ್ದು, ಅಲಿಯೇ ಸರಿಯಾಗಿ ನೋಡಿ"
"ಅಲ್ಲಿಯೇ ಮಡುಗಿದ್ದರೆ ಸಿಕ್ಕುತ್ತಿತ್ತಿಲ್ಲೆಯಾ ಅದು?ಅದಕ್ಕೆಂತ ಕಾಲುಗೊ ಇದ್ದಾ ಅಲ್ಲಿಂದೆದ್ದು ಹೋಪಲೆ?!"
"ನೈಲ್ ಕಟ್ಟರ್ ಎನ್ನ ಹತ್ತರೆ ಅಂತೂ ಇಲ್ಲೆ,ಎನಗೆಂತಕಿಪ್ಪದು ಅದು?ಉಗುರು ತೆಗೆದ ಕೂಡ್ಲೇ ಅಲ್ಲಿಯೇ ಮಡುಗಿದ್ದೆ,ಮತ್ತೆನಗೆ ಗೊಂತಿಲ್ಲೆ.ಇನ್ನು ಅದರ ಹುಡುಕಿಕೊಂಡು ಕೂರೇಡಿ,ಈಗ ಸದ್ಯಕ್ಕೆ ಆ ಬ್ಲೇಡಿಲೋ,ಪೀಶಕತ್ತಿಲೋ ಉಗುರು ತೆಗೆರಿ,ಮತ್ತೆ ನೋಡುವ ಅದೆಲ್ಲಿದ್ದು ಹೇಳಿ!"
"ಮೆಟ್ಟುಕತ್ತಿಲಿದೇ ತೆಗೆವಲಕ್ಕು!ಒಂದು ವಸ್ತುವ ತೆಗದು ಪುನ: ಅದರ ಜಾಗೆಲಿ ಮಡುಗುತ್ತ ಕ್ರಮ ಒಬ್ಬಂಗುದೇ ಇಲ್ಲೆ."ಪರಚಿದವಿವು.
ಬ್ರಶ್,ನೇಲ್ ಕಟ್ಟರ್ ವಿಷಯಂದಾಗಿ ಇವು ಫುಲ್ ಅಪ್ ಸೆಟ್ ಆದ ಕಾರಣ ಒಂದೂ ಮಾತನಾಡದ್ದೆ ತಿಂಡಿ ತಿಂದು ಮುಗುಶಿದೆಯ! 


ಸೂಟುಮಣ್ಣು ಮಾಡುಲೆ ಮಣ್ಣು,ಕರಟ,ಮಡಲು,ಒಣಗಿದ ಸೊಪ್ಪು,ಬಜಕ್ಕರೆ ಎಲ್ಲಾ ಒಟ್ಟು ಮಾಡಿ ಗುಡ್ಡೆ ಮಾಡಿಕ್ಕಿ ಇವು,"ದೇವರ ಕೋಣೆಂದ ಆ ಬೆಂಕಿಪೆಟ್ಟಿಗೆ ಕೊಂಡ ಮಗಾ!ಈ ರಾಶಿಗೆ ಕಿಚ್ಚು ಹಾಕಿ ಸೂಟುಮಣ್ಣು ಮಾಡುವಾ"ಹೇಳಿ ಮಗಳತ್ತರೆ ಹೇಳಿದವು. ಕೂದಲಿಂದೆದ್ದು ಮಗಳು ದೇವರ ಕೋಣೆಗೆ ಹೋತು. ಬರಿಗೈಲಿ ವಾಪಸ್ಸು ಬಂದು,"ಅಪ್ಪಾ, ಅಲ್ಲಿ ಬೆಂಕಿಪೆಟ್ಟಿಗೆ ಇಲ್ಲೆ"ಹೇಳಿ ಹೇಳಿತು.

"ಓ ಆ ಬೆಂಕಿಪೆಟ್ಟಿಗೆದೇ ಹೋಯ್ದ ಬ್ರಶ್,ನೇಲ್ ಕಟ್ಟರ್ ಗಳೊಟ್ಟಿಂಗೆ?! ಎಲ್ಲಿ ಮಡುಗಿದ್ದಯಾ ಅದರ?" ಹೇಳಿ ಎನ್ನತ್ತರೆ ಕೇಳಿದವಿವು!
"ಆನು ನಿನ್ನೆ ಕಸ್ತಲೆ ದೇವರ ದೀಪ ಹೊತ್ತಿಸಿಕ್ಕಿ ಅಲ್ಲೇ ಮಡುಗಿದ್ದೆನ್ನೇ....."
"ಅಪ್ಪಪ್ಪಾ,ನೀನು ಎಲ್ಲಾ ವಸ್ತುಗಳ ಅದರದರ ಜಾಗೆಲಿಯೇ ಮಡುಗಿರುತ್ತೆ.ನೀನು ಅದರೆಲ್ಲಾ ಎಲ್ಲೆಲ್ಲಿ ಮಡುಗಿದ್ದೆಯೋ ಅದು ಅಲ್ಲಲ್ಲೇ ಇಪ್ಪದು ಖಂಡಿತಾ!ನಿನ್ನ ಕೇಳುದು ಸುಮ್ಮಗೆ.ಮಗಾ ಹೋಗು ಗ್ಯಾಸ್ ಆನ್ ಮಾಡಿ ಒಂದು ಕ್ಯಾಂಡಲ್ ಹೊತ್ತಿಸಿ ಕೊಂಡ....ಅಮ್ಮ ಮಡುಗಿದ ವಸ್ತುಗೊಕ್ಕೆಲ್ಲಾ ಅಲ್ಲಲ್ಲಿ ನಿಂಬಲೆ ಗೊಂತಿಲ್ಲೆ ಹೇಳಿದವಿವು! ಮಗಳು ಒಳ ಓಡಿತು.ಎನ್ನ ಆಲೋಚನೆ ಹಿಂದೆ ಓಡಿತು. ಮಗಳು ಕ್ಯಾಂಡಲ್ ಹೊತ್ತಿಸಿ ಅಪ್ಪಂಗೆ ಕೊಟ್ಟಿಕ್ಕಿ ಬಂದು ಎನ್ನ ಹತ್ತರೆ ಕೂದತ್ತು."ಮಗಳೂ, ನೈಲ್ ಕಟ್ಟರ್,ಬೆಂಕಿಪೆಟ್ಟಿಗೆಯ ಎಲ್ಲಿಯಾದರೂ ನೋಡಿದೆಯಾ?"ಕೇಳಿದೆ.ಮಕ್ಕೊ ನಮ್ಮ ಗಮನಿಸ್ತಾ ಇರುತ್ತ ಕಾರಣ ಅದಕ್ಕೆಲ್ಲಿಯಾದರೂ ಗೊಂತಿಕ್ಕು ಹೇಳುವ ಆಶಾಭಾವನೆಲಿ!
"ಅಮ್ಮಾ ಒಂದು ಕೆಲಸ ಮಾಡು,ನೀನು ಆ ವಸ್ತುಗಳ ಎಲ್ಲಾ ತೆಗೆದ ಮತ್ತೆ ಉಗುರು ಕಟ್ ಮಾಡಿದ, ದೀಪ ಹೊತ್ತಿಸಿದ ಜಾಗೆಲಿ ಹೋಗಿ ನಿಲ್ಲು,ಅಂಬಗ ನೆಂಪಕ್ಕು ಅದರ ಎಲ್ಲಿ ಮಡುಗಿದ್ದೆ ಹೇಳಿ!" 
ಅಪ್ಪು ಅದು ಹೇಳಿದ್ದು ಸರಿ ಹೇಳಿ ಕಂಡತ್ತು, ಕೆಲವೊಂದರಿ ಹಾಂಗೆ ಮಾಡಿಪ್ಪಾಗ ನೆಂಪಾದ ಕೆಲವು ಪ್ರಸಂಗಗೊ ಇತ್ತವು!
ಶುರುವಿಂಗೆ ನೈಲ್ ಕಟ್ಟರಿನ ಮಡುಗುವ ಜಾಗೆಯ ಹತ್ತರೆ ಹೋದೆ.ನಿಂದೊಂಡು ಆಲೋಚನೆ ಮಾಡಿದೆ.ಫಿಲ್ಮಿಲಿ ಫ್ಲಾಶ್ ಬ್ಯಾಕಿನಂತೆ ಚಿತ್ರ ಸಮೇತ ಕಣ್ಣ ಮುಂದೆ ಬಂತು!ಆನು ನೈಲ್ ಕಟ್ಟರ್ ಕೊಂಡು ಹೋಗಿ ಸಿಟ್ ಔಟಿಲಿ ಉಗುರು ತೆಕ್ಕೊಂಡಿಪ್ಪಾಗ ಹೂಗಿನ ತೋಟಲ್ಲಿದ್ದ ಮಗಳು ದಿನಿಗೇಳಿತ್ತು,"ಅಮ್ಮಾ ಬಾ ನೋಡು ಅಲ್ಲಿ ಒಂದು ದೊಡ್ಡ ಕೇರೆ ಇದ್ದು ಹೇಳಿ, ಉಗುರು ತೆಗದು ಇನ್ನೆಂತ ಎದ್ದು ಒಳ ಹೋಪದು ಹೇಳಿ ಇತ್ತಿದ್ದ ಆನು ನೇಲ್ ಕಟ್ಟರ್ ಸಮೇತ ಮಗಳ ಹತ್ತರೆ ಹೋಗಿತ್ತೆ.ಅಲ್ಲಿಯೇ ವಸ್ತ್ರ ತೊಳವ ಕಲ್ಲಿಲ್ಲಿಪ್ಪ ಸೋಪಿನ ಗೂಡಿಲಿ ನೇಲ್ ಕಟ್ಟರಿನ ಮಡುಗಿಕ್ಕಿ ಕೇರೆ ಕಪ್ಪೆ ಹಿಡಿವುದರ ನೋಡಿಕ್ಕಿ ಇಬ್ಬರೂ ಒಳ ಬಂದಿತ್ತಿದ್ದೆಯಾ! ಓ ನೇಲ್ ಕಟ್ಟರ್ ಸಿಕ್ಕಿತು ಹೇಳಿ ವಸ್ತ್ರ ತೊಳವ ಕಲ್ಲಿನ ಹತ್ತರೆ ಓಡಿದೆ.ನೀನು ಮಡುಗಿದಲ್ಲಿಯೇ ಆನು ಸುರಕ್ಷಿತವಾಗಿದ್ದೆ ಹೇಳಿ ಅದು ನೆಗೆಮಾಡಿದ ಹಾಂಗೆ ಕಂಡತ್ತೆನಗೆ!ಮಾತನಾಡದ್ದೇ ಅದರ ತಂದು ಅದರ ಜಾಗೆಲಿಯೇ ಮಡುಗಿದೆ.
ಎನ್ನ ಮುಂದಿನ ಹೆಜ್ಜೆ ದೇವರ ಕೋಣೆಗೆ!ಅಲ್ಲಿ ಹೋಗಿ ಬೆಂಕಿಪೆಟ್ಟಿಗೆ ಮಡುಗುವ ಜಾಗೆಗೆ ಕೈಹಾಕಿದೆ ಎಂತಾರು ನೆಂಪಕ್ಕಾ ಹೇಳಿ ಆಸೆಲಿ! ಫ್ಯಾಶ್ ಬ್ಯಾಕ್ ಹೈಲೈಟ್ಸ್ ಮತ್ತೆ ಪುನ: ಪರದೆಲಿ ಕಾಂಬಲೆ ಶುರುವಾತು! ದೇವರ ದೀಪ ಹೊತ್ತಿಸಿ ಅಪ್ಪದೂ,ಡೋರ್ ಬೆಲ್ ರಿಂಗಪ್ಪದೂ ಸರೀ ಆತು, ಸೀದಾ ಬೆಂಕಿಪೆಟ್ಟಿಗೆಯ ಒಟ್ಟಿಂಗೇ ತೆಕ್ಕೊಂಡು ಹೋಗಿ ಬಾಗಿಲು ತೆಗೆದಪ್ಪಾಗ ಹತ್ತರಾಣ ಮನೆಯ ಹೆಮ್ಮಕ್ಕೊ ಬಂದಿತ್ತು,ಲಲಿತಾ ಸಹಸ್ರನಾಮ ಓದುಲೆ ಹೇಳಿ,ಎಂಗೊ ಇಬ್ರೂ ಮಂಗಳವಾರದೇ,ಶುಕ್ರವಾರದೇ ಒಟ್ಟಿಂಗೇ ಒಬ್ಬೊಬ್ಬರ ಮನೇಲಿ ಒಂದೊಂದು ದಿನ ಕೂದು ಓದುದು. ಹಾಂಗೇ ಬಾಗಿಲು ತೆಗದ ಆನು ಅದರ ಕೂಪಲೆ ಹೇಳಿಕ್ಕಿ ಅಲ್ಲಿಯೇ ಇದ್ದ ಕಿಟಕಿಯ ಚಡಿಯ ಮೇಲೆ ಮಡುಗಿಬಿಟ್ಟಿತ್ತೆ!"ಯುರೇಕಾ,ಯುರೇಕಾ...ಬೆಂಕಿಪೆಟ್ಟಿಗೆದೇ ಸಿಕ್ಕಿತು" ಹೇಳಿ ಮಗಳಿಂಗೆ ಥ್ಯಾಂಕ್ಯೂ ಹೇಳಿ ಅದರ ಅದರ ಜಾಗೆಲಿಯೇ ಕೊಂಡು ಹೋಗಿ ಮಡುಗಿ ಬಂದೆ!  
ಬೆರಳ ಉಪಯೋಗಿಸಿ ಹಲ್ಲುತಿಕ್ಕಿ, ಬ್ಲೇಡಿಲಿ ಉಗುರು ತೆಗೆದು,ಗ್ಯಾಸ್ ಸ್ಟವಿಂದ ಕಿಚ್ಚು ಹೊತ್ತಿಸಿಕೊಂಡ ಇವರ ಹತ್ತರೆ ಹೇಂಗಪ್ಪಾ ಹೇಳುದು ಕಾಣೆಯಾದ ವಸ್ತುಗೊ ಎಲ್ಲಾ ಸಿಕ್ಕಿತು ಹೇಳಿ?!ಟೈಂ ಬಪ್ಪಾಗ ಅವರ ಮೂಡ್ ನೋಡಿಯೊಂಡು ಹೇಳುವ ಹೇಳಿ ಸುಮ್ಮಗಾದೆ! ಇನ್ನು ಮುಂದಾದರೂ ಹಿಡಿದ ವಸ್ತುಗಳ ಅದರ ಕೆಲಸ ಮುಗುದ ಮತ್ತೆ ಅಲ್ಲಿಯೇ ಮಡುಗೇಕು, ಹಾಂಗಾರೆ ಮಾತ್ರ  "ಅಲ್ಲೇ ಮಡುಗಿದ್ದೆ....ಹೇಳಿ ಧೈರ್ಯವಾಗಿ ಹೇಳುಲಕ್ಕು, ಆ ಹೇಳಿದ ಮಾತಿಂಗೆ ಒಂದು ಬೆಲೆ ಇರುತ್ತು ಹೇಳಿ ಮನಸ್ಸಿಲಿಯೇ ಗ್ರೇಶಿಕೊಂಡೆ!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು 

No comments:

Post a Comment