Friday, April 17, 2015

"ಏಪ್ರಿಲ್ ಫೂಲ್" - ನನ್ನ ಕಥಾಸಂಕಲನ "ಜೀವನ ದೀಪ"ದಲ್ಲಿ ಪ್ರಕಟಗೊಂಡಿರುವ ಒಂದು ಸಣ್ಣ ಕಥೆ.

ಏಪ್ರಿಲ್ ಫೂಲ್

"ನಾಳೆ ಏಪ್ರಿಲ್ ಒಂದು. ಎಲ್ಲರೂ ಜಾಗರೂಕರಾಗಿರಿ. ಎಲ್ಲರನ್ನೂ ಫೂಲ್ ಮಾಡಿಬಿಡ್ತೇನೆ. ಮೊದಲೇ ತಿಳಿಸದೇ ಮಾಡಿಬಿಟ್ಟನಲ್ಲಾ ಎಂದುಕೊಳ್ಳಬಾರದೆಂದು ಈಗಲೇ ಹೇಳುತ್ತಿದ್ದೇನೆ, ಎಚ್ಚರಿಕೆ! ಎಚ್ಚರಿಕೆ! ಎಚ್ಚರಿಕೆ!!" ಬೀದಿಯಲ್ಲಿ ಡಂಗುರ ಸಾರುತ್ತಾ ಬರುವವನಂತೆ ಪಿಯುನ್ ನಂಜ ಆಫೀಸಿನಲ್ಲಿ ತಾನು ಹಿಡಿದುಕೊಂಡಿದ್ದ ರಟ್ಟಿನ ಫೈಲಿನ ಮೇಲೆ ಬೆರಳುಗಳಿಂದ ಸದ್ದು ಮಾಡುತ್ತಾ  ಅತ್ತಿಂದಿತ್ತ ಓಡಾಡುತ್ತಾ ಹೇಳಿದ. 
ಆಫೀಸಿನ ಅತ್ಯಂತ ಹಿರಿಯ ವ್ಯಕ್ತಿಯೆಂದರೆ ನಂಜ. ಆಗಾಗ ಟ್ರಾನ್ಸ್‍ಫರ್ ಆಗಿ ಆಫೀಸಿನ ಎಲ್ಲಾ ಸೀಟುಗಳಿಗೂ ಸಾಮಾನ್ಯವಾಗಿ ಚಿಕ್ಕ ಪ್ರಾಯದವರೇ ಅಥವಾ ಮಧ್ಯವಯಸ್ಕರು ಬರುತ್ತಿದ್ದರು. ಆಫೀಸಿನಲ್ಲಿ ಟ್ರಾನ್ಸ್‍ಫರ್ ಇಲ್ಲದೇ ಪರ್ಮನೆಂಟ್ ಉದ್ಯೋಗಿ ಎಂದರೆ ನಂಜನೇ. ನಿವೃತ್ತಿಗೆ ಎರಡೇ ವಾರವಿದ್ದರೂ ತನ್ನ ವಯಸ್ಸಿನ ಅಂತರವನ್ನು ಮರೆತು ಈಗಿನ ಕಾಲಕ್ಕೆ ತಕ್ಕ ಹಾಗೆ ತಿಳಿಹಾಸ್ಯದ ಮಾತುಗಳಿಂದ ಎಲ್ಲಾ ಸಹದ್ಯೋಗಿಗಳ ಮನಸ್ಸನ್ನು ಗೆದ್ದಿದ್ದ. ಐದು ಹೆಣ್ಣು ಮಕ್ಕಳು, ಹೆಂಡತಿ ಹಾಗೂ ಮುದಿ ತಾಯಿಯ ಜೊತೆ ಸಂಸಾರ ನಂಜನದ್ದು. ಕಿತ್ತು ತಿನ್ನುವ ಬಡತನ. ಮಕ್ಕಳ ವಿದ್ಯಾಭ್ಯಾಸ, ಆಹಾರ, ಮನೆ ಬಾಡಿಗೆ ಇವೆಲ್ಲಕ್ಕೂ ನಂಜನ ಕಮಾಯಿ ಸಾಕಾಗುತ್ತಿರಲಿಲ್ಲ. ಆದರೂ ಎಂದಿಗೂ ಇನ್ನೊಬ್ಬರಲ್ಲಿ ಕೈ ಎತ್ತಿ ಕೇಳಿದವನಲ್ಲ. ಎಂತಹ  ಪರಿಸ್ಥಿತಿಯಲ್ಲೂ ನಂಜ ಸ್ಥಿತಪ್ರಜ್ಞ. ಸಂತೋಷದ ಚಿಲುಮೆ. ಆತನ ಜೀವನವೇ ಒಂದು ಉದಾಹರಣೆಯಾಗಿತ್ತು. ಕಳೆದ ವರ್ಷ ’೧೬೧’ ನಂಬರನ್ನು ಡಯಲ್ ಮಾಡಿ ಫೋನಿನ ರಿಸೀವರನ್ನೆತ್ತಿದ ಕ್ಲರ್ಕ್ ರಾಗಿಣಿಯನ್ನು ಹಾಗೂ ಇನ್ನೂ ಇಬ್ಬರನ್ನು ಫೂಲ್ ಮಾಡಿದ್ದ. ಆದ್ದರಿಂದ ಎಲ್ಲರಿಗೂ ಏಪ್ರಿಲ್ ಒಂದರಂದು ಫೋನೆತ್ತಲು ಭಯ. "ನಾಳೆ ನಂಜನೇ ಎಲ್ಲಾ ಕಾಲ್ಸ್ ಎಟೆಂಡ್ ಮಾಡ್ಬೇಕು." ಎಂದು ಎಲ್ಲರೂ ಧ್ವನಿ ಎತ್ತಿದರು.
"ಸರಿ ಸರಿ, ಆದರೆ ಕಳೆದ ಬಾರಿ ನಾನು ಮಾಡಿದ ಪ್ರಯೋಗವನ್ನು ಯಾರೂ ನನ್ನ ಮೇಲೆ ಪ್ರಯತ್ನಿಸದಿದ್ದರಾಯಿತಷ್ಟೇ...ಹ್ಹಿ ಹ್ಹಿ ಹ್ಹಿ.." ನಗೆ ಮಾಡಿಕೊಂಡು ಹೇಳಿದ ನಂಜ.
     ಮರುದಿನ ನಂಜ ಒಳ್ಳೆಯ ಹುರುಪಿನಲ್ಲಿದ್ದನು. ಆಫೀಸಿಗೆ ಒಬ್ಬೊಬ್ಬರೇ ಬರತೊಡಗಿದರು. ನಂಜ ಬಂದು,"ಸರ್, ನಿಮ್ಮನ್ನು ಮ್ಯಾನೇಜರ್ ಕರೀತಿದ್ದಾರೆ" ಎಂದರೆ ಗುಮಾಸ್ತ ರಾಮನಾಥನಿಗೆ ’ಹೌದೋ ಅಲ್ಲವೋ’ ಎಂಬ ಸಂದೇಹ. ಅಂತೂ ಹೆದರಿಕೆಯಿಂದಲೇ ಖುರ್ಚಿಯಿಂದೆದ್ದು ಹೊರಟವನಿಗೆ ನಂಜ ಕುಣಿದಾಡುತ್ತಾ "ಏಪ್ರಿಲ್ ಫೂಲ್" ಬಿರುದು ಕೊಟ್ಟೇ ಬಿಟ್ಟ.
"ರಾಧಾ ಮ್ಯಾಡಂಗೆ ಒಂದು ಗುಡ್ ನ್ಯೂಸ್"
"ಏನು ನಂಜಪ್ಪನವರೇ ಅಂತಹ ಸುದ್ಧಿ?!" ರಾಧಾ ಮ್ಯಾಡಂ ತುಸು ಜಂಭದಿಂದಲೇ ಕೇಳಿದಳು.
"ನೀವು ಕಳೆದ ಬಾರಿ ಭರ್ತಿ ಮಾಡಿ ಸ್ಪರ್ಧೆಗೆ ಕಳುಹಿಸಿದ್ದ ಪದಬಂಧಕ್ಕೆ ೨೫೦ ರೂಪಾಯಿ ಬಹುಮಾನ ಬಂದಿದೆ. ನಿಮ್ಮ ಹೆಸರು ಪೇಪರಿನಲ್ಲಿ ಬಂದಿದೆ ನೋಡಿ."
"ಎಲ್ಲಿ?!" ಎಂದು ಕುತೂಹಲದಿಂದ ಅವನ ಕೈಯಿಂದ ಪೇಪರ್ ಕಿತ್ತುಕೊಂಡವಳಿಗೆ "ಏಪ್ರಿಲ್ ಫೂಲ್" ಹಣೆ ಪಟ್ಟಿ ಕಟ್ಟಿದ ನಂಜ. ಹೀಗೇ ಆಫೀಸಿನ ಅವಿರತ ಕೆಲಸ ಕಾರ್ಯಗಳ ನಡುವೆ ನಂಜನ ಬಲೆಗೆ ಒಬ್ಬೊಬ್ಬರೇ ಬೀಳತೊಡಗಿದರು. ಫೂಲ್ ಆದ ಎಲ್ಲರೂ ಪಾರ್ಟಿ ಕೊಡಬೇಕೆಂದು ತಾಕೀತು ಮಾಡಿದ ನಂಜ. "ಎಲ್ಲರೂ ಒಬ್ಬೊಬ್ಬರಂತೆ ಸರದಿಯಲ್ಲಿ ಒಂದೊಂದು ದಿನ ಪಾರ್ಟಿ ಕೊಡಿಸಿಯಪ್ಪಾ...ಎಲ್ಲರೂ ಇವತ್ತೇ ಕೊಟ್ಟರೆ ಆಗಲ್ಲ. ಫೂಲ್ ಆದವರದ್ದೆಲ್ಲಾ ಟ್ರೀಟ್ ತಿಂದರೆ ನನ್ನ ಹೊಟ್ಟೆ ಫುಲ್ ಆಗಿ ಅಪ್ಸ್‍ಟ್ ಆದೀತು..." ನಗುತ್ತಾ ಹೇಳಿದ.
"ಸರಿಯಾಗಿ ಏಪ್ರಿಲ್ ಒಂದು ಅಂತ ತಾರೀಖು ನೆನಪಿಟ್ಟುಕೊಂಡರೆ ಯಾರೂ ಫೂಲ್ ಆಗುತ್ತಿರಲಿಲ್ಲ!" ತನಗೇ ಬಹಳ ನೆನಪು ಎಂಬಂತೆ ಕಾಲರನ್ನು ಕೊಡವಿಕೊಂಡ ನಂಜ.
"ನಾನಂತೂ ಫೂಲ್ ಆಗೋದೇ ಇಲ್ಲಪ್ಪಾ" ಎನ್ನುತ್ತಾ ಗೆಲುವಿನ ಹಮ್ಮಿನಲ್ಲಿ ಹೇಳಿಕೊಂಡು ತನ್ನ ಕೆಲಸದಲ್ಲಿ ತೊಡಗಿದ ನಂಜ.
"ಹೇಗಾದರೂ ಮಾಡಿ ನಮ್ಮ ನಂಜನನ್ನು ಇವತ್ತು ಫೂಲ್ ಮಾಡಬೇಕಿತ್ತಲ್ಲಾ..." ರಾಗಿಣಿ ರಾಗ ಎಳೆದಳು.
"ಹೌದು, ಆದರೆ ಸಾಧಾರಣಕ್ಕೆಲ್ಲಾ ಅವ ಬಗ್ಗುವುದಿಲ್ಲ" ಹೇಳಿದಳು ರಾಧಾ.
ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ.
"ಆಫೀಸಿನಿಂದ ಮನೆಗೆ ಹೋಗುವ ಮೊದಲು ಮಿಕ್ಕುಳಿದ ಎಲ್ಲರನ್ನೂ ಫೂಲ್ ಮಾಡಿಯೇ ತೀರುತ್ತೇನೆ" ಎಂದು ಮತ್ತೊಮ್ಮೆ ಬೀಗಿದ ನಂಜ.
ಸ್ವಲ್ಪ ಹೊತ್ತಿನ ನಂತರ ಕೆಲವು ಫೈಲುಗಳನ್ನು ಹಿಡಿದು ಮೇನೇಜರ್ ಕೊಠಡಿಗೆ ಹೋದ ನಂಜ. ಒಂದೆರಡು ನಿಮಿಷಗಳಲ್ಲಿ ತುರ್ತು ಕೆಲಸದ ನಿಮಿತ್ತ ಹೊರಗೆ ಹೋದರು ಆಫೀಸಿನ ಮೇನೇಜರ್. ಆಫೀಸಿನ ಯಾರಾದರೂ ನಂಜನನ್ನು ಕೆಲಸಕ್ಕೆಂದು ಕರೆದರೆ ಆತನ ಪತ್ತೆಯೇ ಇಲ್ಲ.
"ಇದು ಇವನ ಹೊಸಾ ರೋಲು. ಎಲ್ಲರನ್ನೂ ಒಮ್ಮೆಲೇ ಫೂಲ್ ಮಾಡಲು" ಎಂದು ಎಲ್ಲರೂ ಗುಸು ಗುಸು ಪ್ರಾರಂಭಿಸಿದರು. ಎಲ್ಲರಿಗೂ ನಂಜನನ್ನು ಎಲ್ಲಿದ್ದಾನೆಂದು ಹೋಗಿ ನೋಡಲು ಭಯ. ಎಲ್ಲಿಯಾದರೂ, ಯಾವ ಬಗೆಯಿಂದಲಾದರೂ ಫೂಲ್ ಮಾಡಿ ಪಾರ್ಟಿ ಕೇಳಿದರೇ...ಎಂದು. ಆದರೂ ಗುಮಾಸ್ತ ರಮಾನಾಥ್ ಒಮ್ಮೆ ಮೇನೇಜರ್ ಕೊಠಡಿಗೆ ಇಣುಕಿ ನೋಡಿದ. ನೆಲಕ್ಕೆ ಹಾಸಿದ್ದ ಕೆಂಪು ಬಣ್ಣದ ಕಾರ್ಪೆಟ್ಟಿನ ಮೇಲೆ ಉದ್ದಕ್ಕೆ ಎದೆಯುಬ್ಬಿಸಿ ಮಲಗಿದ್ದನ್ನು ಕಂಡು ಇತರ ಸಹದ್ಯೋಗಿಗಳಲ್ಲಿ, "ನಂಜ ಹೊಸದೊಂದು ಪ್ಲಾನ್ ಹಾಕಿ ಸತ್ತವನ ಹಾಗೆ ಮಲಗಿಬಿಟ್ಟಿದ್ದಾನೆ. ಯಾರಾದರೂ ಹೋಗಿ ಮಾತನಾಡಿಸಿದರೆ ಫೂಲ್ ಆಗುವುದು ಖಂಡಿತಾ" ಎಂದ. ಎಲ್ಲರೂ ಒಬ್ಬರಾದ ನಂತರ ಒಬ್ಬರು ಸದ್ದಿಲ್ಲದೇ ಮೇನೇಜರ್ ಛೇಂಬರಿನೊಳಗೆ ಇಣುಕಿ ನೋಡಿದರು.
"ಒಳ್ಳೇ ನಂಜ. ಎಲ್ಲರನ್ನೂ ಒಟ್ಟಿಗೇ ಫೂಲ್ ಮಾಡುವ ಹೊಸ ತಂತ್ರೋಪಾಯ. ಇಷ್ಟು ಪ್ರಾಯವಾದರೂ ಮಕ್ಕಳಾಟಿಕೆ ಬಿಟ್ಟಿಲ್ಲ ಪಾಪ..." ಎನ್ನುತ್ತಾ ರಾಧಾ ಮೇಡಂ ವ್ಯಾನಿಟಿ ಬ್ಯಾಗನ್ನು ಹೆಗಲಿಗೇರಿಸಿ ಆಫೀಸಿನಿಂದ ಹೊರನಡೆದಳು.
"ಸಂಜೆ ಒಳಗೆ ಎಲ್ಲರನ್ನೂ ಫೂಲ್ ಮಾಡುವೆನೆಂದು ನಂಜ ಪಣ ತೊಟ್ಟಿದ್ದ...ಅದೇ ಕಾರಣಕ್ಕೆ ನಂಜನ ಹೊಸಾ ರೋಲು...ಫೂಲ್ ಮಾಡಲೋಸ್ಕರ ಇದೆಂತಹ ಸೀರಿಯಸ್ ಆಟಾನೋ ನಂಗೊತ್ತಿಲ್ಲಪ್ಪಾ. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಲಿಲ್ಲ. ಮಗುವಿನಂತಹ ಮನಸ್ಸಿನ ನಂಜ" ಹೇಳುತ್ತಾ ಸುಮತಿ ತನ್ನ ಚೀಲವನ್ನು ಹೆಗಲಿಗೇರಿಸಿ ತನ್ನ ಕೈನೆಟಿಕ್‍ನಲ್ಲಿ ಮನೆಯ ದಾರಿ ಹಿಡಿದಳು.
ಹೀಗೇ ಒಬ್ಬರಾದಂತೆ ಒಬ್ಬರು ಕಛೇರಿ ವೇಳೆ ಮುಗಿದಿದ್ದರಿಂದ ಮನೆಗೆ ಹಿಂದಿರುಗಿದರು. ಮತ್ತೊಬ್ಬ ಪಿಯುನ್ ಶೇಷ ಕಛೇರಿಯ ಬೀಗದ ಕೈಯನ್ನು ಹಿಡಿದು ಆಚಿಂದೀಚೆ ತಿರುಗಾಡತೊಡಗಿದ.
"ನಂಜಾ, ಏ ನಂಜಾ" ಎಂದು ನಾಲ್ಕೈದು ಬಾರಿ ಕರೆದು, "ಬಾರೋ, ಆಫೀಸಿಗೆ ಬೀಗ ಹಾಕೋ ಟೈಂ ಆಯ್ತು...ಎಲ್ರೂ ಮನೆಗೆ ಹೋದರು...ನೀನಿನ್ನು ಯಾರನ್ನೂ ಫೂಲ್ ಮಾಡೋಕ್ಕಾಗಲ್ಲ. ಎದ್ದು ಬಾ ಬೇಗ. ನನ್ಗೂ ಬೇರೆ ಕೆಲ್ಸ ಇದೆ" ಎಂದು ಗೊಣಗಾಡಿದ ಶೇಷ. ಆದರೂ ನಂಜನ ಸದ್ದೇ ಇಲ್ಲ.
"ಸರಿ ಕಡೇಗೆ ನನ್ನನ್ನಾದ್ರೂ ಫೂಲ್ ಮಾಡೋ ಆಸೇನಾ ನಿನ್ಗೆ?...ಏ....ಬಾರಪ್ಪಾ..." ಎನ್ನುತ್ತಾ ಮೇನೇಜರ್ ಕೊಠಡಿಗೆ ನುಗ್ಗಿದ ಶೇಷ. ಆದರೂ ನಂಜ ಅಲುಗಾಡಲಿಲ್ಲ.
"ಸಾಕಪ್ಪಾ ನಿಲ್ಸು ನಿನ್ನ ಏಪ್ರಿಲ್ ಫೂಲ್ ಆಟ" ಎನ್ನುತ್ತಾ ಶೇಷ ನಂಜನ ಹತ್ತಿರ ಬಂದು ಆತನನ್ನು ಅಲುಗಾಡಿಸಿದ. ಆದರೆ ನಂಜ ವಿಧಿವಶಾತ್ ಇಹಲೋಕ ತ್ಯಜಿಸಿದ್ದ. ಅವನ ಮನೆಯವರಿಗೆ ಸುದ್ಧಿ ಮುಟ್ಟಿಸಲಾಯಿತು. ಪೋಸ್ಟ್ ಮಾರ‍್ಟಂನಿಂದ ನಂಜನಿಗೆ ಬಲವಾಗಿ ಹಾರ್ಟ್ ಅಟಾಕ್ ಆದದ್ದು ಬೆಳಕಿಗೆ ಬಂತು. ಸಹೋದ್ಯೋಗಿಗಳಿಗೆಲ್ಲಾ ವಿಷಯ ತಿಳಿದು ಪ್ರತಿಯೊಬ್ಬರೂ ನಂಜನ ಅಂತಿಮ ದರ್ಶನಕ್ಕೆ ಬಂದರು.
"ಅಂತೂ ನಂಜ ನಮ್ಮನ್ನೆಲ್ಲಾ ಖಂಡಿತವಾಗಿಯೂ ಫೂಲ್ ಮಾಡಿಯೇ ಬಿಟ್ಟ." ಎಂದು ಹೇಳುತ್ತಾ ಎಲ್ಲರೂ ನಿಟ್ಟುಸಿರು ಬಿಟ್ಟು ಕಣ್ಣೀರು ಹಾಕಿದರು.
"ಒಂದಲ್ಲಾ ಒಂದು ದಿನ ಅಕಸ್ಮಾತ್ತಾಗಿ ಸಾವು ಎಲ್ಲರನ್ನೂ ಫೂಲ್ ಮಾಡಿಯೇ ಬಿಡುತ್ತದೆ. ಎಲ್ಲರ ಆಸೆ ಆಕಾಂಕ್ಷೆಗಳು, ನಿರೀಕ್ಷೆ, ಬಯಕೆಗಳೆಲ್ಲಾ ಆಗ ಫೂಲ್ ಆಗಿ ಬಿಡುತ್ತದೆ" ಎಂದು ನಾಲ್ಕು ಹನಿ ಕಂಬನಿಯೊಂದಿಗೆ ಆಫೀಸಿನ ಮೇನೇಜರ್ ಹೇಳಿದರು. ನಂಜನ ಪಾಲಿಗೆ ಏಪ್ರಿಲ್ ಒಂದನೇ ತಾರೀಖು ವಿಪರ್ಯಾಸವಾಗಿ ಫೂಲ್ ಮಾಡಿಬಿಟ್ಟಿತ್ತು. ಎಲ್ಲರ ಗಂಟಲೂ ಇನ್ನಷ್ಟು ಗದ್ಗದಿತವಾಗಿತ್ತು. ಪ್ರತಿಯೊಬ್ಬರ ಮನಸ್ಸು ನಂಜನ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಿತ್ತು.

ತ್ರಿವೇಣಿ ವಿ ಬೀಡುಬೈಲು
ಮಂಗಳೂರು

Saturday, April 11, 2015

ನನ್ನ ಕಥಾಸಂಕಲನ "ಜೀವನ ದೀಪ"ದ ಮೊದಲ ಕಥೆ "ಮಮ್ಮಿ"...ಈ ಕಥೆ "ಹೊಸ ದಿಗಂತ" ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮಮ್ಮಿ
ಕೆಲಸಗಳನ್ನೆಲ್ಲಾ ಮುಗಿಸಿ ಗಂಟೆ ನೋಡಿದಳು ಶ್ಯಾಮಲ. ಸಂಜೆ ಐದಾಗಿತ್ತು. ನಡುಕೋಣೆಗೆ ಬಂದು ಟಿ.ವಿ ನೋಡುತ್ತಾ ಕುಳಿತಳು. ರಾಮಣ್ಣ ಹುಡುಗನೊಂದಿಗೆ ಬರಬಹುದೆಂದುಕೊಂಡಳು.
_________________

ಹಿಂದಿನ ದಿನ ಸಂಜೆ ಗಂಡನೊಂದಿಗೆ ವಾಕಿಂಗ್ ಹೋಗಿದ್ದಳು ಶ್ಯಾಮಲ. ನಾಲ್ಕಾರು ಮನೆಗಳಿಗೆ ಹಸುವಿನ ಹಾಲು ಮಾರುವ ರಾಮಣ್ಣ ಇದಿರಾಗಿದ್ದ. ದಾರಿಯಲ್ಲೋ, ಬಸ್ಸಿನಲ್ಲೋ ಆಗಾಗ್ಗೆ ಕಂಡು ಮಾತ್ರ ಪರಿಚಯವಿದ್ದ ಕಾರಣ, ಎದುರೆದುರು ಭೇಟಿಯಾದಾಗ ಪರಸ್ಪರ ಮುಗುಳ್ನಗೆಯಾಡುತ್ತಿದ್ದರವರು. ಇವರು ವಾಸಿಸುತ್ತಿರುವ ಬೀದಿಯಿಂದ ನಾಲ್ಕನೆಯೋ ಐದನೆಯೋ ಬೀದಿಯಲ್ಲಿರಬಹುದು ರಾಮಣ್ಣನ ಮನೆ. ಎಲ್ಲಿ ಎಂದು ಖಚಿತವಾಗಿ ಗೊತ್ತಿರಲಿಲ್ಲ ಅವರಿಗೆ. ಅವನಿಗೆ ಮೂರು ಕರೆಯುವ ಹಸುಗಳಿವೆ ಎಂದು ಪಕ್ಕದ ಮನೆಯ ಪದ್ಮ ಹೇಳಿ ಗೊತ್ತಿತ್ತು.
"ಇಲ್ಲಿ ಯಾರಾದ್ರೂ ಟ್ಯೂಶನ್ ಕೊಡುವವರಿದ್ದಾರಾ?" ಎಂದು ಪ್ರಶ್ನಿಸುತ್ತಾ ರಾಮಣ್ಣ ಇವರ ಹತ್ತಿರ ಬಂದ.
"ಯಾವ ಕ್ಲಾಸಿಗೆ?" ಕೇಳಿದಳು ಶ್ಯಾಮಲ.
"ಎರಡನೇ ಕ್ಲಾಸಿಗೆ, ಇಂಗ್ಲಿಷ್ ಮೀಡಿಯಂ ಹುಡುಗ"
"ನಿಮ್ಮ ಮಗನಿಗೇನು?" ಶ್ಯಾಮಲಾಳ ಗಂಡ ರಘು ಕೇಳಿದ.
"ಅಲ್ಲ, ನನ್ನ ಅಕ್ಕನ ಮಗನಿಗೆ" ಉತ್ತರಿಸಿದ ರಾಮಣ್ಣ.
ಶ್ಯಾಮಲಳಿಗೆ ಸಂಜೆ ಹೊತ್ತು ಕಳೆಯಲು ಏನಾದರೂ ಕೆಲಸ ಬೇಕಿತ್ತು. ’ನಾನೇ ಹೇಳಿಕೊಡಬಹುದಲ್ಲವೇ’ ಎಂದಾಲೋಚಿಸಿ, "ಹುಡುಗನಿಗೆ ನಾನೇ ಪಾಠ ಹೇಳಿಕೊಡುವೆ ಬೇಕಾದ್ರೆ" ಎಂದಳು. ಸಾಕಾಷ್ಟು ಡಿಗ್ರಿ ಪಡೆದುಕೊಂಡಿದ್ದರೂ ಆಕೆಗೆ ದುರದೃಷ್ಟವಶಾತ್ ಎಲ್ಲೂ ಕೆಲಸ ಸಿಕ್ಕಿರಲಿಲ್ಲ.
"ಸರಿ ಅಮ್ಮ. ನಾಳೆ ಸಂಜೆ ಹುಡುಗನನ್ನು ಕರಕೊಂಡು ನಿಮ್ಮಲ್ಲಿಗೆ ಬರುತ್ತೇನೆ" ಎನ್ನುತ್ತಾ ಹೊರಟನಾತ.
"ನಮ್ಮ ಮನೆ ಗೊತ್ತಿದ್ಯಾ ನಿನಗೆ?" ಕೇಳಿದ ರಘು.
"ಓ ಗೊತ್ತಿದೆ ಸ್ವಾಮಿ, ಅದೇ ಆ ಬೀದಿಯ ಎರಡನೇ ಮನೆಯಲ್ಲವೇ?" ಎಂದು ಬೆರಳು ಮಾಡಿ ತೋರಿಸಿದ. "ನಿಮ್ಮ ಪಕ್ಕದ ಮನೆಗೆ ಹಾಲು ಹಾಕಲು ಬರುವಾಗ ಅಮ್ಮಾವ್ರನ್ನ ನೋಡಿದ್ದೇನೆ"ಎನ್ನುತ್ತಾ ಶ್ಯಾಮಲಾಳನ್ನು ನೋಡಿ ಹಲ್ಲುಕಿಸಿದ.
__________

"ಅಮ್ಮಾ, ಅಮ್ಮಾ" ರಾಮಣ್ಣ ಹೊರಗಿನಿಂದ ಕರೆದ.
ಶ್ಯಾಮಲ ಟಿ.ವಿ. ಆರಿಸಿ ಹೊರಗೆ ಬಂದಳು. ಸಂಜೆ ಹೇಳಿದಂತೆ ರಾಮಣ್ಣ ಹುಡುಗನೊಂದಿಗೆ ಬಂದಿದ್ದ. ಶ್ಯಾಮಲ ಅವರಿಬ್ಬರನ್ನೂ ಒಳಗೆ ಕರೆದಳು.
"ಅಮ್ಮ ನೋಡಿ ಇವನನ್ನೇ ನಾನು ನಿನ್ನೆ ಹೇಳಿದ್ದು"
"ಹೌದಾ? ಯಾವ ಕ್ಲಾಸಪ್ಪಾ ನೀನು?" ಕೇಳಿದಳು ಶ್ಯಾಮಲ ಹುಡುಗನ ತಲೆ ನೇವರಿಸುತ್ತಾ.
"ಸೆಕೆಂಡ್ ಸ್ಟಾಂಡರ‍್ಡ್" ಎಂದ.
"ಇವನಿಗೆ ಎಲ್ಲಾ ಸಬ್ಜೆಕ್ಟ್‍ಗಳನ್ನೂ ಹೇಳಿಕೊಡಬೇಕಂತೆ. ಎಷ್ಟು ಫೀಸಾಗುತ್ತೆ ಅಮ್ಮಾ?" ಕೇಳಿದ ರಾಮಣ್ಣ.
"ಹುಡುಗ ಚೆನ್ನಾಗಿ ಕಲಿತರೆ ಅದೇ ಫೀಸು, ಅಲ್ವೇನೋ" ಹುಡುಗನನ್ನು ನೋಡಿ ನಗುತ್ತಾ ಹೇಳಿದಳು ಶ್ಯಾಮಲ.
"ಹ್ಹೆ ಹ್ಹೆ ಹ್ಹೆ... ಹಾಗೆ ಹೇಳಿದರೆ ಹೇಗಮ್ಮಾ?! ಹುಡುಗನ ತಂದೆ...ಅದೇ ನನ್ನ ಭಾವ ನಿಮ್ಮ ಹತ್ತಿರ ಕೇಳಿಕೊಂಡು ಬರಲು ಹೇಳಿದ್ದರು...." ಎನ್ನುತ್ತಾ ತಡವರಿಸಿದನಾತ.
"ಅದೆಲ್ಲಾ ಏನೂ ಬೇಡ...ಮೊದಲು ಅವನು ನಾನು ಹೇಳಿಕೊಟ್ಟದ್ದನ್ನು ಚೆನ್ನಾಗಿ ಕಲಿತು ಒಳ್ಳೆಯ ಮಾರ್ಕು ತೆಗೆಯಲಿ, ಅಷ್ಟೇ ಸಾಕು" ಎನ್ನುತ್ತಾ ಪುನ: ನಕ್ಕಳು ಶ್ಯಾಮಲ.
"ಹೂಂ...ನೀವು ಹೇಗೆ ಹೇಳ್ತೀರೋ ಹಾಗೆ...ನನಗೆ ಇನ್ನೂ ನಾಲ್ಕು ಮನೆಗಳಿಗೆ ಹಾಲು ಹಾಕಲಿದೆ ಅಮ್ಮಾ... ಪಾಠ ಮುಗಿದ ನಂತರ ಹುಡುಗನನ್ನು ಕಳುಹಿಸಿಬಿಡಿ" ಎನ್ನುತ್ತಾ ಹಾಲಿನ ಕ್ಯಾನಿನೊಂದಿಗೆ ಹೊರಟು ಹೋದ ರಾಮಣ್ಣ.
ಶ್ಯಾಮಲ ಬಾಗಿಲು ಹಾಕಿ ಬಂದು ಹುಡುಗನ ಪಕ್ಕ ಕುಳಿತಳು.
"ಏನಪ್ಪಾ ನಿನ್ನ ಹೆಸರು?"
"ಪ್ರದೀಪ್" ಮುದ್ದಾಗಿ ಹೇಳಿದ ಹುಡುಗ.
"ಮನೇಲಿ ಯಾವ ಭಾಷೆ ಮಾತಾಡೋದು?"
"ತುಳು"
"ಶಾಲೆಯಲ್ಲಿ ಇಂಗ್ಲೀಷಾ?"
ಹೌದೆಂದು ತಲೆಯಾಡಿಸುತ್ತಾ, "ಕನ್ನಡ ಬರಲ್ಲ" ಎಂದ.
"ಮತ್ತೆ ಇಷ್ಟು ಚೆನ್ನಾಗಿ ಮಾತನಾಡುತ್ತಿದ್ದೀ!"
"ಸ್ವಲ್ಪ ಸ್ವಲ್ಪ ಬರುತ್ತದಷ್ಟೇ" ಎನ್ನುತ್ತಾ ನಕ್ಕ.
"ನಾನೀಗ ನಿನ್ನ ಜೊತೆ ಕನ್ನಡದಲ್ಲೇ ಮಾತಾಡೋದು ಆಯ್ತಾ...ನೋಡೋಣ ನಿನಗೆ ಬರುತ್ತೋ ಇಲ್ವೋ ಅಂತ....ಹೂಂ ಸರಿ...ಈಗ ಹೇಳು ನಿಮ್ಮ ಮನೆಯಲ್ಲಿ ಯಾರ‍್ಯಾರಿದ್ದಾರೆ?"
"ಡ್ಯಾಡಿ, ಅಜ್ಜಿ ಮತ್ತು ನಾನು"
"ಅಜ್ಜಿ ಅಂದ್ರೆ ನಿನ್ನ ಡ್ಯಾಡಿಯ ಅಮ್ಮನಾ?"
"ಹೂಂ"
"ಮಮ್ಮಿ ಎಲ್ಲಿ?"
"ಅಜ್ಜಿ ಮನೆಗೆ ಹೋಗಿದ್ದಾರೆ" ಬೇಸರದಿಂದ ಹೇಳಿದ ಪ್ರದೀಪ್.
"ಮತ್ತೆ ನಿನ್ನ ರಾಮಣ್ಣ ಮಾವ ಎಲ್ಲಿರೋದು?"
"ಅವರು ನಮ್ಮ ಮನೆಯ ಪಕ್ಕದಲ್ಲಿ"
ನೀನು ನಿನ್ನ ಡ್ಯಾಡಿಯೊಟ್ಟಿಗೆ ಬಾರದೆ ಮಾವನೊಟ್ಟಿಗೆ ಬಂದದ್ದೇಕೆ?"
"ಡ್ಯಾಡಿ ಇನ್ನೂ ಮನೆಗೆ ಬಂದಿಲ್ಲ"
"ಡ್ಯಾಡಿ ಯಾವ ಕೆಲಸದಲ್ಲಿದ್ದಾರೆ?"
"ಫ್ಯಾಕ್ಟ್ರಿಯಲ್ಲಿ ಇಂಜಿನಿಯರ್"
"ಮನೆಯಲ್ಲಿ ನಿನಗೆ ತಿಂಡಿ ಮಾಡಿಕೊಡೋದು ಯಾರು?"
"ಅಜ್ಜಿ, ಎಲ್ಲಾ ಅಜ್ಜಿನೇ ಈಗ, ಮಮ್ಮಿ ಅಜ್ಜಿ ಮನೆಗೆ ಹೋದ ಮೇಲೆ" ಎಂದು ಹೇಳಿದ ಬೇಸರದಿಂದ ತಲೆ ತಗ್ಗಿಸುತ್ತಾ.
"ಅಯ್ಯೋ ಕೇಳಿದ್ದು ತಪ್ಪಾಯಿತೇ ಎಂದಾಲೋಚಿಸಿದಳು ಶ್ಯಾಮಲ.
"ನಿನ್ನಪ್ಪ ಅಮ್ಮನಿಗೆ ನೀನೊಬ್ಬನೇ ಮಗನಾ?"
"ಅಲ್ಲ, ನನಗೆ ತಂಗಿಯೊಬ್ಬಳಿದ್ದಾಳೆ" ಹುಡುಗನ ಮುಖವರಳಿತು.
"ಹೌದಾ?!" ಆಶ್ಚರ್ಯದಿಂದ ಕೇಳಿದಳು ಶ್ಯಾಮಲ.
ಬಹುಶ: ಗಂಡ ಹೆಂಡತಿಗೆ ಜಗಳವಾಗಿ ಅಥವಾ ಅತ್ತೆ ಸೊಸೆಗೆ ಜಗಳವಾಗಿ ಪ್ರದೀಪ್‍ನ ತಾಯಿ ಕೋಪಿಸಿಕೊಂಡು ಮಗಳೊಂದಿಗೆ ತವರಿಗೆ ಹೋಗಿರಬೇಕು...ಛೇ ಎಂತಹ ಹೆಂಗಸಿರಬಹುದವಳು! ಇಂತಹ ಮುದ್ದಾದ ಹುಡುಗನನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂದಿತವಳಿಗೆ? ಪಾಪ ಪ್ರದೀಪ್ ಎಂದುಕೊಂಡಳು.
"ಮಮ್ಮಿ ಯಾವಾಗ ಹೋದದ್ದು ಪುಟ್ಟಾ? ಯಾವಾಗ ವಾಪಸು ಬರುತ್ತಾಳೆ?"
"ಅವತ್ತೇ ಹೋಗಿದ್ದಾಳೆ. ಆಮೇಲೆ ಬರಲೇ ಇಲ್ಲ. ಡ್ಯಾಡಿ ಹತ್ತಿರ ಯಾವಾಗ ಕೇಳಿದರೂ ಸ್ವಲ್ಪ ದಿನ ಬಿಟ್ಟು ಬರುತ್ತಾಳೆಂದು ಹೇಳುತ್ತಿರುತ್ತಾರೆ ಆಂಟೀ...ಇನ್ನೂ ಬಂದಿಲ್ಲ" ಹೇಳಿದ ಪ್ರದೀಪ್ ಕಣ್ಣಿನಲ್ಲಿ ನೀರು ತುಂಬಿಕೊಂಡು.
"ಯಾಕಪ್ಪಾ ಕಣ್ಣಲ್ಲಿ ನೀರು?" ತಲೆ ನೇವರಿಸುತ್ತಾ ಕೇಳಿದಳು.
"ಮಮ್ಮಿಯಿಲ್ಲದೇ ತುಂಬಾ ಬೇಜಾರು"
ಶ್ಯಾಮಲಾಳ ಮನಸ್ಸಿನಲ್ಲೀಗ ಸಂಶಯಕ್ಕೆಡೆಯೇ ಇರಲಿಲ್ಲ. ಖಂಡಿತವಾಗಿ ಜಗಳ ಮಾಡಿಕೊಂಡು ಪ್ರದೀಪ್‍ನನ್ನು ಗಂಡನೊಟ್ಟಿಗೆ ಬಿಟ್ಟು ಮಗಳೊಂದಿಗೆ ಹೋಗಿಬಿಟ್ಟಿದ್ದಾಳೆ ತವರಿಗೆ. ಪ್ರದೀಪ್‍ನನ್ನು ಸಮಾಧಾನ ಮಾಡಲೋಸ್ಕರ ಮಮ್ಮಿ ಬರುತ್ತಾಳೆ ಎಂದು ಹೇಳಿರಬೇಕು ಅವನಪ್ಪ ಎಂದುಕೊಂಡಳು. ಗಂಡ-ಹೆಂಡತಿ ಅಥವಾ ಅತ್ತೆ-ಸೊಸೆಯರ ನಡುವೆ ಮನಸ್ತಾಪವಾದಾಗ ಬದುಕಿನ ಪ್ರಮುಖ ಗಳಿಗೆಗಳನ್ನು ಕಳೆದುಕೊಳ್ಳುವ ಬದಲು, ಇಂತಹ ಮುಗ್ಧ ಮಕ್ಕಳನ್ನು ಏಕಾಂಗಿಯನ್ನಾಗಿ ಮಾಡುವ ಬದಲು, ತಮ್ಮ ಜೀವನದ, ಮಕ್ಕಳ ಮುಂದಿನ ಬೆಳವಣಿಗೆಯ, ಅವರ ಕಲಿಯುವಿಕೆಯ ಮಹದೋದ್ದೇಶಗಳನ್ನು ಯೋಚಿಸಿ ಹೊಂದಾಣಿಕೆಯಿಂದಿರಲು ಸಾಧ್ಯವಿದ್ದರೂ, ಸಾಧ್ಯವಿಲ್ಲದಂತೆ ಮಾಡಿಕೊಳ್ಳುತ್ತಿದ್ದಾರಲ್ಲಾ ಇಂತಹ ಕೆಲವರು. ಹೀಗಾದರೆ ಇಂತಹ ಮುಗ್ಧ ಮಕ್ಕಳ ಭವಿಷ್ಯ ಹೇಗೆ? ತಾಯಿಯ ಸಾನಿಧ್ಯ ಇಲ್ಲದೆ ಮಾನಸಿಕವಾಗಿ ಎಷ್ಟು ಮುದುಡಿದೆ ಈ ಮಗು! ಇನ್ನು ತಾಯಿಯೊಂದಿಗಿರುವ ಆ ಪುಟ್ಟು ಮಗಳ ಗತಿಯೇನೋ? ಛೇ ಪಾಪ ಎಂದುಕೊಂಡಳವಳು.
ಆಕೆಯ ಕುತೂಹಲ ಇನ್ನೂ ಕೆರಳಿತು.
"ಮಮ್ಮಿ ಯಾವಾಗ ಪುಟ್ಟಾ ಅಜ್ಜಿ ಮನೆಗೆ ಹೋದದ್ದು?"
"ಹೋಗಿ ತುಂಬಾ ತುಂಬಾ ದಿನ ಆಯ್ತು..." ಕೆನ್ನೆ ಮೇಲೆ ಕಣ್ಣೀರಿಳಿದು ಬಂತು.
ಛೇ ತಾಯಿಗಾಗಿ ಎಷ್ಟೊಂದು ಹಂಬಲಿಸುತ್ತಿರುವನು ಪಾಪ. ಕೇಳಬಾರದ್ದನ್ನೆಲ್ಲಾ ಕೇಳಿ ಹುಡುಗನ ಮನಸ್ಸನ್ನು ನೋಯಿಸಿದೆನೆಂದುಕೊಂಡಳು ಶ್ಯಾಮಲ.
ಕೊನೆಯ ಪ್ರಶ್ನೆ ಒಂದನ್ನು ಕೇಳಿಯೇ ಬಿಡೋಣ  ಎಂದುಕೊಂಡು ಶ್ಯಾಮಲ "ನೀನು ಮಮ್ಮಿಯೊಂದಿಗೆ ಹೋಗಲಿಲ್ಲವೇಕೆ?" ಎಂದು ಕೇಳಿದಳು.
"ಡ್ಯಾಡಿ ಬೇಡ ನಿನಗೆ ಸ್ಕೂಲಿದೆ ಎಂದು ಬಿಟ್ಟರು. ನನಗೆ ಹೋಗಲಿಕ್ಕೆ ತುಂಬಾ ಆಸೆ ಇತ್ತು..." ದು:ಖ ಉಮ್ಮಳಿಸಿ ಬಂತವನಿಗೆ.
"ಸರಿ ಪುಟ್ಟಾ, ಬಿಡು ಬೇಸರಪಟ್ಟುಕೊಳ್ಳಬೇಡ ...ಎಲ್ಲಾ ಒಂದು ದಿನ ಸರಿ ಹೋಗುತ್ತೆ ಆಯ್ತಾ... ಕಳೆದ ವರ್ಷ ಎರಡನೇ ತರಗತಿಯಲ್ಲಿದ್ದಾಗ ಟ್ಯೂಶನ್‍ಗೆ ಹೋಗುತ್ತಿದ್ದೆಯಾ ಎಲ್ಲಿಯಾದರೂ?"
"ಇಲ್ಲ, ಮಮ್ಮಿನೇ ಮನೇಲಿ ಹೇಳಿಕೊಡುತ್ತಿದ್ದಳು"
"ಓ ಹೌದಾ? ನಿನ್ನ ತಂಗಿ ಶಾಲೆಗೆ ಹೋದುತ್ತಿದ್ದಾಳಾ? ಯಾವ ಕ್ಲಾಸು?"
"ಶಾಲೆಗೆ ಹೋಗುವುದಿಲ್ಲ" ಎಂದು ನಕ್ಕು ತಲೆ ಬಗ್ಗಿಸಿದ ಪ್ರದೀಪ್. ಯಾಕೆಂದು ಹೊಳೆಯಲಿಲ್ಲ ಶ್ಯಾಮಲಳಿಗೆ.
"ನಿನಗವಳು ಮನೇಲಿದ್ದಾಗ ಪುಸ್ತಕ, ಪೆನ್ಸಿಲ್ಲು, ಪೆನ್ನು ಇತ್ಯಾದಿಗಳನ್ನೆಲ್ಲಾ ಎಳೆದು ಉಪದ್ರ ಕೊಡುತ್ತಿದ್ದಳೇ?"
"ಇಲ್ಲ ಹ್ಹ....ಹ್ಹ...ಹ್ಹ...ಹ್ಹ...ಇಲ್ಲ" ಎನ್ನುತ್ತಾ ಗಹಗಹಿಸಿ ನಕ್ಕ ಪ್ರದೀಪ್.
"ಯಾಕೋ ನಗಾಡ್ತಾ ಇದ್ದೀಯ?" ಕುತೂಹಲದಿಂದ ಕೇಳಿದಳು ಶ್ಯಾಮಲ.
"ಅವಳಿನ್ನೂ ಚಿಕ್ಕವಳು ಆಂಟಿ"
"ಚಿಕ್ಕವಳು ಎಂದರೆ...?!"
"ಲಾಸ್ಟ್ ವೀಕ್ ಅವಳು ಹುಟ್ಟಿದ್ದು ಆಂಟೀ" ಎಂದು ಹೇಳುತ್ತಾ ಪುನ: ನಕ್ಕ.
ಶ್ಯಾಮಲಾಳಿಗೆ ಮತ್ತರಿವಾಯಿತು ಪ್ರದೀಪ್‍ನ ತಾಯಿ ಹೆರಿಗೆ ಬಾಣಂತನಕ್ಕೆಂದು ತವರಿಗೆ ಹೋಗಿದ್ದಾಳೆಂದು.
"ಎಲ್ಲಿ ನಿನ್ನ ಪುಸ್ತಕಗಳನ್ನೆಲ್ಲಾ ಬ್ಯಾಗಿನಿಂದ ತೆಗೆ... ಪಾಠ ಶುರು ಮಾಡೋಣ" ಎನ್ನುತ್ತಾ ಹಣೆಯಲ್ಲಿ ಮೂಡಿದ್ದ ಬೆವರೊರೆಸಿಕೊಂಡಳು ಶ್ಯಾಮಲ.

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.

"ಜೀವನ ದೀಪ" - ನನ್ನ ಕಥಾಸಂಕಲನದ (ಶೀರ್ಷಿಕೆಯ) ಒಂದು ಸಣ್ಣ ಕಥೆ

ಜೀವನ ದೀಪ
ಮೈಸೂರು ಬಸ್ ನಿಲ್ದಾಣದಲ್ಲಿ ಮಂಗಳೂರಿಗೆ ರಾತ್ರಿ ಹತ್ತು ಗಂಟೆಗೆ ಸರಿಯಾಗಿ ಹೊರಡುವ ಬಸ್ಸು ನಿಂತಿತ್ತು. ಸೂಪರ್ ಡಿಲಕ್ಸ್ ಬಸ್ ಅದು. ಬಸ್ಸಿಗೆ ಹತ್ತಿ, ಟಿಕೆಟ್ ಹಿಡಿದು ನೋಡುತ್ತಾ ತನ್ನ ಸೀಟಿನ ಸಂಖ್ಯೆ ಹದಿನೈದು, ವಿಂಡೋ ಸೈಡ್ ಎಂದು ಮತ್ತೆ ಮತ್ತೆ ದೃಢಪಡಿಸಿಕೊಂಡು ಸುಮಾರು ಇಪ್ಪತ್ತೆರಡು ಇಪ್ಪತ್ಮೂರು ವರ್ಷದ ಹುಡುಗಿಯೊಬ್ಬಳು ತನ್ನ ಸಂಖ್ಯೆಯ ಸೀಟಿನಲ್ಲಿ ಬಂದು ಕುಳಿತುಕೊಂಡಳು. ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಟೀಶರ್ಟ್ ಧರಿಸಿದ್ದ, ಮೈ ಕೈ ತುಂಬಿಕೊಂಡಿದ್ದ ಇವಳನ್ನು ಬಸ್ಸಿನಲ್ಲಿ ಅನೇಕ ಕಣ್ಣುಗಳು ನೋಡಿದವು. ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವಂತಹ ಮೋಹಕ ಚೆಲುವು ಅವಳಲ್ಲಿ ಮನೆಮಾಡಿತ್ತು.ಎಲ್ಲರಲ್ಲೂ ’ಇವಳೊಬ್ಬಳೇ ರಾತ್ರಿ ಪ್ರಯಾಣಿಸುತ್ತಿರುವಳಲ್ಲವೇ?’ಎನ್ನುವ ಪ್ರಶ್ನೆ ಎದ್ದಿತು. ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಕೆಲವರಿಗೆ, "ನನ್ನ ಸೀಟು ಆಕೆಯ ಪಕ್ಕದಲ್ಲಿದ್ದಿದ್ದರೇ..." ಎನ್ನುವ ಆಸೆಯೂ ಕಾಡಿತು. ಅವಳೊಡನೆ ಕುಳಿತುಕೊಳ್ಳುವ ಭಾಗ್ಯವಂತನಾರೋ ಅಥವಾ ಯಾರಾದರೂ ಮಹಿಳೆಯೇ ಕುಳಿತುಕೊಳ್ಳುತ್ತಾಳೋ ಎಂದು ತಿಳಿದುಕೊಳ್ಳುವ ಹುಚ್ಚು ಚಪಲವೂ ಉಂಟಾಯಿತು. ಬಸ್ಸಿನ ಮೆಟ್ಟಿಲು ಹತ್ತಿ ಬಂದವರನ್ನೆಲ್ಲಾ ಅವರೆಲ್ಲಿ ಕುಳಿತುಕೊಳ್ಳುತ್ತಾರೆಂದು ಎಲ್ಲರ ಕಣ್ಣುಗಳೂ, ಕುತ್ತಿಗೆಗಳೂ ವಿಚಾರಿಸಿಕೊಳ್ಳುತ್ತಿದ್ದವು.
     ಒಂಭತ್ತು ಗಂಟೆ ಐವತ್ತೈದು ನಿಮಿಷವಾದರೂ ಅವಳ ಪಕ್ಕದ ಸೀಟಿಗೆ ಯಾರೂ ಬರಲೇ ಇಲ್ಲ. ಇದ್ದ ಐದು ನಿಮಿಷಗಳೂ ಕಳೆದವು. ಬಸ್ಸಿನ್ನೇನು ಚಲಿಸಬೇಕು, ಅಷ್ಟರಲ್ಲೇ ಒಬ್ಬ ಸುಂದರ ಯುವಕ ಬ್ರೀಫ್‍ಕೇಸು, ಮತ್ತೊಂದು ಹ್ಯಾಂಡ್ ಬ್ಯಾಗಿನೊಂದಿಗೆ ಬಸ್ಸನ್ನೇರಿ ಬಂದು, "ನಂಬರ್ ಸಿಕ್ಸ್‍ಟೀನ್" ಎಂದು ತುಸು ಜೋರಾಗಿಯೇ ಹೇಳಿ ಟಿಕೇಟನ್ನು ಮಡಿಸಿ ಕಿಸೆಯೊಳಗಿಡುತ್ತಾ ಹುಡುಗಿಯ ಪಕ್ಕ ಆಸೀನನಾದ. ನೋಡಲು ಒಳ್ಳೆ ಸಿನೆಮಾ ಹೀರೋನಂತೆಯೇ ಕಾಣುತ್ತಿದ್ದ ಇವನನ್ನು ನೋಡಿ ಇತರ ಯುವಕರಿಗೆ ಅಸೂಯೆಯಾಯಿತು.
     ಬಸ್ಸಿನ ನಿರ್ವಾಹಕ ಹುಡುಗನ ಹತ್ತಿರ ಬಂದು ಟಿಕೇಟ್ ಕೇಳುವಾಗ ಆತ ಕೊಡುತ್ತಾ, "ಮಂಗಳೂರಿಗೆ ಎಷ್ಟೊತ್ತಿಗೆ ರೀಚ್ ಆಗುತ್ತೆ ಸರ್?" ಎಂದು ಕೇಳಿದ.
"ಮಾರ್ನಿಂಗ್ ಫೈವ್ ತರ‍್ಟಿ ಆರ್ ಸಿಕ್ಸ್" ಎಂದನಾತ.
"ನೀವೂ ಮಂಗಳೂರಿಗಲ್ಲವೇ ಮೇಡಂ?" ಎಂದು ಕೇಳಿದ ನಿರ್ವಾಹಕ ಹುಡುಗಿಯಲ್ಲಿ.
ಹೌದೆಂದು ತಲೆಯಾಡಿಸುತ್ತಾ, "ಸರ್ ರಿಸರ್ವೇಷನ್ ಮಾಡಿಸುವಾಗ್ಲೇ ನಾನು ಲೇಡೀಸ್ ಪಕ್ಕದಲ್ಲೇ ಸೀಟು ಕೊಡಿಸಲು ಹೇಳಿದ್ದೆ. ನಿಮ್ಮ ಸೀಟು ಲೇಡೀಸ್ ಪಕ್ಕದ್ದೇ ಅಂದಿದ್ದರು ಕೌಂ‍ಟರ‍್ನಲ್ಲಿ...ಆದರೆ..." ಎನ್ನುತ್ತಾ ತನ್ನ ಪಕ್ಕದಲ್ಲಿ ಕುಳಿತಿದ್ದ ಆ ಯುವಕನನ್ನೊಮ್ಮೆ ನೋಡುತ್ತಾ ತಡವರಿಸಿದಳು.
"ಬಸ್ಸಿನಲ್ಲಿ ಇದೆಲ್ಲಾ ಕಾಮನ್ ಮೇಡಂ, ರಿಸರ್ವೇಶನ್ ಮಾಡಿಸುವಾಗ ಎಲ್ಲಾ ಸಲವೂ ಲೇಡೀಸ್ ಪಕ್ಕದಲ್ಲೇ ಸೀಟು ಸಿಗುತ್ತೆ ಅಂತ ಹೇಳಾಲಿಕ್ಕಾಗುವುದಿಲ್ಲ. ಅಡ್ಜಸ್ಟ್ ಯುವರ‍್ಸೆಲ್ಫ್" ಎಂದು ಹೇಳಿ ಕಂಡಕ್ಟರ್ ಜಾಗ ಖಾಲಿ ಮಾಡಿದ.
ಯುವಕ ಯುವತಿಯನ್ನೊಮ್ಮೆ ನೋಡಿ, "ಮೇಡಂ ಇಫ್ ಯು ಫೀಲ್ ಅನ್‍ಕಂಫರ್‌ಟೇಬಲ್, ಐ ಕ್ಯಾನ್ ಟೇಕ್ ಎನದರ್ ಸೀಟ್ ಅಂಡ್ ಮೇಕ್ ಎ ಲೇಡಿ ಸಿಟ್ ಹಿಯರ್"ಎಂದ.
ಹುಡುಗ ಒಳ್ಳೆಯವನಿರಬೇಕೆಂದುಕೊಂಡು ಹುಡುಗಿ, "ನೋ ಪ್ರಾಬ್ಲಂ" ಎಂದು ಹಲ್ಲುಕಿಸಿದಳು.
ಇವನಿಂದ ಮಂಗಳೂರಿನವರೆಗೆ ಯಾವುದೇ ತೊಂದರೆ ಬರಲಿಕ್ಕಿಲ್ಲವೆಂದುಕೊಂಡು ಕಿಟಕಿಯ ಗಾಜಿನಿಂದ ಹೊರಗೆ ನೋಡುತ್ತಾ ಕುಳಿತಳು. ಒಂದೈದು ನಿಮಿಷಗಳು ಕಳೆದ ನಂತರ ಬಸ್ಸಿನ ಒಳಗಡೆಯ ಲೈಟುಗಳನ್ನೆಲ್ಲಾ ಚಾಲಕ ಆಫ್ ಮಾಡಿದ. ಬಸ್ಸಿನ ಒಳಗಡೆ ಕತ್ತಲಾವರಿಸಿತು. ಹುಡುಗಿಯ ಎದೆ ಒಮ್ಮೆಲೆ ’ಝಗ್’ ಎಂದಿತು. ಬಸ್ಸು ವೇಗವಾಗಿ ಸಾಗುತ್ತಿತ್ತು. ಮೈಸೂರನ್ನು ದಾಟಿತ್ತು. ಅಲ್ಲಲ್ಲಿ ಸ್ಟ್ರೀಟ್ ಲೈಟುಗಳು ಹೊತ್ತಿಕೊಂಡಿರುವ ಕಂಬಗಳು ಸಿಗುವಾಗಲಷ್ಟೇ ಬಸ್ಸಿನ ಒಳಗೂ ಒಮ್ಮೆಲೆ ಪ್ರಕಾಶವಾಗುತ್ತಿತ್ತು. ಆಗೆಲ್ಲಾ ಆ ಯುವತಿ ಯುವಕನನ್ನು ನೋಡುತ್ತಿದ್ದಳು. ಪ್ರತೀ ಸಲ ನೋಡಿದಾಗಲೂ ಕಣ್ಣು ಮುಚ್ಚಿ ಸೀಟಿಗೆ ತಲೆಯೊರಗಿಸಿದ್ದನಾತ. ನಿಟ್ಟುಸಿರುಬಿಟ್ಟು ತಾನೂ ನಿದ್ದೆ ಹೋದಳು.
"ಕುಶಾಲನಗರ ಇಳಿಯೋರು ಯಾರಾದ್ರಿದ್ದೀರಾ ಸಾರ್? ಕುಶಾಲನಗರ ಬಂತು...ಇಳ್ಕೊಳ್ಳಿ" ಎಂದು ಕಂಡಕ್ಟರ್ ಬೊಬ್ಬೆ ಹಾಕುವಾಗಲೇ ಆಕೆಗೆ ಎಚ್ಚರವಾದದ್ದು. ಕಣ್ಣು ಬಿಡುವಾಗ ಬಸ್ಸಿನೊಳಗಿನ ಒಂದೆರಡು ಲೈಟುಗಳು ಉರಿಯುತ್ತಿತ್ತು. ಅವಳು ಯುವಕನನ್ನು ನೋಡಿದಳು. ನಿದ್ರೆಯಿಂದ ಎಚ್ಚೆತ್ತು ತುಂಬಾ ಹೊತ್ತಾದಂತಿತ್ತು ಅವನ ಮುಖ. ಏನಾದರೂ ಆತ ತನ್ನೊಡನೆ ಮಾತನಾಡಬಹುದೇ ಎಂದು ಯೋಚಿಸಿದಳು. ಆದರೆ ಊಹೂಂ...ಇಲ್ಲ. ಅಲ್ಲಿಂದ ಮಡಿಕೇರಿಯವರೆಗೂ ಅವಳು ಎಚ್ಚರವಾಗಿಯೇ ಇದ್ದಳು. ಮಡಿಕೇರಿಯಲ್ಲಿ ’ಟೀ’, ’ಕಾಫಿ’ಗೆಂದು ಬಸ್ಸನ್ನು ನಿಲ್ಲಿಸಿರುವಾಗ ಯುವಕ ಬಸ್ಸಿನಿಂದಿಳಿದು ’ಟೀ’ ಕುಡಿಯಲು ಹೋದ. ಹೋಗುವಾಗ ತನ್ನ ಹ್ಯಾಂಡ್‍ಬ್ಯಾಗನ್ನು ತಾನು ಕುಳಿತಿದ್ದ ಸೀಟಿನ ಮೇಲಿರಿಸಿ ಹೋಗಿದ್ದ. ಇದ್ದಕ್ಕಿದ್ದಂತೆ ಯುವತಿಯ ಕಣ್ಣು ಆ ಬ್ಯಾಗಿನಲ್ಲಿದ್ದ ಲೇಬಲ್ ಮೇಲೆ ಬಿತ್ತು. "ಜೀವನ್" ಎಂದು ಓದಿದಾಗ ಅವಳಲ್ಲಿ ಟೆಂಪರೇಚರ್ ಒಮ್ಮೆಲೇ ಏರಿದಂತೆ ಅನುಭವವಾಗಿ ಅವಳದನ್ನು ತಡೆದುಕೊಂಡಳು. ತಾನು ನಾಳೆ ಮಂಗಳೂರಿನ ಹೊಟೇಲಿನಲ್ಲಿ ಭೇಟಿಯಾಗುವವನ ಹೆಸರು ಕೂಡಾ "ಜೀವನ್" ಎಂದುಕೊಂಡಳು. ಅಷ್ಟರಲ್ಲಿ ’ಟೀ’ ಮುಗಿಸಿ ಯುವಕ ಬಂದು ಸೀಟಿನಲ್ಲಿ ಕುಳಿತುಕೊಂಡ.
ಬಸ್ಸು ಹೊರಟ ನಂತರ ಯುವತಿಯ ಆಲೋಚನೆ ಹಿಂದಕ್ಕೋಡಿತು. ಒಂದು ತಿಂಗಳ ಹಿಂದೆ ಕನ್ನಡ ಮಾಸಪತ್ರಿಕೆಯಲ್ಲಿ ವೈವಾಹಿಕ ಅಂಕಣವನ್ನು ಓದುತ್ತಿದ್ದಳವಳು. ಅದರಲ್ಲಿ ಒಂದು ಜಾಹೀರಾತು ಹೀಗಿತ್ತು: "ವಧು ಬೇಕಾಗಿದೆ, ಹಿಂದು ಸ್ಫುರದ್ರೂಪಿ ಯುವಕ, ೫.೯’, ೨೮ ವರ್ಷ ಪ್ರಾಯ, ಬ್ಯಾಂಕಿನಲ್ಲಿ ಉದ್ಯೋಗ - ೨೫/೨೬ ವರ್ಷದ ವಧು ಬೇಕು. ಜಾತಿ ಅಭ್ಯಂತರವಿಲ್ಲ" ಸಂಪರ್ಕಿಸಿ: ಬಾಕ್ಸ್ ನಂಬರ್.೨೮, ವಿವೇಕ್ ಅಡ್ವಟೈಸಿಂಗ್, ಮೈಸೂರು." ಇದನ್ನು ಓದಿದವಳೇ ಆ ಯುವತಿ, ’ನನಗಂತೂ ಯಾರೂ ದಿಕ್ಕು ದೆಸೆ ಇಲ್ಲ. ಅನಾಥಾಶ್ರಮದಲ್ಲಿ ಕಳೆದೆ. ಇನ್ನೂ ಎಷ್ಟು ಸಮಯಾಂತ ಈ ಏಕಾಂಗಿ ಜೀವನ? ಏನೋ ಪುಣ್ಯದಿಂದ ಪಿ.ಯು.ಸಿ ಮುಗಿದ ಕೂಡಲೇ ಪರೀಕ್ಷೆ ಪಾಸು ಮಾಡಿ ಎಲ್.ಐ.ಸಿ ನಲ್ಲಿ ಕೆಲಸ ಪಡೆದುಕೊಂಡೆ. ಇನ್ನು ನನ್ನದೇ ಆದ ಜೀವನ, ನನ್ನ ಸಂಸಾರ ಅಂತ ಒಂದನ್ನು ನಾನೇ ರೂಪಿಸಿಕೊಂಡು ಗಂಡ, ಮನೆ, ಮಕ್ಕಳು, ಉದ್ಯೋಗ...ಆಹಾ ಅದೆಷ್ಟು ಚೆನ್ನ..." ಎಂದುಕೊಂಡು ಹಾಸ್ಟೆಲ್ ವಾರ್ಡನ್ ಬಳಿ ಬಂದು ತನ್ನ ಮನದಾಸೆ ತಿಳಿಸಿದಳು. ಅದಕ್ಕೆ ಆ ವೃದ್ಧೆ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದಳು ಕೂಡಾ.
"ದೀಪಾ, ನಿನ್ನ ಈ ಕನಸು ಕೈಗೂಡಿದರೆ ನನಗದೆಷ್ಟು ಸಂತೋಷ ಗೊತ್ತಾ" ಎನ್ನುತ್ತಾ ದೀಪಾಳನ್ನು ಅಪ್ಪಿದ್ದಳು. ಅವಳ ಅನುಮತಿಯಂತೆ ಅವಳು ಜಾಹಿರಾತಿನ ಹುಡುಗನಿಗೆ ಪತ್ರ ಬರೆದಿದ್ದಳು. ತಾನು ಅನಾಥೆ ಎನ್ನುವುದನ್ನು ಮಾತ್ರ ಬರೆದಿರಲಿಲ್ಲ. ಅವಳ ಪತ್ರ ಅವನಿಗೆ ತಲುಪಿ ಅವನಿಂದಲೂ ಆಕೆಗೊಂದು ಪತ್ರ ಬಂದಿತ್ತು. ಅದರಿಂದ ಆತ ’ಜೀವನ್’ ಎಂಬುವನೆಂದು ಪತ್ರ ಮುಖೇನ ಪರಿಚಯವಾಗಿತ್ತು. ಅವನ ಪತ್ರದಲ್ಲಿ ಆತ,
ದೀಪಾ,
     ನಿಮ್ಮ ಪತ್ರ ತಲುಪಿದೆ. ನೀವು ನಿಮ್ಮ ಒಂದು ಭಾವಚಿತ್ರವನ್ನಾದರೂ ಕಳುಹಿಸಬಾರದಿತ್ತೇ? ಹೋಗಲಿ ಬಿಡಿ, ನಾನು ನಿಮ್ಮನ್ನು ಭೇಟಿಯಾಗಲಿಚ್ಛಿಸುತ್ತೇನೆ...ನಿಮ್ಮ ಊರಿಗೆ ನಿಮ್ಮನ್ನು ಭೇಟಿಯಾಗಲು ನಾನು ಬರುವವನಿದ್ದೇನೆ. ಮಂಗಳೂರಿನ ಹೊಟೇಲ್ ಒಂದರಲ್ಲಿ ಮುಂದಿನ ಭಾನುವಾರ ಭೇಟಿಯಾಗೋಣ..ನೀವೂ, ನಿಮ್ಮ ತಂದೆ ತಾಯಿಯರೊಂದಿಗೆ ಬನ್ನಿರಿ...ಅಥವಾ ನಿಮಗೆ ಆ ದಿನ ಸೂಕ್ತವಲ್ಲವಾದರೆ ಮತ್ತು ಭೇಟಿ ಮಾಡಲು ಯಾವಾಗ, ಎಲ್ಲಿ ಸೂಕ್ತವೋ ಬರೆದು ತಿಳಿಸಿರಿ" ಎಂದು ಬರೆದಿದ್ದನು. ಅವನ ಆ ಪತ್ರಕ್ಕೆ ತನಗೂ ಅದೇ ದಿನ ಸೂಕ್ತವೆಂದು, ಹೊಟೇಲ್ ಒಂದರ ಹೆಸರನ್ನು ಸೂಚಿಸಿ ಬೆಳಗ್ಗೆ ೧೦ ಗಂಟೆಗೆ ಭೇಟಿಯಾಗೋಣ ಎಂದು ಮರುತ್ತರ ಬರೆದಿದ್ದಳವಳು.
                                                              .................
     ಬಸ್ಸಿನ ಚಾಲಕ ದೊಡ್ಡ ಬ್ರೇಕ್ ಹಾಕಿ ಕಲ್ಲುಗುಂಡಿ ಎಂಬ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸುವಾಗಲೇ ಯುವತಿ ವಾಸ್ತವಕ್ಕೆ ಬಂದದ್ದು. ಅವಳು ಕೈಗೆ ಕಟ್ಟಿದ್ದ ಬ್ರೇಸ್ಲೆಟ್ ಬಿಚ್ಚಿಕೊಂಡು ಯುವಕನ ಎಡಗಾಲಿನ ಹತ್ತಿರ ಬಿತ್ತು. ಬಸ್ಸಿನೊಳಗೆ ಲೈಟುಗಳೆಲ್ಲಾ ಉರಿಯತೊಡಗಿದವು. ಯುವಕ ಆ ಬ್ರೇಸ್‍ಲೆಟನ್ನು ಎತ್ತಿ ಅವಳ ಕೈಗೆ ಕೊಡುತ್ತಾ ಅದರ ಪಟ್ಟಿಯಲ್ಲಿದ್ದ ಹೆಸರನ್ನು ಗಮನಿಸಿದ. ’ದೀಪ’ ಹೆಸರು ಅವನಲ್ಲೂ ಸಂಚಲನ ಮೂಡಿಸಿತ್ತು. ಮೊದಲ ಬಾರಿಗೆ ಆಕೆಯ ಮುಖವನ್ನೊಮ್ಮೆ ನೋಡಿದ. ಯುವತಿ ಕೂಡಲೇ ಅದನ್ನು ಗಮನಿಸಿದಳು. ಆ ಜಾಹಿರಾತು ಕೊಟ್ಟವನು ಇವನಲ್ಲದೇ ಬೇರೆ ಯಾರೂ ಅಲ್ಲ ಎಂದು ನಿಶ್ಚಯವಾಗಿ ಅರಿತಳು. ಜೋರಾಗಿ ಮೇಲೆ ಕೆಳಗೆ ಹೋಗುತ್ತಿರುವ ಉಸಿರನ್ನು ತಡೆದುಕೊಂಡಳು.
"ನೋಡಿ ಸರ್, ಟೀ, ಕಾಫಿಗೆ ಐದ್ನಿಮಿಷ ಟೈಂ ಇದೆ" ಎನ್ನುತ್ತಾ ಕಂಡಕ್ಟರ್ ಬಸ್ಸಿನಿಂದಿಳಿದ. ಯುವಕ ಇಳಿಯಲಿಲ್ಲ. ಅವನಿಗೆ ’ದೀಪ’ ಹೆಸರು ಕುತೂಹಲ ಮೂಡಿಸಿತ್ತು. ಮತ್ತಂದುಕೊಂಡ, ’ಆ ದೀಪನ ಊರು ಮಂಗಳೂರು. ಅವಳು ಹೇಗೆ ಇಲ್ಲಿರಲಿಕ್ಕೆ ಸಾಧ್ಯ? ಅದೂ ನಾಳೆ ಭೇಟಿಯಾಗುವವಳು ಈ ರಾತ್ರಿ ಬಸ್ಸಿನಲ್ಲಿರಲು ಸಾಧ್ಯವೇ? ಛೇ ಇಲ್ಲ ಇಲ್ಲ...ಜಗತ್ತಿನಲ್ಲಿ ಎಷ್ಟು ’ದೀಪ’ಎನ್ನುವ ಹುಡುಗಿಯರಿದ್ದಾರೋ ಏನೋ...?! ಅಂದರೂ ವಿಚಾರಿಸುವುದರಲ್ಲೇನು ತಪ್ಪು? ವಿಚಾರಿಸಿಯೇ ಬಿಡೋಣ...ಏನಾದರೂ ಆಗಲಿ ಎಂದುಕೊಂಡು,
" ನೀವು ಮಂಗಳೂರಿಗಾ?, ಮಂಗಳೂರಿನವರಾ?" ಕೇಳಿದ ಮೆಲ್ಲಗೆ ಯುವತಿಯನ್ನು.
"ಹೌದು, ನಿಮ್ಮ ಊರು?"
"ಮೈಸೂರು"
"ಓದುತ್ತಿದ್ದೀರಾ?" ಕೇಳಿದ ಯುವಕ
"ಇಲ್ಲ ಎಲ್.ಐ.ಸಿ ನಲ್ಲಿ ಕೆಲಸ ಮಾಡುತ್ತಿದ್ದೇನೆ"
"ನಿಮ್ಮ ಹೆಸರು?" ಕುತೂಹಲದಿಂದ ಕೇಳಿದ ಯುವಕ.
"ದೀಪಾ"
ಇಷ್ಟು ವಿವರ ಆಕೆಯಿಂದ ಸಿಕ್ಕಿದ್ದೇ ಯುವಕನಿಗೆ ’ಇವಳನ್ನೇ ತಾನು ನಾಳೆ ಮಂಗಳೂರಿನ ಹೊಟೇಲಿನಲ್ಲಿ ಭೇಟಿಯಾಗಲಿರುವ ಹುಡುಗಿ’ ಎಂದು ತಿಳಿದುಹೋಯಿತು."ನಾನು ಜೀವನ್ ಅಂತ...ಮೈಸೂರಿನಲ್ಲಿ ಬ್ಯಾಂಕ್ ಉದ್ಯೋಗಿ... ನಿಮ್ಮನ್ನೊಂದು ಪ್ರಶ್ನೆ ಕೇಳಬಹುದೇ?"
"ಏನು?"
"ನೀವೇ ತಾನೇ ನನ್ನ ವೈವಾಹಿಕ ಜಾಹಿರಾತನ್ನು ನೋಡಿ ಅದಕ್ಕೆ ಉತ್ತರಿಸಿದವರು?"
"ಹೌದು" ಎಂದಳವಳು ತಲೆ ತಗ್ಗಿಸುತ್ತಾ. ಅವಳಿಗೆ ನಾಚಿಕೆಯೂ, ಹೆದರಿಕೆಯೂ ಆಗಿ ದೇಹದಲ್ಲಿ ಕಂಪನ ಶುರುವಾಗಿ ಬೆವರತೊಡಗಿದಳು.
ಯುವಕ ತನ್ನ ಮಾತನ್ನು ಮುಂದುವರಿಸಿದ.
"ನಾನೇ ಆ ಜೀವನ್...ನಾನು ಹೀಗೆ ...ನಾವಿಬ್ಬರೂ ಬಸ್ಸಿನಲ್ಲಿ ಸಂಧಿಸುವೆವೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ."
"....."
"ಏನಾದ್ರೂ ಮಾತನಾಡಿ...."
"....."
"ನೀವೊಬ್ಬರೇ ಪ್ರಯಾಣಿಸುತ್ತಿದ್ದೀರಾ? ನಿಮ್ಮ ತಂದೆ, ತಾಯಿ..."
"ಹೌದು ಒಬ್ಬಳೇ..."
"ನಿಮ್ಮ ಮನೆ ತಂದೆ ತಾಯಿ ಬಗ್ಗೆ ತಿಳಿಸಿ..."
"....."
ಏಕೆ ಮೌನ? ನಾಳೆ ಮಾತನಾಡಬೇಕಾದ ವಿಷಯವನ್ನು ಈಗಲೇ ಮಾತನಾಡಿದ್ದಕ್ಕೆ ಬೇಸರವೇ? ಅಥವಾ ಈ ವೇಳೆಯಲ್ಲಿ ಕೇಳಬಾರದಿತ್ತೇ?"
"ಇಲ್ಲ ಹಾಗೇನಿಲ್ಲ"
"ನೋಡಿ ಮಿಸ್ ದೀಪಾ. ನಾನೊಬ್ಬ ಅನಾಥ. ಅಮ್ಮ, ಅಪ್ಪ ಯಾರೋ ನಾನರಿಯೆ...ಮಗುವಾಗಿದ್ದ ನನ್ನನ್ನು ದೇವಸ್ಥಾನದ ಆವರಣದಲ್ಲಿ ಹೆತ್ತವರು ಬಿಟ್ಟು ಹೋಗಿದ್ದರು...ಯಾರೋ ಪುಣ್ಯಾತ್ಮರು ಅನಾಥಾಶ್ರಮಕ್ಕೆ ಸೇರಿಸಿದರಂತೆ. ನಂತರ ಅಲ್ಲೇ ಬೆಳೆದೆ. ಅಲ್ಲಿ ಪಿ.ಯು.ಸಿ ವರೆಗೆ ಓದಿಸಿದರು. ನನ್ನ ಅದೃಷ್ಠದಿಂದ ಬರೆದ ಬ್ಯಾಂಕ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಕೆಲಸವೂ ಸಿಕ್ಕಿತು. ಇದೇ ನನ್ನ ಜೀವನದಲ್ಲಿನ ಮೊದಲ ಸಂತಸದ ಘಳಿಗೆ. ಇನ್ನು ನನ್ನದೇ ಆದ ಒಂದು ಬದುಕನ್ನು ರೂಪಿಸಿಕೊಳ್ಳುವ ಆಸೆಯಿಂದ ಮದುವೆಯಾಗಲು ಹೊರಟಿರುವೆ. ಮೈಸೂರಿನಲ್ಲೇ ಸೈಟು, ಮನೆ ಮಾಡಿದ್ದೇನೆ. ಓಡಾಡಲು ಒಂದು ಸ್ಕೂಟರ್ ಇದೆ...ಅಪ್ಪ, ಅಮ್ಮ, ಬಂಧು, ಬಳಗ ಇರುವ ಹುಡುಗಿಯರು ಯಾರೂ ನನ್ನನು ಮದುವೆಯಾಗಲು ಒಪ್ಪುವುದಿಲ್ಲ...ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟೆ...ಇವಿಷ್ಟು ಇರುವ ವಿಷಯ. ಇನ್ನು ಮುಂದಿನ ಮಾತುಗಳು ನಿಮ್ಮದು..." ಎನ್ನುತ್ತಿದ್ದಂತೆ ಯುವತಿಗೆ ಅಳುವನ್ನು ತಡೆದುಕೊಳ್ಳಲಾಗಲಿಲ್ಲಿ.
"ರೀ....ದೀಪಾ ಯಾಕೇ? ಯಾಕಳುತ್ತಿದ್ದೀರಾ? ನಾನು ನನ್ನ ಬಗ್ಗೆ ಹೇಳಿದ್ದು ಖುಷಿಯಾಗಲಿಲ್ಲವೇ? ಏನಾದರೂ ಪ್ರಮಾದವಾಯಿತೇ?" ಎಂದು ಕೇಳಿದ ಯುವಕ.
"ಇಲ್ಲ ಖಂಡಿತಾ ಇಲ್ಲ ಜೀವನ್‍ರವರೇ. ದು:ಖ, ಸಂತೋಷ ಇವೆರಡರ ಮಿಶ್ರಣವೇ ಈ ಕಣ್ಣೀರು. ನಾನೂ ನಿಮ್ಮಂತೆಯೇ ಅನಾಥಾಶ್ರಮದಲ್ಲಿ ಬೆಳೆದ, ತಂದೆ, ತಾಯಿ ಯಾರು ಎಂದು ಅರಿಯದ ದುರ್ದೈವಿ" ಎಂದು ಬಿಕ್ಕಿದಳು.
ಯುವಕ ತನಗರಿವಿಲ್ಲದಂತೆ ಅವಳನ್ನು ತನ್ನ ಭುಜದಲ್ಲಿ ಒರಗಿಸಿಕೊಂಡು ತಲೆ ನೇವರಿಸಿದ...ತನ್ನ ಅನಾಥ ಬದುಕಿನ ಅನುಭವ ಅವನನ್ನು ಹಾಗೆ ಮಾಡಿಸಿತು. ಆಗಲೇ ಬಸ್ಸು ಪುತ್ತೂರಿಗೆ ತಲುಪಿತ್ತು. ಬಸ್ಸಿನೊಳಗೆ ಲೈಟುಗಳು ಮತ್ತೆ ಉರಿಯಲು ಪ್ರಾರಂಭವಾದವು. ಇಬ್ಬರೂ ಮಾತನಾಡುತ್ತಲೇ ಇದ್ದರು. ಬಸ್ಸಿನ ಕೆಲವರು ಅಪರಿಚಿರರಾದ ಇವರಿಬ್ಬರೂ ಮಾತನಾಡುತ್ತಿರುವುದನ್ನು ನೋಡಿ, "ಝಮಾನಾ ಬದಲ್ ಗಯಾ" ಎಂದು ವ್ಯಂಗ್ಯವಾಗಿ ಹೇಳಿ ಹೊಟ್ಟೆ ಉರಿಸಿಕೊಂಡರು.
ಇವರ ಹಿಂದಿನ ಸೀಟಿನ ಮಧ್ಯ ಪ್ರಾಯದವರೊಬ್ಬರು ಇವರಿಬ್ಬರನ್ನೂ ಕಲ್ಲುಗುಂಡಿಯಿಂದಲೇ ಕೆಟ್ಟ ಕುತೂಹಲದಿಂದ ಗಮನಿಸುತ್ತಲೇ ಇದ್ದರು.
"ಮಂಗಳೂರಿಗೆ ಬಸ್ಸು ಮುಟ್ಟುವಾಗ ಇಬ್ಬರಿಗೆ ಮದುವೆಯೂ ಆಗಿ ಬಿಡುತ್ತದೆ" ಎಂದು ಪಕ್ಕದಲ್ಲಿ ಕುಳಿತವರ ಹತ್ತಿರ ವ್ಯಂಗ್ಯವಾಡಿದರು.
ಇವರಾಡುವ ಯಾವುದೇ ಮಾತುಗಳು ಅವರಿಬ್ಬರಿಗೆ ಕೇಳಿಸಲೇ ಇಲ್ಲ. ನೋಡುತ್ತಿರುವುದೂ ತಿಳಿಯಲಿಲ್ಲಿ. ಎಲ್ಲರೂ ಇವರಿಬ್ಬರ ಬಗ್ಗೆ ಗುಸುಗುಸು ಮಾತಾಡಿಕೊಂಡರು.
ಮಂಗಳೂರಿಗೆ ಇನ್ನೊಂದು ಗಂಟೆ ಪ್ರಯಾಣ. ಬಸ್ಸು ಹೊರಟಿತು. ಮತ್ತೆ ಪುನ: ಬಸ್ಸಿನೊಳಗೆ ಕತ್ತಲು. ಯುವಕ ಯುವತಿ ಇಬ್ಬರಿಗೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಇಬ್ಬರೂ ತಮ್ಮ ತಮ್ಮ ನಿರ್ಧಾರವನ್ನು ಪರಸ್ಪರ ಹೇಳಿಕೊಳ್ಳಲೇ ಇಲ್ಲ. ಮೌನವೇ ಅವರಿಬ್ಬರು ಮುಂದೆ ಸತಿಪತಿಗಳಾಗುವರೆಂದು ಹೇಳಿತ್ತು.
ಮೌನ ಮುರಿದ ಯುವಕ, "ಅದು ಸರಿ ದೀಪಾರವರೇ, ನೀವು ಮೈಸೂರಿಗೆ ಬರಲು ಕಾರಣ?" ಕೇಳಿದ
"ನನ್ನ ಸಹೋದ್ಯೋಗಿ ಹಾಗೂ ಗೆಳತಿಯ ಮದುವೆಗೆಂದು ಬಂದಿದ್ದೆ. ನಾಳೆ ನಾವು ಭೇಟಿಯಾಗುವ ದಿನವಾದ್ದರಿಂದ ರಾತ್ರಿಯ ಈ ಪ್ರಯಾಣ ಅನಿವಾರ್ಯವಾಗಿತ್ತು"
ಮತ್ತೆ ಮೌನ.
ಯುವತಿಗೆ ಜೀವನ್‍ನ ಪರಿಚಯದಿಂದಾಗಿ ಯಾವುದೋ ಒಂದು ರೀತಿಯ ಬಲ ಸಿಕ್ಕಂತಾಗಿ ’ತಾನೀಗ ಎಷ್ಟು ಭದ್ರ’ ಎಂದು ಮನಸಿನಲ್ಲಿಯೇ ಖುಷಿಪಟ್ಟಳು.
ಹಾಗೂ ಹೀಗೂ ಬಸ್ಸು ಮಂಗಳೂರು ಬಸ್ಸು ನಿಲ್ದಾಣಕ್ಕೆ ಬಂದು ತಲುಪಿತು. ಪ್ರಯಾಣಿಕರೆಲ್ಲಾ ಇಳಿಯುತ್ತಾ ಇವರಿಬ್ಬರನ್ನು ನೋಡಿಕೊಂಡು ಇಳಿಯುತ್ತಿದ್ದರು. ಎಲ್ಲರೂ ಇಳಿದಾದ ನಂತರ ಕೊನೆಯಲ್ಲಿ ಇವರಿಬ್ಬರು ಇಳಿದರು. ಯುವತಿಯ ಲಗ್ಗೇಜು ಬ್ಯಾಗನ್ನು ಯುವಕ ಹೆಗಲಿಗೇರಿಸಿಕೊಂಡ. ಬಸ್ಸಿನಿಂದಿಳಿದ ಕೆಲವರು ಇವರಿಬ್ಬರನ್ನು ಗಮನಿಸುವ ಸಲುವಾಗಿಯೇ ಕೆಳಗೆ ನಿಂತು ಕಾಯುತ್ತಿದ್ದರು. ಇವರಿಬ್ಬರು ಬಸ್ಸಿನಿಂದಿಳಿದು ಒಟ್ಟಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದಂತೆ ಒಬ್ಬ "ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್ ಅಂತಾರೆ. ಆದರೆ ಈಗ ಬಸ್ಸುಗಳಲ್ಲಿ ಕೂಡಾ ಆಗುತ್ತದೆ... ಇನ್ನೊಬ್ಬರ ವಿಷಯ ನಮಗ್ಯಾಕೆ...ಕಮಾನ್ ಫ್ರೆಂಡ್" ಎಂದು ವ್ಯಂಗ್ಯವಾಗಿ ಹೇಳುತ್ತಾ ತನ್ನ ಗೆಳೆಯನ ಹೆಗಲಿಗೆ ಕೈ ಹಾಕಿಕೊಂಡು ತನ್ನ ದಾರಿ ಹಿಡಿದನು. ಮುಂದೆ ಸಾಗುತ್ತಿದ್ದಂತೆ ಯುವಕ ಹೇಳಿದ, "ನನ್ನ ಜೀವನದ ದೀಪವಾಗಿ ನೀವು ಬಂದಿರಿ"
"ಶ್...ನನ್ನನ್ನು ’ನೀವು’ ಎನ್ನಬೇಡಿ. ’ನೀನು’ ಎನ್ನಿರಿ. ನಾನಿನ್ನು ನಿಮ್ಮ ಜೀವನದ ದೀಪವಲ್ಲವೇ" ಎಂದು ಒಲವಿನಿಂದ ನುಡಿದಳು ಯುವತಿ.
ಬೆಳಗಿನ ನಸುಬೆಳಕಿನಲ್ಲಿ ಜೀವನ್, ದೀಪಾ ಇಬ್ಬರೂ ಎಲ್ಲಿಗೆಂದು ತಿಳಿಯದೇ, ಅದರ ಪರಿವೆಯೂ ಇಲ್ಲದೇ ಹೆಜ್ಜೆ ಹಾಕುತ್ತಿದ್ದರು.

ತ್ರಿವೇಣಿ ವಿ ಬೀಡುಬೈಲು


ಮಂಗಳೂರು

"ಮರೆವಿನ ಅವಾಂತರ"- ಮುಂಬಯಿಯ "ಅಮೂಲ್ಯ" ಪತ್ರಿಕೆಯವರು ನಡೆಸಿದ ರಾಜ್ಯ ಮಟ್ಟದ ಹಾಸ್ಯ ಬರಹ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಲೇಖನ.

ಮರೆವಿನ ಅವಾಂತರ

"ಮರೆಗುಳಿತನ" ಎಂಬುದು ಎಲ್ಲರಿಗೂ ಪರಿಚಿತವೇ. ಏಕೆಂದರೆ ಮಾನವನಿಗೂ, ಅದಕ್ಕೂ ಬಹಳ ನಂಟು. ಸಾಮಾನ್ಯವಾಗಿ ಎಲ್ಲರಿಗದು ಒಂದಲ್ಲಾ ಒಂದು ಬಾರಿಯಾದರೂ ನಕ್ಷತ್ರಿಕನಂತೆ ಕಾಡಿ ಕೊನೆಗೆ ತ್ರಿಶಂಕು ಸ್ಥಿತಿಗೆ ತಲುಪಿಸಿದ ಪ್ರಸಂಗವಿರುತ್ತದೆ. ಸ್ಮಾಲ್, ಟೀನ್, ಮಿಡ್ಲ್, ಓಲ್ಡ್ ಏಜ್ ಎಂಬ ಪರಿಜ್ಞಾನವೂ ಇಲ್ಲದೇ ಅದು ಬಾಧಿಸುವುದುಂಟೇ ಉಂಟು!
     ಆಫೀಸಿಗೆ ಹೋಗಿ ಫೈಲುಗಳೋ, ಪತ್ರಿಕೆಗಳೋ ಕಣ್ಣಿಗೆ ಬಿದ್ದಾಗಲಷ್ಟೇ ನೆನಪಿಗೆ ಬರುತ್ತದೆ, "ಅಯ್ಯೋ ಕನ್ನಡಕ ಮನೇಲೇ ಬಾಕಿ ಆಯ್ತು, ಹಾಳು ಮರೆವೇ", ದಾರಿಯಲ್ಲಿ ಪೋಸ್ಟು ಡಬ್ಬಿ ಕಣ್ಮುಂದೆ ಕಂಡರೆ, "ಅಯ್ಯೋ ಕಾಗದ ಬರೆದದ್ದು ಟೇಬಲ್ ಮೇಲೇ ಬಾಕಿ...ಛೇ..ಮರೆತು ಬಂದು ಬಿಟ್ಟೆ, ಇವತ್ತು ಪೋಸ್ಟ್ ಮಾಡಿದ್ದರೆ ನಾಳೆಯೋ, ನಾಡಿದ್ದೋ ಸಿಗುತ್ತಿತ್ತು" - ಹೀಗೇ ಮರೆವಿನ ಹಾವಳಿಯಿಂದಾಗಿ ಮರೆತೂ ಮರೆತೂ ಕಾಗದ ಮನೆಯೊಳಗೋ, ಕಿಸೊಯೊಳಗೋ, ಬ್ಯಾಗಿನೊಳಗೋ ಬಾಕಿಯಾಗಿ ಯಾಗಿ ಬರೆದು ಒಂದು ತಿಂಗಳ ನಂತರವೂ ಪೋಸ್ಟ್ ಮಾಡುವ ಅಭ್ಯಾಸವಿದೆ ಕೆಲವರಿಗೆ! ಮತ್ತೆ ಕಾಗದ ಬರೆದ ತಾರೀಖು ನೋಡಿ ಪತ್ರ ಸಿಕ್ಕಿದವರ ಬೈಗುಳದ ಸುರಿಮಳೆ ನಿರಪರಾಧಿಗಳಾದ ಪೋಸ್ಟ್ ಆಫೀಸಿನವರ ಮೇಲೆ! ಶಾಲೆಯಲ್ಲಿ ಕೆಲವು ಮಕ್ಕಳಿಗೆ ಕ್ಲಾಸಿನಲ್ಲಿ ಟೀಚರ್, "ಎಲ್ಲಿ ಹೋಂ ವರ್ಕ್ ತೆಗೆಯಿರಿ ಎಲ್ಲರೂ...ಎಲ್ಲರೂ ಮಾಡಿ ಬಂದಿದ್ದೀರಿ ತಾನೇ?" ಎಂದು ಕೇಳುವಾಗಲಷ್ಟೇ ನೆನಪಿಗೆ ಬರುತ್ತದೆ ಹಿಂದಿನ ದಿನ ಟೀಚರ್ ಹೋಂವರ್ಕ್ ಕೊಟ್ಟಿದ್ದರು. ಮನೆಯಲ್ಲಿ ಮಾಡಿ ಬರಲು ಮರೆತು ಹೋಗಿದೆ ಎಂದು. ಮರೆವಿನಿಂದಾಗಿ ಹಿಂದಿನ ಕಾಲದಲ್ಲಾದರೆ ಕೋಲಿನ ರುಚಿ ಕಾಣಬೇಕಿತ್ತು ಎಳೆಯ ಕೈಗಳು...ಈಗಲಾದರೆ ಇಂಪೊಸಿಷನ್ ಅಥವಾ ಹೊರಗೆ ನಿಲ್ಲುವ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರುತ್ತದೆ! ಇನ್ನು ಟೀನ್ ಏಜ್‍ನ ಮಕ್ಕಳಂತೂ ವಾಸ್ತವವನ್ನೇ ಮರೆತು ಅಡ್ಡದಾರಿ ಹಿಡಿದು ಕೊನೆಯಲ್ಲಿ ಪಶ್ಚಾತಾಪ ಪಡುವುದುಂಟು. ಇನ್ನು ಎಲ್ಲಾ ಏಜ್‍ನವರ ಒಂದು ಸಾಮಾನ್ಯ ಸಮಸ್ಯೆ ಏನೆಂದರೆ ನೆಂಟರ, ಇಷ್ಟರ ಮನೆಗೆ ಹೋಗಿ ನಾಲ್ಕು ದಿನವಿದ್ದು ವಾಪಾಸಾಗುವಾಗಲಂತೂ ಟವಲು, ಕರ್ಚೀಪು, ಅಂಡರ್, ಇನ್ನರ್ ಗಾರ್ಮೆಂಟುಗಳು, ಬ್ರಶ್ಶು, ಟೂತ್‍ಪೇಸ್ಟು, ಸೋಪು, ಕೋಂಬು, ಹೇರುಕ್ಲಿಪ್ಪುಗಳು, ಕೊಡೆ ಇತ್ಯಾದಿಗಳನ್ನು ಮರೆತು ಬರುವುದು ಮಾಮೂಲಿ! ಮತ್ತೆ ಸ್ವಸ್ಥಾನಕ್ಕೆ ಮರಳಿದ ಮೇಲೆ ಹೊಸತ್ತರ ಖರೀದಿ ಅನಿವಾರ್ಯವಾದಾಗ ಮರೆವಿನಿಂದಾಗಿ ದುಡ್ಡೂ ದಂಡವಾಗುತ್ತದೆ. ಅಂತೂ ಇಂತೂ ಕೆಲವೆಲ್ಲಾ ಅನಾಹುತಗಳು, ಅನರ್ಥಗಳು ನಡೆದು ಹೋಗುತ್ತಲೇ ಇರುತ್ತವೆ ಈ ಮರೆವಿನಿಂದಾಗಿ.
     ಒಬ್ಬ ಮರೆವು ಹೆಚ್ಚಾಗಿ ಆಸ್ಪತ್ರೆಗೆ ಹೋಗಿ ಡಾಕ್ಟ್ರರಲ್ಲಿ ಹೇಳಿದನಂತೆ, "ಡಾಕ್ಟ್ರೇ, ಡಾಕ್ಟ್ರೇ ನನಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಈಗ ಹೇಳಿದ್ದನ್ನು ಇನ್ನೊಂದು ಘಳಿಗೆಯಲ್ಲಿ ಮರೆತಿರುತ್ತೇನೆ. ಏನಾದರೂ ಔಷಧಿ ಕೊಡಿ."
"ಎಷ್ಟು ಸಮಯದಿಂದ ಹೀಗಾಗ್ತಿದೆಯಪ್ಪಾ ನಿನಗೆ?" ಡಾಕ್ಟ್ರು ಕೇಳಿದರಂತೆ.
"ಯಾರಿಗೆ ಎಷ್ಟು ಸಮಯದಿಂದ ಏನಾಗ್ತಿರೋದು ಡಾಕ್ಟ್ರೇ" ಎಂದು ಡಾಕ್ಟ್ರರನ್ನೇ ಕೇಳಿದನಂತೆ ಆ ಪುಣ್ಯಾತ್ಮ!
ನಮ್ಮದೆಲ್ಲಾ ಅಂತಾ ಕಂಡೀಷನ್‍ಗೆ ತಲುಪಿಲ್ಲ ಬಿಡಿ. ಆದರೆ ಈ ಮರೆವಿಗೂ ನನಗೂ ಅದೇಕೋ ನಾ ತಿಳಿದ ಮಟ್ಟಿಗೆ ಹೆಚ್ಚಿನ ನಂಟು. ಇದಕ್ಕೆ ನಾನು ಮರೆತ ಮತ್ತು ದಿನಾಲೂ ಮರೆಯುತ್ತಿರುವ ಅನುಭವಗಳೇ ಜೀವಂತ ಸಾಕ್ಷಿಗಳು!
"ಭಾನುವಾರ ನನಗೆ ಹೇರ್ ಕಟ್ ಮಾಡಿಸಲು ನೆನಪು ಮಾಡು, ಸಂಜೆ ಇಂತಹವರಿಗೆ ಫೋನಿಸಲು ನೆನಪಿಸು, ನಾಡಿದ್ದು ಟೆಲಿಫೋನು ಬಿಲ್ಲು ಕಟ್ಟಲು ಕೊನೆಯ ದಿನ. ನೆನಪು ಮಾಡು, ಇಲ್ಲವಾದರೆ ದಂಡ ತೆರಬೇಕಾಗುತ್ತದೆ. ನನ್ನ ಆಫೀಸಿನ ತಲೆಬಿಸಿಯಲ್ಲಿ ನನಗೆ ನೆನಪಾಗಲ್ಲ ತಿಳೀತೇ?" ಎಂದು ನೆನಪಿಟ್ಟುಕೊಂಡು ನೆನಪಿಸಲು ಹೇಳಿದ ನನ್ನವರಿಗೆ ಯಾವಾಗಲೂ ಈ ಹಾಳು ಮರೆವಿನಿಂದಾಗಿ ಮೂರು ನಾಮ ಹಾಕಿ ಬಳಿಕ ನನಗೆ ಮಂಗಳಾರತಿ ಮಾಡಿಸಿಕೊಳ್ಳುತ್ತಿರುತ್ತೇನೆ! ನನ್ನಲ್ಲಿ ನೆನಪಿಸಲು ಹೇಳಿದ್ದರೂ ಕೂಡಾ ಎಲ್ಲವನ್ನೂ ಮರೆಯದೇ ಚಾಚೂ ತಪ್ಪದೇ ಅಚ್ಚುಕಟ್ಟಾಗಿ ಕೆಲಸ ಮಾಡಿ ಮುಗಿಸಿದ ಮೇಲೆ ನನ್ನವರು, "ನಿನಗೆ ನಾನು ನೆನಪಿಸಲು ಹೇಳಿದ್ದೆ. ಆದರೆ ನೀನು ನೆನಪಿಸಲೇ ಇಲ್ಲವಲ್ಲೇ?! ನಿನ್ನ ಹತ್ರ ಹೇಳೋದು ದಂಡ. ನಿನಗೆ ನೆನಪು ಮಾಡಲು ಹೇಳಿದ್ದನ್ನು ನನಗೆ ಹೇಳಲು ನೆನಪಿಸಲು ಒಂದು ಜನ ಬೇಕು. ಪಕ್ಕಾ ಮರೆಗುಳಿ ನೀನು" ಎಂದ ಇವರು ಈಗೀಗಂತೂ "ಅದು ನೆನಪು ಮಾಡು, ಇದು ನೆನಪು ಮಾಡು" ಎನ್ನುವುದನ್ನೇ ಬಿಟ್ಟು ಬಿಟ್ಟಿದ್ದಾರೆ!  ನನಗೇನಾದರೂ ಶೀತ, ಜ್ವರ ಹಿಡಿದರೆ ಡಾಕ್ಟರು ಕೊಟ್ಟ ಮಾತ್ರೆಯನ್ನು ಹೊತ್ತು ಹೊತ್ತಿಗೆ ತೆಗೆದುಕೊಳ್ಳಲು ಇವರು ನೆನಪು ಮಾಡಿಯೇ ಆಗಬೇಕು! ಇಂದಿಗೂ ದಿನಕ್ಕೊಂದು ಮರೆಯುವ ಪ್ರಸಂಗವಂತೂ ನಡೆದು ಬರುತ್ತಲೇ ಇದೆ...ನೋ ಆಬ್ಸೆಂಟ್, ಆಲ್‍ವೇಸ್ ಪ್ರೆಸೆಂಟ್!
ಅದೊಂದು ದಿನ ಚೂಡೀದಾರ್ ಧರಿಸಿ ತಲೆ ಬಾಚಿ, ಮುಖಕ್ಕೆ ಕ್ರೀಮ್, ಪೌಡರ್ ಲೇಪಿಸಿ ಬ್ಯಾಗ್, ಪರ್ಸಿನೊಂದಿಗೆ ಮಾರ್ಕೆಟಿಗೆಂದು ಹೊರಟೆ. ಬಾಗಿಲಿಗೆ ಬೀಗ ಹಾಕಿದ ಮೇಲೆ ತಿಳಿಯಿತು ಕರ್ಚಿಫ್ ಮರೆತಿರುವೆನೆಂದು. ಬೆವರುದ್ದಿಕೊಳ್ಳಲು ಅದಿಲ್ಲದಿದ್ದರಾಗುತ್ತದೆಯೇ? ಬೀಗ ತೆಗೆದು ಒಳಗೆ ಬಂದು ಕರ್ಚಿಫ್ ತೆಗೆದುಕೊಂಡು ಹೋಗಿ ಬಾಗಿಲಿಗೆ ಬೀಗ ಹಾಕಿದ ಮೇಲೆ ನೆನಪಾಯಿತು ಕರ್ಚಿಫ್ ತರಲು ಒಳಗೆ ಹೋಗಿದ್ದಾಗ ಬ್ಯಾಗ್, ಪರ್ಸುಗಳು ಮನೆಯೊಳಗೆ ಸೋಫಾದ ಮೇಲೆ ಬಾಕಿಯಾಗಿದೆಯೆಂದು. ಪುನ: ಬೀಗ ತೆಗೆದು ಅವೆರಡನ್ನೂ ಹಿಡಿದುಕೊಂಡು ಹೊರ ಬಂದು ಗಂಟೆ ಎಷ್ಟಾಯಿತೆಂದು ನೋಡಿಕೊಳ್ಳಲು ಕೈ ನೋಡಿಕೊಂಡಾಗ ತಿಳಿಯಿತು ವಾಚ್ ಕಟ್ಟಲಿಲ್ಲವೆಂದು. ಸರಿ. ಮತ್ತೆ ಪುನ: ಬೀಗ ತೆಗೆದು ಒಳಗೆ ಹೋಗಿ ಕೈಗೆ ವಾಚ್ ಕಟ್ಟಿಕೊಂಡು ಹೊರಬಂದು ಗೇಟಿನ ಬಳಿಗೆ ಬಂದೆ. ಇನ್ಯಾವುದೋ ಪ್ರಮುಖವಾದ ಎರಡು ವಸ್ತುಗಳನ್ನು ಮರೆತಿದ್ದೆ! ಹೀಗೇ ಬೀಗ ತೆಗೆಯುವುದೂ, ಒಳ ಬರುವುದೂ, ಹೊರಗೆ ಹೋಗುವುದು, ಮತ್ತೆ ನೆನಪಾಗುವುದು, ನಂತರ ಪುನ: ಬೀಗ ತೆಗೆದು  ಹಾಕಿ ಪುನರಪಿ ಆಗುತ್ತಲೇ ಸಾಕು ಹಿಡಿದು ಹೋಗಿ ಆ ದಿನ ಮಾರ್ಕೆಟ್ಟಿಗೆ ಹೋಗುವುದನ್ನೇ ಕ್ಯಾನ್ಸಲ್ ಮಾಡಿಬಿಟ್ಟಿದ್ದೆ! 
     ಒಂದು ಸುದಿನ ತೊಂಬತ್ತು ವರ್ಷದ ನನ್ನಜ್ಜಿ ನಮ್ಮಲ್ಲಿಗೆ ಬಂದರು. ಅವರೋ ಶರೀರದಲ್ಲೂ, ನೆನಪಿನ ಶಕ್ತಿಯಲ್ಲೂ ಬಲು ಗಟ್ಟಿ. ಓದಲು ಕನ್ನಡಕ ಕೂಡಾ ಬೇಡ! ಸಣ್ಣಂದಿನಲ್ಲಿ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಶಾಲೆಯಲ್ಲಿ ಅವರು ಕಲಿತ ಪದ್ಯಗಳು ಇನ್ನೂ ಬಾಯಿಗೆ ಬರುತ್ತದೆ! ಓದಿದ್ದೇ ಪಾಪ ಮೂರನೇ ತರಗತಿವರೆಗಂತೆ.(ನಮ್ಮಲ್ಲಿ ಕೆಲವರಿಗೆ ಹತ್ತನೇ ತರಗತಿವರೆಗೆ ದಿನಾ ಬೆಳಗ್ಗೆ ಶಾಲೆಯಲ್ಲಿ ಹೇಳುತ್ತಿದ್ದ ರಾಷ್ಟ್ರಗೀತೆಯೇ ಮರೆತು ಹೋಗಿರುತ್ತದೆ!)ಭೇಷ್ ಅಜ್ಜಿ, ನೀವು ಪ್ರಪಂಚದ ಎಂಟನೇ ಅದ್ಭುತ ಎಂದು ಹೇಳಿ ಅಜ್ಜಿಯ ಮನಸ್ಸನ್ನು ಗೆಲ್ಲುತ್ತಿದ್ದೆ! ಅಜ್ಜಿಯ ನಾಲಗೆಯ ತುದಿಯಲ್ಲಿ ಸಾಮಾನ್ಯ ನೆಗಡಿಯಿಂದ ಹಿಡಿದು ದೊಡ್ಡ ದೊಡ್ಡ ಖಾಯಿಲೆಗಳಿಗೂ ಮದ್ದು ಸದಾ ಸಿದ್ಧವಿರುತಿತ್ತು, ಯಾವ ಡಾಕ್ಟ್ರನಿಗೂ ಕಮ್ಮಿ ತಾನಲ್ಲ ಎಂಬಂತೆ! ಟಪ್ಪ ಖಾಯಿಲೆಗಳು ಗುಣವಾಗುವಂತ ಸಂಜೀವಿನಿಗಳಾಗಿದ್ದವು ಆ ಅಜ್ಜಿ ಸೂಚಿಸುವ ಮದ್ದುಗಳು! ’ಭಲೇ ಅಜ್ಜೀ, "ನಿಮ್ಮಂತಾ ಅಜ್ಜಿ ಇಲ್ಲಾ... ನನ್ನಂತಾ ಪುಳ್ಳಿ ಇಲ್ಲಾ" ಎಂದು ಹಾಡಿ ಹೊಗಳುತ್ತಾ ಅಜ್ಜಿಯನ್ನು ಮಂಚದ ಮೇಲೆ ಕೂರಿಸಿ ಅವರ ಕಾಲೊತ್ತಲು ತೊಡಗಿದೆ..."ಬೇಡ ಮಗಳೇ ನನಗೇನೂ ಕಾಲು ಬಚ್ಚುತ್ತಿಲ್ಲ. ಬಾ ಇಲ್ಲಿ ನನ್ನ ಪಕ್ಕ ಕೂರು...ಸ್ವಲ್ಪ ಹೊತ್ತು ಮಾತಾಡುವ.."ಎಂದರು.. ಇದೇ ಸುಸಮಯವೆಂದುಕೊಂಡು "ತೊಂದ್ರೆ ಇಲ್ಲ ಬಿಡಿ ಅಜ್ಜಿ...ನನಗೆ ನಿಮ್ಮ ಕಾಲೊತ್ತುವುದು ಕುಶಿಯ ಕೆಲಸ...ನೀವು ಸುಮ್ಮನಿರಿ, ಕಾಲೊತ್ತುತ್ತಾ ಮಾತನಾಡುವ" ಎಂದೆ.. ಅಜ್ಜಿಗೂ ಕುಶಿಯಾಯಿತು...
"ಅಜ್ಜೀ ನಿಮಗೆ ಎಷ್ಟೊಂದು ಮದ್ದುಗಳು ಗೊತ್ತಿದೆಯಲ್ವಾ?....ಈ ಮರೆವಿಗೆ ಏನಾದರೂ ಮದ್ದು ಗೊತ್ತಿದ್ಯಾ?" ಎಂದು ಕೇಳಿದೆ.
"ಯಾರಿಗಮ್ಮಾ ಮರೆವು? ಈಗಿನವರೆಲ್ಲಾ ಹೀಗೇ..ಹೊತ್ತು, ಹೆತ್ತು, ಮತ್ತೆ ಪುನ: ಹೊತ್ತು ಸಾಕಿ ಸಲಹಿದವರನ್ನೂ ಮರೆತು ಬಿಡ್ತಾವೆ ದರಿದ್ರ ಮುಂಡೆವು" ತುಸು ಕೋಪದಲ್ಲಿ ಈಗಿನ ಪ್ರಪಂಚದ ಸ್ಥಿತಿಗತಿಯನ್ನು ಗೊತ್ತಿದ್ದ ಅಜ್ಜಿ ಹೇಳಿದ್ದಾದರೂ ಕೂಡಾ ನನ್ನ ತಲೆಯ ಮೇಲೆ ದೊಡ್ಡ ಬಾಂಬೊಂದು ಬಿದ್ದ ಹಾಗಾಯ್ತು! ನಾನೇನು ಹೆತ್ತು ಹೊತ್ತವರನ್ನು, ಕಟ್ಟಿಕೊಂಡವರನ್ನು ಮರೆತು ಕೂತಿರಲಿಲ್ಲ!
"ಅಲ್ಲ ಅಜ್ಜೀ...ನೀವು ಡಬಲ್ ಮೀನಿಂಗ್ ಮಾಡಿಕೊಂಡುಬಿಟ್ಟಿದ್ದೀರಿ....ನಾನು ಕೇಳಿದ್ದೇ ಬೇರೆ, ನೀವು ಹೇಳ್ತಿರೋದೇ ಬೇರೆ ಅಜ್ಜಿ...ಕೆಲವು ಸಲ...ಅಲ್ಲಲ್ಲಾ ಹಲವು ಸಲ ಕೆಲವು ವಿಚಾರಗಳು ನಮ್ಮ ದಿನನಿತ್ಯ ಜೀವನದಲ್ಲಿ ಮರೆತು ಹೋಗುತ್ತಿರುತ್ತೆ...ನನಗಂತೂ ಮರೆವು ಮಾಹಾ ಶತ್ರು...ಅದಕ್ಕೆ ಏನಾದ್ರೂ ಮದ್ದು ನಿಮಗೆ ಗೊತ್ತಿದ್ಯಾ ಅಂತ ನಾನು ಕೇಳಿದ್ದಷ್ಟೇ ಅಜ್ಜೀ..."
"ಓ ಅದಕ್ಕಾ ಮಗಾ? ನೋಡು ಪುಟ್ಟಾ, ನಮ್ಮ ಗದ್ದೆ ಕರೆಯಲ್ಲೇ ಬೆಳೆಯುತ್ತಲ್ಲಾ ತಿಮರೆ ಗೊತ್ತಿದ್ಯಲ್ಲಾ ನಿನಗೆ, ಅದೇ ಒಂದೆಲಗದ ಎಲೆಗಳು...ಅವುಗಳ ತಂಬುಳಿ, ಚಟ್ನೀಂತ ಮಾಡ್ತಾ ತಿಂತಾ ಇದ್ರೆ ನೆನಪು ಶಕ್ತಿಗೆ ಒಳ್ಳೆಯದು...ನೆನಪು ಶಕ್ತಿಗೆ ಫಸ್ಟ್ ಕ್ಲಾಸ್ ಸೂತ್ರ ಅದೊಂದೇ...ಮತ್ತೆ ಮರೆವಿಗೇ ಅಂತ ಮದ್ದು ಯಾವುದು ಅಂತ ನನಗೊತ್ತಿಲ್ಲವಲ್ಲಪ್ಪಾ" ಅಂತ ಹೇಳುತ್ತಾ ತಲೆ ಮೇಲೆ ಕೈಯಿಟ್ಟರು!
"ತತ್ತೇರೇಕಿ...ವಾರದಲ್ಲಿ ಮೂರ‍್ನಾಲ್ಕು ಸಲ ತಂಬುಳಿ, ಚಟ್ನೀಂತ ಮಾಡ್ತಾನೇ ಇರ‍್ತೀನಲ್ಲಾ..."ಎಂದು ತಲೆ ಕೆರೆದುಕೊಂಡು ನನ್ನ ಮರೆವು ಯಾವ ಟಾನಿಕ್ಕು, ಔಷಧಿಗೂ, ಸಸ್ಯಗಳಿಗೂ ತಲೆ ಬಾಗಿ ಶರಣಾಗುವುದಿಲ್ಲ..., ನಾವು ಮಾಡುವ ಎಲ್ಲಾ ಕೆಲಸಗಳ ಮೇಲೆ  ಸಾವಕಾಶವಾಗಿ, ಸ್ವಲ್ಪ ಗಮನವಿಟ್ಟು, ಸಮಯ ಹೊಂದಿಸಿಕೊಂಡು ನಿಧಾನವಾಗಿ ಮಾಡುವುದೊಂದೇ ದಾರಿ ಈ ತೆರನಾದ ಮರೆವನ್ನು ದೂರ ಮಾಡಲು ಎಂದುಕೊಂಡು ಅಜ್ಜಿ ಹತ್ರ ಬೇರೆ ಟಾಪಿಕ್ ತೆಗೆದುಕೊಂಡು ಮಾತು ಮುಂದುವರಿಸಿದೆ!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು





Monday, April 6, 2015

ಒಮ್ಮೆ ನಕ್ಕುಬಿಡಿ...! - ಹವ್ಯಕ ವಾರ್ತೆ ಮೇ ೨೦೧೫ ರಲ್ಲಿ ಪ್ರಕಟಿತ ಹಾಸ್ಯ ಲೇಖನ

ಒಮ್ಮೆ ನಕ್ಕುಬಿಡಿ...!

ಓ ಮೊನ್ನೆ ಒಂದರಿ ಮಾರ್ಕೆಟ್ಟಿಂಗೆ ಎಂಗೊ ಗೆಂಡ ಹೆಂಡತಿ ಹೋಪಲಿಪ್ಪ ದಿನ ಎನ್ನ ಫ್ರೆಂಡಿಂಗೆ ಮೆಸ್ಸೇಜು ಮಾಡಿ ತಿಳ್ಸಿತ್ತೆ, "ಮಕ್ಕಳ ಶಾಲಗೆ, ಕಾಲೇಜಿಂಗೆ ಕಳುಸಿ ಆತು, ಇನ್ನು ಎಂಗೊ ಇಬ್ರೂ ಸಿಟಿಗೆ ಹೋಯಕ್ಕು" ಹೇಳಿ! ಎಂಗೊ ಹಾಂಗೆ, ನಡಕ್ಕೊಂಡು ಹೋಪಾಗ ಸಣ್ಣಕ್ಕೆ ಡಂಕಿದರೂ ಅದರನ್ನೂದೇ ಸಂದೇಶದ ಮೂಲಕವೋ, ಕರೆಯ ಮೂಖಾಂತರವೋ ಹೇಳಿಕೊಂಬ ಪಕ್ಕಾ ಚೆಡ್ಡಿ ದೋಸ್ತುಗೊ! ಕುಶಾಲು ಮಾತಾಡಿಯೊಂಡು, ನೆಗೆ ಮಾಡಿಯೊಂಡು ಇಪ್ಪದೇ ಎಂಗಳ ಕಾಯಕ! ಮನಸ್ಸಿಲ್ಲಿಪ್ಪದರ ನೇರ ಹೇಳುದು! ವ್ಯಂಗ್ಯ, ಟೀಕೆ, ತಾತ್ಸಾರ, ಕೇಡು, ಒಣಪ್ರತಿಷ್ಠೆ, ಜೆಂಭ ಎಂಗಳ ಡಿಕ್ಸ್‍ನರಿಲೇ ಇಲ್ಲೆ, ಬರೇ ತಮಾಷೆ, ನಗು, ಒಬ್ಬನ ಕಷ್ಟ, ಸುಖಕ್ಕಪ್ಪದು ಇಷ್ಟೇ ಎಂಗಳಿಬ್ಬರ ಬಂಡವಾಳ! ನಮ್ಮ ಈ ಪರಿಯ ಸ್ನೇಹವ ಕಂಡು ಅದರ ಗೆಂಡ, "ಸುಬ್ರಹ್ಮಣ್ಯಕ್ಕೆ ಹೋಗಿ ಹುಡುಕಿದರೂ ನಿಂಗಳ ಹಾಂಗಿಪ್ಪ ಜೋಡಿಗೊ ಸಿಕ್ಕಾ" ಹೇಳಿ ಸಾಮಾನ್ಯವಾಗಿ ಹೇಳಿಕೊಂಡಿರ‍್ತವಡ! ಸರಿ ಆನು ಕಳ್ಸಿದ ಆ ಸಂದೇಶಕ್ಕೆ, "ಆತು ಗೆಂಡ ಹೆಂಡತಿ ಒಟ್ಟಿಂಗೆ ಹೋಗಿ ಮಜಾ ಮಾಡಿ ಬನ್ನಿ" ಹೇಳಿ ಉತ್ತರ ಕೊಟ್ಟತ್ತದು! ಮನೆಲಿ ಒಂದು ನಮೂನೆ ಕೆಲಸ ಎಲ್ಲಾ ಮುಗುದು ಒತ್ತರೆ ಮಾಡಿ ಅಪ್ಪಗ ಜೀವ ಕೊರಳಿಂಗೊರೆಗೆ ಬೈಂದು ಮಾರಾಯ್ರೇ! ಈ ಕಂಪ್ಯೂಟರಿನ ಆನ್ ಮಾಡಿ ಇಂಟರ‍್ನೆಟ್ ಮೂಲಕ ಎಂತೆಲ್ಲೋ ಸಾಮಾನುಗಳ ತರಿಸುಲಕ್ಕಡ! ಆದರೆ ಮನೆಲಿ ರಿಪೇರಿಗೆ ಬಿದ್ದ ಉಪಕರಣಂಗಳ ರಿಪೇರಿ ಮಾಡಿಕೊಡ್ಲಿಗಾ ಆ ಕಂಪ್ಯೂಟರಿಂಗೆ, ಅಲ್ಲಾ ನವಗೆ ಒಂದು ಸಣ್ಣ ಪ್ರಮಾಣಲ್ಲಿ ಬೇಕಾದ ತರಕಾರಿ, ಹಣ್ಣು ಹಂಪಲು, ಕಾಯಿ, ಎಣ್ಣೆ, ಮದ್ದು ಎಲ್ಲಾ ಅದಕ್ಕೆ ತಂದು ನಮ್ಮ ಮನಗೆ ಎತ್ತಿಸುಲೆಡಿಗಾ?! ನಮ್ಮ ಕಿರು ಬೆರಳಿಲಿ ಇಡೀ ಪ್ರಪಂಚವನ್ನೇ ಕೊಣಿಶಿಲೆಡಿಗು ಹೇಳಿ ನಾವು ಗ್ರೇಶುದಷ್ಟೇ ಈ ಇಂಟರ‍್ನೆಟ್, ಮೊಬೈಲು ಎಲ್ಲಾ ಇದ್ದು ಹೇಳಿ ಹೇಳಿಯೊಂಡು! ಎಂತ ಇದ್ದರುದೇ ನಾವು ನಾವೇ ಖುದ್ದಾಗಿ ಹೆರ ಹೋಗಿ ಮಾಡಲೇ ಬೇಕಾದ ಅನಿವಾರ್ಯ ಕೆಲಸಂಗೊ ಸಾವಿರದೆಂಟಿರ‍್ತು! ಹೆರ ಬೆಶಿಲು ಕೊದಿತ್ತು ಬೇರೆ, ಮೊದಾಲೇ ಸುಸ್ತಾದ ಎರಡು ಜೀವಂಗೊ. ಎರಡೂ ಜೀವಂಗೊ ಹೇಳಿದ್ದೆಂತಕೆ ಹೇಳಿರೆ, ಮನೆಲಿ ಇವ್ವುದೇ ಸುಮ್ಮಗೆ ಕೂಪ ಜೆನ ಅಲ್ಲ. ಅಮ್ಮಾವ್ರ ಗೆಂಡ ಅಲ್ಲದ್ರೂ ಅವ್ವೇ ಆಗಿ ಒಳ ಬಂದು ಕೆಲವು ಕೆಲಸಲ್ಲೆಲ್ಲಾ ಬಂದು ಸೇರ‍್ತವು, ಹಾಂಗೆ ಆಡಿ ಕೂಡಿ ಮನೆಕೆಲಸಂಗಳ ಇಬ್ರೂ ಸೇರಿ ಮಾಡಿ ಮುಗುಶುದು! ಅಲ್ಲಾ, ಎಂಗಳ ಬದ್ಧ ಆದ ಮತ್ತೇ, ಪಾರ್ಕು, ಸಿನೆಮಾ ಹೇಳಿ ತಿರುಗಿದ ಜೆನಂಗ ಎಂಗೊ ಅಲ್ಲ, ಆತು, ಮದುವೆ ಆದ ಮತ್ತಾದ್ರೂ ಹನಿಮೂನ್ ಹೋಯಿದಿರಾ ಹೇಳಿ ನಿಂಗೊಲ್ಲಾ ಕೆಮಿ ಅಗಲಿಸಿ ಕೇಳಿದರೂದೇ, "ಹೋಯಿದಿಲ್ಲೆಪ್ಪಾ ಹೋಯಿದಿಲ್ಲೆಯಾ" ಹೇಳಿ ಎಂಗಳ ಉತ್ತರ! ’ಇಲ್ಲೇ ಸ್ವರ್ಗ, ಇಲ್ಲೇ ನರಕ, ಬೇರೆ ಇಲ್ಲಾ ಸುಳ್ಳು’ ಹೇಳಿ ಕೂದ ಜೆನಂಗ, ಮತ್ತೂ ಒಂದು ದಿನ ಆದರೂ ಅಂತೇ ಪೇಟೆ ಸುತ್ತಿದ ಜೆನಂಗಳೂ ಅಲ್ಲ! ಎಂತರಾ ಮಜಾ ಅಪ್ಪಾ, ಈ ಇಳಿವಯಸ್ಸಿಲಿ!! ಎಂಗೊ ಪಾಪ ಪೇಟೆಗೆ ಹೋಪದು ಮಾಡ್ಲಿಪ್ಪ ಕೆಲಸಂಗಳ ಎಲ್ಲಾ ಪಟ್ಟಿ ಮಾಡಿಗೊಂಡು, ಕಾರಿಲಿ ಹೋಗಿ ಮುಗುಶಿ ಬಪ್ಪದು. ಕಾರು ಹೇಳಿ ದೊಡ್ಡಸ್ಥಿಕೆ ಹೇಳಿಕೊಂಬದಲ್ಲ, ಪೆಟ್ರೋಲ್ ಖರ್ಚಾವುತ್ತು ಹೇಳಿ ಮನೆಯ ಶೆಡ್ಡಿಲಿ ಕಾರಿನ ಬಿಟ್ಟು ಹೋದರೆ ನಾಲ್ಕು ಜೆನಂಗ ಇಪ್ಪ ಎಂಗಳ ಕುಟುಂಬಕ್ಕೆ ಒಂದು ತಿಂಗಳಿಂಗಿಪ್ಪ ಸಾಮಾನು, ಸರಂಜಾಮು ತರೇಕಾರೆ ಹತ್ತು ಸಲ ಸ್ಕೂಟರಿಲೋ, ಬಸ್ಸಿಲೋ ಹೋಯೇಕ್ಕಕ್ಕು, ತಿಂಗಳಲ್ಲಿ ಇಪ್ಪ ಮೂವತ್ತು ದಿನಂಗಳಲ್ಲಿ ಅರೆವಾಶಿ ದಿನಂಗಳೂ ಪೇಟೆಲಿ ತಿರುಗುವ ಕಾರ್ಯಕ್ರಮ ಆಗಿ ಹೋಕು! ಆಟೋ ಮಾಡಿ ತಂದರೆ ದೊಡ್ಡ ತೊಂದರೆ! ಇಳುದಾದ ಮತ್ತೆ ವಾಪಸ್ಸು ಹೋಪಾಗ ಖಾಲಿ ಹೋಯೇಕ್ಕು, ಬಾಡಿಗೆ ಸಿಕ್ಕುತ್ತಿಲ್ಲೆ ಹೇಳಿ ಕಷ್ಟ ಹೇಳಿಯೊಂಡು ದುಪ್ಪಟ್ಟು ಚಾರ್ಜು ಕಿಸೆಂದ ಪೀಂಕಿಸಿಬಿಡ್ತವು ಡ್ರೈವರುಗೊ! ಅವರ ಹತ್ರ ಮಾತಾಡಿ ವಾದ ಮಾಡುಲೆ ಶಕ್ತಿ ಇಲ್ಲದ್ದೇ ಕೊಟ್ಟು ಕಳುಶುದು ಮತ್ತೆ! ಅಲ್ಲಾ ಬಂದ ಆಟೋ ವಾಪಸ್ಸು ಹೋಪಾಗ ಬಾಡಿಗೆಗೆ ಜೆನ ಸಿಕ್ಕದ್ದರೆ ನಾವು ಜವಾಬ್ದಾರಿಯಾ ಹೇಳಿ? ಆದ ಕಾರಣ ನಮ್ಮದು ಹೇಳಿ ಇಪ್ಪ ಸೆಕೆಂಡ್ ಹ್ಯಾಂಡ್ ಸಣ್ಣ ಕಾರಿಲೇ ನಮ್ಮ ಮಾರ್ಕೆಟ್ ಪಯಣ! ಮಾತಾಡ್ತಾ ಆಡ್ತಾ ಎಲ್ಲಿಗೋ ಹೋಗಿಬಿಟ್ಟೆ! ಸರಿ ವಿಷಯಕ್ಕೆ ಬಪ್ಪ. ಪೇಟೆಲಿ ಒಂದೆರಡು ಕೆಲಸಂಗ ಇಪ್ಪದಾ? ಕರೆಂಟು, ನೀರಿನ ಬಿಲ್ಲು ಕಟ್ಟುಲೆ, ಮನೆ ಕಂದಾಯ ಪಾವತಿ ಮಾಡುಲೆ, ಮೊಬೈಲು ರಿಚಾರ್ಜು ಮಾಡ್ಸುಲೆ, ಜಿನಸು ಸಾಮನು, ತರಕಾರಿ, ಹಣ್ಣು ಹಂಪಲು ತಪ್ಪಲೆ, ಗೋಧಿ ಹೊಡಿ ಮಾಡ್ಸುಲೆ, ಅನಿವಾರ್ಯ ಹೇಳಿ ಖರೀದಿಸಿ ತಂದ ಮತ್ತೆ ವರ್ಷಲ್ಲಿ ಕಡಮ್ಮೆಲಿ ನಾಲ್ಕು ಸರ್ತಿ ರಿಪೇರಿಗೆ ಬಪ್ಪಂತಾ, ಕಂಪ್ಯೂಟರನ್ನೋ, ಮಿಕ್ಸಿಯನ್ನೋ, ಇಸ್ತ್ರಿ ಪೆಟ್ಟಿಗೆಯನ್ನೋ, ಗ್ಯಾಸ್ ಸ್ಟವ್ವನ್ನೋ, ಕೈಕೊಟ್ಟ ಮೊಬೈಲನ್ನೋ, ಆನಿಲ್ಲದ್ದರೆ ಯೇವ ಕೆಲಸವೂ ಆಗ ಹೇಳಿ ಸವಾಲೊಡ್ಡಿ ಪೂರ್ಣ ವಿರಾಮ ಹಾಕಿ ನಿಂದ ಗೋಡೆಗಡಿಯಾರವನ್ನೋ ರಿಪೇರಿ ಮಾಡ್ಸುಲೆ ತೆಕ್ಕಂಡು ಹೋಪದು ಇತ್ಯಾದಿ ಕೆಲಸಂಗೊ, ಪಟ್ಟಿ ಮಾಡ್ತಾ ಹೋದರೆ ಅದುವೇ ದೊಡ್ಡ ಕತೆ ಆಗಿ ತಲೆಗಿಂತ ಮುಂಡಾಸು ದೊಡ್ಡದಾತು ಹೇಳುವ ಗಾದೆ ಮಾತಿನಾಂಗೆ ಅಕ್ಕು ಈ ಬರೆತ್ತಾ ಇಪ್ಪ ಲೇಖನದ ಅವಸ್ಥೆ ಕೂಡಾ! ಈ ಮೇಲೆ ಪಟ್ಟಿ ಮಾಡಿದ ಕೆಲಸಂಗಳ ಮುಗುಶುಲೆ ಖಂಡಿತಾ ಒಂದು ದಿನ ಅಂತೂ ಬೇಕು! ಹೋದ ಪ್ರತೀ ಕಡೆಲಿದೇ ಕೆಲಸ ಪಕ್ಕಕ್ಕೆ ಆವುತ್ತಾ? ಎಲ್ಲಾದಿಕ್ಕೆ ಒಂದೋ ಹನುಮಂತನ ಬಾಲದ ಹಾಂಗೆ ಕ್ಯೂ, ಅಥವಾ ಕಂಡಾಬಟ್ಟೆ ರಶ್ಶು, ಜೆಂಭರಕ್ಕೆ ಜೆನ ಸೇರಿದ ಹಾಂಗೆ! ತತ್ಪರಿಣಾಮ ಎಲ್ಲಾ ಕೆಲಸಂಗೊ ಆಮೆ ವೇಗಲ್ಲಿ ಸಾಗುದು! ಪಟ್ಟಿ ಮಾಡಿದ ಎಲ್ಲಾ ಕೆಲಸಂಗೊ ಖಂಡಿತಾ ಮುಗಿಯ ಹೇಳಿ ಗೊಂತಿದ್ದೆಂಗೊಗೆ, ಇರಾಲಿ ಮುಗುದುಷ್ಟು ಮುಗಿಯಲಿ ಹೇಳಿ ಒಂಭತ್ತು ಗಂಟೆಗೆ ಎಂಗೊ ಮನೆ ಬಿಟ್ಟರೆ, ಮಧ್ಯಾನ್ಹ ಒಂದು, ಒಂದೂವರೆ ಗಂಟೆಯ ಒಳಾದಿಕ್ಕೆ ಎಷ್ಟಾವುತ್ತೋ ಅಷ್ಟು ಕೆಲಸಂಗಳ ಮುಗುಶಿ ಮನಗೆ ವಾಪಸ್ಸು ಬಪ್ಪದು ಎಂಗಳ ವಾಡಿಕೆ! ಮತ್ತೆ ಒಳುದ್ದರ ನಾಳೆ ಹೋಗಿಯಾರೂ ಮಾಡ್ಲಕ್ಕನೇ. ಅಂಬಗ ಎರಡು ದಿನಂಗಳಲ್ಲಿ ಕೆಲಸಂಗೊ ಒಂದು ಮಟ್ಟಿಂಗೆ ಮುಗುದಾಂಗೆ ಆತಲ್ಲದಾ ಹೇಳಿ ಎಂಗಳ ಲೆಕ್ಕಾಚಾರ! ಇಷ್ಟು ಕೆಲಸಂಗಳ ಪಟ್ಟಿ ಮಾಡಿಕೊಂಡು ಎಂಗೊ ಪೇಟೆಗೆ ಹೋಯಿಕ್ಕೊಂಡಿಪ್ಪದು, ಎನ್ನ ಫ್ರೆಂಡಿಂಗೆ ಕುಶಾಲು! "ಹೆರ ರಣ ಬೆಶಿಲು, ಹೋಯೇಕ್ಕನ್ನೇ ಹೇಳಿ ಹೋಪದು, ಕೆಲಸ ಒಂದೆರಡಲ್ಲ, ನೂರೆಂಟಿದ್ದು, ಎಲ್ಲದರ ಹೊಂದಿಸಿಕೊಂಡು ಹೋವುತ್ತಾ ಇಪ್ಪದು ಮಾರಾಯ್ತಿ, ಮಜ ಅಡ ಮಜಾ, ಆತು ಬಾಯ್, ಬಂದ ಮತ್ತೆ ಮಾತಾಡುವಾ" ಹೇಳಿ ಮೆಸ್ಸೇಜು ರವಾನೆ ಮಾಡಿದೆ! "ಬಾರೆ ಸಂತೆಗೆ ಹೋಗೋಣ ಬಾ, ಸಿನೆಮಾ ಟೆಂಟಲ್ಲಿ ಕೂರೋಣ ಬಾ ಹೇಳಿ ನಿನ್ನೆಜಮಾನರು ಹೇಳಿಕೊಂಡಿಕ್ಕಲ್ಲದಾ, ಹ್ಹಹ್ಹಹ್ಹ" ಹೇಳಿ ಪುನ: ಮೆಸ್ಸೇಜು ಕಳಿಸಿ ಅದರ ಬಾಲ ಬಿಚ್ಚಿತು! ಪುಚ್ಚೆಗೆ ಆಟ, ಎಲಿಗೆ ಪ್ರಾಣಸಂಕಟ! ಇರಲಿ ಒಂದಲ್ಲಾ ಒಂದು ದಿನ ಅದು ಗೆಂಡನೊಟ್ಟಿಂಗೆ ಹೋಪಲಿದ್ದು ಎಲ್ಲಿಗಾದರೂ ಹೇಳಿ ಮೆಸ್ಸೇಜೋ, ಕಾಲೋ ಮಾಡಿ ಎನ್ನತ್ತರೆ ಹೇಳದ್ದೇ ಇರ, ಅಂಬಗ ಇದರ ಸಾಲ ತೀರ‍್ಸದ್ದೇ ಬಿಡೆ ಹೇಳಿ ಮನಸ್ಸಿಲ್ಲೇ ತೀರ್ಮಾನಿಸಿಕೊಂಡು ಇವರೊಟ್ಟಿಂಗೆ ಹೆರಟೆ! ನಿಜವಾಗಿ ಹೇಳ್ತರೆ ಮಾರ್ಕೆಟ್ಟಿಂಗೆ ಹೋಪದು ಎನಗೆ ದೊಡ್ಡ ತಲೆಬೇನೆಯ ವಿಷಯ! ಅಂದಂತೂ ಹೋಪಲೆ ಮನಸ್ಸಿತ್ತಿಲ್ಲೆ! ಪೇಟೆಲಿ ಹಲವು ಕೆಲಸಂಗೊ ಇದ್ದು ಹೇಳಿ ಅದಕ್ಕೆ ಬೇಕಾಗಿಯೇ ಇವು ಭಂಗಲ್ಲಿ ರಜೆ ಮಾಡಿದ್ದವು ಬೇರೆ! ಆನು ಇಂದು ಹೋಪದು ಬೇಡ ಹೇಳಿ ಹೇಳಿಬಿಟ್ಟರೆ ಅವು ಮತ್ತೆ ಮಾರ್ಕೆಟಿನ ಕಡೆ ಅಣಿಯವು! "ಆತಾಂಗಾರೆ ನಾಳಂಗೆ ನೀನೊಬ್ಬನೇ ಎಲ್ಲಾ ಮುಗುಶಿಯೊಂಡು ಬಾ, ಆನಿಂದು ರೆಸ್ಟ್ ತೆಕ್ಕೊಳ್ತೆ" ಹೇಳಿ ಹೇಳಿಕ್ಕಿ ಎಲ್ಲಾ ಕೆಲಸಂಗಳ ಎನ್ನೊಬ್ಬನ ತಲೆಗೆ ಕಟ್ಟಿಬಿಡುಗು! ಹಾಂಗಾದರೇ ಇನ್ನೂ ಕಷ್ಟ ಅಲ್ಲದಾ ಹೇಳಿ ಗ್ರೇಶಿಗೊಂಡು ಅಂತೂ ಅರೆಮನಸ್ಸಿಲಿ ಹೆರಟದಾನು! ಒಂದೇ ದಿನ ಇಬ್ರೂ ಹೋದರೆ, ಒಬ್ಬ ಒಂದು ಕಡೆಂಗೆ ಹೋದಿಪ್ಪಾಗ ಅಲ್ಲೇ ಹತ್ತಿರಲ್ಲಿ ಇನ್ನೊಂಬ್ಬಂಗೆ ಮತ್ತೊಂದು ಕೆಲಸ ಮಾಡ್ಲಕ್ಕನ್ನೇ, ಹೇಳಿ ಎಂಗಳ ಮಾಸ್ಟರ್ ಪ್ಲಾನ್! ಸಣ್ಣಕ್ಕೆ ನಸುಕೋಪ ಬಂದರುದೇ ಎನ್ನ ಫ್ರೆಂಡಿನ ಮೆಸ್ಸೇಜಿಲಿಪ್ಪ ಹಾಸ್ಯ ಎನ್ನ ಮಾರ್ಕೆಟ್ಟಿಂಗೆ ಹೋಪ ಅರ್ಧ ತಲೆಬೇನೆಯ ಕಡಮ್ಮೆ ಮಾಡಿತು. ಆ  ಈ ರೀತಿಯ ಹಾಸ್ಯ, ನೆಗೆ ಎಲ್ಲಾ ಬೇಕು ಮನೆವರೊಟ್ಟಿಂಗೆ, ಫ್ರೆಂಡುಗಳ ಹತ್ತರೆ, ನೆಂಟರು, ನೆರೆಕರೆವರಲ್ಲೆಲ್ಲಾ.

ಇವ್ವುದೇ ರಜ್ಜ ಹಾಸ್ಯ ಪ್ರಜ್ಞೆ ಇಪ್ಪ ವ್ಯಕ್ತಿ. ಈ ಸರ್ತಿ ಮೊದಾಲು ಎನಗೊಂದು ನೈಟಿ ತೆಗೆವಲೆ ಹೋದ್ದು! ಮನೆಲಿ ಹಾಕುವ ಎರಡು ಮೂರು ನೈಟಿಗೊ ಎಲ್ಲಾ ಹಳತ್ತಾಗಿ ಇವ್ವು ಯೇವಾಗಲೂ ಹೇಳುಗು, "ಆ ನೈಟಿಗಳ ಹಾಕುದರ ನಿಲ್ಲುಸು ಮಾರಾಯ್ತಿ, ಇನ್ನೊಂದರಿ ನೀನು ಹಾಕಿದ್ದರ ಕಂಡರೆ ಹರುದು ಹಾಕುವೆ, ಈಗಲೇ ಆ ಮಾರ್ಕೆಟ್ಟಿಂಗೆ ಹೋಪ ಲಿಸ್ಟಿಲಿ ಎರಾಡು ನೈಟಿ ಹೇಳಿ ಬರೆ" ಹೇಳಿ! ಪ್ರತೀ ಸರ್ತಿ ಮಾರ್ಕೆಟ್ಟಿಂಗೆ ಹೋದಿಪ್ಪಗಲೂ ಅಖೇರಿಗೆ ಈ ಕೆಲಸ ಮಡುಗಿ ಇನ್ನೊಂದರಿ ಬಂದಿಪ್ಪಗ ತೆಗದರಾತು, ಗಂಟೆ ಒಂದಾಯಿಕ್ಕೊಂಡು ಬಂತು, ತಡವಾತು ಹೇಳಿ ಮನಗೆ ವಾಪಸ್ಸು ಹೋಪದು! ಈ ಸಲ ಹಾಂಗಪ್ಪಲಾಗ ಹೇಳಿ ಮೊದಾಲು ಒಂದು ವಸ್ತ್ರದ ಅಂಗಡಿಗೆ ನುಗ್ಗಿದೆಯ. ಅಲ್ಲಿಯಾಣ ಸೇಲ್ಸ್ ಗರ್ಲ್‍ "ಏನು ಬೇಕು ಸಾರ್?" ಹೇಳಿ ಕೇಳಿತು. ಅದಕ್ಕಿವು ಹೇಳಿದವು, "ನೈಟಿ" ಹೇಳಿ. ಅಂಬಗ ಎನ್ನ ನೋಡಿಕೊಂಡು ಇವಕ್ಕೆ ಅದರ ಮರುಪ್ರಶ್ನೆ, "ಯಾರಿಗೆ, ಇವ್ರಿಗಾ?" ಹೇಳಿ. ಅಂಬಗ ಇವ್ವು, "ಹೌದು ಅವ್ರಿಗೇ, ಮತ್ತೆ ನಾನು ನೈಟಿ ಹಾಕುವುದಿಲ್ಲ!" ಹೇಳಿಯಪ್ಪದ್ದೇ ಅದಕ್ಕೂ, ಎನಗೂ, ಅಂಗಡಿಯವಕ್ಕೂ ನಗುವೋ ನಗು! ಆ ಹುಡುಗಿ ಎಂಗೊ ನೈಟಿ ತೆಕ್ಕಂಡು ಹೆರ ಬಪ್ಪಗಲೂ ನೆಗೆ ಮಾಡಿಯೊಂಡೇ ಇದ್ದತ್ತು! ಅಂತೂ ಇಂತೂ ಮುಕ್ಕಾಲುವಾಶಿ ಕೆಲಸಂಗಳ ಮುಗುಶಿ ಮನಗೆ ಎತ್ತಿಯಪ್ಪಗ ಗಂಟೆ ಒಂದೂವರೆ ಆಗಿತ್ತು. ಕೈಕಾಲು ತೊಳದು ಉಂಬಲೆ ಅಣಿ ಮಾಡಿ ಇವಕ್ಕೆ ಮಾಂತ್ರ ಬಟ್ಟಲು ಮಡುಗಿದೆ. ಅಂಬಗ ಇವು, "ನಿನಗೆಲ್ಲಿದ್ದು ಬಟ್ಟಲು?" ಹೇಳಿ ಕೇಳಿದವು. ಆನು ಹೇಳಿದೆ, "ಮಾರ್ಕೆಟಿಲಿ ಅರ್ಧ ಗಂಟೆಗೆ ಮೊದಾಲು ಬೊಂಡ ಕುಡುದ್ದಲ್ಲದಾ, ಎನಗೆ ಹಶು ಅಡಗಿದ್ದು, ನಿಂಗೊ ಉಣ್ಣಿ, ಆನು ಮತ್ತೆ ಉಣ್ತೆ" ಹೇಳಿ. ಹೆಚ್ಚಾಗಿ ಎನಗೆ ಉದಿಯಪ್ಪಗ ಕಾಫಿ ತಿಂಡಿಗಪ್ಪಗಳೋ, ಮಧ್ಯಾನ್ಹ, ಇರುಳು ಊಟಕ್ಕಪ್ಪಗಳೋ ಎಂತಾರೂ ಎಷ್ಟೇ ಕಡಮ್ಮೆ ಪ್ರಮಾಣಲ್ಲಿ ತಿಂದರೂ, ಕುಡುದರೂ ಹಶು ಅಡಗಿಬಿಡ್ತು, ಮತ್ತೆ ಒಂದು ಗಂಟೆ ಕಳುದಪ್ಪಗ ಹಶು ಶುರುವಾಗಿ ತಿಂಬದು! ಹೀಂಗಪ್ಪಗ ನಿತ್ಯ ಉಂಬ ಹೊತ್ತು ತಪ್ಪಿ ಹೋಗಿ ದಿನಚರಿಯೇ ಅಸ್ತವ್ಯಸ್ತ ಆಗಿಬಿಡ್ತು. "ಆನು ಹಶು ಅಪ್ಪಗ ಉಂಬೆ ನಿಂಗೊ ಉಣ್ಣಿ" ಹೇಳಿ ಪುನ: ಹೇಳಿದೆ! ಇವು ಉಂಬಲೆ ಕೂಪದು ಬಿಟ್ಟು ಇಡೀ ಮನೆಯ ಮೂಲೆ ಮುಡುಕಿನ, ಕಪಾಟಿನೆಡೆಲಿ, ಮಂಚದಡಿ, ಫ್ರಿಡ್ಜಿನ ಬಾಗಿಲು ತೆಗದು ಎಲ್ಲಾ ಎಂತರನ್ನೋ ಹುಡುಕುಲೆ ಶುರುಮಾಡಿದವು! "ಎಂತರಾ ಅದು ಹುಡುಕುದು ನಿಂಗೊ" ಹೇಳಿ ಕೇಳಿಯೇ ಬಿಟ್ಟೆ. "ಆನು ನಿನ್ನ ಹಶುವಿನ ಹುಡುಕುತ್ತಾ ಇಪ್ಪದು ಮಾರಾಯ್ತಿ, ಅದು ಎಲ್ಲಿ ಅಡಗಿ ಕೂಯ್ದು ಹೇಳಿ!" ಹೇಳಿಯಪ್ಪಗ ಆರಿಂಗೆ ತಾನೆ ನೆಗೆ ಬಾರದಿಪ್ಪದು? ಇವರ ಈ ಕುಶಾಲು ಮಾರ್ಕೆಟ್ಟಿಂಗೆ ಹೋದ ಅರ್ಧ ಬಚ್ಚಲಿನ ಮರೆಶಿತು! ಇಂತಾ ಹತ್ತು ಹಲವು ಸಂದರ್ಭಂಗಳಲ್ಲಿ ಇವ್ವು ಇಂತಾ ವಾತಾವರಣಂಗಳ ಮನೆ ಒಳಾದಿಕ್ಕೆ ಸೃಷ್ಠಿಸಿ ಎಂಗಳೆಲ್ಲಾ ನೆಗೆ ಮಾಡಿಸ್ತಾ ಇರ‍್ತವು! ಕಷ್ಟಪಟ್ಟು ಮಾಡಿದ ಅಡುಗೆಯ ಮಕ್ಕೊ ತಿನ್ನದ್ದೇ, ಕುಡಿಯದ್ದೇ ಇಪ್ಪಾಗ ಮಹಾ ಕೋಪ ಬತ್ತಲ್ಲದಾ? ಬಂದ ಕೋಪಲ್ಲಿ ಬೈದ ಮತ್ತೆ ತಿಂತವ? ಕುಡಿತ್ತವಾ? ಇಲ್ಲೆನ್ನೇ? ಆನೀಗ ಬೈವದರ ಬಿಟ್ಟು ಕುಶಾಲು ಮಾಡಿಯೇ ಅವರ ಮನಸ್ಸಿನ ಗೆಲ್ಲುವ ಪ್ರಯತ್ನ ಮಾಡ್ತಾ ಇದ್ದೆ! ಓ ಮೊನ್ನೆ ಒಂದರಿ ಗ್ಲಾಸಿಂಗೆ ಎರದು ಕೊಟ್ಟ ಹಾಲಿನ ಟೀಪಾಯಿಯ ಮೇಲೇ ಮಡುಗಿ ಕುಡಿಯದ್ದೇ ಕಾಲೇಜಿಂಗೆ ಹೋಗಿತ್ತು ಮಗಳು. ಆ ಗ್ಲಾಸಿನ ನೋಡಿದ ಕೂಡ್ಲೇ ಕೋಪ ಬಂದು, "ಇವಕ್ಕೆಲ್ಲಾ ಕಾಲು ಬುಡಕ್ಕೊರೆಗೆ ತಂದು ಕೊಟ್ಟರುದೇ ಕುಡಿವಲೆಡಿತ್ತಿಲ್ಲೆ, ಮತ್ತೆ ಅಲ್ಲಿ ಬಚ್ಚುತ್ತು, ಇಲ್ಲಿ ಬಚ್ಚುತ್ತು ಹೇಳಿ ಹೇಳುದು, ಎಂಗೊಲ್ಲಾ ಹೀಂಗೆ ಮಾಡಿಯೊಂಡಿತ್ತಿಲ್ಲೆಪ್ಪಾ, ಕೊಡದ್ದರೆ ಕೇಳಿ ಕುಡುಕೊಂಡಿತ್ತೆಯ.....ಮಾಡಿಕೊಡುದು ಹೆಚ್ಚಾತು...ಹೊತ್ತಪ್ಪಗ ಬತ್ತನ್ನೆ, ನೋಡಿಕೊಳ್ತೆ..." ಅದರ ಅನುಪಸ್ಥಿತಿಲಿ ಎನ್ನ ಆವೇಶದ ಮಾತುಗೊ ಹೆರ ಬಂದೊಂಡೇ ಇತ್ತು! ಉಪಶಮನ ಆದ ಮತ್ತೆ ಮೊಬೈಲು ತೆಕ್ಕೊಂಡು ಮಗಳಿಂಗೆ ಒಂದು ಸಂದೇಶ ಟೈಪ್ ಮಾಡಿದೆ. "ಟೀಪಾಯ್ ಮೇಲೆ ಕುಡಿವಲೆ ಹೇಳಿ ತಂದು ಮಡುಗಿದ ಹಾಲಿನ ಕುಡಿಯದ್ದೇ ಹೋದೆನ್ನೆ ಮಂಗಾ!" ಹೇಳಿ. ಕಳುಸುವ ಮೊದಾಲು ಒಂದರಿ ಓದಿ ನೋಡಿದೆ. ಎಂತಕೋ ಮನಸ್ಸು ಇದೇ ಮೆಸ್ಸೇಜಿನ ರಜ್ಜ ಹಾಸ್ಯಲ್ಲಿ ಕಳಿಸಿರೆ ಹೇಂಗೆ ಹೇಳಿ ಎನ್ನತ್ತರೆ ಕೇಳಿತು. ಅದರ ಕೋರಿಕೆಗೆ ಮಣಿದು ’ಮಂಗಾ’ ಹೇಳಿ ಟೈಪ್ ಮಾಡಿದ್ದರಲ್ಲೇ ಸಣ್ಣ ತಿದ್ದುಪಡಿ ಮಾಡಿದೆ. ಮ(ಂ)ಗಾ ಹೇಳಿ ಮಾಡಿ ಕಳಿಸಿದೆ! ಅಂಬಗ ಮಗಳಿನ ಒಂದು ಪೀರಿಯಡ್ ಮುಕ್ಕೊಂಡು ಬಂದ ಕಾರಣ ಮೊಬೈಲಿಲಿ ಎನ್ನ ಮೆಸ್ಸೇಜಿನ ನೋಡಿ ಭಾರೀ ಖುಷಿಲಿ ಎನಗೆ ಉತ್ತರ ಕೊಟ್ಟತ್ತು, "ಹ್ಹಹ್ಹಹ್ಹ ಎನ್ನ ಮುದ್ದು ಅಮ್ಮಾ, ಮರತು ಹೋತು ಕುಡಿವಲೆ, ಕಾಲೇಜಿಂದ ಮನೆಗೆ ಬಂದ ಕೂಡ್ಲೇ ಎರಡು ಗ್ಲಾಸ್ ಹಾಲು ಕುಡಿತ್ತೆ, ಡೋಂಟ್ ವರಿ ಬೇಬಿ" ಹೇಳಿ! ಎನಗೆ ಬಂದ ’ಆ’ ಕೋಪದೇ ಇದರ ಮೆಸ್ಸೇಜು ನೋಡಿ ಓಡಿ ಹೋತು! ಮಗಳಿಂಗೆ ಎನ್ನ ಮೆಸ್ಸೇಜಿಲಿಪ್ಪ ಹಾಸ್ಯದೇ ಹಾಂಗೆ ಅದರ ಮೇಲಿಪ್ಪ ಕಾಳಜಿ ಇಪ್ಪದು ಗೊಂತಾಗಿ ಭಾರೀ ಖುಷಿ ಆಗಿತ್ತು. ಕಾಲೇಜು ಮುಗುಶಿ, ಗೇಟಿನ ಹತ್ತರೆ ಬಪ್ಪಾಗಲೇ, "ಅಮ್ಮಾ, ನಿನ್ನ ಹಾಸ್ಯ ಪ್ರಜ್ಞೆಗೆ, ನಿನ್ನ ಕಾಳಜಿಗೆ ಆನು ಶರಣು, ಫ್ರೆಂಡುಗೊಕ್ಕೆಲ್ಲಾ ಹೇಳಿದೆ ನಿನ್ನ ಮೆಸ್ಸೇಜಿನ, ಅವ್ವು ಕೂಡಾ ನೆಗೆ ಮಾಡಿದವು ಗೊಂತಿದ್ದಾ?... ಕೊಡು ಆ ಎರಡು ಗ್ಲಾಸ್ ಹಾಲಿನ ಈಗಲೇ ಕುಡಿತ್ತೆ" ಹೇಳಿ ಎನ್ನ ಪ್ರಜ್ಞೆ ತಪ್ಪುವ ಹಾಂಗೆ ಮಾಡಿತು! ಹಾಂಗೇ ಈ ಹಾಸ್ಯ ಪ್ರಜ್ಞೆ ಎಂಗೊಳೆಲ್ಲರ ಬಾಳಿಲಿ ಹಾಸುಹೊಕ್ಕಾಗಿದ್ದರೆ ಮನಸ್ಸು, ದೇಹ, ಪರಿಸರ ಎಲ್ಲಾ ಹಸನಾಗಿರ‍್ತು. 

ಜೀವನಲ್ಲಿ ಒಬ್ಬನ ಒಬ್ಬ ಚೆಂದಕ್ಕೆ ಮಾತಾಡ್ಸಿಯೊಂಡು, ಅವಕ್ಕೆ ಬೇನೆ ಆಗದ್ದ ಹಾಂಗೆ ಮಾತಿಲಿ ಹಾಸ್ಯ ಪ್ರಜ್ಞೆ ಬೆಳೆಶಿಯೊಂಡು, ನೆಗೆ ಮಾಡಿಯೊಂಡು, ಸಂತೋಷಂದ ಇದ್ದರೆ ಅದುವೇ ದೊಡ್ಡ ವರ, ದೇಹದ ಆರೋಗ್ಯಕ್ಕೂ ಮೂಲ. ಹೀಂಗೆಲ್ಲಾ ಇದ್ದರೆ ಆರೋಗ್ಯ ಹೇಳಿ ಹೇಳುದರ ನಾವೆಲ್ಲಾ ಎಷ್ಟೋ ಕಡೆ ಕೇಳಿ, ಓದಿ ತಿಳುಕೊಂಡಿದಲ್ಲದಾ? ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದು ಅತಿಶಯದ ಧರ್ಮ, ನಗುವ, ನಗಿಸುವ, ನಗಿಸಿ, ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳ್ಳೋ ಮಂಕುತಿಮ್ಮ - ಕವಿ ಡಿ.ವಿ.ಗುಂಡಪ್ಪ ಬರದ ಈ ಕವನದ ಸಾಲುಗಳಲ್ಲಿ ಎಷ್ಟು ಅರ್ಥ ಇದ್ದಲ್ಲದಾ?


ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.