Thursday, February 26, 2015

ಎಲ್ಲೋರು ಮಾಡುದು ಹೊಟ್ಟೆಗಾಗಿ...! - ಮೇ ೨೦೧೩ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ

ಎಲ್ಲೋರು ಮಾಡುದು ಹೊಟ್ಟೆಗಾಗಿ...!
ಕಂಡಾಬಟ್ಟೆ ತೋರದವ ಒಬ್ಬ ಡಾಕ್ಟ್ರನ ಹತ್ತರೆ ಹೋಗಿ,"ಎನ್ನ ಶರೀರವ ಸಪೂರ ಮಾಡಿಯೊಂಬಲೆ ಎಂತಾರು ಔಷಧಿ ಇದ್ದೋ" ಹೇಳಿ ಕೇಳಿದಡ. ಡಾಕ್ಟ್ರು ಹೇಳಿದವಡ,"ಅದಕ್ಕೆಲ್ಲಾ ಎಂತ ಔಷಧಿಯೂ ಬೇಡ. ಇರುಳಪ್ಪಗ ಎರಡೇ ಎರಡು ಚಪಾತಿ ತಿಂದು ಮನುಗಿ, ಅಷ್ಟೇ ಸಾಕು ಹೇಳಿ. "ಆತು ಡಾಕ್ಟ್ರೇ, ನಿಂಗೊ ಹೇಳಿದ ಹಾಂಗೇ ಮಾಡ್ತೆ. ಆದರೆ ಈ ಚಪಾತಿಗಳ ಊಟಕ್ಕೆ ಮೊದಾಲು ತಿನ್ನೇಕ್ಕಾ? ಊಟದ ನಂತರವಾ?" ಹೇಳಿ ಪ್ರಶ್ನೆ ಮಾಡಿದನಡ ಆ ಪುಣ್ಯಾತ್ಮ!!
ಒಂದ್ನಿಮಿಷ...ಒಂದ್ನಿಮಿಷ....ಇಷ್ಟು ಓದಿಯಪ್ಪದ್ದೇ ಹಲ್ಲುಬಿಟ್ಟು ಆ ಮನುಷ್ಯನ ಗ್ರೇಶಿಯೊಂಡು ನೆಗೆ ಮಾಡ್ಲೆ ಶುರು ಮಾಡೇಡಿ ಅಥವಾ ಮೂಗಿನ ಮೇಲೆ ಬೆರಳು ಮಡುಗೇಡಿ! ಹೆಚ್ಚು ಕಡಮ್ಮೆ ಹಾಂಗೆ ಪ್ರಶ್ನೆ ಮಾಡದ್ದರೂದೇ ಅದೇ ಗುಂಪಿಂಗೆ ಸೇರಿದವ್ವೇ! ಅಂವ ಪಾಪ ಕೇಳಿದ ಅಷ್ಟೇ!! ಎಲ್ಲೋರೂ ತಿಂಬ್ರಾಂಡಿಗಳೇ! ಉದಿಯಪ್ಪಗಣ ಕಾಫಿ, ತಿಂಡಿಯ ಮನೆಲಿ ಗಡದ್ದಾಗಿ ತಿಂದು ಢರ್ರನೆ ತೇಗಿದ್ದರೂ ಕೂಡಾ ಎಲ್ಲಿಯಾದರೂ ನೆಂಟರಿಷ್ಟರ, ಅಕ್ಕಪಕ್ಕದವರ, ಫ್ರೆಂಡುಗಳ ಮನೆಗೋ ಹೋದತ್ತು ಹೇಳಿಯಾದರೆ, ಅಲ್ಲಿ ಅವ್ವೆಲ್ಲಿಯಾದರೂ ತಿಂಬಲೆ, ಕುಡಿವಲೆ ಕೊಟ್ಟರೆ ಸುತಾರಾಂ ಬಿಡ್ತಿಲ್ಲೆಯ! ಔಪಚಾರಿಕವಾಗಿ, "...ಮನೆಲಿ ಈಗಷ್ಟೇ ಕಾಫಿ, ತಿಂಡಿ ಎಲ್ಲಾ ಮುಗುಶಿ ಬಂದದು....ಎಂತದ್ದೂ ಬೇಡ.....ಹಾಂಗೂ ನಿಂಗೊಗೆ ಕೊಡೇಕು ಹೇಳಿಯಾದರೆ ಒಂದು ರಜ್ಜ ಸಾಕು....." ಹೇಳಿ ಹೇಳ್ತೆಯ. ಅಂಬಗ ಅವ್ವು ಸುಮ್ಮಗಿರ‍್ತವಾ? "ಎಂತದ್ದೂ ಆವುತ್ತಿಲ್ಲೆ. ತಿಂಡಿ ತಿಂದು ಈಗ ಅರ್ಧ ಗಂಟೆ ಆಯಿದಿಲ್ಲೆಯಾ? ಅದು ನಿಂಗೊ ಇಲ್ಲಿಗೆ ಬಂದು ಎತ್ತಿಯಪ್ಪಗ ಕರಗಿಕ್ಕು...ತಿನ್ನಿ...ಹಾಂಗೆಂತಾರೂ ಆದರೆ ಆನು ನೋಡಿಯೊಂಬೆ..." ಹೇಳಿಯೊಂಡು ತಟ್ಟೆ ತುಂಬಾ ತಿಂಡಿ, ಗ್ಲಾಸು ತುಂಬಾ ಕಾಫಿಯನ್ನೋ, ಇಲ್ಲೆ ನಿಂಗೊಗೆ ಇಷ್ಟ ಇಪ್ಪ ಪಾನೀಯವ ತುಂಬು ಹೃದಯಂದ ಕೊಡ್ತವು. "ಛೇ..ನಿಂಗೊ ಯೇವಾಗಲೂ ಹೀಂಗೇ....ತಿನ್ಸದ್ದೆ ಕಳ್ಸಿದ ಜೆನವೇ ಅಲ್ಲ...ನಿಜವಾಗಿಯಾದ್ರೂ ಬೇಡ ಇತ್ತು...." ಹೇಳಿ ಹೇಳಿಯೊಂಡೇ ಕೈಗೂ, ಬಾಯಿಗೂ ಕೆಲಸ ಕೊಡ್ತೆಯ! ಮತ್ತಿನ್ನು ಉದಿಯಪ್ಪಗ ಮನೆಂದ ತಿಂಡಿ, ಕಾಫಿ ಮುಗುಶಿಕ್ಕಿ ಹನ್ನೊಂದು ಗಂಟೆ ಒಳ ಎಲ್ಲಿಯಾದರೂ ಮದುವೆ ಮನೆಗೋ, ಉಪನಯನದ ಮನೆಗೋ, ಮನೆ ಒಕ್ಕಲಿಂಗೋ ಹೋಗಿ ಎತ್ತಿಕೊಂಡತ್ತು ಹೇಳಿಯಾದರೆ, ಅದೇ ಸಮಯಕ್ಕೆ ಅಕಸ್ಮಾತ್ ಅಲ್ಲಿ ಅವ್ವು ಉದಿಯಪ್ಪಗಣ ತಿಂಡಿ, ಕಾಫಿ ಸರಬರಾಜಿನ ಕ್ಲೋಸ್ ಮಾಡಿರದಿದ್ದರೆ ಖಂಡಿತಾ ಸಿಕ್ಕಿದ ಅವಕಾಶವ ತಪ್ಪುಸದ್ದೇ ಕೈಕಾಲು ತೊಳದ ಶಾಸ್ತ್ರ ಮಾಡಿ, ಕೂದು ಗಡದ್ದಾಗಿ ತಿಂಬ ಕ್ರಮವ ಹೆಚ್ಚಾಗಿ ಫಾಲೋ ಮಾಡುವವಿದ್ದವು! ಇನ್ನೆಂತ ರಜ್ಜ ಹೊತ್ತಿಲಿ ಮೃಷ್ಠಾನ್ನ ಭೋಜನ ಇದ್ದು ಹೇಳಿ ಗೊಂತಿದ್ದರೂ, ಗೊತ್ತು ಗುರಿ ಇಲ್ಲದ್ದೇ ಹೊಟ್ಟೆ ತುಂಬುಸುವ ಕಾಯಕ ನಿರಾಯಾಸವಾಗಿ, ನಿರಾತಂಕವಾಗಿ ಸಾಗಿರ‍್ತು! ಒಟ್ಟಾರೆ ಸಿಕ್ಕಿದ ಅವಕಾಶವ ಬಿಡ್ಲೆ ಆರುದೇ ತಯಾರಿಲ್ಲೆ! ಇನ್ನು ಮನೇಲೇ ಇಪ್ಪೋರು ಎಡೆಹೊತ್ತಿಲಿ ತಿಂಬಲೆ ಹೇಳಿ ಡಬ್ಬಗಳಲ್ಲಿ, ಫ್ರಿಡ್ಜಿಲೆಲ್ಲಾ ವಿವಿಧ ನಮೂನೆಯ ತಿಂಡಿಗಳ ಮನೇಲಿ ಮಾಡಿದ್ದರನ್ನೋ, ಹೆರಂದ ತಂದದ್ದರನ್ನೋ ದಾಸ್ತಾನು ಮಡುಗಿರ‍್ತವು ಮನೆ ಒಳವೇ ಹೋವುತ್ತಾ ಬತ್ತಾ ತಿಂಬಲೆ! ಆಫೀಸಿಂಗೆ ಹೋದವ್ವು ಎಂತ ತಿನ್ನದ್ದೇ ಕೂರ‍್ತವಾ? ಅಲ್ಲಿಯೇ ಆಫೀಸಿನ ಅಥವಾ ಆಫೀಸಿನ ಹತ್ತರೆ ಇಪ್ಪ ಕ್ಯಾಂಟೀನ್‍ಗಳ ತಟ್ಟೆ, ಗ್ಲಾಸುಗಳ ಹಳತ್ತು ಮಾಡಿರ‍್ತವು!
ಇನ್ನು ಫ್ಯಾಮಲಿ ಮೀಟಿಂಗೋ. ಆಫೀಸು ಮೀಟಿಂಗೋ ಎಂತಾರೂ ಇದ್ದರೆ ಅಲ್ಲಿ ಕಾರ್ಯಕ್ರಮದ ಶುರುವಿಲೋ, ನಡಿವಿಲೋ, ಅಕೇರಿಲೋ ಸಿಕ್ಕುವ ಒಂದು ಗ್ಲಾಸ್ ಕಾಫಿ, ಟೀ, ಬಾದಾಮಿ ಹಾಲಿಂಗೋ, ಅದರೊಟ್ಟಿಂಗೆ ಸಿಕ್ಕುವ ಒಂದು ಹಿಡಿ ಉಪ್ಪಿಟ್ಟಿಂಗೋ, ಕರಿದ ಕುರುಕುಲು ತಿಂಡಿಗೊ, ಸ್ವೇಟಿಂಗೋ ಜೀವ ಬಿಡುವವ್ವು ಎಷ್ಟು ಜೆನ ಇಲ್ಲೆ?! ಮೀಟಿಂಗಿಂಗೆ ಹೋಪ ಮೊದಾಲು ಹೆಂಡತಿ ಮಕ್ಕಳನ್ನುದೇ ಹೆರಡ್ಲೆ ಹೇಳಿಕ್ಕಿ, "ಇದಾ, ನಿಂಗಳೂ ಬನ್ನಿ...ಮೀಟಿಂಗಿಲಿ ಕಾಫಿ, ತಿಂಡಿ ಎಲ್ಲಾ ಇರ‍್ತು. ತಿಂದಿಕ್ಕಿ, ರಜ್ಜ ಹೊತ್ತು ಕೂದಾಂಗೆ ಮಾಡಿ ನಿಂಗೊ ಎಲ್ಲಾ ಸೀದಾ ಮನೆಗೆ ಬನ್ನಿ, ಆನು ಮೀಟಿಂಗ್ ಮುಗುಶಿಯೊಂಡು ಬತ್ತೆ" ಹೇಳಿ ಅವರ ಎಲ್ಲಾ ಬಪ್ಪಲೆ ಮಾಡಿ ಮೀಟಿಂಗಿಲಿ  ಕೋರಂ ಜಾಸ್ತಿ ಮಾಡುವ್ವವ್ವು ಎಷ್ಟು ಜೆನಂಗೊ ಇಲ್ಲೆ?! ಎಲ್ಲಿಯಾದರೂ ಮೀಟಿಂಗು ಶುರುವಾಗಿ ಇನ್ನೂ ಕಾಫಿ, ತಿಂಡಿ ಸಿಕ್ಕದ್ದರೆ ಯೇವಾಗ ಬತ್ತಪ್ಪಾ ಈ ತಿಂಡಿ, ಕಾಫಿ ಎಲ್ಲಾ ಹೇಳಿ ಮನಸ್ಸು ಹಾತೊರೆತ್ತಾ ಇರ‍್ತು! ಮನೇಲಿ ಕಾಫಿ, ತಿಂಡಿ ಮುಗುಶಿ ಬಂದಿದ್ದರೂ ಸಮ, ಹಶುವಿದ್ದರೂ ಸಮ, ಇಲ್ಲದ್ದರೂ ಸಮ! ಅಂತಲ್ಲೆಲ್ಲಾ ಒಂದೋ ಕಾಫಿ, ತಿಂಡಿ ಇಲ್ಲದ್ದರೆ, "ಕಾಫಿ, ತಿಂಡಿ ಇಲ್ಲದ್ದೇ ಎಂತಾ ಪೊಟ್ಟು ಮೀಟಿಂಗೋ..." ಹೇಳಿ ಬೈದು ಬಪ್ಪೋರೂ ಇದ್ದವು!
ಮತ್ತೆ ತರತರದ ಖಾದ್ಯಂಗಳ ತಿಂಬಲೆ ಬೇಕಾಗಿಯೇ ವಾರಾಂತ್ಯ ಸ್ಪೆಷಲ್ಲು, ಪಾರ್ಟಿ, ಟ್ರೀಟ್ ಹೇಳಿ ಹೆಸರು ಹೇಳಿಯೊಂಡು ದೊಡ್ಡ, ದೊಡ್ಡ ಸ್ಟಾರ್ ಹೋಟೇಲುಗೊಕ್ಕೆ, ಐಸ್‍ಕ್ರೀಂ ಪಾರ್ಲರ‍್ಗೊಕ್ಕೆ ಖಾಯಂ ಭೇಟಿ ಆಯಿಕ್ಕೊಂಡೇ ಇರ‍್ತು! ಇಷ್ಟೆಲ್ಲಾ ಮುಗುದ ಮತ್ತೂ ಮಾರ್ಗದ ಬದಿಲಿ ಧೂಳು ಮಿಶ್ರಿತ ಪಾನೀಪೂರೀ, ಭೇಲ್‍ಪೂರೀ, ಚರ‍್ಮುರಿಗಳನ್ನೆಲ್ಲಾ ಬಿಡುವ ಮಾತೇ ಇಲ್ಲೆ! ಎಂತದ್ದು ಎಲ್ಲಿ ಸಿಕ್ಕಿದರೂ ಸಮ, ಇಪ್ಪದು ಒಂದೇ ಮಂತ್ರ...ಸ್ವಾಹಾ....!  ಒಟ್ಟಾರೆ ಕೈಗೂ ಬಾಯಿಗೂ ಯಾವಾಗಲೂ ಪುರುಸೊತ್ತಿಲ್ಲೆ!
ಯಾವಾಗಲೂ, ಎಲ್ಲಾ ಕಾಲಲ್ಲಿಯೂ, ಎಲ್ಲೋರೂ ನೆಂಪು ಮಡಿಕೊಳ್ಳೇಕ್ಕಾದ ವಾಕ್ಯ ಒಂದಿದ್ದು. ’ನಾವೆಲ್ಲಾ ಬದುಕುದಕ್ಕೋಸ್ಕರ ತಿನ್ನೇಕಷ್ಟೇ ಹೊರತು ತಿಂಬಲೆ ಬದುಕುದಲ್ಲ’. ನಮ್ಮ ನಮ್ಮ ಸ್ವಸ್ಥ ಆರೋಗ್ಯಕ್ಕೆ ನವು ತಿಂಬ ಆಹಾರವೇ ಕಾರಣ. ಬೇಡದ್ದರೆಲ್ಲಾ ಹಶುವಿಲ್ಲದ್ದರೂದೇ ತಿಂದೊಡೇ ಇದ್ದರೆ, ಆ ತಿಂದ ಆಹಾರವೇ ಅನಾರೋಗ್ಯಕ್ಕೂ ಮೂಲ ಕಾರಣ ಎಂಬ ಸತ್ಯವ ತಿಳುದಿರೇಕು. ಅತಿಯಾದರೆ ಅಮೃತವೂ ವಿಷ. ಒಬ್ಬ ಎಷ್ಟು ತಿನ್ನುತ್ತಾ ಹೇಳುದು ಮುಖ್ಯ ಅಲ್ಲ. ಯಾವ ಯಾವ ಹೊತ್ತಿಲಿ ಎಷ್ಟೆ ಷ್ಟು  ಪ್ರಮಾಣಲ್ಲಿ, ಎಂತರೆಲ್ಲಾ ತಿಂದರೆ ಅಕ್ಕು ಹೇಳಿ ತಿಳುಕೊಂಡು, ಆಹಾರ ಕ್ರಮ ಅನುಸರಿಸೋದು ಒಳ್ಳೆದು. ಉದಿಯಪ್ಪಗಣ ಬ್ರೇಕ್ ಫಾಸ್ಟ್ ರಾಜನ ಊಟದ ಹಾಂಗಿರೇಕಡ. ಅಂಬಗ ಎಷ್ಟು ಪೌಷ್ಠಿಕಾಂಶ ಇಪ್ಪ ಆಹಾರವ ತಿನ್ನುತ್ತೋ ಅಷ್ಟು ಒಳ್ಳೆದು. ಇನ್ನು ಮಧ್ಯಾನ್ಹದ ಊಟ ಸಾಮಾನ್ಯ ಜೆನರ ಊಟದ ಹಾಂಗಿರೇಕು, ಇರುಳಪ್ಪಗಣ ಆಹಾರ ಭಿಕ್ಷುಕರ ಊಟದ ಹಾಂಗಿರೇಕಡ. ಈ ಮೂರು ಹೊತ್ತಿನ ಎಡೇಲಿ ಅಂಬಗಂಬಗ ಕಾಟಾಂಕೋಟಿ ತಿಂಬ ಬಾಯಿ ಚಪಲಕ್ಕೆ ಕಡಿವಾಣ ಹಾಕೇಕು ಹೇಳಿ ಬೇರೆ ಹೇಳೇಡ ಅಲ್ಲದಾ?!

ತ್ರಿವೇಣಿ ವಿ. ಬೀಡುಬೈಲು,
ಮಂಗಳೂರು.

No comments:

Post a Comment