Monday, September 10, 2018

ಇದೆಂತ ಬ್ರಹ್ಮವಿದ್ಯೆಯಾ?! - A Short humor which is published in "Havyaka Vaarthe"magazine September 2018 issue


ಇದೆಂತ ಬ್ರಹ್ಮವಿದ್ಯೆಯಾ?!

ಉಪ್ಪುದೇ ಇಂಗುದೇ ಇದ್ದರೆ ಮಂಗನೂ ಅಡುಗೆ ಮಾಡುಗಡ! ಆದರೆ ಅಡುಗೆ ಮನೆಲಿ ಎಲ್ಲಾ ವಸ್ತುಗೊ ಇದ್ದರುದೇ ಎನ್ನ ಅಡುಗೆಗೆ ಮಾಂತ್ರ ಮಾಡಿದಷ್ಟು ಸಲವೂ ಬೇರೆ ಬೇರೆ ರುಚಿ! ಒಟ್ಟಾರೆ ತಿಂಬಾಗಿರ್ತು ಹೇಳಿ ಅಷ್ಟೇ ಒಂದು ಸಮಾಧಾನ ಎನಗೆ! ಹೊಟೇಲಿನ ಅಡುಗೆವ್ವು ಎಲ್ಲಿಯಾದರೂ ಎನ್ನಂಗಾಗಿದಿದ್ದರೆ ಯೇವಾಗಲೋ ಓನರ್ ಹೊಟೇಲ್ ಮುಚ್ಚಿ ಮನೆಲಿ ಕೂರೇಕಾಗಿತ್ತು!! ಅಲ್ಲಾ ಹೊಟೇಲಿಲಿ ತಿಂಡಿಗೊಕ್ಕೆಲ್ಲಾ ಒಂದೇ ರುಚಿ, ಬಣ್ಣ ಎಲ್ಲಾ ಹೇಂಗೆ ಬತ್ತೋಪ್ಪಾ ದೇವರಿಂಗೇ ಗೊಂತು! ಯೋಚನೆ ಮಾಡಿಯೇ ಎನ್ನ ತಲೆ ಹಣ್ಣಾಯ್ದು! ಜೆನಂಗ ಕೆಲವು ಹೊಟೇಲುಗೊಕ್ಕೆ ಅಲ್ಲಿಯಾಣ ಪುಲಾವು, ಬಿರಿಯಾನಿ, ದೋಸೆ, ಪೂರಿ ಇನ್ನೆಂತೆಲ್ಲೋ ಅಲ್ಲಿ ಸಿಕ್ಕುದೇ ಲಾಯ್ಕ ಹೇಳಿಯೊಂಡು ಲಾಂಬು ಕಟ್ಟಿ ಹೋವುತ್ತವಪ್ಪ ಪ್ರತೀ ವಾರದ ಅಕೇರಿಲಿ! ದೇವಸ್ಥಾನಕ್ಕುದೇ ಅಷ್ಟು ಶ್ರದ್ಧಾ ಭಕ್ತಿಲಿ ಹೋಗವು! ಕೆಲವು ಗೆಂಡು ಮಕ್ಕೊ ಕನಿಷ್ಠ ಪಕ್ಷ ದಿನಲ್ಲೊಂದರಿಯಾದರೂ ಹೊಟೇಲಿಂಗೆ ಭೇಟಿ ಕೊಡುದರ ಆನು ನೋಡಿದ್ದೆ!! ಅದು ಆನು ಹೋಪ ಆಫೀಸಿಲೇ ಆದಿಕ್ಕು ಅಥವಾ ಹೀಂಗೆ ಯೇವಗಲಾದರು ಹೊಟೇಲಿಂಗೆ ಹೋದಿಪ್ಪಗ ನೋಡಿದ್ದಾದರೂ ಆದಿಕ್ಕು! ಹೊಟೇಲ್ ಹತ್ತರೆ ಮನೆ ಇಪ್ಪವೂ ದಿನಾ ಹೊಟೇಲಿಂಗೆ ಬಂದದರ ನೋಡಿದ್ದೆ. ಅದೇ ಒಂದು ಕೌತುಕ ಎನಗೆ!! ಬಹುಶ: ಹೆಂಡತಿ ಊರಿಂಗೆ ಹೋಗಿದ್ದಿಕ್ಕು ಅಥವಾ ಮನೆಲಿ ಹೆಂಡತಿ ಮಾಡುವ ಅಡುಗೆಯ ಅವತಾರವೇ ಇದಕ್ಕೆ ಕಾರಣವಾ ಅಲ್ಲಾ ಬುತ್ತಿಗೆ ಹಾಕಿ ತಂದರೆ ತಣುದ್ದರ ತಿಂಬಲೆ ಗೆಂಡುಮಕ್ಕೊಗೆ ಲಾಯ್ಕಾವುತ್ತಿಲ್ಲೆ ಹೇಳಿಯಾ ಎನಗೆ ಅದಕ್ಕೂ ಆರಿಂದಲೂ ಸರೀ ಉತ್ತರ ಇಷ್ಟನ್ನಾರ ಸಿಕ್ಕಿದ್ದಿಲ್ಲೆ!

ಮನಗೆ ಕೇವಲ ಒಬ್ಬನೇ ಒಬ್ಬ ನೆಂಟ ಒಂದು ಹೊತ್ತಿನ ಊಟಕ್ಕೆ ಬತ್ತ ಹೇಳಿ ಶುದ್ದಿ ಸಿಕ್ಕಿದರೆ ಸಾಕು ಇಲ್ಲಿ ಎನಗೆ ಟೆನ್ಶನ್ ಶುರು ಆವುತ್ತು! ಮೊದಲೇ ತಿಳುಶದ್ದೇ ನೆಂಟರು ಬಂದವು ಹೇಳಿದರೆ ಎನ್ನ ಪರಿಸ್ಥಿಯ ಕೇಳುದೇ ಬೇಡ! ಮತ್ತಿನ್ನು ಮೂರು ನಾಲ್ಕು ಜೆನ ಬತ್ತವು, ಒಂದೆರಡು ದಿನ ಉಳಿತ್ತವು ಹೇಳಿ ಗೊಂತಾದರಂತೂ ಎನ್ನ ಜೀವ ಅರ್ಧ ಆವುತ್ತು! ಅಯ್ಯೋ ರಾಮ, ಎನ್ನ ಅಡುಗೆ ಲಾಯ್ಕಕ್ಕಾ? ಎಂತಾರೂ ಹೆಚ್ಚು ಕಡಮ್ಮೆಯಾದರೆ ಎಂತ ಮಾಡಲಿ? ಅವರ ಮನಗೆ ಹೋದಿಪ್ಪಗ ಎಷ್ಟು ಬಗೆ ಅಡುಗೆ ಮಾಡಿ ಬಡ್ಸಿತ್ತವು, ಅದೆಲ್ಲಾ ಎಷ್ಟು ರುಚಿಯಾಗಿತ್ತಿದು! ಅಷ್ಟೆಲ್ಲಾ ಮಾಡಿದರುದೇ ಒಂದು ಸುಸ್ತೂ ಇಲ್ಲೆ, ಟೆನ್ಶನ್ನೂ ಇತ್ತಿಲ್ಲೆ, ಆರಾಮ್ಸೆ ಇತ್ತವು ಹೆಮ್ಮಕ್ಕೊ ಎಲ್ಲಾ...!! ಭಾಗ್ಯವಂತರೇ ಸರಿ ಇಂತಾ ಹೆಮ್ಮಕ್ಕಳ ಕಟ್ಟಿಕೊಂಡ ಗೆಂಡನುದೇ, ಅವಕ್ಕೆ ಹುಟ್ಟಿದ ಮಕ್ಕದೇ ಹೇಳಿ ಗ್ರೇಶುದಾನು! ಎನಗೋ ಅಡುಗೆ ಮನೆಲಿ ಉಂಬಲೆ ಮಾಡುವ ಬಗೆ ಎರಡೋ ಮೂರೋ ಆದರೂ ಎನ್ನ ಅಡುಗೆ ಕೆಲಸ ದಿನ ಪೂರ್ತಿ ಮುಗಿಯ!! ಇನ್ನು ನೆಂಟ್ರು ಬಪ್ಪಗ ಮಾಡಿ ಮುಗುಶುವೆನಾ? ಮಾಡಿದ ಅಡುಗೆ ಎಲ್ಲಾ ಅವ್ವು ಮಾಡುವಷ್ಟು ಲಾಯ್ಕಾಗದ್ದರೆ...??!! ಅವ್ವು ಮಾಡುವಷ್ಟು ಲಾಯ್ಕಾವುತ್ತಿಲ್ಲೆ ಹೇಳಿದರೆ ಬಂದವರೆಲ್ಲಾ ಹೊಟೇಲಿಂಗೆ ಕರಕ್ಕೊಂಡು ಹೋಗಿ ಪೂರೈಶುಗೋ ಅಥವಾ ಅಲ್ಲಿಯಾಣ ತಿಂಡಿ, ಊಟಂಗಳಾ ಎಲ್ಲಾ ಮನೆಗೆ ತಂದು ಬಡುಸುಲೆ ಸರಿ ಆವುತ್ತಾ...?! ಇದೆಲ್ಲಾ ಎಷ್ಟು ದಿನ ನಡೆಗು?! ಎನ್ನ ಅಡುಗೆ ಎಂತಕ್ಕಪ್ಪಾ ಲಾಯ್ಕಪ್ಪಲೇ ಇಲ್ಲೆ ಹೀಂಗೆಲ್ಲಾ ನೂರಾರು ಆಲೋಚನೆಗೊ...! ಇರುಳು ವರಕ್ಕೇ ಬಾರ ಎನಗೆ! ಬಂದರುದೇ ಹತ್ತಾರು ಕನಸು ಬೀಳುಗು. ಮಾಡಿದ ಅಡುಗೆಗೆ ಉಪ್ಪು ಹೆಚ್ಚಾಂದಾಂಗೆ, ಹುಳಿ, ಖಾರವೇ ಇಲ್ಲದ್ದಾಂಗೆ, ನೆಂಟರಿಂಗೆ ಆನು ಮಾಡಿದ ಅಡುಗೆ ಮೆಚ್ಚದ್ದೇ ಇಪ್ಪ ಕಾರಣ ಎರಡ್ನೇ ಅಶನ ಬಡುಸುಲೆ ಹೋಪಗ ಅವ್ವು ಅಶನ ಬೇಡಾ ಹೇಳಿದಾಂಗೆ, ಉಂಡೊಂಡಿಪ್ಪಗ ನಮ್ಮ ಮನೆಯೋರಿಂಗೆ ಆರಿಂಗೂ ಸಿಕ್ಕದ್ದ ತಲೆಕಸವು ನೆಂಟಂಗೆ  ಸಿಕ್ಕಿದಾಂಗೆ ಹೀಂಗೆಲ್ಲಾ!! ಇರುಳಿಡೀ ಸ್ವಪ್ನ ನೋಡಿಯೇ ಬಚ್ಚಿ ಹೋವುತ್ತು!! ಇನ್ನು ಬಪ್ಪವ್ವು ಸಕ್ಕರೆ ಪಾರ್ಟಿಯಾ? ತಿಂಡಿಪೋತಂಗಳಾ? ಚಪ್ಪೆ ಅಥವಾ ಖಾರ ತಿಂಬವ್ವಾ? ಗ್ಯಾಸ್ಟ್ರಿಕ್, ಬಿಪಿ, ಶುಗರ್ ಇದ್ದಾ ಹೇಳಿ ಎಲ್ಲಾ ರಹಸ್ಯವಾಗಿ ತನಿಕೆ ಮಾಡಿ ತಿಳ್ಕೊಂಡು, ಅವರವರ ಪಚನಕ್ರಿಯೆಗೆ ತಕ್ಕಾಂಗೂ ಮಾಡೇಕ್ಕು, ನಂಟ್ರಾಗಿ ಬಂದೋರತ್ತರೆ ನೇರವಾಗಿ ಕೇಳುವಂತಾ ವಿಚಾರಂಗಳೂ ಅಲ್ಲ ಇದೆಲ್ಲ!! ಕೆಲವು ಜೆನ ಪಾಪ ಅವ್ವೇ ಆಗಿ ಪ್ರಾಬ್ಲಂಗಳ ಹೇಳಿಕೊಳ್ತವ್ವು. ಆದರೆ ಹೇಳದ್ದವ್ವು ಇರ್ತವನ್ನೇ, ಹಾಂಗೇ ನಾವಾಗಿ ಕೇಳಿದರುದೇ ಇಷ್ಟಪಡದವಿರ್ತವನ್ನೇ!! ಓರೆಯಾಗಿ ಕೇಳಿ ತಿಳುಕ್ಕೊಂಬಲಕ್ಕು ಹೇಳಿ ಮಡಿಕ್ಕೊಂಬ. ಅಂದರೂ ಒಕ್ಕುತ್ತವು ಹೇಳಿ ಅನ್ಸುಲಾಗ ಅಲ್ಲದಾ...!! ಕಾರ್ಯಾಚರಣೆ ಒಂದೆರಡಲ್ಲ ನೆಂಟ್ರು ಬಪ್ಪಾಗ! ಕೆಲವು ಸರೀ ಪರಿಚಯ ಇಪ್ಪ ನೆಂಟಂಗೊಕ್ಕೆ ಇಂತಿಂತದು ಇಷ್ಟ ಹೇಳಿ ಗೊಂತಿದ್ದರೆ ಅದನ್ನೂ ಮಾಡದ್ದರೆ ನಮ್ಮ ಮನಸ್ಸು ಕೇಳ! ಅಲ್ಲಾ ಎನಗೊಬ್ಬಂಗೇ ಎಂತಕ್ಕಪ್ಪಾ ಇಷ್ಟು ಟೆನ್ಶನ್ ಆರಿಂಗಿಲ್ಲದ್ದು ಹೇಳಿ ಗ್ರೇಶಿಕೊಂಡಿತ್ತೆ ಸುಮಾರು ಸಲ. ಆದರೆ ಅದೊಂದು ದಿನ ಇದಕ್ಕೆ ಉತ್ತರ ಸಿಕ್ಕಿತು! ಹೀಂಗೇ ಮಾತಾಡಿಯೊಂಡಿಪ್ಪಗ ಎನ್ನ ಸಹದ್ಯೋಗಿ ಒಂದು ಹೇಳಿತು, "ನೋಡಿ ಲತಾ, ಇವತ್ತು ನಮ್ಮನೆಗೆ ಐದು ಜನ ನೆಂಟರು ಬರ್ತಾರೆ. ಏನು ಮಾಡುದು, ಅಡುಗೆ ಹೇಗಾಗ್ತದೋ ಅಂತ ನನ್ನ ಟೆನ್ಶನ್" ಹೇಳಿ. ಇಷ್ಟು ಕೇಳಿಯಪ್ಪದ್ದೇ ಎನಗೆ ಎಷ್ಟು ಕೊಶೀ ಆತು ಹೇಳಿರೆ ಅಷ್ಟಿಷ್ಟಲ್ಲ!! ಎಟ್ಲೀಸ್ಟ್ ಎನ್ನಾಂಗೊಬ್ಬ ಇದ್ದವನ್ನೇ ಹೇಳಿ!! "ನನಗೂ ಅಷ್ಟೇ ಸುಮನಾ ನೆಂಟರು ಬರುವಾಗ ಅಡುಗೆ ಬಗ್ಗೆ ಆಗುವ ಟೆನ್ಶನ್ ಉಂಟಲ್ಲಾ ಅದರ ಮುಂದೆ ಯಾವ ಟೆನ್ಶನ್ನೂ ಇಲ್ಲ" ಹೇಳಿ ಹೇಳಿದೆ. ಅದರ ಮೋರೆಲಿದೇ ನೆಗೆ ಬಂತಂಬಗ ಅದರಾಂಗೇ ಆನು ಇದ್ದೆನ್ನೆ ಹೇಳಿ!! ಮತ್ತೆ ಶುರುವಾತು, ಅದು ನನಗೆ ಹಾಗಾಗ್ತದೆ ಹೇಳಿ ಹೇಳುದು ಅಂಬಗ ಆನು "ನನಗೂ ಸಹಾ ಹಾಗೇ ಅಂತಾ" ಹೇಳಿ ರಾಗ ಎಳೆವದು! ಆನು ಎನಗೆ ಹೀಂಗೀಂಗಾವುತ್ತು ಹೇಳಿ ಹೇಳಿಯಪ್ಪಗ "ನನಗೂ ಸಹ ಹಾಗೇ ಲತಾ.." ಹೇಳಿ ಅದುದೇ ರಾಗಲ್ಲಿ ಹೇಳುದು. ಅಂತೂ ಇಂತೂ ಇಬ್ರಿಂಗೂ ಭಾರೀ ಕೊಶಿಯಾತು ಇಬ್ರೂ ಟೆನ್ಶನ್ ಪಾರ್ಟಿಗೇ ಸೇರಿದವ್ವು ಹೇಳಿ!! ಮತ್ತೆ ಅಕೇರಿಗೆ ಒಂದು ತೀರ್ಮಾನಕ್ಕೆ ಬಂದೆಯ, "ನಾವು ಮಾತ್ರ ಅಂದ್ಕೊಳ್ಳೋದು ನಾವು ಮಾಡುವ ಅಡುಗೆ ಚೆನ್ನಾಗಿರಲ್ಲ ಅಂತ. ನಾವೇ ಅಡುಗೆ ಮಾಡಿದ್ದು ನಮಗೆ ರುಚಿಸಲ್ಲ, ಯಾವಾಗ್ಲೂ ತಿಂದು ಬೋರಾಗಿರುತ್ತೆ ಅಷ್ಟೇ. ಇನ್ನೊಬ್ರಿಗೆ ಅದು ಟೇಸ್ಟಿ ಅನ್ಸುತ್ತೆ. ಟೇಸ್ಟಿ ಇರಲ್ಲ ಅಂತ ಸುಮ್ನೆ ನಾವಂದ್ಕೊಂಡು ಸುಮ್ನೆ ಟೆನ್ಶನ್ ಮಾಡ್ಕೊಳ್ಳೋದು ಅಷ್ಟೇ. ನೆಂಟರು ಬಂದಾಗ ಯಾವಾಗ್ಲಿಗಿಂತ ಚೆನ್ನಾಗೇ ಆಗಿರುತ್ತೆ ಅಡುಗೆ. ಸುಖಾ ಸುಮ್ಮನೆ ನೆಂಟರು ಬರೋ ಮೊದ್ಲು ಟೆನ್ಶನ್ ಮಾಡ್ಕೊಂಡಿದ್ದು ಅಂತ ಅನ್ನಿಸಿಬಿಡುತ್ತೆ ಕೊನೆಗೆ! ಟೆನ್ಶನ್ ಮಾಡ್ಕೊಳ್ಳೋದು ಸಹಜ ಅಷ್ಟೇ. ನೆಂಟರು ಬಂದಿರೋವಾಗ ಮಾಡಿದ್ದೆಲ್ಲಾ ಚೆನ್ನಾಗಾಗ್ಬೇಕು ಅಂತ ನಾವು ತುಂಬಾ ಕಾಳಜಿವಹಿಸೋದ್ರಿಂದ ಹಾಗಾಗೋದಷ್ಟೇ...! ನಾವಿಬ್ರಂದ್ಕೊತ್ತೀವಿ ನಮಗೆ ಮಾತ್ರ ಅಡುಗೆಗೆ ಟೆನ್ಶನ್ ಇರೋದು ಅಂತ. ನಮ್ಮ ಹಾಗೆ ಎಷ್ಟು ಜನ ಇದ್ದಾರೋ ಏನೋ ಪಾಪ. ನಾವು ಇವತ್ತು ಪರಸ್ಪರ ಹೇಳ್ಕೊಂಡ್ವಿ ಅಷ್ಟೇ. ಎಲ್ಲರ ಮನೆ ದೋಸೇನೂ ತೂತೇ ಅಲ್ವಾ" ಹೇಳಿ!!

ಆದರೆ ಆನು ಎನ್ನ ಕೆಲವು ಜೆನ ಫ್ರೆಂಡ್ಸ್ ಹೇಳುದರ ಕೇಳಿದ್ದೆ. ಎಂತಾ ಹೇಳಿರೆ, "ನಿನ್ನೆ ಇದಾ ಎನ್ನ ಮಗನ ಹದಿನೈದು ಜೆನ  ಫ್ರೆಂಡುಗೊ  ಬಂದಿತ್ತವು ಬೆಂಗ್ಳೂರಿಂದ. ಅವಕ್ಕೆಲ್ಲಾ ಉದಿಯಪ್ಪಗ ಅಕ್ಕಿ ರೊಟ್ಟಿ, ಕಾಯಿ ಚಟ್ನಿ, ಕಡ್ಲೆ ಗಸಿ, ಮಧ್ಯಾನ್ಹಕ್ಕೆ ಫ್ರೈಡ್ರೈಸ್, ಸಲಾಡ್, ಜಾಮೂನು ಪಾಯಸ ಎಲ್ಲಾ ಮಾಡಿ ಬಡ್ಸಿದೆ. ಎಲ್ರೂ ತುಂಬಾ ಕುಶಿ ಪಟ್ಟು ಹೇಳಿದವು, ಚೆನ್ನಾಗಿತ್ತು ನೀವು ಮಾಡಿದ ಎಲ್ಲಾ ಐಟಂಸ್ ಆಂಟೀ ಹೇಳಿ, ಮತ್ತೆ ಹೊತ್ತೋಪ್ಪಗ ಎಲ್ಲೋರು ಬೀಚಿಂಗೆ ಹೋದೆಯ.ಇರುಳು ಮನಗೆ ಬಂದು ಸಿಂಪಲ್ಲಾಗಿ ಅಶನ ಟೊಮೇಟೊ ಸಾರು, ಬೀನ್ಸ್ ಪಲ್ಯ, ಹಪ್ಪಳ ಮಾಡಿಕೊಟ್ಟೆ" ಹೇಳಿ. ಅವ್ವು ಕೂಲಾಗಿ ಹದಿನೈದು ಜೆನಕ್ಕೆ ಹೀಂಗೆಲ್ಲಾ ಮಾಡಿ ತಿನ್ನಿಸಿ ಕಳ್ಸಿದೆ ಹೇಳಿ ಹೇಳುವಾಗ ಆನು ಗ್ರೇಶುಲಿದ್ದು ಭಾರೀ ಗಟ್ಟಿಗತ್ತಿಯೇ ಇದ್ದವು ಎನ್ನ ಬಿಟ್ಟು ಎಲ್ಲೋರುದೇ, ಅಷ್ಟು ಜೆನಂಗೊಕ್ಕೆ ಮಾಡಿ ಬಡಿಸಿ ಜಾಣೆ ಹೇಳ್ಸಿಕೊಂಬದು ಹೇಳಿದರೆ ಸಾಮಾನ್ಯವಾ?! ಆನು ಬರೇ ದಂಡ ಹೇಳಿ!!

ಇದಿಷ್ಟು ನೆಂಟರು ಬಪ್ಪಾಗಣ ಟೆನ್ಶನ್ ಆದರೆ, ದಿನ ನಿತ್ಯದ ಆಡುಗೆಯ ಮಟ್ಟಿಂಗೆ ಹೇಳ್ತರೆ ಅಷ್ಟೊಂದೆಂತ ಟೆನ್ಶನಿಲ್ಲೆ ಎನಗೆ!! ಎನ್ನ ನಾಲಗೆಗೆ ಆನು ಮಾಡಿದ್ದು ರುಚಿ ಹೇಳಿ ಕಾಣದ್ದರೂದೇ, ರೈಸ್ ಐಟಂಗಳ ಮಾಡಿದ ದಿನ ಮೂರು ಹೊತ್ತೂ ಅದನ್ನೇ ತಿಂದು ತೇಗುತ್ತವು ಮಕ್ಕೋ!! ಗೆಂಡ ಅಂತೂ ಸದ್ದಿಲ್ಲದೇ ಎಂತ ಮಾಡಿದರೂ ತಿನ್ನುತ್ತವು! ಬೇರೆ ದಿನಂಗೊ ಉದ್ದಿನ ದೋಸೆ, ತೆಳ್ಳವು, ಕೊಟ್ಟಿಗೆ, ಪತ್ತರ್ಡೆ ಮಾಡಿರೆ ಮಕ್ಕಳಲ್ಲಿ ಒಬ್ಬಂಗಾಗದ್ರೆ, ಚಪಾತಿ, ಇಡ್ಲಿ, ಸಜ್ಜಿಗೆ, ಪೂರೀ ಬಾಜಿ ಮಾಡಿರೆ ಮತ್ತೊಂಬಗೆ ಆಗ. ಇದೆಲ್ಲಾ ಎಲ್ಲಾ ಮನೆಲಿಪ್ಪ ಕತೆಯೇ ಅಲ್ಲದಾ?! ಹಾಂಗಾರೆ ಆನು ಮಾಡಿದ ಅಡುಗೆ ಲಾಯ್ಕಾಯಿದಿಲ್ಲೆ ಹೇಳಿ ಅರ್ಥ ಅಲ್ಲವೇ ಅಲ್ಲ! ಆದ ಕಾರಣ ಎನ್ನ ಅಡುಗೆಯ ಮೇಲೆ ನೆಂಟರು ಬಪ್ಪಾಗ ಟೇನ್ಶನ್ ಇದ್ದರುದೇ ಹೆಮ್ಮೆ ಇದ್ದೆನಗೆ!!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು