Friday, August 21, 2015

’ಮತ್ತೆ ಅರಳಿತು ಮನಸ್ಸು’ - ಆಕಾಶವಾಣಿ ಮಂಗಳೂರು ಕೇಂದ್ರದಿಂದ ೧೭-೦೮-೨೦೧೫ ರಂದು ಸೋಮವಾರ ಮಧ್ಯಾಹ್ನ ೧೨.೩೦ಕ್ಕೆ ವನಿತಾವಾಣಿ ಕಾರ್ಯಕ್ರಮದಲ್ಲಿ ಪ್ರಸಾರವಾದ ಸಣ್ಣ ಕಥೆ. ಇದು ೧೯೯೭ ನೇ ಇಸವಿಯಲ್ಲಿ ನಾನು ಬರೆದ ಕಥೆ.

ಮತ್ತೆ ಅರಳಿತು ಮನಸ್ಸು

ಅಂದು ನಮ್ಮ ಕಾಲೇಜಿನ ಅಧ್ಯಾಪಕರೊಬ್ಬರು ರಜೆ ಹಾಕಿದ್ದ ಕಾರಣ, ದಿನ ಕೊನೆಯ ಪಾಠ ಅವರದ್ದಾಗಿದ್ದರಿಂದ, ಆ ದಿನ ನೇರವಾಗಿ ಬೇಗ ಮನೆಗೆ ಹಿಂದಿರುಗಿದ್ದೆ.
ಬೀಗ ತೆಗೆದು ಬಾಗಿಲನ್ನು ದೂಡಿದಾಗ ಪೋಸ್ಟ್‍ಮ್ಯಾನ್ ಬಾಗಿಲ ಸಂದಿಯಿಂದ ಹಾಕಿದ್ದ ಪತ್ರವೊಂದು ನನ್ನ ಕಾಲನ್ನು ಸೋಕಿತು. ಕೈಗೆತ್ತಿಕೊಂಡು ನೋಡಿದೆ. ಅಕ್ಕನ ಹೆಸರಿಗಿತ್ತು. ಸಾಮಾನ್ಯವಾಗಿ ಮನೆಗೆ ಬಂದ ಪತ್ರಗಳನ್ನು ಮೊದಲು ಕೈಗೆತ್ತಿಕೊಂಡವರು ಒಡೆದು ಓದಿ ಎಲ್ಲರಿಗೂ ಹೇಳುವುದು ಮೊದಲಿನಿಂದಲೇ ಬಂದ ಅಭ್ಯಾಸವಾಗಿದ್ದರಿಂದ ಪತ್ರವನ್ನು ಒಡೆದೇ ಬಿಟ್ಟೆ. ಒಡನೆಯೇ ಒಡೆಯಬಾರದಿತ್ತೇನೋ, ಅಕ್ಕನ ವೈಯುಕ್ತಿಕ ಕಾಗದವಲ್ಲವೇ ಎನಿಸಿತಾದರೂ, ಹೇಗೂ ಒಡೆದಾಗಿದೆಯಲ್ಲ. ಓದಿಯೇ ಬಿಡೋಣವೆಂದು ಓದತೊಡಗಿದೆ. ಓದುತ್ತಾ ಹೋದಂತೆ ಕೈ ಕಾಲುಗಳಲ್ಲಿ ನಡುಕ ಹುಟ್ಟಿತು...ಅದರಲ್ಲಿ ಬರೆದಿದ್ದ ವಿಷಯವನ್ನು ಕಂಡು ನಾನು ಸಂಪೂರ್ಣ ಬೆವರಿದ್ದೆ! ಏಕೆಂದರೆ ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಪತ್ರವನ್ನು ಹಾಗೇ ಮಡಿಸಿ ಪುಸ್ತಕದ ಪುಟವೊಂದರ ಎಡೆಯಲ್ಲಿ ಬಚ್ಚಿಟ್ಟೆ. ನನಗೆ ಅಕ್ಕನ ಬಗೆಗಿದ್ದ ಸಕಾರಾತ್ಮಕ ಭಾವನೆಗಳನ್ನು ಆ ಪತ್ರ ಒಮ್ಮೆಗೆ ಗಲಿಬಿಲಿಗೊಳಿಸಿತ್ತು. ಉತ್ತಮ ಪರಂಪರೆ, ಮನೆತನ, ಸಂಪ್ರದಾಯ, ನೈತಿಕತೆ ಹಾಗೂ ಶಿಸ್ತಿನ ಜೀವನಕ್ಕೆ ನಮ್ಮ ಮನೆ ಹೆಸರುವಾಸಿಯಾಗಿತ್ತು. ಅಕ್ಕನ ಈ ರೀತಿಯ ವ್ಯವಹಾರದ ರಹಸ್ಯವನ್ನು ತಿಳಿದಾಗ ಮನಸ್ಸಿಗೆ ತುಂಬಾ ಬೇಸರವಾಯಿತು. ಓಡಿ ಹೋಗಿ ಹಾಸಿಗೆಯಲ್ಲುರುಳಿ ಕಣ್ಮುಚ್ಚಿ ಮಲಗಿಕೊಂಡೆ.


ಸುಮಾರು ಒಂಭತ್ತು ತಿಂಗಳ ಹಿಂದೆ ಅಣ್ಣನೊಂದಿಗೆ ನಾವಿಬ್ಬರೂ ಹಳ್ಳಿ ಬಿಟ್ಟು ನಗರಕ್ಕೆ ಬಂದಿದ್ದೆವು, ಕಾಲೇಜಿಗೆ ಹೋಗಿ ಓದುವ ಸಲುವಾಗಿ. ಅಪ್ಪ, ಅಮ್ಮ ಹಳ್ಳಿಯಲ್ಲಿ ತೋಟ, ಗದ್ದೆ ಇದ್ದ ಕಾರಣ ಅನಿವಾರ್ಯವಾಗಿ ನಮ್ಮನ್ನೇ ಕಳುಹಿಸಿದ್ದರು. ನಾವು ಕಲಿಯುವಷ್ಟು ಓದಿಸಬೇಕೆಂದು ಅವರಿಬ್ಬರ ಹೆಬ್ಬಯಕೆಯಾಗಿತ್ತು. ಸತತ ಎರಡು ವರ್ಷಗಳಿಂದ ಅಣ್ಣ, ಅಕ್ಕ ಇಬ್ಬರೂ ಹಳ್ಳಿಯಿಂದ ಬಸ್ಸಿನಲ್ಲೇ ನಗರಕ್ಕೆ ಪ್ರಯಾಣಿಸಿ ಕಾಲೇಜಿಗೆ ಹೋಗುತ್ತಿದ್ದುದ್ದರಿಂದ ಅಣ್ಣ ಹೇಳಿದ್ದ, "ನಗರದಲ್ಲೇ ರೂಮನ್ನೋ, ಚಿಕ್ಕ ಮನೆಯನ್ನೋ ಬಾಡಿಗೆ ಹಿಡಿದು ವಿದ್ಯಾಭ್ಯಾಸ ಮುಗಿಯುವವರೆಗೆ ಅಲ್ಲೇ ಇರೋಣ, ನಮಗೆ ಮೂರು ಜನರಿಗೆ ಬಸ್ಸಿಗೆ ಖರ್ಚಾಗುವ ಹಣ ಮನೆ ಬಾಡಿಗೆ ಕೊಡಲು ಸಾಕು. ಕಾಲೇಜಿನ ಹತ್ತಿರ ಮನೆ ಸಿಕ್ಕಿದರಂತೂ ತುಂಬ ಅನುಕೂಲವಾಗುತ್ತದೆ. ಸಮಯವೂ ಉಳಿತಾಯವಾಗುತ್ತದೆ. ಚೆನ್ನಾಗಿ ಓದಲು ಅವಕಾಶವಾದಂತಾಗುತ್ತದೆ" ಎಂದು. ಅಪ್ಪ, ಅಮ್ಮ ಇಬ್ಬರೂ ಅಣ್ಣನ ನಿಲುವಿಗೆ ಹೌದೆಂದಿದ್ದರು. ಆದರೆ ಅಮ್ಮನಿಗೆ ಹೆಣ್ಣು ಮಕ್ಕಳನ್ನು ಪೇಟೆಯಲ್ಲಿ ಬಿಡಲು ಮನಸ್ಸಿರಲಿಲ್ಲ. ನಮ್ಮನ್ನು ಬಹಳ ಜಾಗ್ರತೆಯಿಂದಲೂ, ಮಾನ, ಮರ್ಯಾದೆಯಿಂದಲೂ ಅವರು ಸಾಕಿದ್ದರು. ’ಹೆಣ್ಣು ಮಕ್ಕಳನ್ನು ಹಾಗೇ ಬಿಟ್ಟರೆ ಹೇಗೆ?’ ಎಂಬ ಚಿಂತೆ ಹುಟ್ಟಿಕೊಂಡಿತು. "ಏನು ಅವರಿಬ್ಬರೇ ಹೋಗಿ ಅಲ್ಲಿರುವುದಲ್ಲವಲ್ಲಾ, ಜೊತೆಗೆ ಅಣ್ಣ ಶ್ಯಾಂ ಕೂಡಾ ಇದ್ದಾನಲ್ಲವೇ?" ಎಂದು ಅಪ್ಪ ಅಮ್ಮನಿಗೆ ಸಾಂತ್ವನ ಹೇಳಿದ್ದರು. ಅಂತೂ ಇಂತೂ ಅಮ್ಮನೂ ಒಪ್ಪಿದ್ದಾಗಿತ್ತು. ನಗರಕ್ಕೆ ಅವರಿಬ್ಬರೂ ಬಂದು ಓದಲಿಕ್ಕೆ ಅನುಕೂಲವಾಗುವಂತಹ ಹಾಗೂ ಅಡುಗೆಗೆ ಬೇಕಾದ ಪರಿಕರಗಳನ್ನೊದಗಿಸಿ, ಎಲ್ಲವನ್ನೂ ಹೊಂದಿಸಿಕೊಟ್ಟು ಊರಿಗೆ ಹಿಂದಿರುಗಿದ್ದರು. ನಾವಿಲ್ಲಿಗೆ ಬಂದ ನಂತರ ಅಪ್ಪ ವಾರಕ್ಕೊಂದು ಬಾರಿ ನಮ್ಮ ಓನರ್ ಮನೆಗೆ ಫೋನಾಯಿಸಿ ನಮ್ಮನು ವಿಚಾರಿಸಿಕೊಳ್ಳುತ್ತಿದ್ದರು. ಪರಸ್ಪರ ಪತ್ರಗಳನ್ನೂ ಬರೆಯುತ್ತಿದ್ದೆವು.
                           ---------------------
ಯಾರಿರಬಹುದೀತ? ಮೋಹನನಂತೆ. ಅಪ್ಪ, ಅಮ್ಮನಿಗೆಲ್ಲಿಯಾದರೂ ಅಕ್ಕನುಂಟು ಮಾಡಿದ ಬಿರುಗಾಳಿಯ ಭೀಕರತೆಯ ಈ ವಿಷಯ ತಿಳಿದರೆ.....? ಅಪ್ಪ ತತ್ವನಿಷ್ಠರು. ಸಮಾಜದ ಕಟ್ಟುಕಟ್ಟಳೆಗಳನ್ನು ಚಾಚೂ ತಪ್ಪದೇ ಪಾಲಿಸುವವರು. ಅಪ್ಪನಿಗೆಲ್ಲಿಯಾದರೂ ಈ ವಿಷಯ ತಿಳಿದರೆ ಎದೆ ಒಡೆದುಕೊಂಡು ಸತ್ತೇ ಹೋದಾರು. ಅವರಿಗೆ ಮೊದಲೇ ಹಾರ್ಟ್ ವೀಕೆಂದು ಡಾಕ್ಟರು ಹೇಳಿದ್ದಾರೆ. ಅಮ್ಮನಿಗೆಲ್ಲಿಯಾದರೂ ತಿಳಿದರೆ.....ಅಮ್ಮ ಪ್ರಾಣವನ್ನೇ ಬಿಟ್ಟಾಳು. ಅಮ್ಮ- ಊರಿನವರು, ನೆಂಟರಿಷ್ಟರೂ, ಅಕ್ಕಪಕ್ಕದವರೂ ಹಾಗೂ ನಾವೆಲ್ಲ ಕಂಡಂತೆ ಒರ್ವ ಮಾದರಿ ಮಡದಿ. ಅಲ್ಲದೇ ನಾನೂ, ಅಕ್ಕನೂ ಊರಿನಲ್ಲಿ ಎಲ್ಲರಿಂದಲೂ ಸನ್ನಡತೆಯ ಹುಡುಗಿಯರೆಂದು ಹೇಳಿಸಿಕೊಂಡಿದ್ದೆವು. ಇವೆಲ್ಲಕ್ಕೂ ಮಸಿ ಬಳಿಯುವಂತಹ ಕೆಲಸವೆಸಗಿದ್ದಾಳಲ್ಲಾ ನನ್ನಕ್ಕ! ಅಂದು ನಗರಕ್ಕೆ ನಮ್ಮನು ಬಿಡಲು ಬಂದಿದ್ದಾಗ ಅಮ್ಮ ಅಷ್ಟೆಲ್ಲಾ ಬುದ್ಧಿವಾದ ಹೇಳಿದ್ದರೂ, ಇವಳಿಗೆ ಮೋಹನನೆಂಬುವವನೊಡನೆ ಸಂಪರ್ಕ ಹೇಗಾಯಿತು? ನಾವಿಬ್ಬರೂ ಪ್ರೌಢಾವಸ್ಥೆಗೆ ಬಂದಾಗ ಅಮ್ಮ ಎಷ್ಟು ಸಲ ತಿಳಿ ಹೇಳಿದ್ದಳು. "ನಿಮ್ಮದೀಗ ಜಾರಿ ಬೀಳುವ ವಯಸ್ಸು, ಮನಸ್ಸನ್ನು ಎಷ್ಟು ಹತೋಟಿಯಲ್ಲಿಟ್ಟುಕೊಂಡರೂ ವಯಸ್ಸು ಮೋಸ ಮಾಡಿಬಿಡುತ್ತದೆ. ಈ ಪ್ರಾಯದಲ್ಲಿ ಜಾರಿ ಬಿದ್ದರೆ, ಜೀವನ ದು:ಖದ ಕಡಲೇ ಆಗಿಬಿಡುತ್ತದೆ. ನಿಮ್ಮ ಈ ಪ್ರಾಯದಲ್ಲಿ ಹುಡುಗಿಯರ ಮನಸ್ಸನ್ನು ಗೆಲ್ಲಲು ಒಳ್ಳೆಯವರಂತೆ ನಾನಾ ವೇಷ ಹಾಕುತ್ತಾರೆ. ಸಕ್ಕರೆಯಂತಹ ಮಾತನಾಡಿ ಮರುಳುಗೊಳಿಸುತ್ತಾರೆ. ಹೆಣ್ಣುಮಕ್ಕಳು ಜನರೊಡನೆ ಬೆರೆಯಬೇಕು, ಹೊರಗಡೆ ಹೋಗಬೇಕಾಗುತ್ತದೆ, ನಿಜ. ಆದರೆ ಅಲ್ಲೇ ಪರಿಚಯದ ಮಾಡಿ, ಮಾತನಾಡಿ ಮರುಳು ಮಾಡಿ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಜನ ಕಾಯುತ್ತಿರುತ್ತಾರೆ. ಆದ್ದರಿಂದ ನಿಮ್ಮ ಜಾಗ್ರತೆ ನಿಮ್ಮಲ್ಲಿಟ್ಟುಕೊಳ್ಳಿ. ವಿದ್ಯೆ ಮತ್ತು ವೈಚಾರಿಕತೆ ಅಧಿಕವಾದಂತೆ ಇಂದಿನ ಮಕ್ಕಳಿಗೆ ಸ್ವೇಚ್ಛೆಯೂ ಜಾಸ್ತಿಯಾಗುತ್ತಿದೆ. ವಿದ್ಯ ಕಲಿಯುವ ನೆಪದಲ್ಲಿ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಅದೂ ಅಲ್ಲದೆ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಿರುವುದನ್ನು ಅದರಲ್ಲೂ ಪೇಟೆಗೆ ನಿಮ್ಮನ್ನೇ ಕಳುಹಿಸುತ್ತಿರುವುದನ್ನು ನಮ್ಮ ಜನಾಂಗದವರು ವಿರೋಧಿಸುತ್ತಿದ್ದಾರೆ. ಇಲ್ಲಿಯವರೆಗೆ ಯಾರಿಂದಲೂ ನೀವು ಕೆಟ್ಟವರೆನಿಸಿಕೊಳ್ಳಲಿಲ್ಲ. ಇನ್ನು ಮುಂದೂ ಹೀಗೇ ಇರುತ್ತೀರೆಂದು ನಂಬಿ ನಿಮ್ಮನ್ನು ಓದಲು ಕಳುಹಿಸುತ್ತಿದ್ದೇವೆ, ತುಂಬಾ ಜಾಗ್ರತೆಯಿಂದಿರಿ" ಎಂದು ಗಿಣಿಗೆ ಪಾಠ ಮಾಡಿದಂತೆ ಅಮ್ಮ ಹೇಳಿದ್ದಳು. ಆದರೆ ಅದರ ಫಲವೇನು? ಈಗೇನು ಮಾಡಿಕೊಂಡಿದ್ದಾಳಿವಳು?.....ಛೇ....ಅಣ್ಣನಿಗೇನಾದರೂ ಈ ವಿಷಯ ತಿಳಿಸಲೇ...? ಬೇಡ, ಬೇಡ....ಪರೀಕ್ಷೆಗಳು ಹತ್ತಿರ ಬರುತ್ತಿವೆ. ರ‍್ಯಾಂಕ್ ನಿರೀಕ್ಷೆಯಲ್ಲಿದ್ದಾನೆ. ಈ ಹಂತದಲ್ಲಿ ಅವನ ಮನಸ್ಸನ್ನು ಅಸ್ವಸ್ಥಗೊಳಿಸುವುದು ಬೇಡ. ಅವನ ಓದಿಗೆ ಬಾಧೆ ಉಂಟಾಗಬಾರದು. ಪತ್ರದ ವಿಷಯವನ್ನು ಆತನಿಗೆ ಹೇಳದಿರುವುದೇ ಒಳಿತು. ಈ ವಿಷಯ ತಿಳಿದವಳು ನಾನೀಗ. ಹೇಗೆ ಓದಲಿ? ಏನು ಮಾಡಲಿ? ಅಕ್ಕನ ಹತ್ತಿರ ಈ ವಿಷಯ ಕೇಳಲೇ? ಬಿಡಲೇ? ಇಂದಲ್ಲಾ ನಾಳೆ ಎಲ್ಲರಿಗೂ ತಿಳಿಯುವಂತಹ ವಿಷಯವೇ ಇದು. ಅಪ್ಪ, ಅಮ್ಮನಿಗಲ್ಲವಾದರೂ ಕಡೇ ಪಕ್ಷ ಅಣ್ಣನಿಗಾದರೂ ತಿಳಿಸಿಬಿಡೋಣವೆಂದರೂ ಬೇಡ ಎಂದು ಮನಸ್ಸು ಹೇಳುತ್ತಿದೆ. ತಿಳಿಸಿದರೂ ಕಷ್ಟ, ತಿಳಿಸದಿದ್ದರೂ ಕಷ್ಟ. ಒಟ್ಟಿನಲ್ಲಿ ಇದೊಂದು ಇಕ್ಕಟ್ಟಿನ ಪ್ರಸಂಗ. ಶಾಂತವಾಗಿ ಬಗೆಹರಿಸುವ ವಿಷಯವೂ ಇದಲ್ಲ. ತುಂಬಾ ಮುಂದುವರಿದುಬಿಟ್ಟಿದೆ. ಈ ಪತ್ರದಿಂದಾಗಿ ನನ್ನ ನೆಮ್ಮದಿಯೇ ಹಾಳಾಗಿಬಿಟ್ಟಿದೆ.
     ಹೊರಗೆ ಬಾಗಿಲು ಬಡಿದ ಸದ್ದಾಯಿತು. ಅಕ್ಕ ಬಂದಿದ್ದಳು. ಬಾಗಿಲು ತೆರೆದೆ. ಎಂದಿನ ನಗು ಚೆಲ್ಲುತ್ತಾ ಒಳ ಬಂದಳು. ಮನಸ್ಸಿನಲ್ಲಿ ಅವಳ ಮೇಲೆ ತಿರಸ್ಕಾರ ಮೂಡಿದ್ದರಿಂದ ನಾನವಳ ಮುಖವನ್ನು ಎದುರಿಸಲಾಗಲಿಲ್ಲ. ಮನಸ್ಸಿನಲ್ಲಿ ಆಕಾರ ತಳೆದಿದ್ದ ಅವಳ ಪವಿತ್ರ ಸ್ವರೂಪ ನಿಮಿಷಾರ್ಧದಲ್ಲಿ ಧ್ವಂಸವಾಗಿತ್ತು. ಅಷ್ಟರಲ್ಲಿ ಅಣ್ಣನೂ ಬಂದ.
     ಸಂಜೆ ಕಳೆದು ರಾತ್ರಿಯಾಗಿತ್ತು. ಅಕ್ಕನೂ, ನಾನೂ ಸೇರಿ ಅಡುಗೆ ಮಾಡಿದೆವು. ನಮ್ಮ ಕೆಲಸ ಮೌನದಲ್ಲೇ ಸಾಗಿತ್ತು. ಅಕ್ಕನ ಒಂದೊಂದು ಚಲನವಲನವನ್ನೂ ಗಮನಿಸುತ್ತಿದ್ದೆ. ’ಅಂದಿನ ಅಕ್ಕನೇ ಇಂದಿನ ಅಕ್ಕನೂ’ ಎನ್ನಿಸಿತು. ಅವಳ ಹೊಟ್ಟೆಯನ್ನೊಮ್ಮೆ ನೋಡಿದೆ. ನೈಟಿಯ ಸೊಂಟದ ದಾರದಿಂದ ಬಿಗಿದು ಕಟ್ಟಿದ್ದಳು. ಮೋಹನನನ್ನೇ ನಂಬಿ ಕೂತಿರಬಹುದೆಂದುಕೊಂಡೆ. ಊಟಕ್ಕೆ ಕುಳಿತಾಗ ಊಟ ರುಚಿಸಲಿಲ್ಲ. ಅಣ್ಣ ಶ್ಯಾಂ ತಿಳಿಹಾಸ್ಯ ಮಾತುಗಳನ್ನಾಡುತ್ತಾ ಊಟ ಮಾಡುತ್ತಿದ್ದ. ಅಕ್ಕನೂ, ಅಣ್ಣನೂ ಇಬ್ಬರೂ ಬೇಕಾದಷ್ಟು ಉಣ್ಣುತ್ತಿದ್ದರು. ಅಕ್ಕನ ಮುಖವನ್ನೊಮ್ಮೆ ನೋಡಿದೆ. ನಿರ್ಲಿಪ್ತವಾಗಿತ್ತು. ’ಮಾಡಬಾರದ್ದನ್ನೆಲ್ಲಾ ಮಾಡಿ ಎಷ್ಟು ಹಾಯಾಗಿದ್ದಾಳೆ, ಎಂತಹ ಧೈರ್ಯವಂತೆ, ಇಂದಲ್ಲ ನಾಳೆ ತಾನೆಂಥ ಜಾಲದಲ್ಲಿ ಸಿಕ್ಕಿ ಬಿದ್ದಿರುವೆನೆಂದು ತಿಳಿಯುತ್ತದಲ್ಲಾ’ ಎಂದುಕೊಂಡೆ ಮನಸ್ಸಿನಲ್ಲಿ. ನಾನೆಲ್ಲಿಯಾದರೂ ಅವಳ ಅಕ್ಕನಾಗಿದಿದ್ದರೆ ಕೆನ್ನೆಗೆರಡು ಬಾರಿಸಿ ನಡೆದ ವಿಷಯವೇನೆಂದು ಕೇಳುತ್ತಿದ್ದೆ. ’ಸ್ಪೆಷಲ್ ಕ್ಲಾಸೂಂತ ಬೆಳಗ್ಗೆ ಬೇಗ ಹೋಗಿ, ಸಂಜೆ ಗ್ರೂಪ್ ಸ್ಟಡಿ ಎಂದು ಹೇಳಿ ತಡವಾಗಿ ಮನೆಗೆ ಬರುತ್ತಿದ್ದಳಲ್ಲಾ ಕೆಲವು ತಿಂಗಳುಗಳಿಂದ, ಎಲ್ಲಾ ಇದಕ್ಕೇ’ ಎಂದು ಲೆಕ್ಕಾಚಾರ ಹಾಕಿದೆ. ಅಪ್ಪ ಅಮ್ಮನ ಮುಖಕ್ಕೆ ಮಸಿ ಬಳಿಯುವಂತಹ ಕೆಲಸ ಮಾಡಲು ಇವಳಿಗೆ ಮನಸ್ಸಾದರೂ ಹೇಗೆ ಬಂತು? ಅವರು ಈ ವಿಚಾರ ತಿಳಿದರೆ ಇವಳನ್ನು ಕ್ಷಮಿಸಿಯಾರೇ? ಊರವರೂ, ನೆಂಟರಿಷ್ಟರೂ, ಅಕ್ಕಪಕ್ಕದವರು ಇವಳನ್ನು ನಿಂದಿಸದೇ ಬಿಟ್ಟಾರೇ? ನಮ್ಮ ಸುಸಂಸ್ಕೃತವಾದ ಮನೆತನದ ಹೆಸರನ್ನು ಮಣ್ಣುಪಾಲು ಮಾಡಿಯಾಯ್ತಲ್ಲಾ! ಇದನ್ನೆಲ್ಲಾ ಯೋಚಿಸಿ, ಚಿಂತಿಸುವಾಗ ಹೃದಯವೇ ಇಬ್ಭಾಗವಾದಂತಾಗುತ್ತದೆ. ಅಕ್ಕನ ಬಗೆಗೆ ಅಸಹ್ಯ ಮತ್ತು ಜಿಗುಪ್ಸೆ ದ್ವಿಗುಣಗೊಳ್ಳುತ್ತದೆ. ಮಲಗಿದರೆ ನಿದ್ದೆಯೇ ಹತ್ತುವುದಿಲ್ಲವೆಂದು ಅನಿಸುತ್ತಿದೆ. ಗಂಟೆ ಹನ್ನೆರಡು ಬಡಿಯಿತು. ಅಣ್ಣ, ಅಕ್ಕ ಇಬ್ಬರೂ ಹಾಯಾಗಿ ನಿದ್ದೆಗೆ ಜಾರಿದ್ದರು.
     ಮರುದಿನ ಎಂದಿನಂತೆ ಎದ್ದೆವು. ಅಕ್ಕ ಎಂದಿನ ಲವಲವಿಕೆಯಿಂದಲೇ ಇದ್ದಳು. "ಹೌದೇ ಸುಮಾ, ನಿನ್ನೆ ಸಂಜೆಯಿಂದಲೇ ನಿನ್ನನ್ನು ಗಮನಿಸುತ್ತಾ ಇದ್ದೇನೆ. ಏಕೆ ಸಪ್ಪಗಿದ್ದಿ? ನಿನ್ನೆ ರಾತ್ರಿ ಸರಿಯಾಗಿ ಊಟ ಕೂಡಾ ಮಾಡಲಿಲ್ಲವಲ್ಲಾ ನೀನು? ಹೋಗಲಿ ರಾತ್ರಿ ನಿದ್ದೆನಾದ್ರೂ ಬಂತಾ? ಮೈ ಹುಷಾರಿಲ್ವಾ? ಏನಾದರೂ ಚಿಂತೆಯೇ?" ಕೇಳಿದಳು ಅಕ್ಕ ನನ್ನ ಹೆಗಲ ಮೇಲೆ ಕೈಹಾಕುತ್ತಾ.
"....."

"ಏಕೆ ಮೌನ ಪುಟ್ಟಾ? ಏನು ತೊಂದರೆ ನಿನಗೆ? ಏನಿದ್ದರೂ ನನ್ನ ಹತ್ತಿರ ಅಥವಾ ಶ್ಯಾಮಣ್ಣನ ಬಳಿ ಹೇಳು. ಸುಮ್ಮನೇ ಮನಸ್ಸಿನಲ್ಲೇ ಕೊರಗಬೇಡ. ಮನಸ್ಸಿನ ಆರೋಗ್ಯ ಬಹಳ ಮುಖ್ಯ. ಮಾನಸಿಕ ಆರೋಗ್ಯದ ಮೇಲೆ ದೈಹಿಕ ಆರೋಗ್ಯವೂ ಅವಲಂಬಿಸಿರುತ್ತದೆ."
’ಆಹಾ...... ನನಗೇ ಬುದ್ಧಿವಾದ ಹೇಳುತ್ತಿದ್ದಾಳೆ’ ತಿರಸ್ಕಾರದ ನೋಟ ಬೀರಿದೆ. ಅವಳದನ್ನು ಗಮನಿಸಲಿಲ್ಲ.
ಆಗಬಾರದ್ದು ಆಗಿರುವಾಗ, ಅದೂ ನನ್ನ ಸ್ವಂತ ಒಡಹುಟ್ಟಿದ ಅಕ್ಕನೇ ಅಡ್ಡದಾರಿ ಹಿಡಿದಿರುವಳೆಂದರೆ...? ಛೇ...ಒಡೆದು ಓದಿದ ಪತ್ರವನ್ನು ಅವಳಿಗೆ ತೋರಿಸಲಾರದೆ, ಅವಳನ್ನು ಈ ವಿಚಾರವಾಗಿ ಕೇಳಲೂ ಧೈರ್ಯವಿಲ್ಲದೆ ಹೆಣಗಾಡಿದೆ. ಯಾವ ಬಾಯಿಂದ ಕೇಳಲಿ? ಪತ್ರವನ್ನು ಹೇಗೆ ತಾನೇ ಕೊಡಲಿ? ಮೂಕವೇದನೆಯೇ ನನ್ನ ಪಾಲಾಯಿತು. ಒರ್ವ ಸ್ತ್ರೀಯ ಸ್ವಾತಂತ್ರ್ಯಕ್ಕೆ ಪರಿಮಿತಿಗಳಿವೆ. ಅದನ್ನೂ ಮೀರಿದ್ದಾಳಲ್ಲಾ ಇವಳು?! ಓದಲೆಂದು ನಗರಕ್ಕೆ ಕಳುಹಿಸಿದರೆ ಹೀಗಾ ಮಾಡುವುದು ಇವಳು?
ಮೂರನೇ ದಿನ ಅಣ್ಣ ನಿದ್ರಿಸಿದ ನಂತರ ಅಕ್ಕನೊಟ್ಟಿಗೆ ಮಲಗಿಕೊಂಡಿದ್ದ ನಾನು ಎದ್ದು ಕುಳಿತೆ. ಪತ್ರದ ವಿಚಾರವಾಗಿ ಕೇಳಿ, ಮನೆಯ ಮರ್ಯಾದೆ, ಗೌರವ ಉಳಿಸಿಕೊಳ್ಳುವ ಬಗೆ ಹೇಗೆಂದು ಮಾತನಾಡಲೇಬೇಕೆಂದು ದೃಢವಾಗಿ ನಿಶ್ಚಯಿಸಿದೆ. ನಾಳೆ ಊರಿಡೀ ಕೇಳುವ, ಕಾಣುವ ಸುದ್ದಿಯಲ್ಲವೇ ಇದು. ಮನೆಯ ಗೌರವವನ್ನು ಕಾಪಾಡುವುದು ಮನೆಯ ಮಗಳಾದ ನನ್ನ ಕರ್ತವ್ಯ ಕೂಡಾ. "ಅಕ್ಕಾ" ಎಂದು ಹಲವು ಬಾರಿ ಕರೆದೆ. ಆಕೆಗೆ ನಿದ್ದೆ ಹತ್ತಿದ್ದರಿಂದ ನನ್ನ ಕರೆ ಕೇಳಿಸಲೇ ಇಲ್ಲ. ನಾಳೆ ಕೇಳೋಣವೆಂದುಕೊಂಡು ಮತ್ತೆ ಹಾಸಿಗೆಯಲ್ಲುರುಳಿದೆ.
     ಮರುದಿನ ಬೆಳಗ್ಗೆ ಅಣ್ಣನೆದುರಿಗೆ ಅವಳನ್ನು ಈ ವಿಚಾರ ಕೇಳುವುದು ತರವಲ್ಲ, ಇಂದು ರಾತ್ರಿಯವರೆಗೆ ಕಾದು ಅಣ್ಣ ಮಲಗಿದ ನಂತರ ಕೇಳುತ್ತೇನೆ ಎಂದುಕೊಂಡು ಸುಮ್ಮಗಾದೆ. ಮೂರು ದಿನಗಳಿಂದ ಸರಿಯಾದ ನಿದ್ದೆ ಇಲ್ಲದ ಕಾರಣ ತಲೆನೋವು ಬೇರೆ. ಆ ದಿನ ಕಾಲೇಜಿಗೆ ಹೋಗದೇ ಮನೆಯಲ್ಲೇ ಉಳಿದೆ. ಅಣ್ಣ, ಅಕ್ಕ ಇಬ್ಬರೂ ಕಾಲೇಜಿಗೆ ತೆರಳಿದ ನಂತರ ಬಾಗಿಲನ್ನು ಭದ್ರಪಡಿಸಿಕೊಂಡೆ. ಹಾಸಿಗೆಯಲ್ಲಿ ಮಗ್ಗುಲು ಬದಲಾಯಿಸುತ್ತಾ ಮಲಗಿದರೂ ನಿದ್ದೆ ಹತ್ತಿರ ಸುಳಿಯಲಿಲ್ಲ. ಆದರೂ ಮಧ್ಯಾಹ್ನದವರೆಗೂ ಮಲಗಿದೆ. ಒಂದು ಗಂಟೆ ಹೊಡೆಯಿತು. ಯೋಚನೆ ಮಾಡಿ ಮಾಡಿ ತಲೆ ಹುಣ್ಣಾಗಿತ್ತು. ಒಂದು ನಿರ್ಧಾರಕ್ಕೂ ಬರಲಾಗುತ್ತಿಲ್ಲವಲ್ಲಾ ಎಂದು ಮೌನವಾಗಿ ಅತ್ತುಬಿಟ್ಟೆ. ಗಂಟಲು ತುಂಬಾ ಒಣಗಿಹೋಗಿತ್ತು. ಒಂದು ಲೋಟ ನೀರು ಕುಡಿದು ಅಕ್ಕನ ಹೆಸರಿಗೆ ಬಂದ ಆ ಪತ್ರವನ್ನು ಎರಡನೇ ಬಾರಿ ಓದಲು ತೆಗೆದೆ.
ಪ್ರೀತಿಯ ರೇಖಾ,
ನೀನು ತಿಳಿದಿರುವಂತೆ ನಾನು ಯಾವತ್ತೂ ಪ್ರಾಮಾಣಿಕ, ಮನಸ್ಸು ಬಿಚ್ಚಿ ಮಾತನಾಡುವವ. ಹಾಗೆಯೇ ಮನಸ್ಸು ಬಿಚ್ಚಿ ಬರೆಯುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸಿದ್ದೆ ನಿಜ. ಈಗಲೂ ನನ್ನ ಹೃದಯದಲ್ಲಿ ನೀನೇ ತುಂಬಿದ್ದೀಯ. ಆದರೆ...ಆದರೆ...ನನ್ನ ತಾಯಿಯ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ. ಆಕೆಯ ಅಣ್ಣನ ಮಗಳು ಮಾಧವಿಯನ್ನು ಇನ್ನೊಂದು ತಿಂಗಳೊಳಗಾಗಿ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದಾಳೆ. ನನಗೆ ಬೇರೆ ದಾರಿಯೇ ಕಾಣುತ್ತಿಲ್ಲ. ಇತ್ತ ನಿನ್ನನ್ನು ಬಿಡುವ ಹಾಗಿಲ್ಲ. ನಿನ್ನೆ, ನನ್ನ ನಿನ್ನ ಪ್ರೇಮ ಸಂಬಂಧವನ್ನು ತಿಳಿಸೋಣವೆಂದುಕೊಂಡು ಅಮ್ಮನ ಬಳಿಗೆ ಹೋಗಿದ್ದೆ. ನನ್ನಿಂದ ಮೊದಲೇ ಮದುವೆ ಪ್ರಸ್ತಾಪವೆತ್ತಿದ ಅವಳು, ನಾನು ಚಿಕ್ಕವನಿರುವಾಗಲೇ ನನ್ನ ಹಾಗೂ ಮಾಧವಿಯ ಮದುವೆ ಬಗ್ಗೆ ಕನಸ್ಸು ಕಂಡಿದ್ದಾಗಿ ತಿಳಿಸಿದಳು. ಅವಳನ್ನೇ ಮನೆ ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬುದು ಅವಳ ಮಹದಾಸೆ. ನನ್ನ ಮಾವನವರೂ ಬಂದು ಈ ವಿಷಯವಾಗಿ ಅಮ್ಮನ ಬಳಿ ಮಾತನಾಡಿ ಹೋಗಿದ್ದಾರಂತೆ. ನನಗೆ ಈ ವಿಚಾರವಾಗಿ ಇದುವರೆಗೆ ಏನೇನೂ ಗೊತ್ತಿರಲಿಲ್ಲ. ಅಮ್ಮ ಇದನ್ನೆಲ್ಲಾ ಹೇಳುತ್ತಿರುವಾಗ ಸಿಡಿಲೇ ಎರಗಿ ನನ್ನ ಮೇಲೆ ಬಿದ್ದಂತೆನಿಸಿತು. ಒಂದು ವೇಳೆ ನಾನು, ನನ್ನ ಹಾಗೂ ನಿನ್ನ ವಿಷಯವನ್ನು ಈ ಸಂದರ್ಭದಲ್ಲಿ ತಿಳಿಸಿದರೆ ಕೆಲವು ತಿಂಗಳುಗಳ ಕಾಲ ಬದುಕಿರಬಹುದಾದ ಅವಳು ಕೆಲ ದಿನಗಳಲ್ಲೇ ಅಥವಾ ವಿಷಯ ತಿಳಿಸಿದಾಕ್ಷಣ ಪ್ರಾಣಬಿಡಬಹುದು. ನೀನು ಎರಡು ತಿಂಗಳ ಗರ್ಭಿಣಿಯಾಗಿರುವ ವಿಚಾರ ನೀನು ಕಳೆದ ವಾರ ನಮ್ಮ ಭೇಟಿಯಲ್ಲಿ ಹೇಳಿದಾಗ ನಮ್ಮ ಮದುವೆಯ ಬಗ್ಗೆ ಮನೆಯಲ್ಲಿ ಮಾತನಾಡಿ ಬೇಗ ನಿನ್ನನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳುವುದರಲ್ಲಿದ್ದೆ. ಆದರೆ ಈಗ ಪರಿಸ್ಥಿತಿಯೇ ತಲೆ ಕೆಳಗಾಗಿದೆ. ನೀನು ಯಾರಾದರೂ ಡಾಕ್ಟರ್ ಹತ್ತಿರ ಸಮಸ್ಯೆಯನ್ನು ಬಗೆಹರಿಸಿಕೊ. ನಾನು ಬೇಕಾದರೆ ಸಹಾಯ ಮಾಡುವೆ. ಮತ್ತೆ ನಮ್ಮಿಬ್ಬರ ನಡುವೆ ನಡೆದುದೆಲ್ಲವನ್ನೂ ಕೆಟ್ಟ ಕನಸೆಂದುಕೊಂಡು ಮರೆತುಬಿಡು. ಬಹುಶ: ನೀನು ನನ್ನ ಪತ್ರವನ್ನು ಅಂಚೆ ಮೂಲಕ ನಿರೀಕ್ಷಿಸಿರಲಿಕ್ಕಿಲ್ಲ ಅಲ್ಲವೇ? ಈ ವಾರದ ಕೊನೆಯಲ್ಲಿ ನಾನು ನಿನ್ನನ್ನು ಭೇಟಿಯಾಗುವೆನು." - ಮೋಹನ
ಪತ್ರ ಓದಿ ಮುಗಿಸಿದವಳೇ, "ಮೋಸಗಾರ, ಪಾಪಿ, ಹೇಡಿ, ವಂಚಕ, ನಿರ್ದಯಿ" ಎಂಬ ಹತ್ತಾರು ಬಿರುದುಗಳನ್ನು ಕೊಟ್ಟೆ. ಅಂತೆಯೇ ಅಕ್ಕನಿಗೆ, "ವಿಶ್ವಾಸಘಾತಕಿ, ನಯವಂಚಕಿ, ಕಪಟಿ, ನಿಷ್ಕರುಣಿ, ನಮ್ಮ ಸುಖಸಂಸಾರದ ಸಂತೋಷಕ್ಕೆ ಧಕ್ಕೆ ತಂದವಳು" ಎಂದೆಲ್ಲಾ ಜೋರಾಗಿ ಬೈದುಬಿಟ್ಟೆ. ಪತ್ರವನ್ನು ಮಡಿಸಿದೆ. ಅದನ್ನು ಸುಟ್ಟು ಬೂದಿ ಮಾಡುವಷ್ಟು ಕೋಪ ಉಕ್ಕಿ ಬಂದಿತು. ಸಾವರಿಸಿಕೊಂಡು ಪುನ: ಪತ್ರವನ್ನು ಕೈಗೆತ್ತಿಕೊಂಡೆ. "ಅಕ್ಕಾ ರೇಖಾ, ಏಕೆ ಹೀಗೆ ಮಾಡಿಬಿಟ್ಟೆ?" ಎನ್ನುತ್ತಿದ್ದಂತೆ ಕಣ್ಣುಗಳು ವಿಳಾಸವನ್ನು ಓದಿದವು. ’ರೇಖಾ. ಸಿ".....ಅರೇ ನನ್ನಕ್ಕ ರೇಖಾ. ಪಿ! ಮತ್ತೊಮ್ಮೆ ಕಣ್ಣರಳಿಸಿ ನೋಡಿದೆ. ’ರೇಖಾ. ಸಿ’ ಎಂದೇ ಆಗಿತ್ತು. ಹೆಸರೊಂದನ್ನು ಬಿಟ್ಟು ಮಿಕ್ಕೆಲ್ಲಾ ವಿಳಾಸವೂ ಒಂದೇ. ಅಂದರೆ ನಮ್ಮ ಬೀದಿಯ ಕೊನೆಯ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ರೇಖಾಳೇ ಇರಬೇಕು ಈ ರೇಖಾ. ಸಿ! ಅಂದರೆ ಅಂಚೆಯವರು ಅವಳ ಮನೆಗೆ ಹಾಕಬೇಕಾಗಿದ್ದ ಪತ್ರವನ್ನು ತಪ್ಪಿ ನಮ್ಮ ಮನೆಯೊಳಗೆ ಹಾಕಿರಬೇಕು. ಕಾಗದವನ್ನು ಒಡೆದು ಓದಿದ ಮೇಲೆ ಆ ಮನೆಗೆ ಕೊಡುವುದು ಸರಿಯಲ್ಲವೆಂದುಕೊಂಡು ಚೂರು ಚೂರು ಮಾಡಿ ಕಸದ ಬುಟ್ಟಿಗೆ ಹಾಕಿದೆ. ಛೇ....ಎಂತಹ ಅನಾಹುತವಾಗಿ ಬಿಟ್ಟಿದೆ. ನನ್ನಕ್ಕನ ಬಗ್ಗೆ ಏನೆಲ್ಲಾ ಕೀಳಾಗಿ ಗ್ರಹಿಸಿಬಿಟ್ಟೆ. ಈ ಐದೂ ದಿನಗಳಿಂದ ಅಕ್ಕನನ್ನು ಜಿಗುಪ್ಸೆಯಿಂದ, ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದ ಮನಸ್ಸು ಈಗ ಒಮ್ಮೆಲೇ ತಿಳಿಯಾಯಿತು. ಸಾವಕಾಶವಾಗಿ ನಿರಾಳವಾಗಿ ಉಸಿರಾಡಿದೆ. ಐದು ದಿನಗಳಿಂದ ಊಟ, ನಿದ್ದೆ ಸರಿಯಾಗಿಲ್ಲದೇ ಮುಖ ಕಂಗೆಟ್ಟದ್ದನ್ನು ಕನ್ನಡಿಯಲ್ಲಿ ನೋಡಿಕೊಂಡೆ. ಎಂತಹ ವಿಚಿತ್ರವೆನಿಸಿತು ನನಗೆ. ನಮ್ಮ ಸ್ವಂತದವರ, ಒಡಹುಟ್ಟಿದವರ ಮೇಲೆ ಕೆಟ್ಟ ಭಾವನೆ ಬಂದರೆ ತಿರಸ್ಕಾರ, ಒಳ್ಳೆಯ ಭಾವನೆ ಬಂದರೆ ಮಮಕಾರ. ಜೀವನವೇ ಹೀಗೇ, ಸುಖ ಬಂದರೆ ಸಂತೋಷಪಡುವುದು, ದು:ಖ ಬಂದರೆ ಮರುಗುವುದು. ಅಕ್ಕನ ಮೇಲಿದ್ದ ವಿಶ್ವಾಸ ಮತ್ತೆ ಜೀವ ತಳೆಯಿತು.
     ವಿಳಾಸದಲ್ಲಿದ್ದ ಸೂಕ್ಷ್ಮ ವಿಚಾರವನ್ನು ಸರಿಯಾಗಿ ಗಮನಿಸದೆ ಅಕ್ಕನ ಮೇಲೆ ವಿನಾಕಾರಣ ಸಂದೇಹಪಟ್ಟು ತಿರಸ್ಕಾರ ಮೂಡಿಸಿಕೊಂಡದಕ್ಕೆ ನನ್ನನ್ನೇ ನಾನು ಧಿಕ್ಕರಿಸಿಕೊಂಡೆ. ’ಹೇಳಿದು ಸುಳ್ಳಾಗಬಹುದು... ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು....’ ಎಂಬ ಚಿತ್ರಗೀತೆಯೊಂದರ ಸಾಲುಗಳು ನೆನಪಾದವು.
ಸ್ನಾನ ಮಾಡಿ ಪತ್ರಿಕೆಯನ್ನೆತ್ತಿಕೊಂಡಿ ಹೋಗಿ ಹೊರಗೆ ಜಗಲಿಯಲ್ಲಿ ಕುಳಿತೆ. ಸಂಜೆ ಆಗಿತ್ತು. ಕಾಲೇಜಿಗೆ ಹೋಗಿದ್ದ ಅಕ್ಕನ ಬರುವಿಕೆಗಾಗಿ ಕಾದೆ. ಅಕ್ಕನ ಮೇಲಿದ್ದ ಮೊದಲಿನ ಒಲವು ತುಂಬಿ ಹರಿದು ಬಂದಿತ್ತು. ಪಕ್ಕದ ಬೀದಿಯ ಹೆಂಗಸರಿಬ್ಬರು,"ಪಾಪ ರೇಖಾ" ಎನ್ನುತ್ತಾ ಹೋಗುತ್ತಿದ್ದದ್ದು ಕೇಳಿಸಿತು. ನಾನು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ವಠಾರದ ಎಲ್ಲಾ ಮನೆಯವರೂ ನಮ್ಮ ಬೀದಿಯ ಕೊನೆಯ ಮನೆಯಲ್ಲಿ ಜಮಾಯಿಸುತ್ತಿದ್ದದ್ದು ನಮ್ಮ ಮನೆಯ ಜಗಲಿಗೆ ಕಾಣಿಸಿತು. ಅಷ್ಟರಲ್ಲೇ ಅಕ್ಕ ಬಂದಳು. 
"ಸುಮಾ, ಕೊನೇ ಮನೆ ರೇಖಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳಂತೆ. ಯಾರೋ ನಂಬಿಸಿ ಪಾಪದವಳಿಗೆ ಮೋಸ ಮಾಡಿಬಿಟ್ಟರಂತೆ. ಎರಡು ತಿಂಗಳ ಗರ್ಭಿಣಿಯೂ ಆಗಿದ್ದಳಂತೆ ಅವಳು" ಎನ್ನುತ್ತಾ ಬಂದಳು. ಒಮ್ಮೆಲೇ ನಾನು ದಿಗ್ಭ್ರಾಂತಳಾಗಿ, "ಹೌದಾ ಅಕ್ಕಾ" ಎನ್ನುತ್ತಾ ಅಕ್ಕನೊಂದಿಗೆ ಒಳ ನಡೆದೆ.

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.