Saturday, February 28, 2015

ನಿದ್ದೆ ಬೇಡದ್ದವು ಆರಿದ್ದವು...?! -೨೭ ಒಕ್ಟೋಬರ್ ೨೦೧೨ರವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ



ನಿದ್ದೆ ಬೇಡದ್ದವು ಆರಿದ್ದವು...?!


ಒರಗುದು ಹೇಳಿರೆ ಆರಿಂಗೆ ಕುಶಿ ಇಲ್ಲೆ ಹೇಳಿ?! ನಿನಗೆ ದೋಸೆ ಇಷ್ಟವಾ, ಇಡ್ಲಿ ಇಷ್ಟವಾ, ಕಾಫಿ ಇಷ್ಟವಾ, ಚಾಯ ಇಷ್ಟವಾ ಹೇಳಿಯೆಲ್ಲಾ ಕೇಳುವ ಹಾಂಗೆ ಒರಕ್ಕು ಇಷ್ಟವಾ ಹೇಳಿ ಕೇಳುತ್ತ ಕ್ರಮ ಇಲ್ಲೆ. ಆದರೆ ನಿಂಗೊ ಎಲ್ಲಿಯಾರು ದಿನಪತ್ರಿಕೆ, ವಾರಪತ್ರಿಕೆಲೆಲ್ಲಾ ಸಿನೆಮಾ ಪುಟಲ್ಲಿ ಹೀರೋಯಿನ್ ಗಳ ಇಂಟರ್ ವ್ಯೂ ಓದಿದ್ದರೆ ಖಂಡಿತಾ ನೆಂಪಿಕ್ಕು. ಸಂದರ್ಶಕರು "ನಿಮ್ಮ ಫ್ರೀ ಟೈಂನಲ್ಲಿ ಏನು ಮಾಡ್ತೀರಿ?" ಹೇಳಿ ಕೇಳಿದವು ಹೇಳಿಯಾದರೆ, ಒಂದೆರಡು ಹವ್ಯಾಸಂಗಳ ಹೇಳಿಕ್ಕಿ, "ಟೈಂ ಸಿಕ್ಕಾಗೆಲ್ಲಾ ನಿದ್ರೆ ಮಾಡೋದು ಹೇಳಿದರೆ ನಂಗಿಷ್ಟ!" ಹೇಳಿ ಹೇಳ್ತವು! ದಿನಪತ್ರಿಕೆ, ವಾರಪತ್ರಿಕೆಲಿ ಮಾತ್ರ ಅಲ್ಲ, ಟಿ.ವಿ ಲಿದೇ ಇಂಟರ್ ವ್ಯೂ ಮಾಡುವಾಗಲೂ ಆನು ನೋಡಿದೆ, ಕೇಳಿದ್ದೆ! ಎಲ್ಲೋರೂ ಹಾಂಗಿಪ್ಪ ಪ್ರಶ್ನೆಗೆ ಔಟ್ ಆಫ್ ಟಾಪಿಕ್ ಉತ್ತರ ಹೇಳುತ್ತವಿಲ್ಲೆಪ್ಪಾ! ಕೆಲವೊಂದು ಒರಕ್ಕಿಷ್ಟಯಿಪ್ಪ ಹೀರೋಯಿನ್ ಗಳು ಮಾತ್ರ! ಅದೆಂತಕೋ ಹೀರೋಗಳ ಇಂಟರ್ ವ್ಯೂಲಿ ಹಾಂಗೆ ಹೇಳಿದ್ದರ ಆನೆಲ್ಲಿಯೂ ಓದಿದ ಹಾಂಗಿಲ್ಲೆ! ನೋಡಿದ್ದೂ ಇಲ್ಲೆ! ಅದು ಹೀರೋಯಿನ್ ಗೊಕ್ಕೆ ಮಾತ್ರ ಇಷ್ಟವಾ?! ಎಲ್ಲರಿಂಗೂ ಇಷ್ಟವೇ ಅಲ್ಲದಾ?! ಅದರಲ್ಲಿ ಇಷ್ಟ, ಕಷ್ಟ ಹೇಳಿ ಎಂತ ಇದ್ದು? ಅದು ಅನಿವಾರ್ಯ ಅಲ್ಲದಾ ಹೇಳೀ?  ಹಾಂಗೊಂದರಿ ಆರನ್ನಾರೂ ಸೀದಾ ಒರಕ್ಕಿಷ್ಟವಾ ಹೇಳಿ ಕೇಳಿರೆ, ಅವು ಗ್ರೇಶುಗು ಇವಕ್ಕೆಂತ ಸರಿ ಒರಕ್ಕಾಯಿದಿಲ್ಲೆಯಾ ಅಥವಾ ಒಂದು ಸುತ್ತು ಕಡಮ್ಮೆಯೋ ಹೇಳಿ!  ಹೊಡಿ ಮಕ್ಕೊ ಅಲ್ಲಿ ಬೇನೆ, ಇಲ್ಲಿ ಬೇನೆ, ಬಚ್ಚುತ್ತು ಹೇಳಿ ಎಲ್ಲಾ ಹೇಳಿರೆ ದೊಡ್ಡೋರು ಇಷ್ಟೇ ಹೇಳುಗು,"ಮದ್ದು ಗಿಟ್ಟಿ, ಕೈಕಾಲುಗಳ ಒತ್ತಿ ಕೊಡ್ತೆ ಮಗಾ, ಮತ್ತೆ ಲಾಯ್ಕಲ್ಲಿ ಒರಗಿ ಎದ್ದಪ್ಪಗ ಬೇನೆ, ಬಚ್ಚುದು ಎಲ್ಲಾ ಕಡಮ್ಮೆ ಆವುತ್ತು" ಹೇಳಿ. ಅವು ಹೇಳಿದ ಹಾಂಗೆ ಲಾಯ್ಕ ಒರಗಿ ಎದ್ದಪ್ಪಗ ಬೇನೆ, ಬಚ್ಚುದು ಎಲ್ಲಾ ಗುಡ್ಡೆ ಹತ್ತಿ ಹೋಗಿರುತ್ತು! ಹಾಂಗಾರೆ ಒರಕ್ಕು ಒಂದು ಔಷಧಿಯೇ ಸರಿ. ಅಪ್ಪು. ಅದೊಂದು ದೇಹಕ್ಕೆ, ಮನಸ್ಸಿಂಗೆ ಎರಡಕ್ಕೂ ಆರಾಮ ಕೊಡುವ ಒಂದು ವ್ಯಾಯಾಮದ ಹಾಂಗೆ! ವ್ಯಾಯಾಮದ ಹಾಂಗೆ ಎದ್ದು ಬಗ್ಗಿ ಮಾಡುವ ಕಷ್ಟ ಎಂತ ಕರ್ಮವೂ ಇಲ್ಲೆ. ಹಸೆ ಬಿಡಿಸಿ, ಮನುಗಿದರೆ, ಮುಗುದತ್ತು! ಕೆಲವೊಂದರಿ ಅಷ್ಟು ಕಷ್ಟ ಪಡೇಕಾದ್ದೂ ಇಲ್ಲೆ. ಕೂದಲ್ಲಿಗೇ ಆರಾಮಲ್ಲಿ ಒರಕ್ಕು ಬತ್ತು! ಆರಾರು ಒಂದು ನಮೂನೆ ಮಾತಾಡಿಕೊಂಡಿದ್ದರೆ, ವಿಚಿತ್ರವಾಗಿ ವರ್ತಿಸುತ್ತಾ ಇದ್ದವು ಹೇಳಿರೆ ಅವಂಗೆಲ್ಲಿಯೋ ರಜ್ಜ ಒರಕ್ಕು ಕಡಮ್ಮೆಯಾದಿಕ್ಕು ಹೇಳಿ ಹೇಳುತ್ತ ಕ್ರಮವೂ ಇದ್ದಲ್ಲದಾ?! ಅಪ್ಪ, ಅಮ್ಮ ಅವರವರ ಮಕ್ಕೊಗೆ ಏವಾಗಲೂ ಇರುಳು ಹೇಳುತ್ತ ಕ್ರಮ ಇದ್ದು," ಮಗಾ ಗಂಟೆ ೯ ಆತು, ಇನ್ನು ಒರಗು, ಬೇಗ ಒರಗಿ, ಬೇಗ ಏಳೇಕು ಹೇಳಿ ಎಲ್ಲಾ. ಆದರೆ ಈಗಾಣ ಮಕ್ಕಳೋ?! ಅವು ಎಡಿಗಾಷ್ಟು ಲೇಟಾಗಿ ಒರಗಿ, ಎಡಿಗಾಷ್ಟು ತಡವಾಗಿ ಏಳುತ್ತ ಕ್ರಮ.  ಅದು ಈಗಾಣ ಫ್ಯಾಶನ್ ಆಗಿಹೋಯಿದು! ರಜೆ ಇದ್ದರೆ ಕತೆ ಮುಗುದಾಂಗೆ! ಗಂಟೆ ಒಂಭತ್ತಾದರೂ ಏಳುವ ಆಲೋಚನೆಯೇ ಇಲ್ಲವೇ ಇಲ್ಲೆ. ಏಳಿಸುಲೆ ಹೆರಟರೆ ದಿನಿಗೇಳಿ....ದಿನಿಗೇಳಿ ದೊಂಡೆ ಪಸೆ ಆರಿಹೋವುತ್ತಷ್ಟೇ! ನಮ್ಮ ಮನೇಲಿ ಮಾತ್ರ ಹೀಂಗೋ ಹೇಳಿ ಗ್ರೇಶಿ ಬೇಜಾರು ಮಾಡಿಕೊಂಬದು ಸುಮ್ಮಗೆ!  ಎಲ್ಲಾ ಅಮ್ಮಂದಿರು ಸೇರಿ ಮಾತ್ನಾಡಿಯಪ್ಪಗ ಎಲ್ಲರ ಮನೆ ಮಕ್ಕಳ ಕತೆಯೂ ಅಷ್ಟೇ! ಎಲ್ಲರ ಮನೆ ದೋಸೆಲಿಯೂ ಒಟ್ಟೆಗಳೇ! ಎನ್ನ ಅಮ್ಮ ಎಂಗೊ ಕಾಲೇಜಿಂಗೆಲ್ಲಾ ಹೋಯಿಕೊಂಡಿಪ್ಪಗ ಮಕ್ಕೊಗೆ ಚಹ ಕೊಟ್ಟರೆ ರಜ ಎಚ್ಚರಲ್ಲಿದ್ದು ಹೆಚ್ಚು ಹೊತ್ತು ಕೂದು ಓದುಗು ಹೇಳಿ ಚಾಯ ಮಾಡಿ ಕೊಟ್ಟು ಅವರ ಕೆಲಸ ಮಾಡಿಕೊಂಡಿದ್ದರೆ, ಇತ್ಲಾಗಿ ಎಂಗಳ ಕತೆಯೇ ಬೇರೆ! ಅಮ್ಮ ಮಾಡಿ ಕೊಟ್ಟ ಬೆಶಿ ಬೆಶಿ ಚಾಯ ಕುಡುದು ಅಲ್ಲಿಗೆ ಒರಗಿಕೊಂಡಿತ್ತಿದೆಯ! ಆದರೆ ಈಗ ಅದೇ ಚಾಯ ಮಾಡಿ ಅಕಸ್ಮಾತ್ ನಿರ್ವಾಹ ಇಲ್ಲದ್ದೇ ಕುಡ್ದತ್ತು ಹೇಳಿ ಆದರೆ ಗತಿ ಗೋವಿಂದ! ಎಷ್ಟು ಹೊಡಚಿದರೂ ಒರಕ್ಕೇ ಬತ್ತಿಲ್ಲೆ! ಆಂದು ಅಮ್ಮ ಕೊಟ್ಟ ಆ ಚಾಯ ಸರಿಯಾಗಿ ಕೆಲಸ ಮಾಡಿದ್ದರೆ ಭಾರೀ ಒಳ್ಳೆದಾವುತ್ತಿತ್ತು! 
ಈ ಒರಕ್ಕು ಎಷ್ಟರ ಮಟ್ಟಿನ ಅಪಾಯ ತೈಂದು ಹೇಳಿ ಕಳುದ ವಾರ ವಿಜಯ ಕರ್ನಾಟಕ ಓದಿದ ಮತ್ತೆ ಗೊಂತಾತು! ಮದುವೆಯಾದ ಲಾಗಾಯ್ತು ಹೆಂಡತಿ ಗೆಂಡನ ಸುಖ ದು:ಖ ಒಂದನ್ನೂ ವಿಚಾರಿಸಿಕೊಳ್ಳದ್ದೇ ಅವ ಆಫೀಸಿಂದ ಬಪ್ಪಗಳೂ, ಆಫೀಸಿಂಗೆ ಹೋಪಾಗಲೂ ಅವನ ಅಸ್ತಿತ್ವವೇ ಇಲ್ಲೆ ಹೇಳುವ ಹಾಂಗೆ ಒರಗಿಕೊಂಡಿತ್ತಡ! ಅವ ಅವನಷ್ಟಕ್ಕೆ ಉದಿಯಪ್ಪಗ ಎದ್ದು ಆಫೀಸಿಂಗೆ ಹೋದ ಮತ್ತೆ ಇದು ಒರಕ್ಕಿಂದ ಎದ್ದುಕೊಂಡಿತ್ತಡ! ಹಾಂಗೆ ಅವಂಗೆ ಇದರ ಒರಕ್ಕಿನ ಕಂಡು ಬೊಡುದು ಹೋಗಿ ಡೈವೊರ್ಸ್ ಕೊಟ್ಟುಬಿಟ್ಟಡ! ಹಾಂಗೇ ಆಯ್ಯೇಕ್ಕದಕ್ಕೆ ಹೇಳಿ ಗ್ರೇಶಿಕೊಂಡಿತ್ತೆ. ಆದರೆ ಆ ಲೇಖನದ ಕೊನೆಯ ವಾಕ್ಯ ಹೇಳಿತ್ತು ಎಂತ ಹೇಳಿರೆ ಆ  ಹೆಂಡತಿಗೆ ತನ್ನ ತಪ್ಪಿನ ಅರಿವಾಗಿ ಮತ್ತೆ ಗೆಂಡ ಹೆಂಡತಿ ಒಂದಾದವಡ. ಪ್ರಾಯಶ್ಚಿತ್ತಕ್ಕೆ ಮಿಗಿಲಾದ ಶಿಕ್ಷೆ ಬೇರೆಂತ ಬೇಕು ಅಲ್ಲದಾ?! ಎಚ್ಚರಲ್ಲಿದ್ದೊಂಡು ಪಿರಿಪಿರಿ ಮಾಡುವಷ್ಟು ದೊಡ್ಡ ತಪ್ಪಲ್ಲ ಒರಗುದು! ಎಂತ ಹೇಳುತ್ತೀ?!
ಹುಟ್ಟಿದ ಎಲ್ಲಾ ಪ್ರಾಣಿ, ಪಕ್ಷಿ, ಮನುಪ್ಯರಿಂಗೆ ಒರಕ್ಕು ಬೇಕೇ ಬೇಕು. ಈ ಮನುಷ್ಯನ ಹೊರತಾಗಿ ಎಲ್ಲಾ ಜೀವಿಗೊಕ್ಕುದೇ ನಿಗದಿತ ಸಮಯಕ್ಕೆ ಸರಿಯಾಗಿ ಒರಗಿ ಏಳುತ್ತ ಕ್ರಮ ಇದ್ದು. ಉದಿಯಪ್ಪಗ ಹಕ್ಕಿಗೊ ಎಲ್ಲಾ ಎದ್ದು ಚಿಲಿಪಿಲಿ ಶಬ್ದ ಮಾಡಿಯೊಂಡು, ಲವಲವಿಕೆಲಿರುತ್ತವು. ಎಂಗಳೆಲ್ಲರ ಕತೆಯೇ ಬೇರೆ. ಕೆಲವೋರು ಇರುಳು ಎಂಟು ಗಂಟೆಗೆ ಒರಗಿದರೆ, ಇನ್ನೂ ಕೆಲವೋರು ಎಂಟೂವರೆ, ಒಂಭತ್ತು,ಒಂಭತ್ತೂವರೆ, ಹತ್ತು, ಹನ್ನೊಂದು.... ಹನ್ನೆರಡು....ಹೀಂಗೆಲ್ಲಾ. ಅದೇ ರೀತಿ ಉದಿಯಪ್ಪಗ ಏಳುವ ಸಮಯಲ್ಲಿ ಕೂಡಾ ಕಂಡಾಬಟ್ಟೆ ವ್ಯತ್ಯಾಸ ಇದ್ದು! ಎದ್ದ ಮತ್ತೆ, ಮತ್ತೆ ಪುನ: ಉದಾಸೀನ ಬಿಡ್ತಿಲ್ಲೆ. ಹಾಸಿಗೆಯಿಂದ ಎದ್ದು ಬಂದು ಖುರ್ಶಿಲಿ ಕೂದು, ಅಲಿದೇ ಒರಕ್ಕು ತೂಗುದು. ಮತ್ತೆ ರಜ ಹೊತ್ತು ಕಳುದು, ಕೆಲಸಂಗಳ ಗ್ರೇಶಿ, ಹರುದುಬಿದ್ದು ಹೇಂಗೆಲ್ಲಾ ಒಟ್ರಾಶಿ ಕೆಲಸ ಮಾಡಿ ಮುಗುಶುದಷ್ಟೇ! ಹೀಂಗೆಲ್ಲಾ ಮಾಡುವವು ಹಲವರಷ್ಟೇ ಅಪ್ಪಾ, ಕೆಲವೂರು ಸಮಯ ಪರಿಪಾಲನೆ ಮಾಡುವವೂ ಇದ್ದವು! ಹೀಂಗೆ ಸರೀ ಒರಕ್ಕಾಗದ್ದೆಯೋ, ಎಂತದ್ದೋ, ಕೆಲವು ಜನಂಗ ಆಫೀಸುಗಳಲೆಲ್ಲಾ ಅವರವರ ಖುರ್ಶಿಗಳಲ್ಲಿ ಕೂದು ಒರಕ್ಕು ತೂಗಿಕೊಂಡಿರುತ್ತವು, ಹಾಂಗೇ ಮನೇಲಿದೇ ಟಿ.ವಿ. ನೋಡಿಕೊಂಡೇ, ಸಿನೆಮಾ ತಿಯೇಟರುಗಳಲ್ಲಿ ಸಿನೆಮಾ ನೋಡಿಯೊಂಡೇ! ಮತ್ತೆ ಈಗೀಗಂತೂ ಕೆಮಿಗೆ ಹೆಡ್ ಫೋನ್ ಹಾಕ್ಯೋಂಡು ಕೆಮಿ ತಮಟೆ ಒಡವ ಹಾಂಗೆ ವಾಲ್ಯುಮಿಲಿ ಮಡುಗಿ ಮೊಬೈಲಿಲಿ ಪದ್ಯ ಕೇಳಿಯೊಂಡೇ ಅದರ ಕೆಮಿಯಿಂದ ತೆಗೆಯದ್ದೇ, ಆಫ್ ಕೂಡಾ ಮಾಡದ್ದೇ  ಒರಗಿಕೊಂಡಿರುತ್ತವು! ಹೀಂಗೆಲ್ಲಾ ಒರಗುವ ಕ್ರಮ ಇಪ್ಪವರ ಮೆಲ್ಲ ಹಂದಿಸಿ ಕೇಳಿ ನೋಡಿ, "ಎಂತ ಒರಕ್ಕು ಬಂದಿತ್ತಾ ಹೇಳಿ?" ಸುಲಭಲ್ಲೆಲ್ಲಾ ಒಪ್ಪಿಕೊಳ್ಳವು ಒರಕ್ಕು ಬಂದಿತ್ತು ಹೇಳಿ! " ಎಂತದನ್ನೋ ಆಲೋಚನೆ ಮಾಡಿಯೊಂಡಿತ್ತೆ, ಹಾಂಗೆ ರಜ ಕಣ್ಣು ಅಡ್ಡ ಹೋದ್ದಷ್ಟೇ ಹೇಳಿ ಹೇಳುತ್ತವು! ’ಒರಗುದು’, ’ಕಣ್ಣು ಅಡ್ಡ ಹೋಪದು’ ಎರಡರ ಅರ್ಥ ಒಂದೇ ಆದ ಕಾರಣ ಅವು, ಅವು ಮಾಡಿದ ಘನಕಾರ್ಯವ ಒಪ್ಪಿಕೊಂಡ ಹಾಂಗೆಯೇ! ಎಂತಾರೂ ಈ ಒರಕ್ಕು ಕಡಮ್ಮೆಯಾದರೂ, ಹೆಚ್ಚಾದರೂ, ಕಷ್ಟ ಕಷ್ಟವೇ.
ಕೆಲವೊರು ಹೇಳುತ್ತ ಕ್ರಮ ಇದ್ದು ಮಧ್ಯಾಹ್ನ ಉಂಡಿಕ್ಕಿ ರಜ ಒರಗಿದರೆ ಒಳ್ಳೆದು ಹೇಳಿ. ಇರುಳೋ, ಹಗಲೋ, ಒಂದು ರಜವೋ, ರಜ ಹೆಚ್ಚೋ ಒರಗಿದರೆ ಮೋರೆ ನೋಡುವಾಗಲೇ ಗೊಂತಾವುತ್ತು! ಅವು, ಇವು ಎಲ್ಲಾ ಕೇಳುಲೆ ಶುರು ಮಾಡ್ತವು," ಎಂಥ ಕಣ್ಣು ಬೀಗಿದ್ದು ಹೇಳಿ! ಅಂಬಗ ಇಪ್ಪದು ಎರಡೇ ಉತ್ತರಂಗೊ. "ರಜ ಒರಕ್ಕು ಹೆಚ್ಚಾಗಿ ಆದಿಕ್ಕು" ಅಥವಾ "ರಜ ಒರಕ್ಕು ಕಡಮ್ಮೆಯಾಗಿ ಆದಿಕ್ಕು" ಹೇಳಿ! ಇನ್ನೂ ಕೆಲವು ಜನಂಗ ಹೇಳುತ್ತವು, ಒರಗಿದ ಆ ಒರಕ್ಕಿದ್ದಲ್ಲದಾ ಅದು ನಿರಂತರವಾಗಿದ್ದರೆ ಮಾತ್ರ ಅದು ಸರಿಯಾದ ಪೂರ್ಣ ಪ್ರಮಾಣದ ಒರಕ್ಕಡ! ಅಂಬಗಂಬಗ ಎಚ್ಚರಿಕೆ ಆಯಿಕೊಂಡಿದ್ದರೆ ಅದು ಒರಕ್ಕೇ ಅಲ್ಲಡ! ಹಾಂಗೆ ಒರಕ್ಕಾದವೆಲ್ಲಾ ಹೇಳುದರ ನಿಂಗೊಲ್ಲಾ ಕೇಳಿಕ್ಕು, " ಒರಕ್ಕೇ ಸರಿ ಆಯಿದಿಲ್ಲೆ ಮಾರಾಯ. ಅಂಬಗಂಬಗ ಎಚ್ಚರಿಕೆ ಆಯಿಕೊಂಡಿದ್ದತ್ತು, ಅರೆ ಒರಕ್ಕಾದಷ್ಟೇ ಹೇಳಿ! ಅವು ಹೇಳುದೂ ಸರಿಯೇ, ನಮಗೂ ಹಾಂಗೆ ಆಯಿದಲ್ಲದಾ ಕೆಲವೊಂದರಿ! ಹವಾಗುಣಕ್ಕೆ ತಕ್ಕ ಹಾಂಗೆ ನಮ್ಮ ಒರಕ್ಕಿಲಿ ಕೂಡಾ ಬದಲಾವಣೆ ಅಪ್ಪದು ಒಂದು ವಿಶೇಷವೇ! ಛಳಿಗಾಲಲ್ಲಿ ಬೆಶ್ಚಂಗೆ ಹೊದದು ಮನುಗಿದರೆ ಒರಕ್ಕಿನ ಕೈಯಿಂದ ತಪ್ಪಿಸಿಕೊಂಬದು ರಜ ಕಷ್ಟವೇ! ಉದಿಯಾದರೂ ಏಳುಲೆ ಮನಸ್ಸು ಬತ್ತಿಲ್ಲೆ! ಮಳೆಗಾಲದ ಕತೆಯೂ ಇದುವೇ! ಇನ್ನು ಶೆಕೆಗಾಲಲ್ಲಿ ಒರಕ್ಕಿಗೆ ಭಂಗ ಆವುತ್ತಿಲ್ಲೆ ಕರೆಂಟ್ ಸಹಾಯಂದ ಫ್ಯಾನ್ ಅಥವಾ ಎ.ಸಿ. ಅವುಗಳ ಕೆಲಸ ಮಾಡಿಯೊಂಡಿದ್ದರೆ! ಅವೆಲ್ಲಾ ಇಲ್ಲೆ ಹೇಳಿಯಾದರೆ ಒರಕ್ಕಿಲಿ ಖಂಡಿತಾ ರಿಯಾಯಿತಿ ಸಿಕ್ಕಿದ ಹಾಂಗೆ! ಮತ್ತಿನ್ನೊಂದು ಎಂತ ಹೇಳಿರೆ ಆರಾರು ನಮ್ಮ ಮನೆಗೆ ಆತ್ಮೀಯರು, ಅತೀ ಹತ್ರಾಣವು ಬಂದಿಪ್ಪಾಗ ಇರುಳಿಡೀ ಮಾತಾಡಿಕೊಂಡಿದ್ದರೂ ಅವರ ಒರಕ್ಕು ನಮ್ಮ ಒರಕ್ಕು ಎರಡೂ ಹತ್ತರೆ ಬಂದು ಉಪದ್ರ ಕೊಡ್ತಿಲ್ಲೆಪ್ಪಾ! ಅದರ ಪರಿಣಾಮ ಗೊಂತಪ್ಪದು ಅವ್ವು ವಾಪಾಸು ಹೋದ ಮತ್ತೆಯೇ! 
ಮನುಷ್ಯಂಗೆ ದಿನಲ್ಲಿ ಬರೀ ನಾಲ್ಕು ಗಂಟೆ ಒರಕ್ಕು ಸಾಕು ಹೇಳಿ ಕೆಲವು ಜನಂಗೊ ಹೇಳುತ್ತರೆ, ಅದನ್ನೇ ಐದು, ಆರು, ಏಳು, ಎಂಟು ಗಂಟೆಗಳವರೆಗೆ ಎಳವವೂ ಇದ್ದವು! ಕೆಲವು ಜನ ವಾರಲ್ಲಿ ಒಂದೇ ದಿನ ರಜೆ ಇಪ್ಪದು ಹೇಳಿ ಇಡೀ ದಿನ ಒರಗುವವೂ ಇದ್ದವು! ಒರಕ್ಕಿನ ಬಗ್ಗೆ ಆರು ಎಷ್ಟು ಒಳ್ಳೆ ನಮೂನೆಯ ಪ್ರವಚನ ಮಾಡಿದರೂ ಅಷ್ಟೇ, ಕೇಳಿದರೂ ಅಷ್ಟೇ! ’ಆ’ ಕೆಮಿಲಿ ಕೇಳಿಕ್ಕಿ, ’ಈ’ ಕೆಮಿಲಿ ಬಿಡುದಾತಷ್ಟೇ! ಒರಕ್ಕಿನ ಬಗ್ಗೆ ಭಾಷಣವ ಕೇಳಿದವ್ವು ಪಾಲಿಸದ್ರೂ ಸರಿ, ಇನ್ನೂಬ್ಬಂಗೆ ಉಪದೇಶ ಮಾಡುಲೆ ಆದರೂ ಒಂದಲ್ಲಾ ಒಂದು ದಿನ ಉಪಕಾರಕ್ಕೆ ಬತ್ತು! ಕೇಳಿ ತಿಳುದ ವಿಚಾರವ ಹೇಳುಲೆ ಎಂತಾಯೇಕು?! ಹೇಳಿದರೆ ಕೇಳುವವಕ್ಕೂ ಕೊಶಿ ಆವುತ್ತು! ಹೇಳಿದವಂಗೂ ತನಗೆ ವಿಷಯ ಗೊಂತಿತ್ತನ್ನೇ ಹೇಳಿ ಸಮಾಧಾನ! ಹಾಂಗೇ ಟೈಂ ಪಾಸ್ ಆದಾಂಗೂ ಆವುತ್ತು! 
ಎಂತದ್ದೇ ಆಗಲಿ ಆರು ಎಂತ ಹೇಳಿದರೂ ತಲೆಬೆಶಿ ಮಾಡಿಕೊಂಬದು ಬೇಡ. ಅವ್ವವು, ಅವಕವಕ್ಕೆ ಬೇಕಾದಾಂಗೆ ಬೇಕುಬೇಕಾದ ಸಮಯಕ್ಕೆ ಬೇಕುಬೇಕಾದಲ್ಲಿ, ಒರಗಿ ಎದ್ದುಕೊಂಡರಷ್ಟೇ ಸಮಾಧಾನ, ಸಂತೃಪ್ತಿ ಎಲ್ಲಾ! ಇದರ ಓದಿ ನಿಂಗೊಗೆಲ್ಲಾ ಆವಳಿಕೆ ಬಂತಾಯಿಕ್ಕಲ್ಲದಾ?!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು


Friday, February 27, 2015

ದೂರದ ಬೆಟ್ಟ ನುಣ್ಣಗೆ...! - ಜೂನ್ ೨೦೧೩ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ

ದೂರದ ಬೆಟ್ಟ ನುಣ್ಣಗೆ?!


ಪೇಟೆಲಿಪ್ಪವಕ್ಕೆ ಎಂತ ಕೆಲಸಾ, ಹೇಳಿ,ಕೆಲವು ಜನಂಗೊ ಹೇಳುದರ ನಿಂಗೊಲ್ಲಾ ನೋಡಿಪ್ಪಿ,ಕೇಳಿಪ್ಪಿ,ನಿಂಗಳ ಪೈಕಿಲಿದೇ ಆರಾದರೊಬ್ಬ ಹಾಂಗೆ ಹೇಳಿದವಿಕ್ಕು!ಇಷ್ಟರವರೆಗೆ ಹೇಳದ್ದರೆ ಒಂದು ದಿನ ಹೇಳುಗು!ಪೇಟೆಲಿಪ್ಪೋರೆಲ್ಲಾ ಸುಖಲಿದ್ದವು,ಸುತ್ತಾಡಿಯೊಂಡಿರುತ್ತವು,ಆರಾಮಲ್ಲಿ ಕುರ್ಚಿ ಬೆಶಿ ಮಾಡಿಕೊಂಡು,ಮನುಗಿಯೊಂಡು,ಟಿ.ವಿ ನೋಡಿಯೊಂಡೇ ಇಪ್ಪದು ಹೇಳಿ ಕೆಲವರ ಲೆಕ್ಕಾಚಾರ. ಅಲ್ಲಾ- ಹಳ್ಳಿಲಾಗಲೀ, ಪೇಟೆಲಾಗಲೀ ಕೆಲಸ ಇಲ್ಲೆ, ಅಲ್ಲಿ ಸುಖ, ಇಲ್ಲಿ ಕಷ್ಟ ಹೇಳಿ ಸಲೀಸಾಗಿ ಹೇಳುಲೆ ಖಂಡಿತಾ ಸಾಧ್ಯವೇ ಇಲ್ಲೆ,ರಜ ಆಲೋಚನೆ ಮಾಡಿದರೆ!ಕೆಲಸ ಎಲ್ಲಿ ಮಾಡಿದರೂದೇ ಮುಗಿಯದ್ದಷ್ಟಿದ್ದು.ಮಾಡದ್ದರೆ ಎಲ್ಲಿದೇ ಇಲ್ಲೆ ಅಷ್ಟೇ!ವಸ್ತ್ರ, ಪಾತ್ರಂಗಳ ತೊಳವದು,ಮನೆ ಉಡುಗಿ ಉದ್ದುದು,ಅಡಿಗೆ ಮಾಡಿ ತಿಂಬದು,ಮಕ್ಕಳ ಚಾಕರಿ,ಜಾಗೆ ವ್ಯವಸ್ಥೆ ಎಲ್ಲಾ ಇದ್ದು ಹೇಳಿಯಾದರೆ ನೆಟ್ಟಿಕ್ಕಾಯಿ ಬೆಳಕೊಂಬದು,ಹಪ್ಪಳ ಸಂಡಗೆ ಮಾಡುದು,ಹೆಮ್ಮಕ್ಕೊ ಹೆರ ಕೆಲಸಕ್ಕೆ ಹೋಗಿ ದುಡಿವದು ಎಲ್ಲಾ ಹಳ್ಳಿಲೂ ಇದ್ದು,ಪೇಟೆಲಿದೇ ಇದ್ದದ್ದೇ.ಎರಡೂ ಕಡೆಗಳಲ್ಲಿದೇ ಸಾಕ್ಷಾತ್ ಎರಡು ಕೈಗಳಲ್ಲೇ  ಕೆಲಸಂಗಳೆಲ್ಲಾ ಮಾಡೇಕು!ಎಂತ ಪೇಟೆಲಿಪ್ಪೋರ ಹತ್ತರೆ ಮ್ಯಾಜಿಕ್ ಸ್ಟಿಕ್ ಇದ್ದಾ ಅಥವಾ ಅಲ್ಲಾವುದ್ದೀನ್ ಲ್ಯಾಂಪಿದ್ದಾ ಕೆಲಸಂಗೊ ಎಲ್ಲಾ ತನ್ನಿಂದ ತಾನೇ ಅಪ್ಪಲೆ!?ಹಳ್ಳಿಯಾಗಲೀ,ಢಿಲ್ಲಿಯಾಗಲೀ ಅವಕ್ಕವಕ್ಕೆ ಗೊಂತು ಅವಕ್ಕೆ ಎಷ್ಟು,ಎಂತೆಲ್ಲಾ ಕೆಲಸಂಗೊ ಇರುತ್ತು ಹೇಳಿ!ಅದರೆಲ್ಲಾ ಇನ್ನೊಬ್ಬ ಅಳದು ತೂಗಿ ಅವು ಸುಖಲ್ಲಿದ್ದವು,ಎಂಗೊ ಕಷ್ಟಲ್ಲಿದ್ದೆಯ ಹೇಳುವ ಹಾಂಗೇ ಇಲ್ಲೆ ಎನ್ನ ಪ್ರಕಾರ.ಇನ್ನು ಆ ಮನೆಯ ಹೆಮ್ಮಕ್ಕೊ ಕೆಲಸಕ್ಕೆ ಹೋವುತ್ತವಾದರೆ ಕತೆ ಬೇಡ,ಒಂದು ರಜ ಪುರುಸೊತ್ತು ಸಿಕ್ಕಿದರೆ ಪುಣ್ಯ.ಮನೆ ಆಫೀಸು ಹೇಳಿ ದುಡುದು ದುಡುದು ಬೊಡುದು ಹೋಗಿರುತ್ತು.ಹಾಂಗೆ ಅವರ ಕೈಹಿಡುದ್ದವಕ್ಕೆ ಕೂಡಾ!ಮಕ್ಕೊಗುದೇ!ಹಾಂಗೆ ಎಲ್ಲಿಯಾರೂ ಎರಡು ದಿನ ರಜೆ ಸಿಕ್ಕಿತ್ತು ಹೇಳಿಯಾದರೆ ಅಂಬಗಳೂ ಉದಿಯಂದ ಕಸ್ತಲೆವರೆಗೆ ಕೆಲಸ ಇರುತ್ತು.ಇದರೆಲ್ಲಾ ಹೇಂಗಪ್ಪಾ ಹಳ್ಳಿಲ್ಲಿಪ್ಪವ್ಕೆ ಹೇಳುದು ಹೇಳಿ ಪೇಟೆಯವರ ತಲೆಬೆಶಿ!ಅವರ ವಾದವೇ ಅವಕ್ಕೆ!ಇವರ ವಾದವೇ ಇವಕ್ಕೆ!ಈ ಕೆಲಸಂಗಳೆಲ್ಲಾ ಮುಗುಶಿ ರಜ ವಾಕಿಂಗ್ ಹೋದ ಶುದ್ದಿಯೋ,ಇಲ್ಲಾ ಒಂದೆರಡು ದಿನ ಎಲ್ಲಿಯಾದರೂ ಸುತ್ತಾಡಿಕೊಂಡು ಬಂದ ಶುದ್ದಿ ಹಳ್ಳಿಯವರ ಕೆಮಿಗೆ ಬಿದ್ದತ್ತು ಹೇಳಿಯಾದರೆ ಪೇಟೆಲಿಪ್ಪವು ಕೆಲಸ ಇಲ್ಲದ್ದೇ ತಿರುಗಾಡುಲೆ ಹೋದದ್ದು ಹೇಳಿಯೇ ಲೆಕ್ಕ!ಪೇಟೆಲಿ ಒಂದು ಕಡೆಂದ ಇನ್ನೊಂದು ಕಡೆಗೆ ಹೋಗಿ ಬಪ್ಪದು ಹೇಳಿದರೂ ಒಂದು ದೊಡ್ಡ ಕೆಲಸವೇ!ಒಂದೊಂದು ಒಂದೊಂದು ದಿಕ್ಕಿಲಿರುತ್ತು!ಒಂದು ಕಡೆಂದ ಇನ್ನೊಂದು ಕಡೆಗೆ ಎತ್ತಿಯಪ್ಪಗ ಎಷ್ಟೋ ಹೊತ್ತು ಬೇಕಾವುತ್ತು.ಮತ್ತೆ ವಾಪಸ್ಸು ಬಪ್ಪಲೆ ಮತ್ತೊಂದಷ್ಟು ಹೊತ್ತು!ಹಾಂಗೆಲ್ಲಾ ತಿರುಗಾಡಿ ಕೆಲಸ ಮುಗುಶಿ ಬಂದಪ್ಪಗ ಆರಿಂಗೆ ಬೇಕು ಈ ಸಿಟಿ ಜೀವನ,ಧೂಳು,ಹೊಗೆ,ಕಸ,ಕೊಳಕ್ಕು ಗಾಳಿ ಇದರ ಎಡೆಲಿ ಹೇಳಿ ಅನ್ನಿಸಿಬಿಡ್ತು.ಹಳ್ಳಿಲಿಪ್ಪೋರು ಎಂತಾರೂ ಕೆಲಸ ಆಯೇಕು ಹೇಳಿದರೆ ಒಂದೂ ಕಷ್ಟವ ಹೇಳದ್ದೇ ಮಾಡಿಕೊಡುತ್ತ ಸಹೃದಯಿಗೊ ಪೇಟೆವು.ಹಾಂ ಹೇಳಿದ ಹಾಂಗೆ ಪೇಟೆಲಿ ಮನೇಲಿಪ್ಪ ಹೆಮ್ಮಕ್ಕೊಗುದೇ ಕೆಲಸಂಗಳ ರಾಶಿ ಇರುತ್ತು.ಎಲ್ಲಿಯೋ ಕೆಲವು ಮನೆಗಳಲ್ಲಿ ಕೆಲಸಕ್ಕೆ ಜನ ಮಡುಗಿಕೊಂಡವಕ್ಕೆ ರಜ ಪುರುಸೊತ್ತಿರುತ್ತೋ ಎಂತೋ,ಅಷ್ಟೇ.ಈ ಹಳ್ಳಿಲಿಪ್ಪೋರ ಹಾಂಗೆ ತೋಟದ ಕೆಲಸ,ಹಾಲು ಕರವ ಕೆಲಸ ಮಾಂತ್ರ ಇರುತ್ತಿಲ್ಲೆ ಹೇಳಿ ಅಷ್ಟೇ!ಅದರನ್ನೇ ಹಳ್ಳಿರಿಪ್ಪೋರು ಹೇಳುದು!ಆದ ಕಾರಣ ಪೇಟೆಲಿಪ್ಪವು ಅವು ಹಾಂಗೆ ಹೇಳುತ್ತವು ಹೇಳಿ ಅಪಾರ್ಥ ಗ್ರೇಶೋದು ಬೇಡ,ತಲೆಕೆಡಿಶಿಕೊಂಬದೂ ಬೇಡ.ಪಾಪ ಅವಕ್ಕುದೇ ಗೊಂತಿದ್ದು ಪೇಟೆಲಿಪ್ಪೋರಿಂಗೆ ಕೆಲಸ ಇರುತ್ತು ಹೇಳಿ.ಹೇಳುದೊಂದು ಅವರ ಕ್ರಮ ಅಷ್ಟೇ....!ಹಾಂಗೆ ಈಗ ಪೇಟೆಲಿಪ್ಪೋರುದೇ ಹಳ್ಳಿಲಿಪ್ಪೋರ ಮೇಲೆ ಕಣ್ಣು ಹಾಕುತ್ತವಿಲ್ಲೆಯಾ?!"ಅವಕ್ಕೆಂತ ನಮ್ಮ ಹಾಂಗೆ ಎಲ್ಲದಕ್ಕು ಪೈಸೆ ಕೊಟ್ಟು ತರೇಕಾದ್ದಿಲ್ಲೆ,ನೆಟ್ಟಿಕ್ಕಾಯಿ ಎಲ್ಲಾ ಬೆಳೆತ್ತು,ಬೇಕಾದ್ದೆಲ್ಲಾ ಆವುತ್ತು ತೋಟಲ್ಲಿ"ಹೇಳಿ!ಅಡಕ್ಕೆ,ಗೆಣಮೆಣಸಿಂಗೆಲ್ಲಾ ಚಿನ್ನದಂತ ರೇಟಾಯಿದು,ನಮ್ಮ ಹಾಂಗೋ!ನಾವಿಲ್ಲಿ ಪೇಟೆಲಿ ಕೂದು ಪ್ರತಿಯೊಂದಕ್ಕು ಪೈಸೆ ಕೊಟ್ಟು ಮುಗುಶುದಷ್ಟೇ,ನೀರಿಂಗೆ,ಗಾಳಿಗೆ,ಬೆಳಕಿಂಗೆ,ಕೂದ್ದಕ್ಕೆ, ನಿಂತದ್ದಕ್ಕೆ ಎಲ್ಲಾ!ಹಳ್ಳಿಯವಕ್ಕೆ ಇದರ ಎಲ್ಲಾ ಚಿಂತೆ ಇದ್ದಾ!"ಹೇಳಿಯೆಲ್ಲಾ!?ನೆಟ್ಟಿಕ್ಕಾಯಿ,ಅಡಕ್ಕೆ,ಗೆಣಮೆಣಸ್ಸೆಲ್ಲಾ ತೋಟಲ್ಲಿ ನೆಟ್ಟು ಈಟು ಎಲ್ಲಾ ಹಾಕಿ, ಕೆಲಸದವಕ್ಕೆ ಸಂಬಳಕೊಟ್ಟು,ಊಟ,ಕಾಫಿ ತಿಂಡಿಕೊಟ್ಟು ಕೆಲಸ ಮಾಡಿಸಿಯೊಂಡು,ಅವುದೇ ಅವರೊಟ್ಟಿಂಗೆ ತೋಟಲ್ಲಿ ತಿರುಗಿ,ದುಡುದು ಮಾಡದ್ದರೆ ಅಪ್ಪದೆಲ್ಲಿಂದ?ಪೇಟೆಯವು ಹೇಳುದರ ಕೇಳಿದರೆ ಆರಾದರೂ ಗ್ರೇಶುಗು ಹಳ್ಳಿಲಿ ಎಲ್ಲಾ ಛೂಮಂತರ್ ಮಂತ್ರಂದ ಅಪ್ಪದಾಯಿಕ್ಕು ಹೇಳಿ!ಈ ಹಳ್ಳಿಯವು ಕಷ್ಟಪಟ್ಟು ಬೆಳೆದರೆ ತಾನೇ ಪೇಟೆಲಿಪ್ಪೋರಿಂಗೆ ಆಹಾರ ಎಲ್ಲಾ ಸಿಕ್ಕುದು?ನೀರಿಂಗೆ ಪೇಟೆವು ಮಾಂತ್ರ ಪೈಸೆ ಕೊಡುದಲ್ಲ.ಹಳ್ಳಿಲೂ ತೋಟಕ್ಕೆ,ನೆಟ್ಟಿಕಾಯಿ ಗಿಡಂಗೊಕ್ಕೆಲ್ಲಾ ನೀರು ಹಾಕೇಕಾದರೆ,ಮನೆ ಖರ್ಚಿಂಗುದೇ ಪಂಪ್ ಓಡ್ಸೇಕಾವುತ್ತು,ಅಡಕ್ಕೆ ಸೆಸಿ,ತೆಂಗಿನ ಸೆಸಿಗೊಕ್ಕೆಲ್ಲಾ ಸ್ಪ್ರಿಂಕ್ಲರ್ ಲಿ ನೀರು ಹಾಕೇಕಾವುತ್ತು.ಪಂಪ್ ಓಡಿಸುವ ಡೀಸಲ್ಲಿಂಗೆ ಪೈಸೆಯಲ್ಲದ್ದೆ ಮತ್ತೆಂತ ಕೊಡುದವು?!ಇರುಳು ಚಾರ್ಜರ್ ಲೈಟು ಅಥವಾ ಗ್ಯಾಸ್ ಲ್ಯಾಂಪ್ ಹಿಡುಕೊಂಡು ತೋಟದ ರಕ್ಷಣೆಗಾಗಿ ತಿರುಗಾಡ್ತಾ ಇರುತ್ತವು!ಮನೇಲಿದೇ ಲೈಟು,ಫ್ಯಾನ್ ಇರುತ್ತು!ಈಗ ಅವು ಬೆಳಕಿಂಗೂ,ಗಾಳಿಗೂ ಪೈಸೆ ಕೊಟ್ಟ ಹಾಂಗೇ ಅಲ್ಲದಾ?! ಅಲ್ಲಿದೇ ಪೇಟೆಲ್ಲಿಪ್ಪೋರು ಹೇಳುದೆಂತರ ಗೊಂತಿದ್ದಾ? ಹಳ್ಳಿಲಿ ಕರೆಂಟು,ಫೋನ್ ಬಿಲ್ಲೆಲ್ಲಾ ಕಡಮ್ಮೆ,ರೂರಲ್ ಅಲ್ಲದಾ ಹೇಳಿ! ಇಪ್ಪ ಜಾಗೆಲಿ ಗಿಡಂಗಳ ಎಲ್ಲಾ ಚೆಂದಕ್ಕೆ ನೆಟ್ಟು, ಶಕ್ತಿಯನ್ನೂ,ಯುಕ್ತಿಯನ್ನೂ ಉಪಯೋಗಿಸಿ ಗಂಟೆಗಟ್ಟಲೆ ದುಡಿದಿರುತ್ತವು. ತಲೆಲಿಯೇ ಹಟ್ಟಿ ಗೊಬ್ಬರವ, ಸ್ಲರಿಯ ಎಲ್ಲಾ ಹೊತ್ತು ಗಿಡಂಗಳ ಬುಡಕ್ಕೆ ಹಾಕಿ ಪೋಚುಕಾನ ಮಾಡಿರುತ್ತವು.ಪೇಟೆಂದ ಅವರ ಪೈಕಿ ಆರಾದರೂ ಹೋದವು ಹೇಳಿಯಾದರೆ ಒಂದು ವಾರಕ್ಕಪ್ಪಷ್ಟು ನೆಟ್ಟಿಕಾಯಿಯ ಪ್ರೀತಿಲಿ ಕೊಟ್ಟು ಕಳುಶುತ್ತವು,ಹೀಂಗಿಪ್ಪದು ಪೇಟೆಲಿ ಸಿಕ್ಕುತ್ತಿಲ್ಲೆನ್ನೇ,ಎಲ್ಲದಕ್ಕೂದೇ ಪೈಸೆ ಕೊಟ್ಟೇ ತೆಗೆದು ತಿನ್ನೇಕನ್ನೇ ಪಾಪ ಹೇಳಿಯೊಂಡು.ಅಷ್ಟೇ ಅಲ್ಲದ್ದೇ ಊರಿಂದ ಲಾರಿಯೋ,ಜೀಪೋ,ಕಾರೋ ಎಂತಾರೂ ಪೇಟೆಗೆ ಬಪ್ಪಲಿದ್ದು ಹೇಳಿಯಾದರೆ ಅವರ ಧಾರಾಳತನಕ್ಕೆಡೆಯ್ಯೇ ಇರುತ್ತಿಲ್ಲೆ.ಸಾವಯವಲ್ಲಿ ಬೆಳದ ಬೆಂಡೆ,ತೊಂಡೆ,ಅಲ್ತ್ಂಡೆ,ಹರಿವೆ,ದಾರಳೆ,ಪಟಕಲ,ಹಾಗಲ,ಸೌತೆಕ್ಕಾಯಿ,ಜೀಗುಜ್ಜೆ ತರಕಾರಿಗಳ, ಹಲಸು, ಮಾವಿನಹಣ್ಣಿನ ಸಮಯಲ್ಲಿ ಹಲಸು ಮಾವಿನಹಣ್ಣು, ಪೇರಳೆ, ಚಿಕ್ಕು ಹೀಂಗೆಲ್ಲಾ ಗೋಣಿ ಚೀಲಲ್ಲಿ ಹಾಕಿ ಪಾರ್ಸಲ್ ಕಳುಶುತ್ತವು ಇಲ್ಲೆ ಹೇಳಿಯಾದರೆ ಅವ್ವೇ ಬಪ್ಪಗ ದೊಡ್ಡ ಕಟ್ಟ ಮಾಡಿ ತತ್ತವು. ಹಳ್ಳಿಲಿ ಅವರ ಪರಿಸ್ಥಿಯ ಆರೂ ಕೇಳುವವ್ವೇ ಇಲ್ಲೆ.ಒಂದು ಹೊಡೇಲಿ ಕೆಲಸದಾಳುಗಳು ಸಿಕ್ಕುತ್ತವಿಲ್ಲೆ, ಮತ್ತೆ ಮನೆವ್ವೇ ಎಲ್ಲಾ ಕೂಡಿ ಮಾಡೇಕಾದ ಅನಿವಾರ್ಯತೆ ಆದರೆ,ಮಧ್ಯಾಹ್ನ ಮಂಗ,ಮುಜುಗಳು ಕಾಟ ಕೊಟ್ಟರೆ,ಇರುಳು ಕಾಟಿ, ಕಾಡು ಹಂದಿ!ಇವರೆಲ್ಲರ ಕೈಯಿಂದ ತೋಟವ ವರಕ್ಕುಗೆಟ್ಟು ರಕ್ಷಿಸಿಕೊಳ್ಳೇಕು ಬೇರೆ.ಇತ್ತಿಚೆಗಂತೂ ದನಗಳ್ಳರ ಹಾವಳಿಂದಾಗಿ ಹಟ್ಟಿಗುದೇ ಪಾರ ಕೂರೇಕಾವುತ್ತು.ಪೇಟೆಲಾದರೆ ಗೇಟು ಬುಡಲ್ಲಿ ಪ್ಯಾಕೆಟ್ ಹಾಲಿಂಗುದೆ,ಪೇಪರಿಂಗುದೆ ಕಾದು ಕೂದರೆ ಮುಗುದತ್ತು!ಹಳ್ಳಿಯವಕ್ಕೆ ಕಾಲ ಕಾಲಕ್ಕೆ ತೋಟಕ್ಕೆ ಸ್ಪೇ ಮಾಡೇಕು,ಪೇಟೆಲಾದರೆ ಮನೆ ಒಳ ನುಸಿ,ಜರಳೆ ಕಾಟಂದ ತಪ್ಪಿಸಿಕೊಂಬಲೆ ಸ್ಪ್ರೇ ಮಾಡಿದರೆ ಮುಗುದತ್ತು!ಪೇಟೆಯವುಕ್ಕುದೇ ಗೊಂತಿದ್ದು ಹಳ್ಳಿಯವಕ್ಕೂ ಪೈಸೆ ಖರ್ಚು ತಮ್ಮ ಹಾಂಗೇ ಇದ್ದು,ಪ್ರತಿಯೊಂದು ವಸ್ತುವಿಗೆ ಹಳ್ಳಿಯವು ಪೇಟೆಗೆ ಬಂದೇ ತೆಕ್ಕೊಂಡು ಹೋಗಿ ಆಯೇಕು,ಕಷ್ಟ ಇದ್ದು,ಕೆಲಸಂಗಳ ಒಟ್ಟಿಂಗೆ ಹೇಂಗೆ ಹಸಬಡಿತ್ತವು ಹೇಳಿ ಎಲ್ಲಾ.ಆದರೂ ಹೇಳುದೊಂದು ಅವರ ಕ್ರಮ ಅಷ್ಟೇ!ಅದಕ್ಕೆಲ್ಲಾ ಮಂಡೆಬೆಶಿಮಾಡಿಕೊಳ್ಳದ್ದರಾತು! 
ಈಗ ಇಬ್ಬರಿಂಗೂ ರಜ ತೃಪ್ತಿ ಆದಿಕ್ಕಲ್ಲದಾ?!ಅದು ಹಾಂಗೆ ಒಬ್ಬನ ಇನ್ನೊಬ್ಬ ಬೈದಪ್ಪಾಗ,ಅವರ ಹೊಗಳಿಯಪ್ಪಾಗ ಎಲ್ಲಾ ಕೊಶಿ,ತೃಪ್ತಿ ಅಪ್ಪದು ಸಹಜವೇ!ಈಗೊಂದು ಮಿಕ್ಸ್ ಡ್ ಸುದ್ದಿ!ಪೇಟೇಲಿಪ್ಪೋರು ಅವರ ಸುತ್ತಮುತ್ತಲಿಪ್ಪ ಕೆಲವು ಸ್ಥಳಂಗಳೆಲ್ಲಾ ಅವು ಅಲ್ಲಿಯೇ ಎಷ್ಟೋ ವರ್ಷಂದ ಇದ್ದರೂ ಹೋಗಿರುತ್ತವಿಲ್ಲೆ.ಇಲ್ಲೇ ಹತ್ತರೆ ಇಪ್ಪದಲ್ಲದಾ,ಒಂದಲ್ಲಾ ಒಂದು ದಿನ ಹೋದರಾತು ಹೇಳಿ ಹೇಳಿಯೊಂಡೇ ಮುಂದುಹಾಕಿರುತ್ತವು!ಆದರೆ ಹಳ್ಳಿಲಿಪ್ಪೋರು ಜೀಪು,ಕಾರು ಅಥವಾ ಬಸ್ಸು ಮಾಡಿಯೊಂಡೋ ಪೇಟೆಗೆ ಎಡೆ ಮಾಡಿಯೊಂಡು ಬಂದು ನೋಡಿ ಹೋಗಿರುತ್ತವು!ಹಾಂಗೆ ಹೇಂಗೂ ಪೇಟೆಗೆ ಬಂದದ್ದೇ ಇದ್ದಲ್ಲದಾ ಹೇಳಿ ಕೆಲವು ಫ್ಯಾಶನ್ ಲಿ ಫೇಮಸ್ ಹೇಳಿ ಹೆಸರು ಪಡೆದ ಚಿನ್ನ,ವಸ್ತ್ರದ ಅಂಗಡಿ,ಮಾಲಿಂಗೆಲ್ಲಾ ಹೋಗಿ ಹೊಸ ಹೊಸ ವಿನ್ಯಾಸದ ವಸ್ತ್ರ,ಚಿನ್ನ ಎಲ್ಲಾ ನಾಲ್ಕು ನಾಲ್ಕು ನಮೂನೆದರ ತೆಗೆದಿರುತ್ತವು.ಆದರೆ ಪೇಟೆಲಿಪ್ಪೋರು ಇಲ್ಲೇ ಇದ್ದನ್ನೇ ನಾಳೆ ಹೋಪ,ನಾಡಿದ್ದು ಹೋಪ,ಆಫರ್ ಇಪ್ಪಾಗ ಹೋಪ ಹೇಳಿ ದಿನಂಗಳ ಮುಂದೂಡಿಯೊಂಡೇ ಇರುತ್ತವು!ಪೇಟೆ ಹೆಮ್ಮಕ್ಕೊ, ಹಳ್ಳಿ ಹೆಮ್ಮಕ್ಕೊ ಎಲ್ಲಿಯಾರೂ ಮದುವೆ, ಉಪನಯನ, ಪೂಜೆಲಿ ಒಟ್ಟು ಸೇರಿಪ್ಪಗ ಗೊಂತಾವುತ್ತು ಹೀಂಗಿಪ್ಪಾ ಹೊಸಾ ಐಟಂಗೊ ಪೇಟೆಗೆ ಬೈಂದು,ಹೋಗಿ ತೆಕ್ಕೊಂಬಲೇ ಪುರುಸೊತ್ತಾಯಿದಿಲ್ಲೆ,ಹಳ್ಳಿಯವ್ವು ನಮ್ಮಿಂದ ಫಾರ್ವರ್ಡ್ ಇದ್ದವು ಹೇಳಿ!ಪೇಟೇಲಿಪ್ಪೋರತ್ತರಿಲ್ಲದ್ದ ಒಡವೆ,ವಸ್ತ್ರ ಅಡಿಯಿಂದ ಮುಡಿಯವರೆಗೂ ಅವರ ಹತ್ತರೆ ಇರುತ್ತು!ಹಾಂಗೆ ಹಳ್ಳಿಲಿಪ್ಪೋರು ಹಳ್ಳಿಯ ಪ್ರಸಿದ್ಧಿ ಪಡದ ಗುಡ್ಡೆಗೇ ಮನೆ ಹತ್ತರೆ ಇದ್ದರುದೇ ಒಂದರಿಯಾದರೂ ಹತ್ತಿರುತ್ತವಿಲ್ಲೆ ಕೆಲಸದ ಹರಗಣಂದಾಗಿ!ಆದರೆ ಅದೇ ಗುಡ್ಡೆಯ,ಪೇಟೆಲಿಪ್ಪೋರು ಬಂದು ಹತ್ತಿ ಟ್ರೆಕ್ಕಿಂಗ್ ಮಾಡಿ,ಮಜಾ ಮಾಡಿ ಹೋಗಿರುತ್ತವು!
ಹಳ್ಳಿಯಲ್ಲಿಪ್ಪ ಕೆಲವು ಜನಂಗ ತೋಟ ನಿರ್ವಹಣೆ ಕಷ್ಟ ಹೇಳಿ ತೋಟ ಎಲ್ಲಾ ಮಾರಿಕ್ಕಿ ಬಂದು ಪೇಟೆಲಿ ಕೂರೇಕು ಹೇಳಿ ಆಲೋಚನೆ ಮಾಡಿಯೊಂಡಿದ್ದರೆ,ಪೇಟೆಲಿಪ್ಪ ಕೆಲವು ಜನಂಗೊ ಅವ್ವು ಮಾಡ್ತಾ ಇಪ್ಪ ಕೆಲಸಂದ ನಿವೃತ್ತಿ ಆದ ಕೂಡಲೇ ಅಥವಾ ವಾಲೆಂಟರಿ ರಿಟೈರ್ ಮೆಂಟ್ ತೆಕ್ಕೊಂಡಾದರೂ ಸರಿ ಒಂದರಿ ಪೇಟೆ ಬಿಟ್ಟು ಹಳ್ಳಿಗೆ ಹೋಗಿ ಜಾಗೆ ಮಾಡಿ ಸೆಟಲ್ ಆಯೇಕು ಹೇಳಿ ಯೋಜನೆ ಹಾಕಿಯೊಂಡು ಕೂಯ್ದವು.ಒಟ್ಟಾರೆ ಅಲ್ಲಿ ಇಪ್ಪವಕ್ಕೆ ಇಲ್ಲಿದ್ದರೆ ಚೆಂದಾ ಹೇಳಿ ಕಂಡರೆ,ಇಲ್ಲಿಪ್ಪವಕ್ಕೆ ಅಲ್ಲಿದ್ದರೆ ಚೆಂದಾ ಹೇಳಿ ಕಾಂಬದು!ಇನ್ನು ಮುಂದಾದರೂ ಪೇಟೆಲಿಪ್ಪವು  ಹಳ್ಳಿಲಿಪ್ಪೋರ,ಹಳ್ಳಿಲಿಪ್ಪೋರು ಪೇಟೆಯವರ ಹಗುರಲ್ಲಿ ಕಾಂಬದೂ ಬೇಡ,ಹಗುರವಾಗಿ ಮಾತನಾಡುದೂ ಬೇಡ.ದೂರದ ಬೆಟ್ಟ ಏವಾಗಲೂ ನುಣ್ಣಗೇ ಕಾಂಬದು!


ಚೆಲುವೆಯೇ ನಿನ್ನ ನೋಡಲು...! - ಮಾರ್ಚ್ ೨೦೧೪ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ

ಚೆಲುವೆಯೇ ನಿನ್ನ ನೋಡಲು...!

ಡೊಂಕಿಪ್ಪ ನಾಯಿ ಬಾಲವ ನೆಟ್ಟಗೆ ಮಾಡುಲೆ ಆರಿಂದಾದರೂ ಸಾಧ್ಯ ಇದ್ದಾ ಹೇಳಿ?! ಆದರೆ ಸುರುಟಿಕೊಂಡಿಪ್ಪ ಮನುಷ್ಯರ ತಲೆಕಸವಿನ ನೆಟ್ಟಗೆ ಮಾಡ್ಲೆಡಿತ್ತು! ಉದ್ದ ಕಾಂಬಾಂಗೆ ಮಡ್ಲೆಡಿತ್ತು, ಕುಂಟ ಮಾಡ್ಲೆಡಿತ್ತು, ನೆಟ್ಟಂಗಿಪ್ಪದರ ಗುಂಗುರು ಕೂಡಾ ಮಾಡ್ಲೆಡಿತ್ತು, ಒಟ್ಟಾರೆ ಒಂದು ಮನುಷ್ಯನ ಗುರುತೇ ಸಿಕ್ಕದ್ದ ಹಾಂಗೆ ಕ್ಷಣ ಮಾತ್ರಲ್ಲಿ ಮಾಡಿಬಿಡ್ಲೆಡಿಗು. ನಮ್ಮ ಸುತ್ತಾಮುತ್ತಾ ಇಪ್ಪ ಬ್ಯೂಟಿ ಪಾರ್ಲರ‍್ಗಳ ಚಮತ್ಕಾರ ಇದು! ಮಾಡಿಸಿಕೊಂಡವರ ಯಶೋಗಾಥೆಯೂ ಅಪ್ಪು ಇದು!

     ಆಧುನಿಕ ಕಾಲದ ಕೂಸುಗಳ,ಹೆಮ್ಮಕ್ಕಳ, ಹಾಂಗೇ ಕೆಲವು ಹಳೇ ಕಾಲದ ಹೆಮ್ಮಕ್ಕಳ ಗಮನಿಸಿ ನೋಡಿಯಪ್ಪಗ ಹೇಂಗಿಪ್ಪವು ಹೀಂಗೂ ಅಪ್ಪಲಕ್ಕು ಹೇಳುತ್ತ ಕಟು ಸತ್ಯವ ಅವರ ಅಡಿಯಿಂದ ಮುಡಿಯವರೆಗೆ ಗಮನಿಸಿ ನೋಡಿ ತಿಳುಕೊಂಬಲಕ್ಕು! ಬೇರೆವ್ವು ಎಲ್ಲಾ ಅವರನ್ನೇ ಗಮನ ಕೊಟ್ಟು ನೋಡಲಿ ಹೇಳಿಯೇ ಮಾಡುದವು. ಹಾಂಗಾದ ಕಾರಣ ಅಂತವರ ಕಣ್ತುಂಬ ನೋಡುಲೆ ನಿಂಗೊಲ್ಲಾ ಹೆದರೇಕು ಹೇಳಿಯೇ ಇಲ್ಲೆ! ಧೈರ್ಯವಾಗಿ ಕಣ್ತುಂಬಾ ನೋಡಿ ಅವರ ಸೌಂದರ್ಯದ ಗುಟ್ಟಿನ ಬಗ್ಗೆ ಪಿ.ಹೆಚ್.ಡಿ ಕೂಡಾ ಮಾಡ್ಲಕ್ಕು! ಒಂದು ಸಲ ಸೊಂಟಕ್ಕೊರೆಗಿಪ್ಪ ಸುರುಟಿಕೊಂಡಾಂಗಿಪ್ಪ ತಲೆ ಕಸವು ಇನ್ನೊಂದು ಸಲ ನೋಡುವಾಗ ಕೂದಲಿನ ತಲೆಯಿಂದ ನೆಟ್ಟಗೆ ಇಳಿ ಬಿಟ್ಟಿರ‍್ತವು, ಫಳಫಳನೆ ಹಾವಿನ ಮೈ ಹಾಂಗೆ ಹೊಳಕ್ಕೊಂಡಿರ‍್ತು ಬೇರೆ! ಅದೇ  ಜೆನದ ಅದೇ ತಲೆಕಸವಿನ ರಜ ಸಮಯ ಕಳುದು ನೋಡಿದರೆ ಇನ್ನೊಂದು ಸ್ವರೂಪಲ್ಲೀ!-ಒಂದೋ ಹೆಗಲಿಂಗೊರೆಗೆ ಬಾಬ್ ಕಟ್ ಮಾಡಿಸಿಕೊಂಡಿಪ್ಪಲೂ ಸಾಕು, ಸ್ಪ್ರಿಂಗಿನ ಹಾಂಗೆ ಸುರುಳಿ ಸುರುಳಿಯಾಗಿ ಋಷಿಗಳ ತಲೆಕಸವಿನ ಹಾಂಗೆ ಇಳಿಬಿಟ್ಟುಕೊಂಡಿಪ್ಪಲೂ ಸಾಧ್ಯತೆ ಇರ‍್ತು, ಕೆಲವೊಂದರಿ ಕರೆಂಟು ಶಾಕ್ ಹೊಡದ ಹಾಂಗೆ ಕಂಡೊಂಡಿರ‍್ತು, ಅಡ್ಡಡ್ಡಕ್ಕೆ ಎಲಿ ತಿಂದ ಹಾಂಗೆ ಕಾಂಬಾಂಗೂ ಇರ‍್ತು, ಅಷ್ಟು ಕೂದಲುಗಳ ಹಿಡುದು ಕಟ್ಟಿದ್ದರೂ ಕೂಡಾ, ಅಡ್ಡಾದಿಡ್ಡಿ ಕತ್ತರಿಸಿದ ಆ ಕೂದಲುಗಳ ಉದ್ಡೇಶಪೂರ್ವಕವಾಗಿಯೇ ಕಣ್ಣಿಂಗೆ, ಹಣೆಗೆ ಬೀಳುವ ಹಾಂಗೆ ಮಾಡಿರ‍್ತವು. ಓದುವಾಗ, ಬರವಾಗ ಎಲ್ಲಾ ಉಪದ್ರವೇ ಆವುತ್ತಿಲ್ಲೆ ಹೇಳಿ ಅವಕ್ಕೆಲ್ಲಾ!! ಹಾಂಗೆ ಕಣ್ಣಿಂಗೆ ಅಡ್ಡ ಬಂದ ಕೂದಲಿನ ಅಂಬಗಂಬಗ ಒತ್ತರೆ ಮಾಡುದೇ ಒಂದು ಕೊಶಿ ಅವಕ್ಕೆ! ಬೋಳು ಮಂಡೆಯ ಒಂದು ಸ್ಟೈಲಿನ ಬಿಟ್ಟು ನೂರೆಂಟು ಸ್ಟೈಲುಗೊ ಈಗ ಚಾಲ್ತಿಲಿದ್ದು! ಬಾಬ್ ಕಟ್, ಶಾರ‍್ಟ್ ಕಟ್, ಲೇಯರ್ ಕಟ್, ಮಶ್ರೂಮ್ ಕಟ್, ವೆಜ್ ಕಟ್ ಇಷ್ಟು ಹೆಸರುಗೊ ಮಾಂತ್ರ ಎನಗೆ ಗೊಂತಿಪ್ಪದು.ಇನ್ನೂ ಹಲವು ನಮೂನೆ ಇರೇಕು!ನಿಜವಾಗಿ ಹೇಳ್ತರೆ ಕೆಲವರ ಎಲ್ಲಾ ನೋಡಿದರೆ ಹೆದರಿಕೆಯೇ ಆವುತ್ತು! ಅಪ್ಪೋ ಅಲ್ಲದಾ?! ತಲೆ ಕಸವಿನ ಆರೈಕೆಗೆ, ಅದರ ಚೆಂದ ಕಾಂಬಾಂಗೆ ಮಡುಲೆ ಎಷ್ಟು ಪೈಸೆ ಖರ್ಚು ಮಾಡ್ಲೂ ರೆಡಿ! ಹೊಟ್ಟೆಗೆ ಆ ಆ ಸಮಯಕ್ಕೆ ಸರಿಯಾಗಿ ಪೌಷ್ಠಿಕಾಂಶ ಇಪ್ಪ ಆಹಾರ ತಿಂತವೋ ಇಲ್ಲೆಯೋ, ಅಂತೂ ಚೆಂದ ಒಂದು ಕಾಂಬಲೆ ಎಷ್ಟುದೇ ಪೈಸೆ, ಸಮಯವ ಖರ್ಚು ಮಾಡುಲೂ ರೆಡಿ ಇರ‍್ತವು! ಅದಕ್ಕಲ್ಲದಾ ಹೇಳಿ ಇತ್ತೀಚೆಗೆ ನಾಯಿಕೊಡೆಗಳ ಹಾಂಗೆ ಬ್ಯೂಟೀ ಪಾರ್ಲರ‍್ಗೊ ಹುಟ್ಟಿಕೊಂಡಿಪ್ಪದು! ಪಾಪ ರೈತರು ಬೆಳೆ ಬೆಳೆಯೇಕಾದರೆ ಮಳೆ ಬಂದೇ ಆಯೇಕು. ಇಲ್ಲದ್ದರೆ ವರ್ಷ ಪೂರ್ತಿ ಚಿಂತೆಲಿ ಹಣೆ ಹಣೆ ಚಚ್ಚಿಕೊಂಡೇ ಇರೇಕು. ಬ್ಯೂಟೀ ಪಾರ್ಲರ್ ಮಡಿಕೊಂಡಿಪ್ಪವ್ಕೆಲ್ಲಾ ವರ್ಷ ಪೂರ್ತಿ ಸುಗ್ಗಿ ಕಾಲ ಹೇಳಿಯೇ ಹೇಳುಲಕ್ಕು! ಅವಕ್ಕೆ ಈಗಿನ ಕಾಲದ ಕೂಸುಗಳು,ಹೆಮ್ಮಕ್ಕಳು,ಕೆಲವು ಹಳೇಕಾಲದ ಹೆಮ್ಮಕ್ಕಳೇ ಕಚ್ಚಾವಸ್ತುಗೊ! ಈಗ ತಲೆಕಸವಿನ ಮಾಂತ್ರ ಚೆಂದ ಮಾಡಿದರೆ ಸಾಕಾ? ಮೋರೆ, ಹುಬ್ಬು, ಕೊರಳು, ಕೈ, ಕಾಲು, ಉಗುರು, ಚರ್ಮ ಎಲ್ಲಾ ಚೆಂದ ಕಾಣೇಡದಾ?! ಕೈ ಕಾಲು ಉಗುರುಗಳ ಕ್ಲೀನ್, ಚೆಂದ ಎಲ್ಲಾ ಮಾಡುಲೆ ಬ್ಯೂಟೀಶ್ಯನ್ ಹತ್ತರೆಯೇ ಹೋಯೆಕ್ಕಾ ಹೇಳಿ ಇನ್ನೊಂದು ಜಿಜ್ಞಾಸೆ ಎನ್ನದು! ಮನೇಲೇ ಒಂದು ಹಳೇ ಹಲ್ಲುಜ್ಜುವ ಬ್ರಶ್, ಸ್ಕ್ರಬ್ಬರುಗಳ ಎಲ್ಲಾ ತೆಕ್ಕಂಡು ಸೋಪಿಲೋ, ಕಡ್ಲೆ ಹುಡಿಲೋ, ನಿಂಬೆ ಕಡಿಲಿಯೋ  ಇಲ್ಲೆ ಹೇಳಿಯಾದರೆ ಇನ್ನೆಂತರನ್ನಾರೂ ಉಪಯೋಗಿಸಿ ಲಾಯ್ಕ ತಿಕ್ಕಿ ತೊಳದರೆ ಕ್ಲೀನ್ ಆವುತ್ತಿಲ್ಲೆಯಾ ಹೇಳೀ?! ಬ್ಯೂಟಿ ಪಾರ್ಲರ‍್ಗೊಕ್ಕೆ ಅಂಬಗಂಬಗ ಹೋಗಿ ಇದರೆಲ್ಲಾ ಮಾಡಿಸಿಕೊಂಡು ಗೊಂತಿಪ್ಪ ಒಂದಿಬ್ಬರ ಹತ್ತರೆ ಎನ್ನ ಮನಸ್ಸಿಲಿ ಮೂಡಿದ ಪ್ರಶ್ನೆ ಕೇಳಿ ನೋಡಿದೆ. ಅಂಬಗ ಅವು ಎಂತ ಹೇಳಿದವು ಗೊಂತಿದ್ದಾ,"ಅಲ್ಲಿ ಹೋಗಿ ಮೆನಿಕ್ಯುರ್, ಪೆಡಿಕ್ಯುರ್(ಕೈಕಾಲು ಉಗುರುಗಳ ಕ್ಲೀನ್ ಮಾಡುಸುದರ ಹೆಸರುಗೊ) ಮಾಡಿಸಿದರೆ, ಎಷ್ಟು ಲಾಯ್ಕಾವುತ್ತು ಗೊಂತಿದ್ದಾ ನಿನಗೆ, ಅವ್ವು ಉಗುರುಗಳ ಕ್ಲೀನ್ ಮಾಡಿಕೊಂಡಿದ್ದಾಂಗೇ ಸುಖಾ ಆವುತ್ತು, ಬಚ್ಚುದೆಲ್ಲಾ ಹೋವುತ್ತು, ವರಕ್ಕು ಬಂದ ಹಾಂಗಾಗಿ ಹಾಯೆನಿಸುತ್ತು" ಹೇಳಿ! ಅದಪ್ಪು ಹೇಳಿ ಕಂಡತ್ತೆನಗೆ. ನಾವು ನಾವೇ ನಮ್ಮ ನಮ್ಮ ಕೈಕಾಲು ಒತ್ತಿಕೊಂಡರೆ ಲಾಯ್ಕಾವುತ್ತಾ? ಇಲ್ಲೆನ್ನೇ?! ಮತ್ತೊಬ್ಬ ಒತ್ತಿ ಕೊಟ್ಟರೇ ಸುಖಾ ಆಪ್ಪದಲ್ಲದಾ!! ಹಾಂಗೇ ಉಗುರುಗಳ,ಕೈಕಾಲುಗಳ ಅವರ ಕೈಯಿಂದ ತೊಳಶಿಕೊಂಡಪ್ಪಗ ಅಪ್ಪದಾಯಿಕ್ಕು!ಈ ಲಾಯ್ಕವೋ, ಎಂತ ಕರ್ಮವೋ ನಾವೇ ತೊಳಕೊಂಡರೂ ಕ್ಲೀನ್ ಹೇಳಿ ಒಂದು ಆದರೆ ಸಾಕಾವುತ್ತಿಲ್ಲೆಯಾ ಹೇಳಿ ಎನ್ನ ಜಿಜ್ಞಾಸೆ! ಮೋರೆಯ ಚೆಂದ ಮಾಡುಸುವಾಗಲೂ ಅವರ ಕೈಯಿಂದಲೇ ತಿಕ್ಕಿಸಿಕೊಂಡರೆ ಹಾಂಗೇ ಅಪ್ಪದಡಪ್ಪಾ! ಆನು ಒಂದರಿ ಬ್ಯೂಟೀ ಪಾರ್ಲರಿಂಗೆ ಹೋಯಿದೆ ಅನಿವಾರ್ಯವಾಗಿ ಎನ್ನ ನೆರೆಕರೆಯ ಫ್ರೆಂಡಿನೊಟ್ಟಿಂಗೆ. ಆ ಜೆನಕ್ಕೆ ಆರಾದರು ಒಬ್ಬ ಜತೆಗೆ ಬೇಕಿತ್ತಡ ಅಲ್ಲಿಗೆ ಹೋಪಲೆ, ಅದರ ಮಗಳು ಊರಿಂಗೆ ಹೋಗಿತ್ತು, ಹಾಂಗಾಗಿ ಎನ್ನ ಹತ್ತರೆ, "ನನ್ನೊಟ್ಟಿಂಗೆ ಬ್ಯೂಟೀ ಪಾರ್ಲರಿಗೆ ಬರ‍್ತೀರಾ,ಯಾರೂ ಕಂಪನಿ ಇಲ್ಲ" ಹೇಳಿ ಕೇಳಿಯಪ್ಪಗ,ಇಲ್ಲೆ ಹೇಳಿ ಹೇಳುಲಾಯಿದಿಲ್ಲೆ. ನೆರೆಕರೆವ್ವಲ್ಲದಾ? ಅವ್ವು ಸಮಯ ಬಂದಪ್ಪಗ ನಮಗೆ ಸಹಾಯಕ್ಕೆ ಒದಗುವ ಹಾಂಗೆ ನಾವುದೇ ಅವರ ಕಷ್ಟ ಸುಖಕ್ಕೆ ಆಗೇಡದಾ ಹೇಳಿ ಗ್ರೇಶಿ,"ಆಯ್ತಪ್ಪ ಅದಕ್ಕೇನಂತೆ, ಖಂಡಿತಾ ಬರ್ತೇನೆ" ಹೇಳಿ ಭರವಸೆ ಕೊಟ್ಟೆ! ಹಾಂಗೆ ಒಂದರಿ ಬ್ಯೂಟೀ ಪಾರ್ಲರ್ ಬಗ್ಗೆ ರಜ್ಜ ತಿಳುಕೊಂಡ ಹಾಂಗೂ ಆತು, ಇದೊಂದು ಸುವರ್ಣಾವಕಾಶ ಹೇಳಿ ಗ್ರೇಶಿಗೊಂಡು ಅದರೊಟ್ಟಿಂಗೆ ಹೋಗಿತ್ತೆ. ಅಲ್ಲಿ ಮೂರು ಆರಾಮ ಕುರ್ಚಿಗೊ ಇತ್ತವು. ಅವರವರ ಅಂದ, ಚೆಂದ ಹೆಚ್ಚಿಸಿಕೊಂಬಲೆ ಬಂದ ಗಿರಾಕಿಗಳೇ ಇತ್ತಿದವಲ್ಲಿ! ಅಲ್ಲಿಪ್ಪ ಮೂರು ಕುರ್ಚಿಗಳಲ್ಲಿ ಮೂರು ಜೆನಂಗ ಮೋರೆಗೆ, ಕೊರಳಿಂಗೆ ಎಂತೋ ಬೆಣ್ಣೆ ಹಾಂಗಿಪ್ಪ ವಸ್ತುವಿನ ಮೆತ್ತಿಸಿಕೊಂಡು ಲೋಕಜ್ಞಾನವೇ ಇಲ್ಲದ್ದ ಹಾಂಗೆ ಕಣ್ಮುಚ್ಚಿ ಕುರ್ಚಿಗೆ ಎರಾಗಿ ಕೂದೊಂಡಿತ್ತಿದವು. ಅಲ್ಲಾ ಇವಕ್ಕೆಲ್ಲಾ ಮನೇಲೇ ಟೊಮೇಟೋ ಹಣ್ಣಿನ ರಸವನ್ನೋ, ಜೇನನ್ನೋ, ಹಾಲಿನ ಕೆನೆಗೆ ನಿಂಬೆಹುಳಿ ಎಸರು ಹಿಂಡಿ ಅದಕ್ಕೆ ರಜ್ಜ ಅರಶಿನ ಪುಡಿ ಹಾಕಿ ಮಿಶ್ರಣ ಮಾಡಿ ಹಾಕಿಕೊಂಡು ತೊಳಕೊಂಬಲೆಡಿತ್ತಿಲ್ಲೆಯಾ ಹೇಳಿ ಒಂದರಿಯಂಗೆ ಅನ್ನಿಸಿಬಿಟ್ಟತ್ತು! ಇಂತಾ ಹತ್ತು ಜೆನಂಗಳಿಂದಾಗಿ ಒಟ್ಟಾರೆ ಅಲ್ಲಿ ಹೌಸ್ ಫುಲ್ ಆಗಿತ್ತು! "ಸ್ವಲ್ಪ ಹೊತ್ತು ವೈಟ್ ಮಾಡ್ಬೇಕು ಆಯ್ತಾ ಮ್ಯಾಡಮ್" ಹೇಳಿ ಹೇಳಿತು ಬ್ಯೂಟೀಶಿಯನ್ ಪರಿಚಯದ ನೆಗೆ ಮಾಡಿಯೊಂಡು ಎನ್ನ ಫ್ರೆಂಡಿಂಗೆ! ಇನ್ನೆಂತ ಮಾಡುದು ಡಾಕ್ಟ್ರನ ಭೇಟಿಗೆ ಕಾದು ಕೂಪ ರೋಗಿಯ ಹಾಂಗೆ ಇಲ್ಲಿಯೂ ಕೂಪ ಪರಿಸ್ಥಿತಿ ಬಂತನ್ನೆಪ್ಪಾ ಹೇಳಿ ಮನಸ್ಸಿಲ್ಲಿಯೇ ಗ್ರೇಶಿಕೊಂಡೆ. ಆ ರೂಮಿನ ತುಂಬಾ ಎಂತದೋ ರಾಸಾಯನಿಕ ವಸ್ತುಗಳ ಕಮಟು ವಾಸನೆ!ಒಂದು ಹೆಮ್ಮಕ್ಕೊ ಅಂತೂ ತಲೆ ಕಸುವಿಂಗೆ ಎಂತದೋ ಮೆತ್ತಿಸಿಕೊಂಡು ಒಂದು ಮೂಲೆಲಿ ಕೂದೊಂಡಿಪ್ಪದು ಕಂಡತ್ತು. ಎನ್ನ ಫ್ರೆಂಡಿನ ಹತ್ತರೆ ಅದು ಎಂತರ ಹೇಳಿ ಕೇಳಿದೆ. ಅದು ಹೇಳಿತು, ಅದು ಅದರ ಕೂದಲಿನ ಶಾಶ್ವತವಾಗಿ ನೆಟ್ಟಗೆ ಮಾಡ್ಸಿಕೊಂಬಲೆ ಬೇಕಾಗಿ ಬಂದದು ಹೇಳಿ. ಹಾಂಗೆ ಮಾಡ್ಸುಲೆ ಎಷ್ಟು ಪೈಸೆ ಅಕ್ಕು ಹೇಳಿ ಕೇಳಿದೆ ಅದರತ್ತರೆ. ಅದು "ಎಂಟು ಸಾವಿರ ರೂಪಾಯಿ" ಹೇಳಿ ಹೇಳಿದ್ದರ ಕೇಳಿಯಪ್ಪಗ ತಲೆತಿರುಗಿ ಆನು ಬೀಳುದೊಂದೇ ಬಾಕಿ! ಛೇ ಇಂದ್ರಾಣ ಎಂಟು ಸಾವಿರ ರೂಪಾಯಿಲಿ ಎರಡೂವರೆ ಗ್ರಾಂ ಚಿನ್ನ ಸಿಕ್ಕುಗನ್ನೇ ಹೇಳಿ ಮನಸ್ಸಿಲ್ಲೇ ಲೆಕ್ಕ ಹಾಕಿದೆ. ಎಂಗೊ ಇಬ್ರೂ ಕಾದು ಕೂದು ಒಂದು ಗಂಟೆ ಅಪ್ಪಗ ಎನ್ನ ಫ್ರೆಂಡಿನ ಸರದಿ. ಆ ಕಾಲಿಯಾದ ಖುರ್ಚಿಗಳಿಂದ ಎದ್ದು ಹೋದವ್ವೆಲ್ಲಾ ಅವರವರ ಪರ್ಸುಗಳಿಂದ ನೋಟುಗಳ ಅಟ್ಟಿಯನ್ನೇ ಬ್ಯೂಟೀಷಿಯನ್ನಿನ ಕೈಯಲ್ಲಿ ಕೊಟ್ಟಿಕ್ಕಿ ಅಲ್ಲಿಂದ ಜಾಗೆ ಖಾಲಿ ಮಾಡಿಕೊಂಡಿತ್ತವು! ಎನ್ನ ಫ್ರೆಂಡ್ ಕಣ್ಣಿನ ಹುಬ್ಬಿನ ಕಾಮನಬಿಲ್ಲಿನ ಹಾಂಗೆ ಮಾಡಿಸಿಕೊಂಡು ಕುರ್ಚಿಯಿಂದ ಇಳುದು ಬಂತು. ಮೂವತ್ತು ರೂಪಾಯಿ ಕೊಟ್ಟು, ಬೂಟೀಷಿಯನ್ನಿಂಗೆ ಥ್ಯಾಂಕ್ಯು ಹೇಳಿ ಹೆರಟತ್ತು. ಬರೇ ಹತ್ತು ನಿಮಿಷದ ಒಳಾಣ ಕೆಲಸ! ಛೇ ಇಷ್ಟು ಸಣ್ಣ ಕೆಲಸಕ್ಕೆ ಇಷ್ಟು ಹೊತ್ತು ಕಾದು ಕೂರೇಕಾತನ್ನೇ ಹೇಳಿ ಹೇಳಿಕೊಂಡೆ ಎನ್ನಷ್ಟಕ್ಕೇ. ಅಂತೂ ಪುಕ್ಕಟೆ ವಿಶ್ವರೂಪದರ್ಶನ ಆತನ್ನೆ ಎನಗೆ ಬ್ಯೂಟೀ ಪಾರ್ಲರಿಂದು ಹೇಳಿ ಮನಸ್ಸಿಲ್ಲೇ ಖುಷಿ ಪಟ್ಟುಕೊಂಡು ಫ್ರೆಂಡಿನೊಟ್ಟಿಂಗೆ ಮನೆ ಕಡೆಂಗೆ ಹೆಜ್ಜೆ ಹಾಕಿ ಬೀಸ ನಡದೆ!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು 
ಮೊಬೈಲ್ ನಂಬ್ರ: 9481921108

Thursday, February 26, 2015

ಎಲ್ಲೋರು ಮಾಡುದು ಹೊಟ್ಟೆಗಾಗಿ...! - ಮೇ ೨೦೧೩ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ

ಎಲ್ಲೋರು ಮಾಡುದು ಹೊಟ್ಟೆಗಾಗಿ...!
ಕಂಡಾಬಟ್ಟೆ ತೋರದವ ಒಬ್ಬ ಡಾಕ್ಟ್ರನ ಹತ್ತರೆ ಹೋಗಿ,"ಎನ್ನ ಶರೀರವ ಸಪೂರ ಮಾಡಿಯೊಂಬಲೆ ಎಂತಾರು ಔಷಧಿ ಇದ್ದೋ" ಹೇಳಿ ಕೇಳಿದಡ. ಡಾಕ್ಟ್ರು ಹೇಳಿದವಡ,"ಅದಕ್ಕೆಲ್ಲಾ ಎಂತ ಔಷಧಿಯೂ ಬೇಡ. ಇರುಳಪ್ಪಗ ಎರಡೇ ಎರಡು ಚಪಾತಿ ತಿಂದು ಮನುಗಿ, ಅಷ್ಟೇ ಸಾಕು ಹೇಳಿ. "ಆತು ಡಾಕ್ಟ್ರೇ, ನಿಂಗೊ ಹೇಳಿದ ಹಾಂಗೇ ಮಾಡ್ತೆ. ಆದರೆ ಈ ಚಪಾತಿಗಳ ಊಟಕ್ಕೆ ಮೊದಾಲು ತಿನ್ನೇಕ್ಕಾ? ಊಟದ ನಂತರವಾ?" ಹೇಳಿ ಪ್ರಶ್ನೆ ಮಾಡಿದನಡ ಆ ಪುಣ್ಯಾತ್ಮ!!
ಒಂದ್ನಿಮಿಷ...ಒಂದ್ನಿಮಿಷ....ಇಷ್ಟು ಓದಿಯಪ್ಪದ್ದೇ ಹಲ್ಲುಬಿಟ್ಟು ಆ ಮನುಷ್ಯನ ಗ್ರೇಶಿಯೊಂಡು ನೆಗೆ ಮಾಡ್ಲೆ ಶುರು ಮಾಡೇಡಿ ಅಥವಾ ಮೂಗಿನ ಮೇಲೆ ಬೆರಳು ಮಡುಗೇಡಿ! ಹೆಚ್ಚು ಕಡಮ್ಮೆ ಹಾಂಗೆ ಪ್ರಶ್ನೆ ಮಾಡದ್ದರೂದೇ ಅದೇ ಗುಂಪಿಂಗೆ ಸೇರಿದವ್ವೇ! ಅಂವ ಪಾಪ ಕೇಳಿದ ಅಷ್ಟೇ!! ಎಲ್ಲೋರೂ ತಿಂಬ್ರಾಂಡಿಗಳೇ! ಉದಿಯಪ್ಪಗಣ ಕಾಫಿ, ತಿಂಡಿಯ ಮನೆಲಿ ಗಡದ್ದಾಗಿ ತಿಂದು ಢರ್ರನೆ ತೇಗಿದ್ದರೂ ಕೂಡಾ ಎಲ್ಲಿಯಾದರೂ ನೆಂಟರಿಷ್ಟರ, ಅಕ್ಕಪಕ್ಕದವರ, ಫ್ರೆಂಡುಗಳ ಮನೆಗೋ ಹೋದತ್ತು ಹೇಳಿಯಾದರೆ, ಅಲ್ಲಿ ಅವ್ವೆಲ್ಲಿಯಾದರೂ ತಿಂಬಲೆ, ಕುಡಿವಲೆ ಕೊಟ್ಟರೆ ಸುತಾರಾಂ ಬಿಡ್ತಿಲ್ಲೆಯ! ಔಪಚಾರಿಕವಾಗಿ, "...ಮನೆಲಿ ಈಗಷ್ಟೇ ಕಾಫಿ, ತಿಂಡಿ ಎಲ್ಲಾ ಮುಗುಶಿ ಬಂದದು....ಎಂತದ್ದೂ ಬೇಡ.....ಹಾಂಗೂ ನಿಂಗೊಗೆ ಕೊಡೇಕು ಹೇಳಿಯಾದರೆ ಒಂದು ರಜ್ಜ ಸಾಕು....." ಹೇಳಿ ಹೇಳ್ತೆಯ. ಅಂಬಗ ಅವ್ವು ಸುಮ್ಮಗಿರ‍್ತವಾ? "ಎಂತದ್ದೂ ಆವುತ್ತಿಲ್ಲೆ. ತಿಂಡಿ ತಿಂದು ಈಗ ಅರ್ಧ ಗಂಟೆ ಆಯಿದಿಲ್ಲೆಯಾ? ಅದು ನಿಂಗೊ ಇಲ್ಲಿಗೆ ಬಂದು ಎತ್ತಿಯಪ್ಪಗ ಕರಗಿಕ್ಕು...ತಿನ್ನಿ...ಹಾಂಗೆಂತಾರೂ ಆದರೆ ಆನು ನೋಡಿಯೊಂಬೆ..." ಹೇಳಿಯೊಂಡು ತಟ್ಟೆ ತುಂಬಾ ತಿಂಡಿ, ಗ್ಲಾಸು ತುಂಬಾ ಕಾಫಿಯನ್ನೋ, ಇಲ್ಲೆ ನಿಂಗೊಗೆ ಇಷ್ಟ ಇಪ್ಪ ಪಾನೀಯವ ತುಂಬು ಹೃದಯಂದ ಕೊಡ್ತವು. "ಛೇ..ನಿಂಗೊ ಯೇವಾಗಲೂ ಹೀಂಗೇ....ತಿನ್ಸದ್ದೆ ಕಳ್ಸಿದ ಜೆನವೇ ಅಲ್ಲ...ನಿಜವಾಗಿಯಾದ್ರೂ ಬೇಡ ಇತ್ತು...." ಹೇಳಿ ಹೇಳಿಯೊಂಡೇ ಕೈಗೂ, ಬಾಯಿಗೂ ಕೆಲಸ ಕೊಡ್ತೆಯ! ಮತ್ತಿನ್ನು ಉದಿಯಪ್ಪಗ ಮನೆಂದ ತಿಂಡಿ, ಕಾಫಿ ಮುಗುಶಿಕ್ಕಿ ಹನ್ನೊಂದು ಗಂಟೆ ಒಳ ಎಲ್ಲಿಯಾದರೂ ಮದುವೆ ಮನೆಗೋ, ಉಪನಯನದ ಮನೆಗೋ, ಮನೆ ಒಕ್ಕಲಿಂಗೋ ಹೋಗಿ ಎತ್ತಿಕೊಂಡತ್ತು ಹೇಳಿಯಾದರೆ, ಅದೇ ಸಮಯಕ್ಕೆ ಅಕಸ್ಮಾತ್ ಅಲ್ಲಿ ಅವ್ವು ಉದಿಯಪ್ಪಗಣ ತಿಂಡಿ, ಕಾಫಿ ಸರಬರಾಜಿನ ಕ್ಲೋಸ್ ಮಾಡಿರದಿದ್ದರೆ ಖಂಡಿತಾ ಸಿಕ್ಕಿದ ಅವಕಾಶವ ತಪ್ಪುಸದ್ದೇ ಕೈಕಾಲು ತೊಳದ ಶಾಸ್ತ್ರ ಮಾಡಿ, ಕೂದು ಗಡದ್ದಾಗಿ ತಿಂಬ ಕ್ರಮವ ಹೆಚ್ಚಾಗಿ ಫಾಲೋ ಮಾಡುವವಿದ್ದವು! ಇನ್ನೆಂತ ರಜ್ಜ ಹೊತ್ತಿಲಿ ಮೃಷ್ಠಾನ್ನ ಭೋಜನ ಇದ್ದು ಹೇಳಿ ಗೊಂತಿದ್ದರೂ, ಗೊತ್ತು ಗುರಿ ಇಲ್ಲದ್ದೇ ಹೊಟ್ಟೆ ತುಂಬುಸುವ ಕಾಯಕ ನಿರಾಯಾಸವಾಗಿ, ನಿರಾತಂಕವಾಗಿ ಸಾಗಿರ‍್ತು! ಒಟ್ಟಾರೆ ಸಿಕ್ಕಿದ ಅವಕಾಶವ ಬಿಡ್ಲೆ ಆರುದೇ ತಯಾರಿಲ್ಲೆ! ಇನ್ನು ಮನೇಲೇ ಇಪ್ಪೋರು ಎಡೆಹೊತ್ತಿಲಿ ತಿಂಬಲೆ ಹೇಳಿ ಡಬ್ಬಗಳಲ್ಲಿ, ಫ್ರಿಡ್ಜಿಲೆಲ್ಲಾ ವಿವಿಧ ನಮೂನೆಯ ತಿಂಡಿಗಳ ಮನೇಲಿ ಮಾಡಿದ್ದರನ್ನೋ, ಹೆರಂದ ತಂದದ್ದರನ್ನೋ ದಾಸ್ತಾನು ಮಡುಗಿರ‍್ತವು ಮನೆ ಒಳವೇ ಹೋವುತ್ತಾ ಬತ್ತಾ ತಿಂಬಲೆ! ಆಫೀಸಿಂಗೆ ಹೋದವ್ವು ಎಂತ ತಿನ್ನದ್ದೇ ಕೂರ‍್ತವಾ? ಅಲ್ಲಿಯೇ ಆಫೀಸಿನ ಅಥವಾ ಆಫೀಸಿನ ಹತ್ತರೆ ಇಪ್ಪ ಕ್ಯಾಂಟೀನ್‍ಗಳ ತಟ್ಟೆ, ಗ್ಲಾಸುಗಳ ಹಳತ್ತು ಮಾಡಿರ‍್ತವು!
ಇನ್ನು ಫ್ಯಾಮಲಿ ಮೀಟಿಂಗೋ. ಆಫೀಸು ಮೀಟಿಂಗೋ ಎಂತಾರೂ ಇದ್ದರೆ ಅಲ್ಲಿ ಕಾರ್ಯಕ್ರಮದ ಶುರುವಿಲೋ, ನಡಿವಿಲೋ, ಅಕೇರಿಲೋ ಸಿಕ್ಕುವ ಒಂದು ಗ್ಲಾಸ್ ಕಾಫಿ, ಟೀ, ಬಾದಾಮಿ ಹಾಲಿಂಗೋ, ಅದರೊಟ್ಟಿಂಗೆ ಸಿಕ್ಕುವ ಒಂದು ಹಿಡಿ ಉಪ್ಪಿಟ್ಟಿಂಗೋ, ಕರಿದ ಕುರುಕುಲು ತಿಂಡಿಗೊ, ಸ್ವೇಟಿಂಗೋ ಜೀವ ಬಿಡುವವ್ವು ಎಷ್ಟು ಜೆನ ಇಲ್ಲೆ?! ಮೀಟಿಂಗಿಂಗೆ ಹೋಪ ಮೊದಾಲು ಹೆಂಡತಿ ಮಕ್ಕಳನ್ನುದೇ ಹೆರಡ್ಲೆ ಹೇಳಿಕ್ಕಿ, "ಇದಾ, ನಿಂಗಳೂ ಬನ್ನಿ...ಮೀಟಿಂಗಿಲಿ ಕಾಫಿ, ತಿಂಡಿ ಎಲ್ಲಾ ಇರ‍್ತು. ತಿಂದಿಕ್ಕಿ, ರಜ್ಜ ಹೊತ್ತು ಕೂದಾಂಗೆ ಮಾಡಿ ನಿಂಗೊ ಎಲ್ಲಾ ಸೀದಾ ಮನೆಗೆ ಬನ್ನಿ, ಆನು ಮೀಟಿಂಗ್ ಮುಗುಶಿಯೊಂಡು ಬತ್ತೆ" ಹೇಳಿ ಅವರ ಎಲ್ಲಾ ಬಪ್ಪಲೆ ಮಾಡಿ ಮೀಟಿಂಗಿಲಿ  ಕೋರಂ ಜಾಸ್ತಿ ಮಾಡುವ್ವವ್ವು ಎಷ್ಟು ಜೆನಂಗೊ ಇಲ್ಲೆ?! ಎಲ್ಲಿಯಾದರೂ ಮೀಟಿಂಗು ಶುರುವಾಗಿ ಇನ್ನೂ ಕಾಫಿ, ತಿಂಡಿ ಸಿಕ್ಕದ್ದರೆ ಯೇವಾಗ ಬತ್ತಪ್ಪಾ ಈ ತಿಂಡಿ, ಕಾಫಿ ಎಲ್ಲಾ ಹೇಳಿ ಮನಸ್ಸು ಹಾತೊರೆತ್ತಾ ಇರ‍್ತು! ಮನೇಲಿ ಕಾಫಿ, ತಿಂಡಿ ಮುಗುಶಿ ಬಂದಿದ್ದರೂ ಸಮ, ಹಶುವಿದ್ದರೂ ಸಮ, ಇಲ್ಲದ್ದರೂ ಸಮ! ಅಂತಲ್ಲೆಲ್ಲಾ ಒಂದೋ ಕಾಫಿ, ತಿಂಡಿ ಇಲ್ಲದ್ದರೆ, "ಕಾಫಿ, ತಿಂಡಿ ಇಲ್ಲದ್ದೇ ಎಂತಾ ಪೊಟ್ಟು ಮೀಟಿಂಗೋ..." ಹೇಳಿ ಬೈದು ಬಪ್ಪೋರೂ ಇದ್ದವು!
ಮತ್ತೆ ತರತರದ ಖಾದ್ಯಂಗಳ ತಿಂಬಲೆ ಬೇಕಾಗಿಯೇ ವಾರಾಂತ್ಯ ಸ್ಪೆಷಲ್ಲು, ಪಾರ್ಟಿ, ಟ್ರೀಟ್ ಹೇಳಿ ಹೆಸರು ಹೇಳಿಯೊಂಡು ದೊಡ್ಡ, ದೊಡ್ಡ ಸ್ಟಾರ್ ಹೋಟೇಲುಗೊಕ್ಕೆ, ಐಸ್‍ಕ್ರೀಂ ಪಾರ್ಲರ‍್ಗೊಕ್ಕೆ ಖಾಯಂ ಭೇಟಿ ಆಯಿಕ್ಕೊಂಡೇ ಇರ‍್ತು! ಇಷ್ಟೆಲ್ಲಾ ಮುಗುದ ಮತ್ತೂ ಮಾರ್ಗದ ಬದಿಲಿ ಧೂಳು ಮಿಶ್ರಿತ ಪಾನೀಪೂರೀ, ಭೇಲ್‍ಪೂರೀ, ಚರ‍್ಮುರಿಗಳನ್ನೆಲ್ಲಾ ಬಿಡುವ ಮಾತೇ ಇಲ್ಲೆ! ಎಂತದ್ದು ಎಲ್ಲಿ ಸಿಕ್ಕಿದರೂ ಸಮ, ಇಪ್ಪದು ಒಂದೇ ಮಂತ್ರ...ಸ್ವಾಹಾ....!  ಒಟ್ಟಾರೆ ಕೈಗೂ ಬಾಯಿಗೂ ಯಾವಾಗಲೂ ಪುರುಸೊತ್ತಿಲ್ಲೆ!
ಯಾವಾಗಲೂ, ಎಲ್ಲಾ ಕಾಲಲ್ಲಿಯೂ, ಎಲ್ಲೋರೂ ನೆಂಪು ಮಡಿಕೊಳ್ಳೇಕ್ಕಾದ ವಾಕ್ಯ ಒಂದಿದ್ದು. ’ನಾವೆಲ್ಲಾ ಬದುಕುದಕ್ಕೋಸ್ಕರ ತಿನ್ನೇಕಷ್ಟೇ ಹೊರತು ತಿಂಬಲೆ ಬದುಕುದಲ್ಲ’. ನಮ್ಮ ನಮ್ಮ ಸ್ವಸ್ಥ ಆರೋಗ್ಯಕ್ಕೆ ನವು ತಿಂಬ ಆಹಾರವೇ ಕಾರಣ. ಬೇಡದ್ದರೆಲ್ಲಾ ಹಶುವಿಲ್ಲದ್ದರೂದೇ ತಿಂದೊಡೇ ಇದ್ದರೆ, ಆ ತಿಂದ ಆಹಾರವೇ ಅನಾರೋಗ್ಯಕ್ಕೂ ಮೂಲ ಕಾರಣ ಎಂಬ ಸತ್ಯವ ತಿಳುದಿರೇಕು. ಅತಿಯಾದರೆ ಅಮೃತವೂ ವಿಷ. ಒಬ್ಬ ಎಷ್ಟು ತಿನ್ನುತ್ತಾ ಹೇಳುದು ಮುಖ್ಯ ಅಲ್ಲ. ಯಾವ ಯಾವ ಹೊತ್ತಿಲಿ ಎಷ್ಟೆ ಷ್ಟು  ಪ್ರಮಾಣಲ್ಲಿ, ಎಂತರೆಲ್ಲಾ ತಿಂದರೆ ಅಕ್ಕು ಹೇಳಿ ತಿಳುಕೊಂಡು, ಆಹಾರ ಕ್ರಮ ಅನುಸರಿಸೋದು ಒಳ್ಳೆದು. ಉದಿಯಪ್ಪಗಣ ಬ್ರೇಕ್ ಫಾಸ್ಟ್ ರಾಜನ ಊಟದ ಹಾಂಗಿರೇಕಡ. ಅಂಬಗ ಎಷ್ಟು ಪೌಷ್ಠಿಕಾಂಶ ಇಪ್ಪ ಆಹಾರವ ತಿನ್ನುತ್ತೋ ಅಷ್ಟು ಒಳ್ಳೆದು. ಇನ್ನು ಮಧ್ಯಾನ್ಹದ ಊಟ ಸಾಮಾನ್ಯ ಜೆನರ ಊಟದ ಹಾಂಗಿರೇಕು, ಇರುಳಪ್ಪಗಣ ಆಹಾರ ಭಿಕ್ಷುಕರ ಊಟದ ಹಾಂಗಿರೇಕಡ. ಈ ಮೂರು ಹೊತ್ತಿನ ಎಡೇಲಿ ಅಂಬಗಂಬಗ ಕಾಟಾಂಕೋಟಿ ತಿಂಬ ಬಾಯಿ ಚಪಲಕ್ಕೆ ಕಡಿವಾಣ ಹಾಕೇಕು ಹೇಳಿ ಬೇರೆ ಹೇಳೇಡ ಅಲ್ಲದಾ?!

ತ್ರಿವೇಣಿ ವಿ. ಬೀಡುಬೈಲು,
ಮಂಗಳೂರು.

ಸಂಗಾತಿ, ನೀನಾದೆ ನನ್ನ ಬಾಳಿನ ದೊಡ್ಡ ಸಂಗತಿ...! - ಏಪ್ರಿಲ್ ೨೦೧೪ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ


ಸಂಗಾತಿ, ನೀನಾದೆ ನನ್ನ ಬಾಳಿನ ದೊಡ್ಡ ಸಂಗತಿ...!

ಬಾಳಿಲಿ ಗೆಂಡಿಂಗೆ ಒಂದು ಹೆಣ್ಣು, ಹೆಣ್ಣಿಂಗೆ ಒಂದು ಗೆಂಡು, ಅರ್ಥಾತ್ ಮದುವೆ ಅನಿವಾರ್ಯವೇ ಅಲ್ಲದಾ? ಸರಿಯಾಗಿ ಆಲೋಚನೆ ಮಾಡಿ ನೋಡಿದರೆ ಅನಿವಾರ್ಯ ಅಪ್ಪು ಹೇಳಿದೇ ಹೇಳುಲಕ್ಕು, ಇನ್ನೂ ಕೂಲಂಕುಷವಾಗಿ ಗಮನಿಸಿ ನೋಡಿಯಪ್ಪಗ ಮದುವೆ ಆಯೇಕು ಹೇಳಿ ಏನಿಲ್ಲೆ, ಆದವರ ಅವಸ್ಥೆ ಕಾಣ್ತಿಲ್ಲೆಯಾ ಹೇಳುತ್ತ ನಿರ್ಧಾರಕ್ಕೂ ಬಪ್ಪಲಕ್ಕು! ಮದುವೆ ಆಗಿ ಒಬ್ಬನ ಒಬ್ಬ ಬೆಂಡೆತ್ತುದರ ಕಂಡು, ನೋಡಿ ನೋಡಿ ಬೊಡುದು ಬೇಸರ ಬಂದು ಹೋದವರ ಅನಿಸಿಕೆ-’ಸಂನ್ಯಾಸಿ ಸುಖಿ, ಸಂಸಾರಿ ದುಖಿ:’ ಹೇಳಿ!! ಸುತ್ತಾಮುತ್ತಾ ಇಪ್ಪ ಜೋಡಿಗಳ ಬರೇ ನೋಡಿ ಮಾಂತ್ರ ಸಂಸಾರದ ಬಗ್ಗೆ ಮನಸ್ಸಿಲಿ ಒಂದು ಕ್ಷಣಕ್ಕೆ ಬಂದು ಹೋಪಂತ ವೈರಾಗ್ಯ ಅದು!! ಬರೇ ನೋಡಿದರೆ ಅನುಭವಕ್ಕೆ ಬತ್ತೋ?! ಇಲ್ಲೆನ್ನೆ?! ನಮ್ಮದು ಹಾಂಗಾಗ, ನಾವೂ ಮದುವೆಯಾಗಿ ದಂಪತಿ ಹೇಳಿರೆ ಹೀಂಗಿರೇಕು ಹೇಳಿ ಸಮಾಜಕ್ಕೆ ತೋರಿಸಿ ಆದರ್ಶ ದಂಪತಿಗೊ ಹೇಳ್ಸಿಕೊಳ್ಳೇಕು ಹೇಳಿ ಎಲ್ಲಾ ಗ್ರೇಶುದು..ಮತ್ತೆ ಹೋಗಿ ಬೇರೆವ್ವು ಬಿದ್ದ ಗುಂಡಿಗೆ ಬಿದ್ದಪ್ಪಗ...ಬೇಡಪ್ಪಾ, ಬೇಡ ಇತ್ತು, ನೋಡಿದ ಉದಾಹರಣೆಗಳಿಂದ ಕಲಿಯೇಕಿತ್ತು, ಗೊಂತಿದ್ದೂ ಗೊಂತಿದ್ದು ಮೋಸ ಹೋದೆನ್ನೇ ಹೇಳಿ ಮತ್ತೆ ಹಲುಬುವವ್ವು ಎಷ್ಟು ಜೆನಂಗ ಇಲ್ಲೆ?! ಇನ್ನೊಂಬಂಗೆ ಮಾದರಿ ಆವುತ್ತೆಯಾ ಹೇಳಿ ಗಟ್ಟಿ ಮನಸ್ಸು ಮಾಡಿಕೊಂಡು ಮದುವೆಯೇನೋ ಆಗಿ ಬಿಡ್ತವು! ಸೃಷ್ಠಿ, ಸ್ಥಿತಿ, ಲಯಂಗೊಕ್ಕೂ ಈ ಸಂಬಂಧವೇ ಕಾರಣ! ಗೆಂಡಂಗೆ ಹೆಂಡತಿ, ಹೆಂಡತಿಗೆ ಗೆಂಡ, ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರೋ, ಒಬ್ಬನ ನೆತ್ತರ ಇನ್ನೊಬ್ಬ ಹೀರುವ ಉಂಬುಳುಗಳೋ, ಅಂತೂ ಸಂಬಂಧಲ್ಲಿ ಗೆಂಡಹೆಂಡತಿಗೊ! ’ನೀನನಗಿದ್ದರೆ ನಾ ನಿನಗೆ’ ಈ ತತ್ವವ ಪಾಲಿಸುತ್ತಾ ಪರಸ್ಪರ ಸಹಕರಿಸುತ್ತಾ, ವ್ಯವಹರಿಸುತ್ತಾ, ದಿನನಿತ್ಯ ಆದ್ದರ ಪರಸ್ಪರ ಹೇಳಿಕೊಂಡು, ಅನುಮಾನಕ್ಕೆಡೆ ಇಲ್ಲದ್ದ ಹಾಂಗೆ ನಡಕೊಂಡು, ಒಬ್ಬಂಗೊಬ್ಬ ಆಸರೆ ಆಗಿದ್ದರೆ ಮಾಂತ್ರ ಪರಸ್ಪರ ಪ್ರೀತಿ, ವಾತ್ಸಲ್ಯ, ಸಹಕಾರ, ಕರುಣೆ, ಕಾತುರ ಎಲ್ಲಾ ಇರ‍್ತು ಒಬ್ಬಂಗೆ ಇನ್ನೊಬ್ಬನ ಮೇಲೆ. ಆದರೆ ಎಲ್ಲಾ ಗೆಂಡುಮಕ್ಕೊ ಶ್ರೀರಾಮಚಂದ್ರನ ಹಾಂಗಿಪ್ಪೋರು ಇರ‍್ತವಿಲ್ಲೆ, ಎಲ್ಲಾ ಹೆಮ್ಮಕ್ಕಳುದೇ ಸತ್ಯವಾನ್ ಸಾವಿತ್ರಿ ಹಾಂಗಿಪ್ಪೋರೂ ಇರ‍್ತವಿಲ್ಲೆನ್ನೇ!! ಹಾವು-ಮುಂಗುಸಿ, ಸಿಂಹ-ಜಿಂಕೆ, ಪುಚ್ಚೆ-ಎಲಿ, ಗುರು-ಶಿಷ್ಯ, ಕಳ್ಳ-ಪೊಲೀಸ್, ನಾಯಿ-ಪುಚ್ಚೆ, ಇಲ್ಲೇ ಹೇಳಿಯಾದರೆ ಇಬ್ರೂ ಜೋರಿನವ್ವು - ಹುಲಿ, ಸಿಂಹ, ಚಿರತೆಗಳ ಹಾಂಗೆ ಗುರ್ ಗುರ್ ಹೇಳಿಕೊಂಡೇ ಇಪ್ಪಂತಾ ಗುಣದವ್ವು ಇಲ್ಲೆ ಹೇಳಿಯಾದರೆ ಇಬ್ರೂ ಬ್ಯಾಟರಿ ಮುಗುಕ್ಕೊಂಡು ಬಂದ ರೇಡಿಯೋದ ಹಾಂಗೆ, ಯೇವಾಗಲೂ, ’ಎನ್ನಂತ ಒಳ್ಳೆ ಜೆನಕ್ಕೆ ಇಂತದ್ದೇ/ಇಂತವ್ವೇ ಸಿಕ್ಕೇಕಾತಾ? ಎಲ್ಲಾ ಎನ್ನ ಪೂರ್ವ ಜನ್ಮದ ಕರ್ಮ’ ಹೇಳಿ ಚಂಯಿ ಚಂಯಿ ಹೇಳಿಕೊಂಡು, ಹಣೆ ಹಣೆ ಚಚ್ಚಿಕೊಂಡಿಪ್ಪವ್ವು! ಇನ್ನು ಕೆಲವು ಕಡೆಗಳಲ್ಲಿ ಆರಾದರೊಬ್ಬ ರೇಡಿಯೋದ ಹಾಂಗೆ ಮಾತಾಡಿಕೊಂಡೇ..., ಇನ್ನೊಬ್ಬ ಕೆಮಿಗೆ ಕೇಳಿ ಕೂಡಾ ಪ್ರತಿಕ್ರಿಯೆ ನೀಡದೇ, ಮಾತಾಡಿದರೆ ಎಂತ ಎಡವಟ್ಟಾವುತ್ತೋ, ಎಲ್ಲಿ ಸಿಕ್ಕಿಹಾಕಿಕೊತ್ತೆನೋ, ಇಲ್ಲೆ ಹೇಳಿಯಾದರೆ ಎಂತಕೆ ಸುಮ್ಮಗೆ ಉತ್ತರ ಕೊಡುದು!? ಮಾತಿಂಗೆ ಮಾತು ಕೊಟ್ಟರಲ್ಲದಾ ಈ ಜೆಗಳ ಜಂಜಾಟ ಎಲ್ಲಾ ಬಪ್ಪದು, ಬೆಂಕಿಗೆ ತುಪ್ಪ ಸುರುದಾಂಗೆ ಅಕ್ಕು ಆನುದೇ ಮಾತಾಡಿದರೆ, ಆರಿಂಗೆ ಬೇಕಪ್ಪಾ ಇದೆಲ್ಲಾ, ಮಾತಾಡುದರ ಎಲ್ಲಾ ಬೇಕಾದಷ್ಟು ಮಾತಾಡಿ ಮುಗುಶಲಿ, ಆನು ಮನಸ್ಸಿಂಗೆ ತೆಕ್ಕೊಳ್ಳದ್ದರೆ ಮುಗುದತ್ತು ಹೇಳಿ ತುಟಿ ಬಿಗಿಹಿಡುದಿಕೊಂಡಿಪ್ಪವ್ವು-ಇತ್ಯಾದಿ ಇತ್ಯಾದಿ ಬಗೆವ್ವಿರ‍್ತವು ಗೆಂಡ ಹೆಂಡತಿಯಕ್ಕೋ ಹೇಳಿ ವಿಂಗಡಿಸುಲಕ್ಕು!! ಈ ಎಲ್ಲಾ ಟೈಪಿನವ್ವು ಒಂದಲ್ಲಾ ಒಂದು ರೀತಿಲಿ ಅವರ ಕೈಹಿಡುದವಕ್ಕೆ ಡೇಂಜರೇ! ಈ ಎಲ್ಲಾ ವಿಧಂಗಳೊಟ್ಟಿಂಗೆ, ಒಂದೇ ಗುಣಂಗಳ ಹೊಂದಿದ ಇಬ್ರೂ ಪರಸ್ಪರ ವಿಧೇಯರೇ ಆಗಿಪ್ಪ, ಪರಸ್ಪರ ಹೊಂದಾಣಿಕೆ ಇಪ್ಪ, ಕಾಳಜಿ ಇಪ್ಪ, ನಮ್ಮಲ್ಲಿ ಮೇಲು-ಕೀಳು, ಭೇದ-ಭಾವ ಇಲ್ಲೆ, ನಾವಿಬ್ಬರೂ ಒಂದೇ, ದೇಹ ಎರಡು, ಪ್ರಾಣ ಒಂದು ಹೇಳಿ ಸ್ನೇಹಿತರ ಹಾಂಗಿಪ್ಪ ಎಷ್ಟೋ ಜೋಡಿಗೊ ಸುಖಲ್ಲಿದ್ದವು!  

     ಕೆಲವೊಂದು ಬಾಳಸಂಗಾತಿಗೊಕ್ಕೆ ಪರಸ್ಪರ ಒಂದೂ ಕ್ಷಣವೂ ಬಿಟ್ಟಿಪ್ಪಲೆಡಿತ್ತಿಲ್ಲೆ! ಗಳಿಗೆಗೊಂದರಿ ಫೋನು ಮೆಸೇಜು, "ಎಲ್ಲಿದ್ದೆ?", "ಹೇಂಗಿದ್ದೆ?" , "ಎಂತ ಮಾಡ್ತಾ ಇದ್ದೆ?" , "ಬೋರಾವುತ್ತಾ?" , "ಬರೇಕಾ?" , "ಹುಷಾರಿದ್ದೆಯಾ?" , "ಐ ಮಿಸ್ ಯೂ" ಹೇಳಿ ಎಲ್ಲಾ! ಇಬ್ರೂ ಹೀಂಗಿಪ್ಪ ಸ್ವಭಾವದವ್ವಾದರೆ ಪರ್ವಾಗಿಲ್ಲೆ...ಇಲ್ಲೆ ಹೇಳಿಯಾದರೆ ಗತಿ ಗೋವಿಂದ...ಎಲ್ಲಿಯಾದರು ಗೆಂಡ ಅಥವಾ ಹೆಂಡತಿ ಪ್ರೀತಿಲೇ ಹೀಂಗೆ ಅಂಬಗಂಬಗ ಸಂಪರ್ಕಿಸಿಕೊಂಡೇ ಇದ್ದತ್ತು ಹೇಳಿಯಾದರೆ ಈ ಅತಿ ಪ್ರೀತಿಯೇ ಅವಿಬ್ರಿಂಗೆ ಮುಳುವಾವುತ್ತು! "ಎಂತಕೆ ಹೀಂಗೆ ಕಾಲು, ಮೆಸ್ಸೇಜು ಮಾಡಿ ವಿಚಾರ‍್ಸಿಕೊಂಡಿಪ್ಪದು...ಆರೊಂಟ್ಟಿಂಗಾರೂ, ಎಲ್ಲಿಗಾದರೂ ಹೋದರೆ ಹೇಳಿ ಎನ್ನ ಮೇಲೆ ಅನುಮಾನವಾ?" ಹೇಳಿ ಶುರುವಾವುತ್ತು ಚರ್ಚೆ. ಹಾಂಗೆ ಹೇಳಿ ಶುರು ಅಪ್ಪ ಇವರ ಮಾತುಕತೆ ಹೋಯಿಕೈವರೆಗೂ ಹೋದರೂ ಹೋತು...! ಮತ್ತೆ ಕಣ್ಣೀರ ಧಾರೆಯೇ ಮುಂದಿನ ಕತೆ! ಒಬ್ಬನ ಒಬ್ಬ ಅರ್ಥ ಮಾಡಿಕೊಂಬ ಗೋಜಿಗೇ ಹೋವುತ್ತವಿಲ್ಲೆ!  "ಎಷ್ಟೆಲ್ಲಾ ಒಳ್ಳೊಳ್ಳೆ ಸಂಬಂಧಗಳ ಬಂದದರ ಬಿಟ್ಟು ಹೋಗಿ ಹೋಗಿ ನಿಂಗಳ ಮದುವೆ ಆದೆನ್ನೆ" ಹೇಳಿ ಹೆಂಡತಿ ಹೇಳಿದರೆ, "ಹೋಗಿ ಹೋಗಿ ನಿನ್ನ ಕಟ್ಟಿಕೊಂಡು ಸೋತೆನ್ನೇ" ಹೇಳಿ ಗೆಂಡ! ಹೀಂಗೇ ಮುಂದುವರುದು ಮೊದಾಲು ಹಾಲು ಜೇನಿನಂತಿದ್ದ ಅವರಿಬ್ಬರ ಸಂಬಂಧ ಹಾವು-ಮುಂಗುಸಿ ತರ ಆಗಿಬಿಡ್ತು! ಇನ್ನು ಸಿಂಹ-ಜಿಂಕೆಯ ಹಾಂಗಿಪ್ಪ ಸತಿಪತಿ ಕತೆಗೆ ಬಪ್ಪ! ಇಲ್ಲಿ ಒಂದೋ ಗೆಂಡ ಸಿಂಹ, ಇಲ್ಲೆ ಹೇಳಿಯಾದರೆ ಹೆಂಡತಿ ಸಿಂಹಿಣಿ, ಮತ್ತೆ ಆರು ಹೆದರುತ್ತವೋ ಅವ್ವು ಜಿಂಕೆ!! ಕೆಲವು ದಿಕ್ಕೆ ಗೆಂಡ ಜೋರು, ಕೆಲವು ದಿಕ್ಕೆ ಹೆಂಡತಿ ಜೋರು! ಈ ಎರಡೂ ಸ್ಥಿತಿ ಇಬ್ರಿಂಗೂ ಭಯಂಕರ ಅನುಭವವೇ! ಒಂದೋ ಹೆಂಡತಿ ಜೋರಿಂದಾದರೆ, ಗೆಂಡನಾದವ "ಅಮಾವ್ರ ಗೆಂಡ" ಹೇಳಿ ಬಿರುದು ಪಡೆತ್ತ ಮತ್ತೆ ಅವನ ಹಿಂದದ, ಮುಂದಂದ ಅವನ ಸಹೋದ್ಯೋಗಿಗಳ ಕೈಯಿಂದ, ಫ್ರೆಂಡ್‍ಗಳ ಕೈಯಿಂದ ಕರೆಸಿಕೊಳ್ತ! ಅವನ ಈ ಸ್ಥಿತಿ ಅವಂಗೆ ನುಂಗಲಾರದ ತುತ್ತಾಗಿರ‍್ತು! ಹೆಂಡತಿ ಜೋರಿದ್ದರೆ ಅದಕ್ಕೆ ಅದರ ಗೆಂಡನೋ, ಅವನ ಮನೆವ್ವೋ ಅಥವಾ ಆ ಹೆಮ್ಮಕ್ಕಳ ಗೊಂತಿಪ್ಪ ಜೆನಂಗಳೋ, "ಮಹಾ ಕಾಳಿ" ಹೇಳಿಯೋ, "ರಾಟಾಳಿ" ಹೇಳಿಯೋ  ನಾಮಕರಣ ಮಾಡಿಬಿಡ್ತವು! ಗೆಂಡ ಜೋರಿನವನಾದರೆ ಹೆಂಡತಿಯ ಬಗ್ಗೆ ಎಲ್ಲೋರಿಂಗೂ ಕನಿಕರ...ಅದಾದ ಕಾರಣ ಹಾಂಗಿಪ್ಪ ಜೋರಿನ ಗೆಂಡನೊಟ್ಟಿಂಗೆ ಬದುಕುತ್ತಾ ಇದ್ದು, ಆನಾದರೆ ಯೇವಾಗ್ಲೋ ನೀನಲ್ಲದ್ದರೆ ನಿನ್ನಜ್ಜ ಹೇಳಿ ಬಿಟ್ಟು ಹೋಗಿಬಿಡ್ತಿತ್ತೆ ಹೇಳಿ ಎಲ್ಲಾ ಹೇಳಿ ಅದಕ್ಕೆ ಇನ್‍ಡೈರೆಕ್ಟಾಗಿ ಕೀ ಕೊಟ್ಟು ಅದರ ತಲೆಕೆಡಿಸಿಬಿಡ್ತವು! ಮತ್ತೆ ಅದರ ಸ್ಥಿತಿ ಶೋಚನೀಯವೇ! ಈಗ ಗುರು ಶಿಷ್ಯರ ಹಾಂಗಿಪ್ಪ ಜೋಡಿಗಳ ಕಥೆ ವ್ಯಥೆ! ಇಲ್ಲಿ ಒಂದೋ ಗೆಂಡ ಗುರುವಾಗಿರ‍್ತ, ಇಲ್ಲದ್ದರೆ ಅವನ ಅರ್ಧಾಂಗಿ ಅವಂಗೆ ಗುರುವಾಗಿರ‍್ತು! ಮದುವೆಗೆ ಮೊದಾಲು ಮನೆ, ಅಬ್ಬೆ, ಅಪ್ಪಂಗೆ, ಅಣ್ಣ, ತಮ್ಮ, ಅಕ್ಕತಂಗೆಗೊಕ್ಕೆಲ್ಲಾ ಅಚ್ಚುಮೆಚ್ಚಿನವ ಆಗಿತ್ತವ, ಎಲ್ಲೋರ ಸಂಪರ್ಕ ಮಡಿಕ್ಕೊಂಡು ಪ್ರೀತಿಂದ ಅವರೊಟ್ಟಿಂಗೆ ಓಡಾಡಿಕೊಂಡಿದ್ದವ, ಮದುವೆ ಆದ ಕ್ಷಣಂದಲೇ ಹೆಂಡತಿಗೆ ದಾಸ ಆಗಿಬಿಡ್ತ! ಹೆಂಡತಿ ಹಾಕಿದ ಲಕ್ಷ್ಮಣ ರೇಖೆಯ ಅಪ್ಪಿ ತಪ್ಪಿಯೂ ದಾಂಟುತ್ತನ್ನಿಲ್ಲೆ! ಹೆಂಡತಿ ಮೇಲೆ ಅಪಾರ ನಂಬಿಕೆ, ಅದು ಹೇಳಿದ್ದೆಲ್ಲವೂ ಸತ್ಯವೇ, ವೇದವಾಕ್ಯವೇ ಅವಂಗೆ! ಅದರ ಕಣ್ಣಿಂದ ಒಂದು ಹನಿ ನೀರು ಬಂದರೂ ಸಹಿಸುಲೆಡಿತ್ತಿಲ್ಲೆ ಅವಂಗೆ! ಹುಟ್ಟಿದ ಲಾಗಾಯ್ತು ಅಬ್ಬೆ, ಅಪ್ಪನೊಟ್ಟಿಂಗೇ ಇದ್ದಲ್ಲಿಂದ, "ಬಾಡಿಗೆ ಮನೆ ಮಾಡಿ ನಾವು ಬೇರೆ ಇಪ್ಪಾ" ಹೇಳಿ ಹೆಂಡತಿ ಒಂದೇ ಒಂದು ಸಲ ರಾಗ ಎಳದರೂ "ಎಸ್" ಹೇಳಿ ಅದರ ಆರ್ಡರಿನ ಪಾಸು ಮಾಡಿ ಏಕ್‍ದಂ ಅದರ ಕಟ್ಟಿಕೊಂಡು ಹೋಗಿ ಬೇರೆ ಕೂಪವ್ವು ಎಷ್ಟು ಜೆನಂಗಳೂ ಇದ್ದವು! ಅಥವಾ ಇಪ್ಪ ಆಸ್ತಿಲಿ ಗೆಂಡನ ಕೈಲಿ ಪಾಲು ಕೇಳಿಸಿ ಬೇರೆ ಮನೆ ಮಾಡಿ ಕೂದವ್ವು ಎಷ್ಟು ಜೆನಂಗ ಇಲ್ಲೆ?! ಅಂಬಗ ಅಬ್ಬೆ, ಅಪ್ಪ, ಒಡಹುಟ್ಟಿದವರ ಕಣ್ಣೀರು ನೆಲಕ್ಕಂಗೆ ಬೀಳೇಕಷ್ಟೇ!! ಮತ್ತೆ ಎಷ್ಟೋ ವರ್ಷ ಕಳುದು ಈ ಗೆಂಡ ಮಹಾಶಯಂಗೆ ಜ್ಞಾನೋದಯ ಅಪ್ಪಾಗ ಹೆಂಡತಿ ಹೇಳಿದ್ದರ ಕೇಳಿ ಕೆಟ್ಟೆ ಹೇಳಿ ಅನ್ನಿಸಿಯಪ್ಪಗ ಸಮಯ ಮೀರಿ ಹೋಗಿರ‍್ತು, ಅಬ್ಬೆ, ಅಪ್ಪ ಫೋಟೋದೊಳಾದಿಕ್ಕಿ ಇರ‍್ತವು! ಒಡಹುಟ್ಟಿದವರೊಟ್ಟಿಂಗೆ ಸಂಪರ್ಕ ಮಡಿಕ್ಕೊಳ್ಳದ್ದೇ, ಅವ್ವೆಲ್ಲಿದ್ದವು, ಹೇಂಗಿದ್ದವು ಹೇಳಿಯೂ ಗೊಂತಿರ‍್ತಿಲ್ಲೆ!! ಇನ್ನು ಗೆಂಡ ಗುರುವಿನ ಸ್ಥಾನಲ್ಲಿ ಇದ್ದರೆ ಅವ ಹೆಂಡತಿ ಕೈಲಿ ’ಎ’ ಟೂ ’ಝೆಡ್’ ಕೆಲಸಂಗಳ ಎಲ್ಲಾ ಮಡ್ಸುದು, ಅದರ ಅಪ್ಪನ ಮನೆಂದ ಪೈಸೆ, ಒಡವೆ ತಪ್ಪಲೆ ಕಳುಸುದು, ಹೆಂಡತಿ ವಿಧೇಯ ಶಿಷ್ಯೆಯ ಹಾಂಗೆ ಅವ ಹೇಳಿದ ಕೆಲಸಂಗಳ ಎಲ್ಲಾ ಮಾಡುದು, ಅಪ್ಪನ ಮನಗೆ ಹೋಗಿ ಅವ ಕೇಳಿದ್ದರ ತಂದು ಅವನ ವಶಕ್ಕೆ ಒಪ್ಸುದು! ಅಪ್ಪನ ಮನೆವ್ವು ಪಾಪ ಮಗಳು ಸುಖವಾಗಿರಾಲಿ ಹೇಳಿ ಪೈಸೆಯನ್ನೋ, ಬಂಗಾರವನ್ನೋ, ಒಟ್ಟಾರೆ ಅದು ಕೇಳಿದ್ದರ ಕೊಟ್ಟು ಕಳುಶುದು! ಗೆಂಡನ ಆಸೆಬುರುಕುತನ, ಸ್ವಾರ್ಥ ಎಲ್ಲಾ ತಿಳುದ ಮತ್ತೆ ಹೆಂಡತಿಗೆ ಜ್ಞಾನೋದಯ ಅಪ್ಪಾಗ ಅಪ್ಪನ ಮನೆಯ ಆಸ್ತಿಯ ಪೂರಾ ನುಂಗಿ ನೀರುಕುಡುದಾಗಿರ‍್ತು ತನ್ನ ಗೆಂಡಂಗೆ! ಪರಿಸ್ಥಿತಿ ಕೈಮೀರಿ ಹೋದ ಮತ್ತೆ ಪರಿತಪಿಸಿ ಎಂತ ಪ್ರಯೋಜನ?! ಇನ್ನು ಕಳ್ಳ ಪೊಲೀಸ್ ಕತೆ! ಗೆಂಡಂಗೋ, ಇಲ್ಲೆ ಹೇಳಿಯಾದರೆ ಹೆಂಡತಿಗೆ ಒಬ್ಬನ ಮೇಲೊಬ್ಬಂಗೆ ಏವಾಗಲೂ ಡೌಟೋ ಡೌಟು! ಹೇಂಗಾರೂ ಮಾಡಿ ಸಿಕ್ಕುಸಿಬೀಳಿಸೇಕು ಹೇಳಿ ಒಬ್ಬನ ಹಿಂದಂದ ಇನ್ನೊಬ್ಬ ಪೊಲೀಸನ ಹಾಂಗೆ ಕಣ್ಣಿಟ್ಟಿರ‍್ತವು! ಹೋದಲ್ಲಿಂದ ತಪಾಸಣೆ ಮಾಡುಲೆ ಹೇಳಿ ಮನಗೆ ಬೇಗ ವಾಪಸ್ಸು ಬಪ್ಪದು, ಆರಾರತ್ತರೆ ಮಾತಾಡಿದ್ದವು ಹೇಳಿ ಮೊಬೈಲಿನ ಲಾಗಿನ ಚೆಕ್ ಮಾಡುದು, ಕೆಲಸ ಮಾಡ್ತಾ ಇಪ್ಪ ಆಫೀಸಿಂಗೂ ಬಂದು ಒಂದೆರಡು ರೌಂಡು ಹೊಡದು, ಸಹೋದ್ಯೋಗಿಗಳೊಟ್ಟಿಂಗೆ ಓರೆಯಾಗಿ ಮಾತಾಡಿಕ್ಕಿ, ರಜ್ಜ ಹೊತ್ತು ಕಾವಲು ಕೂದು ಸಿ.ಬಿ.ಐ ಕೆಲಸ ಮಾಡಿಕ್ಕಿ ಹೋಪದು, ದಾರಿಲಿ ಹೋಪ ಕೂಸುಗಳ, ಹೆಮ್ಮಕ್ಕಳ ಮೇಲೆ ಗೆಂಡನ ಕಣ್ಣು ಬೀಳುತ್ತಾ ಹೇಳಿ ಹೆಂಡತಿ ಹದ್ದಿನ ಕಣ್ಣಿಲಿ ನೋಡುದು, ಒಟ್ಟಾರೆ ಹೀಂಗೆಲ್ಲಾ ಪರಸ್ಪರ ಹೊಂಚು ಹಾಕುದು, ಆಪಾದನೆ ಹೊರುಸುದು, ವಾದ ಮಾಡುದು, ಮನೆಲಿ ಒಬ್ಬನ ಒಬ್ಬ ಕೂಡಿ ಹಾಕುದು ಇತ್ಯಾದಿ ಇತ್ಯಾದಿ! ಇಂತಹವರ ಚಾಲಾಕುತನದ ಎದುರು ನಿಜವಾದ ಕಳ್ಳ, ಪೊಲೀಸ್, ಸಿ.ಬಿ.ಐಯವ್ವು ದಂಡ! ಪಾತ್ರೆ ಪಗಡಿ, ಲಟ್ಟಣಿಗೆ, ಸಟ್ಟುಗಂಗ ಮಾತಾಡುವ ಕೆಲವು ಮನೆಯ ದಂಪತಿಗೊ,"ಜೆಗಳ, ಹುಸಿಕೋಪ, ಮುನಿಸು, ರಾಜಿ ಇಲ್ಲದ್ದ ದಾಂಪತ್ಯ ಎಂತರಾ...?!" ಹೇಳಿ ರಾಗ ಎಳಾದು, "ನಮ್ಮ ಸಂಸಾರ ಆನಂದ ಸಾಗರ" ಹೇಳಿ ಜೆಂಭಕೊಚ್ಚಿಕೊಂಬುವ್ವವ್ವಿದ್ದವು!!

    ದಿನಪತ್ರಿಕೆಗಳಲ್ಲಿ, ಮಾಸಪತ್ರಿಕೆಗಳಲ್ಲಿ, ಟಿ.ವಿಯ ಹಾಸ್ಯ ಕಾರ್ಯಕ್ರಮಂಗಳಲ್ಲಿ ಓದುಗಂಗೆ/ವೀಕ್ಷಕಂಗೆ ಹಾಸ್ಯದ ರಸದೌತಣ ಕೊಡುದು ಆ ಬರಹಗಾರರ/ಭಾಷಣಕಾರರ ಹಾಸ್ಯ! ಅವಕ್ಕೆಲ್ಲಾ ಓದುಗರ/ಸಭಿಕರ ಮನರಂಜಿಸುಲೆ ಬೇಕಾಬಿಟ್ಟಿಯಾಗಿ ಸಿಕ್ಕುವ ವಸ್ತುವೇ ಗೆಂಡ ಹೆಂಡತಿ ವಿಷಯಂಗೊ! ಅಲ್ಲಿ ಬರದ, ಭಾಷಣಲ್ಲಿ ಹೇಳುವ ಹಾಸ್ಯ ತುಣುಕುಗೊ ಎಲ್ಲಾ ದಂಪತಿಗಳ ಎಡವಟ್ಟುಗಳೇ! ಓದಿದ/ಕೇಳಿದ ಎಲ್ಲರನ್ನೂ ಒಂದು ಕ್ಷಣಕ್ಕೆ ಪೇಚಿಗೆ ಸಿಕ್ಕಿಸಿಬಿಡ್ತವು! ಎಲ್ಲವೂ ಒಂದಲ್ಲಾ ಇನ್ನೊಂದು ಮನೆಲಿ ನಿತ್ಯ ನಡವ ಘಟನೆಗಳೇ! ಎಲ್ಲೋರ ಮನೆ ದೋಸೆಯೂ ತೂತೇ! ಎಲ್ಲೋರೂ ತಮ್ಮ ತಮ್ಮ ಮನೆಲಪ್ಪ ಕತೆಗಳನ್ನೇ ಓದಿ/ಕೇಳಿ ನೆಗೆ ಮಾಡುದೇ ಮಾಡುದು! ಅಷ್ಟು ನೆಗೆಪಾಟಲಿನ ವಸ್ತುವಾಗಿ ಬಿಟ್ಟಿದು ಗೆಂಡ ಹೆಂಡತಿಯಕ್ಕಳ ಕತೆಗೊ! ಈ ಮೇಲೆ ಆನು ಕೊಟ್ಟ(ಹಾವು-ಮುಂಗುಸಿ, ಸಿಂಹ-ಜಿಂಕೆ.....) ಉದಾಹರಣೆಗಳಲ್ಲಿ ನಿಂಗೊ ಯಾವ ಗುಂಪಿಂಗೆ ಸೇರಿದವ್ವು ಹೇಳಿ ನಿಂಗಳೇ ಗೇಶಿಗೊಂಡು ಅಂತೆ ಒಂದರಿ ನೆಗೆ ಮಾಡಿಬಿಡಿ ಆತಾ? ಇಲ್ಲಿ ಬರದ್ದು ನಿಂಗಳ ಜೀವನಲ್ಲಿ ಆಗಿದ್ದರೆ ಅದು ಕಾಕತಾಳೀಯ ಅಷ್ಟೇ! ಇದು ನಮ್ಮಲ್ಲಿ ಆರನ್ನೂ ಉದ್ದೇಶಿಸಿ ಬರದ್ದಲ್ಲ ಆತಾ!

    ಕೆಲವು ಜೆನಂಗ ಗ್ರೇಶುವ ಹಾಂಗೆ ಸಂನ್ಯಾಸಿ ಸುಖಿಯೂ ಅಲ್ಲ, ಸಂಸಾರಿ ದುಖಿ:ಯೂ ಅಲ್ಲ! ಗೆಂಡ ಹೆಂಡತಿ ಮೊದಾಲು ಗೆಳೆಯರಯೇಕು, ಪರಸ್ಪರರ ಇಷ್ಟಂಗಳ, ಕಷ್ಟಂಗಳ ತಿಳುದುಕೊಳ್ಳೇಕು, ವಿಚಾರ ವಿನಿಮಯ ಮಾಡಿಕ್ಕೊಳ್ಳೇಕು, ಪರಸ್ಪರ ಕಷ್ಟಂಗಳಿಗೆ ಸ್ಪಂದಿಸೇಕು, ಅವಂಗೆ/ಅದಕ್ಕಾದ ಬೇನೆ, ಕಷ್ಟ ಎನ್ನದು ಹೇಳುತ್ತ ಕಾಳಜಿ ಇರೇಕು, ಎಲ್ಲದರಲ್ಲೂ ಸಂತೃಪ್ತಿ ಕಾಣೇಕು, ಆನೇ ಮೇಲು, ನೀನು ಕೀಳು ಹೇಳಿ ನಡಕೊಂಬಲಾಗ, ಪ್ರತಿಯೊಬ್ಬಂಗೂ ಅವಂದೇ ಆದ ಸ್ವಾತಂತ್ರ್ಯ ಇದ್ದು ಅದು ಒಂದು ಮಿತಿಲಿರೇಕು ಹಾಂಗೆ ಅದರ ಪರಸ್ಪರ ಒಪ್ಪಿಕೊಳ್ಳೇಕು, ತಾನು ಹೇಳಿದ್ದೇ ಅಂತಿಮ, ಆನು ಹಾಕಿದ ಗೆರೆಯ ಆರೂ ದಾಂಟುಲಾಗ, ಎನ್ನಿಷ್ಟದ ಹಾಂಗೇ ನಡಯೇಕು ಹೇಳುತ್ತ ಅಹಂ ಇಬ್ರಿಂಗೂ ಇಪ್ಪಲಾಗ, ಪರಸ್ಪರ ಯಾವ ವಿಷಯಲ್ಲೂ ಹದ್ದುಮೀರಿ ಹೋಪಲಾಗ, ಪರಸ್ಪರ ಸಮಯಕೊಟ್ಟುಗೊಂಡು, ಒಬ್ಬನ ಒಬ್ಬ ಸರಿಯಾಗಿ ಅರ್ಥಮಾಡಿಕೊಂಬದು-ಹೀಂಗಿಪ್ಪ ದಂಪತಿಗಳ ಜೀವನ ಸುಖಮಯವಾಗಿರ‍್ತು, ಹೀಂಗಿಪ್ಪ ಸಂಸಾರಿ ಸುಖಿ ಆಗಿಕ್ಕಲ್ಲದಾ?! ಅಲ್ಲಾ ಇದರೆಡೆಲಿಯೂ ಎಂತಾರೂ ಅಸಮಾಧಾನಕ್ಕೆ ಕಾರಣ ಅಪ್ಪಂತಾ ಸಂಗತಿ ಬಕ್ಕಾ?!

ತ್ರಿವೇಣಿ ವಿ ಬೀಡುಬೈಲು
Mangalooru.

Wednesday, February 25, 2015

ಹವಾನಿಯಂತ್ರಿತ ಹೊಟೇಲಿಲಿ ಒಂದು ದಿನ...-ಹವ್ಯಕ ವಾರ್ತೆ ಮಾರ್ಚ್ ೨೦೧೩ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಒಂದು ದಿನ ಮಕ್ಕೊ ಎನ್ನ ಹತ್ತರೆ ಹೇಳಿದವು,"ಅಮ್ಮಾ, ಎಂಗಳ ಕ್ಲಾಸ್ ಮೇಟ್ಸ್ ಎಲ್ಲಾ ಎಷ್ಟು ಸರ್ತಿ ದೊಡ್ಡ ದೊಡ್ಡ ಎ.ಸಿ ಹೋಟೆಲಿಂಗೆಲ್ಲಾ ಹೋವುತ್ತವು ಗೊಂತಿದ್ದಾ,ಅಲ್ಲಿಯೇ ಬರ್ತ್ ಡೇ ಪಾರ್ಟಿ,ಅಪ್ಪ ಅಮ್ಮನ ಮ್ಯಾರೇಜ್ ಆನಿವರ್ಸರಿ,ವಾರಕ್ಕೊಂದರಿ ಹಾಂಗಿಪ್ಪ ಹೋಟೇಲಿಲೆಲ್ಲಾ ಉಂಬದು ಎಲ್ಲಾ ಎಲ್ಲಾ ಮಾಡ್ತವು,ಅಲ್ಲಿಗೆ ನಾವು ಎಲ್ಲಾ ಹೋಗಿ ಸೆಲಬ್ರೇಟ್ ಮಾಡೇಕು ಹೇಳಿ ಎಂಗೊ ಹೇಳ್ತಿಲ್ಲೆಯಾ,ಬಟ್ ಒಂದರಿ ನಾವು ಹೋಪಮ್ಮಾ,ಅಪ್ಪಂಗೆ ಹೇಳಿ ಒಪ್ಪಿಸು"ಹೇಳಿ ರಾಗ ಎಳದು ಎನ್ನ ಮಧ್ಯವರ್ತಿ ಮಾಡಿ ಬಿಟ್ಟವು! ಸ್ಪೆಷಲಿ ಅಪ್ಪನ ಮೂಲಕವೇ ಮಕ್ಕೊಗೆ ಆಯೇಕ್ಕಾದ ಕೆಲಸಂಗಳ ಇಬ್ಬರಿಂಗೂ ಒಂದು ರಜ್ಜವ್ವೂ ಬೇನೆ ಆಗದ್ದ ಹಾಂಗೆ ಸಂಧಾನ ಮಾಡುವ ಈ ಅಮ್ಮನ ಬ್ರೋಕರ್ ಕೆಲಸ ಮಹಾ ಕಷ್ಟದ್ದು! ಅನುಭವಿಸಿದವಕ್ಕೆ ಗೊಂತಿಕ್ಕು!

ಎನ್ನ ಕೈಯಾರೆ ಮಾಡಿದ ಮನೆ ಊಟವೇ ಲಾಯ್ಕ ಹೇಳಿ ದ್ಯೂಟಿ ಮುಗುಶಿ ಮಧ್ಯಾನ್ಹವೋ, ಇರುಳೋ, ಹೊತ್ತು ಮೀರಿದರೂ, ಬೇರೆ ಹೋಟೆಲಿಲ್ಲೆಲ್ಲಾ ಉಣ್ಣದ್ದೆ ಸೀದಾ ಮನಗೇ ಬಂದು ಉಂಬ ಇವರ ಹತ್ತರೆ ಹೇಂಗಪ್ಪಾ ವಿಷಯ ಪ್ರಸ್ತಾಪ ಮಾಡುದು ಹೇಳಿ ಎನ್ನ ತಲೆಬೆಶಿ ಒಂದು ಹೊಡೇಲಿ, ಈ ಮಕ್ಕಳ ಒತ್ತಾಯ ಇನ್ನೊಂದು ಕರೇಲಿ. ಸಣ್ಣಂದಲೇ ಭಂಗಲ್ಲಿ ಬೆಳದು ಬಂದ ಕಾರಣ ಕಷ್ಟ ಪಟ್ಟು ದುಡುದ ಪೈಸೆಯ ಖರ್ಚು ಮಾಡುವಾಗಲೂ ರಜ್ಜ ಜಾಗ್ರತೆ ಎಂಗೊಗೆ. ಈಗಾಣ ಗಂಡುಮಕ್ಕೊಗೆಲ್ಲಾ ಅವರವರ ಹೆಂಡತಿಯಕ್ಕೊ ಅಲ್ಲಿಗೆ ಹೋಯೇಕು, ಇಲ್ಲಿಗೆ ಹೋಯೇಕು ಹೇಳಿ ಕೇಳೇಕು,ಮನವೊಲಿಸೇಕು ಹೇಳಿಯೇ ಇಲ್ಲೆ.ಅವ್ವೇ ಹೆಂಡತಿ ಮಕ್ಕಳ ಎಲ್ಲಾ ದಿಢೀರಾಗಿ ಹೆರಡುಲೆ ಹೇಳಿ,ಸರ್ ಪ್ರೈಸ್ ಕೊಟ್ಟು,ಕಾರಿಲೋ,ಸ್ಕೂಟರಿಲೋ ಕೂರಿಸಿಯೊಂಡು ರೊಂಯ್ಯನೆ ಹೋಗಿ ಬೇಕು ಬೇಕಾದ್ದರೆಲ್ಲಾ ತಿಂದು,ತೇಗಿ ಬತ್ತವು!ಆದರೆ ಈ ೬೦,೭೦ರ ದಶಕಗಳಲ್ಲಿ ಹುಟ್ಟಿದ ಕೆಲವು ಗೆಂಡಂದಿರ ಈ ಹೆಂಡತಿ, ಮಕ್ಕೊ ಹೇಂಗಾರು ಮಾಡಿ ಅವರ ಒಪ್ಪಿಸಲೇ ಬೇಕಾದಂತಹ ಪರಿಸ್ಥಿತಿ!ಅವ್ವೇ ಆಗಿ ಈಗಿನ ಕಾಲಕ್ಕನುಗುಣವಾಗಿ ನಡಕೊಂಬಂತಹ ಮನೋಭಾವವೂ ಅವರಲ್ಲಿರುತ್ತಿಲ್ಲೆ! ಈಗ ಎನಗೆ ಈ ಮಕ್ಕಳ ಅಪ್ಪನ ಒಪ್ಪಿಸುದೊಂದೇ ದೊಡ್ಡ ಕೆಲಸ!ಮುಂದಿನ ಕೆಲಸ ಸುಲಾಭವೇ ಎಂತಕೆ ಹೇಳಿರೆ ಅಂತಹ ’ಹೋಟೇಲ್’ಯಿಂಗೆ ಹೋಗಿ ಅಲ್ಲಿಯಾಣ ವ್ಯವಸ್ಥೆಗಳ ಎಲ್ಲಾ ನೋಡಿಯಾದರೂ  ಬರೇಕು ಒಂದರಿ ಹೇಳಿ ಎನಗೂ ಅಂದೇ ಮನಸ್ಸಿಲ್ಲಿ ಮೂಡಿದ ಆಸೆಯ ಒಳವೇ ಬಚ್ಚಿಟ್ಟುಕೊಂಡಿತ್ತೆ! 

     ಒಂದು ದಿನ ಮಧ್ಯಾನ್ಹ ಎನ್ನ ಅಡುಗೆಯ ಹೊಗಳಿಯೊಂಡು ಉಂಡೊಂಡಿಪ್ಪಾಗ ಇದೇ ಒಳ್ಳೇ ಟೈಂ ಹೇಳಿ ಧೈರ್ಯ ಮಾಡಿ ಇವರ ಹತ್ತರೆ ಕೇಳಿಯೇಬಿಟ್ಟೆ,"ಅಪ್ಪೋ, ಈ ಮಕ್ಕೊ ಎಲ್ಲಾ ಆಸೆ ಪಡ್ತವು, ಒಂದರಿ ಆ ದೊಡ್ಡ ಎ.ಸಿ. ಹೋಟೇಲಿಂಗೆ ಹೋಪನಾ,ಈ ಮಕ್ಕಳ ಶಾಲೆಲಿ ಬೇರೆ ಮಕ್ಕೊ ಎಲ್ಲಾ ಅಲ್ಲಿಗೆ ಹೋದ ಶುದ್ಧಿ ಹೇಳುದರ ಕೇಳೀ ಕೇಳೀ,ಇವಕ್ಕಿಬ್ರಿಂಗೂ ಅಲ್ಲಿಗೆ ಒಂದರಿ ಹೋಯೇಕು,ಅಲ್ಲಿ ಉಣ್ಣೇಕು ಹೇಳಿ ಆಸೆ ಆಯಿದು"ಹೇಳಿ ಡೈರೆಕ್ಟಾಗಿ ಮಕ್ಕಳ ಎದುರಿಂದಲೇ ವಿಷಯ ಮಂಡನೆ ಮಾಡಿದೆ!"ಆತು ಹೋಪ,ಯಾವಾಗ ಹೋಪ ಹೇಳಿ ಆಲೋಚನ ಮಾಡಿ ಹೇಳು,ಆ ದಿನವೇ ಹೋಪ"ಹೇಳಿ ಹೇಳಿದವಿವು!ಇಷ್ಟು ಸಲೀಸಾಗಿ ಒಪ್ಪುತ್ತಿದ್ದವು ಹೇಳಿ ಗೊಂತಿದ್ದರೆ ಯೇವಾಗಲೋ ಕೇಳುಲಾವುತ್ತಿತ್ತನ್ನೇ ಹೇಳಿ ಅನ್ನಿಸಿತು!ಇವಕ್ಕೆ ಆಧುನಿಕತೆಯ ಗಾಳಿ ರಜ್ಜ ಸೋಕಿದ್ದು ಹೇಳಿ ಅಂದಾಜು ಮಾಡಿದೆ ಮನಸಿಲ್ಲಿ!ಮಕ್ಕೊ ಈಗ ಲಗಾಮಿಲ್ಲದ ಮಂಗಂಗಳ ಹಾಂಗೆ ಖುಶಿ ಪಟ್ಟವು!ನಾಳೆಯೇ ಹೋಪಮ್ಮಾ ಹೇಳಿ ಗೌಜಿ ಮಾಡಿದವು!ಅಪ್ಪನೂ ಅಸ್ತು ಹೇಳಿದವು!

     ಬೆರಳೆಣಿಕೆಯಷ್ಟಿಪ್ಪ ಅಂತಹ ಹೋಟೇಲುಗಳಲ್ಲಿ ಯೇವ ಹೋಟೇಲಕ್ಕು ಹೇಳಿ ಎನ್ನತ್ತರೆ ಕೇಳಿದವಿವು. ಆನು ಅದೇ ಪ್ರಶ್ನೆಯ ದೊಡ್ಡ ಮಗಳತ್ತರೆ ಕೇಳಿದೆ.ಎಂತಕೆ ಹೇಳಿರೆ ಅದುವೇ ಎಂಗೊ ನಾಲ್ಕು ಜನಂಗಳ ಪೈಕಿ ರಜ್ಜ ಎಕ್ಸ್ ಪೀರಿಯನ್ಸ್ ಡ್!ಒಂದರಿ ಅದರ ಬೆಸ್ಟ್ ಫ್ರೆಂಡಿನ ಫ್ಯಾಮಲಿ ಒಟ್ಟಿಂಗೆ ಅಂತಹ ಒಂದು ಹೋಟೇಲಿಂಗೆ ಹೋಗಿ ಉಂಡು ಬೈಂದು!ಅದು ಒಂದು ಹೋಟೇಲಿನ ಹೆಸರು ಹೇಳಿತು.ಸರಿ ಅಲ್ಲಿಗೇ ಹೋದೆಯ.ಬಾಗಿಲಿನ ಒಳ ನುಗ್ಗೇಕಾದರೇ ಅಲ್ಲಿಯಾಣ ಸೆಕ್ಯುರಿಟಿ ನೆಗೆಮಾಡಿಕೊಂಡು,"ಬನ್ನಿ ಸರ್,ಬನ್ನಿ ಮೇಡಂ" ಹೇಳಿ ಒಳ ಕರಕೊಂಡು ತಂಪು ತಂಪು ಫ್ರಂಟ್ ಆಫೀಸಿಂಗೆ ಹೋದಪ್ಪಗ ಎನಗಂತೂ ಹಾಯೆನಿಸಿತು!"ಟೇಬಲ್ ಕಾಲಿ ಇಲ್ಲ, ಸ್ವಲ್ಪ ವೇಟ್ ಮಾಡಿ ಸರ್" ಹೇಳಿ ಅಲ್ಲಿಯಾಣ ಸಿಬ್ಭಂದಿ ಸೋಫಾಲ್ಲಿ ಕೂದು ರಜ್ಜ ಹೊತ್ತು ಕಾವಲೆ ಹೇಳಿದ.ಮೃದುವಾದ ಆ ಸೋಫಲ್ಲಿ ಕೂದ ಮತ್ತೆ ಇನ್ನಷ್ಟು ಹಾಯೆನಿಸಿತು ಎನಗೆ,ಮಕ್ಕಳ ಹತ್ತರೆ ಹೇಳಿದೆ!"ಹೂಂ ಅದಕ್ಕೆ ಹೇಳಿದ್ದು ಹೋಪಾ ಹೇಳಿ...!"ಸಣ್ಣ ಮಗಳು ಓರೆ ಕಣ್ಣಿಲಿ ಎನ್ನ ನೋಡಿ ಟೋಂಟು ಕೊಟ್ಟತ್ತು!ಅರ್ಧ ಗಂಟೆ ಕೂದೆಯ.ಹೊಟ್ಟೆಲಿಪ್ಪ ಹುಳುಗೊ ಕೂಗುಲೆ ಶುರುಮಾಡಿದವು."ಎಂಗಳ ತಾಳ್ಮೆಯ ಪರೀಕ್ಷೆ ಮಾಡುತ್ತಿದ್ದವೋ ಹೇಂಗೆ?"ಹೇಳಿ ದೊಡ್ಡ ಮಗಳ ಹತ್ತರೆ ಕೇಳಿದೆ."ಅಷ್ಟು ಡಿಮಾಂಡಮ್ಮಾ ಈ ಹೋಟೇಲಿಂಗೆ,ಅದಕ್ಕೇ ಹೇಳಿದ್ದು ಒಂದರಿ ಹೋಪಾ ಹೇಳಿ...!ಇನ್ನು ಊಟ ಉಂಡು ನೋಡು ಹೇಂಗಿರುತ್ತು ಹೇಳಿ"ಹೇಳಿ ಎನ್ನ ಆಶೆಯ,ಹಸಿವಿನ ಹೆಚ್ಚು ಮಾಡಿಸಿತು!

     ಮತ್ತೈದೇ ನಿಮಿಷ...ಎಂಗಳ ಸರದಿ ಬಂದಪ್ಪಗ ಒಳ ಹೋಗಿ ಕೂದೆಯ. ಟೇಬಲ್ ಮೇಲೆ ೨ ದೊಡ್ಡ ದೊಡ್ಡ ೬ ಪುಟಂಗಳ ಮೆನು ಪುಸ್ತಕ ಕೊಟ್ಟವು!ಒಂದರ ಮಕ್ಕೊ ತೆಗದು ಯೇವೆಲ್ಲಾ ಐಟಂಗಳ ಆರ್ಡರ್ ಮಾಡುದು ಹೇಳಿ ನೋಡುಲೆ ಶುರುಮಾಡಿದವು. "ಅಪ್ಪಾ, ಅಮ್ಮಾ, ಇನ್ನೊಂದು ಪುಸ್ತಕವ ನಿಂಗೊ ಇಬ್ರೂ ನೋಡಿ ಬೇಗ ನಿಂಗೊಗೆ ಎಂತೆಂತ ಬೇಕು ಹೇಳಿ ಸೆಲೆಕ್ಟ್ ಮಾಡಿ..."ಮಕ್ಕೊ ಅಂಬರಪು ಮಾಡಿ ಹೇಳಿದಾಗ ಆನು ಪುಸ್ತಕವ ಕೈಯಲ್ಲಿ ಹಿಡುದು ಓದುಲೆ ಶುರುಮಾಡಿದೆ.ಎಲ್ಲಾ ಇಂಗ್ಲಿಷಿಲೇ! ಸ್ಟಾರ್ ಟರ್ ಸ್, ಸಾಲಾಡ್ಸ್, ಡೆಸರ್ಟ್ಸ್, ನಾರ್ತ್ ಇಂಡಿಯನ್ ತಾಲಿ,ಸೌತ್ ಇಂಡಿಯನ್ ತಾಲಿ,ಸ್ಯಾಂಡ್ ವಿಚಸ್,ಮಿಲ್ಕ್ ಶೇಕ್.......ಹೀಂಗೆ ಗೊಂತಿಪ್ಪ ಹೆಸರುಗಳೊಟ್ಟಿಂಗೆ ಇನ್ನೂ ನೂರೆಂಟು ಬಗೆಯ ಒಂದೂ ಗೊಂತಿಲ್ಲದ ಶಾಕಪಾಕದ ಹೆಸರುಗೊ!ಹೋಟೇಲಿಂಗೆ ಉಂಬಲೆ ಬಪ್ಪವಂಗೆ ಇಂಗ್ಲಿಷ್ ಖಡ್ಡಾಯವಾಗಿ ಗೊಂತಿರಲೇಬೇಕು ಹೇಳಿ ಅಂದುಕೊಂಡೆ.ಎಂಗೊಗೆ ಇಂಗ್ಲಿಷ್ ಫಸ್ಟ್ ಕ್ಲಾಸಾಗಿ ಗೊಂತಿದ್ದರೂ ಅಲ್ಲಿ ಮಾತ್ರ ಒಂದು ಉಪಯೋಗಕ್ಕೆ ಬಯಿಂದಿಲ್ಲೆ!ಇತ್ತೀಚೆಗೆ’ಇಂಗ್ಲಿಷ್ ವಿಂಗ್ಲಿಷ್’ ಸಿನೆಮಾಲ್ಲಿ ಶ್ರೀದೇವಿ ನ್ಯೂಯಾರ್ಕಿಂಗೆ ಹೋದಿಪ್ಪಗ ಇಂಗ್ಲಿಷ್ ಗೊಂತಿಲ್ಲದೇ ಒದ್ದಾಡಿ ಭಂಗ ಬಂದ ಸೀನ್ ನೆಂಪಾಗಿ ಸಣ್ಣಕ್ಕೆ ಬೆಗರಿತು.ವೈಟರ್ ಬಂದಪ್ಪಗ ಎಂಗೊ ಹೇಂಗಪ್ಪಾ ಆರ್ಡರ್ ಮಾಡುದು ಹೇಳಿ ಗ್ರೇಶಿಯೊಂಡು ಇತ್ತೆಯ!ಮಗಳೇ ಈ ತಾಲಿ ಹೇಳಿದರೆ ಎಂತಾ?"ಹೇಳಿ ಕೇಳಿದೆ"ಅಯ್ಯೋ ಅಮ್ಮಾ,ಇಲ್ಲಿ ನಾವು ಒಂದು ಪ್ಲೇಟ್ ಊಟ ಹೇಳಿ ಹೇಳ್ತಿಲ್ಲೆಯಾ ಹಾಂಗೇ ಉತ್ತರ ಭಾರತಲ್ಲೆಲ್ಲಾ ತಾಲಿ ಹೇಳಿದರೆ ಅದೇ ಅರ್ಥ"ಹೇಳಿ ಹೇಳಿತು!"ಮಕ್ಕಳೇ,ಈ ಪುಸ್ತಕವ ಓದಿ ತಿಳ್ಕೊಳ್ಳೇಕಾರೆ ಎಟ್ ಲೀಸ್ಟ್ ಒಂದು ಗಂಟೆಯಾದರೂ ಬೇಕು,ಹಶು ತಡವಲೆಡಿತ್ತಿಲ್ಲೆ!ನಿಂಗೊ ಇಬ್ರಿಂಗು ಎಂತ ಅಕ್ಕೋ ಅದೇ ಎಂಗೊಗುದೇ ಅಕ್ಕು ಹೇಳಿ ಹೇಳಿದೆ."ಅದು ಹಾಂಗಲ್ಲಮ್ಮಾ,ಈ ಪುಸ್ತಕಲ್ಲಿಪ್ಪದರ ಓದಿ ಮೊದಾಲು ಕಾಂಬಿನೇಷನ್ ಮಾಡಿ ಮತ್ತೆ ಆರ್ಡರ್ ಮಾಡುದು ಇಲ್ಲಿಯಾಣ ಕ್ರಮ,ಕಮಾನ್ ಹರಿ ಅಪ್..."ಮಗಳು ಹೇಳಿಯೊಂಡಿದ್ದಾಂಗೆ ವೈಟರ್ ಬಕ್ಕು, ಅವು ಲಾಯ್ಕಲ್ಲಿ ಇಂಗ್ಲಿಷಿಲ್ಲಿ ಕೇಳ್ತವು ಎಂತೆಲ್ಲಾ ಬೇಕು ಹೇಳಿ.....!"ಮಗಳು ಹೇಳಿಯೊಂಡಿದ್ದಾಂಗೆ ವೈಟರ್ ಪ್ರತ್ಯಕ್ಷ್ಯ!ಒಂದು ಸಣ್ಣ ಪುಸ್ತಕ,ಪೆನ್ ಹಿಡಿದು,"ಎಸ್ ಸರ್ ಓರ್ಡರ್ ಪ್ಲೀಸ್" ಹೇಳಿ ಹೇಳಿಯಪ್ಪಗ ಇವು ಉತ್ತರ ಕೊಡದಿಪ್ಪ ಕಾರಣ ಆನೇ ಮುಂದುವರದು ಹೇಳಿದೆ"ಎರಡು ಸೌಥ್ ಇಂಡಿಯನ್ ತಾಲಿ" ದಕ್ಷಿಣ ಭಾರತದ್ದಾದರೆ ಲಾಯ್ಕಿಕ್ಕು ಹೇಳಿ ಅಂದಾಜು ಮಾಡಿ ಹೇಳಿದೆ!ಈ ’ತಾಲಿ’ ಹೇಳಿ ಆ ಊತ್ತರ ಭಾರತಲ್ಲಿ ಚಾಲ್ತಿಯಲ್ಲಿಪ್ಪ ಶಬ್ದವ ಸೌಥ್ ಇಂಡಿಯನ್ ಒಟ್ಟಿಂಗೆ ಎಂತಕೆ ಸೇರಿಸಿದವು ಹೇಳಿ ಇಂದಿಗೂ ಗೊಂತಿಲ್ಲೆ ಎನಗೆ!ದೊಡ್ಡ ಮಗಳು ಹೇಳಿತು," ನಾರ್ತ್ ಇಂಡಿಯನ್ ತಾಲಿ ಒಂದು"ಹೇಳಿ."ಮತ್ತೊಂದು ಎಕ್ಸ್ ಟ್ರಾ ಪ್ಲೇಟ್" ಹೇಳಿ ಆರ್ಡರ್ ಮಾಡಿದವಿವು!ಕಾರಣ ಸಣ್ಣ ಮಗಳು ತಿಂಬದು ಅಷ್ಟಕ್ಕಷ್ಟೇ,ಎಂಗಳ ಪಾಲಿಂದರಿಂದಲೇ ಅದಕ್ಕೂ ರಜ್ಜ ಕೊಟ್ಟರೆ ಸಾಕು,ಸುಮ್ಮಗೆ ಅದಕ್ಕೂ ಊಟ ಆರ್ಡರ್ ಮಾಡಿ ವೇಷ್ಟಪ್ಪದು ಬೇಡಾ ಹೇಳಿ ಉದ್ದೇಶ ಅಷ್ಟೇ.ಮಕ್ಕೊಗೆ ’ಎಕ್ಸ್ ಟ್ರಾ’ ಪ್ಲೇಟ್ ಆರ್ಡರ್ ಮಾಡಿದ್ದು ಖುಷಿ ಆಯಿದಿಲ್ಲೆ.ಸಣ್ಣ ಮಗಳು ಹೇಳಿತು,"ಬೇರೆ ಹೋಟೇಲುಗಳಲ್ಲಾದರೆ ಪರ್ವಾಗಿತ್ತಿಲ್ಲೆ,ಇಲ್ಲಿ ಫುಲ್ ಆರ್ಡರ್ ಕೊಡೇಕು...ಒಂದೂ ಗೊಂತಾವುತ್ತಿಲ್ಲೆ ನಿಂಗೊಗಿಬ್ರಿಂಗೆ...!"ಹೇಳಿ.ವೈಟರ್ ಪುಸ್ತಕಲ್ಲಿ ಎಲ್ಲಾ ಬರಕೊಂಡು ಕೇಳಿದ,"ಮಿನರಲ್ ವಾಟರ್ ಆರ್ ನಾರ್ಮಲ್ ವಾಟರ್...ಹಾಟ್ ಆರ್ ಕೋಲ್ಡ್?" ಬ್ಯಾಗಿಲಿ ಒಂದು ಲೀಟರು ಮನೆಂದ ತಂದ ನೀರೇ ಇತ್ತಿದು, ಹಾಂಗಾದ ಕಾರಣ ಮಗಳ ಹತ್ತರೆ ಹೇಳಿದೆ,ನೀರಿದ್ದಲ್ಲದಾ,ನೀರು ಬೇಡಾ ಹೇಳಿ.ಅದು ಹೇಳಿತು,"ಅಮ್ಮಾ,ಆ ಬಾಟ್ಲಿಯ ಹೆರ ತೆಗೆದು ಮರ್ಯಾದೆ ಕಳಕೊಳ್ಳೇಡ,ಇಲ್ಲೆಲ್ಲಾ ಆ ಕ್ರಮ ಇಲ್ಲೆ!"ಹೇಳಿ ವೈಟರ್ ನತ್ತರೆ ಸ್ಟೈಲಾಗಿ ಹೇಳಿತು,"ವಿ ವಾಂಟ್ ಮಿನರಲ್ ವಾಟರ್....ಕೋಲ್ಡ್..ಟೂ ಬಾಟಲ್ಸ್" ಹೇಳಿ!ಊಟಕ್ಕೆ ಸಂಬಂಧಪಟ್ಟ ವೈಟರಿನ ಉಪ ಪ್ರಶ್ನೆಗಳಲ್ಲಿ ಗೊಂತಿಪ್ಪದಕ್ಕೆಲ್ಲಾ ’ಎಸ್’ ಗೊಂತಿಲ್ಲದ್ದಕ್ಕೆಲ್ಲಾ ’ನೋ’ಹೇಳಿ ಹೇಂಗೋ ಸುಧರಿಸಿ ಆರ್ಡರ್ ಕೊಟ್ಟು ಕಳಿಶಿದೆಯಾ.ಇಷ್ಟೆಲ್ಲಾ ಅಪ್ಪಗ ಒಂದು ಇಂಟರ್ ವ್ಯೂವಿಂಗೆ ಹೋದ ಅನುಭವ ಆಗಿತ್ತು!ಮಕ್ಕೊಗೆ ರಜ್ಜ ಹೊತ್ತು ಪುಸ್ತಕ ನೋಡಿ ಲಾಯ್ಕಿಲಿ ಕಾಂಬಿನೇಷನ್ ಮಾಡಿ ಆರ್ಡರ್ ಮಾಡೇಕು ಹೇಳಿ ಇತ್ತಿದು.ಪಾಪ ಅವು ಅದರ ಎಂಗಳ ಎದುರು ಹೇಳುವ ಧೈರ್ಯ ಮಾಡಿದ್ದಿಲ್ಲೆ ಹೇಳಿ ಕಾಣ್ತು ಎಂಗಳ ಹಶು,ಅರ್ಜೆಂಟೆಲ್ಲಾ ಗಮನಿಸಿ!

ವೈಟರ್ ಹೋಗಿ ೫ ನಿಮಿಷದ ಮತ್ತೆ ಒಂದು ಬೋಗುಣಿಲಿ ಟೊಮೇಟೋ ಸೂಪ್ ತಂದು ಮಡುಗಿದ.ಈಗ ಎಂತರ ಮಾಡುದು?ಒಬ್ಬನೇ ತಿಂಬಲಾವುತ್ತಾ?ತಿಂತರೆ ಆರು ತಿಂಬದು ಹೇಳಿ ಮೌನವಾಗಿ ಎಲ್ಲರ ಒಳವೂ ಪ್ರಶ್ನೆ ಮೂಡಿತು!"...ಅದಕ್ಕೇ ಹೇಳಿದ್ದು ಎನಗುದೇ ಊಟ ಆರ್ಡರ್ ಮಾಡೇಕಾತು ಹೇಳಿ...,ಎನಗೆ ಬರೀ ಎಕ್ಸ್ ಟ್ರಾ ಪ್ಲೇಟ್ ಮಾತ್ರ ಅಲ್ಲದಾ ಹೇಳಿದ್ದು?!ಅಕ್ಕ ಆರ್ಡರ್ ಮಾಡಿದ’ನಾರ್ತ್ ಇಂಡಿಯನ್ ತಾಲಿ’ಯ ಒಂದು ಭಾಗ ಇದು,ಇದು ಅಕ್ಕಂದು,ಎನಗೆಲ್ಲಿದ್ದು?ಇದರೆಲ್ಲಾ ಪ್ಲೇಟಿಲಿ ಹಾಕಿ ತಿಂಬಲೆಡಿತ್ತಾ...."ಹೇಳಿ ಸಣ್ಣ ಮಗಳು ಹೇಳಿಯೊಂಡಿಪ್ಪಗ ಅದರ ಕಣ್ಣ ಕರೇಲಿ ನೀರು ಬಂದು ನಿಂದತ್ತು. ಆನು ಹೇಳಿದೆ,"ಹೇಂಗೂ ಟೇಬಲ್ ಮೇಲೆ ಪ್ರತಿಯೊಬ್ಬಂಗೂ ಎರಡೆರಡು ಸ್ಪೂನ್ ಇದ್ದಲ್ಲದಾ, ನಿಂಗೊ ಇಬ್ರೂ ಅದರಲ್ಲಿ ತೆಗದು ಕುಡೀರಿ" ಹೇಳಿ!ದೊಡ್ಡ ಮಗಳು ಹೇಳಿತು,"ಇಲ್ಲಿ ಹಾಂಗೆಲ್ಲಾ ಮಾಡ್ತ ಕ್ರಮ ಇಲ್ಲೆಮ್ಮಾ...ಛೇ ಹತ್ತರಾಣ ಟೇಬಲಿನವು ನಮ್ಮನ್ನೇ ನೋಡ್ತಾ ಇದ್ದವು...,ಇದೆಂತರ ನಾಲ್ಕು ಜನಂಗಕ್ಕೆ ಒಂದೇ ಬೌಲಿಲಿ ಸೂಪಾ ಹೇಳಿ!"ಹಾಂಗೇ ಹೇಳಿಯೊಂಡು ಬೌಲಿಂಗೆ ಮಕ್ಕೊ ಸ್ಪೂನ್ ಹಾಕಿ ಒಂದೊಂದು ಚಮಚ ಕುಡುದವು ಮತ್ತೆ ಹೇಳಿದವು,"ಅಪ್ಪಾ,ಅಮ್ಮಾ,ನಿಂಗಳೂ ಟೇಸ್ಟ್ ನೋಡಿ,ಎಂಜಲಾಯಿದಿಲ್ಲೆ ಹೇಳಿ!...." ಅಂಬಗಲೇ ಅಂದಾಜು ಮಾಡಿದೆ ಮಕ್ಕೊಗದು ಮೆಚ್ಚಿದ್ದಿಲ್ಲೆ ಹೇಳಿ!ಸರಿ ಇವುದೇ ಆನುದೇ ಒಂದೊಂದು ಸ್ಫೂನಿಲಿ ಕುಡುದೆಯಾ....ಒಂದು ಚೂರೂದೇ ಲಾಯ್ಕಿತ್ತಿಲ್ಲೆ!ಇವು ಹೇಳಿದವು,ನೀನು ಮನೆಲಿ ಮಾಡುವ ಸೂಪೇ ಸೂಪರ್ ಹೇಳಿ!ಕುಡಿವಲೆಡಿಯದ್ದೇ ಸ್ಪೂನಿನ ಕೆಳ ಮಡುಗಿ ಮಕ್ಕೊಗೆ ಕುಡಿವಲೆ ಹೇಳಿದೆಯ.ಆದರೆ ಅವಕ್ಕದು ಬೇಡ!ಹತ್ತರಿಪ್ಪವ್ವೆಲ್ಲಾ ಸಮಾ ಕುಡುದುಕೊಂಡು,ನಕ್ಕಿಕೊಂಡಿತ್ತವು!ಅದು ಹೇಂಗಾರು ಮೆಚ್ಚುತ್ತೋ ಹೇಳಿ ಗ್ರೇಶಿಯೇ ವಾಕರಿಕೆ ಬಂದ ಹಾಂಗತು ಎಂಗೊಗೆ."ಅಮ್ಮಾ ಇದರ ಮೊದಾಲು ಕುಡುದು ಮುಗುಶೇಕಾದ್ದು ಕ್ರಮ ಹೇಳಿತು ಮಗಳು!ಎಲ್ಲರೂ ಎನಗೆ ಬೇಡ,ಎನಗೆ ಬೇಡ ಹೇಳಿ ಹೇಳಿಯೊಂಡಿಪ್ಪಗಲೇ ದೊಡ್ಡ ಮಗಳು ಆರ್ಡರ್ ಮಾಡಿದ ನಾರ್ತ್ ಇಂಡಿಯನ್ ತಾಲಿ ಬಂದತ್ತು,ಮತ್ತೊಂದು ಕಾಲಿ ಪ್ಲೇಟ್ ಸಣ್ಣ ಮಗಳಿಂಗೆ!ಇಬ್ರೂ ಪಾಲು ಮಾಡಿಯೊಂಡವು,ಮತ್ತೆ ಎಂಗೊಗೆ ರುಚಿ ನೋಡುಲೆ ಹೇಳಿದವು.ಅಂಬಗ ಎಂಗಳ ದಕ್ಷಿಣ ಭಾರತದ ’ತಾಲಿ’ ಬಂತು!ಇವರ ಪ್ಲೇಟಿಂದ ಪೂರೀ ಹಾಂಗೇ ಎನ್ನ ಪ್ಲೇಟಿಂದ ಚಪಾತಿಯ ಅತ್ತಿತ್ತ ಹಂಚಿಕೊಂಡೆಯ.ಇಬ್ರಿಂಗೂ ಸಣ್ಣ ಸಣ್ಣ ಗಿಣ್ಣಾಲಿಲಿ ಒಂದೊಂದು ಮುಷ್ಠಿ ಅಶನದೇ ಇತ್ತಿದು!ಸುಮಾರು ಹತ್ತು ಗಿಣ್ಣಾಲುಗಳಲ್ಲಿ ಅದೆಂತೆಂತೋ ಅಶನಕ್ಕೆ ಕೂಡಿಕೊಂಬಲೆ ಹೇಳಿ ಬೇರೆ ಬೇರೆ ಐಟಂಗೋ!ಅಷ್ಟರ ಎಲ್ಲಾ ಹಾಕಿ ರುಚಿ ನೋಡುಲೆ ಅವು ಕೊಟ್ಟ ಅಶನ ಸಾಲ! ಪುನ: ಅಶನ ಆರ್ಡರ್ ಮಾಡದ್ದೇ ಕೆಲವುದರೆಲ್ಲಾ ಹಾಂಗೇ ತಿಂದೆಯ!ಮಕ್ಕೊ ಹೇಳಿಯೊಂಡೇ ಇತ್ತವು ಹತ್ತರಾಣವು ನಮ್ಮ ನೋಡಿ ಮಾಜಾ ತೆಕ್ಕೊತ್ತಾ ಇದ್ದವು ಹೇಳಿ!ನಮ್ಮ ಊಟವ ನಾವು ಹೇಂಗೆ ಬೇಕಾದರೂ ಮಾಡ್ತು,ಎಂತ ಬೇಕಾದರೂ ಮಾಡ್ಲಿ ಅವು,ನಮಗವರ ಪರಿಚಯ ಇಲ್ಲೆನ್ನೆ,ನಾಳಂಗೆ ಅವರ ಮೋರೆ ನಾವು ನೋಡ್ಲಿಲ್ಲೆನ್ನೇ ಹೇಳಿ ಎಂಗೊ ಇಬ್ರೂ ಸಮರ್ಥಿಸಿಕೊಂಡು ಉಂಡೊಂಡಿತ್ತೆಯ.ಮಕ್ಕಳೂ ತಿಂದೊಂಡಿತ್ತವು.ಇವು ರಜ್ಜ ಹೊತ್ತಪ್ಪಗ ಪಾಯಸ ಬಡಿಸಿಯೊಂಡು ’ಸುರ್ ಪುರ್ ಸುರ್ ಪುರ್’ಹೇಳಿ ಶಬ್ದ ಮಾಡಿಯೊಂಡು ಸುರಿವಲೆ ಶುರುಮಾಡಿದವು! "ಅಪ್ಪಾ ಇಲ್ಲಿ ಮನೇಲಿ, ಮದುವೆ,ಜೆಂಬರಲೆಲ್ಲಾ ತಿಂದ ಹಾಂಗೆ ಫಾಸ್ಟಾಗಿ,ಸೌಂಡ್ ಮಾಡಿಯೊಂಡು ತಿಂಬ ಕ್ರಮ ಇಲ್ಲೆ!...ನಿಧಾನವಾಗಿ ಸೌಂಡಿಲ್ಲದ್ದೇ ಸ್ಪೂನಿಲಿ ಸ್ಟೈಲಾಗಿ ತಿನ್ನೇಕು ಗೊಂತಿದ್ದಾ...."ಹೇಳಿ ಹತ್ತರಾಣ ಟೇಬಲ್ ನವರ ತೋರಿಸಿದವು.ಒಂದರಿ ಸುತ್ತ ನೋಡಿಯಪ್ಪಗ ಮಕ್ಕೊ ಹೇಳಿದ್ದು ಸರಿ ಹೇಳಿ ಕಂಡತ್ತು!ಅಂತೂ ಇಂತೂ ಉಂಡಾತು!ಇವು ಹೇಳಿಯೊಂಡೇ ಇತ್ತವು ಮಕ್ಕಳ ಹತ್ತರೆ,"ಇಲ್ಲಿಯಾಣ ಒಂದು ಅಡುಗೆದೇ ಅಮ್ಮನ ಕೈಅಡುಗೆಯ ರುಚಿಗೆ ಬಯಿಂದಿಲ್ಲೆ.ಬಪ್ಪಲೂ ಇಲ್ಲೆ.ಅಮ್ಮನಿಗೆ ಅಮ್ಮನೇ ಸಾಟಿ ಹೇಳಿ!ಮತ್ತೆ ಪುನ: ವೈಟರ್ ಬಂದ ಡೆಸರ್ಟ್ಸ್ ಯಾವುದಕ್ಕು ಹೇಳಿ ಕೇಳಿಯೊಂಡು! ದೊಡ್ಡ ಮಗಳು ಐಸ್ಕ್ರೀಂ ಹೇಳಿದರೆ, ಸಣ್ಣದು ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ಹೇಳಿತು. ಎಂಗೊಗೆ ಎಂತ ಬೇಡ ಹೇಳಿ ಹೇಳಿದೆಯಾ. ಮಕ್ಕೊ ಈಗ ರಜ್ಜ ಚುರುಕಾದವು.ಅವರ ಐಸ್ ಕ್ರೀಂನ ಪಾಲಾಗಲೀ,ಮಿಲ್ಕ್ ಶೇಕಿನ ಪಾಲಾಗಲೀ ಎಂಗೊಗಿಬ್ರಿಂಗೂ ಕೊಡ್ತಿಲ್ಲೆಯಾ,ನಿಂಗೊಗೆಂತಾರು ಬೇಕಾದ್ರೆ ಆರ್ಡರ್ ಮಾಡಿ,ಹತ್ತರಾಣ ಟೇಬಲ್ಲಿನವು ಇವೆಂತ ಕುರೆ ಕಟ್ಟುದು ಹೇಳಿ ಇನ್ನೂದೇ ಎಂಗಳ ನೋಡಿ ನೆಗೆ ಮಾಡುದು ಬೇಡ ಹೇಳಿ ಖಡಾಖಂಡಿತವಾಗಿ ಹೇಳಿಬಿಟ್ಟವು!ಅಲ್ಲಿ ಅವು ಕೊಟ್ಟ ಒಂದು ಮುಷ್ಠಿ ಅಶನ,ರಜ್ಜ ಪಾಯಸ ತಿಂದು ಹೊಟ್ಟೆ ತುಂಬದ್ದರುದೇ ಇನ್ನೆಂತದೂ ಬೇಡ,ಸಾಕಪ್ಪಾ ಸಾಕು ಹೇಳಿ ಅನ್ನಿಸಿಬಿಟ್ಟಿತ್ತು!ಮಕ್ಕೊಗೆ ಐಸ್ಕ್ರೀಂ, ಮಿಲ್ಕ್ ಶೇಕ್ ಬಂತು. ಅವು ಎಂಗೊಗೆ ಕೊಡ್ತಿಲ್ಲೆ ಹೇಳಿದರುದೇ ಟೇಸ್ಟ್ ನೋಡುಲೆ ಹೇಳಿದವು ಪಾಪ!ಈಗ ವೈಟರ್ ನಾಲ್ಕು ಸಣ್ಣ ಸಣ್ಣ ಗಿಣ್ಣಾಲುಗಳಲ್ಲಿ ಉಗುರು ಬೆಶ್ಚಗೆ ನೀರು,ಅದರೊಳ ಕಾಲು ಕಡಿ ನಿಂಬೆ ತುಂಡು ಹಾಕಿ ತಂದ ಎಂಗೊಗೆ ಕೈ ತೊಳವಲೆ ಹೇಳಿ.ಈ ನಾಲ್ಕು ತುಂಡುಗಳ ಸೇರಿಸಿದರೆ ಒಂದು ನಿಂಬೆಹುಳಿ!ಛೇ ನಾಲ್ಕು ಗ್ಲಾಸ್ ಶರಬತ್ತಾವುತ್ತಿತ್ತನೇ ಹೇಳಿ ಮನಸ್ಸಿಲ್ಲೇ ಗ್ರೇಶಿಕೊಂಡೆ.ಒಂದು ರಜ್ಜ ಹೊತ್ತಪ್ಪಗ ವೈಟರ್ ಒಂದು ಫೈಲಿನಾಕಾರದ ಪುಸ್ತಕ ತಂದ.ಅದರೊಳ ಒಂದು ಸಣ್ಣ ಬಿಲ್,ದೊಡ್ಡ ಮೊತ್ತದ್ದು!ಬಿಲ್ ಎದೆಯ ’ಝಲ್’ ಅನ್ನಿಸಿತು!೬೦೦ ರೂಪಾಯಿ,ಅದರಲ್ಲಿಮಿನರಲ್ ವಾಟರ್ ೨ ಬಾಟ್ಲಿಗುದೇ ತಲಾ ೨೫ ರೂಪಾಯಿ ಹಾಕಿದ್ದರ ಕಂಡು ಟೇಬಲ್ ಮೇಲಿದ್ದ ಬಾಟಲುಗಳ ನೀರು ಕುಡುದು ಕಾಲಿ ಮಾಡುಲೆ ಹೇಳಿದೆ ಇವರತ್ತರದೇ,ಮಕ್ಕೊಗುದೇ,ಹಾಂಗೇ ಆನುದೇ ಗಟಗ್ಟ ಕುಡುದೆ!ಬಿಲ್ ತಪ್ಪಾಗ ವೈಟರ್ ಅದರೊಟ್ಟಿಂಗೆ ಸಿಹಿ ಇಪ್ಪ ಸೋಂಪು ತೈಂದ, ೨ ಸಣ್ಣ ಗಿಣ್ಣಾಲಿಲಿ. ಆದರೆ ಅದು ಮಾತ್ರ ತುಂಬ ಇತ್ತಿದು!ಆನು ಹೇಳಿದೆ,"ಇದನ್ನೆಲ್ಲಾ ತಿಂದು ಕಾಲಿ ಮಾಡಿದರುದೇ ೬೦೦ ರೂಪಾಯಿ ಬಿಲ್ ಹೆಚ್ಚೇ ಆತು"ಹೇಳಿ!ಮಕ್ಕಳದ್ದೊಂದೇ ಗೌಜಿ,"ಹಾಂಗೆಲ್ಲಾ ಬಿಲ್ ಜಾಸ್ತಿ ಆತು..." ಹೇಳಿ ಎಲ್ಲಾ ಹೇಳ್ತ ಕ್ರಮ ಇಲ್ಲಿಲ್ಲೆ ಹೇಳಿ.....! ಅವ ಬಿಲ್ಲಿಲಿ ನಮೂದಿಸಿದಷ್ಟು ಪೈಸೆ ಕೊಟ್ಟು ಕಳಿಸಿದೆಯ ವೈಟರಿನ!ಪುನ: ಎಂಗಳ ಟೇಬಲಿನ ಹತ್ತರೆ ಬಂದು ರಶೀದಿ ಕೊಟ್ಟು ಅವ ಹೋದ ನಂತರ ಎಂಗೊಲ್ಲಾ ಕುರ್ಚಿಂದ ಎದ್ದೆಯಾ. ಮಕ್ಕೊ ಹೇಳಿದವು,"ಅಪ್ಪಾ ಇಲ್ಲಿಂದೆಲ್ಲಾ ಹಾಂಗೇ ಹೋವುತ್ತ ಕ್ರಮ ಇಲ್ಲೆ,ಟಿಪ್ಸ್ ಮಡುಗೇಕು ಹೇಳಿ!ಸರಿ ಹೇಳಿ ಇವು ೫ ರೂಪಾಯಿ ತೆಗದು ಮಡುಗುಲೆ ಹೆರಟವು!"ಅಪ್ಪಾ ಅಟ್ ಲೀಸ್ಟ್ ಮಿನಿಮಮ್ ೨೦ ರೂಪಾಯಿಯನ್ನಾದರೂ ಮಡುಗೇಕು ಗೊಂತಿದ್ದಾ? ಕಳುದ ಸಲ ಎನ್ನ ಫ್ರೆಂಡಿನ ಫ್ಯಾಮಲಿ ಒಟ್ಟಿಂಗೆ ಬಂದಿಪ್ಪಾಗ ಅವು ೫೦ ರೂಪಾಯಿ ಮಡುಗಿತ್ತವು ಗೊಂತಿದ್ದಾ....." ಸರಿ ಮಕ್ಕಳೇ ಈ ಲೋಕಲ್ಲಿ ಇನ್ನೂದೇ ಕಲಿಯೇಕಾದ್ದು ಸುಮಾರಿದ್ದು ಹೇಳಿಯೊಂಡು,ನಮ್ಮ ಮನಸ್ಸಿಂಗೆ ಸಾಕು ಅನ್ನಿಸಿದ ಹತ್ತು ರೂಪಾಯಿಯ ಆ ಪುಸ್ತಕಾಕಾರದ ಫೈಲಿನೆಡೆಲಿ,ಮುಚ್ಚಿ ಮಡುಗಿಕ್ಕಿ ಹೆರ ಬಂದೆಯ. ವಾಪಸ್ಸು ಹೋಯಿಯೊಂಡಿಪ್ಪಾಗ ದಾರಿಲಿ ಎನ್ನ ಹತ್ತರೆ ಕೇಳಿದವಿವು,"ಉದಿಯಪ್ಪಗ ನೀನು ಮಾಡಿದ ಇಡ್ಲಿ ಒಳುದ್ದಲ್ಲದಾ ಮನೇಲಿ? ಎನಗೆ ಹೋಗಿ ತಿನ್ನೇಕು, ಹಶು ಇನ್ನೂದೇ ಹೋಯಿದಿಲ್ಲೆ.."ಹೇಳಿ!!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು

Tuesday, February 24, 2015

ಸಿಂಗಾರದ ಹೊರೆಯೇಕೆ...-ಹವ್ಯಕ ವಾರ್ತೆ ಫೆಬ್ರವರಿ ೨೦೧೫ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಸಿಂಗಾರದ ಹೊರೆಯೇಕೆ...!?


ಈ ಡ್ರೆಸ್‍ಗಳ ಬಗ್ಗೆ,ತಲೆಕಸವಿನ ಹಲವು ನಮೂನೆ ಸ್ಟೈಲುಗಳ ಬಗ್ಗೆ, ಮೋರೆಯ ಅಂದ,ಚೆಂದ ಮಾಡ್ಸುದರ ಬಗ್ಗೆ ಕಾಳಜಿ ವಹಿಸುತ್ತ ಜೆನರ ನೋಡಿದರೆ ಆಶ್ಚರ್ಯ ಆವುತ್ತು! ಇಂತದ್ದಕ್ಕೆಲ್ಲಾ ಇವೆಲ್ಲಾ ಇಷ್ಟು ಸಮಯವ ಹೇಂಗೆ ಮಾಡಿಕೊತ್ತವು ಹೇಳಿ ಎಷ್ಟೋ ಸರ್ತಿ ಆಲೋಚನೆ ಆಯಿಕ್ಕೊಂಡಿರ‍್ತು! ಆನು ಉದಿಯಪ್ಪಗ ಎದ್ದಿಕ್ಕಿ ರಜ್ಜ ಕೆಲಸಂಗಳ ಮುಗುಶಿಕ್ಕಿ ಲಾಯ್ಕಕ್ಕೆ ಮಿಂದು ಒಂದು ತೊಳದು ಕ್ಲೀನಿಪ್ಪ ಚೂಡೀದಾರನ್ನೋ, ಸೀರೆಯನ್ನೋ ಹಾಕಿಯೊಂಡು, ಮೋರಗೆ ರಜ್ಜ ಪೌಡರ್ ಹಾಕಿದಾಂಗೆ ಮಾಡಿ ತೊಗರೀಬೇಳೆ ಗಾತ್ರದ ಒಂದು ಕೆಂಪು ಸ್ಟಿಕ್ಕರ್ ಬಿಂದಿಯ ಹಣೆಗೆ ಅಂಟಿಸಿ, ತಲೆಯ ಲಾಯ್ಕಲ್ಲಿ ಬಾಚಿ ಹೆಗಲಿಂದ ರಜ್ಜ ಕೆಳಂಗೆ ಇಪ್ಪಷ್ಟೂ ತಲೆಕಸವಿನ  ಸೇರಿಸಿ ಒಂದು ದೊಡ್ಡ ಕಪ್ಪು ರಬ್ಬರ್ ಬ್ಯಾಂಡ್ ಹಾಕಿ ಮಡಿಸಿ ಕಟ್ಟಿದರೆ ಎನ್ನ ಅಲಂಕಾರ ಮುಗುತ್ತು! ಆಫೀಸು, ಮನೆ, ಬ್ಯಾಂಕಿಂಗೆ ಪೈಸೆ ಕಟ್ಟುಲೋ, ತೆಗೆವಲೋ, ಮಕ್ಕಳ ಸಂಗೀತ, ಡ್ಯಾನ್ಸ್ ಕ್ಲಾಸಿಂಗೆ ಬಿಡ್ಲೋ, ಅಂಗಡಿಗೆ ಸಾಮಾನು ತಪ್ಪಲೆ ಹೋಪಾಗಲೋ.....ಎಲ್ಲಾ ಕಡೆಂಗೂ ಅದೇ ಡ್ರೆಸ್, ಅದೇ ಕೆಂಪು ದೊಡ್ಡ ಬಿಂದಿ, ಅದೇ ತಲೆಕಸವಿನ ಸ್ಟೈಲು....ಒಟ್ಟಾರೆ ಹೇಳ್ತರೆ ಅದೇ ಅವತಾರ! ಆ ಡ್ರೆಸ್ಸಿನ ಬದಲು ಮಾಡುದು ಇರುಳಪ್ಪಗ ಮಿಂದಿಕ್ಕಿ ನೈಟಿ ಹಾಕಿಕೊಂಬಗ ಮಾಂತ್ರ! ಅಂಬಗಂಬಗ ವಸ್ತ್ರ ಬದಲು ಮಾಡುದು, ಅಲಂಕಾರ ಮಡಿಕೊಂಬದು ಎನ್ನ ಕೈಯಲ್ಲಾಗದ ಕೆಲಸಂಗೊ! ಹಾಂಗೆ ಆನಿದ್ದೆ ಹೇಳಿ ಎನ್ನಾಂಗೆ ಎಲ್ಲೋರೂ ಇರೇಕು ಹೇಳಿ ಹೇಳುತ್ತ ಜೆನ ಆನಲ್ಲ! ಹಾಂಗೆಲ್ಲಾ ಅಲಂಕಾರ ಮಾಡಿಯೊಳ್ಳಿ ಹೇಳಿ ಪ್ರೋತ್ಸಾಹ ಮಾಡುವ ಜೆನವೂ ಆನಲ್ಲ! ಚೆಂದಕ್ಕೆ ಡ್ರೆಸ್ ಮಾಡಿದವರ ನೋಡ್ಲೆ ಮಾಂತ್ರ ಎಂತದೇ ಹೇಳಿ ಎನಗಂತೂ ಕುಶಿ ಆವುತ್ತು! ಎನ್ನಂತಾ ನಮೂನೆಯವ್ವು ಬೇಕಾಷ್ಟು ಜೆನಂಗ ಇದ್ದವು ಸಮಾಜಲ್ಲಿ! ಮದುವೆಗೆ, ಪೂಜೆಗೆ, ಇತ್ಯಾದಿ ಕಾರ್ಯಕ್ರಮಂಗೊಕ್ಕೆ ಹೋಪಾಗ ಒಳ್ಳೆ ಡ್ರೆಸ್ ಹಾಕಿಕಾ ಹೇಳಿ ಮನೆಲಿ ಆರಾದರೂ ಒತ್ತಾಯ ಮಾಡಿದರೆ ಆನು ಹೇಳುದಿಷ್ಟೇ,"ಎನಗೆ ಸರಳವಾಗಿಪ್ಪಲೆ ಇಷ್ಟ, ಪ್ಲೀಸ್ ಎನ್ನಷ್ಟಕ್ಕೆ ಎನಗಿಷ್ಟದ ಹಾಂಗಿಪ್ಪಲೆ ಬಿಡಿ, ಹರುದ್ದರ, ಕೊಳಕ್ಕಾದ್ದರ ಹಾಕುತ್ತಿಲ್ಲೆನ್ನೇ ಆನು! ನಿಂಗೊಲ್ಲಾ ಒತ್ತಾಯ ಮಾಡುದೂ, ಕೆಪ್ಪೆಯ ತಕ್ಕಡಿ ಮೇಲೆ ಕೂರುಸುದೂ ಎರಡೂ ಒಂದೇ!" ಹೇಳಿ ನೆಗೆ ಮಾಡಿಕೊಂಡು ಹೇಳಿ ತಪ್ಪಿಸಿಕೊಂಡುಬಿಡ್ತೆ! ಅಂಬಗ ಅವ್ವೆಲ್ಲಾ, "ನಿನಗೆ ಹೇಳುದು ದಂಡ" ಹೇಳಿ ಮೋರೆಯ ತಿರುಗಿಸಿ ಹೋಗಿಬಿಡ್ತವು. ಯಾವ ವಿಷಯವೇ ಇರಲಿ, ಆರು ಎಷ್ಟೇ ಸಲಹೆ, ಸೂಚನೆಗಳ ಕೊಟ್ಟರೂ ಅಂತಿಮ ತೀರ್ಮಾನ ನಮ್ಮದೇ ಆದರೆ ಮಾಂತ್ರ ತೃಪ್ತಿ ಇರ‍್ತಲ್ಲದಾ?!



     ನಮ್ಮ ಸಮಾಜಲ್ಲಿ ಮೋರೆ ನೋಡಿ, ಧರಿಸಿದ ವಸ್ತ್ರವ ನೋಡಿ ಮಣೆ ಹಾಕುವವ್ವು ಬೇಕಾದಷ್ಟು ಜೆನಂಗ ಇದ್ದವು! ಎನಗೊಂದು ನಾಲ್ಕು ಜೆನ ಫ್ರೆಂಡುಗೊ ಇದ್ದವು. ಅವ್ವು ಇದುವರೆಗೂ ಎನ್ನ ಸರಳತೆಯಿಂದಾಗಿ ಎನ್ನಂದ ದೂರ ಆಯಿದವಿಲ್ಲೆ ಹೇಳುದು ಎನ್ನ ಜೀವನಲ್ಲಿ ಅತ್ಯಂತ ಖುಷಿಯ ವಿಚಾರ. ಅವೆಲ್ಲಾ ಅತೀ ಶೃಂಗಾರ ಮಾಡಿಕೊಳ್ಳದ್ದರೂದೇ ಎನ್ನಷ್ಟು ಶೃಂಗಾರ ಮಾಡಿಕೊಂಬದರ ತಾತ್ಸಾರ ಮಡುವ ಜೆನಂಗ ಅಂತೂ ಅಲ್ಲ. ಕಣ್ಣುಗಳ ಹುಬ್ಬಿನ ಕಾಮನಬಿಲ್ಲಿನ ಹಾಂಗೆ ಮಾಡಿಯೊಂಡು, ತಲೆ ಕಸವಿನ ಕಟ್ಟುವ ಸ್ಟೈಲು, ಕೆಮಿ, ಕೈಕಾಲಿನ ಆಭರಣಂಗಳ ಕೆಲವು ಸಂದರ್ಭಗಳಲ್ಲಿ ಬದಲಿಸಿ ಹಾಕಿಕೊಂಬದು, ಹೇಳಿರೆ ಹೋಪ ಸಭೆ, ಸಮಾರಂಭಂಗೊಕ್ಕೆ ತಕ್ಕ ಹಾಂಗೆ ಎನ್ನಂದ ಹೆಚ್ಚು ಶೃಂಗಾರಕ್ಕೆ ಬೆಲೆ ಕೊಡುವ ಅಭ್ಯಾಸ ಇಪ್ಪವಷ್ಟೇ! ನಾಲ್ಕು ಜೆನದ ಆ ಟೀಮಿಲಿ ಇತ್ತೀಚೆಗಷ್ಟೇ ಎನಗೆ ಅತ್ಯಂತ ಆತ್ಮೀಯಳಾದ ಒಂದು ಗೆಳತಿ ಇದ್ದು! ಬಾಕಿ ಇಪ್ಪ ಮೂರು ಜೆನ ಫ್ರೆಂಡುಗೊ ಎನಗೆ, "ಹಾಂಗೆ ಡ್ರೆಸ್ ಮಾಡು, ಹೀಂಗೆ ಮಾಡು, ಆ ನಮೂನೆಲಿ ತಲೆ ಕಟ್ಟು, ಹೀಂಗೆಲ್ಲಾ ಮಾಡಿದರೆ ನಿನ್ನ ಲುಕ್ಕೇ ಛೇಂಜಾವುತ್ತು ಹೇಳಿ ವರ್ಷಾನುಗಟ್ಟಲೆಯಿಂದ ಪ್ರಯತ್ನಿಸುತ್ತಾ ಬಂದಿತ್ತಿದ್ದವು. ಅವು ಹೇಳುದರ ಎಲ್ಲಾ ಆಚ ಕೆಮಿಲಿ ಕೇಳಿ, ಈಚ ಕೆಮಿಲಿ ಬಿಡುದು, ಪುನ: ಅವು ಹೇಳುದು, ಆನು ಅವು ಹೇಳಿದ್ದರ ಕೇಳಿ ಹೂಂಗುಟ್ಟುದು ಇಷ್ಟೇ ಆಯಿಕ್ಕೊಂಡಿತ್ತು! ಆದರೆ ಎನ್ನ ಹೊಸಾ ಫ್ರೆಂಡ್ ಹಾಂಗಲ್ಲ! "ಮನೆಲಿ ಎಂತ ಬೇಕಾದರೂ ಹಾಕಿಕೊ ಮಾರಾಯ್ತಿ, ಸಭೆ, ಸಮಾರಂಭಂಗೊಕ್ಕೆ ಹೋಪಗಲಾದರೂ ರಜ್ಜ ಡ್ರೆಸ್ ಸೆನ್ಸ್ ಬೆಳೆಶಿಕೋ, ತಲೆಯ ಬೇರೆ ಸ್ಟೈಲಿಲಿ ಕಟ್ಟು..., ಹಣೆಗೆ ನೀನು ಹಾಕುವ ಕೆಂಪು ಬಿಂದಿಯನ್ನೇ ಹಾಕು, ಆದರೆ ಆ ಕೆಂಪು ಬಿಂದಿಯ ನಡೂಕಿಲಿ ಕಲ್ಲಿಪ್ಪದರ ಹಾಕು..., ನಿಜವಾಗಿ ನೀ ಹೀಂಗೆಲ್ಲಾ ಮಾಡಿದರಿದ್ದನ್ನೆ, ಎಷ್ಟು ಲಾಯ್ಕ ಕಾಂಬೆ ಗೊಂತಿದ್ದಾ ನಿನಗೆ, ನೀನೇ ನೋಡಿದ್ದಿಲ್ಲೆಯಾ, ಮುದಿ ಪ್ರಾಯದವಕ್ಕೆ ಕೂಡಾ ಎಷ್ಟು ಸೌಂದರ್ಯ ಕಾಳಜಿ ಇರ‍್ತು ಹೇಳಿ, ನೀನುದೇ ರಜ್ಜ ಸೌಂದರ್ಯ ಪ್ರಜ್ಜೆ ಬೆಳೆಶಿಕೋ ಪುಟ್ಟಾ" ಹೇಳಿ ಎನಗೆ ಅದರ ಅಕ್ಕರೆಯ ಸಲಹೆ! "ನೀನು ಹೇಳುದು ಸರಿ ಮಾರಾಯ್ತಿ ಪ್ರಾಯದವರ ಕೆಲವರ ನೋಡಿದ್ದೆಪ್ಪಾ ನೋಡಿದ್ದೆ, ಒಲೆಯ ಬೂದಿ ಮೇಲೆ ಮನುಗಿ, ಮೈಕೊಡಪದ್ದೇ ಎದ್ದು ಬಂದ ನಾಯಿ, ಪುಚ್ಚೆಗಳ ಹಾಂಗಿರ‍್ತು ಒಬ್ಬೊಬ್ಬನ ಮೋರೆಲಿ ಪೌಡರು..ಹ್ಹ..ಹ್ಹ..ಹ್ಹಾ... ಆದರೆ ಆನು ಹಾಂಗಪ್ಪಲೆ ತಯಾರಿಲ್ಲೆ.... ನೋಡಿ ಸ್ವಾಮಿ, ನಾವಿರೋದೇ ಹೀಗೇ" ಹೇಳಿ ತಮಾಷೆ ಮಾತಿಲಿ ತೇಲಿಸಿಬಿಟ್ಟಪ್ಪಗ, "ಎಂತ ಮಾರಾಯ್ತಿ, ಆನಿಷ್ಟು ಹೊತ್ತು ಗಾಳಿಗೆ ಗುದ್ದಿದ್ದಾ?!, ನೀನು ಹೀಂಗೆಲ್ಲಾ ಉತ್ತರ ಕೊಟ್ಟು ತಪ್ಪಿಸಿಕೊಂಬಲೆ ಸಾಧ್ಯ ಇಲ್ಲೆ, ನಿನ್ನ ಹೀಂಗೇ ಇಪ್ಪಲೆ ಬಿಡ್ತೆ ಹೇಳಿ ಕನಸ್ಸಿಲಿಯೂ ಗ್ರೇಶಡ ನೀನು!" ಹೇಳಿ ಛಲ ಬಿಡದ ತಿವಿಕ್ರಮನ ಹಾಂಗೆ ಎನ್ನ ಬೆನ್ನು ಬಿಟ್ಟಿದಿಲ್ಲೆ! ಅದು ಹಾಂಗೇ ಅಲ್ಲದಾ ನಮಗೆ ಅತ್ಯಂತ ಆಪ್ತರಾದವ್ವು ನಮ್ಮ  ವೈಯುಕ್ತಿಕ ವಿಚಾರಂಗೊಕ್ಕೆ ಮನಸ್ಸು, ತಲೆ, ಪೈಸೆ ಎಲ್ಲಾ ಹಾಕಿ ಹೇಂಗಾರೂ ನಮ್ಮ ಸಮ ಮಾಡುಲೆ ನೋಡ್ತವು! ಅದು ಅವರ ಆತ್ಮೀಯತೆಯ, ನಿಷ್ಕಲ್ಮಶ ಹೃದಯದ ಸಂಕೇತ. ಎಂಗೊ ಪ್ರತೀ ಸರ‍್ತಿ ಭೇಟಿ ಆದಿಪ್ಪಗ ಅದು ಎನಗೆ ಹಾಂಗಿರು, ಹೀಂಗಿರು ಹೇಳುದು, ಆನು ಹೂಂ ಗುಟ್ಟಿಕೊಂಡೇ ಇಪ್ಪದು....ಹೀಂಗೇ ಆಗಿ ಹೋತು!  ಅದು ರಜ್ಜ ಸಮಯ ನೋಡಿತು, ಹೇಳಿ ಹೇಳಿ ಪಾಪ ಅದಕ್ಕೆ ಬೊಡುದತ್ತು ಹೇಳಿ ಕಾಣ್ತು! ಒಂದು ದಿನ ಎಂಗಳ ಮನೆಗೆ ಬಂದಿಪ್ಪಗ ಎನ್ನ ಹತ್ತರೆ ಕೂದೊಂಡಿದ್ದ ಆ ಜೆನ ಸೀದಾ ಎನ್ನ ತಲೆಕಸವಿಂಗೆ ಕಟ್ಟಿತ್ತಿದ್ದ ಕಪ್ಪು ರಬ್ಬರ್ ಬ್ಯಾಂಡಿನ ಎಳದು ತೆಗದು, "ಇದಾ ನಿನ್ನ ತಲೆಕಸವಿನ ಕೊಡಿ ಹೇಂಗಿದ್ದು ನೋಡು, ಕೊಡಿಯ ರಜ್ಜ ಕತ್ತರಿಸಿ ತೆಗದರೆ ಲಾಯ್ಕ, ಇದೊಳ್ಳೆ ಚೈನಾ ದೇಶದವ್ವು ಉದ್ದಕ್ಕೆ ಇಳಿಬಿಟ್ಟ ಗಡ್ಡದ ಕೊಡಿಯ ಹಾಂಗಿದ್ದು ಹೇಳಿಯಪ್ಪಗ ಎನಗುದೇ, ಎನ್ನ ಮಕ್ಕಗುದೇ ನೆಗೆ ತಡಕೊಂಬಲಾಯಿದಿಲ್ಲೆ! "ಓ ಮಾರಾಯ್ತಿ...ತಲೆಕಸವಿನ ಈ ಸಪುರ ಕೊಡಿಯೇ ಮಡಿಸಿಕಟ್ಟುವ ಎನ್ನ ಜುಟ್ಟಿಂಗೆ ಆಧಾರ, ಅದು ಎನಗೆ ಬೇಕು,ಅದರ ನೀನು ಕತ್ತರಿಸಿ ತೆಗದರೆ ಎನ್ನ ಪರಿಸ್ಥಿತಿ ಎಂತಕ್ಕು? ಎನ್ನ ಕೂದಲು ಒಂದು ನಿಯಮಕ್ಕೆ ಒಗ್ಗಿ ಹೋಯಿದು, ಎಷ್ಟೋ ವರ್ಷದ ಲಾಗಾಯ್ತು ಉದ್ದವೂ ಬತ್ತಿಲ್ಲೆ, ಗಿಡ್ಡವೂ ಆವುತ್ತಿಲ್ಲೆ. ಅದು ಇದ್ದ ಹಾಂಗೇ ಇರಾಲಿ ಮಾರಾಯ್ತಿ" ಹೇಳಿ ಎನ್ನ ತಲೆಕಸವಿನ ಮೇಲೆ ಎನಗಿಪ್ಪ ಪ್ರೀತಿ ಮತ್ತು ಹಕ್ಕು ತೋರಿಸಿದೆ! ಮಕ್ಕೊ ಇಬ್ರೂ ಹೇಳಿದವು, "ಅತ್ತೆ, ಅಮ್ಮಂಗೆ ಹೇಳುದು ಸುಮ್ಮಗೆ, ಎಂಗೊಗಂತೂ ಹೇಳೀ ಹೇಳಿ ಬೊಡುದತ್ತು, ಅಮ್ಮನ ಇನ್ನೂ ಮೂರು ಫ್ರೆಂಡುಗಳ ಅವಸ್ಥೆಯೂ ಹೀಂಗೇ, ಅಮ್ಮನ ವಾದವೇ ಅಮ್ಮಂಗೆ! ಇನ್ನು ನಿಂಗೊ ಹೇಳಿ ಅಮ್ಮನ ಸರಿ ಮಾಡುಲೆ ಮಾಂತ್ರ ಬಾಕಿ ಇಪ್ಪದು"! ಅದಕ್ಕಷ್ಟೇ ಸಾಕಾತು. ಅದು ಮಕ್ಕೊ ಹೇಳಿದ್ದರ ಸವಾಲಾಗಿ ತೆಕ್ಕಂಡು, "ಇದಾ ಮಕ್ಕಳೇ ಒಂದು ಕತ್ತರಿ ತನ್ನಿ" ಹೇಳಿ ತರಿಸಿಕೊಂಡು ಎನಗೆ ಹೇಳಿ ಅದು ಪೇಟೆಂದ ಪೈಸೆ ಕೊಟ್ಟು ತಂದ ಹೊಸಾ ಕ್ಲಿಪ್ಪಿನ ತೋರಿಸಿ ಹೇಳಿತು, "ಇದಾ ಮಾರಾಯ್ತಿ, ಇದು ನಿನಗಾಗಿ ತಂದದು..ನಿನ್ನ ತಲೆಕಸವಿನ ಕೊಡಿಯ ರಜ್ಜ ಕಟ್ ಮಾಡಿ ಮತ್ತೆ ಹೇಳಿಕೊಡ್ತೆ ಹೇಂಗೆ ಕಟ್ಟಿದರೆ ನಿನಗೆ ಲಾಯ್ಕ ಕಾಣ್ತು" ಹೇಳಿ ಹೇಳಿಯಪ್ಪಗ, "ಇಷ್ಟು ಒತ್ತಾಯ ಮಾಡ್ತಾ ಇದ್ದನ್ನೆ, ಹೊಸಾ ಕ್ಲಿಪ್ಪು ಕೂಡಾ ತೈಂದನ್ನೆಪ್ಪಾ...., ಬಾಕಿ ಇಪ್ಪ ಮೂರೂ ಫ್ರೆಂಡುಗೊ ಕೂಡಾ ಎಷ್ಟೋ ಸಮಯಂದ, "ನಿನ್ನ ಸ್ಟೈಲು ಚೇಂಜು ಮಾಡು" ಹೇಳಿ ಹೇಳಿಕೊಂಡೇ ಬೈಂದವು, ಅವರನ್ನು ಒಂದರಿಯಂಗೆ ಖುಷಿ ಪಡಿಸಿದ ಹಾಂಗೂ ಆತು ಹೇಳಿ ಗೇಶಿಕೊಂಡು, "ಆತಂಬಗ" ಹೇಳಿ ಕಣ್ಣು ಮುಚ್ಚಿಯೊಂಡು ಕಷ್ಟಲ್ಲೇ ಒಪ್ಪಿಗೆ ಕೊಟ್ಟೆ! "ಜಾಣ ಮರಿ" ಹೇಳಿ ಎನ್ನ ಹೊಗಳಿ ಅಟ್ಟಕ್ಕೇರಿಸಿ ತಲೆಕಸವಿನ ಕೊಡಿಯ ಕ್ಷಣ ಮಾತ್ರಲ್ಲಿ ಕತ್ತರಿಸಿಯೇ ಬಿಟ್ಟತ್ತು!...ಹಾಂಗೇ ಬಾಚಣಿಕೆ ತೆಕ್ಕಂಡು ಎನ್ನ ತಲೆಯ ಬಾಚಿ ತಲೆಯ ಎರಡೂ ಹೊಡೆಂದ ರಜ್ಜ ರಜ್ಜ ತಲೆಕಸವಿನ ಹಿಡುದು ಅದರೆಲ್ಲಾ ತಲೆಯ ಹಿಂಭಾಗದ ಮಧ್ಯಭಾಗಕ್ಕೆ ತಂದು ಒಟ್ಟು ಮಾಡಿಕ್ಕಿ, ಅದು ತಂದ ಕ್ಲಿಪ್ಪಿನ ಸಿಕ್ಕುಸಿ, ಕ್ಲಿಪ್ಪಿನ  ಜತೆಲಿ ತಂದಿದ್ದ ನಡೂಕಿಲಿ ಕಲ್ಲಿಪ್ಪ ಕೆಂಪು ಸ್ಟಿಕ್ಕರ್ ಬಿಂದಿಯ ಎನ್ನ ಹಣೆಗೆ ಆಂಟಿಸಿಕ್ಕಿ ಎನ್ನ ಕೈಗೆ ಕನ್ನಡಿಯ ಒಡ್ಡಿ ಕೇಳಿತು, "ಈಗ ಹೇಂಗೆ ಕಾಣ್ತೆ ನೀನೇ ನೋಡು, ಷೋಡಶಿ ಹಾಂಗೆ ಕಾಣ್ತೆ ಗೊಂತಿದ್ದಾ! ಆ ನಿನ್ನ ಕಪ್ಪು ಬಣ್ಣದ ಪತಾಕೆಲಿ(ರಬ್ಬರ್ ಬ್ಯಾಂಡಿಲಿ)ಜುಟ್ಟು ಕಟ್ಟಿಕೊಂಡಿಪ್ಪಾಗ ಮುದಿ ಪ್ರಾಯದವರ ಹಾಂಗೆ ಕಂಡೊಂಡಿತ್ತೆ ಗೊಂತಿದ್ದಾ?!" ಹೇಳಿ ಹೇಳಿತು! ಕನ್ನಡಿ ಒಳಾಣ ಎನ್ನ ಚಿತ್ರವ ಕಣ್ಣಿಲಿ ಕಣ್ಣಿಟ್ಟು ನೋಡಿಯಪ್ಪಗ ಬದಲಾವಣೆ ಕಂಡದಂತೂ ನಿಜ! ಆದರೂ ಹೇಳಿದೆ, "ಈ ಚೆಂದ ಆರಿಂಗಿಪ್ಪದು ಮಾರಾಯ್ತಿ? ಅದು ಸರಿ ಈ ಕ್ಲಿಪ್ಪಿನ ಸಿಕ್ಕುಸುಲೆ ಎನಗೆ ಅರಡಿಯೇಕನ್ನೇ" ಹೇಳಿ ಹೇಳಿದೆ. ಹಾಂಗೇ ಅದು ಹಾಕಿದ್ದರ ತೆಗದು ಆನೇ ಆ ಕ್ಲಿಪ್ಪಿನ ಎನ್ನ ತಲೆಕಸವಿನ ಒಟ್ಟು ಮಾಡಿ ಸಿಕ್ಕುಸುಲೆ ಹೆರಟೆ. ಆ ಕ್ಲಿಪ್ಪಿಂಗೆ ಎನ್ನ ಅಭ್ಯಾಸ ಇಲ್ಲದ್ದ ಕಾರಣವೋ ಎಂತೋ, ಅದರ ಎರಡು ಬೆರಳುಗಳ ಸಹಾಯಂದ ಹಿಡುದು ಬಾಯಿ ಬಿಡಿಸಿ, ತಲೆಕಸವಿಂಗೆ ಸಿಕ್ಕುಸ್ಸೇಕು ಹೇಳಿ ಅಪ್ಪಾಗ ಅದು ಅಷ್ಟು ದೂರ ಹೋಗಿ ಬಿದ್ದತ್ತು!! ಎರಡು, ಮೂರು ಸಲವೂ ಹಾಂಗೇ ಆಯೇಕ್ಕಾ?! ಅದರ ಬೇಟೆ ಆಡುವ ಕೆಲಸವೇ ಆಗಿಹೋತು ಎನಗೆ! ಎನ್ನ ಫ್ರೆಂಡ್‍ದೇ, ಮಕ್ಕಳುದೇ ಎನ್ನ ಅವಸ್ಥೆ ನೋಡಿ ಬಿದ್ದು ಬಿದ್ದು ನೆಗೆ ಮಾಡುಲೆ ಶುರು ಮಾಡಿದವು! "ಅಲ್ಲಾ ಮಾರಾಯ್ತಿ, ಸ್ಕೂಟರು, ಕಾರು ಎಲ್ಲಾ ಬಿಡುವ ನಿನಗೆ ಈ ಒಂದು ಸಣ್ಣ ಕ್ಲಿಪ್ಪಿನ ಹ್ಯಾಂಡಲ್ ಮಾಡ್ಲೆಡಿತ್ತಿಲ್ಲೆಯಾ?! "ಹೇಳಿ ಫ್ರೆಂಡ್ ನೆಗೆ ತಡಕ್ಕೊಂಬಲೆ ಎಡಿಯದ್ದೇ ಕೇಳಿದ ಪ್ರಶ್ನೆ ಎನಗೆ ನೆಗೆ ಬರ‍್ಸಿತು! "ಆ ವಿದ್ಯೆಯಾದರೆ ನಮ್ಮ ಜೀವನಲ್ಲಿ ಉಪಯೋಗಕ್ಕೆ ಬತ್ತು, ಈ ಸ್ಟೈಲು ಯಾವ ಉಪಯೋಗಕ್ಕೆ, ಯಾವ ಕರ್ಮಕ್ಕೆ, ಆರಿಂಗೆ ಬೇಕಾಗಿ" ಹೇಳಿ ಅದರ ಮನಸ್ಸಿಲಿಯೇ ಬೈದೆ! ಅಂತೂ ಅದು ವಾಪಸ್ಸು ಹೋಪನ್ನಾರ ಮಹಾಭಂಗಲ್ಲಿ ಅದೇ ಕ್ಲಿಪ್ಪಿಲಿತ್ತಿದ್ದೆ. ಮನೆಗೆ ಎತ್ತಿದ ಮತ್ತೂ ಮೆಸ್ಸೇಜು ಮಾಡಿ ಕೇಳಿಕೊಂಡಿದ್ದತ್ತು, "ಅದೇ ಆನು ಹಾಕಿದ ಕ್ಲಿಪ್ಪೇ ಇದ್ದಾ ತಲೆಲಿ, ಅಲ್ಲಾ ಆ ನಿನ್ನ ಕರಿ ಪತಾಕೆಯ ಮುಡಿಗೇರಿಸಿದ್ದೆಯಾ?!" ಹೇಳಿ! ಹಾಂಗೆ ಧೈರ್ಯ ತುಂಬುಲೆ ಈ ಮೆಸ್ಸೇಜಿನ ಹಿಂದದ ಇನ್ನೊಂದು ಮೆಸ್ಸೇಜು ಬೇರೆ! "ಕ್ಲಿಪ್ಪಿನ ಹೇಂಗೆ ತಲೆಕಸವಿಂಗೆ ಸಿಕ್ಕುಸುದು ಹೇಳಿ ಆಲೋಚನೆ ಮಾಡೇಡ ಬಂಗಾರಿ....ನಾಲ್ಕು ಸಲ ತೆಗದು ಹಾಕಿ ಅಪ್ಪಾಗ ನಿನಗೆ ಅಭ್ಯಾಸ ಆವುತ್ತು ಆತ ಪುಟ್ಟಾ..." ಹೇಳಿ!



     ಎನ್ನ ಹೊಸಾ ಫ್ರೆಂಡ್, ಹಳೇ ಫ್ರೆಂಡುಗೊ, ಮಕ್ಕೊ ಎಲ್ಲಾ ಹೇಳುದರಲ್ಲಿ ಸತ್ಯಾಂಶ ಅಂತೂ ಖಂಡಿತಾ ಇದ್ದು! ಲಾಯ್ಕಲ್ಲಿ ಡ್ರೆಸ್ ಮಾಡಿ, ಅದು ಹೇಳಿದ ಹಾಂಗೆ ತಲೆ ಕಟ್ಟಿಕ್ಕಿ, ಕಲ್ಲಿಪ್ಪ ಕೆಂಪು ಬಿಂದಿಯ ಹಣೆಗಿಟ್ಟರೆ ಲಾಯ್ಕ ಕಾಣ್ತೆ! "ನಿನ್ನಲ್ಲಿ ಬದಲಾವಣೆ ತಪ್ಪಲೆ ಇಷ್ಟು ವರ್ಷಂದ ಪ್ರಯತ್ನ ಪಟ್ಟರೂ ಎಂಗಳ ಕೈಯಿಂದ ಆಗಿತ್ತಿಲ್ಲೆನ್ನೇ, ನಿನ್ನ ಹೊಸಾ ಫ್ರೆಂಡ್ ಗ್ರೇಟ್ ಮಾರಾಯ್ತಿ" ಹೇಳಿ ಎನ್ನ ಹೊಸಾ ಫ್ರೆಂಡಿನ ಸಾಹಸವ ಹೊಗಳಿದವು ಹಳೇ ಫ್ರೆಂಡುಗೊ! ಎನ್ನ ಯಜಮಾನರಂತೂ ಒಂದು ಪಂಚಿಂಗ್ ಡೈಲಾಗ್ ಹೇಳಿದವು, "ನೀನು ಮೊದಾಲು ನಾಲ್ಕು ಜೆನರಲ್ಲಿ ಎದ್ದು ಕಂಡೊಂಡಿತ್ತೆ, ಈಗಲೂ ಕೂಡಾ ನಾಲ್ಕು ಜೆನರ ಎಡೆಲಿ ಎದ್ದು ಕಾಣ್ತೆ" ಹೇಳಿ! ಈ ಮಾತಿನ ಕೂಲಂಕುಷವಾಗಿ ಪರಿಶೀಲಿಸಿದರೆ ಎಷ್ಟೂ ಅರ್ಥಂಗೊ ಇದ್ದು! ಅವ್ವು ಯಾವ ಅರ್ಥಲ್ಲಿ ಹೇಳಿದ್ದೋ ಎನಗಂತೂ ಗೊಂತಿಲ್ಲೆ, ತನಿಖೆ ಮಾಡುಲೆ ಹೆರಟರೆ ಎನ್ನ ಖುಶಿ ಪಡಿಸುವಂತಹ ಉತ್ತರ ಬಕ್ಕಷ್ಟೇ ಅವರ ಬಾಯಿಂದ!! ಒಂದೆರಡು ಕಡೆಂಗೆ ಈ ಹೊಸಾ ಸ್ಟೈಲಿಲಿ ಹೋದಿಪ್ಪಗ ಅದುವರೆಗೆ ಎನ್ನ ಗುರ‍್ತ ಇದ್ದು ಕೂಡಾ ಎಷ್ಟೋ ಸಲ ನೆಗೆ ಕೂಡಾ ಮಾಡದ್ದೆ ಕಡೆಗಣಿಸಿದ್ದ ಕೆಲವು ಜೆನಂಗ, ಹೊಸಾ ಸ್ಟೈಲಿಲಿ ಎನ್ನ ನೋಡಿ, ಪರಿಚಯದ ನಾಲ್ಕು ಮಾತಾಡಿದವು ಕೂಡಾ!! ಕೆಲವು ಜೆನಂಗ ಎನ್ನ ಬದಲಾವಣೆಯ ನೋಡಿ ಬಾಯಿ ಬಿಟ್ಟಿದವಿಲ್ಲೆ! ಹೇಳಿದರೆಲ್ಲಿ ಕಡಮ್ಮೆ ಆದರೆ ಹೇಳಿ ಹೆದರಿಕೆಯಾ ಇಲ್ಲಾ ಅಹಂ ಹೇಳಿಯಾ ಅರ್ಥ ಆಯಿದಿಲ್ಲೆ! ಇನ್ನೂ ಕೆಲವು ಜೆನಂಗ, ’ಯೌವನ್ನಲ್ಲಿ ಇಷ್ಟು ದಿನ ಶೋಕಿ ಮಾಡದ್ದ ಈ ಜೆನಕ್ಕೆ ಎಂತ ಮರುಳಪ್ಪ ನಲ್ವತ್ತು ವರ್ಷ ತುಂಬಿಕೊಂಡು ಬಂದ ಹಾಂಗೇ....’ ಹೇಳುವ ಹಾಂಗೆ ನೋಡಿದ ಹಾಂಗನ್ನಿಸಿತೆನಗೆ! ತಮ್ಮನ ಹೆಂಡತಿ ಹೇಳಿತು, "ಅತ್ತಿಗೇ..ಲಾಯ್ಕ ಕಾಣ್ತಾ ಇದ್ದೆ ಈ ಹೊಸಾ ಸ್ಟೈಲಿಲಿ...ಯು ಆರ್ ನಾಟಿ ಎಟ್ ಫಾರ‍್ಟೀ...ವೆರಿ ಗುಡ್" ಹೇಳಿ! 

     ಆದರೆ ನಾವು ಎಷ್ಟು ಲಾಯ್ಕದ ಡ್ರೆಸ್ ಹಾಕಿಕೊಂಡರೂ ಅಪರಿಚಿತರಿಂಗೆ ಅದು ಬೇಡ ಅಲ್ಲದಾ?! ಆತ್ಮೀಯರಿಂಗೆ, ಸ್ನೇಹಿತರಿಂಗೆ ನಮ್ಮ ಶೃಂಗಾರಕ್ಕಿಂತಲೂ ನಾವೇ ಮುಖ್ಯ ಹೇಳಿ ಹೇಳುದರ ಆನು ನಂಬಿದ್ದೆ...ರಾಷ್ಟಕವಿ ಕುವೆಂಪು ಅವರ ಪದ್ಯದ ಸಾಲುಗೊ, ’ನಿನ್ನೆಡೆಗೆ ಬರುವಾಗ ಸಿಂಗಾರದ ಹೊರೆಯೇಕೆ, ಸಡಗರದ ಮಾತುಗಳ ಬಿಂಕವೇಕೆ....’ಎಂತಾ ಅರ್ಥಗರ್ಭಿತ ಅಲ್ಲದಾ? ಪಾಪ ಎನ್ನಲ್ಲಿ ಬದಲಾವಣೆ ತಪ್ಪಲೆ ಹೆರಟ ಫ್ರೆಂಡಿಂಗೆ ನಿರಾಶೆ ಮಾಡದ್ದೇ, ಆನು ಹಾಕಿಕೊಂಬ ಡ್ರೆಸ್ಸಿಲಿ ವಿಶೇಷ ಬದಲಾವಣೆ ತಾರದ್ದರುದೇ, ಎನಗೆ ಅದು ಹೇಳಿಕೊಟ್ಟ ಪ್ರೀತಿಯ ಪರಿಯಿಂದಾಗಿ, ಅದು ಹೇಳಿಕೊಟ್ಟ ರೀತಿಲೇ ತಲೆಕಟ್ಟುತ್ತಾ ಇದ್ದೆ, ಹಾಂಗೇ ಅದುವೇ ಎನಗಾಗಿ ಖರೀದಿಸಿ ತಂದು, ಆತ್ಮೀಯವಾಗಿ ಆದೇಶ ನೀಡಿ ಕೊಟ್ಟ ನಡೂಕಿಲಿ ಕಲ್ಲಿಪ್ಪ ಕೆಂಪು ಬಿಂದಿಯ ಕೂಡಾ ಹಾಕುತ್ತಾ ಇದ್ದೆ ಹಣೆಗೆ ಒಂದು ತಿಂಗಳ ಲಾಗಾಯ್ತು!!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು 




ಸಂಶಯ ಪಿಶಾಚಿ...-ಹವ್ಯಕ ವಾರ್ತೆ ಡಿಸೆಂಬರ್ ೨೦೧೪ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಸಂಶಯ ಪಿಶಾಚಿ...!
ಪಿಶಾಚಿ, ದೆವ್ವ, ಭೂತ, ಪ್ರೇತ, ಮೋಹಿನಿ, ಬ್ರಹ್ಮರಾಕ್ಷಸ ಹೇಳಿದರೆ ಎಂತಾ ಎಂಟೆದೆ ಬಂಟಂಗಾದರೂ ಒಂದರಿ ಎದೆ ’ಝಗ್’ ಹೇಳುತ್ತು! ಇದರ ಬಗ್ಗೆ ಕುತೂಹಲ, ಆಸಕ್ತಿ ಈಗಲುದೇ ಜೆನಂಗಳಲ್ಲಿ ಇದ್ದೇ ಇದ್ದು. ನಿಜವಾಗಿ ಇದ್ದಾ? ಜೆನ ಕತೆ ಕಟ್ಟಿದ್ದಾ? ಎಂತರನ್ನೋ ನೋಡಿ ಹೆದರಿಕೆ ಹುಟ್ಟಿ ಇವೆಲ್ಲಾ ಸೃಷ್ಠಿ ಮಾಡಿದ್ದಾ ಹೇಳಿ ಸರಿಯಾದ ಮಾಹಿತಿ ಇಲ್ಲದದ್ದೇ ಈ ಕುತೂಹಲಕ್ಕೆ ಮುಖ್ಯ ಕಾರಣ, ಅದುವೇ ಎಲ್ಲೋರ ಜಿಜ್ಞಾಸೆಯಾಗಿ ಈಗಲೂ ಸಂಶೋಧನೆಗೊ ನಡೆತ್ತಾ ಇದ್ದಡ! ಹಗಲು ಹೊತ್ತಿಲೋ, ಮನೆ ಒಳಾದಿಕ್ಕೆ ಲೈಟುಗೊ ಹೊತ್ತಿಕೊಂಡಿಪ್ಪಗಲೋ, "ಭೂತವೂ ಇಲ್ಲೆ, ಪಿಶಾಚಿಯೂ ಇಲ್ಲೆ" ಹೇಳಿ ಉಪೇಕ್ಷೆ ಮಾಡಿದ್ದರೂದೇ ಎಲ್ಲಿಯಾರೂ ನಡು ಇರುಳು ಜನಸಂಚಾರವೇ ಇಲ್ಲದ್ದ, ದಾರಿದೀಪವೂ ಇಲ್ಲದ್ದ ಕಡೆಗಳಲ್ಲಿ ಒಬ್ಬನೇ ನಡಕ್ಕೊಂಡು ಹೋಪ ಅನಿವಾರ್ಯ ಸಂದರ್ಭಲ್ಲಿ ಆರು ಎಂತದೇ ಹೇಳಲಿ, ಈ ನಿಶಾಚರಿಗಳ ನೆಂಪಾಗಿ, ಒಂದರಿ ಹಿಂದೆ, ಮುಂದೆ, ಸುತ್ತಾಮುತ್ತೆಲ್ಲಾ ಹೆದರಿಕೆಲೇ ಕಣ್ಣಾಡಿಸದ್ದವು ಆರೂ ಇರವು! ಎಷ್ಟೇ ಧೈರ್ಯ ತಂದುಕೊಂಡರುದೇ ಮುಂದೆ ಹೋಯಿಕೊಂಡಿಪ್ಪಗ, ಕೆಲವು ಜೆನ ಕಣ್ಣಿಲಿ ಕಂಡಾಂಗೆ ಹೇಳಿದ ಭೂತ, ಪಿಶಾಚಿಗಳ ಕೈಲಿ ಸಿಕ್ಕಿಹಾಕಿಯೊಂಡು ಮನುಷ್ಯರು ನೆತ್ತರು ಕಾರಿ ಸತ್ತ ಕತೆಗೊ, ಇನ್ನೂ ಕೆಲವು ಜೆನ ಅದರ ಕೈಲಿ ಸಿಕ್ಕಿಹಾಕಿಯೊಂಡು, ಹೇಂಗಾರೂ ಭಂಗಲ್ಲಿ ಓಡಿ ಜೀವ ಒಳಿಶಿಕೊಂಡ ಕತೆಗೊ, ಕೆಲವು ಮನೆಗಳಲ್ಲಿ ಕಿಟಕಿ, ಬಾಗಿಲುಗಳು ತಂನ್ನಿತ್ತಾನೆ ತೆರೆದುಕೊಂಬದು, ಒಂದು ದಿಕ್ಕೆ ಮಡುಗಿದ ವಸ್ತು ಮತ್ತೆ ನೋಡುವಾಗ ಇನ್ನೊಂದು ದಿಕ್ಕೆ ಇಪ್ಪದು, ವಿಚಿತ್ರವಾದ ಶಬ್ದಂಗೊ ಬಪ್ಪದು..., ಇದೆಲ್ಲಾ ಭೂತದ ಉಪದ್ರ ಹೇಳಿ ಕಂಡು ಬಂದು ಯಂತ್ರ, ತಂತ್ರ ಮಾಡಿಸಿದ ಮತ್ತೆ ಅದರ ಉಪದ್ರ ಕಡಮ್ಮೆಯಾದ ಕತೆಗೊ, ಎಲ್ಲಾ ನೆಂಪಿಂಗೆ ಬಂದು ಒಂದರಿಯಂಗೆ ಮೈಚಳಿ ಬಿಡಿಸಿಬಿಡ್ತು! ಒಂದರಿ ಜೀವಸಹಿತ ಮನೆ ಎತ್ತಿದರೆ ಸಾಕು ಹೇಳಿ, ’ರಾಮ ರಾಮ’ ಹೇಳಿಯೋ, ’ಕೃಷ್ಣ, ಕೃಷ್ಣ’ ಹೇಳಿಯೋ, ’ನಾರಾಯಣ, ನಾರಾಯಣ’ ಹೇಳಿಯೋ, ಇಲ್ಲೆ ಹೇಳಿಯಾದರೆ ಬಾಯಿಪಾಠ ಬಪ್ಪಂತಾ ದೇವರ ಶ್ಲೋಕಂಗಳ ಹೇಳಿಯೊಂಡು, ಉಸಿರು ಬಿಗಿಹಿಡುಕೊಂಡು ಮನೆ ಎತ್ತಿದ ಮತ್ತೆ ನಿಟ್ಟುಸಿರು ಬಿಡ್ತವು! ಆ ಬಂದು ಎತ್ತಿದ ಜೆನವ ಮನೆವ್ವೆಲ್ಲಿಯಾರೂ, "ನಿಂಗೊಗೆ ಈ ಕತ್ಸಲೆಲಿ ಒಬ್ಬನೇ ಬಪ್ಪಲೆ ಹೆದರಿಕೆ ಆಯಿದಿಲ್ಲೆಯಾ?" ಹೇಳಿ ಕೇಳಿದರೆ, "ಏಯ್, ಹೆದರಿಕೆಯೂ ಆಯಿದಿಲ್ಲೆ, ಕರ್ಮವೂ ಇಲ್ಲೆ, ಎಂತರ ಹೆದರಿಕೆ? ಎಲ್ಲಾ ನಮ್ಮ ಮನಸ್ಸಿನ ಭಾವನೆಗೊ ಅಷ್ಟೇ" ಹೇಳಿ ತಪ್ಪಿಸಿಕೊಂಡುಬಿಡ್ತವು!  ಒಂದು ಮನೆಲಿ ಆರಾದರೂ ಸತ್ತಿದವು ಹೇಳಿದರೆ, ಅವರ ಅಂತ್ಯಕ್ರಿಯೆ ಆದ ಮತ್ತೆ ಕೆಲವು ದಿನಂಗಳ ಮಟ್ಟಿಂಗೆ ಅವರ ಮನುಗುಶಿದ ರೂಮಿಂಗೆ, ಅವ್ವು ತಿರುಗಾಡಿದ ಜಾಗೆಲೆಲ್ಲಾ ಹೋಪಲೆ, ಇರುಳಪ್ಪಗ ಒಬ್ಬನೇ ಒಂದು ಕೋಣೆಯಿಂದ ಮತ್ತೂಂದು ಕೋಣೆಗೆ ಹೋಪಲೇ ಜೆನ ಹೆದರುತ್ತವು! ಮತ್ತೆ ಬೇರೆದಿಕ್ಕೆಲ್ಲಾ ಹೆದರುತ್ತವಾ ಹೇಳಿ ಕೇಳೆಕ್ಕಾ?! 


ಆನು ಪ್ರೈಮರಿ ಶಾಲಗೆ ಹೋಯಿಕ್ಕೊಂಡಿದ್ದ ದಿನಂಗಳಲ್ಲಿ ದೊಡ್ದವ್ವೂ, ಮಕ್ಕೊ ಎಲ್ಲಾ ಹೇಳಿಕೊಂಡಿದ್ದದು ಹುಣಸೇ ಮರಲ್ಲಿ ಭೂತ ಪಿಶಾಚಿಗಳ ವಾಸ ಹೇಳಿ! ಆನು ಶಾಲಗೆ ನಡಕ್ಕೊಂಡು ಹೋಯಿಕ್ಕೊಂಡಿಪ್ಪಗ ದಾರಿಲಿ ಹುಣಸೇ ಮರ ಸಿಕ್ಕಿಕೊಂಡಿತ್ತು, ಎಲ್ಲಿಯಾರೂ ಎನ್ನ ಜತೆ ಆರೂ ಇಲ್ಲದ್ದರೆ ಮಾಂತ್ರ ಆ ಮರ ಸಿಕ್ಕುವ ಒಂದು ಇಪ್ಪತೈದು ಫೀಟಿಂದ ಶುರುಮಾಡಿ, ಮರ ದಾಂಟಿದ ಮತ್ತೂ ಇಪ್ಪತೈದು ಫೀಟಿಂಗೊರಗೆ ಕುಂಡಗೆ ಕಾಲು ಕೊಟ್ಟೊಂಡು ಓಡಿಯೊಂಡಿತ್ತೆ! ಮನೆಗೆ ಬಂದು, "ಈ ಭೂತ, ಪಿಶಾಚಿ ಇಪ್ಪದೆಲ್ಲಾ ನಿಜವಾ?" ಹೇಳಿ ಕೆಲವು ಸಲ ಕೇಳಿಪ್ಪೆ, ಅಂಬಗ ಅಮ್ಮ ವೀರ ಪರಾಕ್ರಮಿಗಳ ಕತೆಗಳ, ಮನುಷ್ಯರು ಕಷ್ಟಲ್ಲಿಪ್ಪಗ ದೇವರು ಸಕಾಯ ಮಾಡಿದ ಕತೆಗಳ ಎಲ್ಲಾ ಹೇಳಿಕೊಂಡಿದ್ದತ್ತು! ಆದರೂ ಈ ಅಂಬಗಂಬಗ ಒಬ್ಬಲ್ಲ ಒಬ್ಬ ಶಾಲೆಲಿ ಭೂತ, ಪಿಶಾಚಿಗಳ ಕತೆಗಳ ಹೇಳಿಯೊಂಡೇ ಇತ್ತಿದವು. ಆನು ಹಾಂಗೇ ದಿನಾ ಮನಗೆ ಬಂದು ಸಂದೇಹ ಪರಿಹಾರ ಮಾಡುಲೆ ಕೇಳಿಯೋಂಡೇ ಇದ್ದರೆ ಬೆತ್ತ ಹಿಡುದು ಓಡಿಸುಗು! ಮೆಲ್ಲಂಗೆ ಅಜ್ಜಿ ಹತ್ತರೆ ಹೋಗಿ ಕೂದೊಂಡು ಈ ಶಾಲೆ ಮಕ್ಕೊ ಹೇಳಿದ ಕತೆಗಳ ಎಲ್ಲಾ ಹೇಳುದಾನು! ಅಜ್ಜಿ, "ಅಪ್ಪೋ!?, ಅಪ್ಪೋ!?" ಹೇಳಿ ಭಾರೀ ಕುತೂಹಲಲ್ಲಿ ಕೇಳಿಯಪ್ಪಗ ಶಾಲೆಲಿ ಮಕ್ಕೊ ಹೇಳಿದ ಕತೆಗೊಕ್ಕೆ ರೇಂಕೆ, ಕೊಂಬು ಎಲ್ಲಾ ಬಂದಿರ‍್ತಿ‍ತ್ತು! ಮತ್ತೆ ಅಜ್ಜಿ ಹೇಳುಗು, "ರಾಮ ರಾಮ ಹೇಳಿರೆ ದುಷ್ಟ ಶಕ್ತಿಗೊ ಎಲ್ಲಾ ದೂರ ಹೋವುತ್ತವು, ಅದಕ್ಕೇ ಕತ್ಸಲಪ್ಪಗ ಭಕ್ತಿಲಿ ದೇವರ ದೀಪ ಹೊತ್ತುಸಿ ಶಂಖ ಊದೇಕು, ದೇವರ ಭಜನೆ ಮಾಡೇಕು ಹೇಳುದು, ಅಕೇರಿಗೆ ಜಯಗಂಟೆ ಹೆಟ್ಟಿ ಮಂಗಳಾರತಿ ಎತ್ತಿಯಪ್ಪಗ ಎಂತ ಇದ್ದರೂ ಓಡಿಹೋಕು, ಜೆನಿವಾರ ಹಾಕಿದವರ, ಗಾಯತ್ರಿ ಮಂತ್ರ, ಲಲಿತಾ ಸಹಸ್ರನಾಮ ಎಲ್ಲಾ ಹೇಳಿಕೊಂಡಿಪ್ಪವರ ಹತ್ತರೆ ಬಾರಲೇ ಬಾರ ಅದು, ಆ ದೇವರ ಶಕ್ತಿ ಮುಂದೆ ದುಷ್ಟ ಶಕ್ತಿಯ ಆಟ ನಡೆತ್ತಿಲ್ಲೆ" ಹೇಳಿ ಎಲ್ಲಾ ಹೇಳಿಯೊಂಡಿತ್ತವು. ಎನ್ನ ಹತ್ತರೆ ಅಜ್ಜಿ ಮಾಂತ್ರ ಒಂದು ದಿನವೂ "ಅಂತಹ ಯೇವುದೇ ಭೂತ ಆಗಲಿ, ಪ್ರೇತ ಆಗಲಿ ಇಲ್ಲೆ" ಹೇಳಿ ನಿಸ್ಸಂಶಯವಾಗಿ ಹೇಳಿದವ್ವೇ ಅಲ್ಲ! "ಅಜ್ಜೀ ನಿಜವಾಗಿ ಅದೆಲ್ಲಾ ಇದ್ದಾ?! ಹೇಳಿ ಅಜ್ಜಿ!, ಹೇಳಿ...!" ಹೇಳಿ ಹೆದರಿಯೊಂಡು ಕೇಳಿಯೊಂಡೇ ಇತ್ತಿದ್ದರೆ ಮಾಂತ್ರ, "ಭೂತವೂ ಇಲ್ಲೆ, ಪಿಶಾಚಿಯೂ ಇಲ್ಲೆ, ಹೋಗಿ ನೀನು ಓದಿ, ಬರದು ಎಲ್ಲಾ ಮಾಡು, ಈಗ ಬಕ್ಕು ಅಪ್ಪ, ಅಮ್ಮ ಕೋಲು ತೆಕ್ಕಂಡು, ಈ ಅಜ್ಜಿಗೂ ಪುಳ್ಳಿಗೂ ಕೆಲಸ ಇಲ್ಲೆ, ಪಟ್ಟಾಂಗ ಹೊಡಕ್ಕೊಂಡು ಕೂಯ್ದವು ಹೇಳಿಯೊಂಡು" ಹೇಳಿ ಸಣ್ಣ ಕೋಪ ಬರಿಸಿಯೊಂಡು ಹೇಳುಗಷ್ಟೇ! ಹಾಂಗೆ ಸಣ್ಣಾದಿಪ್ಪಗ ಎನ್ನ ಸಂಶಯ ಸರಿಯಾಗಿ ಪರಿಹಾರ ಆದ್ದು ಹೇಳಿಯೇ ಇಲ್ಲೆ! ಒಂದು ಹೊಡೆಂದ ಅಮ್ಮ ಎಂತದೂ ಇಲ್ಲೆ ಹೇಳುದು, ಇನ್ನೊಂದು ಹೊಡೆಂದ ಅಜ್ಜಿ ಅಂತಾ ದುಷ್ಟ ಶಕ್ತಿಗೊ ದೇವರ ಪ್ರಾರ್ಥನೆ ಮಾಡಿದರೆ ಓಡಿಹೋಕು ಹೇಳಿ, ದೇವರ ಮುಂದೆ ’ಅದರ’ ಆಟ ನಡೆತ್ತಿಲ್ಲೆ ಹೇಳಿ ಹೇಳಿಪ್ಪಗ ಆ ’ಅದು’ ಇದ್ದು ಹೇಳಿಯೇ ಆತನ್ನೇ?! ಎಲ್ಲಾ ಆಲೋಚನೆ ಮಾಡಿಯೊಂಡು ಕೆಲವು ಸಲ ಇರುಳೆಲ್ಲಾ ವರಕ್ಕು ಬಾರದ್ದ ದಿನಂಗೊ ಎಷ್ಟೋ ಏನೋ!  ಆನು ಶಾಲೆಲಿ ಫ್ರೆಂಡುಗೊ ಹೇಳುದರ, ಅಮ್ಮ, ಅಜ್ಜಿ ಹೇಳಿದ್ದರ ಎಲ್ಲಾ ಆಲೋಚನೆ ಮಾಡಿ ನೋಡಿಯಪ್ಪಗ, ಖಂಡಿತವಾಗಿಯೂ ’ಅದೆಲ್ಲಾ’ ಇದ್ದು ಹೇಳಿಯೇ ನಂಬಿಯೊಂಡಿತ್ತೆ ಏಳನೇ ಕ್ಲಾಸಿನವರೆಗೂ! ಮತ್ತೆ ಓದುಲೆ, ಬರವಲೆ ಹೆಚ್ಚಾದಾಂಗೇ ಆ ಹೆದರಿಕೆ ಎಲ್ಲಾ ಗುಡ್ಡೆ ಹತ್ತಿತು! ಆನು ಕಾಲೇಜು ವಿದ್ಯಾಭ್ಯಾಸ ಮಾಡಿಯೊಂಡಿಪ್ಪಗ ಒಂದರಿ ಅಜ್ಜಿ ಹತ್ರ ಮಾತಾಡಿಯೊಂಡಿಪ್ಪಗ ಭೂತ, ಪ್ರೇತದ ವಿಷಯವೇ ಬಂತು. "ಆರಿಂಗಾದರೂ ನಮ್ಮ ಪೈಕಿಲಿ ’ಅದು’ ಉಪದ್ರ ಕೊಟ್ಟದ್ದು ಗೊಂತಿದ್ದಾ ಅಜ್ಜೀ?" ಹೇಳಿ ಕೇಳಿದೆ. ಅಂಬಗ ಅಜ್ಜಿ ತುಂಬಾ ವರ್ಷದ ಹಿಂದೆ ನಡದ್ದರ ನೆಂಪು ಮಾಡಿಯೊಂಡು, "ಈ ವಿಷಯ ಅಜ್ಜಿ ಹೇಳಿದವು ಹೇಳಿ ಹೆದರೇಡ ಮಗಳೇ..., ಒಂದು ಕತೆ ನಡದ್ದು ಕೇಳು..., ಒಂದರಿ ನಿನ್ನ ಅಜ್ಜ ಇತ್ತಿದವನ್ನೇ ಅವ್ವು ಯೇವುದೋ ಕಾರ್ಯಕ್ರಮ ಮುಗುಶಿಯೊಂಡು ಬಪ್ಪಗ ಇರುಳಾಗಿತ್ತು, ಅಂಬಗೆಲ್ಲಾ ಈಗಾಣ ಹಾಂಗೆ ಬಸ್ಸುಗೊ ಎಲ್ಲಾ ಇತ್ತಿದಿಲ್ಲೆ, ಹಾಂಗೇ ನಡಕ್ಕೊಂಡು ಬಂದೋಂಡಿತ್ತಿದ್ದವಡ, ಕೈಲಿ ಅಂಬಗೆಲ್ಲಾ ಈಗಾಣ ಕಾಲದ ಹಾಂಗೆ ಆಸರಪ್ಪಗ ಕುಡಿವಲೆ ನೀರು ತೆಕ್ಕಂಡು ಹೋಪಲೆ ಬಾಟ್ಲಿಗೊ ಇತ್ತಿದಾ..., ಅಜ್ಜ ಎಲ್ಲಿಗೆ ಹೋವುತ್ತರೂ ಒಂದು ಕಮಂಡಲಲ್ಲಿ ನೀರು ತೆಕ್ಕೊಂಡು ಹೋಯಿಕ್ಕೊಂಡಿತ್ತಿದ್ದವು. ಹಾಂಗೇ ಅದರ ಒಂದು ಕೈಲಿ ಹಿಡ್ಕೊಂಡು, ಮತ್ತೊಂದು ಕೈಲಿ ಲಾಂಟನು ಹಿಡ್ಕೊಂಡು ದಾರಿಲಿ ನಡಕ್ಕೊಂಡು ಬಪ್ಪಾಗ ಕಸ್ತಲಾತಡ. ಮುಂದೆ ಬಂದುಕೊಂಡಿದ್ದಾಂಗೇ ಒಂದು ಬೆಳೀ ವಸ್ತ್ರ ಸುತ್ತಿದ ಹೆಂಗಸು ಅಜ್ಜನೆದುರು ಬಂದು, ’ಸ್ವಾಮೀ, ಸ್ವಲ್ಪ ನೀರು ಕೊಡ್ತೀರಾ?’ ಹೇಳಿ ಕೇಳಿತಡ. ಅಂಬಗ ಅಜ್ಜಂಗೆ ಅದು ಮನುಷ್ಯ ಅಲ್ಲ ಹೇಳಿ ಗೊಂತಾಗಿ, ಕಣ್ಣು ಮುಚ್ಚಿ ಮಂತ್ರ ಹೇಳಿಯೊಂಡು ಕಮಂಡಲಂದ ಕೈಗೆ ನೀರೆರಕ್ಕೊಂಡು ಅದರ ಮೇಲೆ ಪ್ರೋಕ್ಷಣೆ ಮಾಡಿದವಡ, ಅಷ್ಟಪ್ಪಗ ಆ ಹೆಂಗಸೇ ಅಲ್ಲಿಂದ ಮಾಯ ಆತಡ!" ಅಜ್ಜಿ ಹೇಳಿದ ಈ ಕತೆಯ ಬಾಯಿಬಿಟ್ಟೊಂಡು ಕೇಳುಲೆ ಭಾರೀ ಸ್ವಾರಸ್ಯಕರವಾಗಿದ್ದತ್ತು! ಒಂದು ಸಿನೆಮಾ ನೋಡಿ ಬಂದಷ್ಟು ಖುಷಿ ಆತೆನಗೆ! ಆದರೆ ಅಜ್ಜ, ಅಜ್ಜನ ಗಟ್ಟಿಗ ಹೇಳಿ ತೋರಿಸಿಕೊಂಬಲೆ ಅಜ್ಜಿ ಎದುರು ಬಂಡಲ್ ಬಿಟ್ಟದಾ ಅಲ್ಲಾ ನಿಜವಾಗಿ ಹೀಂಗೆಲ್ಲಾ ನಡದ್ದಾ, ಅಲ್ಲಾ ಅಜ್ಜನ ಭ್ರಮೆಯೋ ಹೇಳಿ ಮಾಂತ್ರ ಆರಿಂಗೂ ಗೊಂತಿಲ್ಲೆ! 



ಕೆಲವುದಿಕ್ಕೆಲ್ಲಾ ಹಿರಿಯರು ಅವರ ಪೈಕಿಯವರ, ಹೆಮ್ಮಕ್ಕಳ, ಮಕ್ಕಳ ಎಲ್ಲಾ ಕೆಲವು ನಿರ್ದಿಷ್ಟ ಜಾಗೆಗೆ, ಕೆಲವು ಮರಂಗಳ ಹತ್ತರೆ ಎಲ್ಲಾ ಹೋಪಲಾಗ ಹೇಳುದರ ಬಹುಶ: ನಿಂಗೊಲ್ಲಾ ಕೇಳಿಪ್ಪಿ! ಎಂತಕೆ? ಹೇಳುವ ಜಿಜ್ಞಾಸೆ ಇನ್ನೂ ಕಾಡುತ್ತಾ ಇದ್ದು ಎನ್ನ! ಹುಣಸೇ ಮರಕ್ಕೆ ಅಂದು ಸಣ್ಣಾದಿಪ್ಪಗ ಹೆದರಿಯೊಂಡಿದ್ದ ಎನ್ನನ್ನೇ ಗೇಶಿ ಜೋರಾಗಿ ನೆಗೆ ಬತ್ತು ಈಗೆಲ್ಲಾ ಊರಿಂಗೆ ಹೋದಿಪ್ಪಗ ಎಂತಕೆ ಹೇಳಿರೆ ಆನೊಬ್ಬನೇ ಹೋಗಿ ಅರೆಹಣ್ಣಾದ, ಪೂರ್ತಿ ಹಣ್ಣಾದ ಹುಣಸೇಹುಳಿಯ ತಿಂಬಲೆ ಹೇಳಿ ಅಂಬಗಂಬಗ ಹೋಯಿಕ್ಕೊಂಡಿರ‍್ತೆ ಒಬ್ಬನೇ ಆ ಮರದ ಹತ್ತರೆ! ಇದುವರೆಗೂ ಎಷ್ಟೇ ಹದ್ದಿನ ಕಣ್ಣಿಲಿ ನೋಡಿದರುದೇ ಒಂದೇ ಒಂದು ಶಕ್ತಿಯ ಆ ಮರಲ್ಲಿ ಕಂಡಿದ್ದೇ ಇಲ್ಲೆ ಆನು! ಬಾಯಿಗೆ ರುಚಿಯಾವುತ್ತು ಹೇಳಿಯೊಂಡು ಲೆಕ್ಕಂದ ಹೆಚ್ಚು ಹುಳಿ ತಿಂದರೆ ಮಾಂತ್ರ ದಿನಲ್ಲಿ ಕನಿಷ್ಠ ಪಕ್ಷ ಆರರಿಂದ ಏಳು ಸರ‍್ತಿ ಹೆರ ಹೋಯಿಕ್ಕೊಂಡಿರೇಕಾವುತ್ತು! ಅದರ ಆ ಹುಣಸೇ ಮರದತ್ತರೆ ಒಬ್ಬನೇ ಹೋದಕ್ಕೆ ಹಾಂಗಪ್ಪದು ಹೇಳಿ ಖಂಡಿತಾ ಹೇಳುಲೆಡಿತ್ತಿಲ್ಲೆ! ಎಂತ ಹೇಳುತ್ತಿ?!



ಓ ಮೊನ್ನೆ ಮೊನ್ನೆ ಎಂಗಳ ಸಣ್ಣ ಮಗಳು  ಹೊಸ್ತಿಲು ದಾಂಟಿ ಒಳ ನುಗ್ಗೇಕಾರೇ, "ಅಮ್ಮಾ ವ್ಯಾನಿಲಿ ಬಪ್ಪ ಪ್ರಿಯಾಂಕ ಹೇಳಿತು ಆ ಕಾರ್ಪೋರೇಷನ್ ವಾಟರ್ ಪಂಪಿನ ಬಿಲ್ಡಿಂಗಿನ ಹತ್ತರೆ ಪಿಶಾಚಿ ಇದ್ದಡ!" ಹೇಳಿ.

"ಅದಕ್ಕೆ ಬೇರೆ ಕೆಲಸ ಇಲ್ಲೆ ಮಗಾ, ಪಿಶಾಚಿ ಅಡ ಪಿಶಾಚಿ, ಎಂತರ ನೋಡಿದ್ದೋ, ಎಂತರ ಹೇಳುದೋ ಏನೋ, ಅದು ಹಾಂಗೆ ಹೇಳಿತು ಹೇಳಿ ನಿಂಗೊಲ್ಲಾ ನಂಬಿ ಹೆದರೇಕು ಹೇಳಿ ಇಲ್ಲೆ" ಹೇಳಿ ಹೇಳಿದೆ. ಅದು ಅದರಕ್ಕನ ಎದುರಂದ ಹೇಳಿದ್ದು ಎನಗೆ ರಜ್ಜವೂ ಕುಷಿ ಆಯಿದಿಲ್ಲೆ. ಹೋಗಿ, ಹೋಗಿ ಅಕ್ಕನೆದುರಂದ ಹೇಳಿತನ್ನೇ ಹೇಳಿ ಆತೆನಗೆ! ಅದು ಮೊದಾಲೇ ಹೆದರುಪುಕ್ಕಲಿ, ಜೇಡ, ಎಲಿ, ಹಲ್ಲಿ, ಕೆಪ್ಪೆ, ಜರಲೆಗಳ ಬಿಡಿ, ಬಸವನಹುಳು ಕಂಡರೂ ಹೆದರುವ ಜೆನ! 


"ಅಪ್ಪಾ ತಂಗೇ....?! ಎಲ್ಲಿ?! ಎಷ್ಟೊತ್ತಿಗೆ ಅದು ನೋಡಿದ್ದಡಾ? ಹೇಂಗಿತ್ತಡಾ ನೋಡುಲೆ? ಇಂದಿರುಳು ಆನು ಓದುಲೆ ಹೆರ ಇಪ್ಪ ರೂಮಿಂಗೆ ಹೇಂಗೆ ಒಬ್ಬನೇ ಹೋಗಲಿ?!....." ನಾಲ್ಕೂ ಪ್ರಶ್ನೆಗಳ ಒಟ್ಟಿಂಗೆ ಕೇಳಿ ಎದುರಿನ ಬಾಗಿಲ ಚಿಲಕ ಹಾಕಿತು! ಅದು ಬಾಗಿಲು ಹಾಕಿದ ಸ್ಟೈಲಿಲಿಯೇ ಅಂದಾಜು ಮಾಡಿದೆ ಅದು ಎಷ್ಟು ಹೆದರಿದ್ದು ಹೇಳಿ! ಮೆಲ್ಲಾಂಗೆ ಕಿಟಕಿಯ ರಜ್ಜ ತೆರದು ಮನೆ ಮುಂದೆ ಇಪ್ಪ ಆ ಕಾರ್ಪೋರೇಷನ್ ಪಂಪಿನ ಬಿಲ್ಡಿಂಗಿನ ಕಡೆ ನೋಡಿತು!

"ಓ ದೇವರೇ ಎಂತರ ಮಗಳು ನೀನು ಇಷ್ಟು ಹೆದರುದು? ಕಾಲೇಜಿಲಿ ಮೃತ ಶರೀರದ ಹತ್ತರವೇ ನಿಂದೋಂಡು ದೇಹದ ಅಂಗಾಗಗಳ ಬಗ್ಗೆ ಪಾಠ ಕಲಿತ್ತಾ ಇಪ್ಪ ನೀನು ಹೆದರುದಾ?! ಬರೇ ದಂಡ" ಹೇಳಿದೆ. ಇದರ ಓದುವ ಕೋಣೆಲಿ ಕಲಿವಲೆ ಹೇಳಿ ಖರೀದಿಸಿ ತಂದ ತಲೆಬುರುಡೆ ಕೂಡಾ ಇದ್ದು. ಎಂಗೊಲ್ಲಾ ಹನ್ನೊಂದು ಗಂಟೆಗೆ ವರಗಿದ ಮತ್ತೆ ಅದು ಅದಕ್ಕೆ ಸಾಗರದ ಹಾಂಗೆ ಓದುಲಿಪ್ಪ ಪಾಠಂಗಳ ಒಂದೂವರೆ ಗಂಟೆವರೆಗೂ ಅದೇ ತಲೆಬುರುಡೆ ಮಡುಗಿಯೊಂಡಿಪ್ಪ ಕೋಣೆಲಿಯೇ ಓದುದು! "ಅಯ್ಯೋ ಅಂತಾ ನೀನೇ ಈ ಲಾಟ್‍ಪೂಟ್ ಆರೋ ಹೇಳಿದ ವಿಷಯಕ್ಕೆ ಇಷ್ಟು ಹೆದರುತ್ತೆನ್ನೇ..." ಹೇಳಿ ಎನ್ನ ಚಿಂತೆಯ ತೋರಿಸಿಯೊಂಡೆ.
"ಅಯ್ಯೋ ಅಮ್ಮಾ ಅದಾದರೆ ಎಂತ ಆವುತ್ತಿಲ್ಲೆ...ಅದು ಎದ್ದು ಬತ್ತಿಲ್ಲೆ...ತಂಗೆ ಹೇಳುದರ ಕೇಳು... ಅದು ಬೇರೆ ವಿಷಯ" ಹೇಳಿ ನಾಲಗಗೆ ಹೇಂಗೆ ತೋಚಿತೋ ಹಾಂಗೆಲ್ಲಾ ಮಾತಾಡಿತು! ಈ ಹೆದರು ಪುಕ್ಕಲಿಯ ಅದರ ಕಾಲೇಜಿನ ಅನಾಟಮಿ ಪ್ರೊಫೆಸರುಗೊ ಹುಶಾರಿನ ಹುಡುಗಿ ಹೇಳಿ ಹೇಂಗೆ ಹೊಗಳುತ್ತವೋ ಹೇಳಿ ಒಂದರಿಯಂಗೆ ಅನ್ನಿಸಿತು! ಈ ಜೆನದ ಹತ್ತರವೇ ಇದು ಲಾಯ್ಕ ವಿವರಿಸುವ ವಿದ್ಯಾರ್ಥಿ ಹೇಳಿ ಅವಕ್ಕೆ ಕಲಿವಲಿಪ್ಪ ದೆಡ್ ಬಾಡಿಯ ಹತ್ತರ ಹೋಗಿ ಮುನ್ನಾಣ ದಿನ ಮಾಡಿದ ಪಾಠವ ವಿವರಿಸುಲೆ ಹೇಳಿಕೊಂಡಿರ‍್ತವಡ! ಇದು ಕಾಲೇಜಿಂಗೆ ಸೇರಿದ ಲಾಗಾಯ್ತು ಸಾಮಾನ್ಯವಾಗಿ ಹೇಳಿಕೊಂಡಿಪ್ಪ ಈ ವಿಚಾರವ ಗೇಶಿಯೊಂಡು ಹಣೆ ಚಚ್ಚಿಯೊಂಡೆ!
ಸಣ್ಣ ಮಗಳು ಹೇಳಿತು, "ಅಮ್ಮಾ ಕೇಳು, ಅಕ್ಕಾ ನೀನುದೇ ಕೇಳು, ನಿನ್ನೆ ಇರುಳು ಹತ್ತು ಗಂಟೆಗೆ ಪ್ರಿಯಾಂಕಂದೇ ಅದರಣ್ಣಂದೇ ಹೋಯಿಕ್ಕೊಂಡಿಪ್ಪಾಗ ಆರೋ ಬತ್ತಾ ಇಪ್ಪಾಂಗೆ ಶಬ್ದ ಅಪ್ಪಗ ಹಿಂದೆ ತಿರುಗಿ ನೋಡಿದವಡ. ಅಂಬಗ ಕಂಡದಡಾ, ಉದ್ದಕ್ಕೆ ಇತ್ತಡ, ಬೆಳ್ಳಂಗೆ ಇತ್ತಿದಡ..., ಮತ್ತೆ ಅವ್ವಿಬ್ರೂ ಪುನ: ಹಿಂದೆ ಸಹ ತಿರುಗಿ ನೋಡದ್ದೇ ಓಡಿ ಹೋಗಿ ಮನೆ ಸೇರಿದವಡ..., ಅಮ್ಮಾ ಅದು ಪಾಪ ಹಾಂಗೆಲ್ಲ ಸುಳ್ಳು ಹೇಳ್ತಿಲ್ಲೆ ಎಂಗೊಗೆಲ್ಲಾ ಗಾಡ್ ಪ್ರಾಮಿಸ್ ಹಾಕಿ ಶುದ್ಧಿ ಹೇಳಿದ್ದು ಗೊಂತಿದ್ದಾ?"
ತಂಗೆಯ ಬಾಯಿಂದ ಇಷ್ಟು ಶುದ್ಧಿ ಕೇಳಿದ ದೊಡ್ಡ ಮಗಳು ಅಂದು ಇರುಳಪ್ಪಗ ಹೆರ ಇಪ್ಪ ಅದರ ರೂಮಿಂಗೆ ಹೋಯಿದೇ ಇಲ್ಲೆ!
ಮರುದಿನ ಆ ಬಿಲ್ಡಿಂಗಿಂಗೆ ಆನುದೇ, ಎನ್ನ ನೆರೆಕರೆಯ ಫ್ರೆಂಡುದೇ ಹೋಯಿದೆಯ. ಅಲ್ಲಿ ಬೆಳಿ ಪೈಯಿಂಟ್ ಬಳುದ ಉದ್ದುದದ ಕಬ್ಬಿಣದ ಶೀಟುಗಳ ಗೋಡೆಗೆರಗಿಸಿ ಮಡುಗಿತ್ತವು.  ಅಲ್ಲಿ ಒಂದು ಜೆನ ಇತ್ತಿದು, ಅದರ ಅತ್ತಿತ್ತೆ ಹೋಪದರ ನೋಡಿ ಎಂಗೊಗೆ ಪರಿಚಯ ಇದ್ದತ್ತು. ಅದರತ್ತರೆ ಕೇಳಿದೆ, "ಆ ಶೀಟುಗಳು ಎಂತದಕ್ಕೆ ಇರೋದು? ಯಾವಾಗ ತಂದದ್ದು?" ಹೇಳಿ. 
"ಅದಿಲ್ಲಿ ಸಣ್ಣ ಟೆಂಟ್ ಹಾಕ್ಲಿಕ್ಕೆ ಮ್ಯಾಡಂ, ಇಲ್ಲಿ ಒಂದು ಏಳೆಂಟು ತಿಂಗಳಿನ ಮಟ್ಟಿಗೆ ಕೆಲಸ ಉಂಟು, ಹಾಗೆ ಕೆಲಸದವ್ರಿಗೆಲ್ಲಾ ಉಳುದುಕೊಳ್ಳಲಿಕ್ಕೆ ಬೇಕಲ್ವಾ? ಹಾಗೆ ನಿನ್ನೆ ರಾತ್ರಿ ಇದನ್ನೆಲ್ಲಾ ಒಂದೊಂದಾಗಿ ತಂದು ಇಟ್ಟದ್ದು ಆ ಲೇಬರರ‍್ಸ್" ಹೇಳಿ ಹೇಳಿತು ಆ ಜೆನ! 
ಮನೆಗೆ ಬಂದು ಮಕ್ಕೊಗೆ ಹೇಳಿದೆ, "ಇದಾ ನಿನ್ನೆ ಪಿಶಾಚಿ, ಪಿಶಾಚಿ ಹೇಳಿ ಹೆದರಿಯೊಂಡಿತ್ತಿರನ್ನೇ ಅದು ಪಿಶಾಚಿಯೂ ಅಲ್ಲ, ಪ್ರೇತವೂ ಅಲ್ಲ, ಹಾಂಗಿಪ್ಪದು ಇಲ್ಲವೂ ಇಲ್ಲೆ, ಅದಿದಾ ಉದ್ದುದ್ದದ ಬಿಳೀ ಬಣ್ಣದ ಪೈಂಟ್ ಕೊಟ್ಟ ಕಬ್ಬಿಣದ ಶೀಟುಗೊ, ನಿನ್ನೆ ಇರುಳಪ್ಪಗ ತರಿಸಿದ್ದಡ ಕೆಲಸಗಾರರಿಂಗೆ ಉಳುಕೊಂಬಲೆ ಟೆಂಟು ಕಟ್ಟುಲೆ ಹೇಳಿ, ಆನುದೇ, ಪಕ್ಕದ ಮನೆ ಆಂಟಿದೇ ಹೋಗಿ ಎಲ್ಲಾ ತಿಳುಕೊಂಡು ಬಂದೆಯ, ಆ ನಿನ್ನ ವ್ಯಾನಿನ ಫ್ರೆಂಡಿಂಗೂ ಹೇಳು ಅವ್ವು ನೋಡಿದ್ದು ಉದ್ದ ಬೆಳಿ ಪಿಶಾಚಿಯ ಅಲ್ಲ, ಉದ್ದದ ಬೆಳಿ ಪೈಯಿಂಟ್ ಕೊಟ್ಟ ಶೀಟುಗಳ ಮನುಷ್ಯರು ಹೊತ್ತೋಂಡು ಬಪ್ಪದರ ಹೇಳಿ, ಆತಾ..." ಹೇಳಿದೆ. ಒಂದೊಂದರಿ ಅನ್ಸುತ್ತು ಹೀಂಗಿಪ್ಪಾ ಘಟನೆಗೊ ಎಲ್ಲಾ ನಡದು, ಒಬ್ಬ ಇನ್ನೊಬ್ಬಂಗೆ ಹೇಳ್ತಾ ಗಾಳಿಸುದ್ಧಿಗೊ ಹಬ್ಬಿ, ಸತ್ಯಾಂಶ ಎಂತ ಹೇಳಿ ತಿಳುಕೊಳ್ಳದ್ದೇ ಪಿಶಾಚಿ, ಪ್ರೇತಗಳ ಕತೆಗೊ ಎಲ್ಲಾ ಅಸ್ತಿತ್ವಕ್ಕೆ ಬಂದದು ಹೇಳಿ! 
ಅದೇ ದಿನಂದಲೇ ಮಗಳು ಒಂದೇ ಆ ಹೆರ ಇಪ್ಪ ರೂಮಿಂಗೆ ಹಗಲಾಗಲೀ, ಇರುಳಾಗಲೀ ಒಬ್ಬನೇ ಹೋಯಿಕ್ಕೊಂಡು ಬಂದೊಂಡು ಇದ್ದು!
ಮಕ್ಕೊ ಇಬ್ರಿಂಗೂ ಈ ಮೇಲೆ ನಡೆದ ವಿಷಯಲ್ಲಿ ’ಎಂತದ್ದೂ’ ಇಲ್ಲೆ ಹೇಳಿ ಒಂದು ನಮೂನೆ ಸಮಾಧಾನ ಆದರೂ ಕೂಡಾ ಪ್ರತಿಯೊಬ್ಬರಲ್ಲಿಪ್ಪ ಹಾಂಗೆ ಈ ನಿಶಾಚರಿಗಳ ಬಗ್ಗೆ ಜಿಜ್ಞಾಸೆ, ಸಂಶಯ ಇನ್ನುದೇ ಇದ್ದು! 


ತ್ರಿವೇಣಿ ವಿ ಬೀಡುಬೈಲು,

ಮಂಗಳೂರು 

ಅಲ್ಲಿಯೇ ಇದ್ದಲ್ಲದಾ...?!-ಹವ್ಯಕ ವಾರ್ತೆ ಒಕ್ಟೋಬರ್ ೨೦೧೨ ರಲ್ಲಿ ಪ್ರಕಟವಾದ ಹಾಸ್ಯ ಲೇಖನ

ಅಲ್ಲಿಯೇ ಇದ್ದಲ್ಲದಾ...?!


"ಅಪ್ಪೋ, ಒಂದರಿ ಎನ್ನ ಮೊಬೈಲಿಂಗೆ ಮಿಸ್ಡ್ ಕಾಲ್ ಕೊಡಿ ನೋಡುವ,ಇಲ್ಲೇ ಮಡುಗಿತ್ತೆ,ಕಾಣ್ತಿಲ್ಲೆ,ಮನೆ ಇಡೀ ಹುಡುಕಿ ಹುಡುಕಿ ಸಾಕಾತು!".ಇದೇ ಡೈಲಾಗಿನ ನಿಂಗೊಲ್ಲಾ ಹೇಳಿಪ್ಪಿ! ಮತ್ತೆ "ಅವ್ವು"-ನಿಂಗಳ ಯಜಮಾನರು ನಿಂಗಳ ಮೊಬೈಲಿಂಗೆ ಮಿಸ್ಡ್ ಕಾಲ್ ಕೊಟ್ಟ ಮತ್ತೆ ನಿಂಗೊಗೆ ಸುಲಾಭಲ್ಲಿ ಮೊಬೈಲು ನಿಂಗಳ ಕೈಸೇರಿರುತ್ತು!ಈ ಇನ್ಸಿಡೆಂಟ್ ಉಲ್ಟಾ,ಪಲ್ಟಾ ಆದಿಪ್ಪಲೂ ಸಾಕು. ಅವ್ವೇ ನಿಂಗಳ ಹತ್ತರೆ ಮಿಸ್ಡ್ ಕಾಲ್ ಕೊಡ್ಲೆ ಹೇಳಿ ಅವಕ್ಕೆ ಅವರ ಮೊಬೈಲಿನ ಪತ್ತೆ ಹಚ್ಚುಲೆ ಸುಲಾಭ ಆದಿಕ್ಕು! ಇಲ್ಲೆ ಹೇಳಿಯಾದರೆ ನಿಂಗಳೇ ಇನ್ನೊಂದು ಮೊಬೈಲಿಂದ ಮಿಸ್ಡ್ ಕಾಲ್ ಕೊಟ್ಟುಕೊಂಡಿಪ್ಪಿ ಅಥವಾ ಮಕ್ಕಳ ಹತ್ತರೆ ಹೇಳಿ ಮಿಸ್ಡ್ ಕಾಲ್ ಕೊಡಿಸಿಕೊಂಡಿಪ್ಪಿ! ಮಿಸ್ಡ್ ಕಾಲ್ ಕೊಟ್ಟದ್ದಾಗಲಿ, ಆರು ಆರಿಂಗೆ ಹೇಳಿದ್ದಾಗಲೀ ಇಲ್ಲಿ  ಮುಖ್ಯ ಅಲ್ಲ ಬಿಡಿ! ಮೊಬೈಲಿಂಗೆ ಕಾಲ್ ಕೊಟ್ಟಪ್ಪಗ ರಿಂಗ್ ಕೇಳುತ್ತ ಕಾರಣ ಮಡುಗಿದ ಜಾಗೆಲೇ ಮೊಬೈಲ್ ಬೇಗ ಸಿಕ್ಕುತ್ತು!ಆದರೆ ಮೊಬೈಲ್ ಒಂದೇ ಹೀಂಗೆ ಉಪದ್ರ ಕೊಡುದಾ?ಕೊಡೆ, ವಾಚ್,ಬ್ಯಾಗ್,ಪೆನ್ನು,ಪುಸ್ತಕ,ಮನೆ ವಾಹನಂಗಳ ಕೀಗೊ.....ಪಟ್ಟಿ ಮಾಡುತ್ತಾ ಹೋದರೆ ಲಿಸ್ಟು ತುಂಬಾ ಉದ್ದ ಅಕ್ಕು!ಇವೆಲ್ಲದರ ಮಡುಗಿದ ಅ ಜಾಗೆ ಮರತು ಹೋಗಿ ಸಿಕ್ಕುವನ್ನಾರ ಹುಡುಕೀ ಹುಡುಕೀ ಸಿಕ್ಕದ್ದೇ ಸಾಕುಹಿಡುದು ಹೋಪಗ ಕೆಲವೊಂದರಿ ಅನ್ನಿಸಿಬಿಡ್ತು ಅವಕ್ಕೂದೇ ಮಿಸ್ಡ್ ಕಾಲ್ ಕೊಡುವ ವ್ಯವಸ್ಥೆ ಇದ್ದಿದ್ದರೆ ಬೇಗ ಸಿಕ್ಕುತ್ತಿತ್ತನ್ನೇ ಹೇಳಿ!

ಉಂಡಾಗಿ  ಮನುಗುಲೆ ಹೋಪ ಮೊದಲು ಬಾತ್ ರೂಮಿಂದಲೇ ಕೇಳಿದವಿವು,"ಬ್ರಶ್, ಟೂತ್ ಪೇಸ್ಟ್ ಎಲ್ಲಿ ಮಡುಗಿದ್ದೆ?"ಹೇಳಿ. "ಅಲ್ಲೇ ಅದರ ಜಾಗೆಲೇ ಮಡುಗಿದ್ದೆ. ಅಲ್ಲಿಯೇ ನೋಡಿ" ಹೇಳಿ ಹೇಳಿದೆ. ಮತ್ತೆ ಕೂಡ್ಲೇ ನೆಂಪಾತು, ಚಿಕ್ಕಮ್ಮ ಕಾಲ್ ಮಾಡಿ ಹೇಳಿತ್ತು ಅರ್ಧ ದಾರಿ ಎತ್ತಿಯಪ್ಪಗ ಎಂಗೊ ಅಲ್ಲಿ ಉಳುದುಬಪ್ಪಲೆ ಹೇಳಿ ಕೊಂಡು ಹೋದ ಟೂತ್ ಪೇಸ್ಟ್, ಸಾಬೂನಿನ ಕಿಟ್ ಅವರ ಮನೇಲೇ ಬಾಕಿಯಾದ್ದರ.ಅದರ ಇವಕ್ಕೆ ಹೇಳುಲೆ ಮರತುಹೋಗಿದ್ದತ್ತು ಅಷ್ಟೇ! "....ಓ ಅದರ ಅಲ್ಲಿ ಹುಡುಕೇಡಿ, ಸಾರಿ,ಅದು ಚಿಕ್ಕಮ್ಮನಲ್ಲೇ ಬಾಕಿಯಾಯ್ದು. ಹೊಸತ್ತು ತಪ್ಪನ್ನಾರ ಬೆರಳನ್ನೇ ಬ್ರಶ್ ಮಾಡಿಯೊಳೇಕಷ್ಟೇ.ಪೇಸ್ಟಿದ್ದು ಕಳುದ ಸಲ ಪೇಟೆಂದ ತಂದು ಮಡುಗಿದ್ದು ಸ್ಟಾಕಿಲ್ಲಿ ಹೇಳಿ ಇವರ ಕೈಗೆ ತಂದುಕೊಟ್ಟಿಕ್ಕಿ,"ಉಪ್ಪಿಲೂ ತಿಕ್ಕುಲಕ್ಕು, ಕಾಯಿಸಿಪ್ಪೆ ಬೇಕಾ?"ಕೇಳಿದೆ.
"ಇನ್ನೂ ಎರಡು ವಸ್ತುಗಳ ಬಾಕಿ ಮಾಡಿದ್ದೆ ಕೇಳುಲೆ,ಮಾವಿನ ಎಲೆ,ಬೇವಿನ ಎಲೆದೇ ಜಾಲಿಲಿದ್ದಲ್ಲದಾ?!"ಮೋರೆಯ ಒಂದು ನಮೂನೆ ಮಾಡಿ ಕೇಳಿದವಿವು!ಇನ್ನು ಮುಂದಿನ ವರ್ಷವೇ ಚಿಕ್ಕಮ್ಮನಲ್ಲಿಗೆ ಹೋಪದು! ಮರೆವಿಂದಾಗಿ ಎಂಗೊ ನಾಲ್ಕು ಜನಕ್ಕೆ ಹೊಸ ಬ್ರಶ್ಶು ಖರೀದಿ ಅನಿವಾರ್ಯ ಆಗಿತ್ತು ಬೇರೆ! ಆದರೆ ಅಂಗಡಿ ಎಂತ ಮನೆ ಹತ್ತರೆ ಇದ್ದಾ?! ತಪ್ಪನ್ನಾರ ಇವರ ಮೂಡ್ ಸರಿಯಾಗ, ತಂದರೂ ಸರಿಯಾಗ, ಅಂಬಗಂಬಗ ಹೊಸಾ ಬ್ರಶ್ ತಂದ ಮತ್ತೆ ಅದಕ್ಕೆ ಎನ್ನಿಂದಾಗಿ ಖರ್ಚಾತನ್ನೇ ಹೇಳಿ ಹೇಳಿಯೊಂಡೇ ಇಕ್ಕು!
 ಮರುದಿನ ಉದಿಯಪ್ಪಗ ಎದ್ದು ಉಪ್ಪಿಲಿ ಹಲ್ಲು ತಿಕ್ಕಿ ಚಾ ಕುಡುದಾದ ಮತ್ತೆ ಕೇಳಿದವಿವು -
" ಆ ನೇಲ್ ಕಟ್ಟರಿನ ಎಲ್ಲಿ ಮಡುಗಿದ್ದೆ? ಇಲ್ಲಿ ಕಾಣುತಿಲ್ಲೆನ್ನೆ.ಉಗುರು ತೆಗೆಯೇಕು, ನಾಳಂಗೆ ಮದುವಗೆ ಹೋಪಲಿದ್ದಲ್ಲದಾ?"
"ಆಯ್ಯೋ ಅಲ್ಲೇ ಅದರ ಜಾಗೆಲೇ ಮಡುಗಿದ್ದೆ ನಿನ್ನೆ ಎನ್ನ ಉಗುರು ತೆಗೆದಿಕ್ಕಿ"
"ಅಲ್ಲಿ ಇಲ್ಲೆ ಹೇಳಿ ಕೇಳ್ತಾ ಇಪ್ಪದು"
"ಆನು ಅಲ್ಲಿಯೇ ಮಡುಗಿದ್ದು, ಅಲಿಯೇ ಸರಿಯಾಗಿ ನೋಡಿ"
"ಅಲ್ಲಿಯೇ ಮಡುಗಿದ್ದರೆ ಸಿಕ್ಕುತ್ತಿತ್ತಿಲ್ಲೆಯಾ ಅದು?ಅದಕ್ಕೆಂತ ಕಾಲುಗೊ ಇದ್ದಾ ಅಲ್ಲಿಂದೆದ್ದು ಹೋಪಲೆ?!"
"ನೈಲ್ ಕಟ್ಟರ್ ಎನ್ನ ಹತ್ತರೆ ಅಂತೂ ಇಲ್ಲೆ,ಎನಗೆಂತಕಿಪ್ಪದು ಅದು?ಉಗುರು ತೆಗೆದ ಕೂಡ್ಲೇ ಅಲ್ಲಿಯೇ ಮಡುಗಿದ್ದೆ,ಮತ್ತೆನಗೆ ಗೊಂತಿಲ್ಲೆ.ಇನ್ನು ಅದರ ಹುಡುಕಿಕೊಂಡು ಕೂರೇಡಿ,ಈಗ ಸದ್ಯಕ್ಕೆ ಆ ಬ್ಲೇಡಿಲೋ,ಪೀಶಕತ್ತಿಲೋ ಉಗುರು ತೆಗೆರಿ,ಮತ್ತೆ ನೋಡುವ ಅದೆಲ್ಲಿದ್ದು ಹೇಳಿ!"
"ಮೆಟ್ಟುಕತ್ತಿಲಿದೇ ತೆಗೆವಲಕ್ಕು!ಒಂದು ವಸ್ತುವ ತೆಗದು ಪುನ: ಅದರ ಜಾಗೆಲಿ ಮಡುಗುತ್ತ ಕ್ರಮ ಒಬ್ಬಂಗುದೇ ಇಲ್ಲೆ."ಪರಚಿದವಿವು.
ಬ್ರಶ್,ನೇಲ್ ಕಟ್ಟರ್ ವಿಷಯಂದಾಗಿ ಇವು ಫುಲ್ ಅಪ್ ಸೆಟ್ ಆದ ಕಾರಣ ಒಂದೂ ಮಾತನಾಡದ್ದೆ ತಿಂಡಿ ತಿಂದು ಮುಗುಶಿದೆಯ! 


ಸೂಟುಮಣ್ಣು ಮಾಡುಲೆ ಮಣ್ಣು,ಕರಟ,ಮಡಲು,ಒಣಗಿದ ಸೊಪ್ಪು,ಬಜಕ್ಕರೆ ಎಲ್ಲಾ ಒಟ್ಟು ಮಾಡಿ ಗುಡ್ಡೆ ಮಾಡಿಕ್ಕಿ ಇವು,"ದೇವರ ಕೋಣೆಂದ ಆ ಬೆಂಕಿಪೆಟ್ಟಿಗೆ ಕೊಂಡ ಮಗಾ!ಈ ರಾಶಿಗೆ ಕಿಚ್ಚು ಹಾಕಿ ಸೂಟುಮಣ್ಣು ಮಾಡುವಾ"ಹೇಳಿ ಮಗಳತ್ತರೆ ಹೇಳಿದವು. ಕೂದಲಿಂದೆದ್ದು ಮಗಳು ದೇವರ ಕೋಣೆಗೆ ಹೋತು. ಬರಿಗೈಲಿ ವಾಪಸ್ಸು ಬಂದು,"ಅಪ್ಪಾ, ಅಲ್ಲಿ ಬೆಂಕಿಪೆಟ್ಟಿಗೆ ಇಲ್ಲೆ"ಹೇಳಿ ಹೇಳಿತು.

"ಓ ಆ ಬೆಂಕಿಪೆಟ್ಟಿಗೆದೇ ಹೋಯ್ದ ಬ್ರಶ್,ನೇಲ್ ಕಟ್ಟರ್ ಗಳೊಟ್ಟಿಂಗೆ?! ಎಲ್ಲಿ ಮಡುಗಿದ್ದಯಾ ಅದರ?" ಹೇಳಿ ಎನ್ನತ್ತರೆ ಕೇಳಿದವಿವು!
"ಆನು ನಿನ್ನೆ ಕಸ್ತಲೆ ದೇವರ ದೀಪ ಹೊತ್ತಿಸಿಕ್ಕಿ ಅಲ್ಲೇ ಮಡುಗಿದ್ದೆನ್ನೇ....."
"ಅಪ್ಪಪ್ಪಾ,ನೀನು ಎಲ್ಲಾ ವಸ್ತುಗಳ ಅದರದರ ಜಾಗೆಲಿಯೇ ಮಡುಗಿರುತ್ತೆ.ನೀನು ಅದರೆಲ್ಲಾ ಎಲ್ಲೆಲ್ಲಿ ಮಡುಗಿದ್ದೆಯೋ ಅದು ಅಲ್ಲಲ್ಲೇ ಇಪ್ಪದು ಖಂಡಿತಾ!ನಿನ್ನ ಕೇಳುದು ಸುಮ್ಮಗೆ.ಮಗಾ ಹೋಗು ಗ್ಯಾಸ್ ಆನ್ ಮಾಡಿ ಒಂದು ಕ್ಯಾಂಡಲ್ ಹೊತ್ತಿಸಿ ಕೊಂಡ....ಅಮ್ಮ ಮಡುಗಿದ ವಸ್ತುಗೊಕ್ಕೆಲ್ಲಾ ಅಲ್ಲಲ್ಲಿ ನಿಂಬಲೆ ಗೊಂತಿಲ್ಲೆ ಹೇಳಿದವಿವು! ಮಗಳು ಒಳ ಓಡಿತು.ಎನ್ನ ಆಲೋಚನೆ ಹಿಂದೆ ಓಡಿತು. ಮಗಳು ಕ್ಯಾಂಡಲ್ ಹೊತ್ತಿಸಿ ಅಪ್ಪಂಗೆ ಕೊಟ್ಟಿಕ್ಕಿ ಬಂದು ಎನ್ನ ಹತ್ತರೆ ಕೂದತ್ತು."ಮಗಳೂ, ನೈಲ್ ಕಟ್ಟರ್,ಬೆಂಕಿಪೆಟ್ಟಿಗೆಯ ಎಲ್ಲಿಯಾದರೂ ನೋಡಿದೆಯಾ?"ಕೇಳಿದೆ.ಮಕ್ಕೊ ನಮ್ಮ ಗಮನಿಸ್ತಾ ಇರುತ್ತ ಕಾರಣ ಅದಕ್ಕೆಲ್ಲಿಯಾದರೂ ಗೊಂತಿಕ್ಕು ಹೇಳುವ ಆಶಾಭಾವನೆಲಿ!
"ಅಮ್ಮಾ ಒಂದು ಕೆಲಸ ಮಾಡು,ನೀನು ಆ ವಸ್ತುಗಳ ಎಲ್ಲಾ ತೆಗೆದ ಮತ್ತೆ ಉಗುರು ಕಟ್ ಮಾಡಿದ, ದೀಪ ಹೊತ್ತಿಸಿದ ಜಾಗೆಲಿ ಹೋಗಿ ನಿಲ್ಲು,ಅಂಬಗ ನೆಂಪಕ್ಕು ಅದರ ಎಲ್ಲಿ ಮಡುಗಿದ್ದೆ ಹೇಳಿ!" 
ಅಪ್ಪು ಅದು ಹೇಳಿದ್ದು ಸರಿ ಹೇಳಿ ಕಂಡತ್ತು, ಕೆಲವೊಂದರಿ ಹಾಂಗೆ ಮಾಡಿಪ್ಪಾಗ ನೆಂಪಾದ ಕೆಲವು ಪ್ರಸಂಗಗೊ ಇತ್ತವು!
ಶುರುವಿಂಗೆ ನೈಲ್ ಕಟ್ಟರಿನ ಮಡುಗುವ ಜಾಗೆಯ ಹತ್ತರೆ ಹೋದೆ.ನಿಂದೊಂಡು ಆಲೋಚನೆ ಮಾಡಿದೆ.ಫಿಲ್ಮಿಲಿ ಫ್ಲಾಶ್ ಬ್ಯಾಕಿನಂತೆ ಚಿತ್ರ ಸಮೇತ ಕಣ್ಣ ಮುಂದೆ ಬಂತು!ಆನು ನೈಲ್ ಕಟ್ಟರ್ ಕೊಂಡು ಹೋಗಿ ಸಿಟ್ ಔಟಿಲಿ ಉಗುರು ತೆಕ್ಕೊಂಡಿಪ್ಪಾಗ ಹೂಗಿನ ತೋಟಲ್ಲಿದ್ದ ಮಗಳು ದಿನಿಗೇಳಿತ್ತು,"ಅಮ್ಮಾ ಬಾ ನೋಡು ಅಲ್ಲಿ ಒಂದು ದೊಡ್ಡ ಕೇರೆ ಇದ್ದು ಹೇಳಿ, ಉಗುರು ತೆಗದು ಇನ್ನೆಂತ ಎದ್ದು ಒಳ ಹೋಪದು ಹೇಳಿ ಇತ್ತಿದ್ದ ಆನು ನೇಲ್ ಕಟ್ಟರ್ ಸಮೇತ ಮಗಳ ಹತ್ತರೆ ಹೋಗಿತ್ತೆ.ಅಲ್ಲಿಯೇ ವಸ್ತ್ರ ತೊಳವ ಕಲ್ಲಿಲ್ಲಿಪ್ಪ ಸೋಪಿನ ಗೂಡಿಲಿ ನೇಲ್ ಕಟ್ಟರಿನ ಮಡುಗಿಕ್ಕಿ ಕೇರೆ ಕಪ್ಪೆ ಹಿಡಿವುದರ ನೋಡಿಕ್ಕಿ ಇಬ್ಬರೂ ಒಳ ಬಂದಿತ್ತಿದ್ದೆಯಾ! ಓ ನೇಲ್ ಕಟ್ಟರ್ ಸಿಕ್ಕಿತು ಹೇಳಿ ವಸ್ತ್ರ ತೊಳವ ಕಲ್ಲಿನ ಹತ್ತರೆ ಓಡಿದೆ.ನೀನು ಮಡುಗಿದಲ್ಲಿಯೇ ಆನು ಸುರಕ್ಷಿತವಾಗಿದ್ದೆ ಹೇಳಿ ಅದು ನೆಗೆಮಾಡಿದ ಹಾಂಗೆ ಕಂಡತ್ತೆನಗೆ!ಮಾತನಾಡದ್ದೇ ಅದರ ತಂದು ಅದರ ಜಾಗೆಲಿಯೇ ಮಡುಗಿದೆ.
ಎನ್ನ ಮುಂದಿನ ಹೆಜ್ಜೆ ದೇವರ ಕೋಣೆಗೆ!ಅಲ್ಲಿ ಹೋಗಿ ಬೆಂಕಿಪೆಟ್ಟಿಗೆ ಮಡುಗುವ ಜಾಗೆಗೆ ಕೈಹಾಕಿದೆ ಎಂತಾರು ನೆಂಪಕ್ಕಾ ಹೇಳಿ ಆಸೆಲಿ! ಫ್ಯಾಶ್ ಬ್ಯಾಕ್ ಹೈಲೈಟ್ಸ್ ಮತ್ತೆ ಪುನ: ಪರದೆಲಿ ಕಾಂಬಲೆ ಶುರುವಾತು! ದೇವರ ದೀಪ ಹೊತ್ತಿಸಿ ಅಪ್ಪದೂ,ಡೋರ್ ಬೆಲ್ ರಿಂಗಪ್ಪದೂ ಸರೀ ಆತು, ಸೀದಾ ಬೆಂಕಿಪೆಟ್ಟಿಗೆಯ ಒಟ್ಟಿಂಗೇ ತೆಕ್ಕೊಂಡು ಹೋಗಿ ಬಾಗಿಲು ತೆಗೆದಪ್ಪಾಗ ಹತ್ತರಾಣ ಮನೆಯ ಹೆಮ್ಮಕ್ಕೊ ಬಂದಿತ್ತು,ಲಲಿತಾ ಸಹಸ್ರನಾಮ ಓದುಲೆ ಹೇಳಿ,ಎಂಗೊ ಇಬ್ರೂ ಮಂಗಳವಾರದೇ,ಶುಕ್ರವಾರದೇ ಒಟ್ಟಿಂಗೇ ಒಬ್ಬೊಬ್ಬರ ಮನೇಲಿ ಒಂದೊಂದು ದಿನ ಕೂದು ಓದುದು. ಹಾಂಗೇ ಬಾಗಿಲು ತೆಗದ ಆನು ಅದರ ಕೂಪಲೆ ಹೇಳಿಕ್ಕಿ ಅಲ್ಲಿಯೇ ಇದ್ದ ಕಿಟಕಿಯ ಚಡಿಯ ಮೇಲೆ ಮಡುಗಿಬಿಟ್ಟಿತ್ತೆ!"ಯುರೇಕಾ,ಯುರೇಕಾ...ಬೆಂಕಿಪೆಟ್ಟಿಗೆದೇ ಸಿಕ್ಕಿತು" ಹೇಳಿ ಮಗಳಿಂಗೆ ಥ್ಯಾಂಕ್ಯೂ ಹೇಳಿ ಅದರ ಅದರ ಜಾಗೆಲಿಯೇ ಕೊಂಡು ಹೋಗಿ ಮಡುಗಿ ಬಂದೆ!  
ಬೆರಳ ಉಪಯೋಗಿಸಿ ಹಲ್ಲುತಿಕ್ಕಿ, ಬ್ಲೇಡಿಲಿ ಉಗುರು ತೆಗೆದು,ಗ್ಯಾಸ್ ಸ್ಟವಿಂದ ಕಿಚ್ಚು ಹೊತ್ತಿಸಿಕೊಂಡ ಇವರ ಹತ್ತರೆ ಹೇಂಗಪ್ಪಾ ಹೇಳುದು ಕಾಣೆಯಾದ ವಸ್ತುಗೊ ಎಲ್ಲಾ ಸಿಕ್ಕಿತು ಹೇಳಿ?!ಟೈಂ ಬಪ್ಪಾಗ ಅವರ ಮೂಡ್ ನೋಡಿಯೊಂಡು ಹೇಳುವ ಹೇಳಿ ಸುಮ್ಮಗಾದೆ! ಇನ್ನು ಮುಂದಾದರೂ ಹಿಡಿದ ವಸ್ತುಗಳ ಅದರ ಕೆಲಸ ಮುಗುದ ಮತ್ತೆ ಅಲ್ಲಿಯೇ ಮಡುಗೇಕು, ಹಾಂಗಾರೆ ಮಾತ್ರ  "ಅಲ್ಲೇ ಮಡುಗಿದ್ದೆ....ಹೇಳಿ ಧೈರ್ಯವಾಗಿ ಹೇಳುಲಕ್ಕು, ಆ ಹೇಳಿದ ಮಾತಿಂಗೆ ಒಂದು ಬೆಲೆ ಇರುತ್ತು ಹೇಳಿ ಮನಸ್ಸಿಲಿಯೇ ಗ್ರೇಶಿಕೊಂಡೆ!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು 

ಹೇಳಿದಷ್ಟೂ ಮುಗಿಯದ ಮೊಬೈಲ್ ಮಹಾತ್ಮೆ...!- ೨ನೇ ಮಾರ್ಚ್ ೨೦೧೩ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಮೊಬೈಲು ಒಂದು ಕೈಯೊಳಗಿದ್ದರೆ..........

ಈ ಮೊಬೈಲಿನ ದಾಸರಾಗದ್ದವು ಆರಾರಿದ್ದವಾ? ನಾಯಿ, ಪುಚ್ಚೆಗಳ ಕೈಲೂ ಮೊಬೈಲು ಹೇಳುವ ಕಾಲ ಇದು. ಅಲ್ಲಾ ನಿನ್ನೆಯೋ ಮೊನ್ನೆಯೋ ಹುಟ್ಟಿದ ಮಕ್ಕೊಗುದೇ ಈ ಮೊಬೈಲಿಗುದೇ ಎಂಥಾ ಅವಿನಾಭವ ಸಂಬಂಧ ಹೇಳಿ!... ಆನು ಕಣ್ಣಾರೆ ನೋಡಿದ್ದೆ! ಎನ್ನ ತಂಗೆಯ ಎಂಟು ತಿಂಗಳಿನ ಮಾಣಿಗುದೇ ಒರಿಜನಲ್ ಮೊಬೈಲ್ ಏವುದು, ಡೂಪ್ಲಿಕೇಟ್ ಮೊಬೈಲ್ ಏವುದು ಹೇಳಿ ಗೊಂತಾವುತ್ತು ಹೇಳಿ! ಅವರ ಮನೇಲಿ ಮೂರು ಮೊಬೈಲುಗೊ ಇದ್ದು. ಈ ಮೂರೂ ಮೊಬೈಲುಗೊ ನೋಡ್ಲೆ ಒಂದೇ ನಮೂನೆ ಇದ್ದು ಒಳ್ಳೆ ಹ್ಯಾಟ್ರಿಕ್ ಹೀರೋಗಳ ಹಾಂಗೆ!  ಅದರಲ್ಲಿ ಎರಡು ಸರಿ ಕೆಲಸ ಮಾಡ್ತಾ ಇಪ್ಪ ಮೊಬೈಲುಗೊ, ಇನ್ನೊಂದು ಮೊಬೈಲಿನ ತೆಕ್ಕೊಂಡು ಹೋಗಿ ತೆಗೆದ ಅಂಗಡಿಗೆ ಕೊಟ್ಟರೂ, ಸರ್ವಿಸ್ ಸೆಂಟರ್ ಯಿಂಗೆ ಕೊಟ್ಟರೂ ಇಲ್ಲಾ ಮೊಬೈಲು ತಯಾರು ಮಾಡಿದ ಕಂಪೆನಿಗೇ ಹೋಗಿ ಕೊಟ್ಟರುದೇ ಸರಿಯಾಗ, ಅಷ್ಟರ ಮಟ್ಟಿಂಗೆ ಹಾಳಾಗಿ ಹೋಯಿದು. ಹೆರಂದ ನೋಡುಲೆ ಮಾಂತ್ರ ಭಾರೀ ಲಾಯ್ಕಿದ್ದು! ಆದರೆ ಈ ಮೂರೂ ಮೊಬೈಲುಗಳ ಹಿಡ್ದು ನೋಡಿದರೆ ಆರಿಂಗುದೇ ಗೊಂತಾಗ ಏವುದು ಸರಿ ಇಪ್ಪದು ಏವುದು ಲಗಾಡಿ ಹೋದ್ದು ಹೇಳಿ! ಒಂದು ವಿಶೇಷ ಎಂತ ಹೇಳಿದರೆ ಆ ಮಾಣಿ ಮಾಂತ್ರ ಆ ಮೂರೂ ಮೊಬೈಲುಗಳ ಒಟ್ಟಿಂಗೆ ಮಡುಗಿದರೆ ಸರಿ ಇಪ್ಪ ಎರಡರ ತೆಗೆದು ಆಟಲ್ಲಿ ಮುಳುಗುತ್ತಾ! ಅದರ  ಅವನ ಕೈಯಿಂದ ಕಿತ್ತೊಂಡು ಹಾಳಾದ್ದರ ಕೊಟ್ಟರೆ ಅವಂಗೆ ಬೇಡವೇ ಬೇಡ! ಸ್ವಿಚ್ ಗಳ ಆಪರೇಟ್ ಮಾಡುಲೆ ಗೊಂತಿಲ್ಲದ್ದರುದೇ ಕಂಡೀಶನ್ನಿಲ್ಲಿಪ್ಪ ಮೊಬೈಲೇ ಬೇಕು ಮಾಣಿಗೆ! ಆನು ಎನ್ನ ತಂಗೆಗೆ ಹೇಳಿದ್ದೆ ಮಾಣಿ ದೊಡ್ಡ ಇಂಜಿನಿಯರೋ, ಡಾಕ್ಟರನೋ ಅಲ್ಲ, ದೊಡ್ಡ ಸೈಂಟಿಸ್ಟೇ ಆವುತ್ತಾ ಹೇಳಿ. ಮತ್ತೆ ಇನ್ನು ಆ ಮಾಣಿ ಆಟದ ಮೊಬೈಲಿನ ಕಣ್ಣೆತ್ತಿದೇ ನೋಡುತ್ತನ್ನಿಲ್ಲೆ ಹೇಳಿ ನಿಂಗೊಗೆ ಪ್ರತ್ಯೇಕ ಹೇಳೇಕಾದ್ದಿಲ್ಲೆ! 
ಎನಗೊಂದು ಮೊಬೈಲಾಯೇಕ್ಕಿತ್ತು. ಈ ಮಕ್ಕೊ "ಟಚ್ ಸ್ಕ್ರೀನ್ ಮೊಬೈಲ್ ತೆಕ್ಕೊಮ್ಮ, ಎಲ್ಲರ ಅಮ್ಮಂದಿರ ಕೈಲೂ ಇರುತ್ತು, ಪ್ಲೀಸ್ ಅದನ್ನೇ ತೆಕ್ಕ" ಹೇಳಿ ಒತ್ತಾಯ ಮಾಡಿದ್ದಕ್ಕೆ ಒಂದರ ತೆಕ್ಕೊಂಡಿದೆ. ಮಕ್ಕೊ ಈ ಮೊಬೈಲಿನ ತೆಗೆಶಿದ್ದು ಅವಕ್ಕೆ ಬೇಕಾಗಿಯೇ ಹೇಳಿ ಗೊಂತಪ್ಪಲೆ ಹೆಚ್ಚು ಹೊತ್ತು ಬೇಕಾಯಿದಿಲ್ಲೆ ಎನಗೆ! ತೆಗದ ಕ್ಷಣವೇ ಮಕ್ಕಳ ಕೈಸೇರಿತದು! ಆ ಕೊಡ್ಲೇ ಅದರ ಎ ಟೂ ಝಡ್ ಗೊಂತಾತು ಮಕ್ಕೊಗೆ! ಅದರಲ್ಲಿಪ್ಪ ನಾಲ್ಕು ನಮೂನೆಯ ಗೇಮ್ಸ್ ಗಳನ್ನೆಲ್ಲಾ ಆಡಿದವು. ಅದರ ನೋಡುತ್ತಾ ಕೂದ ಎನಗೆ ಮೊಬೈಲು ಚುರುಕೋ, ಮಕ್ಕಳ ಕೈಬೆರಳುಗೊ ಚುರುಕೋ, ಅವರ ಕಣ್ಣುಗೊ ಚುರುಕೋ ಇಲ್ಲೆ ಅವರ ತಲೆಒಳ ಇಪ್ಪ ಮೆದುಳು ಚುರುಕೋ ಒಂದೂ ಅರ್ಥ ಆಯಿದಿಲ್ಲೆ. ಕಣ್ಣು ಮುಚ್ಚಿ ಬಿಡೇಕಾರೆ ಆಟದ ಒಂದು ರೌಂಡ್ ಮುಗುದು ಸಾವಿರಾರು ಪಾಂಯಿಟ್ ಗಳೊಟ್ಟಿಂಗೆ ಇನ್ನೊಂದು ರೌಂಡಿಂಗೆ ಹೋಗಿತ್ತಿದ್ದವು! ತೆಗದ ಮತ್ತೆ ಎನ್ನ ಕೈಗೆ ಸಿಕ್ಕಿದ್ದು ಅವು ಮರುದಿನ ಶಾಲೆಗೆ ಹೋದ ಮತ್ತಯೇ! ಸಿಕ್ಕಿದರೂ ಎಂತ ಪ್ರಯೋಜನ?! ಎಲ್ಲಿ ಯಾವ ಸ್ವಿಚ್ ಒತ್ತುದು ಹೇಳಿಯೂ ಅಂದಾಜಾಯಿಕೊಂಡಿತ್ತಿಲ್ಲೆ. ಕೇಳುವ ಹೇಳಿರೆ ಮಕ್ಕೊ ಶಾಲೆಗೆ ಹೋಯಿದವು, ಇವರ ಕೇಳುವ ಹೇಳಿದರೆ ಮೊದಲೇ ಯಾಂಟಿ ಮೊಬೈಲು ಇವು! ಅವರ ಮೊಬೈಲಿನ ಬಗ್ಗೆ ಅವಕ್ಕೆ ಗೊಂತಿಪ್ಪದೂ ಅಷ್ಟಕ್ಕಷ್ಟೇ! ಅವರ ಮೊಬೈಲಿನ ಅವು ಕಾಲ್ ಮಾಡುಲೆ ಅಥವಾ ಕಾಲ್ ತೆಕ್ಕೊಂಬಲೆ ಮಾಂತ್ರ ಉಪಯೋಗಿಸುದಷ್ಟೇ, ಧರ್ಮಕ್ಕಿಪ್ಪ ತಿಂಗಳಿನ ೧೦೦ ಮೆಸ್ಸೇಜುಗೊ ಪೂರಾ ಕೊಳತ್ತಾ ಇರುತ್ತು! ಇಂತಹವರ ಕೇಳುದೇ ದೊಡ್ಡ ಸವಾಲು! ಮತ್ತೆ ಮೊಬೈಲಿನೊಟ್ಟಿಂಗೆ ಸಿಕ್ಕಿದ ಅದರ ಯೂಸರ್ ಸ್ ಮ್ಯಾನ್ಯುಲ್ ಪುಸ್ತಕ ಓದುವಾ ಹೇಳಿದರೆ ಅದರಲ್ಲಿಪ್ಪ ಅಕ್ಷರಂಗೊ ದುರ್ಬೀನ್ ಹಿಡಿದರೂ ಕಾಣ್ತಿಲ್ಲೆ, ಹಾಂಗಿಪ್ಪ ಅವಸ್ಥೆ! ಮತ್ತೆ ಕಾಲವೇ ಹೇಳಿಕೊಡುಗು ಹೇಳಿ ಸುಮ್ಮಗಾದೆ. ಈಗ ತೆಗದು ಒಂದು ವರ್ಷ ಆಯಿದು. ಇನ್ನುದೇ ಸರಿಯಾಗಿ ಓಪರೇಟ್ ಮಾಡ್ಲೆ ಎನಗೆ ಅರಡಿತ್ತಿಲ್ಲೆ! ತೆಗದು ಒಂದು ವಾರಲ್ಲಿ ಕಾಲ್ ಬಂದಪ್ಪಗ ತೆಕ್ಕೊಂಬಲೆ ಮಾಂತ್ರ ಗೊಂತಿತ್ತಷ್ಟೇ! ಮತ್ತೆ ನಿಧಾನವಾಗಿ ಡಯಲ್ ಮಾಡುಲೆ ಕಲ್ತೆ. ಮೆಸ್ಸೇಜು ಮಾಡುಲೆ ಮೊದಮೊದಲು ಪರಡೀ ಪರಡೀ ಈಗ ಒಂದು ನಮೂನೆ ಎಕ್ಸ್ ಪರ್ಟಾಯಿದೆ. ತಿಂಗಳಿಗಿಪ್ಪ ೧೦೦ ಫ್ರೀ ಮೆಸೇಜುಗಳಲ್ಲಿ ದಿನಲ್ಲೀಗ ಮಿನಿಮಮ್ ೫ ಮೆಸೇಜಿನ ಹಾಂಗೆ ಮುಗುಶಿ ೨೦ ದಿನ ಕಳುದಪ್ಪಗ ಮೇಲೆ ಕೆಳ ನೋಡಿಯೊಂಡಿರ್ ತೆ! ಫ್ರೆಂಡುಗೊ ಅಷ್ಟು ಪ್ರೀತಿಲಿ ಎನಗೆ ಜೋಕ್ಸು, ಮೆಸ್ಸೇಜುಗಳ ಕಳ್ಸುಸುವಾಗ ಆನು ಹೇಂಗೆ ಸುಮ್ಮಗಿಪ್ಪದೂ? ಇವ್ವು ತಿಂಗಳ ನಾಲ್ಲ್ಕು ದಿನ ಕಳುದ ಕೂಡ್ಲೇ ತಮಾಷೆಗೆ ಕೇಳುತ್ತವು, "ನಿನ್ನ ಫ್ರೀ ಮೆಸ್ಸೇಜುಗೋ ಪೂರಾ ಮುಗುತ್ತಾ ವೇಣೀ ಹೇಳಿ!" ಅವು ಹಾಂಗೆ ಕೇಳುಲೆ ಕಾರಣ ಇದ್ದು, ಎನ್ನ ಮೆಸ್ಸೇಜುಗೊ ಮುಗುದ ಮತ್ತೆ ಅಕಸ್ಮಾತ್ ಮೆಸೇಜು ಮಾಡೇಕಾದ ಅನಿವಾರ್ಯ ಸಂದರ್ಭ ಬಂದರೆ ಅವರ ಮೊಬೈಲಿಂದ ಆನು ಮಾಡುದರ ಎಷ್ಟೋ ಸಲ ನೋಡಿದ್ದವು! ಮತ್ತಿನ್ನೊಂದು ಕಾರಣ ಹೇಳಿರೆ, ಮೊದಲಾಣ ಆಫರಿಲ್ಲಾದರೆ ತಿಂಗಳಿಂಗೆ ೩೦೦ ಫೀ ಮೆಸ್ಸೇಜುಗೊ ಇತ್ತಿದ್ದು. ಎಂತಕೆ ಪುಕ್ಸಟ್ಟೆ ಸಿಕ್ಕಿದ್ದರ ವೇಷ್ಟು ಮಾಡುದು ಹೇಳಿ ಕಂಡಾಬಟ್ಟೆ ಕಳ್ಸಿಯೊಂಡಿತ್ತೆ! ಫ್ರೀ ಮೆಸ್ಸೇಜು ಮುಗುದ ಮತ್ತೆ ಈಗಾಣ ಮಕ್ಕಳ ಹಾಂಗೆಲ್ಲಾ ಮೆಸ್ಸೇಜ್ ಪ್ಯಾಕ್ ಹಾಕ್ಸಿಕೊಂಬ ಹುಚ್ಚಿನವರೆಗೂ ಎತ್ತಿದ್ದಿಲ್ಲೆ ಅಪ್ಪಾ ಆನು! ಸಿಮ್ ಕಂಪನಿಯವು ೩೦೦ ರಿಂದ ೧೦೦ ಮೆಸ್ಸೇಜಿನವರೆಗೆ ಇಳಿಶಿದ್ದು ಎನಗೆ ಒಂದು ರೀತಿಲಿ ಕೊಶಿಯೇ ಆಯ್ದು! ಹೇಂಗಾರೂ ಮೆಸ್ಸೇಜು ಮಾಡುದರ ಕಡಮ್ಮೆ ಮಾಡೇಕು ಹೇಳಿ ಸ್ವಲ್ಪ ಸಮಯಕ್ಕೆ ಮೊದಲು ಗ್ರೇಶಿಯೊಂಡಿತ್ತೆ. ಕಾರಣ ಚಾಲೀಸ್ ವರ್ಷ ಪ್ರಾಯದ ಹತ್ತರೆ ಬತ್ತಾ ಇಪ್ಪ ಎನಗೆ ಚಾಳೀಸ್ ಬೈಂದು ಈಗ ಆರು ತಿಂಗಳಿಗೆ ಹಿಂದೆ! ಈ ಮೊಬೈಲಿನ ಇರುಳೂ ಹಗಲೂ ನೋಡದ್ದೇ ಇದ್ದಿದ್ದರೆ ಖಂಡಿತಾ ಇನ್ನೂ ಒಂದು ನಾಲ್ಕು ವರ್ಷ ಕನ್ನಡ್ಕ ಬೇಡ ಇತ್ತು! ಕೆಟ್ಟ ಮೇಲಲ್ಲದಾ ಆರಿಂಗಾದರುದೇ ಬುದ್ಧಿ ಬಪ್ಪದು?! 
ಎನ್ನ ವಿಷಯವ ಅಲ್ಲಿಗೇ ಬಿಡುವ. ಈಗಾಣ ಜಮಾನಕ್ಕೆ ಬಪ್ಪ. ಈಗಾಣ ಕಾಲೇಜು ಮಕ್ಕೋ ಬೈಕಿಲಿ, ಸ್ಕೂಟರ್, ಕಾರಿಲ್ಲೆಲ್ಲಾ ಕೂದು, ಡ್ರೈವ್ ಮಾಡಿಯೊಂಡು ಮೊಬೈಲಿನ ಒಂದು ಕೈಲಿ, ಇನ್ನೊಂದು ಕೈಲಿ ಹ್ಯಾಂಡಲಿನ/ಸ್ಟೇರಿಂಗಿನ ಮ್ಯಾನೇಜ್ ಮಾಡಿಕೊಂಡು ಹೋವುತ್ತರ ನೋಡಿದರೇ ದಾರಿಲಿ ಹೋಯಿಕೊಂಡಿಪ್ಪ ನಮಗೇ ಹೆದರಿಕೆ ಆವುತ್ತು! ಅದಕ್ಕಿಂತಲೂ ಭಯ ಅಪ್ಪದು, ಈಗಾಣ ರೋಡುಗಳೋ, ಅಲ್ಲಲ್ಲಿ ಹೊಂಡ ಬಿದ್ದು ರೋಡು ಎಲ್ಲಿದ್ದು ಹೇಳಿ ಹುಡುಕಿಯೊಂಡು, ಕೆರೆದಡ ಆಟ ಆಡಿಯೊಂಡು ಹೋಯೇಕಾದ ಪರಿಸ್ಥಿತಿಲುದೇ, ಅವು ಹಾವು ಏಣಿ ಆಟದ ಹಾಂಗೆ ಮೆಸ್ಸೇಜುಗಳನ್ನೂ ಮಾಡಿಯೊಂಡು ಹೋಪಾಗ! ಅಲ್ಲಾ ಅಂತಾ ಅರ್ಜೆಂಟು ಎಂತ ಇರುತ್ತು ಅವಕ್ಕೆ ಹೇಳಿ?! ನಾವು ಅಷ್ಟೊಂದು ತಲೆ ಕೆಡಿಸಿಕೊಂಬದು ಬೇಡ. ಎಂತಕೆ ಹೇಳಿರೆ ಅವೆಲ್ಲಾ ಅವರ ಫ್ರೆಂಡ್ ಶಿಪ್ಪಿಂಗೆ ಕೊಡುವ ಬೆಲೆ ಜೀವಕ್ಕಿಂತ ಹೆಚ್ಚು ಅಷ್ಟೇ! ಓದುದರ ಬಿಟ್ಟು ಎಷ್ಟು ಹೊತ್ತಿಂಗೂ ಮೊಬೈಲು. ಓದಿಯೊಂಡಿದ್ದರೂ ಅದರ ಕಡೆಗೇ ಗಮನ! ಅಂತೂ ಈ ಮೊಬೈಲಿಗೆ ನಾ ನಿನ್ನಿ ಬಿಡಲಾರೆ ಹೇಳಿ ಅಂಟಿಯೊಂಡಿದವು ಈಗಾಣ ಮಕ್ಕೊ! ಟಚ್ ಸ್ಕ್ರೀನ್ ಆತು, ಹ್ಯಾಂಡ್ಸ್ ಫ್ರೀ ಆತು, ೩ಜಿ ಮೊಬೈಲುಗಳ ಕಾಲ ಮುಗುದತ್ತು. ಆ ಎಲ್ಲಾ ಫೆಸಿಲಿಟಿಗಲೊಟ್ಟಿಂಗೆ ವೀಡಿಯೋ ಕಾಲಿಂಗ್ ಫೆಸಿಲಿಟಿ ಇಪ್ಪ ಮೊಬೈಲುಗಳ ಆಜ್ಯಭಾರ ಶುರುವಾಯಿದು. ಇನ್ನು ಹೀಂಗಿಪ್ಪದರೆಲ್ಲಾ ನಮ್ಮ ನಮ್ಮ ಮಕ್ಕಳ ಕೈಗೆ ಕೊಡೇಕೋ ಬೇಡದೋ ಹೇಳಿ ಮೊದಲು ಒಂದರಿ ಚೆನ್ನಾಗಿ ಆಲೋಚನೆ ಮಾಡುದೊಳ್ಳೆದು!

ಅಟ್ಟವೆಂಬ ಮನೆಯೊಳಗಣ ಬ್ರಹ್ಮಾಂಡ...!- ೧೯ನೇ ಜನವರಿ ೨೦೧೩ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ.



ಅಟ್ಟ ಎಂಬ ಮನೆಯೊಳಗಣ ಬ್ರಹ್ಮಾಂಡ!

ಅಟ್ಟವ ಒಂದರಿ ಕ್ಲೀನ್ ಮಾಡೇಕು ಹೇಳಿ ಗ್ರೇಶುಲೆ ಶುರುಮಾಡಿ ವರ್ಷ ಒಂದಾತೋ,ಎರಡೇ ಆತೋ!?ಕಳುದ ಸಲ ಯೇವಾಗ ಕ್ಲೀನ್ ಮಾಡಿದ್ದು ಹೇಳಿ ನೆಂಪೂ ಇಲ್ಲೆ!ಅಟ್ಟಕ್ಕೆ ಹತ್ತಿ ಅದರೊಳ ಅಡ್ಡಾಡ್ಲೂ ಕೂಡಾ ಜಾಗೆ ಇಲ್ಲದ್ದಷ್ಟು ವಸ್ತುಗೊ ಅಲ್ಲಿ ತುಂಬಿದ್ದು!ಮತ್ತೆ ಹೀಂಗಿಪ್ಪಲ್ಲಿಗೆಲ್ಲಾ ಹತ್ತಿ ಕ್ಲೀನ್ ಮಾಡುಲೆ ಪುರುಸೊತ್ತಾಗೆಡದಾ ಹೇಳಿ!ಮನೆ,ಆಫೀಸು,ಆಫೀಸು ಮನೆ ಹೇಳಿಯೇ ದಿನಂಗೊ ಹೊರಳುತ್ತಾ ಇದ್ದು!ಅಟ್ಟಕ್ಕೆ ಹತ್ತುದು ಶಾಲೆಲಿ ಟೀಚರು ಮಕ್ಕೊಗೆ ಪ್ರಾಜೆಕ್ಟ್ ವರ್ಕ್ ಕೊಟ್ಟಪ್ಪಗಲೇ!ಅಟ್ಟ ಒಂದು ಬ್ರಹ್ಮಾಂಡ ಹೇಳಿ ಹೇಳಿದರುದೇ ತಪ್ಪಾಗ!ಯೇವ ಅಂಗಡಿಲಿ ಪೈಸೆ ಕೊಟ್ಟರೂದೇ ಸಿಕ್ಕದ್ದ ವಸ್ತುಗೊ ಅಲ್ಲಿರುತ್ತು!ಮಕ್ಕಳ ಹಲವು ಪ್ರಾಜೆಕ್ಟ್ ಗೊಕ್ಕೆ ಈ ಅಟ್ಟಲ್ಲಿಪ್ಪ ವಸ್ತುಗಳೇ ಸಾಕ್ಷಿ.ಶಾಲೆಲಿ ಟೀಚರುಗೊಕ್ಕಳ ಕೈಯಿಂದ ಮಕ್ಕೊ ಶಹಭಾಸ್ ಹೇಳಿಸಿಯೊಂಡು ಬಂದರೆ ಅಟ್ಟಕ್ಕೆ ಥ್ಯಾಂಕ್ಸ್ ಹೇಳುದು!ಅದು ಸರಿ,ಈಗ ಅಟ್ಟದ ಕ್ಲೀನಿಂಗ್ ಶುದ್ಧಿಗೆ ಬಪ್ಪ!ಮನೆ ಕಟ್ಟುಸುವಾಗಲೇ ಹೇಳಿತ್ತಿದ್ದವಿವು,ಟಾಯ್ಲೆಟ್ ಬಾತ್ ರೂಮಿನ ಮೇಗಣ ಜಾಗೆಯ ಅಟ್ಟ ಮಾಡಿದರೆ ಸಾಕು,ಹೆಚ್ಚು ದೊಡ್ಡ ಕಟ್ಟಿಸಿದಷ್ಟೂ ಹಾಳು ಹರಗಣ ತುಂಬಿಸುದೊಂದೇ ಕಾಯಕ ಆವುತ್ತು,ಧೂಳು,ಕಸ,ಜರಲೆ,ಎಲಿಗಳ ತಾಣ ಆವುತ್ತು,ಎಂತ ಹೇಳ್ತೆ?"ಹೇಳಿ!ಆನು ಬಿಡೇಡದೋ,"ಅದೆಲ್ಲಾ ಆಗಲೇ ಆಗ,ಅಡುಗೆ ಕೋಣೆಯ ಮೇಗಣ ಜಾಗೆಯನ್ನೂ ಸೇರಿಸಿಯೊಂಡು ಅಟ್ಟ ರಜ್ಜ ದೊಡ್ಡಕ್ಕೇ ಇರಲಿ,ಅದಕ್ಕೆ ಎರಡು ಹೊಡೆಂದ ಎಂಟ್ರೆಂನ್ಸ್ ಬೇಕಾದ್ರೆ ಇರಲಿ,ನಿಂಗೊಗೆ ಗೆಂಡುಮಕ್ಕೊಗೆ ಇದೆಲ್ಲಾ ಅರ್ಥವೇ ಅವುತ್ತಿಲ್ಲೆ"ಹೇಳಿ ಹೇಳಿದೆ!"ಬೇಡ ಮಾರಾಯ್ತಿ,ಅಟ್ಟ ಸಣ್ಣದಿದ್ದರೆ ಅಂಬಗಂಬಗ ಕ್ಲೀನ್ ಮಾಡಿ ಹೋವುತ್ತು,ದೊಡ್ಡದಿದ್ದರೆ ಇಂದು,ನಾಳೆ ಹೇಳಿ ಒಳುದೇ ಹೋವುತ್ತು"ಹೇಳಿ ಎಷ್ಟು ಹೇಳಿದರೂದೇ ಎನ್ನದೊಂದೇ ಜಪ,ಅಟ್ಟ ದೊಡ್ಡದಾಗಿರೇಕು,ಪೇಟೆ ಮನೆ ಬೇರೆ,ಇಪ್ಪ ೩೦,೪೦ ಸೈಟಿಲಿ,ಜೀವನಲ್ಲಿ ಒಂದರಿಯೇ ಕಟ್ಟುಸುವ ಮನೆಲಿ ಅಟ್ಟ ಅತೀ ದೊಡ್ಡದ್ದಲ್ಲದ್ದರೂ ಒಂದು ಹದಾಕ್ಕಾದರು ಬೇಕೇ ಬೇಕು ಇಲ್ಲದ್ದರೆ ಬೇಡದ ಸಾಮಾನಿನೆಲ್ಲಾ ಎಲ್ಲಿ ತುಂಬುಸುದು?ಹಳ್ಳಿಲಾದರೆ ತೊಂದರೆ ಇತ್ತಿಲ್ಲೆ ಹೇಳಿ!ಅಂತೂ ಇಂತೂ ಈ ವಿಷಯಲ್ಲಿ ಇವು ಅಮ್ಮಾವ್ರ ಗೆಂಡ ಆಗಿಬಿಟ್ಟವಿವು!ಎಂಗಳದ್ದು ವಿಶಾಲಾವಾದ ಮನೆ ಅಲ್ಲದ್ದರುದೇ,ಆನಿಷ್ಟಪಟ್ಟ ಅಟ್ಟ ಅಂತೂ ವಿಶಾಲವಾಗಿದ್ದು!

ಎಂಗೊ ಮನೆವೆಲ್ಲಾ ರಜ್ಜ ಪರಿಸರ ಕಾಳಜಿ ಹೆಚ್ಚಿಪ್ಪವು,ಮನೆಲಿ ಉಪಯೋಗಿಸಿ ಹಾಳಾದ ಒಂದು ಸಣ್ಣ ಪ್ಲ್ಯಾಸ್ಟಿಕ್ ತುಂಡಿಂದ ಹಿಡುದು ಸಣ್ಣ ಕಬ್ಬಿಣದ ತುಂಡಿನವರೆಗೂ ಎಂತ ಸಿಕ್ಕಿದರೂ ಅಟ್ಟಕ್ಕೆ ಇಡುಕ್ಕುತ್ತ ಕ್ರಮ.ಹೆರ ಮಣ್ಣಿಲಿ ಸೇರಿ ಭೂಮಿ ಹಾಳಪ್ಪದರಲ್ಲಿ ಎಂಗಳ ಕೊಡುಗೆದೇ ಬೇಡ,ಕಿಂಚಿತ್ತಾದರೂ ನಮ್ಮಿಂದ ಉಪಕಾರ ಆಗಲಿ ಪರಿಸರಕ್ಕೆ ಹೇಳುತ್ತ ಮನೋಭಾವ!ಪುರುಸೊತ್ತಪ್ಪಗ ಒಂದೊಂದರಿ ಎಂಗೊ ಅಟ್ಟಕ್ಕೆ ಹತ್ತಿ ಲಾಯ್ಕಲ್ಲಿ ಕಬ್ಬಿಣ,ಪ್ಲಾಸ್ಟಿಕ್,ಪ್ಲಾಸ್ಟಿಕ್ ಬಾಟ್ಲಿಗಳ,ಕುಪ್ಪಿ ಬಾಟ್ಲಿಗಳ ನ್ಯೂಸ್ ಪೇಪರುಗಳ ಪ್ರತ್ಯೇಕ ಮಾಡಿ,ಪೇಟೆಗೆ ಹೋಪಾಗ ಕಾರಿನ ಢಿಕ್ಕಿಲಿ ಮಡುಗಿಯೊಂಡು ಹೋಗಿ ಗುಜರಿ ಅಂಗಡಿಯವಕ್ಕೆ ಕೊಡುದು.ಒಂದೊಂದರಿಯಂಗೆ ೨೫೦ ರಿಂದ ೩೦೦ ರೂಪಾಯಿ ಸಿಕ್ಕಿಯಪ್ಪಗ ಕ್ಲೀನ್ ಮಾಡಿದ ಛಾರ್ಜ್ ಬಂತನ್ನೇ ಹೇಳಿ,ಹಾಂಗೇ ಈ ಮಾರಿದ ವಸ್ತುಗೊ ಎಲ್ಲಾ ಮಣ್ಣಿಂಗೆ ಸೇರದ್ದೇ ಮರುಬಳಕೆ ಆವುತ್ತನ್ನೇ ಹೇಳಿ ಖುಷಿ ಪಟ್ಟುಕೊಂಬದು.ಮನಗೆ ತಂದ ಸಾಮಾನಿಲಿ ಎಂತರಲ್ಲಿಯಾರು ಸಿಕ್ಕಿದ ಕಾರ್ಡ್ ಬೋರ್ಡ್ ಬಾಕ್ಸ್ ಗೋ,ಫ್ರಿಡ್ಜ್,ಟೀ.ವಿ,ವಾಷಿಂಗೆ ಮೆಷಿನ್ ಗಳೊಟ್ಟಿಂಗೆ ಸಿಕ್ಕಿದ ದೊಡ್ಡ ದೊಡ್ಡ ಬಾಕ್ಸ್ ಗೋ,ತೆರ್ಮಾಕೋಲ್ ಪೀಸುಗೊ,ಮನೆ ಕಟ್ಟುಸುವಾಗ ಒಳುದ ಕಬ್ಬಿಣದ ಕಲವು ಉದ್ದ ಗಿಡ್ದದ ಸರಳುಗೋ,ಸಿಮೆಂಟಿನ ಖಾಲಿ ಚೀಲಂಗೊ,ಮರದ ಆಚಾರಿ ಕಿಟಕಿ,ಬಾಗಿಲು ಕೆಲಸ ಮಾಡಿ ಒಳುದ ಮರದ ತುಂಡುಗೋ,ಇಲೆಕ್ಟ್ರಿಕ್ ಕೆಲಸ ಮಾಡಿದ ಮತ್ತೆ ಒಳುದ ವಯರುಗೋ,ಸ್ವಿಚ್ಚುಗೋ,ಪ್ಲಂಬಿಂಗ್ ಕೆಲಸ ಮಾಡಿಸಿದ ಮೇಲೆ ಒಳುದ ಉದ್ದ ಗಿಡ್ಡದ ಪೈಪ್ ತುಂಡುಗೊ,ಸ್ಕ್ರೂ,ಬೋಲ್ಟ್,ನಟ್ಟುಗೊ,ಆಣಿಗೊ,ಮುರುದ ಕುರ್ಚಿ,ಒಡದ ಕೊಡಪ್ಪಾನ,ಬಾಲ್ದಿಗೊ ಎಲ್ಲಾ ಒಂದು ಕರೆಲಿ ಹಾಂಗೇ ಇದ್ದು ಇಂದಿಗೂ!ಈ ವಸ್ತುಗೊ ಎಲ್ಲಾ ಒಂದಲ್ಲ ಒಂದರಿ ಎಷ್ಟು ಉಪಯೋಗಕ್ಕೆ ಬತ್ತು ಹೇಳಿ ಅದರೆಲ್ಲಾ ಅಟ್ಟಲ್ಲಿ ಜೋಪಾನವಾಗಿ ಮಡುಗಿ ಉಪಯೋಗಕ್ಕೆ ಬಂದಪ್ಪಗ ಉಪಯೋಗಿಸಿಕೊಂಡವಕ್ಕೆ ಲಾಯ್ಕಲ್ಲಿ ಗೊಂತಿಕ್ಕು ಈ ಅಟ್ಟಲ್ಲಿ ಶೇಖರಿಸಿ ಮಡುಗಿದ ಸಾಮಾನುಗಳ ಮಹಿಮೆ ಎಂತದ್ದು ಹೇಳಿ!

ಕಳುದ ವರ್ಷವೋ,ಅದರ ಹಿಂದಾಣ ವರ್ಷವೋ ಒಂದರಿ,ವಾರಲ್ಲಿ ೨,೩ ದಿನ ರಜೆ ಇಪ್ಪಾಗ ಹತ್ತಿ ಕ್ಲೀನ್ ಮಾಡಿದ ಅಟ್ಟವ ಈಗ ಹೇಳುವವು ಕೇಳುವವು ಆರೂ ಇತ್ತಿದಿಲ್ಲೆ!ಮನಗೆ ಬಂದ ನಂಟರೆಂತ ಏಣಿ ಮಡುಗಿ ಅಟ್ಟ ಹತ್ತಿ ನೋಡ್ತವಾ?!ಎನಗೆ,ಇವಕ್ಕೆ,ಮಕ್ಕೊಗುದೇ ರಜೆ ಇದ್ದ ದಿನ ಅಂದು ಅಟ್ಟ ಕ್ಲೀನ್ ಮಾಡಿದ ದಿನವೇ ಅಕೇರಿ,ಮತ್ತೆ ಅಟ್ಟ ಅಟ್ಟದಷ್ಟಕ್ಕೇ,ಎಂಗೊ ಎಂಗಳಷ್ಟಕ್ಕೇ!

ಸರಿ ಆ ದಿನ,ಮಕ್ಕೊ ಇಬ್ರು,ಎಂಗೊ ಇಬ್ರೂ ಅಟ್ಟಕ್ಕೆ ಹತ್ತಿ ಕಾಲಿಂಗೆ ಸಿಕ್ಕುವ ಸಾಮಾನುಗಳ ಎಲ್ಲಾ ಪೊಲೀಸುಗೋ ನಕ್ಸಲರ ಹುಡುಕಿಯೊಂಡು ಕಾಡಿನ ಒಳ ದಾರಿ ಮಾಡಿಯೊಂಡು ಹೋಪಾಂಗೆ,ಎಂಗೊ ಅಟ್ಟದ ತುಂಬಾ ತುಂಬಿದ್ದ ಸಾಮಾನುಗಳ ಎಲ್ಲಾ ಅತ್ತಿತ್ತೆ ಮಡುಗುತ್ತಾ ಕಾಲು ಮಡುಗುಲೆ ಜಾಗೆ ಮಾಡಿಯೊಂಡು,ಕ್ಲೀನಿಂಗ್ ಅಭಿಯಾನ ಶುರು ಮಾಡಿತ್ತಿದ್ದೆಯ!ಒಂದು ದೊಡ್ಡಾ ಬ್ಯಾಗಿಲಿ ಹಳೇ ವಸ್ತ್ರಂಗಳ ತುಂಬಿಸಿ ಮಡುಗಿತ್ತೆ.ಸಣ್ಣ ಮಗಳು ಅದರ ಬಿಚ್ಚಿಯೊಂಡು ವಸ್ತ್ರಂಗಳ ನೋಡಿಯೊಂಡೇ ಬಾಕಿ!ಆನು ಹೇಳಿದೆ,"ಇದಾ ಆ ಕಟ್ಟಿನ ಬಿಚ್ಚೇಡ,ಅದು ಆರಿಂಗಾರು ಕೊಡ್ಲಿಪ್ಪದು,ಒಂದುದೇ ನಮಗಾರಿಂಗೂ ಹಾಕುಲೆಡಿಯ"ಹೇಳಿ."ಆಂ ಎನ್ನದು ಎನಗೆ ಬೇಕು,ಆನು ಸಣ್ಣ ಇಪ್ಪಾಗ ಹಾಕಿದ ಅಂಗಿಗೊ ಎಲ್ಲಾ ಇದರಲ್ಲಿದ್ದು,ಅದರ ನೆಂಪಿಂಗೆ ಮಡಿಕೊಂಬಲೆ ಎನಗೆ ಬೇಕು,ಆನು ಕೊಡೆ"ಹೇಳಿತು!ದೊಡ್ಡ ಮಗಳು ಅದರ ವಸ್ತ್ರ ಕೆಲವುದರೆಲ್ಲಾ ಬೇಕು ಹೇಳಿತು ಹಾಂಗೆ ನಿನ್ನದೂ ಕೆಲವೆಲ್ಲಾ ಲಾಯ್ಕಿದ್ದಮ್ಮಾ,ಮಡಿಕ್ಕೋ ಹೇಳಿತು!"ಸರಿ ಆ ಬ್ಯಾಗಿನ ಅಲ್ಲೇ ಮಡುಗಂಬಗ ಲಾಯ್ಕಿಲಿ ಮುಚ್ಚಿ"ಹೇಳಿದೆ.ನ್ಯೂಸ್ ಪೇಪರು ಒಂದು ನಾಲ್ಕಟ್ಟಿ ಭರ್ತಿ ಇತ್ತಿದು!ಇವು ಹೇಳಿದವು ಅದರ ಎಲ್ಲಾ ಕೆಳ ಹಾಕುತ್ತೆ ಮಾರ್ಕೆಟ್ಟಿಂಗೆ ಹೋಪಾಗ ಮಾರುಲೆ ಕೊಂಡುಹೋಪ"ಹೇಳಿ.ಅಷ್ಟಪ್ಪಗ ದೊಡ್ಡ ಮಗಳು ಹೇಳಿತು,"ಈ ಸಲ ಪೇಪರ್ ಮಾರುದು ಬೇಡಪ್ಪಾ,ಎನಗೆ ಪ್ರಾಜೆಕ್ಟ್ ವರ್ಕ್ ಇರುತ್ತು,ಕೆಲವು ಇಂಪಾರ್ಟೆಂಟ್ ಕಟ್ಟಿಂಗ್ಸ್ ಬೇಕಾವುತ್ತು,ಹಾಂಗಾಗಿ ಆ ಕಟ್ಟುದೇ ಅಲ್ಲಿರಲಿ" ಹೇಳಿ!"ಆತಂಬಗ ಅದಿರಲಿ"ಹೇಳಿದವಿವು."ಆ ಹಳೇ ಸಿಮೆಂಟ್ ಗೋಣಿ ಚೀಲಂಗಳ ಮಾರುವ,ಅದೆಂತಕಿಪ್ಪದು,ಎಂತಕಾರು ಬೇಕಕ್ಕು ಹೇಳಿ ಕಟ್ಟಿ ಮಡುಗಿ ವರ್ಷ ಎಂಟಾತು!" "ಏಏಏಏ ಅದು ಎನಗೆ ಬೇಕು,ಮೊನ್ನೆ ಟಿ.ವಿಲಿ ತೋರಿಸಿದ್ದವು,ಅದರಲ್ಲಿ ಮಣ್ಣು ತುಂಬುಸಿ ಲಾಯ್ಕಲ್ಲಿ ತರಕ್ಕಾರಿ ಬೆಳಕೊಂಬಲಕ್ಕು.ಗೊಂತಿದ್ದಾ?!"ಇಂದೇ ಅದಕ್ಕೆ ಮಣ್ಣು ತುಂಬಿಸಿ ತರಕ್ಕಾರಿ ನಡುವ ಹಾಂಗೆ ಹೇಳಿದೆ! "ಆತಂಬಗ ಅದುದೇ ಇರಲಿ" ಹೇಳಿತ್ತಿದ್ದವಿವು!ಹಾಂಗೇ ಒಬ್ಬ ವಿಲೇವಾರಿ ಮಾಡುಲೆ ಹೆರಟ ಸಾಮಾನು ಇನ್ನೊಬ್ಬಂಗೆ ಅನಿವಾರ್ಯವಾಗಿ ಬೇಕಾಗಿ ಎಲ್ಲವನ್ನೂ ಅಲ್ಲಲ್ಲೇ ಒತ್ತರೆಯಾಗಿ ಮಡುಗಿಕ್ಕಿ ಕೆಳ ಇಳುದಿತ್ತೆಯ!ಅಟ್ಟಲ್ಲಿಪ್ಪದೆಲ್ಲಾ ಸುರಕ್ಷಿತವಾಗಿ ಅಲ್ಲೇ ಒಳುದಿದ್ದತ್ತು!ಪ್ರಾಜೆಕ್ಟ್ ವರ್ಕಿಂಗೆ ಬೇಕು ಹೇಳಿ ಮಗಳು ಮಡುಗಿದ ನ್ಯೂಸ್ ಪೇಪರುಗೊ ಅಂತಹ ಯೇವುದೇ ಪ್ರಾಜೆಕ್ಟ್ ವರ್ಕ್ ಸಿಕ್ಕದ್ದೇ ಅಲ್ಲೇ ಬಾಕಿ,ತರಕಾರಿ ಗಿಡಂಗಳ ನೆಡ್ಲೆ ಬೇಕು ಹೇಳಿ ಮಡುಗಿಸಿಯೊಂಡ ಖಾಲಿ ಸಿಮೆಂಟು ಚೀಲಂಗಳುದೇ ಅಸಹಾಯಕವಾಗಿತ್ತಿದವು!ಈ ಎಲ್ಲಾ ವಸ್ತುಗಳೊಟ್ಟಿಂಗೆ ಈ ಒಂದೋ ಎರಡು ವರ್ಷಂಗಳಲ್ಲಿ ಇನ್ನೂ ವಸ್ತುಗೊ ತುಂಬಿ ಬೃಹತ್ ಬೆಟ್ಟವೇ ಸೃಷ್ಠಿ ಆಯಿದು ಅಟ್ಟಲ್ಲಿ!ಈ ಸಲ ಕ್ಲೀನ್ ಮಾಡುಲೆ ಹೇಳಿ ಹತ್ತಿಯಪ್ಪಗ ಬೇಕು ಬೇಕು ಹೇಳಿ ಕಂಡದ್ದರೆಲ್ಲಾ ಮಡಿಕ್ಕೊಂಬ ಬದಲು,ಮನಸ್ಸು ಗಟ್ಟಿಮಾಡಿಯೊಂಡು ಕಣ್ಣು ಮುಚ್ಚಿ ಗುಜರಿ ಅಂಗಡಿಗೆ ಕೊಟ್ಟಿಕ್ಕಿ ಅಟ್ಟವ ರಜ್ಜ ಕಾಲು ಹಾಕುವ ಹಾಂಗೆ ಮಾಡೇಕು,ಲಾಯ್ಕಲ್ಲಿ ಕ್ಲೀನ್ ಮಾಡೇಕು ಹೇಳಿ ಇದ್ದೆ!ಮತ್ತೆ ಕೊಟ್ಟ ಆ ವಸ್ತುಗೊ ಮರುದಿನವೇ ಬೇಕು ಹೇಳಿಯಾದರೆ ಎಲ್ಲಿಗೆ ಹೋಪದು ಹೇಳಿಯೇ ಈಗ ಎನ್ನ ಮನಸ್ಸಿಲಿಪ್ಪ ಚಿಂತೆ!!


----------

ಟೆಸ್ಟಿನಲ್ಲಿ ಒಂದು ಟ್ವಿಸ್ಟ್ ಇದೆಯಂತೆ...!- ಫೆಬ್ರವರಿ ೨೦೧೩ರ ಅನಂತ ಪ್ರಕಾಶ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ

ಟೆಸ್ಟ್ ನಲ್ಲಿ ಒಂದು ಟ್ವಿಸ್ಟ್ ಇದೆಯಂತೆ..!
ದಿನಪತ್ರಿಕೆಯೊ೦ದರಲ್ಲಿ ಒ೦ದು ದಿನ ಸುದ್ದಿ ಓದಿದವಳೇ ಹೇಳಿದೆ,"ರೀ, ಇನ್ನು ಸ್ವಲ್ಪ ಸಮಯದಲ್ಲೇ ಕ೦ಪ್ಯೂಟರ್ (ಮೂಲಕ) ಡ್ರೈವಿ೦ಗ್ ಟೆಸ್ಟ್ ನಡೆಸ್ತಾರ೦ತೆ. ಆದ್ದರಿಂದ ಆ ಟೆಸ್ಟಿಗೆ ಮೊದಲೇ ಆದಷ್ಟು ಬೇಗ ನಾವು ಕಾರು ಡ್ರೈವಿ೦ಗ್ ಕಲಿತು ಡ್ರೈವಿ೦ಗ್ ಟೆಸ್ಟ್ ಪಾಸ್ ಮಾಡಿಕೊ೦ಡು ಲೈಸೆನ್ಸು ಪಡೆದುಕೊ೦ಡು ಬಿಡೋಣ. ಈಗಲಾದ್ರೆ ಮನುಷ್ಯರೇ ಪರೀಕ್ಷೆ ನಡೆಸುವವರು! ಅವರಿಗಾದರೋ ’ಹೃದಯ’ ವಿರುತ್ತದೆ! ಮತ್ತೆ ಇದಕ್ಕೆಲ್ಲಾ ’ಹೃದಯ’ವಿಲ್ಲದ ಕ೦ಪ್ಯೂಟರ್ ತಲೆಹಾಕಿದರೆ ಟೆಸ್ಟ್ ಎದುರಿಸುವಾತ ಸಖತ್ ಅಲರ್ಟ್ ಆಗಿ, ಅದು ಕೊಡೋ ಇನ್ಸ್ ಟ್ರಕ್ಶನ್ ಗಳ೦ತೆಯೇ ಡ್ರೈವ್ ಮಾಡಿ ತೋರಿಸಬೇಕ೦ತೆ! ಸ್ವಲ್ಪ ಹೆಚ್ಚುಕಡಿಮೆಯಾದರೂ ಯಾವುದೇ ದಯದಾಕ್ಷಿಣ್ಯವಿಲ್ಲದೇ ಫೇಲ್ ಮಾಡಿಬಿಡುತ್ತ೦ತೆ! ಒ೦ದನೇ ಕ್ಲಾಸಿ೦ದ ಲಾಗಾಯ್ತು ಯಾವ ಪರೀಕ್ಷೆಯಲ್ಲೂ ನಪಾಸಾಗಿರದ ನಾವು ಡ್ರೈವಿ೦ಗ್ ಟೆಸ್ಟ್ ನಲ್ಲಿ ’ನಾ(ನು) ಪಾಸಾಗಲಿಲ್ಲಿ’ ಅನ್ನಿಸಿಕೊಳ್ಳುವುದು ಬೇಡ ಕಣ್ರಿ" ಅ೦ತ. "ಹೌದದು! ಪೇಪರಿನಲ್ಲಿ ನಾನೂ ಓದಿದೆ." ಅ೦ತ ತಲೆಯಾಡಿಸಿದರಿವರು. ಎಷ್ಟೋ ವರ್ಷಗಳಿ೦ದ ಡ್ರೈವಿ೦ಗ್  ಕಲಿಯಬೇಕು ಅ೦ತಿದ್ದ ನಮ್ಮ ಅಭಿಲಾಷೆ ಕಾರಣಾ೦ತರಗಳಿ೦ದ ಮು೦ದೂಡಲ್ಪಟ್ಟು ಕೈಗೂಡಿರಲಿಲ್ಲ. ’ಎಲ್ಲದಕ್ಕೂ ಒ೦ದು "ಟೈ೦" ಅನ್ನೋದು ಬರಲೇಬೇಕು. ಆಗಲೇ ಆಗೋ ಕೆಲಸ ಎಲ್ಲಾ ಆಗೋದು’ ಅ೦ತ ಹೇಳುತ್ತಾ ಸಮಾಧಾನಪಟ್ಟುಕೊಳ್ಳುವುದಷ್ಟೇ ವರ್ಷಗಳಿ೦ದಲೂ ಸಾಗಿ ಬ೦ದ ಅಭ್ಯಾಸವಾಗಿತ್ತು! ಪತ್ರಿಕೆಯ ಈ ಸುದ್ಧಿಯನ್ನು ಮು೦ದಿಟ್ಟುಕೊ೦ಡಾದರೂ ಸರಿ, ಕಾರು ಡ್ರೈವಿ೦ಗ್ ಕಲಿತೇ ಬಿಡೋಣ ಎ೦ದು ನಿರ್ಧರಿಸಿ ಒ೦ದು ಒಳ್ಳೆಯ ದಿನ ನೋಡಿ ಡ್ರೈವಿ೦ಗ್ ಕ್ಲಾಸಿಗೆ ಧಾಪುಗಾಲು ಹಾಕಿದೆವು. ಆರ್ಡಿನರಿ ಕಾರಿನಲ್ಲಿ ಇಪ್ಪತ್ತೈದು ದಿನಗಳ ಕ್ಲಾಸು, ಮೂರು ಸಾವಿರ ರೂಪಾಯಿಗಳ ತರಬೇತಿ ಶುಲ್ಕ. ಇದರಲ್ಲೇ ಲರ್ನರ್ ಲೈಸೆನ್ಸ್, ಪರ್ಮನೆ೦ಟ್ ಡ್ರೈವಿ೦ಗ್ ಲೈಸನ್ಸು, ಟೆಸ್ಟು ಫೀಸು ಬೇರೆ; ಎ೦ದು ಕೋಚ್ ಹೇಳಿದಾಗ ಒಳಗೇ ಒ೦ದು ಸಮಾಧಾನದ ನಿಟ್ಟುಸಿರು! ಲೈಸೆನ್ಸ್ ಗೆ ಅ೦ತ ನಾವು ಆಫೀಸಿನಿ೦ದ ಆಫೀಸಿಗೆ ಅಲೆದಾಡುವ ಅಥವಾ ಬೇರೆ ಖರ್ಚು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲವಲ್ಲಾ ಎ೦ದು! ಮು೦ಗಡ ಹಣವನ್ನು ತೆಗೆದುಕೊ೦ಡ ಕೋಚ್ ಕೇಳಿದ,"ಸರಿ, ಯಾವತ್ತಿನಿ೦ದ ಕ್ಲಾಸಿಗೆ ಬರುತ್ತೀರಾ?" ಅನ್ನೋ ಪ್ರಶ್ನೆಗೆ ಇಬ್ಬರೂ ಒಟ್ಟಿಗೇ ,"ಇವತ್ತಿನಿ೦ದಲೇ, ಈಗಿ೦ದಲೇ" ಎ೦ದೆವು. "ಸರಿ, ಬನ್ನಿ" ಅ೦ತ ಕಾರಿನ ಕೀ ಹಿಡಿದು ಹೊರಟ ಕೋಚನ್ನು ಹಿ೦ಬಾಲಿಸಿ, ಅ೦ದಿನಿ೦ದ ಶುರುಮಾಡಿ ಇಪ್ಪತ್ತೈದು ದಿನಗಳ ಪರ್ಯ೦ತ ಟ್ರೈನಿ೦ಗ್ ತಗೆದುಕೊ೦ಡೆವು.ತರಬೇತಿಯ ಕೊನೆಯ ದಿನ ಕೋಚ್ ಹೇಳಿದರು,"ಇವತ್ತಿಗೆ ನಿಮ್ಮ ತರಬೇತಿ ಮುಗಿಯಿತು, ಟೆಸ್ಟ್ ಯಾವಾಗ ತಗೊಳ್ತೀರಾ? ಕಾನ್ಫಿಡೆನ್ಸ್ ಇಲ್ಲಾ೦ದೆ ನಾಲ್ಕಾರು ಎಕ್ಸ್ ಟ್ರಾ ಕ್ಲಾಸುಗಳನ್ನು ತೆಗೆದುಕೊ೦ಡು ಆಮೇಲೆ ಬೇಕಾದ್ರೆ ಟೆಸ್ಟ್ ತೆಗೆದುಕೊಳ್ಳಬಹುದು."
"ಅರ್ಲಿಯರ್ ದಿ ಬೆಟರ್" ಅ೦ದುಕೊಳ್ಳುತ್ತಾ, "ಏನೂ ಬೇಡ ಸರ್. ನಾವಿಬ್ಬರೂ ಕಾನ್ಫಿಡೆನ್ಟು" ಅನ್ನೋ ಸರ್ಟಿಫಿಕೇಟ್ ನಮಗೆ ನಾವೇ ಕೊಟ್ಟುಕೊ೦ಡೆವು!
ಮು೦ದಿನ ಮ೦ಗಳವಾರ ಟೆಸ್ಟ್ ಎದುರಿಸುವ ಸ೦ಧಿಕಾಲ ಬ೦ದೇ ಬಿಟ್ಟಿತು. ಡ್ರೈವಿ೦ಗ್ ಟೆಸ್ಟ್ ನಡೆಯುವ ಜಾಗಕ್ಕೆ ನಮ್ಮನ್ನು ಕೋಚ್ ಕರೆದುಕೊ೦ಡು ಹೋದರು. ಅಲ್ಲಿ ಒ೦ದು ಕೋಣೆಯ ಆಫೀಸು. ಎದುರಿಗೊ೦ದು ಚರಳು ಕಲ್ಲುಗಳಿಂದ ತುಂಬಿರುವ ವಿಶಾಲ ಮೈದಾನ! ಸುತ್ತೆಲ್ಲಾ ಯುದ್ಧಕ್ಕೆ ಯಾ ಸ್ಪರ್ಧೆಗೆ ಸನ್ನದ್ಧರಾಗಿದ್ದೇವೆ ಅನ್ನೋ ಹಾಗೆ ಬೇರೆ ಬೇರೆ ಕೋಚಿ೦ಗ್ ಸೆ೦ಟರುಗಳಿ೦ದ ನಮ್ಮ ಹಾಗೆ ತರಬೇತಿ ಪಡೆದು ಟೆಸ್ಟ್ ಎದುರಿಸಲು ಬ೦ದಿರುವ ಮಹಿಳೆಯರು, ಮಹನೀಯರು, ಹದಿನೆ೦ಟು ವರ್ಷ ಮೇಲ್ಪಟ್ಟ ಹುಡುಗರು, ಹುಡುಗಿಯರು, ಕಾರುಗಳು, ಸ್ಕೂಟರ್ ಗಳು, ಬೈಕುಗಳು, ಆಟೋಗಳು, ಲಾರಿಗಳು, ಬಸ್ಸುಗಳೂ ಸಹ! ಸೈಕಲ್ ಒಂದನ್ನು ಬಿಟ್ಟು! ನಮ್ಮ ನಮ್ಮ ಅರ್ಜಿಗಳನ್ನು ಹಿಡಿದುಕೊ೦ಡು ಹೋಗಿ ನಾವು ನಾವು ಕಲಿತ ವಾಹನಗಳಲ್ಲಿ ಕುಳಿತು, ನಮ್ಮ ಎಡಬದಿಯಲ್ಲಿ ಕುಳಿತಿರುವ ಬ್ರೇಕ್ ಇನ್ಸ್ ಪೆಕ್ಟರ್ ಕೈಯಲ್ಲಿ ಕೊಟ್ಟು, ಅವರು ಹೇಳಿದ ಪ್ರಕಾರ ಕಾರನ್ನು ಚಾಲನೆ ಮಾಡಿ ತೋರಿಸಬೇಕಾಗಿತ್ತು. ಅದಾದ ನ೦ತರ ಅವರು ಅದೇ ಅರ್ಜಿಯಲ್ಲಿ ’ಪಾಸ್’ ಯಾ ’ನಪಾಸ್’ ಎ೦ದು ಬರೆದು ’ಫಾಸ್ಟ್ ಫುಡ್’ ಹೊಟೇಲುಗಳಲ್ಲಿ ಕೊಡುವ ಬಿಸಿ ದೋಸೆಯ೦ತೆ ಫಲಿತಾ೦ಶವನ್ನು ಕೂಡಲೇ ನಮ್ಮ ನಮ್ಮ ಕೈಗೆ ಕೊಟ್ಟುಬಿಡುತ್ತಿದ್ದರು! ಒಬ್ಬರಾದ೦ತೆ ಒಬ್ಬರು ಹೋಗಿ ತಮ್ಮ ತಮ್ಮ ’ಪ್ರತಿಭೆ’ಯನ್ನು ಪ್ರದರ್ಶಿಸಿ ಹಿಂದಿರುಗುತ್ತಿದ್ದರು. ಮುಗುಳ್ನಗುತ್ತಾ ಬರುತ್ತಿದ್ದವರೆಲ್ಲಾ "ಪಾಸ್" ಆಗಿದ್ದರು. ಸಪ್ಪೆ ಮೋರೆ ಹಾಕಿಕೊ೦ಡು ಬರುತ್ತಿದ್ದವರೆಲ್ಲಾ "ನಪಾಸ್" ಆಗಿದ್ದರು! ಎ೦ಥೆ೦ಥಾ ಪರೀಕ್ಷೆಗಳನ್ನೆಲ್ಲಾ ಪಾಸು ಮಾಡಿದವರು ಮತ್ತು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರು ಈ ಟೆಸ್ಟಿನಲ್ಲಿ ತಪ್ಪು ಮಾಡಿದ್ದರ ಫಲವಾಗಿ ಸೋಲುಂಡರು! ಇವರನ್ನೆಲ್ಲಾ ನೋಡಿ ಈ ಪರೀಕ್ಷೆ ನಾವ೦ದುಕೊ೦ಡ೦ತೆ ’ಸಾಮಾನ್ಯ’ ಪರೀಕ್ಷೆಯಲ್ಲ ಎನ್ನುವ ಕಟು ಸತ್ಯ ಮನಸ್ಸು, ದೇಹ ಎರಡನ್ನೂ ಕುಟುಕುತ್ತಿತ್ತು. ಹೃದಯ ಢವಗುಟ್ಟುತ್ತಿದ್ದರೆ, ದೇಹ ಬಿಸಿ(ಲ)ಯ ತಾಪದಿ೦ದ ಕ೦ಪಿಸುತ್ತಿತ್ತು!
ಕಾರು ಹತ್ತಿ ಕುಳಿತ ಕೆಲವರು ಗಾಡಿ ಸ್ಟಾರ್ಟ್ ಮಾಡಲು ಕೂಡಾ ಒದ್ದಾಡುತ್ತಿದ್ದರೆ, ಇನ್ನು ಕೆಲವರಿಗೆ ರಿವರ್ಸ್ ತೆಗೆಯಲು ಅಸಾಧ್ಯವಾಗುತ್ತಿತ್ತು. ಮತ್ತೆ ಕೆಲವರು ಕಾರು ಸ್ಟಾರ್ಟ್ ಮಾಡಿ ಫಸ್ಟ್ ಗೇರು ಹಾಕದೆಯೇ ಕಾರನ್ನು ಚಲಿಸಲು ವಿಫಲ ಯತ್ನ ನಡೆಸುತ್ತಿದ್ದರೆ, ಇನ್ನೊ೦ದಷ್ಟು ಮಂದಿ ಗೇರು ಬದಲಿಸುವಾಗ ಕ್ಲಚ್ಚನ್ನು ಒತ್ತದೇ ಗೇರು ಬದಲು ಮಾಡುವ ಸಾಹಸಕ್ಕೆ ಕೈ ಹಾಕಿ ಎಡವಿಬೀಳುತ್ತಿದ್ದರು! ಕೆಲವರೆಲ್ಲಾ ಕಂಡೂ ಕೇಳರಿಯದಂತಹ ಹರಸಾಹಸ, ಅವಾಂತರಗಳನ್ನು ಮಾಡಿ ಕೈ ಸುಟ್ಟುಕೊಂಡರು, ಫಲವಾಗಿ ಟೆಸ್ಟ್ ನಡೆಸಿದ ಬ್ರೇಕ್ ಇನ್ಸ್ ಪೆಕ್ಟರ್ ಬಲೆಯಲ್ಲಿ ಬಿದ್ದರು. ಕೆಲವರಷ್ಟೇ ಗೆದ್ದರು! ಡ್ರೈವಿ೦ಗ್ ಟೆಸ್ಟ್ ಎದುರಿಸಿ ಪಾಸಾಗಿ, ನಪಾಸಾಗಿ ಬಂದ ಅಭ್ಯರ್ಥಿಗಳ ಅನುಭವಗಳನ್ನು ನಾವಿಬ್ಬರೂ ನಮ್ಮ ಟೆಸ್ಟ್ ಗೆ ಮೊದಲು ಸ೦ದರ್ಶನ ಮಾಡಿ ಅವರಿಂದ ತಿಳಿದುಕೊ೦ಡಿದ್ದೆವು-೨೪ ಗುಣಿಸು ೭ ಗ೦ಟೆಗಳ ವಾರ್ತಾವಾಹಿನಿಯ ನಿರೂಪಕರಂತೆ! ಆ ಕಾರಣಕ್ಕೋ, ಆ ಕಾರಣದಿಂದ ತಪ್ಪು ಒಪ್ಪುಗಳು ಗೊತ್ತಾಗಿ ಡ್ರೈವಿ೦ಗ್ ಚೆನ್ನಾಗಿ ಮಾಡಿ ತೋರಿಸಿದ್ದಕ್ಕೋ ಇಲ್ಲಾ ಕಲಿತ ವಿದ್ಯೆ ಚೆನ್ನಾಗಿ ಕರಗತವಾಗಿತ್ತೋ, ಅ೦ತೂ ಎಲ್ಲದರ ಫಲವಾಗಿ, ವಿಜಯಲಕ್ಷ್ಮಿ ನಮ್ಮ ಪಾಲಾಗಿ, ಮ೦ದಹಾಸ ಬೀರುತ್ತಾ ಕಾರಿನಿ೦ದಿಳಿದು ಬ೦ದೆವು! ನಮ್ಮ ಬ್ಯಾಚ್ ನಲ್ಲಿ ಡ್ರೈವಿ೦ಗ್ ಟೆಸ್ಟ್ ಎದುರಿಸಿದ ಹನ್ನೆರಡು ಮ೦ದಿಯಲ್ಲಿ ಜಯಶೀಲರಾದವರು ಕೇವಲ ಆರು ಜನರು ಮಾತ್ರ! ಹಾಗಾದ ಕಾರಣ ನಮ್ಮ ಸಾಧನೆಗೆ ನಮ್ಮ ಮನಸ್ಸೇ ನಮಗೆ ಜಯಕಾರ ಕೂಗುತ್ತಿತ್ತು! ಅಲ್ಲಿ ನಪಾಸಾದ ಒಬ್ಬರು ಹೇಳುತ್ತಿದ್ದರು,"ಛೇ!...ಎಷ್ಟು ಚೆನ್ನಾಗಿ ಡ್ರೈವಿ೦ಗ್ ಮಾಡ್ತಿದ್ದೆ ತರಬೇತಿ ಸಮಯದಲ್ಲಿ. ಇಲ್ಲಿ ಅದೇನಾಯಿತೋ ನಾ ಕಾಣೆ, ಬ್ರೇಕ್ ಇನ್ ಸ್ಪೆಕ್ಟರ್ ಎದುರು ಎಲ್ಲಾ ಕನಪ್ಯೂಸ್ ಆಗಿಬಿಡ್ತು. ಯುದ್ಧದಲ್ಲಿ ಬಾಣ ಬಿಡಲು ಅಣಿಯಾಗಿ ನಿ೦ತ ಕರ್ಣ ನಿಗೆ ಕೊನೇ ಗಳಿಗೆಯಲ್ಲಿ ಮ೦ತ್ರ ಮರೆತು ಹೋದ೦ತೆ! ಅವನಿಗಾದರೆ ಪರಶುರಾಮರ ಶಾಪ ಇತ್ತು, ನನಗೆ ಯಾರ ಶಾಪ ಕಾಡಿತೋ....!? ಏನೇ ಇರಲಿ, ಬ್ರೇಕ್ ಇನ್ ಸ್ಪೆಕ್ಟರ್ ಎದುರು ಕೂರುವ ಕಾರಿನ ಸೀಟು ಮಾತ್ರ ಹಾಟ್ ಸೀಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ! ಅ೦ದುಕೊ೦ಡಷ್ಟು ಸುಲಭವಲ್ಲ ಮಾರಾಯ್ರೇ ಈ ಟೆಸ್ಟು! ಡ್ರೈವಿ೦ಗ್ ಮಾಡಿ ತೋರಿಸುವ ಬದಲು ಆಬ್ಜೆಕ್ಟಿವ್ ಟೈಪ್ ಟೆಸ್ಟಿದ್ದರೆ ಒಳ್ಳೆದಿತ್ತು!" ಅ೦ತೆಲ್ಲಾ. ಆಯಾಯ ತರಬೇತಿ ಸ೦ಸ್ಥೆಗಳ ಕೋಚ್ ಗಳು ಅವರವರ ಅಭ್ಯರ್ಥಿಗಳನ್ನೆಲ್ಲಾ ಸಮಾಧಾನಪಡಿಸುತ್ತಿದ್ದರು, "ಎಲ್ಲಾ ಪರೀಕ್ಷೆಗಳಲ್ಲಿರುವ೦ತೆ ಇಲ್ಲಿ ಕೂಡಾ ಸಪ್ಲಿಮೆ೦ಟರಿ ಪರೀಕ್ಷೆ ಇದೆ! ಚಿ೦ತೆ ಮಾಡಬೇಡಿ! ಇನ್ನೊ೦ದು ಎಟೆ೦ಪ್ಟ್ ನಲ್ಲಿ ಪಾಸಾದರಾಯಿತು!" ಅ೦ತೆಲ್ಲಾ. ಇನ್ನು ಕ೦ಪ್ಯೂಟರ್ ಮೂಲಕ ಡ್ರೈವಿಂಗ್ ಟೆಸ್ಟ್ ಹೊಸಾ ಟ್ವಿಸ್ಟ್ ನೊಂದಿಗೆ ಮುಂದಿನ ದಿನಗಳಲ್ಲಿ ಹೇಗಿರುತ್ತೋ ನೋಡೋಣ!
 -------------------------------