Thursday, March 19, 2015

"ಲಚ್ಚಿ"- ನನ್ನ ಕಥಾಸಂಕಲನದ ಒಂದು ಸಣ್ಣ ಕಥೆ. ಓದುಗರು ಹಲವರು "ಹೃದಯಸ್ಪರ್ಶಿ ಕಥೆ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ ಸಣ್ಣ ಕಥೆಯೇ ಈ "ಲಚ್ಚಿ".

ಲಚ್ಚಿ
     ಲಚ್ಚಿ ಹದಿಮೂರರ ಬಾಲೆ. ಲಕ್ಷ್ಮಿ ಎಂದಿದ್ದ ಅವಳ ಹೆಸರನ್ನು ’ಲಚ್ಚಿ’ ಎಂದೇ ಸಂಬೋಧಿಸುತ್ತಿದ್ದರು. ಆಕೆಗಿರುವ ಆಸೆಗಳೋ ಬೆಟ್ಟದಷ್ಟು. ಆ ಬೆಟ್ಟ ದಿನ ದಿನವೂ ಬೆಳೆಯುತ್ತಿದೆ. ಆದರೆ ಅವುಗಳನ್ನೆಲ್ಲಾ ಪೂರೈಸಿಕೊಳ್ಳಲು ಆಕೆಯ ಪರಿಸ್ಥಿತಿಯೇ ಬಿಡುವುದಿಲ್ಲ. ಸಿರಿವಂತರ ಆಸೆಗಳು ಎಷ್ಟೇ ದೊಡ್ಡದಿದ್ದರೂ ಹಣದ ಮುಖಾಂತರ ನಡೆಯುತ್ತವೆ. ಆದರೆ ಬಡವರ, ಅದೂ ಲಚ್ಚಿಯಂತವರ ಆಸೆಗಳು ಆಸೆಗಳಾಗಿಯೇ ಉಳಿಯುತ್ತವೆ. ಕೆಲವೊಮ್ಮೆ ನಿರಾಸೆಯಾಗುತ್ತದೆ. ಮತ್ತೆ ಕೆಲವೊಮ್ಮೆ ಅವಕಾಶ ಸಿಕ್ಕರೂ ವಂಚಿತವಾಗುತ್ತವೆ. ದೇವರನ್ನು ಎಷ್ಟು ಮೊರೆ ಹೊಕ್ಕರೂ ಆತ ಪೂರೈಸದೇ ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದಾನೆಯೇ ಎನ್ನಿಸುತ್ತದೆ ಲಚ್ಚಿಗೆ. ಲಚ್ಚಿಯ ಅಪ್ಪ ಅಮ್ಮನಿಗೆ ಬರುವ ಕೂಲಿ ಸಂಬಳ ಊಟಕ್ಕೇ ಸರಿಯಾಗಿ ಸಾಕಾಗುತ್ತಿರಲಿಲ್ಲ. ಲಚ್ಚಿಗೆ ಆರು ವರ್ಷವಾದಾಗ ಹಳ್ಳಿಯಲ್ಲೇ ಸರಕಾರಿ ಶಾಲೆಗೆ ಸೇರಿಸಿದ್ದರು. ಅವಳಿಗೆ ಒಂಭತ್ತು ವರ್ಷ ತುಂಬುವಾಗ ಅವಳಮ್ಮ ಮತ್ತೊಂದು ಶಿಶುವನ್ನು ಹಡೆದಳು. ಅಲ್ಲಿಗೇ ಮುಗಿಯಿತು ಲಚ್ಚಿಯ ವಿದ್ಯಾಭ್ಯಾಸ. ಮಗುವನ್ನು ಆಕೆಯ ಮಡಿಲಲ್ಲಿ ಹಾಕಿ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ಬಾಲೆಯಾಗಿ ಬಾಲ್ಯದಾಟಗಳನ್ನು ಆಡಬೇಕಿದ್ದ, ಶಾಲೆಗೆ ಹೋಗಿ ಕಲಿಯಬೇಕಿದ್ದ ಲಚ್ಚಿಯ ಪಾಲಿಗೆ ಏನೂ ಇಲ್ಲದಾಯಿತು. ಶಾಲೆಯಲ್ಲಿ ಟೀಚರು, "ಲಚ್ಚೀ, ನೀನು ಹೀಗೇ ಚೆನ್ನಾಗಿ ಓದಿ ಬರ‍್ದೂ ಮಾಡಿದ್ರೆ ಮುಂದೊಂದು ದಿನ ದೊಡ್ಡ ಉದ್ಯೋಗದಲ್ಲಿರ‍್ತೀಯ" ಎಂದದ್ದು ನೆನಪಾಗುತ್ತಿರುತ್ತದೆ. ಅಲ್ಲದೇ ಟೀಚರು ಇವಳ ಪುಸ್ತಕವನ್ನೆತ್ತಿ ಹಿಡಿದು ಬೇರೆ ಮಕ್ಕಳಿಗೆ ತೋರಿಸುತ್ತಾ, "ನೋಡಿ ಮಕ್ಕಳೇ ಎಷ್ಟೊಂದು ಉರುಟಾಗಿ, ತಪ್ಪಿಲ್ಲದೇ ಬರೆದಿದ್ದಾಳೆ ಲಚ್ಚಿ, ನೀವೂ ಕೂಡಾ ಹೀಗೇ ಜಾಣರಾಗಬೇಕು" ಹೇಳುತ್ತಾ ತನ್ನ ಬೆನ್ನನ್ನು ತಟ್ಟುತ್ತಿದ್ದದ್ದು ನೆನಪಾಗಿ ಕಣ್ಣೀರಿಳಿದು ಬರುತ್ತದೆ. ’ನಮ್ಮ ಬಡವರ ಬದುಕೇ ಹೀಗೆ. ಯಾಕಾದರೂ ಆ ದೇವರು ಬಡವರು, ಶ್ರೀಮಂತರೆಂಬ ಭೇದ ಮಾಡಿದನೋ’ ಎಂದು ನೆನೆಸಿ ನೆನೆಸಿ ಕೊರಗುತ್ತಾಳೆ. ಮತ್ತೆರಡು ವರ್ಷ ಕಳೆದು ಲಚ್ಚಿಯ ಅಮ್ಮ ಮತ್ತೊಂದು ಮಗುವನ್ನು ಹಡೆದಳು. ಈಗ ಲಚ್ಚಿಯ ಪಾಲಿಗೆ ಎರಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ. ಏನಾದ್ರೂ ಹೆಚ್ಚು ಕಡಿಮೆ ಆದರೂ ತಾಯಿ, ತಂದೆಯರಿಂದ ಬೈಗುಳ ಇಲ್ಲವೇ ಏಟು ತಿನ್ನಬೇಕಾಗಿತ್ತು. ಒಂದು ಸಲವಂತೂ ತಂದೆ ಕೊಟ್ಟ ಪೆಟ್ಟಿನಿಂದಾಗಿ ತಲೆ ತಿರುಗಿ ಬಿದ್ದಿದ್ದಳು ಲಚ್ಚಿ. ಬೆಳೆಯುತ್ತಿರುವ ಸಂಸಾರದ ಅಗತ್ಯಗಳನ್ನು ಪೂರೈಸುವಷ್ಟು ಲಚ್ಚಿಯ ಅಪ್ಪ ಅಮ್ಮನ ದುಡಿತದಿಂದ ಬರುತ್ತಿದ್ದ ಹಣ ಸಾಕಾಗುತ್ತಿರಲಿಲ್ಲ.
     ಒಂದು ದಿನ ಊರಿನ ಧಣಿ ರಾಮೇಗೌಡರು ಬಂದು, "ನಿನ್ ಲಚ್ಚೀನ ನಮ್ಮನೆ ಕೆಲ್ಸಕ್ಕೆ ಕಳ್ಸು ಲಿಂಗಪ್ಪಾ, ಸುಮ್ನೆ ಮನೇಲೇ ಯಾಕೆ ಕೊಳಿತಾ ಬಿದ್ದಿರ‍್ಬೇಕು? ತಿಂಗ್ಳಿಗೆ ನೂರೈವತ್ತು ರೂಪಾಯಿ ಕೂಲಿ ಕೊಡ್ತೀನಿ" ಎಂದಾಗ ಲಚ್ಚಿಯ ಅಪ್ಪನ ಮುಖವರಳಿತು. ಉಳಿದಿಬ್ಬರು ಮಕ್ಕಳನ್ನು ಕೆಲಸಕ್ಕೆ ಹೋಗುವಾಗ ತಮ್ಮ ಜೊತೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿ ಗಂಡ ಹೆಂಡತಿ ಲಚ್ಚಿಯನ್ನು ರಾಮೇಗೌಡರಲ್ಲಿಗೆ ಕೆಲಸಕ್ಕೆ ಸೇರಿಸಿದರು.
"ಇಕೋ ಐವತ್ತು ರೂಪಾಯಿ ಅಡ್ವಾನ್ಸ್" ಎನ್ನುತ್ತಾ ಲಚ್ಚಿಯ ಅಪ್ಪನ ಕೈಗೆ ಹಣವಿತ್ತರು ರಾಮೇಗೌಡರು..
ಗೌಡರನ್ನು ಲಚ್ಚಿ ಹಿಂಬಾಲಿಸಿದಳು. ಅವನ ಮನೆಯೋ ದೊಡ್ಡ ಬಂಗಲೆ. ಎರಡೆರಡು ಕಾರುಗಳು. ತನ್ನಷ್ಟೇ ಪ್ರಾಯದ ಮಗಳೊಬ್ಬಳು, ನಾಲ್ಕು ವರ್ಷದ ತಮ್ಮ ಆಕೆಗೆ. ಮೈ ಕೈ ತುಂಬಿ ಉರುಟುರುಟಾಗಿದ್ದರು ಆ ಮಕ್ಕಳು. ಕೆಲಸಕ್ಕೆ ಸೇರಿ ನಾಲ್ಕೈದು ದಿನಗಳಲ್ಲಿ ಲಚ್ಚಿ ಮಕ್ಕಳಿಗೆ ಅಚ್ಚುಮೆಚ್ಚಿನವಳಾದಳು.
ಲಚ್ಚಿ ಮನೆಯ ಎಲ್ಲಾ ವಸ್ತುಗಳನ್ನು ಆಸೆಯ ಕಣ್ಣುಗಳಿಂದ ನೋಡುತ್ತಿದ್ದಳು. ’ನಮಗೀಭಾಗ್ಯವಿಲ್ಲವಲ್ಲಾ’ ಎಂದು ಮನಸ್ಸಿನಲ್ಲೇ ಅತ್ತಳು.
ಗೌಡರ ಬೆಡ್ ರೂಮಿನಲ್ಲೇ ಡ್ರೆಸಿಂಗೆ ಟೇಬಲ್ ಇತ್ತು. ರೂಮನ್ನು ಗುಡಿಸಿ ಸಾರಿಸಲು ಹೋದಾಗ ಡ್ರೆಸಿಂಗ್ ಟೇಬಲ್ ಮೇಲಿದ್ದ ಶೃಂಗಾರ ಸಾಧನಗಳನ್ನು ಒಪ್ಪ ಓರಣವಾಗಿರಿಸುವ ನೆಪದಲ್ಲಿ ಮುಟ್ಟಿ ನೋಡಿ, ಅದರ ಪರಿಮಳಗಳನ್ನು ಅನುಭವಿಸಿ ಇದ್ದಲ್ಲೇ ಇಟ್ಟುಬಿಡುತ್ತಿದ್ದಳು. ಹ್ಯಾಂಗರುಗಳಲ್ಲಿ ಹಾಕಿದ ಸಾವಿರಾರು ರೂಪಾಯಿ ಬೆಲೆಬಾಳುವ ತನ್ನ ಓರಗೆಯ ಗೌಡರ ಮಗಳು ರೂಪಾಳ ಉಡುಪುಗಳನ್ನು ನೋಡುತ್ತಿದ್ದಳು ಲಚ್ಚಿ. ಗೌಡರ ಹೆಂಡತಿ, ಮಕ್ಕಳು ನಿಜವಾಗಿಯೂ ಅದೃಷ್ಠವಂತರು. ನನಗಾದರೂ ಯಾಕೋ ’ಲಕ್ಷ್ಮಿ’ ಎಂದು ಹೆಸರಿಟ್ಟರೋ. ಆ ಹೆಸರು ಹಣವಂತರಿಗೇ ಸೈ ಎನಿಸುತ್ತಿತ್ತವಳಿಗೆ. ಅವಳು ಗೌಡರ ರೂಮನ್ನು ಒತ್ತರೆ ಮಾಡುವಾಗ ಹೆಚ್ಚಾಗಿ ಗೌಡರ ಹೆಂಡತಿ ಸ್ನಾನ ಮುಗಿಸಿ ಬಂದು, ಬಿಳುಪಿನ ಕ್ರೀಮನ್ನು ಮುಖಕ್ಕೆ ಲೇಪಿಸುತ್ತಿದ್ದಳು. ಆಹಾ....ಎಂತಾ ಸುವಾಸನೆ. ಅವರ ಚರ್ಮವೂ ಅಷ್ಟೇ ನುಣುಪು. ಎಳೆಯ ಕಂಗಳಲ್ಲಿ ಹೃದಯಾಂತರಾಳದ ಆಸೆ ಹೊರಹೊಮ್ಮಿತು. ತಾನೂ ಆ ವಸ್ತುವನ್ನು ಮುಖಕ್ಕೆ ಲೇಪಿಸಿದರೆ ಅಮ್ಮನವರಂತಹ ಚರ್ಮ ಪಡೆಯಬಹುದಲ್ಲವೇ ಎಂದುಕೊಳ್ಳುತ್ತಾ ಕನಸಿನ ಲೋಕದಲ್ಲಿ ತೇಲಿ ಹೋಗುತ್ತಿದ್ದಳು. ಗೌಡರ ಮಗಳು ರೂಪಳ ಉಡುಗೆ, ಗೌಡರ ಹೆಂಡತಿಯ ಕ್ರೀಂ, ಪೌಡರ್, ಲಿಫ್ಸ್‍ಟಿಕ್, ನೈಲ್ ಪಾಲಿಷ್‍ಗಳೆಲ್ಲವನ್ನೂ ಆಕೆ ತನ್ನ ಕನಸಿನಲ್ಲಿ ಅನುಭವಿಸುತ್ತಿದ್ದಳು.
"ಏನೇ ಗರ ಬಡಿದವಳ ಹಾಗೆ ನಿಂತುಬಿಟ್ಟೆ. ಕೆಲಸ ಯಾರು ನಿನ್ನಪ್ಪ ಬಂದು ಮಾಡ್ತಾನಾ?" ಎಂದು ಗೌಡರಮ್ಮ ಗದರುತ್ತಿದ್ದಳು.
’ಕನಸು ಕಾಣಲೂ ಕೂಡಾ ನನಗೆ ಸ್ವಾತಂತ್ರ್ಯವಿಲ್ಲವೇ’ ಎಂದು ಹಲುಬುತ್ತಿದ್ದಳು ಲಚ್ಚಿ.
ಮನೆ ಗುಡಿಸಿ ಒರೆಸಿ, ಪಾತ್ರೆಗಳನ್ನು ತೊಳೆದು, ಬಟ್ಟೆಗಳನ್ನು ಒಗೆಯುವ ಕೆಲಸ ಲಚ್ಚಿಯದ್ದು. ಬಟ್ಟೆ ಒಗೆಯುವಾಗ ರೂಪಾಳ ಹಾಗೂ ಗೌಡರಮ್ಮನ ಬಟ್ಟೆಗಳ ಸೌಂದರ್ಯವನ್ನು ಸವಿಯುತ್ತಾ ಮತ್ತೆ ಪುನ: ಕನಸಿನ ಲೋಕಕ್ಕೆ ಜಾರುತ್ತಿದ್ದಳು ಲಚ್ಚಿ.
’ಅಲ್ಲಾ ಈ ಪಾಟಿ ಬಟ್ಟೆಗಳಿದ್ದರೂ ಒಂದನ್ನಾದರೂ ಪ್ರೀತಿಯಿಂದ, "ತೆಗೆದುಕೋ ಲಚ್ಚೀ, ಇದು ನಿನಗೆ, ನೀನು ಹಾಕಿಕೋ, ರೂಪಾಳ ಪ್ರಾಯ ನಿನ್ನ ಪ್ರಾಯ ಒಂದೇ ಆದ್ದರಿಂದ ನಿನಗಿದು ಸರಿಯಾಗಬಹುದು" ಎಂದು ಅಮ್ಮನವರು ಕೊಟ್ಟಿದ್ದೇ ಇಲ್ಲ...ಕೆಲಸಕ್ಕೆ ಸೇರಿ ತಿಂಗಳು ಆರಾಯಿತು...ಹೊಸ ಬಟ್ಟೆ ಹೋಗಲಿ, ಹಾಕಿ ಹಳೆಯದಾದದ್ದನ್ನು ಕೊಡಬಹುದಲ್ಲವೇ? ಅದನ್ನು ಕೂಡಾ ಹಾಕಲು ತನಗೆ ಯೋಗ್ಯತೆ ಇಲ್ಲವೇ? ಎಂದು ಚಿಂತಿಸಿದಳು. ’ಲಚ್ಚಿ ಬಡವಳು, ತನ್ನ ಮಗಳ ಓರಗೆಯವಳು, ಅವಳೂ ಮನುಷ್ಯಳು, ಅವಳಿಗೂ ಆಸೆ ಆಕಾಂಕ್ಷೆಗಳಿರುತ್ತವೆ’ ಎಂಬುದನ್ನೇಕೆ ಈ ಅಮ್ಮ ತಿಳಿಯೋದಿಲ್ಲ?! ಎಂದಚ್ಚರಿಯೆನಿಸಿತವಳಿಗೆ.

ರೂಪಾ ಮತ್ತವಳ ತಮ್ಮ ರಘುವಿಗೆ ಶಾಲೆಗೆ ರಜೆ ಎಂದರೆ ಲಚ್ಚಿಗೆ ಎಲ್ಲಿಲ್ಲದ ಸಂತೋಷ. ಅವರಿಬ್ಬರೂ ಆಟವಾಡುವ ಆಟಿಕೆಗಳೋ ಒಂದಕ್ಕಿಂತ ಇನ್ನೊಂದು ಮಿಗಿಲು. ಹತ್ತಿಯಂತಹ ಬೊಂಬೆಯನ್ನು ಮುಟ್ಟಿದಾಕ್ಷಣ ಅದು ಅಳುತ್ತದೆ ನಂತರ ಅದರ ಬಾಯಿಗೆ ಕೀಲಿಕೈ ಹಾಕಿದರೆ ಅಳುವುದನ್ನು ನಿಲ್ಲಿಸುತ್ತದೆ! ಸೋಜಿಗವೆನಿಸಿತವಳಿಗೆ. ತನ್ನ ಪುಟ್ಟ ತಮ್ಮ ತಂಗಿಯರಿಗೆ ನೋಡಿದರೆ ಸಂತೋಷವಾಗಬಹುದು ಎಂದುಕೊಳ್ಳುತ್ತಾಳೆ...ಹಾಗಂತ ಅವರನ್ನೆಲ್ಲಾ ಈ ಮನೆಗೆ ಕರೆದುಕೊಂಡು ಬರಲೂ ಆಗುವುದಿಲ್ಲ....ಈ ಮನೆಯಲ್ಲಿ ಅದೇ ರೀತಿ ಮೂರು ಬೊಂಬೆಗಳಿವೆ. ಒಂದನ್ನಾದರೂ ಗೌಡರಮ್ಮ ಕೊಟ್ಟಿದ್ದರೆ ನನ್ನ ತಮ್ಮ ತಂಗಿಯರಾಡಿಕೊಳ್ಳುತ್ತಿದ್ದರು. ’ಕೇಳೋಣವೇ’ ಎಂದುಕೊಳ್ಳುತ್ತಾಳೆ. ಆದರೆ ಗೌಡರಮ್ಮನ  ಆ ಗಟ್ಟಿ ಸ್ವರವನ್ನು ಆಲೋಚಿಸುವಾಗಲೇ ಅವಳಿಗೆ ಕಾಲಿನಿಂದ ತಲೆಯವರೆಗೆ ನಡುಕ ಹತ್ತುತ್ತದೆ. ಕಳೆದ ವರ್ಷ ಜಾತ್ರೆಗೆಂದು ಅಪ್ಪನೊಂದಿಗೆ  ಹೋಗಿದ್ದ ಲಚ್ಚಿ ತಮ್ಮ, ತಂಗಿಯರಿಗೆಂದು ಒಂದು ಪ್ಲಾಸ್ಟಿಕ್ ಗಿಳಿ ಮತ್ತೊಂದು ಕಾರನ್ನು ಖರೀದಿಸಿದ್ದಳು. ಅದು ಮನೆ ಸೇರಿ ಮಕ್ಕಳ ಕೈಯಲ್ಲಿ ಕೊಟ್ಟು ನಿಮಿಷದಲ್ಲೇ ಹಾಳಾಗಿದ್ದವು. ಒಬ್ಬರಲ್ಲಿ ಒಂದಕ್ಕಿಂತ ಹೆಚ್ಚು ವಸ್ತುಗಳಿದ್ದರೆ ಅದನ್ನು ಹಂಚುವಂತಿರಬೇಕಿತ್ತು. ಆಗ ಬಡವರಿಗೂ ತೃಪ್ತಿ ಇರುತ್ತಿತ್ತು ಎಂದೆಲ್ಲಾ ಆಲೋಚಿಸುತ್ತಿದ್ದಳು ಲಚ್ಚಿ. ಇರಲಿ, ಒಂದಲ್ಲಾ ಒಂದು ದಿನ ಗೌಡರಮ್ಮ ನನಗಾಗಿ ಏನನ್ನಾದರೂ ಕೊಟ್ಟಾಳು, ಇನ್ನೂ ಒಂದು ವರ್ಷವಾಗಲಿಲ್ಲವಲ್ಲಾ ಕೆಲಸಕ್ಕೆ ಸೇರಿ ಎಂದುಕೊಂಡಳು. ದಿನಗಳುರುಳಿದವು, ತಿಂಗಳುಗಳು ಕಳೆದವು, ವರ್ಷವೂ ಕಳೆಯಿತು. ಊಹೂಂ ಗೌಡರಮ್ಮನಿಗೆ ಕೊಟ್ಟು ಅಭ್ಯಾಸವಿಲ್ಲವೆಂದೆನಿಸಿ, ಇನ್ನು ಎಟುಕದ್ದಕ್ಕಾಗಿ ಹಂಬಲಿಸಿ ಪ್ರಯೋಜನವಿಲ್ಲವೆಂದೆನಿಸಿತು ಲಚ್ಚಿಗೆ. ಹೋಗಲಿ, ತಾನು ದುಡಿದ ಹಣವನ್ನು ಆಕೆ ಮುಟ್ಟಿ ಸಂತೋಷಪಡುವಂತಿರಲಿಲ್ಲ. ತಿಂಗಳಾಗುವುದೇ ತಡ, ಆಕೆಯ ತಂದೆ ಗೌಡರಿಂದ ನೂರೈವತ್ತು ರೂಪಾಯಿಗಳನ್ನು ಹಲ್ಲುಕಿಸಿದು ಪಡೆದುಕೊಂಡು ಹೋಗಿ ಖರ್ಚು ಮಾಡುತ್ತಿದ್ದನು. ಇದರಲ್ಲಿ ಕೆಲವು ಸಲ ಸಾರಾಯಿ ಖರ್ಚೂ ಸೇರಿರುತ್ತಿತ್ತು. ಲಚ್ಚಿಗೆ ತಾನು ಕಷ್ಟಪಟ್ಟು ದುಡಿದ ಹಣವನ್ನು ಅಪ್ಪ ದುಂದುವೆಚ್ಚ ಮಾಡುತ್ತಿದ್ದಾನಲ್ಲಾ ಎಂದು ಕರುಳು ಚುರುಕ್ ಅನ್ನಿಸುತ್ತಿತ್ತು.

     ಮುಂದೊಂದು ದಿನ ಗೌಡರಲ್ಲಿಗೆ ಆಕೆಯ ತಂದೆ ಸಂಬಳ ಪಡೆಯಲು ಬಂದಾಗ, "ಗೌಡೇ ನನ್ ಮಗ್ಳು ಲಚ್ಚಿ ನಿಮ್ಮನೆ ಕೆಲ್ಸಕ್ಕೆ ಸೇರಿ ಒಂದೊರ್ಷ ಆತು. ಈ ವರ್ಷದಿಂದ ಆಕಿ ಸಂಬ್ಳ ಜಾಸ್ತಿ ಮಾಡ್ರೀ" ಎಂದಾಗ "ಹೂಂ ಸರಿ ಸರಿ ಇನ್ಮ್ಯಾಕೆ ಇನ್ನೂರು ರೂಪಾಯಿ ಕೊಡ್ತೀನಿ ಸರೀನಾ" ಎಂದರು ಗೌಡರು. ಈ ಮಾತುಗಳನ್ನು ಕೇಳಿಸಿಕೊಂಡ ಲಚ್ಚಿಗೆ ಸಂತೋಷವಾಯಿತು ಹಾಗೆಯೇ ಒಂದು ನಿರ್ಧಾರಕ್ಕೂ ಬಂದಳವಳು. ಗೌಡರ ಮನೆಯ ಕೆಲಸ ಮುಗಿಸಿ ಸೀದಾ ಮನೆಗೆ ಬಂದವಳೇ ರಂಪ ಮಾಡಿದಳು.
"ಅಮ್ಮಾ ನಾಳಿಂದ ನಾನು ಗೌಡ್ರ ಮನೀಗೆ ಕೆಲ್ಸಕೋಗಾಕಿಲ್ಲ."
"ಯಾಕೇ? ಏನಾಯ್ತೇ ನಿನ್ಗೆ?"
"ಏನೂ ಆಗಿಲ್ಲ, ಅಪ್ಪ ಇನ್ಮುಂದೆ ಗೌಡ್ರ ಮನೀಗೆ ಬರಬಾರ‍್ದು. ನನ್ ಸಂಬ್ಳಾನ ನಾನೇ ತಗೊಂತೀನಿ. ನನ್ಗೂ ಆಸೆಗಳವೆ. ಕೈನಾಗೆ ಒಸಿ ಹಣ ಮಾಡ್ಕೊಂಡು ನನ್ಗೇನೇನೆಲ್ಲಾ ತಗೋಬೇಕು."
ಮಗಳ ರಂಪಾಟ ನೋಡಿದ ತಂದೆ ತಾಯಿ," ಸರಿ ಕಣಮ್ಮ, ನಿನ್ ದುಡ್ಡು ನಮ್ಗೆ ಬ್ಯಾಡ, ಇನ್ ಮುಂದ ನಿನ್ ಸಂಬ್ಳಾನ ನೀನೇ ತಗೊಂಡು ಇಟ್ಕೋ, ಜೋಪಾನವಾಗಿಟ್ಕೊಮ್ಮಾ"  ಎಂದು ಸಮಾಧಾನ ಮಾಡಿದರು.
ಸಂತೋಷದಲ್ಲಿ ಕುಣಿದು ಕುಪ್ಪಳಿಸುವಂತಾಯಿತು ಲಚ್ಚಿಗೆ. ಓಡಿ ಹೋಗಿ ಒಂದು ತುಂಡು ಪೇಪರಿನಲ್ಲಿ ತನಗೇನೇನು ಬೇಕು ಎಂಬುದನ್ನೆಲ್ಲಾ ತನಗೆ ಬರುತ್ತಿದ್ದ ಕನ್ನಡದಲ್ಲಿ ಬರೆದಿಟ್ಟಳು.
ಕ್ರೀಮ್, ಪೌಡರ್, ಸೆಂಟು, ಬಗೆಬಗೆಯ ಕ್ಲಿಪ್ಪುಗಳು, ಪರಿಮಳದ ಸಾಬೂನು, ತಲೆ ಸ್ನಾನದ ಶಾಂಪೂ, ತಮ್ಮ ತಂಗಿಯರಿಗೆ ಗೌಡರ ಮನೇಲಿರುವ ತರಹದ ಮೃದುವಾದ ಬೊಂಬೆ, ಸಾಧ್ಯಾವಾದ್ರೆ ತನಗೊಂದು ಗೌಡರ ಮಗಳು ಧರಿಸುವ ಅಂಗಿಯ ಹಾಗಿರುವಂತಹ ಚೆಂದದ ಅಂಗಿಯನ್ನು ಕೂಡಾ.
                 ........
ಗೌಡರು ತಿಂಗಳು ತಿಂಗಳು ಈಗ ಲಚ್ಚಿಯ ಕೈಯಲ್ಲೇ ತಿಂಗಳ ಸಂಬಳವನ್ನು ಕೊಡುತ್ತಿದ್ದರು. ಲಚ್ಚಿ ಅದನ್ನು ಭದ್ರವಾಗಿ ಹಿಡಿದು ತಂದು, ತನ್ನ ಬಟ್ಟೆಬರೆಗಳನ್ನಿಡಲು ಅಪ್ಪ ಕೊಟ್ಟಿದ್ದ ಹಳೇ ಮುರುಕು ಕಬ್ಬಿಣದ ಪೆಟ್ಟಿಗೆಯಲ್ಲಿಡುತ್ತಿದ್ದಳು. ಒಂದು ವರ್ಷ ಕಳೆಯಿತು. ಲಚ್ಚಿಯ ಪೆಟ್ಟಿಗೆಯಲ್ಲೀಗ ಎರಡು ಸಾವಿರದ ನಾಲ್ಕುನೂರು ರೂಪಾಯಿಗಳು! ಲಚ್ಚಿ ಈ ಹಣವನ್ನು ನೋಡಿ ತನ್ನನ್ನು ತಾನೇ ಮರೆತಳು. ಎಲ್ಲಾ ಹಣವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟಳು. ಯಾವತ್ತಾದರೂ ಅಪ್ಪ ಪೇಟೆಗೆ ಹೋಗುವಾಗ ತಾನೂ ಬರುತ್ತೇನೆ ಎಂದಿದ್ದಳು. ಪ್ರತೀ ದಿನ ಹಣವನ್ನು ಎಣಿಸಿ ನೋಡಿ ಈ ಹಣದಲ್ಲಿ ತಾನಿಷ್ಟಪಟ್ಟ ಎಲ್ಲಾ ವಸ್ತುಗಳೂ ಸಿಗಬಹುದೆಂದುಕೊಂಡಳು.
"ದೊಡ್ಡ ದೊಡ್ಡ ಅಂಗಡಿಗಳಿಗೇ ಹೋಗಬೇಕು, ಮಾರ್ಗದ ಬದಿಯಲ್ಲಿ ಸಿಗುವುದೆಲ್ಲ ಒಳ್ಳೆದಿರಲ್ಲ" ಎಂದು ಗೌಡರಮ್ಮ ಅವರ ಮನೆಗೆ ಬಂದಿದ್ದ ಅವರ ಗೆಳತಿಯಲ್ಲಿ ಹೇಳಿದ ನೆನಪಿತ್ತವಳಿಗೆ.
ಒಂದು ದಿನ ಲಚ್ಚಿಯ ಅಪ್ಪ ಲಚ್ಚಿಯನ್ನು ಪೇಟೆಗೆ ಕರೆದುಕೊಂಡು ಹೋಗುವ ವಿಚಾರವನ್ನು ಹೇಳಿದ. ಆಕೆಗೋ ಸ್ವರ್ಗಕ್ಕೆ ಮೂರೇ ಗೇಣು. ಇದ್ದುದರಲ್ಲಿ ಒಳ್ಳೆಯದೆಂದೆನಿಸಿದ ಅಂಗಿ ತೊಟ್ಟು ಹಣವಿದ್ದ ಚೀಲವನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡು ಅಪ್ಪನೊಂದಿಗೆ ಹೊರಟಳು. ಬಸ್ಸನ್ನೇರಿ ಪಟ್ಟಣಕ್ಕೆ ಹೋಗುವಾಗ ವಿಮಾನದಲ್ಲಿ ಕುಳಿತು ಹಾರಿ ಹೋಗುತ್ತಿರುವ ಅನುಭವ. ದಾರಿಯಲ್ಲಿ ಅಪ್ಪ ಕೇಳಿದ, "ಲಚ್ಚೀ...ಏನೇನೆಲ್ಲಾ ತಗೀಬೇಕೂಂತಿದ್ದೀಯ ಕಣೇ?"
ದೊಡ್ಡ ಲಿಸ್ಟನ್ನೇ ಅಪ್ಪನಿಗೋದಿ ಹೇಳಿದಳು ಲಚ್ಚಿ. ಅಷ್ಟರಲ್ಲಿ ಪೇಟೆ ಬಂದಿತು.  ಲಚ್ಚಿ ಹಣದ ಕಟ್ಟು ಭದ್ರವಾಗಿದೆಯೇ ಎಂದು ಮತ್ತೆ ಮತ್ತೆ ಖಚಿತಪಡಿಸಿಕೊಂಡು ಬಸಿನಿಂದಿಳಿದಳು. ಲಿಂಗಪ್ಪ ಆಕೆಯನ್ನು ಆಕೆಗೆ ಬೇಕಾದ ವಸ್ತುಗಳಿರುವ ಅಂಗಡಿಯಲ್ಲಿ ಬಿಟ್ಟು, "ಈಗ ಬಂದೆ ಮಗ್ಳೇ, ನೀನು ಏನೇನು ಬೇಕೋ ಅದನ್ನೆಲ್ಲಾ ನೋಡಿ ತೆಗೆದಿಡು, ಅಷ್ಟ್ರಲ್ಲಿ ನಾನು ಕೊಡೆ ರಿಪೇರಿಗೆ ಕೊಟ್ ಬಂದ್ಬಿಡ್ತೀನಿ ಆಯ್ತಾ, ಹುಷಾರು...." ಎನ್ನುತ್ತಾ ಅವನ ದಾರಿ ಹಿಡಿದ. ಅಂಗಡಿಯಲ್ಲಿರುವ ಬಗೆಬಗೆಯ ತನಗೆ ಬೇಕಾದ ವಸ್ತುಗಳೆಲ್ಲಾ ಇರುವುದನ್ನು ನೋಡಿ ತನ್ನನ್ನು ತಾನೇ ಮರೆತಳು ಲಚ್ಚಿ.
ಅಷ್ಟರಲ್ಲಿ ಅಂಗಡಿಗೆ ಬಂದಿದ್ದ ಹೆಂಗಸೊಬ್ಬಳು ಗಲಿಬಿಲಿಯಲ್ಲಿದ್ದಂತೆ ಕಂಡು ಬಂದಳು.  ಸ್ವಲ್ಪ ಹೊತ್ತಿನಲ್ಲಿ ಅವಳು, "ಅಯ್ಯೋ, ನನ್ನ ಹಣ ಕಾಣಿಸ್ತಾ ಇಲ್ಲ..ಪರ್ಸ್‍ನಲ್ಲಿಟ್ಟಿದ್ದ ಹಣವನ್ನು ಯಾರೋ ಕದ್ದು ಬಿಟ್ಟಿದ್ದಾರೆ...ಈಗ ತಾನೇ ಇತ್ತು" ಎಂದು ಗಡಬಡಿಸಿ ಹುಡುಕಾಡತೊಡಗಿದಳು. ಕೂಡಲೇ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಒಳಗೆ ನುಗ್ಗಿದ್ದ ಯಾರನ್ನೂ ಹೊರಗೆ ಹೋಗಲು ಬಿಡಲಿಲ್ಲಿ. ಎಲ್ಲರಿಗೂ ಬಡಪಾಯಿಯಂತೆ ತೋರುತ್ತಿದ್ದ, ಬಡಕಲು ಶರೀರದ, ಕಡಿಮೆ ಬೆಲೆಯ ಅಂಗಿ ತೊಟ್ಟ ಲಚ್ಚಿಯ ಮೇಲೆ ಕಣ್ಣು ಬಿತ್ತು. ಎಲ್ಲರೂ ಅವಳತ್ತ ನಡೆದು ಬಂದರು. ಲಚ್ಚಿಗೆ ಗಾಬರಿಯಾಯಿತು. ತನ್ನಲ್ಲಿದ್ದ ಹಣವನ್ನು ಭದ್ರಪಡಿಸಿಕೊಂಡಳು. ಕೆಲವರು ಅವಳ ಪಕ್ಕಕ್ಕೆ ಬಂದು, "ಏನೇ ಅದು ನಿನ್ಕೈನಲ್ಲಿರೋದು? ತೋರಿಸು, ತೋರಿಸು" ಎಂದು ಗದರಿದರು.
"ಊಹೂಂ..... ಅದು ನಂದು.....ಅದು ನಂದು...." ಅಳುತ್ತಲೇ ಹೇಳಿದಳು. ಮೈ ಪೂರ್ತಿ ಬೆವರುತ್ತಿತ್ತು. ಅಷ್ಟರಲ್ಲಿ ಹಣ ಕಳೆದುಕೊಂಡ ಹೆಂಗಸು ಲಚ್ಚಿಯ ಹತ್ತಿರ ಇದ್ದ ಹಣದ ಚೀಲವನ್ನು ಕಿತ್ತುಕೊಂಡು," ಇವಳೇ ಕದ್ದದ್ದು ನೋಡಿ ನನ್ನ ಹಣ...ಸಿಕ್ಕಿಬಿದ್ದಳು ಕಳ್ಳಿ" ಎಂದು ಹೇಳಿ ಲಚ್ಚಿಯನ್ನು ಚೆನ್ನಾಗಿ ಬೈದಳು.
"ಎಲ್ಲೆಲ್ಲಿಂದಲೋ ಬಂದು ಬಿಡ್ತಾವೆ ದರಿದ್ರ ಮುಂಡೇವು, ಎಲ್ಲಾದ್ರೂ ದುಡಿದು ತಿನ್ನೋ ಬದ್ಲು ಕಿಸೆಗೆ ಕನ್ನ ಹಾಕ್ತಾವೆ...." ಎಂದು ಬೈಯುತ್ತಾ ಬಡಿಯುತ್ತಾ ಲಚ್ಚಿಯನ್ನು ಹೊರಗೆ ದಬ್ಬಿದ ಮಳಿಗೆಯ ಮಾಲಕ.

ತ್ರಿವೇಣಿ ವಿ ಬೀಡುಬೈಲು
ಮಂಗಳೂರು

Tuesday, March 17, 2015

ನನ್ನ ಕಥಾಸಂಕಲನ "ಜೀವನ ದೀಪ"ದ ಮೊದಲ ಕಥೆ "ಮಮ್ಮಿ"...ಈ ಕಥೆ "ಹೊಸ ದಿಗಂತ" ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮಮ್ಮಿ
ಕೆಲಸಗಳನ್ನೆಲ್ಲಾ ಮುಗಿಸಿ ಗಂಟೆ ನೋಡಿದಳು ಶ್ಯಾಮಲ. ಸಂಜೆ ಐದಾಗಿತ್ತು. ನಡುಕೋಣೆಗೆ ಬಂದು ಟಿ.ವಿ ನೋಡುತ್ತಾ ಕುಳಿತಳು. ರಾಮಣ್ಣ ಹುಡುಗನೊಂದಿಗೆ ಬರಬಹುದೆಂದುಕೊಂಡಳು.
_________________
ಹಿಂದಿನ ದಿನ ಸಂಜೆ ಗಂಡನೊಂದಿಗೆ ವಾಕಿಂಗ್ ಹೋಗಿದ್ದಳು ಶ್ಯಾಮಲ. ನಾಲ್ಕಾರು ಮನೆಗಳಿಗೆ ಹಸುವಿನ ಹಾಲು ಮಾರುವ ರಾಮಣ್ಣ ಇದಿರಾಗಿದ್ದ. ದಾರಿಯಲ್ಲೋ, ಬಸ್ಸಿನಲ್ಲೋ ಆಗಾಗ್ಗೆ ಕಂಡು ಮಾತ್ರ ಪರಿಚಯವಿದ್ದ ಕಾರಣ, ಎದುರೆದುರು ಭೇಟಿಯಾದಾಗ ಪರಸ್ಪರ ಮುಗುಳ್ನಗೆಯಾಡುತ್ತಿದ್ದರವರು. ಇವರು ವಾಸಿಸುತ್ತಿರುವ ಬೀದಿಯಿಂದ ನಾಲ್ಕನೆಯೋ ಐದನೆಯೋ ಬೀದಿಯಲ್ಲಿರಬಹುದು ರಾಮಣ್ಣನ ಮನೆ. ಎಲ್ಲಿ ಎಂದು ಖಚಿತವಾಗಿ ಗೊತ್ತಿರಲಿಲ್ಲ ಅವರಿಗೆ. ಅವನಿಗೆ ಮೂರು ಕರೆಯುವ ಹಸುಗಳಿವೆ ಎಂದು ಪಕ್ಕದ ಮನೆಯ ಪದ್ಮ ಹೇಳಿ ಗೊತ್ತಿತ್ತು.
"ಇಲ್ಲಿ ಯಾರಾದ್ರೂ ಟ್ಯೂಶನ್ ಕೊಡುವವರಿದ್ದಾರಾ?" ಎಂದು ಪ್ರಶ್ನಿಸುತ್ತಾ ರಾಮಣ್ಣ ಇವರ ಹತ್ತಿರ ಬಂದ.
"ಯಾವ ಕ್ಲಾಸಿಗೆ?" ಕೇಳಿದಳು ಶ್ಯಾಮಲ.
"ಎರಡನೇ ಕ್ಲಾಸಿಗೆ, ಇಂಗ್ಲಿಷ್ ಮೀಡಿಯಂ ಹುಡುಗ"
"ನಿಮ್ಮ ಮಗನಿಗೇನು?" ಶ್ಯಾಮಲಾಳ ಗಂಡ ರಘು ಕೇಳಿದ.
"ಅಲ್ಲ, ನನ್ನ ಅಕ್ಕನ ಮಗನಿಗೆ" ಉತ್ತರಿಸಿದ ರಾಮಣ್ಣ.
ಶ್ಯಾಮಲಳಿಗೆ ಸಂಜೆ ಹೊತ್ತು ಕಳೆಯಲು ಏನಾದರೂ ಕೆಲಸ ಬೇಕಿತ್ತು. ’ನಾನೇ ಹೇಳಿಕೊಡಬಹುದಲ್ಲವೇ’ ಎಂದಾಲೋಚಿಸಿ, "ಹುಡುಗನಿಗೆ ನಾನೇ ಪಾಠ ಹೇಳಿಕೊಡುವೆ ಬೇಕಾದ್ರೆ" ಎಂದಳು. ಸಾಕಾಷ್ಟು ಡಿಗ್ರಿ ಪಡೆದುಕೊಂಡಿದ್ದರೂ ಆಕೆಗೆ ದುರದೃಷ್ಟವಶಾತ್ ಎಲ್ಲೂ ಕೆಲಸ ಸಿಕ್ಕಿರಲಿಲ್ಲ.
"ಸರಿ ಅಮ್ಮ. ನಾಳೆ ಸಂಜೆ ಹುಡುಗನನ್ನು ಕರಕೊಂಡು ನಿಮ್ಮಲ್ಲಿಗೆ ಬರುತ್ತೇನೆ" ಎನ್ನುತ್ತಾ ಹೊರಟನಾತ.
"ನಮ್ಮ ಮನೆ ಗೊತ್ತಿದ್ಯಾ ನಿನಗೆ?" ಕೇಳಿದ ರಘು.
"ಓ ಗೊತ್ತಿದೆ ಸ್ವಾಮಿ, ಅದೇ ಆ ಬೀದಿಯ ಎರಡನೇ ಮನೆಯಲ್ಲವೇ?" ಎಂದು ಬೆರಳು ಮಾಡಿ ತೋರಿಸಿದ. "ನಿಮ್ಮ ಪಕ್ಕದ ಮನೆಗೆ ಹಾಲು ಹಾಕಲು ಬರುವಾಗ ಅಮ್ಮಾವ್ರನ್ನ ನೋಡಿದ್ದೇನೆ"ಎನ್ನುತ್ತಾ ಶ್ಯಾಮಲಾಳನ್ನು ನೋಡಿ ಹಲ್ಲುಕಿಸಿದ.
__________
"ಅಮ್ಮಾ, ಅಮ್ಮಾ" ರಾಮಣ್ಣ ಹೊರಗಿನಿಂದ ಕರೆದ.
ಶ್ಯಾಮಲ ಟಿ.ವಿ. ಆರಿಸಿ ಹೊರಗೆ ಬಂದಳು. ಸಂಜೆ ಹೇಳಿದಂತೆ ರಾಮಣ್ಣ ಹುಡುಗನೊಂದಿಗೆ ಬಂದಿದ್ದ. ಶ್ಯಾಮಲ ಅವರಿಬ್ಬರನ್ನೂ ಒಳಗೆ ಕರೆದಳು.
"ಅಮ್ಮ ನೋಡಿ ಇವನನ್ನೇ ನಾನು ನಿನ್ನೆ ಹೇಳಿದ್ದು"
"ಹೌದಾ? ಯಾವ ಕ್ಲಾಸಪ್ಪಾ ನೀನು?" ಕೇಳಿದಳು ಶ್ಯಾಮಲ ಹುಡುಗನ ತಲೆ ನೇವರಿಸುತ್ತಾ.
"ಸೆಕೆಂಡ್ ಸ್ಟಾಂಡರ‍್ಡ್" ಎಂದ.
"ಇವನಿಗೆ ಎಲ್ಲಾ ಸಬ್ಜೆಕ್ಟ್‍ಗಳನ್ನೂ ಹೇಳಿಕೊಡಬೇಕಂತೆ. ಎಷ್ಟು ಫೀಸಾಗುತ್ತೆ ಅಮ್ಮಾ?" ಕೇಳಿದ ರಾಮಣ್ಣ.
"ಹುಡುಗ ಚೆನ್ನಾಗಿ ಕಲಿತರೆ ಅದೇ ಫೀಸು, ಅಲ್ವೇನೋ" ಹುಡುಗನನ್ನು ನೋಡಿ ನಗುತ್ತಾ ಹೇಳಿದಳು ಶ್ಯಾಮಲ.
"ಹ್ಹೆ ಹ್ಹೆ ಹ್ಹೆ... ಹಾಗೆ ಹೇಳಿದರೆ ಹೇಗಮ್ಮಾ?! ಹುಡುಗನ ತಂದೆ...ಅದೇ ನನ್ನ ಭಾವ ನಿಮ್ಮ ಹತ್ತಿರ ಕೇಳಿಕೊಂಡು ಬರಲು ಹೇಳಿದ್ದರು...." ಎನ್ನುತ್ತಾ ತಡವರಿಸಿದನಾತ.
"ಅದೆಲ್ಲಾ ಏನೂ ಬೇಡ...ಮೊದಲು ಅವನು ನಾನು ಹೇಳಿಕೊಟ್ಟದ್ದನ್ನು ಚೆನ್ನಾಗಿ ಕಲಿತು ಒಳ್ಳೆಯ ಮಾರ್ಕು ತೆಗೆಯಲಿ, ಅಷ್ಟೇ ಸಾಕು" ಎನ್ನುತ್ತಾ ಪುನ: ನಕ್ಕಳು ಶ್ಯಾಮಲ.
"ಹೂಂ...ನೀವು ಹೇಗೆ ಹೇಳ್ತೀರೋ ಹಾಗೆ...ನನಗೆ ಇನ್ನೂ ನಾಲ್ಕು ಮನೆಗಳಿಗೆ ಹಾಲು ಹಾಕಲಿದೆ ಅಮ್ಮಾ... ಪಾಠ ಮುಗಿದ ನಂತರ ಹುಡುಗನನ್ನು ಕಳುಹಿಸಿಬಿಡಿ" ಎನ್ನುತ್ತಾ ಹಾಲಿನ ಕ್ಯಾನಿನೊಂದಿಗೆ ಹೊರಟು ಹೋದ ರಾಮಣ್ಣ.
ಶ್ಯಾಮಲ ಬಾಗಿಲು ಹಾಕಿ ಬಂದು ಹುಡುಗನ ಪಕ್ಕ ಕುಳಿತಳು.
"ಏನಪ್ಪಾ ನಿನ್ನ ಹೆಸರು?"
"ಪ್ರದೀಪ್" ಮುದ್ದಾಗಿ ಹೇಳಿದ ಹುಡುಗ.
"ಮನೇಲಿ ಯಾವ ಭಾಷೆ ಮಾತಾಡೋದು?"
"ತುಳು"
"ಶಾಲೆಯಲ್ಲಿ ಇಂಗ್ಲೀಷಾ?"
ಹೌದೆಂದು ತಲೆಯಾಡಿಸುತ್ತಾ, "ಕನ್ನಡ ಬರಲ್ಲ" ಎಂದ.
"ಮತ್ತೆ ಇಷ್ಟು ಚೆನ್ನಾಗಿ ಮಾತನಾಡುತ್ತಿದ್ದೀ!"
"ಸ್ವಲ್ಪ ಸ್ವಲ್ಪ ಬರುತ್ತದಷ್ಟೇ" ಎನ್ನುತ್ತಾ ನಕ್ಕ.
"ನಾನೀಗ ನಿನ್ನ ಜೊತೆ ಕನ್ನಡದಲ್ಲೇ ಮಾತಾಡೋದು ಆಯ್ತಾ...ನೋಡೋಣ ನಿನಗೆ ಬರುತ್ತೋ ಇಲ್ವೋ ಅಂತ....ಹೂಂ ಸರಿ...ಈಗ ಹೇಳು ನಿಮ್ಮ ಮನೆಯಲ್ಲಿ ಯಾರ‍್ಯಾರಿದ್ದಾರೆ?"
"ಡ್ಯಾಡಿ, ಅಜ್ಜಿ ಮತ್ತು ನಾನು"
"ಅಜ್ಜಿ ಅಂದ್ರೆ ನಿನ್ನ ಡ್ಯಾಡಿಯ ಅಮ್ಮನಾ?"
"ಹೂಂ"
"ಮಮ್ಮಿ ಎಲ್ಲಿ?"
"ಅಜ್ಜಿ ಮನೆಗೆ ಹೋಗಿದ್ದಾರೆ" ಬೇಸರದಿಂದ ಹೇಳಿದ ಪ್ರದೀಪ್.
"ಮತ್ತೆ ನಿನ್ನ ರಾಮಣ್ಣ ಮಾವ ಎಲ್ಲಿರೋದು?"
"ಅವರು ನಮ್ಮ ಮನೆಯ ಪಕ್ಕದಲ್ಲಿ"
ನೀನು ನಿನ್ನ ಡ್ಯಾಡಿಯೊಟ್ಟಿಗೆ ಬಾರದೆ ಮಾವನೊಟ್ಟಿಗೆ ಬಂದದ್ದೇಕೆ?"
"ಡ್ಯಾಡಿ ಇನ್ನೂ ಮನೆಗೆ ಬಂದಿಲ್ಲ"
"ಡ್ಯಾಡಿ ಯಾವ ಕೆಲಸದಲ್ಲಿದ್ದಾರೆ?"
"ಫ್ಯಾಕ್ಟ್ರಿಯಲ್ಲಿ ಇಂಜಿನಿಯರ್"
"ಮನೆಯಲ್ಲಿ ನಿನಗೆ ತಿಂಡಿ ಮಾಡಿಕೊಡೋದು ಯಾರು?"
"ಅಜ್ಜಿ, ಎಲ್ಲಾ ಅಜ್ಜಿನೇ ಈಗ, ಮಮ್ಮಿ ಅಜ್ಜಿ ಮನೆಗೆ ಹೋದ ಮೇಲೆ" ಎಂದು ಹೇಳಿದ ಬೇಸರದಿಂದ ತಲೆ ತಗ್ಗಿಸುತ್ತಾ.
"ಅಯ್ಯೋ ಕೇಳಿದ್ದು ತಪ್ಪಾಯಿತೇ ಎಂದಾಲೋಚಿಸಿದಳು ಶ್ಯಾಮಲ.
"ನಿನ್ನಪ್ಪ ಅಮ್ಮನಿಗೆ ನೀನೊಬ್ಬನೇ ಮಗನಾ?"
"ಅಲ್ಲ, ನನಗೆ ತಂಗಿಯೊಬ್ಬಳಿದ್ದಾಳೆ" ಹುಡುಗನ ಮುಖವರಳಿತು.
"ಹೌದಾ?!" ಆಶ್ಚರ್ಯದಿಂದ ಕೇಳಿದಳು ಶ್ಯಾಮಲ.
ಬಹುಶ: ಗಂಡ ಹೆಂಡತಿಗೆ ಜಗಳವಾಗಿ ಅಥವಾ ಅತ್ತೆ ಸೊಸೆಗೆ ಜಗಳವಾಗಿ ಪ್ರದೀಪ್‍ನ ತಾಯಿ ಕೋಪಿಸಿಕೊಂಡು ಮಗಳೊಂದಿಗೆ ತವರಿಗೆ ಹೋಗಿರಬೇಕು...ಛೇ ಎಂತಹ ಹೆಂಗಸಿರಬಹುದವಳು! ಇಂತಹ ಮುದ್ದಾದ ಹುಡುಗನನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂದಿತವಳಿಗೆ? ಪಾಪ ಪ್ರದೀಪ್ ಎಂದುಕೊಂಡಳು.
"ಮಮ್ಮಿ ಯಾವಾಗ ಹೋದದ್ದು ಪುಟ್ಟಾ? ಯಾವಾಗ ವಾಪಸು ಬರುತ್ತಾಳೆ?"
"ಅವತ್ತೇ ಹೋಗಿದ್ದಾಳೆ. ಆಮೇಲೆ ಬರಲೇ ಇಲ್ಲ. ಡ್ಯಾಡಿ ಹತ್ತಿರ ಯಾವಾಗ ಕೇಳಿದರೂ ಸ್ವಲ್ಪ ದಿನ ಬಿಟ್ಟು ಬರುತ್ತಾಳೆಂದು ಹೇಳುತ್ತಿರುತ್ತಾರೆ ಆಂಟೀ...ಇನ್ನೂ ಬಂದಿಲ್ಲ" ಹೇಳಿದ ಪ್ರದೀಪ್ ಕಣ್ಣಿನಲ್ಲಿ ನೀರು ತುಂಬಿಕೊಂಡು.
"ಯಾಕಪ್ಪಾ ಕಣ್ಣಲ್ಲಿ ನೀರು?" ತಲೆ ನೇವರಿಸುತ್ತಾ ಕೇಳಿದಳು.
"ಮಮ್ಮಿಯಿಲ್ಲದೇ ತುಂಬಾ ಬೇಜಾರು"
ಶ್ಯಾಮಲಾಳ ಮನಸ್ಸಿನಲ್ಲೀಗ ಸಂಶಯಕ್ಕೆಡೆಯೇ ಇರಲಿಲ್ಲ. ಖಂಡಿತವಾಗಿ ಜಗಳ ಮಾಡಿಕೊಂಡು ಪ್ರದೀಪ್‍ನನ್ನು ಗಂಡನೊಟ್ಟಿಗೆ ಬಿಟ್ಟು ಮಗಳೊಂದಿಗೆ ಹೋಗಿಬಿಟ್ಟಿದ್ದಾಳೆ ತವರಿಗೆ. ಪ್ರದೀಪ್‍ನನ್ನು ಸಮಾಧಾನ ಮಾಡಲೋಸ್ಕರ ಮಮ್ಮಿ ಬರುತ್ತಾಳೆ ಎಂದು ಹೇಳಿರಬೇಕು ಅವನಪ್ಪ ಎಂದುಕೊಂಡಳು. ಗಂಡ-ಹೆಂಡತಿ ಅಥವಾ ಅತ್ತೆ-ಸೊಸೆಯರ ನಡುವೆ ಮನಸ್ತಾಪವಾದಾಗ ಬದುಕಿನ ಪ್ರಮುಖ ಗಳಿಗೆಗಳನ್ನು ಕಳೆದುಕೊಳ್ಳುವ ಬದಲು, ಇಂತಹ ಮುಗ್ಧ ಮಕ್ಕಳನ್ನು ಏಕಾಂಗಿಯನ್ನಾಗಿ ಮಾಡುವ ಬದಲು, ತಮ್ಮ ಜೀವನದ, ಮಕ್ಕಳ ಮುಂದಿನ ಬೆಳವಣಿಗೆಯ, ಅವರ ಕಲಿಯುವಿಕೆಯ ಮಹದೋದ್ದೇಶಗಳನ್ನು ಯೋಚಿಸಿ ಹೊಂದಾಣಿಕೆಯಿಂದಿರಲು ಸಾಧ್ಯವಿದ್ದರೂ, ಸಾಧ್ಯವಿಲ್ಲದಂತೆ ಮಾಡಿಕೊಳ್ಳುತ್ತಿದ್ದಾರಲ್ಲಾ ಇಂತಹ ಕೆಲವರು. ಹೀಗಾದರೆ ಇಂತಹ ಮುಗ್ಧ ಮಕ್ಕಳ ಭವಿಷ್ಯ ಹೇಗೆ? ತಾಯಿಯ ಸಾನಿಧ್ಯ ಇಲ್ಲದೆ ಮಾನಸಿಕವಾಗಿ ಎಷ್ಟು ಮುದುಡಿದೆ ಈ ಮಗು! ಇನ್ನು ತಾಯಿಯೊಂದಿಗಿರುವ ಆ ಪುಟ್ಟು ಮಗಳ ಗತಿಯೇನೋ? ಛೇ ಪಾಪ ಎಂದುಕೊಂಡಳವಳು.
ಆಕೆಯ ಕುತೂಹಲ ಇನ್ನೂ ಕೆರಳಿತು.
"ಮಮ್ಮಿ ಯಾವಾಗ ಪುಟ್ಟಾ ಅಜ್ಜಿ ಮನೆಗೆ ಹೋದದ್ದು?"
"ಹೋಗಿ ತುಂಬಾ ತುಂಬಾ ದಿನ ಆಯ್ತು..." ಕೆನ್ನೆ ಮೇಲೆ ಕಣ್ಣೀರಿಳಿದು ಬಂತು.
ಛೇ ತಾಯಿಗಾಗಿ ಎಷ್ಟೊಂದು ಹಂಬಲಿಸುತ್ತಿರುವನು ಪಾಪ. ಕೇಳಬಾರದ್ದನ್ನೆಲ್ಲಾ ಕೇಳಿ ಹುಡುಗನ ಮನಸ್ಸನ್ನು ನೋಯಿಸಿದೆನೆಂದುಕೊಂಡಳು ಶ್ಯಾಮಲ.
ಕೊನೆಯ ಪ್ರಶ್ನೆ ಒಂದನ್ನು ಕೇಳಿಯೇ ಬಿಡೋಣ  ಎಂದುಕೊಂಡು ಶ್ಯಾಮಲ "ನೀನು ಮಮ್ಮಿಯೊಂದಿಗೆ ಹೋಗಲಿಲ್ಲವೇಕೆ?" ಎಂದು ಕೇಳಿದಳು.
"ಡ್ಯಾಡಿ ಬೇಡ ನಿನಗೆ ಸ್ಕೂಲಿದೆ ಎಂದು ಬಿಟ್ಟರು. ನನಗೆ ಹೋಗಲಿಕ್ಕೆ ತುಂಬಾ ಆಸೆ ಇತ್ತು..." ದು:ಖ ಉಮ್ಮಳಿಸಿ ಬಂತವನಿಗೆ.
"ಸರಿ ಪುಟ್ಟಾ, ಬಿಡು ಬೇಸರಪಟ್ಟುಕೊಳ್ಳಬೇಡ ...ಎಲ್ಲಾ ಒಂದು ದಿನ ಸರಿ ಹೋಗುತ್ತೆ ಆಯ್ತಾ... ಕಳೆದ ವರ್ಷ ಎರಡನೇ ತರಗತಿಯಲ್ಲಿದ್ದಾಗ ಟ್ಯೂಶನ್‍ಗೆ ಹೋಗುತ್ತಿದ್ದೆಯಾ ಎಲ್ಲಿಯಾದರೂ?"
"ಇಲ್ಲ, ಮಮ್ಮಿನೇ ಮನೇಲಿ ಹೇಳಿಕೊಡುತ್ತಿದ್ದಳು"
"ಓ ಹೌದಾ? ನಿನ್ನ ತಂಗಿ ಶಾಲೆಗೆ ಹೋಗುತ್ತಿದ್ದಾಳಾ? ಯಾವ ಕ್ಲಾಸು?"
"ಶಾಲೆಗೆ ಹೋಗುವುದಿಲ್ಲ" ಎಂದು ನಕ್ಕು ತಲೆ ಬಗ್ಗಿಸಿದ ಪ್ರದೀಪ್. ಯಾಕೆಂದು ಹೊಳೆಯಲಿಲ್ಲ ಶ್ಯಾಮಲಳಿಗೆ.
"ನಿನಗವಳು ಮನೇಲಿದ್ದಾಗ ಪುಸ್ತಕ, ಪೆನ್ಸಿಲ್ಲು, ಪೆನ್ನು ಇತ್ಯಾದಿಗಳನ್ನೆಲ್ಲಾ ಎಳೆದು ಉಪದ್ರ ಕೊಡುತ್ತಿದ್ದಳೇ?"
"ಇಲ್ಲ ಹ್ಹ....ಹ್ಹ...ಹ್ಹ...ಹ್ಹ...ಇಲ್ಲ" ಎನ್ನುತ್ತಾ ಗಹಗಹಿಸಿ ನಕ್ಕ ಪ್ರದೀಪ್.
"ಯಾಕೋ ನಗಾಡ್ತಾ ಇದ್ದೀಯ?" ಕುತೂಹಲದಿಂದ ಕೇಳಿದಳು ಶ್ಯಾಮಲ.
"ಅವಳಿನ್ನೂ ಚಿಕ್ಕವಳು ಆಂಟಿ"
"ಚಿಕ್ಕವಳು ಎಂದರೆ...?!"
"ಲಾಸ್ಟ್ ವೀಕ್ ಅವಳು ಹುಟ್ಟಿದ್ದು ಆಂಟೀ" ಎಂದು ಹೇಳುತ್ತಾ ಪುನ: ನಕ್ಕ.
ಶ್ಯಾಮಲಾಳಿಗೆ ಮತ್ತರಿವಾಯಿತು ಪ್ರದೀಪ್‍ನ ತಾಯಿ ಹೆರಿಗೆ ಬಾಣಂತನಕ್ಕೆಂದು ತವರಿಗೆ ಹೋಗಿದ್ದಾಳೆಂದು.
"ಎಲ್ಲಿ ನಿನ್ನ ಪುಸ್ತಕಗಳನ್ನೆಲ್ಲಾ ಬ್ಯಾಗಿನಿಂದ ತೆಗೆ... ಪಾಠ ಶುರು ಮಾಡೋಣ" ಎನ್ನುತ್ತಾ ಹಣೆಯಲ್ಲಿ ಮೂಡಿದ್ದ ಬೆವರೊರೆಸಿಕೊಂಡಳು ಶ್ಯಾಮಲ.

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.

Wednesday, March 4, 2015

ಡ್ರೈವಿಂಗ್ ಹೇಳುತ್ತ ಮಹಾಮಾಯೆ...!- ೧೬ನೇ ಮಾರ್ಚ್ ೨೦೧೩ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ


ಡ್ರೈವಿಂಗ್ ಹೇಳುತ್ತ ಮಹಾಮಾಯೆ...!

ಒಂದು ಮನೆಲೆ ಗೆಂಡ ಮಾಂತ್ರ ಡ್ರೈವಿಂಗ್ ಕಲ್ತರೆ ಸಾಕಾ ಇಲ್ಲೆ ಹೆಂಡತಿಯೂ ಕಲ್ತರೆ ಒಳ್ಳೆದಾ? - ಈ ಪ್ರಶ್ನೆ ಮದುವೆಯಾದ ನಂತರ ಬಪ್ಪದಷ್ಟೇ ಹೇಳುವಾ! ಒಂದೊಂದು ಸಲ ಮದುವೆಗೆ ಮೊದಾಲೇ ಇಬ್ರದ್ದು ಡ್ರೈವಿಂಗ್ ಕಲ್ತಾಗಿದ್ದರೆ ಆರು ಕಲಿಯೇಕ್ಕು, ಆರು ಬಿಡೇಕು ಹೇಳುತ್ತ ಪ್ರಶ್ನೆಯೇ ಬತ್ತಿಲ್ಲೆ. ಬೇಕಾದ ಹಾಂಗೆ ಹೊಂದಿಸಿಯೊಂಡು ಒಬ್ಬಲ್ಲ ಒಬ್ಬ ಡ್ರೈವ್ ಮಾಡಿಯೊಂಡು ಮ್ಯಾನೇಜ್ ಮಾಡಿಯೊಳ್ತವು. ಒಬ್ಬನ ಡ್ರೈವಿಂಗಿಲಿ ಇನ್ನೊಬ್ಬಂಗೆ ಕನ್ಫಿಡೆನ್ಸ್, ನಂಬಿಕೆ ಎಲ್ಲಾ ಇರ‍್ತೋ ಇಲ್ಲೆಯೋ ಅಂತೂ ಒಬ್ಬನ ಡ್ರೈವಿಂಗಿನ ಇನ್ನೊಬ್ಬ ಪರಸ್ಪರ ಕಮೆಂಟ್ ಮಾಡದ್ದೇ, ಜೆಗಳ ಮಾಡಿಯೊಳದ್ದೇ ಹೇಂಗೋ ದಿನಂಗೋ ಕಳೆದಿರ‍್ತು! ಮದುವೆಯಾದ ಶುರುವಿಂಗೆ ಜೆಗಳಕ್ಕೆ ಡ್ರೈವಿಂಗ್ ವಿಷಯ ಅಂತೂ ಸಿಕ್ಕಲೇ ಸಿಕ್ಕ!
ಮದುವೆಗೆ ಮೊದಾಲೇ ಕೂಸಿಂಗೆ ಡ್ರೈವಿಂಗ್ ಗೊಂತಿದ್ದು ಹೇಳಿದರೆ ಕೂಸಿನ ಸುಯೋಗ. ಎಲ್ಲರತ್ತರೂದೇ ಮದುವೆ ಅಪ್ಪಲಿಪ್ಪ ಕೂಸಿಂಗೆ ಕಾರು, ಸ್ಕೂಟರು ಎಲ್ಲಾ ಬಿಡ್ಲೆ ಬತ್ತು ಹೇಳಿ ಸೆಡವಿಲ್ಲಿ ಹೇಳಿಕೊಳ್ತವು ಮಾಣಿಯ ಕಡೆವ್ವು! ಹಾಂಗೇ ಆ ಮಾತುಗಳ ಕೆಮಿಗೆ ಗಟ್ಟಿಲಿ ಹಾಕಿಕೊಂಡ ನಾಲ್ಕು ಜೆನಂಗೊ,"ಇದಾ ಅಂವ ಮದುವೆ ಅಪ್ಪ ಕೂಸಿಂಗೆ ಕಾರೂ, ಸ್ಕೂಟರೂ ಎಲ್ಲಾ ಬಿಡ್ಲೆ ಬತ್ತಡ, ಭಾರೀ ಗೆಟ್ಟಿಗೆತ್ತಿಯೇ ಆದಿಕ್ಕಂಬಗ, ಭಾರೀ ಚುರುಕುದೇ ಇಕ್ಕು ಕೂಸು ಹಾಂಗಾರೆ" ಹೇಳುತ್ತ ಶುದ್ಧಿಯ ಸಿಕ್ಕಿದವರತ್ತರೆಲ್ಲಾ ಹೇಳಿ ಬಿರುದುಗಳ ಸುಲಾಭಲ್ಲಿ ಸಿಕ್ಕಿಸಿಬಿಡ್ತವು ಮದಿಮಾಳಿಂಗೆ!ಅವರೆಲ್ಲರ ಪಾಲಿಂಗೆ ಅದು ಬ್ರಹ್ಮ ವಿದ್ಯೆ ಕಲ್ತಿದು ಹೇಳಿಯೇ ಲೆಕ್ಕ! ಆದರೆ ಮದುಮಗಂಗೆ ಕಾರು, ಸ್ಕೂಟರ್, ಬೈಕ್ ಎಲ್ಲಾ ಬಿಡ್ಲೆ ಬತ್ತು ಹೇಳಿ ಜೆನ ಹಾಡಿ ಹೊಗಳುದು ಬಾರೀ ಕಡಮ್ಮೆ!ಆದರೆ ಮಾಣಿಗೆ ಕಾರು, ಬೈಕು, ಸ್ಕೂಟರೆಲ್ಲಾ ಇದ್ದು ಅಂವ ದೊಡ್ಡ ಜೆನ, ಶ್ರೀಮಂತ ಹೇಳಿ ಮಾಂತ್ರ ಜೆನಂಗೊ ಮಾತಾಡಿಕೊಳ್ಳುತ್ತವು!
ಈಗ ಮದುವೆ ಆದವರ ಕತೆಗೆ ಬಪ್ಪ!ಅವಕ್ಕಿಬ್ರಿಂಗೂ ಡ್ರೈವಿಂಗ್ ಬತ್ತಿಲ್ಲೆ ಹೇಳಿ ಮಡಿಕ್ಕೊಂಬ... ಒಂದೊಂದು ದಿಕ್ಕೆ ಗೆಂಡಂಗೆ ತಾನು ಮಾಂತ್ರ ಡ್ರೈವಿಂಗ್ ಕಲ್ತರೆ ಸಾಕು ಹೇಳುತ್ತ ಅಹಂ ಮನೋಭಾವ ಇದ್ದರೆ, ಇನ್ನೂ ಕೆಲವುದಿಕ್ಕೆ ಎನಗೆಂತಾದರೂ ಆದರೂ ಪರ್ವಾಗಿಲ್ಲೆ, ಹೆಂಡತಿಗೆಂತಪ್ಪಲಾಗ, ಅದು ಡ್ರೈವಿಂಗ್ ಕಲ್ತು ಎಂತಾರು ಹೆಚ್ಚು ಕಡಮ್ಮೆ ಮಾಡಿಯೊಂಬದು ಬೇಡ ಹೇಳಿ ಗೆಂಡನ ಕನಿಕರ ಅಡ್ಡ ಬತ್ತು ಹೆಂಡತಿಯ ಡ್ರೈವಿಂಗ್ ಕಲಿಕೆಗೆ! ನಿಂಗೊಲ್ಲಾ ಎಷ್ಟೋ ಜೆನ ಹೆಮ್ಮಕ್ಕೊ ಹೇಳುದರ ಕೇಳಿಪ್ಪಿ,"ಇವಕ್ಕೆ ಭಾರೀ ಹೆದರಿಕೆ, ನೀನು ಆನಿಲ್ಲದಿಪ್ಪಗ ಹೋಯೇಕ್ಕಾದಲ್ಲಿಗೆಲ್ಲಾ ಬೇಕಾದರೆ ಆಟೋ ಮಾಡಿಯೊಂಡು ಹೋಗಿ ಬಾ, ಡ್ರೈವಿಂಗ್ ಒಂದು ನಿನಗೆ ಬೇಡ ಮಾರಾಯ್ತಿ ಹೇಳಿ". ಕೆಲವು ದಿಕ್ಕೆ ಗೆಂಡಂದಿರು ದೊಡ್ಡ ಮನಸ್ಸು ಮಾಡಿ, ಮನಸ್ಸಿನ ರಜ್ಜ ಗಟ್ಟಿ ಮಾಡಿಯೊಂಡು, "ಅಪ್ಪದರ ತಪ್ಪಿಸುಲೆ ಆರಿಂದಲೂ ಎಡಿಯ, ಎಂತ ಡ್ರೈವಿಂಗ್ ಮಾಡುವವ್ಕೆ ಮಾಂತ್ರ ಆಕ್ಸಿಡೆಂಟ್ ಅಪ್ಪದಾ, ಸುಮ್ಮನೇ ನಡಕ್ಕೊಂಡು ಹೋಯಿಕ್ಕೊಂಡಿದ್ದೋರಿಂಗೂ, ಕೂದೊಂಡು, ಮನುಗಿಯೊಂಡಿದ್ದೋರಿಂಗೂ ವಾಹನಂಗೊ ಬಂದು ಗುದ್ದಿದ ಉದಾಹರಣೆಗೊ ಇಲ್ಲೆಯಾ?" ಹೇಳಿ ಧೈರ್ಯ ತಂದುಕೊಂಡು, ಹೆಂಡತಿಯೂ ಕಲ್ತರೆ ಒಳ್ಳೆಯದು. ಮಕ್ಕಳ ಡ್ರಾಯಿಂಗ್ ಕ್ಲಾಸ್, ಡಾನ್ಸ್, ಮ್ಯೂಸಿಕ್ ಕ್ಲಾಸ್ ಮತ್ತಿನ್ನೆಂತದ್ದಕ್ಕೋ ಎಲ್ಲಾ ಕರಕ್ಕೊಂಡು ಹೋಪ ಜವಾಬ್ದಾರಿಯ ತಾನು ತಪ್ಪಿಸಿಕೊಂಬಲಕ್ಕು, ತಾನು ಆಫೀಸಿಗೆ ಹೋದಿಪ್ಪಗ ತನ್ನ ಪರವಾಗಿ ಹೆಂಡತಿ ಮಾರ್ಕೆಟ್ಟಿಂಗೆ, ಕರೆಂಟು, ಫೋನು ಬಿಲ್ಲು, ಬ್ಯಾಂಕ್ ಮತ್ತಿನ್ನೆಂತೆಲ್ಲಾ ಚಿಲ್ಲರೆ ಕೆಲಸಂಗಳ ಮಾಡಿ ಮುಗುಶಿತು ಹೇಳಿರೆ ತನಗೆ ಹೆರಾಣ ಕೆಲಸಂಗಳಿಂದ ಭಾರೀ ರಿಯಾಯಿತಿ ಸಿಕ್ಕಿದ ಹಾಂಗಾತು ಹೇಳಿ ಗ್ರೇಶಿಗೊಂಡು ಹೆಂಡತಿಗೂ ಡ್ರೈವಿಂಗ್ ಕಲಿವಲೆ ಲೈಸೆನ್ಸ್ ಕೊಡ್ತ!
ಮತ್ತೆ ಇನ್ನೂ ಕೆಲವ್ಕೆ ಇನ್ನೊಬ್ಬರ ಹತ್ತರೆ,"ಎಂಗೊ ಗೆಂಡಾ ಹೆಂಡತಿ ಇಬ್ರೂ ಡ್ರೈವ್ ಮಾಡ್ತೆಯ" ಹೇಳಿ ಹೇಳಿಯೊಂಬಲೆ ಮಹಾ ಕೊಶಿ, ಪ್ರೆಸ್ಟೀಜ್ ವಿಷಯ ಎಲ್ಲಾ! ಕೆಲವುದಿಕ್ಕೆ ಗೆಂಡ ಒಪ್ಪಲೀ, ಬಿಡಲೀ, ತನಗೂ ಡ್ರೈವಿಂಗ್ ಕಲಿಯಲೇ ಬೇಕು ಹೇಳಿ ತೊಡೆ, ರಟ್ಟೆ ತಟ್ಟಿ ಕಲಿವ ಹೆಮ್ಮಕ್ಕೊಗೇನೂ ಕೊರತೆ ಇಲ್ಲೆ ಬಿಡಿ! ಇನ್ನೂ ಕೆಲವು ದಿಕ್ಕೆಲ್ಲಾ ಗೆಂಡನೇ ಹೆಂಡತಿಗೆ ಡ್ರೈವಿಂಗ್ ಕಲಶಿ ಕೊಡುತ್ತ ಕ್ರಮ! ಹಾಂಗೇ ತನ್ನ ಕಾರಿಲೇ ಕಲಶಿ ಕೊಡ್ತಾ ಇಪ್ಪಾಗ, "ನಿನಗೆಷ್ಟು ಸರ್ತಿ ಗೇರ್ ಯೇವುದು, ಕ್ಲಚ್ ಯೇವುದು, ಬ್ರೇಕ್ ಯೇವುದು ಹೇಳಿ ಹೇಳಿಕೊಟ್ಟರುದೇ ನೆಂಪು ಒಳಿತ್ತಿಲ್ಲೆ, ಸರಿಯಾಗಿ ಬಿಡ್ಲೂ ನಿನಗರಡಿತ್ತಿಲ್ಲೆ, ಆನು ನಿನಗೆ ಡ್ರೈವಿಂಗ್ ಹೇಳಿಕೊಟ್ಟು... ನೀನು ಈ ಜನ್ಮಲ್ಲಿ ಕಾರು ಬಿಡುದು ಅಷ್ಟರಲ್ಲೇ ಇದ್ದು" ಹೇಳಿ ಬೈದು ಬೈದು, ಆ ಬೈಗುಳಂಗಳ ಕೇಳಿ ಬೊಡುದು, ಬೇಜಾರು ಮಾಡಿಯೊಂಡು ಹೆಂಡತಿ, " ಎಂತ ಒಂದೆರಡು ದಿನಲ್ಲೇ ಆರಿಂಗಾರೂ ಕಲಿವಲೆಡಿಗಾ?....ನಿಂಗಳ ಕೋಪವೋ, ನಿಂಗಳೋ, ನಿಂಗಳ ಕೈಯಿಂದ ಬೈಗುಳ ತಿಂದೊಂಡು ಡ್ರೈವಿಂಗ್ ಕಲಿವ ಕೆಲಸ ಎನಗೆ ಬೇಡ" ಹೇಳಿ ಕಣ್ಣೀರು ಹಾಕಿಕೊಂಡು ಅರ್ಧ ದಾರಿಲೇ ಕಾರಿಂದ ಇಳುದು ಮನೆಗೆ ಬೀಸ ನಡಕೊಂಡು ಹೋಗಿರ‍್ತು! ಮತ್ತೆ ಗೆಂಡ ಅದರ ಮತ್ತೆ ಹೇಂಗೋ ಸಮಾಧಾನಪಡಿಸಿದ ನಂತರ ಹೇಂಗೋ ಪಾಪ ಏಗಿಯೊಂಡು  ಡ್ರೈವಿಂಗ್ ವಿದ್ಯೆಯ ಕರಗತ ಮಾಡಿಯೊಂಡಿರ‍್ತು! 
ಒಂದೊಂದರಿ ಗ್ರೇಶಿರೆ ಈ ಡ್ರೈವಿಂಗ್ ಹೇಳುತ್ತ ವಿದ್ಯೆ ಮನೆಲಿ ಆರಿಂಗಾರೊಬ್ಬಂಗೆ ಮಾಂತ್ರ ಗೊಂತಿದ್ದರೆ ಅದೇ ಬೆಸ್ಟ್ ಹೇಳಿ ಕಾಣುತ್ತು! ತೊಂದರೆ ಬಪ್ಪದು ಇಬ್ರಿಂಗೂ ಒಂದೇ ನಮೂನೆಯ ವಿದ್ಯೆ ಗೊಂತಿದ್ದರೆ! ಕೆಲವು ದಿಕ್ಕೆ ಗೆಂಡ ಹೆಂಡತಿ ಇಬ್ರೂ ಕಾರು, ಸ್ಕೂಟರು, ಬೈಕು ಎಲ್ಲಾ ಕಲ್ತು ಒಬ್ಬನ ಕೂರಿಸಿಯೊಂಡು ಇನ್ನೊಬ್ಬ ಡ್ರೈವ್ ಮಾಡ್ತ ಹೇಳಿರೆ ಮತ್ತೇ ಬಪ್ಪದು ತಾಪತ್ರಯಂಗಳ ಸುರಿಮಳೆ! ಒಬ್ಬನ ಡ್ರೈವಿಂಗಿನ ಮತ್ತೊಬ್ಬ ’ಸರಿ’ ಹೇಳಿ ಒಪ್ಪುವ ಮಾತೇ ಬತ್ತಿಲ್ಲೆ! ದಾರಿ ಉದ್ದಾಕ್ಕೂ, "ನಿಂಗೊ ಹಾಂಗೆ ಮಾಡೇಕಾತು...ಹೀಂಗೆ ಮಾಡೇಕಾತು...ಹೀಂಗೆ ಮಾಡೇಕಾತು...ಆ ಗೇರು ಹಾಕೇಕಾತು....ಬೇಕ್ ಅಪ್ಲೈ ಮಾಡೇಕಾತು....., ಕ್ಲಚ್ಚು ಮೇಗಂದ ಕಾಲು ತೆಗೆರಿ....ಆಕ್ಸಿಲೇಟರ್ ಕೊಟ್ಟುಕೊಂಡು ಹೋಯಿಕ್ಕೊಂಡಿಪ್ಪಾಗ ಕ್ಲಚ್ಚಿನ ಮೇಗೆ ಕಾಲು ಮಡುಗುಲಾಗ....ಕ್ಲಚ್ಚು ಬೇಗ ತಳೆತ್ತು,....ನಿಂಗೊ ಕಂಡಾಬಟ್ಟೆ ಸ್ಪೀಡ್ ಹೋವುತ್ತಿ...ಹಾಂಗೆಲ್ಲಾ ಹೋದರೆ ಡೇಂಜರ್ರು, ಎಷ್ಟು ಸಲ ಹೇಳಿದರೂ  ಅಷ್ಟೇ, ನಿಂಗಳೊಟ್ಟಿಂಗೆ ಕಾರಿಲಿ, ಬೈಕಿಲೆಲ್ಲಾ ಇನ್ನೊಂದರಿ ಆನು ಬತ್ತಿಲ್ಲೆಪ್ಪಾ ಬತ್ತಿಲ್ಲೆ, ಹೆದರಿಕೆ ಆವುತ್ತು ನಿಂಗಳ ಡ್ರೈವಿಂಗ್ ನೋಡಿದರೆ! ನಿಂಗಳೋ, ನಿಂಗಳ ಡ್ರೈವಿಂಗೋ....ಎಲ್ಲಾ ಸಾಕು" ಹೇಳಿ ಹೆಂಡತಿ ಮಂಗಳಾರತಿ ಮಾಡಿದರೆ, ಗೆಂಡ ಸಹಸ್ರನಾಮ ಶುರು ಮಾಡ್ತ, "ನಿನಗೆ ಬಾಯಿಮುಚ್ಚಿ ಕೂದೋಂಡು ಎನ್ನೊಟ್ಟಿಂಗೆ ಬಪ್ಪದು ಬಿಟ್ಟು, ದಾರಿ ಉದ್ದಕ್ಕೂ ಕಮೆಂಟ್ರಿ ಕೊಟ್ಟೋಂಡು ಬತ್ತೆನ್ನೇ...! ಅದಕ್ಕಲ್ಲ ನಿನಗುದೇ ಡ್ರೈವಿಂಗ್ ಕಲಿಶಿದ್ದು!"
"ಈಗ ಹೆಂಡತಿಯ ಸರದಿ,"ಹಾಂ, ಹಾಂಗೆ ಬನ್ನಿ ದಾರಿಗೆ! ಆನು ಡ್ರೈವ್ ಮಾಡಿಯೊಂಡಿಪ್ಪಾಗ ಒಂದರಿಯಾದರೂ ನಿಂಗೊ ಬಾಯಿ ಮುಚ್ಚಿ ಕೂದಿದ್ದಾ? ಹೀಂಗಲ್ಲಾ ಹಾಂಗೆ ಹಾಂಗಲ್ಲ ಹೀಂಗೇ ಹೇಳ್ತಾ ಇಪ್ಪಾಗ ಎನಗುದೇ ಹೇಂಗಾವುತ್ತು ಗೊಂತಿದ್ದಾ?! ಮತ್ತೂ ಹೇಳುತ್ತಿ, ನಿನಗೆ ಡ್ರೈವಿಂಗ್ ಕಲಿಶಿ ದೊಡ್ಡ ತಪ್ಪು ಮಾಡಿದೆ....ಹೆಮ್ಮಕ್ಕೊ ಎಲ್ಲಿರೆಕೋ ಅಲ್ಲೇ ಇರೇಕು, ಇನ್ನೊಂದರಿ ನಿನ್ನ ಕೈಯಿಗೆ ಕಾರು ಕೊಡ್ತಿಲ್ಲೆಪ್ಪಾ ಕೊಡ್ತಿಲ್ಲೆ ಹೇಳಿದೇ ಹೇಳಿಯೊಂಡಿರ‍್ತಿ....ಅಂಬಗೆಲ್ಲಾ ಎನಗೆ ಎಷ್ಟು ಬೇಜಾರಾದಿಕ್ಕು ಹೇಳಿ ಗ್ರೇಶಿ?!"ಹೀಂಗೇ ನಡದ ಮಾತಿನ ಚಕಮಕಿಲಿ ಕನಿಷ್ಠ ಪಕ್ಷ ಒಂದೊಂದು ವಾರ ’ಟೂ’ ಬಿಟ್ಟೊಂಡು ನಾನೊಂದು ತೀರ, ನೀನೊಂದು ತೀರ ಹೇಳಿ ಇದ್ದು ಬಿಡ್ತವು! ಒಟ್ಟಾರೆ ಹೇಳೇಕಾರೆ ಯೇವಾಗಲೂ ಒಬ್ಬನ ಡ್ರೈವಿಂಗ್ ಮೇಲೆ ಮತ್ತೊಬ್ಬಂಗೆ ತೃಪ್ತಿಯೇ ಇರ‍್ತಿಲ್ಲೆ! ಹೇಳಿದಾಂಗೆ ನಿಂಗಳಲ್ಲಿ ಇಬ್ರಿಂಗೂ ಡ್ರೈವಿಂಗ್ ಬತ್ತಾ? ಇಲ್ಲಾ ಒಬ್ಬಂಗೆ ಮಾಂತ್ರವಾ...?!!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು


Monday, March 2, 2015

"ಮಳೆಗಾಲಲ್ಲಿ ಒಂದು ದಿನ" - ಹವ್ಯಕ ಕನ್ನಡದಲ್ಲಿ ನಾನು ಬರೆದ ಮೊದಲ ಮತ್ತು ಏಕೈಕ ಕವನ

ಮಳೆಗಾಲಲ್ಲಿ ಒಂದು ದಿನ

ಮಳೆಗಾಲದ ಒಂದು ಹಗಲಿಲಿ
ಗಿಡಮರಂಗೊ ಇಳೆ ಎಲ್ಲಾ ನೆನದು ಮೀವದರ ಕಾಂಬಾಶೆ
ತೋಡು ಕೆರೆ ಹೊಳೆ ತುಂಬಿ ಹರಿವುದರ ಕಣ್ತುಂಬಿ
ಕಾರ್ಮುಗಿಲ ವರ್ಷಧಾರೆಲಿ ನಡದು
ಕಡಲಬ್ಬರವ ಹೊಂಬಣ್ಣದ ಅಲೆಗಳಲಿ ನೋಡುವಾಶೆ

ಮಳೆಗಾಲದ ಒಂದು ಇರುಳಿಲಿ 
ಇರಿಂಟಿ ಕೆಪ್ಪೆಗಳ ಸ್ವರಲ್ಲಿ ಮಳೆಯ ಮುನ್ಸೂಚನೆ ಕೇಳುವಾಶೆ
ಮಿಂಚಿನ ಬೆಣ್ಚಿಲಿ ಪ್ರಕೃತಿಯ ಚಿತ್ರವ ಕಣ್ತುಂಬಿ
ಗುಡುಗು ಮಿಂಚಿನ ಬಿರುಗಾಳಿ-ಮಳೆಗೆ ಕೆಮಿಗೊಟ್ಟು
ಬೆಶ್ಚಂಗೆ ಗುಡಿಹಾಕಿ ಮನುಗುವಾಶೆ

ಮಳೆಗಾಲದ ಉದಿಯಕಾಲಲ್ಲಿ
ಗಿಡಂಗಳ ಮೇಲಿಪ್ಪ ನೀರಮುತ್ತುಗಳ ಮುಟ್ಟುವಾಶೆ
ನೀರವ ಮೌನಲ್ಲಿ ಬಗೆಬಗೆ ಹಕ್ಕಿಗಳ ದನಿ ಕೇಳಿ
ಪಿರಿಪಿರಿ ಮಳೆಗೆ ಮೈಯೊಡ್ಡಿ ಮಾಡನೀರಿಂಗೆ ಕೈಯೊಡ್ಡಿ  
ಚಳಿಗೊಂದರಿ ನಡುಗಿ ಕೆಂಪು ಕೆಂಡಕ್ಕೆ ಮೈಯೊಡ್ಡುವಾಶೆ

ಮಳೆಗಾಲಲ್ಲಿ ಒಂದು ದಿನ
ಹಗಲು ಹೊತ್ತಿಲೇ ಕಸ್ತಲಪ್ಪದರ ಕಾಂಬಾಶೆ
ಹಕ್ಕಿ ದನಕಂಜಿಗಳ ಗೂಡು ಸೇರುವ ತವಕವ ಕಂಡು
ಮತ್ತೆ ಮುಗಿಲೆಲ್ಲಾ ಸರಿದೊಂದರಿ ಕಸ್ತಲೆ ಬೆಳಕಾಗಿ
ಹೊತ್ತು ಮುಳುಗುವಂದಾಜಿಗೆ ಕಾಮನಬಿಲ್ಲ ಕಾಂಬಾಶೆ

ಎನ್ನ ಒಂದು ದಿನದ ಆಶೆಗೊ ಒಳುದುಹೋಕೋ ಹೇಂಗೆ?
ಮರಂಗಳೆಲ್ಲಾ ಈಗಲೇ ಕಡುದು ಬುಡಮೇಲು ಮಾಡಿದರೆ ಹೀಂಗೆ?
ಕೆರೆ ಹೊಳೆ ಜಲಾಶಯಂಗೊ ಹೂಳು ತುಂಬಿ ಹರಿವುದೆಲ್ಲಿಗೆ ಮತ್ತೆ?
ಆಕಾಶಲ್ಲಿ ಮುಗಿಲು ಕಂಡರೆ ಸಾಕೋ ಹೇಳಿ-ಮತ್ತೆ?
ಕಾರ್ಮುಗಿಲು ಕಂಡರೆ ಸಾಕೋ? ಪಶುಪಕ್ಷಿಗೊ ಗೂಡು ಸೇರಿದರೆ ಸಾಕೋ?
ಇರಿಂಟಿ ಕೆಪ್ಪೆಗೊ ಮಳೆಯ ದಿನಿಗೇಳಿದರೆ ಸಾಕೋ?

ಭೂಮಿತಾಯ ಒಡಲ ಮಾಡೇಕು ನಾವು ಹಸುರು ಹಸುರು
ಅಂಬಗ ಮಾಂತ್ರ ನಮಗೆಲ್ಲಾ ಸಿಕ್ಕುಗಷ್ಟೇ ಒಸರು ಉಸುರು
ಕಾಡೇ ಇಲ್ಲದ್ದರೆ ನಾಡಿಲಿ ಮಿಂಚಿನ ಬೆಣ್ಚಿಲಿ ಕಾಂಬದೆಂತರ?
ನಿರಂತರ ತಿರುಗುವ ಭೂಮಿ ನಿಂದು ಹೋದರೆ ಮಾಡುದೆಂತರ?

ತ್ರಿವೇಣಿ ವಿ ಬೀಡುಬೈಲು 
ಮಂಗಳೂರು


ಮನೆ ಮನೆ ಶುದ್ಧಿ ಅಷ್ಟೆ...! - ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ವಿಷು ವಿಶೇಷ ಸ್ಪರ್ಧೆ ೨೦೧೩ರಲ್ಲಿ ವಿಶೇಷ ಪ್ರೋತ್ಸಾಹಕರ ಬಹುಮಾನ ಪಡೆದ ಹಾಸ್ಯ ಲೇಖನ

ಮನೆ ಮನೆ ಶುದ್ಧಿ ಅಷ್ಟೆ...!

ಎನ್ನ ಕೈರಟ್ಟೆಲಿ ರಿಂಗ್ವರ್ಮ್(ಹುಳುಮೇವದು) ಆದ ಕಾರಣ ಗೊಂತಿಪ್ಪ ಮನೆಮದ್ದುಗಳ ಎಲ್ಲಾ ಒಂದು ತಿಂಗಳಿಡೀ ಮಾಡಿ ಸೋತು ಕಡೇಂಗೆ ಸ್ಕಿನ್ ಸ್ಪೆಷಲಿಸ್ಟಿನ ಹತ್ತರೆ ಹೋಯೇಕ್ಕಾಗಿಯೇ ಬಂತು. ಅಲ್ಲಾ, ಈ ಮನೆಮದ್ದುಗಳ ಎಲ್ಲಾ ಕೇಳಿದ್ದರ, ನೋಡಿದ್ದರ, ಓದಿದ್ದರ ಎಲ್ಲಾ ತಪ್ಪದೇ ಮಾಡಿತ್ತಿದ್ದೆ ಹೇಳಿ! ಆದರೆ ರಿಂಗ್ವರ್ಮಿಂಗೂ, ಆನು ಮಾಡಿದ ಔಷಧಿಗೊಕ್ಕೂ ಎಂತಕ್ಕೋ ಸಮ ಬೈಂದಿಲ್ಲೆ ಹೇಳಿ ಕಾಣುತ್ತು! ಮದ್ದು ಮದ್ದಿನಷ್ಟಕ್ಕೇ, ರಿಂಗ್ವರ್ಮ್ ಅದರಷ್ಟಕ್ಕೇ. ಹೆಚ್ಚಾಯ್ದೂ ಇಲ್ಲೆ, ಕಡಮ್ಮೆ ಆಯ್ದೂ ಇಲ್ಲೆ!  ಈಗ ಎಲ್ಲಾ ರೋಗೊಂಗೊಕ್ಕುದೇ ಎಷ್ಟು ದೊಡ್ಡಸ್ಥಿಕೆ ಬೈಂದು ಹೇಳಿದರೆ ಮನೆಮದ್ದೆಲ್ಲಾ ಅವಕ್ಕೆ ಬೇಡವೇ ಬೇಡಾ ಹೇಳಿ! ದೊಡ್ಡ ದೊಡ್ಡ ಡಾಕ್ಟರಕ್ಕಳ ಹತ್ತರೆ ಹೋಗಿ ಕೇಳಿದಷ್ಟೂ ಪೈಸೆಯ ಅವಕ್ಕೂ, ಅಂಗಡಿಯ ಮದ್ದಿಂಗೂ ಸುರುಗಿದರೆ ಮಾಂತ್ರ ಆ ಬಂದ ರೋಗಕ್ಕೂ ಸಮಾಧಾನ ಹೇಳಿ ಕಾಣುತ್ತು! ಮತ್ತೆ ಎಡ್ರೆಸ್ ಇಲ್ಲದ ಹಾಂಗೆ ರಜ್ಜ ದಿನಕ್ಕೆ ದೂರ ಹೋವುತ್ತು!

ಆನು ಎನ್ನ ತೊಂದರೆಯ ತೆಕ್ಕೊಂಡು ಚರ್ಮದ ಡಾಕ್ಟ್ರೆತ್ತಿ ಹತ್ತರೆ ಹೋದೆ. "ಕ್ಲೀನ್ಲಿನೆಸ್ ಕೌಂಟ್ಸ್ ಎವ್ವರಿವ್ಹೇರ್, ಡೋಂಟ್ ಫೊರ್‌ಗೆಟ್ ಬಿಹೈಂಡ್ ಯುವರ್ ಇಯರ‍್ಸ್" ಹೇಳಿ ಕ್ಲಿನಿಕ್ಕಿನ ಗೋಡೆಲಿ ನೇಲಿಸಿಯೊಂಡಿದ್ದ ಬೋರ್ಡಿನ ಮೇಲೆ ಎನ್ನ ಕಣ್ಣು ಬಿತ್ತು. ಇದನ್ನೇ ಒಂದರಿ ಎನ್ನ ಇಂಗ್ಲಿಷ್ ಲೆಕ್ಚರರ್ ಪಾಠ ಮಾಡುವಾಗ ಹೇಳಿತ್ತಿದ್ದವು, ಆನು ಕಾಲೇಜಿಂಗೆ ಹೋಯಿಕ್ಕೊಂಡಿಪ್ಪಾಗ. ಅಂದು ಲಾಗಾಯ್ತು ಆನು ಕೆಮಿ ಹಿಂದೆ ತಿಕ್ಕದ್ದ ದಿನವೇ ಇಲ್ಲೆ ಹೇಳಿ ಹೇಳುಲಕ್ಕು! ಎಂತಕೆ ಹೇಳಿರೆ ಲೆಕ್ಚರರ್ ಹೇಳಿತ್ತವು ನಾವು ಮೋರೆ ತೊಳವಾಗಲೋ, ಮೀವಾಗಲೋ ಹೆಚ್ಚಾಗಿ ನಿರ್ಲಕ್ಷಿಸಿ ಹೋಪದು ಕೆಮಿಯ ಹಿಂದಾಣ ಹೊಡೆಡ. ಈ ವಾಕ್ಯದ ಅರ್ಥ ಎಂತ ಹೇಳಿದರೆ ನಾವು ದೇಹದ ಪ್ರತಿಯೊಂದು ಭಾಗವ ಲಾಯ್ಕಲ್ಲಿ ತೊಳದರೂ, ಕೆಮಿಯ ಹಿಂದೆ ತಿಕ್ಕುಲೆ ಮರದು, ದಿನ ಕಳೆದ ಹಾಂಗೆ ಅಲ್ಲಿ ಮಣ್ಣು, ಧೂಳಿನ ಶೇಖರಣೆ ಆಗಿರುತ್ತು. ಏವಾಗಲೋ ಒಂದರಿ ಅಲ್ಲಿ ತೊರುಸುವಾಗ ಗೊಂತಾವುತ್ತು ಕೆಮಿಯ ಹಿಂದೆ ಕೈಹೋಗದ್ದೇ ದಿನ ಸುಮಾರಾಯಿದು ಹೇಳಿ! ಮೀವಾಗ ಕೆಮಿಯ ಹಿಂದೆಯೂ ತಿಕ್ಕಿತೊಳದರೆ ನಮ್ಮ ದೇಹ ಪೂರ್ತಿ ಕ್ಲೀನ್ ಆವುತ್ತು. ಹಾಂಗೇ ನಾವು ಮನೆಲೇ ಆಗಲಿ, ನಮ್ಮ ಕೆಲಸದ ಸ್ಥಳಂಗಳಲ್ಲೇ ಆಗಲಿ ಕ್ಲೀನ್ ಮಾಡುವಾಗ ಮೂಲೆ-ಮುಡುಕು, ಸಂದು-ಗೊಂದುಗಳ ಎಲ್ಲಾ ಪ್ರತಿನಿತ್ಯ ಕ್ಲೀನ್ ಮಾಡಿ ಲಾಯ್ಕಲ್ಲಿ ಮಡಿಕ್ಕೊಳ್ಳದ್ದರೆ ಎದುರು ಕಾಂಬಲ್ಲಿ ಮಾತ್ರ ಕ್ಲೀನ್ ಕಾಣುತ್ತು. ಕಾಣದ್ದಲ್ಲಿ ಕಸವು ಹಾಂಗೆ ಒಳಿತ್ತು, ಕ್ಲೀನ್ ಹೇಳುತ್ತ ಪದ ಎಲ್ಲಾದಿಕ್ಕು ಕಾರ್ಯರೂಪವಾಗಿ ಅನ್ವಯ ಆಯೇಕ್ಕು ಹೇಳಿ ಈ ವಾಕ್ಯದ ಅರ್ಥ. ಲೆಕ್ಚರರ್ ಅಂದು ಹೇಳಿದ್ದ ಸಾಲುಗಳ ಗೋಡೆ ಮೇಲೆ ಓದಿಯಪ್ಪಗ ಹಲವು ಪ್ರಸಂಗಗಳ ಕಣ್ಣಾರೆ ನೋಡಿದ್ದು ಗ್ರೇಶಿ ಎನಗೆ ಸಣ್ಣಕ್ಕೆ ನೆಗೆದೇ ಬಂತು! ಒಬ್ಬೊಬ್ಬ ಹಾಕುವ ಬೆಳಿ ಬಣ್ಣದ ಬನಿಯನ್ನಿನ, ಸುತ್ತುವ ಪಂಚೆಗಳ ನೋಡೇಕು, ನೀರಿಂಗೆ ತೋರಿಸುತ್ತವೋ ಇಲ್ಲೆಯಾ ಹೇಳಿ ಸಂಶಯ ಬತ್ತು! ಕಾಲಕ್ರಮೇಣ ಹೊಂಬಣ್ಣಕ್ಕೆ ತಿರುಗಿರುತ್ತು. ಎಲ್ಲಿಂದಾದರೂ ಹರಿವೆ ಬಿತ್ತಿನ ತಂದು ಉದುರಿಸಿತ್ತು ಹೇಳಿ ಆದರೆ ಅದರ ಮೇಲೆ ಲಾಯ್ಕಲ್ಲಿ ಗಿಡ ಹುಟ್ಟಿ ಬಕ್ಕು, ಯೇವ ರಸಗೊಬ್ಬರಂಗಳ ಸಹಾಯ ಇಲ್ಲದ್ದೇ! ಅದು ಬಿಡಿ ಅವು ಪಾಪ ಗೆಂಡುಮಕ್ಕೊ! ಕೆಲವು ಹೆಮ್ಮಕ್ಕೊ ಅಡಿಗೆ ಮನೆಲಿ ಎಷ್ಟು ಎಕೊನಮಿ ಮಾಡ್ತವು ಹೇಳಿರೆ ಅಲ್ಲೇ ಹತ್ತರೆ ಬೈರಾಸವನ್ನೋ, ಕೈಹರುಕ್ಕನ್ನೋ ಮಡಿಕ್ಕೊಳ್ಳದ್ದೇ, ಕೈಗೆಂತಾರೂ ಹಿಡ್ತು, ರವಸುತ್ತು ಹೇಳಿಯಾದರೆ, ಹಾಕಿದ ನೈಟಿಯ/ಸೀರೆಯ ಬಲದ, ಎಡದ ಹೊಡೆಂಗೇ ಕೈಉದ್ದುದು, ಕೈಯ ಚಂಡಿಯ ಉದ್ದಿಕೊಂಬದೂ ಅದೇ ಜಾಗಗೆ! ಅರ್ಜೆಂಟಿಂಗೆ ಚೆಂಡಿ ಇಪ್ಪ ಪಾತ್ರೆಗ್ಲಾಸುಗಳ ಉದ್ದುದೂ ಅಲ್ಲಿಗೆ! ಹಾಂಗೇ ನೈಟಿ/ಸೀರೆಯ ಕೈ ಉದ್ದಿದ ಹೊಡೆಯ ಬಣ್ಣವೇ ಬದಲಿರುತ್ತು! ಎಷ್ಟು ತಿಕ್ಕಿ ತೊಳದರುದೇ ನೈಟಿಯ/ಸೀರೆಯ ಆ ಒಂದಷ್ಟು ಜಾಗೆ ಮಾಂತ್ರ ಎದ್ದು ಕಂಡೊಂಡಿರುತ್ತು! ಇನ್ನೂ ಕೆಲವು ಜೆನ ಬೈರಾಸ, ಕೈಹರುಕ್ಕನ್ನೋ ಮಡಿಕೊಂಡಿರ‍್ತವು. ಅಂದರೂ ಕೈ ಮಾಂತ್ರ ಹೋಪದು ಹಾಕಿದ ವಸ್ತ್ರದ ಹೊಡೆಂಗೇ! ಬೈರಾಸಂದ ಹೆಚ್ಚು ಬೇಗ ಸಿಕ್ಕುದು ಹಾಕಿದ ವಸ್ತ್ರವೇ ಅಲ್ಲದೋ?! ಕೆಲವು ಜೆನ ನೋಡ್ಲೆ ಕ್ಲೀನ್ ಕಾಣುತ್ತವು, ಅಂತಾ ಕೆಲವರ ತಲೆ ಬಾಚುವ ಬಾಚಣಿಗೆಯೋ, ಸಿಂಕೋ, ಟಾಯ್ಲೆಟ್ಟೋ, ಉಪಯೋಗಿಸುವ ಬಾಲ್ದಿ, ಮಗ್ಗುಗಳೋ, ಬಾತ್ ರೂಮಿನ ನೆಲವೋ, ಸಾಬೂನು ಪೆಟ್ಟಿಗೆಯೋ, ಉಪಯೋಗಿಸುವ ಹಸೆವಸ್ತ್ರಂಗಳೋ, ದೇವರ ಪಾತ್ರಂಗಳೋ, ಕೆಲವರ ಮನೆಯ ಸುತ್ತುಮುತ್ತ, ಜಾಲು ಎಲ್ಲಾ ನೋಡಿದರೆ ಸಂದೇಹ ಬತ್ತು, "ಮನೆಯೊಳ ಜೆನ ವಾಸ ಇದ್ದೋ, ಇಲ್ಲೆಯಾ" ಹೇಳಿ! ಕೆಲವುದಿಕ್ಕೆ ಎಲ್ಲಾ ಮಿಕ್ಸಿ, ಗ್ರೈಂಡರುಗಳ ಹೊಡೆಲೆಲ್ಲಾ ಒಂದು ದಿನದ ಸಾಂಬಾರಿಂಗೆ ಬೇಕಾದ  ಮಸಾಲೆ ಅಂಟಿಯೊಂಡಿರುತ್ತು! ಇನ್ನೂ ಕೆಲವುದಿಕ್ಕೆ ಪ್ರಿಡ್ಜ್ ಬಾಗಿಲು ತೆಗದಪ್ಪಗ ಹೊಟ್ಟೆತೊಳಸುವ ಹಾಂಗೆ ವಾಸನೆ ಬತ್ತು! ಅಟ್ಟ ಅಂತೂ ಹೆಚ್ಚಿನವರ ಮನೆಲಿ ನಿರ್ಲಕ್ಷ್ಯಕ್ಕೆ ಒಳಪಟ್ಟ ತಾಣ!....ಸಾಕು ಇಲ್ಲಿಗೇ ನಿಲ್ಸುತ್ತೆ. ಪೂರಾ ಹೇಳುಲೆ ಹೆರಟರೆ ಎಲ್ಲೋರಿಂಗೂ ಒಂದೊಂದು ನಮೂನೆಲಿ ಬೇಜಾರಕ್ಕು......!ಪ್ರಾಯ ಆದವ್ಕೆ, ಪಾಪ ಮಕ್ಕೊ ಪರವೂರಿಲ್ಲಿಪ್ಪವ್ಕೆ, ಅವರ ಶಾರೀರಿಕ ಅಸೌಖ್ಯದ ಕಾರಣ, ಆರೋಗ್ಯದ ಏರುಪೇರುಗಳಿಂದಾಗಿ ಕೆಲಸಂಗಳ ಮಾಡಿಯೊಂಬಲೆ ಮಹಾ ಭಂಗ ಆವುತ್ತು, ಅವರ ಹೊರತು ಪಡಿಸಿ ಆನು ಹೇಳಿದ್ದು...

"ನಂಬ್ರ ಎಂಟು ಬನ್ನಿ ಮೇಡಂ" ಹೇಳಿ ಹೇಳಿತು ಕ್ಲಿನಿಕ್ಕಿನ ರಿಸಿಪ್ಸನಿಸ್ಟ್. ಆಲೋಚನೆಗೊಕ್ಕೆಲ್ಲಾ ಫುಲ್‍ಸ್ಟಾಪ್ ಹಾಕಿ ಒಳ ಹೋದೆ. ಡಾಕ್ಟ್ರೆತ್ತಿ ಪರೀಕ್ಷೆ ಮಾಡಿ ಹೇಳಿದವು, "ನೋಡೀ, ಇದಕ್ಕೆಲ್ಲಾ ಚರ್ಮವನ್ನು ಕ್ಲೀನಾಗಿ ಇಟ್ಟುಕೊಳ್ಳಬೇಕು! ದಿನಕ್ಕೆರಡು ಸಲ ಸ್ನಾನ ಮಾಡಿ, ಈ ಕ್ರೀಂ, ಪೌಡರ್ ಎಲ್ಲಾ ಹಾಕಿ, ಹತ್ತು ದಿನ ಎರಡು ಹೊತ್ತು ಈ ಮಾತ್ರೆ ತಿನ್ನಿ, ವಾಸಿ ಆಗದಿದ್ದರೆ ಮತ್ತೆ ಬನ್ನಿ" ಹೇಳಿ! ಫೀಸ್ ಕೊಟ್ಟು ಮದ್ದೆಲ್ಲಾ ತೆಕ್ಕೊಂಡು ಹೆರ ಬಂದೆ. ಒಂದರಿಯಂಗೆ ಡಾಕ್ಟ್ರೆತ್ತಿ ಮೇಲೆ ಕೋಪ ಬಂದ ಹಾಂಗಾತು!  ಅಲ್ಲಾ ಎನಗೇ ಎರಡು ಸಲ ಮೀವಲೆ ಹೇಳುತ್ತವನ್ನೇ?! ದಿನಕ್ಕೆರಡು ಸಲ ಮೀವ ಆನು, ಬೇಕಾದರೆ ಮೂರು ಸಲವೂ ಮೀವೆ, ನೀರೆರಕ್ಕೊಂಬಲೆ ಎಂತ ಮಹಾ ಭಂಗ ಇದ್ದಾ?! ಸಣ್ಣಾದಿಪ್ಪಾಗ ಎನ್ನ ಮೀಶುಲೆ ಹೇಳಿ ಕರಕೊಂಡುಹೋದರೆ ಬೆಶಿನೀರ ಕೊಟ್ಟಗೆಂದ ಆನು ಹೆರ ಬಪ್ಪಲೆ ಕೇಳಿಯೊಂಡಿತ್ತಿಲ್ಲೆಡ, ಅಮ್ಮ ಈಗಲೂ ಹೇಳಿಯೊಂಡಿರ‍್ತು! 

ದಿನಲ್ಲಿ ಮೂರು ಸಲವೂ ಬೇಕಾದರೆ ಮೀವೆ ಹೇಳಿ ಜಂಭಕೊಚ್ಚಿಯೊಂಡ ಈ ಜೆನ ಎಲ್ಲರ ಬಗ್ಗೆ ಸಜ್ಜಿಲಿ ಕಮೆಂಟ್ ಹೊಡದ್ದನ್ನೇ, ಇದು ಹೇಂಗಿದ್ದು, ಮನೆಯ ಹೇಂಗೆ ಮಡಿಕ್ಕೊಂಡಿದು ಹೇಳಿ ಒಂದರಿ ಇದರ ಮನೆಗೆ ಹೋಗಿ ನೋಡೇಕು ಹೇಳಿಯೊಂಡು ಅನಿರೀಕ್ಷಿತವಾಗಿ ಎಲ್ಲಿಯಾರೂ ಎನ್ನ ಮನೆಗೆ ಬಂದಿಕ್ಕೇಡಿ, ದಯಮಾಡಿ ಬಪ್ಪ ಎರಡು ಗಂಟೆ ಮೊದಲೇ ಫೋನ್ ಮಾಡಿ ತಿಳಿಶಿ ಆತಾ, ಇಲ್ಲೆ ಹೇಳಿಯಾದರೆ ಮನೆಗೆ ಹೊಗ್ಗಿಯಪ್ಪಗ ನಿಂಗೊಗೆಲ್ಲಾ ಬಂದದು ಮನೆಗೋ, ಸಂತೆಗೋ ಹೇಳಿ ಅನ್ನುಸುಗು ಹಾಂಗೇ, "ಲೋಕದ ಡೊಂಕ ನೀವೇಕೆ ತಿದ್ದುವಿರಿ...?" ಹೇಳಿ ಎನ್ನ ಹತ್ತರೆ ಖಂಡಿತಾ ಕೇಳಿಹೋಕು!


ತ್ರಿವೇಣಿ ವಿ ಬೀಡುಬೈಲು
ಮಂಗಳೂರು 


Sunday, March 1, 2015

ನಿಂಗೊಗೆಂತರ ಅಡುಗೆ ಇಂದು...?! - ಡಿಸೆಂಬರ್ ೨೦೧೨ರ ಹವ್ಯಕ ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ

ನಿಂಗೊಗೆಂತರ ಅಡುಗೆ ಇಂದು...?!

ನಿಂಗೊಗೆ ಇಂದು ತಿಂಡಿಗೆ,ಕಾಫಿಗೆ,ಮಧ್ಯಾನ್ಹದ ಅಡುಗೆ ಎಂತರ ಹೇಳಿ ಹೆಮ್ಮಕ್ಕೊ ಪರಸ್ಪರ ಕೇಳಿಕೊಂಬದು ಒಂದು ಕ್ರಮ. ಉತ್ತರಂಗಳ ಕೇಳುಲೆ ಗಮ್ಮತ್ತಿರುತ್ತು!
"ದಿನಾಗಲೂ ಎಂತರ ಮಾಡುದು ಹೇಳಿ ಆಲೋಚನೆ ಮಾಡುದೇ ಒಂದು ದೊಡ್ಡ ಕೆಲಸ. ಉದಿಯಪ್ಪಗ ಎದ್ದು ಎಂತಾರೂ ಮಾಡುವೊ ಹೇಳಿ ನಿನ್ನೆ ಇರುಳು ರಜ ಅಕ್ಕಿ ಬೊದುಲುಲೆ ಹಾಕಿತ್ತೆ. ಇಂದು ಉದಿಯಪ್ಪಗ ಎದ್ದು ಫ್ರಿಡ್ಜ್ ಬಾಗಿಲು ತೆಗೆದಪ್ಪಗ ಮುಳ್ಳುಸೌತೆಕಾಯಿ ಕೊಳವಲೆ ಶುರುವಾದ ಹಾಂಗೆ ಕಂಡತ್ತು. ಅದರ ಅಕ್ಕಿಯೊಟ್ಟಿಂಗೆ ಹಾಕಿ ಕಡದು ದೋಸೆ ಮಾಡಿದೆ" ಹೇಳಿಯೋ,
"ನಾಲ್ಕು ದಿನದ ಹಿಂದಾಣ ದೋಸೆ ಹಿಟ್ಟಿದ್ದತ್ತು ಫ್ರಿಡ್ಜಿಲಿ, ಅದಕ್ಕೆ ಒಂದು ಈರುಳ್ಳಿ, ಎರಡು ಹಸಿ ಮೆಣಸು, ರಜ್ಜಾ ಕಾಯಿ ಎಲ್ಲಾ ಹಾಕಿ ದೋಸೆ ಮಾಡಿದ್ದು!" ಹೇಳಿಯೋ,
"ಎರಡು ಸೌಟು ಗೋಧಿ ಹಿಟ್ಟು,ಎರಡು ಸೌಟು ದೋಸೆ ಹಿಟ್ಟು, ರಜ್ಜ ಇಡ್ಲಿ ಹಿಟ್ಟಿಗೊ ಎಲ್ಲಾ ಇದ್ದತ್ತು, ಎಲ್ಲಾ ಒಟ್ಟು ಮಾಡಿ ಲಾಯ್ಕಲ್ಲಿ ದೋಸೆ ಮಾಡಿದೆ, ಹಾಂಗೆ ರಜ ಚಪಾತಿ ಹಿಟ್ಟಿದ್ದತ್ತು, ನಾಲ್ಕು ಚಪಾತಿದೇ ಮಾಡಿದೆ!" 
ಮಧ್ಯಾನ್ಹಕ್ಕೆಂತ ಮಾಡಿದಿ?
"ನಾಲ್ಲು ಕ್ಯಾರೆಟ್ ಕೊಳವಲೆ ಶುರುವಾಗಿತ್ತು, ಎರಡು ಬಟಾಟೆ ಮೋಂಗೆ ಬಂದೊಂಡಿದ್ದತ್ತು,ಎರಡು ನುಗ್ಗೆ ಕೊಂಬು ವಣಗಿಕೊಂಡಿದ್ದತ್ತು,ಟೊಮ್ಯಾಟೊ ಕೂಡಾ ಹಾಳಪ್ಪಾಂಗೆ ಆಗಿತ್ತು, ಎಲ್ಲದರ ಕೊರದು ರಜ ತೊಗರಿ ಬೇಳೆದೇ ಹಾಕಿ ಒಂದು ಕೊದಿಲು ಮಾಡಿದೆ,ಬದನೆಕಾಯಿದೇ ಹಾಳಪ್ಪಲೆ ಶುರುವಾಗಿತ್ತು, ಅದರ ಗ್ಯಾಸಿಲಿ ಸುಟ್ಟುಹಾಕಿ ಒಂದು ಗೊಜ್ಜು ಮಾಡಿದೆ!" ಇದು ಇಂದಿನ ಶಾಕಪಾಕ, ನಾಳಂಗೆ ಆ ಬೀಟ್ ರೂಟ್ ತಂದದು ಚಿರುಟುಲೆ ಶುರುವಾಯಿದು ಅದರ ಸಾಂಬಾರೋ ಪಲ್ಯವನ್ನೋ ಮಾಡೇಕು, ಹಾಂಗೆ ಮೂಲಂಗಿದೇ ಇದ್ದು, ಹಾಗಲಕಾಯಿದೇ ಹಾಳಪ್ಪಾಂಗೆ ಕಂಡತ್ತು......!ಯಾವುದರ ಮಾಡಿ ಮೊದಾಲು ಮುಗುಶುದು ಹೇಳಿಯೇ ಗೊಂತಾವುತ್ತಿಲ್ಲೆ! ಇದರ ಒಟ್ಟಿಂಗೆ ಫ್ರಿಡ್ಜಿಲಿ ಇನ್ನೂ ಬೇಕಾದಷ್ಟು ತರಕಾರಿಗೊ, ಹಣ್ಣುಗೋ ಶಿಥಿಲಾವಸ್ಥೆಲಿರುತ್ತು! ಆದರೆ ಮಾತನಾಡುವಾಗ ಹೇಳುಲೆ ಮರದೋಗಿರುತ್ತು ಅಷ್ಟೇ! ಅಂತೂ ತಾಜಾ ಉಪಾಹಾರಂಗಳ ಸೇವನೆ ಬಲು ಅಪರೂಪವೇ!
ಹೀಂಗೆ ಹೇಳುದು,ಹೀಂಗೆಲ್ಲಾ ಕೊಳದ, ಹಾಳಾದ, ಒಣಗಿದ, ಚಿರುಟಿ ನೀರಾರಿದ, ಬಾಡಿ ಬೆಂಡಾದ ತರಕಾರಿಗಳ ಉಪಯೋಗಿಸಿ ಅಡುಗೆ ಮಾಡುದು ಪೇಟೆಗಳಲ್ಲಿ ಮಾಮೂಲಿ ಆಗಿ ಹೋಯಿದು! ಈ ತರಕಾರಿಗಳ ರೇಟು ಎಲ್ಲಾ ಈಗ ಪ್ರತೀ ಕೇಜಿಗೆ ಸರಾಸರಿ ಹೇಳುತ್ತರೆ ನಲವತ್ತು ಐವತ್ತು ರೂಪಾಯಿಗಳ ಮೇಲೇ ಇಪ್ಪದು! ಹಾಂಗಿಪ್ಪಗ ಆಫರಿಲಿ ಕಡಮ್ಮೆ ರೇಟಿಲಿ ತರಕಾರಿ, ಹಣ್ಣುಗೊ ಸಿಕ್ಕಿದರೆ ಆರಿಂಗೆ ಬೇಡದ್ದು?! ಪೇಪರಿಲೋ, ಟಿ.ವಿಲೋ ಅಡ್ವಟೈಸ್ ಮೆಂಟ್ ಮೂಲಕ ಇಂದು ತರಕಾರಿ, ಹಣ್ಣು ಹಂಪಲು ಖರೀದಿಲಿ ಭಾರೀ ರಿಯಾಯಿತಿ ಇದ್ದು ಮಾಲುಗಳಲ್ಲಿ ಹೇಳಿ ಗೊಂತಾದ ಕೂಡಲೇ ಎಂತಾ ಕೆಲಸ ಇದ್ದರುದೇ ಬಿಟ್ಟಿಕ್ಕಿ ಅಲ್ಲಿಗೆ ಹೋಗಿ ಬೇಕಾದ್ದರ, ಬೇಡದ್ದರ ಎಲ್ಲಾ ಕಟ್ಟಿ, ಕಣ್ಣುಮುಚ್ಚಿ ಪೈಸೆಲಿ ಡಿಸ್ಕೌಂಟಿದ್ದಲ್ಲದಾ ಹೇಳಿ ತಂದು ಫ್ರಿಡ್ಜ್ ತುಂಬಿಸುದು ಈಗಾಣವರ ಕ್ರಮ! ಕಮ್ಮಿ ಕ್ರಯಲ್ಲಿ ಸಿಕ್ಕಿತು ಹೇಳಿ ಮಾತ್ರ ತೃಪ್ತಿ ಪಟ್ಟುಕೊಳ್ಳೇಕಷ್ಟೇ ನಾಲ್ಕು ದಿನಂಗಳ ಮಟ್ಟಿಂಗೆ. ಮತ್ತೆ ಮೇಗೆ ಹೇಳಿದಾಂಗೆ ಪೈಸೆಕೊಟ್ಟು ತಂದ ಬೆಶಿಗೆ ಹಾಳಾದ್ದರ...ಕೊಳ...ಒಣ...ಚಿರುಟಿ....ಹೀಂಗೆ ಎಲ್ಲದರ ತಿಂದಿಕ್ಕಿ ಎಂತಾರೂ ಹಿಡಿಶಿಯೊಂಡು ಡಾಕ್ಟರ ಹತ್ತರೆ ಹೋದಪ್ಪಗ ಗೊಂತಾವುತ್ತು  ’ತಿಂದ ಆಹಾರಂದಾಗಿ’ ಆರೋಗ್ಯಲ್ಲಿ ಏರುಪೇರಾಯ್ದು ಹೇಳಿ! ಅಂಬಾಗ ಗ್ರೇಶೊದು ನಾವು ಎಲ್ಲಿಯಾದರೂ ಹೆರ ಹೋಟೇಲಿಲಿ ಉಂಡಿದಾ ಹೇಳಿ! ಮನೇಲಿ ಎಂತ ಮಾಡಿದರೂ ಅದು ಕ್ಲೀನ್ ಹೇಳಿಯೇ ಲೆಕ್ಕ! ಹೀಂಗಿಪ್ಪ ತರಕಾರಿಗಳ ಎಷ್ಟು ಕ್ಲೀನಿಲಿ ಮಾಡಿದರುದೇ ಅಷ್ಟೇ! ಫ್ರಿಡ್ಜಿನೊಳ ಹಾಳಪ್ಪ ತರಕಾರಿಗಳಲ್ಲಿ,ನಾಳಂಗೆ,ನಾಳ್ತಿಂಗೆ ಹೇಳಿ ಮಡುಗಿದ ಆಹಾರಂಗಳಲ್ಲೆಲ್ಲಾ ವೈರಸ್ಸುಗೊ ಹೇಂಗೆ ಬೆಳತ್ತು ಗೊಂತಿದ್ದಾ? ನಾವು ನಾವು ಮಾಡಿಕೊಂಡ ಅನಾಹುತಂಗಳ ಆರ ಮೇಲೂ ಹಾಕುದು ಬೇಡ! ಮತ್ತೆ ಫ್ರಿಡ್ಜಿಲಿ ದಾಸ್ತಾನಿಪ್ಪದು ಬರೀ ತರಕಾರಿಗೊ ಮಾಂತ್ರ ಅಲ್ಲ! ಇರುಳು ಉಂಡ ನಂತರ ಬಾಕಿಯಾದ ಒಂದು ರಜ ಉಳುದ್ದರ ಎಲ್ಲಾ ಹಾಂಗೆ ನಾಳಂಗಾತು ಹೇಳಿ ಮಡುಗುದು, ಮತ್ತೆ ಅದು ಇಪ್ಪದು ಮರತೋ, ಇಲ್ಲೆ ಹೇಳಿಯಾದರೆ ಶನಿವಾರ, ಗುರುವಾರ, ಸೋಮವಾರ, ಮಂಗಳ ಶುಕ್ರವಾರಂಗಳ ಉಪವಾಸದ ಹೇಳೆಲಿ ಹಳತ್ತರ ಉಂಬಲಿಲ್ಲೆ ಹೇಳಿ ಮಡುಗಿದ ಅದೇ ಪದಾರ್ಥಂಗೊ ನಾಳ್ತಿಂಗೆ ಉಳಿವದು! ಮತ್ತೆ ಆ ದಿನ ನೆಂಪಾಗಿ ತಿಂದಪ್ಪಗ ಹೋಟೇಲಿಲಿ ಆಹಾರ ತಿಂದದ್ದಕ್ಕಿಂತ ಡೇಂಜರ್ ಆಗಿರುತ್ತು ಪರಿಣಾಮ! ಮತ್ತೆ ಹೆಳೆ ಹೆರ ಹೋಟೇಲಿ ಉಂಡದ್ದರಿಂದ ಆದಿಕ್ಕು, ಜೆಂಬರಲ್ಲಿ ಉಂಡದರಿಂದ ಆದಿಕ್ಕು ಹೊಟ್ಟೆ ಸರಿ ಇಲ್ಲದ್ದು ಹೇಳಿ!ಪಾಪ ಅಲಿಯಾಣ ಅಡುಗೆ ಭಟ್ಟಕ್ಕೊ ಕೊಳದ ತರಕಾರಿಗಳ ಪದಾರ್ಥ ಎಲ್ಲಾ ಮಾಡಿಯಾಗಲೀ ಬಡಿಸುತ್ತವಿಲ್ಲೆಪ್ಪಾ, ನಾಲ್ಕು ದಿನದ ಹಿಂದಾಣದ್ದಾಗಲೀ ತಿನ್ನುಸುತ್ತವಿಲ್ಲೆಪ್ಪಾ! ಕೆಲವು ಹೋಟೇಲುಗಳಲ್ಲಿ ಎಲ್ಲೋ ಹಿಂದಾಣ ದಿನದ್ದಿಕ್ಕಷ್ಟೇ ಹೊರತು ನಾಲ್ಕು, ಎಂಟು ದಿನಗಳದ್ದರೆಲ್ಲಾ ದಾಸ್ತಾನು ಮಡುಗಿ ಬಡಿಸುತ್ತವಿಲ್ಲೆಪ್ಪಾ ಮನೆಲಿ ಫ್ರಿಡ್ಜಿಲಿ ಮಡುಗಿ ತಿಂಬ ಹಾಂಗೆಲ್ಲಾ!ಎಲ್ಲಿಯೋ ನಾಲ್ಕಾರು ಕಡೆ ನಿರ್ಲಕ್ಷ್ಯಲ್ಲಿ ಮಾಡುಗಷ್ಟೇ.
ಉಪಾಯ ಎಂತ ಮಾಡುಲಕ್ಕು ಹೇಳಿರೆ ಹಾಂಗೆ ಆಫರಿಲಿ ಕಮ್ಮಿ ಪೈಸೆಗೆ ತರಕಾರಿ ಸಿಕ್ಕಿತು ಹೇಳಿಯಾದರುದೇ ನಾಲ್ಕು ದಿನಕ್ಕೆ ಬೇಕಾದಷ್ಟು ಮಾಂತ್ರ ತನ್ನಿ.ಆಫರಿಲಿ ಸಿಕ್ಕುವ ಎಲ್ಲಾ ವಸ್ತುಗೊ ಲಾಯ್ಕಿರುತ್ತಿಲ್ಲೆ.ಹೆಚ್ಚು ದಿನ ಒಳಿತ್ತೂ ಇಲ್ಲೆ.ಮನೆ ಹತ್ತರೆ ರಜಾ ಒಂದು ನಾಲ್ಕಡಿ ಜಾಗೆ ಇದ್ದರೂ ಸಾಕು ಒಂದು ಬಸಳೆ ಬುಡವನ್ನೋ,ತೊಂಡೆ ಬುಡವನ್ನೋ ಇಂದೇ ನಟ್ಟು ಅದಕ್ಕೆ ಬೇರೆಂತ ಗೊಬ್ಬರ ಬೇಡ-ತರಕಾರಿ ಹಣ್ಣುಗಳ ಚೋಲಿ, ಅಕ್ಕಿ ತೊಳದ ನೀರು, ಅಶನಂದ ಬಗ್ಗಿಸಿದ ಗಂಜಿ, ತೆಳಿ, ಮತ್ತೆಂತಾರೂ ಫ್ರಿಡ್ಜಿಲಿ ಸಂಪೂರ್ಣ ಕೊಳದ ತರಕಾರಿ, ಹಣ್ಣುಗಳು, ಒಳುದ ಹಿಂದಾಣ ದಿನದ ಅಥವಾ ಅದಕ್ಕಿಂತಲೂ ಹೆಚ್ಚು ದಿನ ಆದ ಆಹಾರದೇ ಅದಕ್ಕೆ ಆಹಾರ ಅಕ್ಕು!!ಅದೆಲ್ಲಾ ಅದಕ್ಕೆ ಫುಡ್ ಪಾಯಿಸನ್ ಅಪ್ಪ ಕ್ರಮ ಇಲ್ಲೆ! ಕೊಳದಷ್ಟೂ ಅದಕ್ಕೆ ಒಳ್ಳೆಯದೇ! ಆದರೆ ಫಲವಾಗಿ ನಮಗೆ ಸಿಕ್ಕುವ ತರಕಾರಿ ತಾಜಾ, ರಾಸಾಯನಿಕದ ಹೊರತಾಗಿರುತ್ತು. ವಾರಲ್ಲಿ ಒಂದೆರಡು ದಿನವಾದರೂ ನಾವು ಬೆಳದ ತರಕಾರಿಯನ್ನೇ ತಿಂಬಲಕ್ಕು.ಹೀಂಗೇ ನಾವು ಬೆಳದ ತರಕಾರಿ ಒಂದು ನಾಲ್ಕು ಸಲ ತಿಂದಪ್ಪಗ ಛೇ ರಜಾ ಹೆಚ್ಚು ಜಾಗೆ ಇದ್ದಿದ್ದರೆ ಇನ್ನುದೇ ಬೆಳಕೊಂಬಲಾವುತ್ತಿತ್ತು ಹೇಳಿ ಅನ್ನಿಸದ್ದೇ ಇರ. ಅಂಬಗಲೂ ಉಪಾಯ ಇದ್ದು! ಎಂಟು, ಹತ್ತು ಗೋಣಿ ಚೀಲಂಗಳಲ್ಲಿ ಮಣ್ಣು ತುಂಬಿಸಿದೇ ಮನೇಲಿ ಸಿಕ್ಕುವ ತರಕಾರಿ, ಹಣ್ಣುಗಳ ಚೋಲಿ- ಅಡುಗೆ ಮನೆಯ ತ್ಯಾಜ್ಯಂದ, ಕಾಟುಸೊಪ್ಪುಗಳಿಂದ ಸುಲಾಭಲ್ಲಿ ತರಕಾರಿ ಬೆಳಕೊಂಬಲಕ್ಕು. ಇತ್ತೀಚೆಗಂತೂ ಮನೆಯ ತಾರಸಿಲೆಲ್ಲಾ ವಾಟರ್ ಪ್ರೂಫ್ ಟೆರೇಸ್ ಮಾಡಿಯೊಂಡು ಮನೆಗೆ ಬೇಕಾದ ನೆಟ್ಟಿಕ್ಕಾಯಿಯ ಬೆಳಕೊಂಬ ವ್ಯವಸ್ಥೆ ಶುರುವಾಯಿದು. ಉದಾಸೀನ ಬಿಟ್ಟು ಹೀಂಗೆಲ್ಲಾ ಬೆಳದುಕೊಂಡರೆ ದೇಹಕ್ಕೆ ಬೇಕಾದ ವ್ಯಾಯಾಮ ತನ್ನಿಂದ ತಾನೇ ಸಿಕ್ಕುತ್ತು, ಹಾಂಗೇ ರಾಸಾಯನಿಕ ರಹಿತವಾದ ತಾಜಾ ತರಕಾರಿಗಳ ತಿಂದು ನಮ್ಮ ನಮ್ಮ ಆರೋಗ್ಯ, ಆಯುಷ್ಯವನ್ನು ವೃದ್ಧಿಸಿಕೊಂಬಲಕ್ಕು.

ತ್ರಿವೇಣಿ ವಿ ಬೀಡುಬೈಲು
ಮಂಗಳೂರು