Thursday, March 19, 2015

"ಲಚ್ಚಿ"- ನನ್ನ ಕಥಾಸಂಕಲನದ ಒಂದು ಸಣ್ಣ ಕಥೆ. ಓದುಗರು ಹಲವರು "ಹೃದಯಸ್ಪರ್ಶಿ ಕಥೆ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ ಸಣ್ಣ ಕಥೆಯೇ ಈ "ಲಚ್ಚಿ".

ಲಚ್ಚಿ
     ಲಚ್ಚಿ ಹದಿಮೂರರ ಬಾಲೆ. ಲಕ್ಷ್ಮಿ ಎಂದಿದ್ದ ಅವಳ ಹೆಸರನ್ನು ’ಲಚ್ಚಿ’ ಎಂದೇ ಸಂಬೋಧಿಸುತ್ತಿದ್ದರು. ಆಕೆಗಿರುವ ಆಸೆಗಳೋ ಬೆಟ್ಟದಷ್ಟು. ಆ ಬೆಟ್ಟ ದಿನ ದಿನವೂ ಬೆಳೆಯುತ್ತಿದೆ. ಆದರೆ ಅವುಗಳನ್ನೆಲ್ಲಾ ಪೂರೈಸಿಕೊಳ್ಳಲು ಆಕೆಯ ಪರಿಸ್ಥಿತಿಯೇ ಬಿಡುವುದಿಲ್ಲ. ಸಿರಿವಂತರ ಆಸೆಗಳು ಎಷ್ಟೇ ದೊಡ್ಡದಿದ್ದರೂ ಹಣದ ಮುಖಾಂತರ ನಡೆಯುತ್ತವೆ. ಆದರೆ ಬಡವರ, ಅದೂ ಲಚ್ಚಿಯಂತವರ ಆಸೆಗಳು ಆಸೆಗಳಾಗಿಯೇ ಉಳಿಯುತ್ತವೆ. ಕೆಲವೊಮ್ಮೆ ನಿರಾಸೆಯಾಗುತ್ತದೆ. ಮತ್ತೆ ಕೆಲವೊಮ್ಮೆ ಅವಕಾಶ ಸಿಕ್ಕರೂ ವಂಚಿತವಾಗುತ್ತವೆ. ದೇವರನ್ನು ಎಷ್ಟು ಮೊರೆ ಹೊಕ್ಕರೂ ಆತ ಪೂರೈಸದೇ ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದಾನೆಯೇ ಎನ್ನಿಸುತ್ತದೆ ಲಚ್ಚಿಗೆ. ಲಚ್ಚಿಯ ಅಪ್ಪ ಅಮ್ಮನಿಗೆ ಬರುವ ಕೂಲಿ ಸಂಬಳ ಊಟಕ್ಕೇ ಸರಿಯಾಗಿ ಸಾಕಾಗುತ್ತಿರಲಿಲ್ಲ. ಲಚ್ಚಿಗೆ ಆರು ವರ್ಷವಾದಾಗ ಹಳ್ಳಿಯಲ್ಲೇ ಸರಕಾರಿ ಶಾಲೆಗೆ ಸೇರಿಸಿದ್ದರು. ಅವಳಿಗೆ ಒಂಭತ್ತು ವರ್ಷ ತುಂಬುವಾಗ ಅವಳಮ್ಮ ಮತ್ತೊಂದು ಶಿಶುವನ್ನು ಹಡೆದಳು. ಅಲ್ಲಿಗೇ ಮುಗಿಯಿತು ಲಚ್ಚಿಯ ವಿದ್ಯಾಭ್ಯಾಸ. ಮಗುವನ್ನು ಆಕೆಯ ಮಡಿಲಲ್ಲಿ ಹಾಕಿ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ಬಾಲೆಯಾಗಿ ಬಾಲ್ಯದಾಟಗಳನ್ನು ಆಡಬೇಕಿದ್ದ, ಶಾಲೆಗೆ ಹೋಗಿ ಕಲಿಯಬೇಕಿದ್ದ ಲಚ್ಚಿಯ ಪಾಲಿಗೆ ಏನೂ ಇಲ್ಲದಾಯಿತು. ಶಾಲೆಯಲ್ಲಿ ಟೀಚರು, "ಲಚ್ಚೀ, ನೀನು ಹೀಗೇ ಚೆನ್ನಾಗಿ ಓದಿ ಬರ‍್ದೂ ಮಾಡಿದ್ರೆ ಮುಂದೊಂದು ದಿನ ದೊಡ್ಡ ಉದ್ಯೋಗದಲ್ಲಿರ‍್ತೀಯ" ಎಂದದ್ದು ನೆನಪಾಗುತ್ತಿರುತ್ತದೆ. ಅಲ್ಲದೇ ಟೀಚರು ಇವಳ ಪುಸ್ತಕವನ್ನೆತ್ತಿ ಹಿಡಿದು ಬೇರೆ ಮಕ್ಕಳಿಗೆ ತೋರಿಸುತ್ತಾ, "ನೋಡಿ ಮಕ್ಕಳೇ ಎಷ್ಟೊಂದು ಉರುಟಾಗಿ, ತಪ್ಪಿಲ್ಲದೇ ಬರೆದಿದ್ದಾಳೆ ಲಚ್ಚಿ, ನೀವೂ ಕೂಡಾ ಹೀಗೇ ಜಾಣರಾಗಬೇಕು" ಹೇಳುತ್ತಾ ತನ್ನ ಬೆನ್ನನ್ನು ತಟ್ಟುತ್ತಿದ್ದದ್ದು ನೆನಪಾಗಿ ಕಣ್ಣೀರಿಳಿದು ಬರುತ್ತದೆ. ’ನಮ್ಮ ಬಡವರ ಬದುಕೇ ಹೀಗೆ. ಯಾಕಾದರೂ ಆ ದೇವರು ಬಡವರು, ಶ್ರೀಮಂತರೆಂಬ ಭೇದ ಮಾಡಿದನೋ’ ಎಂದು ನೆನೆಸಿ ನೆನೆಸಿ ಕೊರಗುತ್ತಾಳೆ. ಮತ್ತೆರಡು ವರ್ಷ ಕಳೆದು ಲಚ್ಚಿಯ ಅಮ್ಮ ಮತ್ತೊಂದು ಮಗುವನ್ನು ಹಡೆದಳು. ಈಗ ಲಚ್ಚಿಯ ಪಾಲಿಗೆ ಎರಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ. ಏನಾದ್ರೂ ಹೆಚ್ಚು ಕಡಿಮೆ ಆದರೂ ತಾಯಿ, ತಂದೆಯರಿಂದ ಬೈಗುಳ ಇಲ್ಲವೇ ಏಟು ತಿನ್ನಬೇಕಾಗಿತ್ತು. ಒಂದು ಸಲವಂತೂ ತಂದೆ ಕೊಟ್ಟ ಪೆಟ್ಟಿನಿಂದಾಗಿ ತಲೆ ತಿರುಗಿ ಬಿದ್ದಿದ್ದಳು ಲಚ್ಚಿ. ಬೆಳೆಯುತ್ತಿರುವ ಸಂಸಾರದ ಅಗತ್ಯಗಳನ್ನು ಪೂರೈಸುವಷ್ಟು ಲಚ್ಚಿಯ ಅಪ್ಪ ಅಮ್ಮನ ದುಡಿತದಿಂದ ಬರುತ್ತಿದ್ದ ಹಣ ಸಾಕಾಗುತ್ತಿರಲಿಲ್ಲ.
     ಒಂದು ದಿನ ಊರಿನ ಧಣಿ ರಾಮೇಗೌಡರು ಬಂದು, "ನಿನ್ ಲಚ್ಚೀನ ನಮ್ಮನೆ ಕೆಲ್ಸಕ್ಕೆ ಕಳ್ಸು ಲಿಂಗಪ್ಪಾ, ಸುಮ್ನೆ ಮನೇಲೇ ಯಾಕೆ ಕೊಳಿತಾ ಬಿದ್ದಿರ‍್ಬೇಕು? ತಿಂಗ್ಳಿಗೆ ನೂರೈವತ್ತು ರೂಪಾಯಿ ಕೂಲಿ ಕೊಡ್ತೀನಿ" ಎಂದಾಗ ಲಚ್ಚಿಯ ಅಪ್ಪನ ಮುಖವರಳಿತು. ಉಳಿದಿಬ್ಬರು ಮಕ್ಕಳನ್ನು ಕೆಲಸಕ್ಕೆ ಹೋಗುವಾಗ ತಮ್ಮ ಜೊತೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿ ಗಂಡ ಹೆಂಡತಿ ಲಚ್ಚಿಯನ್ನು ರಾಮೇಗೌಡರಲ್ಲಿಗೆ ಕೆಲಸಕ್ಕೆ ಸೇರಿಸಿದರು.
"ಇಕೋ ಐವತ್ತು ರೂಪಾಯಿ ಅಡ್ವಾನ್ಸ್" ಎನ್ನುತ್ತಾ ಲಚ್ಚಿಯ ಅಪ್ಪನ ಕೈಗೆ ಹಣವಿತ್ತರು ರಾಮೇಗೌಡರು..
ಗೌಡರನ್ನು ಲಚ್ಚಿ ಹಿಂಬಾಲಿಸಿದಳು. ಅವನ ಮನೆಯೋ ದೊಡ್ಡ ಬಂಗಲೆ. ಎರಡೆರಡು ಕಾರುಗಳು. ತನ್ನಷ್ಟೇ ಪ್ರಾಯದ ಮಗಳೊಬ್ಬಳು, ನಾಲ್ಕು ವರ್ಷದ ತಮ್ಮ ಆಕೆಗೆ. ಮೈ ಕೈ ತುಂಬಿ ಉರುಟುರುಟಾಗಿದ್ದರು ಆ ಮಕ್ಕಳು. ಕೆಲಸಕ್ಕೆ ಸೇರಿ ನಾಲ್ಕೈದು ದಿನಗಳಲ್ಲಿ ಲಚ್ಚಿ ಮಕ್ಕಳಿಗೆ ಅಚ್ಚುಮೆಚ್ಚಿನವಳಾದಳು.
ಲಚ್ಚಿ ಮನೆಯ ಎಲ್ಲಾ ವಸ್ತುಗಳನ್ನು ಆಸೆಯ ಕಣ್ಣುಗಳಿಂದ ನೋಡುತ್ತಿದ್ದಳು. ’ನಮಗೀಭಾಗ್ಯವಿಲ್ಲವಲ್ಲಾ’ ಎಂದು ಮನಸ್ಸಿನಲ್ಲೇ ಅತ್ತಳು.
ಗೌಡರ ಬೆಡ್ ರೂಮಿನಲ್ಲೇ ಡ್ರೆಸಿಂಗೆ ಟೇಬಲ್ ಇತ್ತು. ರೂಮನ್ನು ಗುಡಿಸಿ ಸಾರಿಸಲು ಹೋದಾಗ ಡ್ರೆಸಿಂಗ್ ಟೇಬಲ್ ಮೇಲಿದ್ದ ಶೃಂಗಾರ ಸಾಧನಗಳನ್ನು ಒಪ್ಪ ಓರಣವಾಗಿರಿಸುವ ನೆಪದಲ್ಲಿ ಮುಟ್ಟಿ ನೋಡಿ, ಅದರ ಪರಿಮಳಗಳನ್ನು ಅನುಭವಿಸಿ ಇದ್ದಲ್ಲೇ ಇಟ್ಟುಬಿಡುತ್ತಿದ್ದಳು. ಹ್ಯಾಂಗರುಗಳಲ್ಲಿ ಹಾಕಿದ ಸಾವಿರಾರು ರೂಪಾಯಿ ಬೆಲೆಬಾಳುವ ತನ್ನ ಓರಗೆಯ ಗೌಡರ ಮಗಳು ರೂಪಾಳ ಉಡುಪುಗಳನ್ನು ನೋಡುತ್ತಿದ್ದಳು ಲಚ್ಚಿ. ಗೌಡರ ಹೆಂಡತಿ, ಮಕ್ಕಳು ನಿಜವಾಗಿಯೂ ಅದೃಷ್ಠವಂತರು. ನನಗಾದರೂ ಯಾಕೋ ’ಲಕ್ಷ್ಮಿ’ ಎಂದು ಹೆಸರಿಟ್ಟರೋ. ಆ ಹೆಸರು ಹಣವಂತರಿಗೇ ಸೈ ಎನಿಸುತ್ತಿತ್ತವಳಿಗೆ. ಅವಳು ಗೌಡರ ರೂಮನ್ನು ಒತ್ತರೆ ಮಾಡುವಾಗ ಹೆಚ್ಚಾಗಿ ಗೌಡರ ಹೆಂಡತಿ ಸ್ನಾನ ಮುಗಿಸಿ ಬಂದು, ಬಿಳುಪಿನ ಕ್ರೀಮನ್ನು ಮುಖಕ್ಕೆ ಲೇಪಿಸುತ್ತಿದ್ದಳು. ಆಹಾ....ಎಂತಾ ಸುವಾಸನೆ. ಅವರ ಚರ್ಮವೂ ಅಷ್ಟೇ ನುಣುಪು. ಎಳೆಯ ಕಂಗಳಲ್ಲಿ ಹೃದಯಾಂತರಾಳದ ಆಸೆ ಹೊರಹೊಮ್ಮಿತು. ತಾನೂ ಆ ವಸ್ತುವನ್ನು ಮುಖಕ್ಕೆ ಲೇಪಿಸಿದರೆ ಅಮ್ಮನವರಂತಹ ಚರ್ಮ ಪಡೆಯಬಹುದಲ್ಲವೇ ಎಂದುಕೊಳ್ಳುತ್ತಾ ಕನಸಿನ ಲೋಕದಲ್ಲಿ ತೇಲಿ ಹೋಗುತ್ತಿದ್ದಳು. ಗೌಡರ ಮಗಳು ರೂಪಳ ಉಡುಗೆ, ಗೌಡರ ಹೆಂಡತಿಯ ಕ್ರೀಂ, ಪೌಡರ್, ಲಿಫ್ಸ್‍ಟಿಕ್, ನೈಲ್ ಪಾಲಿಷ್‍ಗಳೆಲ್ಲವನ್ನೂ ಆಕೆ ತನ್ನ ಕನಸಿನಲ್ಲಿ ಅನುಭವಿಸುತ್ತಿದ್ದಳು.
"ಏನೇ ಗರ ಬಡಿದವಳ ಹಾಗೆ ನಿಂತುಬಿಟ್ಟೆ. ಕೆಲಸ ಯಾರು ನಿನ್ನಪ್ಪ ಬಂದು ಮಾಡ್ತಾನಾ?" ಎಂದು ಗೌಡರಮ್ಮ ಗದರುತ್ತಿದ್ದಳು.
’ಕನಸು ಕಾಣಲೂ ಕೂಡಾ ನನಗೆ ಸ್ವಾತಂತ್ರ್ಯವಿಲ್ಲವೇ’ ಎಂದು ಹಲುಬುತ್ತಿದ್ದಳು ಲಚ್ಚಿ.
ಮನೆ ಗುಡಿಸಿ ಒರೆಸಿ, ಪಾತ್ರೆಗಳನ್ನು ತೊಳೆದು, ಬಟ್ಟೆಗಳನ್ನು ಒಗೆಯುವ ಕೆಲಸ ಲಚ್ಚಿಯದ್ದು. ಬಟ್ಟೆ ಒಗೆಯುವಾಗ ರೂಪಾಳ ಹಾಗೂ ಗೌಡರಮ್ಮನ ಬಟ್ಟೆಗಳ ಸೌಂದರ್ಯವನ್ನು ಸವಿಯುತ್ತಾ ಮತ್ತೆ ಪುನ: ಕನಸಿನ ಲೋಕಕ್ಕೆ ಜಾರುತ್ತಿದ್ದಳು ಲಚ್ಚಿ.
’ಅಲ್ಲಾ ಈ ಪಾಟಿ ಬಟ್ಟೆಗಳಿದ್ದರೂ ಒಂದನ್ನಾದರೂ ಪ್ರೀತಿಯಿಂದ, "ತೆಗೆದುಕೋ ಲಚ್ಚೀ, ಇದು ನಿನಗೆ, ನೀನು ಹಾಕಿಕೋ, ರೂಪಾಳ ಪ್ರಾಯ ನಿನ್ನ ಪ್ರಾಯ ಒಂದೇ ಆದ್ದರಿಂದ ನಿನಗಿದು ಸರಿಯಾಗಬಹುದು" ಎಂದು ಅಮ್ಮನವರು ಕೊಟ್ಟಿದ್ದೇ ಇಲ್ಲ...ಕೆಲಸಕ್ಕೆ ಸೇರಿ ತಿಂಗಳು ಆರಾಯಿತು...ಹೊಸ ಬಟ್ಟೆ ಹೋಗಲಿ, ಹಾಕಿ ಹಳೆಯದಾದದ್ದನ್ನು ಕೊಡಬಹುದಲ್ಲವೇ? ಅದನ್ನು ಕೂಡಾ ಹಾಕಲು ತನಗೆ ಯೋಗ್ಯತೆ ಇಲ್ಲವೇ? ಎಂದು ಚಿಂತಿಸಿದಳು. ’ಲಚ್ಚಿ ಬಡವಳು, ತನ್ನ ಮಗಳ ಓರಗೆಯವಳು, ಅವಳೂ ಮನುಷ್ಯಳು, ಅವಳಿಗೂ ಆಸೆ ಆಕಾಂಕ್ಷೆಗಳಿರುತ್ತವೆ’ ಎಂಬುದನ್ನೇಕೆ ಈ ಅಮ್ಮ ತಿಳಿಯೋದಿಲ್ಲ?! ಎಂದಚ್ಚರಿಯೆನಿಸಿತವಳಿಗೆ.

ರೂಪಾ ಮತ್ತವಳ ತಮ್ಮ ರಘುವಿಗೆ ಶಾಲೆಗೆ ರಜೆ ಎಂದರೆ ಲಚ್ಚಿಗೆ ಎಲ್ಲಿಲ್ಲದ ಸಂತೋಷ. ಅವರಿಬ್ಬರೂ ಆಟವಾಡುವ ಆಟಿಕೆಗಳೋ ಒಂದಕ್ಕಿಂತ ಇನ್ನೊಂದು ಮಿಗಿಲು. ಹತ್ತಿಯಂತಹ ಬೊಂಬೆಯನ್ನು ಮುಟ್ಟಿದಾಕ್ಷಣ ಅದು ಅಳುತ್ತದೆ ನಂತರ ಅದರ ಬಾಯಿಗೆ ಕೀಲಿಕೈ ಹಾಕಿದರೆ ಅಳುವುದನ್ನು ನಿಲ್ಲಿಸುತ್ತದೆ! ಸೋಜಿಗವೆನಿಸಿತವಳಿಗೆ. ತನ್ನ ಪುಟ್ಟ ತಮ್ಮ ತಂಗಿಯರಿಗೆ ನೋಡಿದರೆ ಸಂತೋಷವಾಗಬಹುದು ಎಂದುಕೊಳ್ಳುತ್ತಾಳೆ...ಹಾಗಂತ ಅವರನ್ನೆಲ್ಲಾ ಈ ಮನೆಗೆ ಕರೆದುಕೊಂಡು ಬರಲೂ ಆಗುವುದಿಲ್ಲ....ಈ ಮನೆಯಲ್ಲಿ ಅದೇ ರೀತಿ ಮೂರು ಬೊಂಬೆಗಳಿವೆ. ಒಂದನ್ನಾದರೂ ಗೌಡರಮ್ಮ ಕೊಟ್ಟಿದ್ದರೆ ನನ್ನ ತಮ್ಮ ತಂಗಿಯರಾಡಿಕೊಳ್ಳುತ್ತಿದ್ದರು. ’ಕೇಳೋಣವೇ’ ಎಂದುಕೊಳ್ಳುತ್ತಾಳೆ. ಆದರೆ ಗೌಡರಮ್ಮನ  ಆ ಗಟ್ಟಿ ಸ್ವರವನ್ನು ಆಲೋಚಿಸುವಾಗಲೇ ಅವಳಿಗೆ ಕಾಲಿನಿಂದ ತಲೆಯವರೆಗೆ ನಡುಕ ಹತ್ತುತ್ತದೆ. ಕಳೆದ ವರ್ಷ ಜಾತ್ರೆಗೆಂದು ಅಪ್ಪನೊಂದಿಗೆ  ಹೋಗಿದ್ದ ಲಚ್ಚಿ ತಮ್ಮ, ತಂಗಿಯರಿಗೆಂದು ಒಂದು ಪ್ಲಾಸ್ಟಿಕ್ ಗಿಳಿ ಮತ್ತೊಂದು ಕಾರನ್ನು ಖರೀದಿಸಿದ್ದಳು. ಅದು ಮನೆ ಸೇರಿ ಮಕ್ಕಳ ಕೈಯಲ್ಲಿ ಕೊಟ್ಟು ನಿಮಿಷದಲ್ಲೇ ಹಾಳಾಗಿದ್ದವು. ಒಬ್ಬರಲ್ಲಿ ಒಂದಕ್ಕಿಂತ ಹೆಚ್ಚು ವಸ್ತುಗಳಿದ್ದರೆ ಅದನ್ನು ಹಂಚುವಂತಿರಬೇಕಿತ್ತು. ಆಗ ಬಡವರಿಗೂ ತೃಪ್ತಿ ಇರುತ್ತಿತ್ತು ಎಂದೆಲ್ಲಾ ಆಲೋಚಿಸುತ್ತಿದ್ದಳು ಲಚ್ಚಿ. ಇರಲಿ, ಒಂದಲ್ಲಾ ಒಂದು ದಿನ ಗೌಡರಮ್ಮ ನನಗಾಗಿ ಏನನ್ನಾದರೂ ಕೊಟ್ಟಾಳು, ಇನ್ನೂ ಒಂದು ವರ್ಷವಾಗಲಿಲ್ಲವಲ್ಲಾ ಕೆಲಸಕ್ಕೆ ಸೇರಿ ಎಂದುಕೊಂಡಳು. ದಿನಗಳುರುಳಿದವು, ತಿಂಗಳುಗಳು ಕಳೆದವು, ವರ್ಷವೂ ಕಳೆಯಿತು. ಊಹೂಂ ಗೌಡರಮ್ಮನಿಗೆ ಕೊಟ್ಟು ಅಭ್ಯಾಸವಿಲ್ಲವೆಂದೆನಿಸಿ, ಇನ್ನು ಎಟುಕದ್ದಕ್ಕಾಗಿ ಹಂಬಲಿಸಿ ಪ್ರಯೋಜನವಿಲ್ಲವೆಂದೆನಿಸಿತು ಲಚ್ಚಿಗೆ. ಹೋಗಲಿ, ತಾನು ದುಡಿದ ಹಣವನ್ನು ಆಕೆ ಮುಟ್ಟಿ ಸಂತೋಷಪಡುವಂತಿರಲಿಲ್ಲ. ತಿಂಗಳಾಗುವುದೇ ತಡ, ಆಕೆಯ ತಂದೆ ಗೌಡರಿಂದ ನೂರೈವತ್ತು ರೂಪಾಯಿಗಳನ್ನು ಹಲ್ಲುಕಿಸಿದು ಪಡೆದುಕೊಂಡು ಹೋಗಿ ಖರ್ಚು ಮಾಡುತ್ತಿದ್ದನು. ಇದರಲ್ಲಿ ಕೆಲವು ಸಲ ಸಾರಾಯಿ ಖರ್ಚೂ ಸೇರಿರುತ್ತಿತ್ತು. ಲಚ್ಚಿಗೆ ತಾನು ಕಷ್ಟಪಟ್ಟು ದುಡಿದ ಹಣವನ್ನು ಅಪ್ಪ ದುಂದುವೆಚ್ಚ ಮಾಡುತ್ತಿದ್ದಾನಲ್ಲಾ ಎಂದು ಕರುಳು ಚುರುಕ್ ಅನ್ನಿಸುತ್ತಿತ್ತು.

     ಮುಂದೊಂದು ದಿನ ಗೌಡರಲ್ಲಿಗೆ ಆಕೆಯ ತಂದೆ ಸಂಬಳ ಪಡೆಯಲು ಬಂದಾಗ, "ಗೌಡೇ ನನ್ ಮಗ್ಳು ಲಚ್ಚಿ ನಿಮ್ಮನೆ ಕೆಲ್ಸಕ್ಕೆ ಸೇರಿ ಒಂದೊರ್ಷ ಆತು. ಈ ವರ್ಷದಿಂದ ಆಕಿ ಸಂಬ್ಳ ಜಾಸ್ತಿ ಮಾಡ್ರೀ" ಎಂದಾಗ "ಹೂಂ ಸರಿ ಸರಿ ಇನ್ಮ್ಯಾಕೆ ಇನ್ನೂರು ರೂಪಾಯಿ ಕೊಡ್ತೀನಿ ಸರೀನಾ" ಎಂದರು ಗೌಡರು. ಈ ಮಾತುಗಳನ್ನು ಕೇಳಿಸಿಕೊಂಡ ಲಚ್ಚಿಗೆ ಸಂತೋಷವಾಯಿತು ಹಾಗೆಯೇ ಒಂದು ನಿರ್ಧಾರಕ್ಕೂ ಬಂದಳವಳು. ಗೌಡರ ಮನೆಯ ಕೆಲಸ ಮುಗಿಸಿ ಸೀದಾ ಮನೆಗೆ ಬಂದವಳೇ ರಂಪ ಮಾಡಿದಳು.
"ಅಮ್ಮಾ ನಾಳಿಂದ ನಾನು ಗೌಡ್ರ ಮನೀಗೆ ಕೆಲ್ಸಕೋಗಾಕಿಲ್ಲ."
"ಯಾಕೇ? ಏನಾಯ್ತೇ ನಿನ್ಗೆ?"
"ಏನೂ ಆಗಿಲ್ಲ, ಅಪ್ಪ ಇನ್ಮುಂದೆ ಗೌಡ್ರ ಮನೀಗೆ ಬರಬಾರ‍್ದು. ನನ್ ಸಂಬ್ಳಾನ ನಾನೇ ತಗೊಂತೀನಿ. ನನ್ಗೂ ಆಸೆಗಳವೆ. ಕೈನಾಗೆ ಒಸಿ ಹಣ ಮಾಡ್ಕೊಂಡು ನನ್ಗೇನೇನೆಲ್ಲಾ ತಗೋಬೇಕು."
ಮಗಳ ರಂಪಾಟ ನೋಡಿದ ತಂದೆ ತಾಯಿ," ಸರಿ ಕಣಮ್ಮ, ನಿನ್ ದುಡ್ಡು ನಮ್ಗೆ ಬ್ಯಾಡ, ಇನ್ ಮುಂದ ನಿನ್ ಸಂಬ್ಳಾನ ನೀನೇ ತಗೊಂಡು ಇಟ್ಕೋ, ಜೋಪಾನವಾಗಿಟ್ಕೊಮ್ಮಾ"  ಎಂದು ಸಮಾಧಾನ ಮಾಡಿದರು.
ಸಂತೋಷದಲ್ಲಿ ಕುಣಿದು ಕುಪ್ಪಳಿಸುವಂತಾಯಿತು ಲಚ್ಚಿಗೆ. ಓಡಿ ಹೋಗಿ ಒಂದು ತುಂಡು ಪೇಪರಿನಲ್ಲಿ ತನಗೇನೇನು ಬೇಕು ಎಂಬುದನ್ನೆಲ್ಲಾ ತನಗೆ ಬರುತ್ತಿದ್ದ ಕನ್ನಡದಲ್ಲಿ ಬರೆದಿಟ್ಟಳು.
ಕ್ರೀಮ್, ಪೌಡರ್, ಸೆಂಟು, ಬಗೆಬಗೆಯ ಕ್ಲಿಪ್ಪುಗಳು, ಪರಿಮಳದ ಸಾಬೂನು, ತಲೆ ಸ್ನಾನದ ಶಾಂಪೂ, ತಮ್ಮ ತಂಗಿಯರಿಗೆ ಗೌಡರ ಮನೇಲಿರುವ ತರಹದ ಮೃದುವಾದ ಬೊಂಬೆ, ಸಾಧ್ಯಾವಾದ್ರೆ ತನಗೊಂದು ಗೌಡರ ಮಗಳು ಧರಿಸುವ ಅಂಗಿಯ ಹಾಗಿರುವಂತಹ ಚೆಂದದ ಅಂಗಿಯನ್ನು ಕೂಡಾ.
                 ........
ಗೌಡರು ತಿಂಗಳು ತಿಂಗಳು ಈಗ ಲಚ್ಚಿಯ ಕೈಯಲ್ಲೇ ತಿಂಗಳ ಸಂಬಳವನ್ನು ಕೊಡುತ್ತಿದ್ದರು. ಲಚ್ಚಿ ಅದನ್ನು ಭದ್ರವಾಗಿ ಹಿಡಿದು ತಂದು, ತನ್ನ ಬಟ್ಟೆಬರೆಗಳನ್ನಿಡಲು ಅಪ್ಪ ಕೊಟ್ಟಿದ್ದ ಹಳೇ ಮುರುಕು ಕಬ್ಬಿಣದ ಪೆಟ್ಟಿಗೆಯಲ್ಲಿಡುತ್ತಿದ್ದಳು. ಒಂದು ವರ್ಷ ಕಳೆಯಿತು. ಲಚ್ಚಿಯ ಪೆಟ್ಟಿಗೆಯಲ್ಲೀಗ ಎರಡು ಸಾವಿರದ ನಾಲ್ಕುನೂರು ರೂಪಾಯಿಗಳು! ಲಚ್ಚಿ ಈ ಹಣವನ್ನು ನೋಡಿ ತನ್ನನ್ನು ತಾನೇ ಮರೆತಳು. ಎಲ್ಲಾ ಹಣವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟಳು. ಯಾವತ್ತಾದರೂ ಅಪ್ಪ ಪೇಟೆಗೆ ಹೋಗುವಾಗ ತಾನೂ ಬರುತ್ತೇನೆ ಎಂದಿದ್ದಳು. ಪ್ರತೀ ದಿನ ಹಣವನ್ನು ಎಣಿಸಿ ನೋಡಿ ಈ ಹಣದಲ್ಲಿ ತಾನಿಷ್ಟಪಟ್ಟ ಎಲ್ಲಾ ವಸ್ತುಗಳೂ ಸಿಗಬಹುದೆಂದುಕೊಂಡಳು.
"ದೊಡ್ಡ ದೊಡ್ಡ ಅಂಗಡಿಗಳಿಗೇ ಹೋಗಬೇಕು, ಮಾರ್ಗದ ಬದಿಯಲ್ಲಿ ಸಿಗುವುದೆಲ್ಲ ಒಳ್ಳೆದಿರಲ್ಲ" ಎಂದು ಗೌಡರಮ್ಮ ಅವರ ಮನೆಗೆ ಬಂದಿದ್ದ ಅವರ ಗೆಳತಿಯಲ್ಲಿ ಹೇಳಿದ ನೆನಪಿತ್ತವಳಿಗೆ.
ಒಂದು ದಿನ ಲಚ್ಚಿಯ ಅಪ್ಪ ಲಚ್ಚಿಯನ್ನು ಪೇಟೆಗೆ ಕರೆದುಕೊಂಡು ಹೋಗುವ ವಿಚಾರವನ್ನು ಹೇಳಿದ. ಆಕೆಗೋ ಸ್ವರ್ಗಕ್ಕೆ ಮೂರೇ ಗೇಣು. ಇದ್ದುದರಲ್ಲಿ ಒಳ್ಳೆಯದೆಂದೆನಿಸಿದ ಅಂಗಿ ತೊಟ್ಟು ಹಣವಿದ್ದ ಚೀಲವನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡು ಅಪ್ಪನೊಂದಿಗೆ ಹೊರಟಳು. ಬಸ್ಸನ್ನೇರಿ ಪಟ್ಟಣಕ್ಕೆ ಹೋಗುವಾಗ ವಿಮಾನದಲ್ಲಿ ಕುಳಿತು ಹಾರಿ ಹೋಗುತ್ತಿರುವ ಅನುಭವ. ದಾರಿಯಲ್ಲಿ ಅಪ್ಪ ಕೇಳಿದ, "ಲಚ್ಚೀ...ಏನೇನೆಲ್ಲಾ ತಗೀಬೇಕೂಂತಿದ್ದೀಯ ಕಣೇ?"
ದೊಡ್ಡ ಲಿಸ್ಟನ್ನೇ ಅಪ್ಪನಿಗೋದಿ ಹೇಳಿದಳು ಲಚ್ಚಿ. ಅಷ್ಟರಲ್ಲಿ ಪೇಟೆ ಬಂದಿತು.  ಲಚ್ಚಿ ಹಣದ ಕಟ್ಟು ಭದ್ರವಾಗಿದೆಯೇ ಎಂದು ಮತ್ತೆ ಮತ್ತೆ ಖಚಿತಪಡಿಸಿಕೊಂಡು ಬಸಿನಿಂದಿಳಿದಳು. ಲಿಂಗಪ್ಪ ಆಕೆಯನ್ನು ಆಕೆಗೆ ಬೇಕಾದ ವಸ್ತುಗಳಿರುವ ಅಂಗಡಿಯಲ್ಲಿ ಬಿಟ್ಟು, "ಈಗ ಬಂದೆ ಮಗ್ಳೇ, ನೀನು ಏನೇನು ಬೇಕೋ ಅದನ್ನೆಲ್ಲಾ ನೋಡಿ ತೆಗೆದಿಡು, ಅಷ್ಟ್ರಲ್ಲಿ ನಾನು ಕೊಡೆ ರಿಪೇರಿಗೆ ಕೊಟ್ ಬಂದ್ಬಿಡ್ತೀನಿ ಆಯ್ತಾ, ಹುಷಾರು...." ಎನ್ನುತ್ತಾ ಅವನ ದಾರಿ ಹಿಡಿದ. ಅಂಗಡಿಯಲ್ಲಿರುವ ಬಗೆಬಗೆಯ ತನಗೆ ಬೇಕಾದ ವಸ್ತುಗಳೆಲ್ಲಾ ಇರುವುದನ್ನು ನೋಡಿ ತನ್ನನ್ನು ತಾನೇ ಮರೆತಳು ಲಚ್ಚಿ.
ಅಷ್ಟರಲ್ಲಿ ಅಂಗಡಿಗೆ ಬಂದಿದ್ದ ಹೆಂಗಸೊಬ್ಬಳು ಗಲಿಬಿಲಿಯಲ್ಲಿದ್ದಂತೆ ಕಂಡು ಬಂದಳು.  ಸ್ವಲ್ಪ ಹೊತ್ತಿನಲ್ಲಿ ಅವಳು, "ಅಯ್ಯೋ, ನನ್ನ ಹಣ ಕಾಣಿಸ್ತಾ ಇಲ್ಲ..ಪರ್ಸ್‍ನಲ್ಲಿಟ್ಟಿದ್ದ ಹಣವನ್ನು ಯಾರೋ ಕದ್ದು ಬಿಟ್ಟಿದ್ದಾರೆ...ಈಗ ತಾನೇ ಇತ್ತು" ಎಂದು ಗಡಬಡಿಸಿ ಹುಡುಕಾಡತೊಡಗಿದಳು. ಕೂಡಲೇ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಒಳಗೆ ನುಗ್ಗಿದ್ದ ಯಾರನ್ನೂ ಹೊರಗೆ ಹೋಗಲು ಬಿಡಲಿಲ್ಲಿ. ಎಲ್ಲರಿಗೂ ಬಡಪಾಯಿಯಂತೆ ತೋರುತ್ತಿದ್ದ, ಬಡಕಲು ಶರೀರದ, ಕಡಿಮೆ ಬೆಲೆಯ ಅಂಗಿ ತೊಟ್ಟ ಲಚ್ಚಿಯ ಮೇಲೆ ಕಣ್ಣು ಬಿತ್ತು. ಎಲ್ಲರೂ ಅವಳತ್ತ ನಡೆದು ಬಂದರು. ಲಚ್ಚಿಗೆ ಗಾಬರಿಯಾಯಿತು. ತನ್ನಲ್ಲಿದ್ದ ಹಣವನ್ನು ಭದ್ರಪಡಿಸಿಕೊಂಡಳು. ಕೆಲವರು ಅವಳ ಪಕ್ಕಕ್ಕೆ ಬಂದು, "ಏನೇ ಅದು ನಿನ್ಕೈನಲ್ಲಿರೋದು? ತೋರಿಸು, ತೋರಿಸು" ಎಂದು ಗದರಿದರು.
"ಊಹೂಂ..... ಅದು ನಂದು.....ಅದು ನಂದು...." ಅಳುತ್ತಲೇ ಹೇಳಿದಳು. ಮೈ ಪೂರ್ತಿ ಬೆವರುತ್ತಿತ್ತು. ಅಷ್ಟರಲ್ಲಿ ಹಣ ಕಳೆದುಕೊಂಡ ಹೆಂಗಸು ಲಚ್ಚಿಯ ಹತ್ತಿರ ಇದ್ದ ಹಣದ ಚೀಲವನ್ನು ಕಿತ್ತುಕೊಂಡು," ಇವಳೇ ಕದ್ದದ್ದು ನೋಡಿ ನನ್ನ ಹಣ...ಸಿಕ್ಕಿಬಿದ್ದಳು ಕಳ್ಳಿ" ಎಂದು ಹೇಳಿ ಲಚ್ಚಿಯನ್ನು ಚೆನ್ನಾಗಿ ಬೈದಳು.
"ಎಲ್ಲೆಲ್ಲಿಂದಲೋ ಬಂದು ಬಿಡ್ತಾವೆ ದರಿದ್ರ ಮುಂಡೇವು, ಎಲ್ಲಾದ್ರೂ ದುಡಿದು ತಿನ್ನೋ ಬದ್ಲು ಕಿಸೆಗೆ ಕನ್ನ ಹಾಕ್ತಾವೆ...." ಎಂದು ಬೈಯುತ್ತಾ ಬಡಿಯುತ್ತಾ ಲಚ್ಚಿಯನ್ನು ಹೊರಗೆ ದಬ್ಬಿದ ಮಳಿಗೆಯ ಮಾಲಕ.

ತ್ರಿವೇಣಿ ವಿ ಬೀಡುಬೈಲು
ಮಂಗಳೂರು

No comments:

Post a Comment