Friday, July 24, 2015

"ಎಲ್ಲರಂತವನಲ್ಲ ನನ್ನ ಗಂಡ...!" - ಹಾಸ್ಯ ಲೇಖನ

ಎಲ್ಲರಂತವನಲ್ಲ ನನ್ನ ಗಂಡ...!


ಹೆಮ್ಮಕ್ಕೊ ಎಲ್ಲಿಯಾದರು ಒಂದಿಕ್ಕಿ ಒಟ್ಟಾಗಿ ಸೇರಿದರೆ ಕೇಳೆಕ್ಕಾ? ’ಎ’ ಟೂ ’ಜೆಡ್’ ಎಲ್ಲಾ ಟಾಫಿಕ್‍ಗೊ ಪ್ರಸ್ತಾಪಕ್ಕೆ ಬತ್ತು! ಅದೆಲ್ಲಿಂದ ಶುರುವಾವುತ್ತೋ ಎಲ್ಲಿಗೆ ಮುಗಿತ್ತೋ ಆ ದೇವರಿಂಗೂ ಹೇಳುಲೆಡಿಯ! ಒಂದರಿ ಒಂದು ಮದುವಗೆ ಸುಮತಿ ಹೋಗಿತ್ತು. ಬರೇ ಪಾಪದ್ದದು. ಗೆಂಡಂಗೆ ಬೇರೊಂದಿಕ್ಕೆ ಜೆಂಭರಕ್ಕೆ ಹೋಪಲಿದ್ದ ಕಾರಣ ಅದು ಒಂದೇ ಹೋದ್ದು. ಮದುವಗೆ ಬಂದೋರನ್ನೆಲ್ಲಾ ಕೂಸಿನ ಕಡೆವು, ಮಾಣಿಯ ಕಡೆವೆಲ್ಲಾ ಆಸರಿಂಗಾತಾ, ತಿಂಡಿ ಕಾಫಿ ಆತಾ, ಬನ್ನಿ, ಬನ್ನಿ ತಿಂಡಿ ಕಾಫಿಗೆ ಹೇಳಿ ಔಪಚಾರಿಕವಾಗಿ ಒಂದೆರಡು ಮಾತಾಡಿಸಿ ವಿಚಾರಿಸಿಕೊಂಡವು. ಮನೆಲಿ ತಿಂಡಿ ಕಾಫಿ ಮುಗುಶಿ ಬಂದಿದ್ದರುದೇ, ತಿಂದಾಗಿರದಿದ್ದರುದೇ ಬೇಕಾದವ್ವು ಕುಡುದಿಕ್ಕಿ, ತಿಂಬವ್ವು ತಿಂದಿಕ್ಕಿ, ಬೇಡದ್ದವು ಬೇಡಾ ಹೇಳಿಕ್ಕಿ ಹೆಮ್ಮಕ್ಕಳ ಪಡೆಯೇ ಹೋಗಿ ಒಂದಿಕ್ಕಿ ಕೂದವು. ಸುಮತಿಯೂ  ಕೂದತ್ತು...ಅತ್ತಿತ್ತೆಲ್ಲಾ ಒಂದರಿ ನೋಡಿತು...ಸುಮತಿಗೆ ಆ ಜೆಂಭರಲ್ಲಿ ಆರನ್ನೂದೇ ಹೆಚ್ಚು ಪರಿಚಯ ಇತ್ತಿದ್ದಿಲ್ಲೆ ಬೇರೆ. ಪರಿಚಯ ಇದ್ದರೂ ಅದು ಮಾತಾಡುದು ಅಷ್ಟಕಷ್ಟೇ ಹೇಳಿ ಇದ್ದು. ಅಹಂಕಾರಂದಲ್ಲ. ಮಾತು ಕಡಮ್ಮೆ, ಅದರ ಸ್ವಭಾವವೇ ಹಾಂಗೆ ಅಷ್ಟೇ.
 ಒಂದು ಹೆಮ್ಮಕ್ಕೊ ಸೆರಗಿನ ಹಿಡುಕೊಂಡು, ಹೆಗಲಿಂದ ಉದ್ದಕ್ಕೆ ಇಳಿಬಿಟ್ಟ ವ್ಯಾನಿಟಿ ಬ್ಯಾಗಿನ ನೇಲಿಸಿಯೊಂಡು ಅವಸರವಸರಲ್ಲಿ ಬಂತು. ಅದರತ್ತರೆ ಕೂದೊಂಡಿದ್ದ ಹೆಮ್ಮಕ್ಕೊ ಕೇಳಿತು, "ಎಂತಕೆ ಮಾರಾಯ್ತಿ ತಡ?" ಹೇಳಿ.
"ಇವಕ್ಕೆಲ್ಲಾ ಮಾಡಿಕೊಟ್ಟಾಗೇಡದಾ ಹೇಳೀ...ಒಂದು ಕೆಲಸ ಮಾಡಿಕೊಳ್ತವಾ? ಊಹೂಂ....ಎನಗೆಷ್ಟೇ ಅರ್ಜೆಂಟಿರಾಲಿ, ಒಂದೂ ಕೆಲಸಕ್ಕೂ ಅಣಿಯವು! ಆನು ಉದಿಯಪ್ಪಗ ಐದು ಗಂಟೆಗೇ ಎದ್ದು ಹಾಲು ಕರದು, ಮನೆ ಉಡುಗಿ, ಉದ್ದಿ, ತಿಂಡಿ ಕಾಫಿ, ಚಾಯ, ಮಕ್ಕಳ ವಿಲೇವಾರಿ, ಮೀಯಾಣ, ಮಧ್ಯಾನ್ಹಕ್ಕಿಪ್ಪ ಅಡುಗೆ, ಮಕ್ಕೊಗೆ ಬುತ್ತಿ ತುಂಬುಸಿ ಶಾಲಗೆ ಕಳುಶಿಕೊಟ್ಟು, ಪಾತ್ರೆ, ವಸ್ತ್ರ ತೊಳದು ಒಂದರಿಯಾಣ ಒತ್ತರೆ ಕೆಲಸ ಮಾಡಿ ಮುಗುಶಿ ಇಲ್ಲಿಗೆ ಎತ್ತಿಯಪ್ಪಗ ಇಷ್ಟೊತ್ತಾತು ನೋಡು...ಸಾಕಪ್ಪಾ ಜೀವನ ಹೇಳಿ ಅನ್ನಿಸಿಬಿಡ್ತು...!" ಹೇಳಿ ಪ್ರೈವೇಟ್ ಎಫ್.ಎಮ್ ರೇಡಿಯೋ ಸ್ಟೇಷನ್‍ಗಳಲ್ಲಿ ರೇಡಿಯೋ ಜಾಕಿಗೊ ಮಾತಾಡುವ ಹಾಂಗೆ ಫಾಸ್ಟಾಗಿ ಬಂತು ಪಟಪಟನೆ ಮಾತುಗೊ ಅದರ ಬಾಯಿಂದ! ಆಚ ಹೆಮ್ಮಕ್ಕ ಕೇಳಿದ್ದೊಂದೇ ಪ್ರಶ್ನೆ. ಆದರೆ ಇದರ ಬಾಯಿಂದ ಮಾಂತ್ರ, ಒಂದು ಪ್ರಶ್ನೆ ಕೇಳಿದರೆ ನೂರು ಉತ್ತರಂಗಳ ಕೊಡುವ ಅಂತರ್ಜಾಲದ ಗೂಗಲ್‍ಗಿಂತ ಫಾಸ್ಟಾಗಿ ಬಂತು ಕೇಳದೇ ಇದ್ದ ಪ್ರಶ್ನೆಗೊಕ್ಕುದೇ ಉತ್ತರಂಗೊ!
ಅಷ್ಟಪ್ಪಗ ಅಲ್ಲಿ ಕೂದೊಂಡಿದ್ದ ಒಂದು ಹೆಮ್ಮಕ್ಕೊ, "ಆನು ಇಲ್ಲಿಗೆ ದಿಬ್ಬಾಣ ಒಳ ಮಾಡೇಕಾರೆ ಮೊದಾಲೇ ಎತ್ತಿದ್ದೆ! ಇವ್ವು ಸಕಾಯ ಮಾಡದ್ದರೆ ಬೇಗ ಎತ್ತುಲೆ ಆವುತ್ತಿತ್ತಿಲ್ಲೆಪ್ಪಾ, ಆನು ಇವಕ್ಕೆ ಇಂತಿಂತದರ ಮಾಡಿ ಹೇಳುದೇ ತಾಮಸ ರೋಬೋಟ್‍ನ ಹಾಂಗೆ ಮಾಡಿಕೊಡ್ತವು ಕೆಲಸಂಗಳ ಹೇಳಿದ್ದರೆಲ್ಲಾ!" ಹೇಳಿ ಜಂಭಲ್ಲಿ ಹೇಳಿತು.
ಇನ್ನೊಂದು ಹೆಮ್ಮಕ್ಕೊ, "ಎಂತಾ ಎಲ್ಲಾ ಕೆಲಸಕ್ಕೆ ಸೇರ‍್ತವಾ ನಿನ್ನ ಯಜಮಾನರು...ನಿನ್ನ ಭಾಗ್ಯವೇ ಸರಿ...ಎನ್ನ ಗಂಡ ಇಂತ ಕೆಲಸ ಆಯೇಕ್ಕೂ ರಜ್ಜ ಬಂದು ಸೇರಿಗೊಳ್ಳಿ ಹೇಳಿ ಹೇಳಿದರೆಲ್ಲಾ ಬಗ್ಗುತ್ತವಿಲ್ಲೆ. ಅವ್ವೇ ಆಗಿ ಅವರ ಇಷ್ಟಲ್ಲಿ ಎಂತ ಮಾಡುತ್ತವೋ ಅದರ ಆನು ಸ್ವೀಕರಿಸೇಕು" ಹೇಳಿ! ಈ ಸಂಭಾಷಣೆ ಅದರ ಹತ್ತರಲ್ಲಿಪ್ಪ ಹೆಮ್ಮಕ್ಕೊಗೆ ಕೇಳಿತು! ಅದರ ಹತ್ತರೆ ಕೂದೊಂಡಿದ್ದ ಇನ್ನೊಂದು ಹೆಮ್ಮಕ್ಕಳ ಕೆಮಿದೇ ಅಗಲ ಆತು. ಎಲ್ಲೋರು ನಾ ಮುಂದು ತಾ ಮುಂದು ಹೇಳಿ ಅವರವರ ಗೆಂಡಂದಿರ ಬಗ್ಗೆ ಹೊಗಳುಲೆ, ತೆಗಳುಲೆ ಶುರು ಮಾಡಿದವು!
"ಹೂಂ... ಎನ್ನ ಯಜಮಾನರೂ ಇದ್ದವು, ಕಾಫಿ ಚಾಯ ಕುಡುದ ಲೋಟವ ತೊಳವದು ಹೋಗಲಿ, ತೊಳವ ಜಾಗೆಗೆ ಕೂಡಾ ತಂದು ಮಡುಗುತ್ತವಿಲ್ಲೆ!"
"ಎನ್ನ ಗೆಂಡ ನಳ ಮಹಾರಾಜ, ಎಷ್ಟು ಲಾಯ್ಕಲ್ಲಿ ನಾರ್ತ್ ಇಂಡಿಯನ್ ಡಿಶಸ್ ಎಲ್ಲಾ ಮಾಡ್ತವು ಗೊಂತಿದ್ದಾ? ಮಕ್ಕೊಗೆಲ್ಲಾ ಆನು ಮಾಡುವ ಅಡುಗೆಗಿಂತ ಅಪ್ಪನ ಅಡುಗೆಯೇ ರುಚಿ ಅಪ್ಪದು! ಹಾಂಗೆ ಅಡುಗೆ ಕೆಲಸ ಪೂರಾ ಇವರದ್ದೇ" ಹೇಳಿ ಇಪ್ಪ ಹಲ್ಲುಗಳ ಪೂರಾ ತೋರಿಸಿ ನೆಗೆ ಮಾಡಿತು.
"ಶನಿವಾರದೇ ಭಾನುವಾರದೇ ಇವಕ್ಕೆ ರಜೆ.. ಒಂದೋಂದರಿ ಅಡುಗೆ ಮನಗೆ ಸಕಾಯಕ್ಕೆ ಬತ್ತವಿವು, ಏವುದಕ್ಕೂ ಮನಸ್ಸಾಯೇಕ್ಕು, ಹೊಗಳಿ ಅಟ್ಟಕ್ಕೇರ್ಸೇಕು ಅವರ, ಅಂಬಗ ಕೂದಲ್ಲಿಂದ ಮೆಲ್ಲಂಗೆದ್ದು ಬತ್ತವು...ಅವ್ವು ಬಂದು ಅಡುಗೆ ಮನಗೆ ಎತ್ತೇಕಾರೆ ಎನ್ನದೆಲ್ಲಾ ಮಾಡಿ ಮುಗುದಿರ‍್ತು" ಹೇಳಿತು ಮತ್ತೊಂದು ರಜ್ಜ ಸೇಲೆಲಿ!
"ಮಾಡುಲೆ ಗೊಂತಿದ್ದರೂ ಬತ್ತವಿಲ್ಲೆಪ್ಪ ಇವ್ವು, ಆದರೆ ಆನು ಮಾಡಿದ ಅಡುಗೆಗೆ ಉಂಬಲೆ ಕೂದಲ್ಲಿಂದ ಏಳುವಲ್ಲಿವರೆಗೂ ಕಮೆಂಟು ಕೊಟ್ಟೋಂಡಿಪ್ಪದೇ ಇವರ ಕೆಲಸ!" ಹೇಳಿ ಮೋರೆ ತಿರುಗಿಸಿತು ಮತ್ತೊಂದು!
"ಇವಕ್ಕೆ ಮಾಡ್ಲೆ ಗೊಂತಿಲ್ಲದ್ದೇ ಏನೂ ಅಲ್ಲ, ಅಹಂಕಾರ ಅಷ್ಟೇ, ತಾನು ಗಂಡಸು, ಹೆಮ್ಮಕ್ಕೊಗಿಪ್ಪ ಕೆಲಸಂಗಳ ಎಂತಕೆ ಮಾಡೇಕು, ಬೇಕಾದರೆ ಮಾಡಲಿ, ಒಂದು ದಿನ ಮಾಡಿ ಸಿಕ್ಕಿಬಿದ್ದತ್ತು ಹೇಳಿರೆ ಹೆಂಡತಿ ಏವಾಗಲೂ ತನ್ನ ಕೈಯಿಂದ ಕೆಲಸ ಮಾಡಿಸಿಬಿಟ್ಟರೇ ಹೇಳಿ ಹೆದರಿಕೆ ಅಷ್ಟೇ, ಅಲ್ಲದ್ದರೆ ಮದುವಗೆ ಮೊದಲು ಬಾಡಿಗೆ ಮನೆ ಮಾಡಿ ನಾಲ್ಕು ಜೆನ ಫ್ರೆಂಡುಗಳೊಟ್ಟಿಂಗಿತ್ತವು, ಚೋರು ಬೇಶಿ ತಿಂದೊಂಡಿತ್ತವಿಲ್ಲೆಯಾ?!" ಹೇಳಿ ಮತ್ತೊಂದು ಹೆಮ್ಮಕ್ಕಳ ವಾದ!
"ಅಲ್ಲಾ ಗೆಂಡು ಮಕ್ಕೊ ಹೇಳಿರೆ ಅವ್ವು ಎಂತ ಕೆಲಸ ಮಾಡ್ಲಾಗ ಹೇಳಿ ಇದ್ದಾ?! ಅವಕ್ಕೆಂತಕ್ಕೆ ರಿಯಾಯಿತಿ?! ಚಿನ್ನದ ಕೈಗಳೆಂತದೂ ಅಲ್ಲ, ಕರಗುಲೆ ಬೆಣ್ಣೆ ಮೊದಲೇ ಅಲ್ಲ...ಅಲ್ಲಡ..ಸೊಕ್ಕು ನೋಡು!...ಮಾಡಿದರೆಲ್ಲಿ ಹಗುರಾವುತ್ತೆನಾ ಹೇಳಿ ಅಷ್ಟೇ ಗುಟ್ಟು..ಅದೂ ಅಲ್ಲದ್ದರೆ ಉದಾಸೀನ ಬಿಡ್ತಿಲ್ಲೆಷ್ಟೇ...!" ಹೇಳಿ ಒಂದು ರಾಗ ಎಳದಪ್ಪಗ ಎಲ್ಲೋರು ನೆಗೆ ಮಾಡಿದವು! 
"ಎಲ್ಲಾ ಮಾಡುದು ಅವರ ಅಬ್ಬೆಕ್ಕೊ ಇದಾ.. ಮಾಣಿಯಂಗೊ ಮಾಣಿಯಂಗೊ ಹೇಳಿ ಪೋಚುಕಾನ ಮಾಡಿ ಸಾಂಕುದು, ಮಾಡ್ಲೆಡಿಗಾದ ಪ್ರತಿಯೊಂದು ಕೆಲಸವನ್ನೂ ಮಾಡಿಗೊಟ್ಟುಗೊಂಡು ಸಾಂಕುದು, ದೊಡ್ಡ ಆದ ಮತ್ತೂ ಬನಿಯನ್ನೂ, ಚಡ್ಡಿ ಕೂಡಾ ತೊಳದು ಕೊಡುದು, ಮತ್ತೆಲ್ಲಿಂದ ಮದುವೆ ಆದ ಮತ್ತೆ ಮಾಡುಲೆ ಕೇಳ್ತವು ಅಂತವ್ವು...?! ಇಲ್ಲಿ ಅನುಭವಿಸಿಕ್ಕಾದ್ದು ಅಂತವರ ಕಟ್ಟಿಕೊಂಡ ಎಂಗೊಲ್ಲಾ!"
"ಅಪ್ಪೂ ಹೇಳಿ...ಸಣ್ಣದಿಪ್ಪಗಳಂದೇ ಮಾಣಿಯಂಗ ಆಗಲಿ, ಕೂಸಾಗಲಿ ಏವ ತಾರತಮ್ಯ ಮಾಡದ್ದೇ ಎಲ್ಲಾ ಕೆಲಸಂಗಳ ಮಾಡ್ಸೇಕ್ಕಪ್ಪಾ ಮಾಡ್ಸೇಕ್ಕು. ಈಗಾಣ ಕಾಲಲ್ಲಿ ಇಬ್ರಿಂಗೂ ಪ್ರತಿಯೊಂದು ಕೆಲಸಂಗಳುದೇ ಗೊಂತು ಬೇಕು, ಈಗ ಗೆಂಡ ಹೆಂಡತಿ ಇಬ್ಬರೂ ಕೆಲಸಲ್ಲಿದ್ದರೆ ಗೆಂಡು ಮಕ್ಕದೇ ಮನೆಕೆಲಸ ಮಾಡೇಡದಾ? ಹೆಂಡತಿಗೊಂದಕ್ಕೇ ಮನೆ, ಆಫೀಸು ಹೇಳಿ ದುಡಿವಲೆಡಿಗಾ?!"
"ಅಪ್ಪು ಅಪ್ಪು..." ಹೇಳಿ ಎಲ್ಲೋರು ದನಿಗೂಡಿಸಿದವು.
ಒಂದು ಹೆಮ್ಮಕ್ಕೊ ಹೇಳಿತು, "ಅಯ್ಯೋ ಗೆಂಡು ಮಕ್ಕೊ ಯೇವ ಕೆಲಸಕ್ಕೂ ಬಾರದ್ದರೇ ಒಳ್ಳೆದಪ್ಪ. ಆನಂತೂ ಸಕಾಯಕ್ಕೆ ಬತ್ತೆ ಹೇಳಿ ಇವ್ವೇ ಆಗಿ ಹೇಳಿದರುದೇ ಹೇಳುದೊಂದೇ, ನಿಂಗೊ ತಳಿಯದ್ದೇ ಕೂರಿ ಒಂದರಿ, ನಿಂಗೊ ಬಪ್ಪದೇ  ಬೇಡ ಹೇಳಿ, ಅವ್ವೆಲ್ಲಿಯಾರೂ ಬಂದು ಅಡುಗೆ ಮನಗೆ ಹೊಕ್ಕವು ಹೇಳಿ ಆದರೆ, ಮತ್ತೆ ಒತ್ತರೆ ಮಾಡ್ಲೇ ಒಂದು ದಿನ ಬೇಕು ಎನಗೆ. ಒಂದು ಸಾಮಾನುದೇ ಆನು ಮಡುಗಿದಲ್ಲಿರ‍್ತಿಲ್ಲೆ" ಹೇಳಿ! ಅಷ್ಟಪ್ಪಗ ಒಂದು ಹೆಮ್ಮಕ್ಕಳ ದೃಷ್ಠಿ ಇನ್ನೊಂದರ ಸೀರೆ ಮೇಲೆ ಬಿತ್ತು."ಲಾಯ್ಕಿದ್ದು ಮಾರಾಯ್ತಿ ನಿನ್ನ ಸೀರೆ. ಎಲ್ಲಿ ತೆಕ್ಕಂಡದು? ಎಂತ ಸೀರೆ ಹೇಳಿ ಹೆಸರಿದಕ್ಕೆ?" ಹೇಳಿ ಕೇಳಿತು. 
"ಓ ಮೊನ್ನೆ ಒಂದರಿ ಕೊಡಯಾಲಕ್ಕೆ ಹೋಗಿತ್ತೆಯ ಮಾರಾಯ್ತಿ. ಪುರುಸೊತಿತ್ತಿದ್ದು. ಹಾಂಗೆ ಏವ ಏವ ನಮೂನೆಯ ಸೀರೆಗೊ ಎಲ್ಲಾ ಬೈಂದು ಹೇಳಿ ನೋಡುವ ಹೇಳಿಯೊಂಡು ಒಂದು ವಸ್ತ್ರದ ಅಂಗಡಿಗೆ ನುಗ್ಗಿದೆಯ, ತೆಗವ ಆಲೋಚನೆ ಎಂತ ಇತ್ತಿದ್ದಿಲ್ಲೆ... ಅಲ್ಲಿ ಸೀರೆಗಳ ನೋಡಿಯಪ್ಪದ್ದೇ ಒಂದು ತೆಗವ ಹೇಳಿ ಕಂಡತ್ತು, ಇವ್ವು ಬೇಡ ಬೇಡ ಹೇಳಿಯೊಂಡೇ ಇತ್ತವು, ಬೇಕೇ ಬೇಕು ಹೇಳಿ ಹಠಲ್ಲಿ ತೆಗದ್ದಾನು!" ಹೇಳಿ ಹೇಳಿತು!
"ಇವ್ವು ಹಾಂಗಲ್ಲಪ್ಪಾ, ಆನು ಬೇಕು ಹೇಳಿದ್ದು ಎನಗೆ ಬೇಕೇ... ಎನಗೆಂತಾರು ಆಯೇಕ್ಕು ಹೇಳಿ ಹೇಳಿರೆ ಅದು ಆ ದಿನದೊಳವೇ ವರ ಸಿಕ್ಕಿದ ಹಾಂಗೆ ಸಿಕ್ಕುತ್ತು, ಅಷ್ಟು ಒಬೀಡಿಯಂಟ್ ಇವ್ವು" ಹೇಳಿ ಒಂದು ಹೆಮ್ಮಕ್ಕ ತನ್ನ ಗೆಂಡ ಕೇಳಿದ ವಸ್ತು ಕೊಡುವ ಕಾಮಧೇನುವಿನ ಹಾಂಗೆ ಎನ್ನ ಗೆಂಡ ಹೇಳಿ ಹೇಳಿತು. ತಾನು ಕೇಳಿದ ವಸ್ತು ಒಂದು ದಿನದ ಒಳ ಕೈ ಸೇರದ್ದರೆ ಗೆಂಡನ ಮನೆ ಸೇರುಸುತ್ತಿಲ್ಲೆ ಹೇಳುವ ಹಾಂಗಿತ್ತು ಅದು ಹೇಳಿದ ಮಾತಿನ ಧಾಟಿ! 
"ಎಲ್ಲಿಯಾದರೂ ಒಳ್ಳೆ ಸೀರೆ ಕಂಡು ಮನಸ್ಸಾತು ಹೇಳಿ ಕಂಡರೆ ಎನಗೊಂದು ಹಿಡುಕೊಂಡು ಬತ್ತವು ಇವ್ವು" ಹೇಳಿ ಸೆಡವಿಲಿ ಹೇಳಿಕೊಂಡತ್ತು ಒಂದು.
"ಏವಾಗಲೂ ಇವಕ್ಕೆ ಆನು ವಸ್ತ್ರ ತಪ್ಪದು, ಅವ್ವು ಎನಗೆ ತಪ್ಪದು" ಹೇಳಿ ರಜ್ಜ ನಾಚಿಕೆಲಿ ಹೇಳಿದ ಹಾಂಗೆ ಹೇಳಿತು ಮತ್ತೊಂದು...
"ಇವರದ್ದೊಂದು ಕಂಡೀಷನ್, ವರ್ಷಲ್ಲಿ ಮನೆಲಿಪ್ಪೋರಿಂಗೆಲ್ಲಾ ಎರಡೆರಡು ಪ್ರತಿ ವಸ್ತ್ರ ಅಷ್ಟೇ!...ಮತ್ತವರ ಆರೂ ಅಂಬಗಂಬಗ ಕೇಳುಲೂ ಆಗ, ಎಂಗಳೇ ಆಗಿ ಅಂಗಡಿಗೆ ಹೋಗಿ ತಪ್ಪಲೂ ಆಗ! ಹಾಂ! ಎನ್ನ ಗಂಡ ಮಿಲಿಟ್ರಿಯವರ ಹಾಂಗೆ ತುಂಬಾ ಕಟ್ಟು ನಿಟ್ಟು" ಹೇಳಿ ದೊಡ್ಡ ಉಸಿರು ಬಿಟ್ಟತ್ತು ಇನ್ನೊಂದು ಹೆಮ್ಮಕ್ಕೊ!
ಇಷ್ಟು ಮಾತಾಡಿಯೊಂಡಿದ್ದಾಂಗೆ ಮಂಟಪದ ಹತ್ತರೆ ಒಬ್ಬ ಬೆಳಿ ಮಾಣಿ ಬಂದು ನಿಂದ.
"ಅದಾ ಅವನ ನೋಡಿದೆಯಾ? ಆರು ಹೇಳಿ ಗೊಂತಿದ್ದಾ ನಿನಗೆ?" ಕೇಳಿತು ಒಂದು ಹೆಮ್ಮಕ್ಕ ಇನ್ನೊಂದರ ಹತ್ತರೆ.
"ಅವ ಅದಾ ಅಂದು ಆನು ಹೇಳಿಕೊಂಡಿತ್ತಿಲ್ಲೆಯ ಡೈವೋರ್ಸ್ ಆತು ಎನ್ನ ನೆಂಟ್ರ ಪೈಕಿ ಹೇಳಿ ಅವನೇ ಅವ!"
"ಅಲ್ಲಾ ಎಷ್ಟು ಲಾಯಕಕ್ಕೆ ಗೆಂಡಾ ಹೆಂಡತಿ ತಿರುಗಾಡಿಯೊಂಡಿತ್ತವು ಮದುವಗೆ ಮೊದಲು, ಮತ್ತೂ ಎಲ್ಲಾ ಹೇಳಿ ಹೇಳಿಯೊಂಡಿತ್ತೆನ್ನೆ! ಅವನೇ ಅಲ್ಲದಾ?!...ಎಂತಾತಪ್ಪಾ ಅವಂಗೂ ಅವನ ಹೆಂಡತಿಗೂ?!"
"ನೋಡುಲೆ ಮಾಂತ್ರ ಬೆಳೀಯಾಗಿ ಚೆಂದ ಇದ್ದರೆ ಸಾಕಾ? ಬುದ್ಧಿ ಲಾಯ್ಕ ಬೇಡದಾ? ಅವನ ಆಫೀಸಿಲಿ ಇಪ್ಪ ಕೂಸಿನೊಟ್ಟಿಂಗೆ ಇವನ ಫ್ರೆಂಡ್‍ಶಿಪ್ ಅಡಾ! ಫ್ರೆಂಡ್‍ಶಿಪ್ ಮಾಂತ್ರ ಅಷ್ಟೇ..ಯೇವಾಗ್ಲೂ ಅದರತ್ತರೆ ವಾಟ್ಸಾಪಿಲಿ, ಫೇಸ್‍ಬುಕ್ಕಿಲಿ ಚಾಟಿಂಗ್ ಮಾಡುದಡಪ್ಪಾ. ಅವನ ಈ ಚಾಟಿಂಗ್ ಅವನ ಹೆಂಡತಿಗೆ ಇಷ್ಟ ಆಯಿದಿಲ್ಲೆಡ! ಇವನುದೇ ಚಾಟಿಂಗ್ ಮಾಡುದರಲ್ಲೆಂತ ತಪ್ಪಿದ್ದು ಹೇಳಿ ಹಟ ಕಟ್ಟಿ ಚಾಟ್ ಮುಂದುವರಿಸಿದಡ!...ಅಷ್ಟಕ್ಕೇ ಅಂತಾ ದೊಡ್ಡ ನಿರ್ಧಾರ ಅದರದ್ದು!"
"ಅಪ್ಪೋ...ಛೇ...ಛೇ...ಎನ್ನ ಗೆಂಡ ಎನ್ನ ಬಿಟ್ಟು ಬೇರೆ ಯೇವ ಕೂಸುಗಳನ್ನೂ, ಹೆಮ್ಮಕ್ಕಳನ್ನೂ ಕಣ್ಣೆತ್ತಿಯೂ ನೋಡವು, ಮಾತೂ ಆಡವು...!" ಹೇಳಿ ತನ್ನ ಗಂಡ ಶ್ರೀರಾಮಚಂದ್ರ ಹೇಳಿ ಸರ್ಟಿಫಿಕೇಟ್ ಕೊಟ್ಟು ಕೊಂಡತ್ತು ಒಂದು ಹೆಮ್ಮಕ್ಕ!
"ಇವ್ವುದೇ ಹಾಂಗೆಪ್ಪಾ... ಬೇರೆ ಹೆಮ್ಮಕ್ಕಳತ್ತರೆ ಮಾತಾಡುವ ಕ್ರಮವೇ ಇಲ್ಲೆ...!"
"ಇವ್ವಂತೂ ಹೆಮ್ಮಕ್ಕೊ ಇಪ್ಪಲ್ಲಿಗೆ ಸುಳಿತ್ತವಿಲ್ಲೆ...!"
"ಇವು ಮಾತಾಡ್ತವು, ಇಲ್ಲೆ ಹೇಳಿ ಹೇಳ್ತಿಲ್ಲೆ  ಆನು...ಅದೂ ಬೇಕಾದವರತ್ತರೆ ಮಾಂತ್ರ..." ಹೇಳಿ ರಾಗ ಎಳದತ್ತು ಮತ್ತೊಂದು!
’ಅಲ್ಲದ್ದರೂ ಬೇಡದ್ದವರತ್ತರೆ ಆರು ಮಾತಾಡ್ತವು’ ಹೇಳಿ ಒಳಾವೇ ಸಣ್ಣಕ್ಕೆ ನೆಗೆ ಮಾಡಿಕ್ಕಿ ಮತ್ತೊಂದು ಹೆಮ್ಮಕ್ಕ ಎಂತ ಮಾತಾಡ್ತವು ಹೇಳಿ ಕುತೂಹಲಲ್ಲಿ ನೋಡಿತು ಸುಮತಿ!  
"ಇವಕ್ಕೆ ಆರೂ ಸಿಕ್ಕಿರೆ ಅಕ್ಕು, ಕಲ್ಲನ್ನೂ ಮಾತಾಡಿಸಿಬಿಡುವ ಗುಣ ಇವರದ್ದು... ಆನು ಆರ ಹತ್ತರೆ ’ಇವ್ವು’ ಮಾತಾಡಿದರೂ ’ಇವಕ್ಕೆ’ ಎಂತ ಹೇಳುವ ಕ್ರಮ ಇಲ್ಲೆ" ಹೇಳಿತು ಮತ್ತೊಂದು ಹೆಮ್ಮಕ್ಕ!
ಬೇರೆ ಹೆಂಡತಿಯಕ್ಕೊ ಅವರವರ ಗೆಂಡಂದಿರ ಕಂಟ್ರೋಲಿಲಿ ಮಡಿಕೊಂಡಿದವು, ತಾನು ಮಾಂತ್ರ ವಿಶಾಲ ಹೃದಯದ್ದು ಹೇಳಿ ವ್ಯಕ್ತಪಡಿಸಿದಾಂಗಿತ್ತು ಅದು ಹೇಳಿದ ಶೈಲಿ!
"ಇವ್ವುದೇ ಹಾಂಗೇಪ್ಪಾ, ಆನು ಇವ್ವು ಆರ ಹತ್ತರೆ ಮಾತಾಡಿದರುದೇ ಬೇಡ ಹೇಳುವ ಕ್ರಮವೇ ಇಲ್ಲೆ" ಹೇಳಿ ತನ್ನ ಬೆನ್ನಿನ ತಟ್ಟಿಯೊಂಡತ್ತು ಮತ್ತೊಂದು! 
ಇದರೆಲ್ಲ ಕೇಳಿ ಮೊದಾಲು ಮಾತಾಡಿದವ್ಕೆ ರಜ್ಜ ಬೇಜಾರಾದಾಂಗಿತ್ತು!
ಸುಮತಿಗೆ ಇವರೆಲ್ಲರ ಮಾತುಗಳ ಕೇಳಿ  ಒಳಂದವೇ ನೆಗೆ ಬಂತು.
ಅಷ್ಟಪ್ಪಗ ಒಂದು ಹೆಮ್ಮಕ್ಕಗೆ ಅದರ ಯೆಜಮಾನರ ಫೋನ್ ಬಂತು.
"ಅದಾ, ಅದಾ ಅದರ ಗೆಂಡ ಕಾಲ್ ಮಾಡಿದ್ದು ಅದಕ್ಕೆ ನೋಡು... ಎಷ್ಟು ಪ್ರೀತಿ ನೋಡು ಅವಂಗೆ ಅದರ ಮೇಲೆ"! ಹೇಳಿ ಒಂದು ಹೇಳಿತು! ಅಷ್ಟಪ್ಪಗ ಮತ್ತೊಂದರ ಬಾಯಿ ಸುಮ್ಮನಿರ‍್ತಾ?!
"ಎನಗುದೇ ಇವ್ವು ಅಂಬಗಂಬಗ ಫೋನ್ ಮಾಡಿಯೊಂಡಿರ‍್ತವಪ್ಪ.... ಇವ್ವಕ್ಕೆ ಒಂದು ಶುದ್ದಿ ಸಿಕ್ಕಿರೆ ಸಾಕು ಕೂಡ್ಲೆ ಫೋನ್ ಮಾಡಿ ಎನಗೆ ತಿಳುಸುತ್ತವಪ್ಪ, ಇಲ್ಲದ್ದರೆ ಅವಕ್ಕೂ ಸಮಾಧಾನ ಇರ‍್ತಿಲ್ಲೆ, ಎನಗೂ ಇರ‍್ತಿಲ್ಲೆ, ಎಂಗೊ ಇಬ್ರೂ ಕ್ಲೋಸ್ ಫ್ರೆಂಡುಗಳ ಹಾಂಗೆ" ಹೇಳಿ ಉಳಿದವರ ಹೊಟ್ಟೆ ಉರುಶಿತು!
"ನಿನ್ನ ಛಾನ್ಸ್ ಮಾರಾಯ್ತಿ, ಇವ್ವೆಲ್ಲಾ ಎನಗೆ ಹಾಂಗೆಲ್ಲ ಫೋನ್ ಮಾಡುವ ಕ್ರಮವೇ ಇಲ್ಲೆ! ಉದಿಯಪ್ಪಗ ಆಫೀಸಿಂಗೆ ಹೆರಟು ಹೋತು ಹೇಳಿರೆ, ಇಲ್ಲಿ ಮನೆಲಿ ಸತ್ತಿದೋ, ಜೀವಲ್ಲಿದ್ದೋ ಹೇಳಿಯೂ ಚಿಂತೆಯೇ ಇರ‍್ತಿಲ್ಲೆ ಇವಕ್ಕೆ!" ಹೇಳಿ ರಜ್ಜ ಬೇಜಾರಿಲ್ಲೇ ಹೇಳಿತು.
"ಇವಕ್ಕುದೇ ಅಷ್ಟೇ ಎಂತ ಶುದ್ದಿಯನ್ನೂ ಎನ್ನ ಹತ್ತರೆ ಫೋನಿಲ್ಲಾಗಲಿ, ಮನೆಲಿಪ್ಪಗಾಗಲಿ ಹೇಳುವ ಕ್ರಮವೇ ಇಲ್ಲೆ!, ಆನೊಂದು ಜೆನ ಅಷ್ಟೇ ಮನೆಲಿ ಕೆಲಸಕ್ಕಿಪ್ಪದು" ಹೇಳಿ ಮತ್ತೊಂದು ತಲೆಬೆಶಿಲಿ ಹೇಳಿತು.
ಆಷ್ಟೊಂತ್ತಿಗೆ ಒಂದೆರಡು ಚೆಂದಕ್ಕೆ ಡ್ರೆಸ್ ಮಾಡಿದ ಕೂಸುಗೊ ನಿಂಬೆಹುಳಿ ಶರಬತ್ತಿನ ಟ್ರೇಲಿ ಹಿಡುಕೊಂಡು ಬಂದು ಹೆಮ್ಮಕ್ಕೊಗೆ ಒಡ್ಡಿದವು. ಮಾತಾಡಿ... ಮಾತಾಡಿ ದೊಂಡೆ ಪಸೆ ಆರಿದ್ದೋ ಎಂತದೋ ಪ್ರತಿಯೊಬ್ಬಂದೇ ಎರಡೆರಡು ಲೋಟ ಶರಬತ್ತಿನ ದೊಂಡೆಗಿಳಿಶಿದವು! 
ಈ ಹೆಮ್ಮಕ್ಕೊ ಇಷ್ಟೆಲ್ಲಾ ಮಾತಾಡಿಕ್ಕಿ ಶರಬತ್ತು ಕುಡುದಪ್ಪಗ ಒಸಗೆಗಾತು. ಈ ಹೆಮ್ಮಕ್ಕೊಗೆ ಧಾರೆ ಆದ್ದಾಗಲೀ, ಮದಿಮಯ ಮದಿಮಾಳಿಂಗೆ ಕರಿಮಣಿತಾಳಿ ಕಟ್ಟಿದ್ದಾಗಲೀ ಗಮನಕ್ಕೇ ಬೈಂದಿಲ್ಲೆ, ಮಾತಾಡುವ ಗೌಜಿಲಿ! ಆರೋ ಒಸಗೆಗಾತು ಹೇಳುದರ ಕೇಳಿ ಎಲ್ಲಾ ಹೆಮ್ಮಕ್ಕೊ ಸೀರೆ ಕೊಡಪಿಕೊಂಡು ಕೂದಲ್ಲಿಂದ ಎದ್ದಿಕ್ಕಿ ಸಭೆಲಿದ್ದ ಅವರವರ ಗಂಡಂದಿರ ಹುಡುಕಿ ಅವರೊಟ್ಟಿಂಗೆ ಒಟ್ಟೊಟ್ಟಾಗಿ ಹೋಗಿ ಮದುಮಕ್ಕೊಗೆ ಅಕ್ಷತೆ ಕಾಳು ಹಾಕಿ "ಹ್ಯಾಪಿ ಮ್ಯಾರೀಡ್ ಲೈಫ್, ಚೆಂದಕ್ಕಿರಿ" ಹೇಳಿ ಹರಸಿ ಬಂದವು. ಸುಮತಿದೇ ಹೋಗಿ ಅಕ್ಷತೆಕಾಳು ಹಾಕಿ ಕವರು ಕೊಟ್ಟು, ಮದುಮಕ್ಕಳ ಕೈ ಕುಲುಕಿ ವಾಪಸ್ಸು ಬಂದು  ಕೂದತ್ತು.
’ಇಷ್ಟೊತ್ತು ಎಲ್ಲೋರು ಅವರವರ ಗೆಂಡಂದಿರ ಬಗ್ಗೆ ತಪ್ಪೋ, ಒಪ್ಪೋ ಎಂತ ಮಾತಾಡಿದ್ದರುದೇ ಉಡುಗೊರೆ ಮಾಡುಲೆ ಎಷ್ಟು ಲಾಯ್ಕಕ್ಕೆ ಮಾತಾಡಿಯೋಂಡು ಒಟ್ಟೀಂಗೆ ಹೋಗಿ ಮದುಮಕ್ಕೊಗೆ ಹರಸಿ ಬಂದವು! ಅದಕ್ಕೇ ಹೇಳುದು ಗೆಂಡ ಹೆಂಡತಿಯರ ಬಂಧ ಬಿಡಿಸಲಾಗದ್ದು ಹೇಳಿ. ಒಂದು ಕ್ಷಣಕ್ಕೆ ಅವರವರ ಗೆಂಡಂದಿರ ಬಗ್ಗೆ ಎಂತದೇ ಮಾತಾಡಿದರುದೇ ಗೆಂಡಂಗೆ ಹೆಂಡತಿ, ಹೆಂಡತಿಗೆ ಗೆಂಡನೇ ಆಧಾರ, ಕಷ್ಟವೋ, ಸುಖವೋ ಎಂತ ಹೇಳಿದರುದೇ ನಾಲ್ಕು ಜೆನಕ್ಕೆ ಕಾಂಬಾಂಗೆ ಲಾಯ್ಕಲ್ಲಿ ಜೀವನ ನಡೆಶುತ್ತಾ ಇದ್ದವನ್ನೇ ಎಲ್ಲೋರು ಹೇಳಿ ಗ್ರೇಶಿಗೊಂಡತ್ತು. ಹಾಂಗೇ ತನ್ನ ಗೆಂಡನ ಬಗ್ಗೆ ಒಂದರಿ ಆಲೋಚನೆ ಮಾಡಿತು...’ಎನ್ನ ಗೆಂಡ ಆನು ಸಕಾಯ ಕೇಳಲಿ ಬಿಡಲಿ, ಅವ್ವೇ ಆಗಿ ಸಂದರ್ಭಂಗೊಕ್ಕೆ ತಕ್ಕ ಹಾಂಗೆ ಕೆಲಸಂಗೊಕ್ಕೆ ಒದಗುತ್ತವು, ಹುಟ್ಟಿದ ದಿನ, ಮದುವೆಯಾದ ದಿನ ಅಷ್ಟೇ ಅಲ್ಲದ್ದೇ ಬೇಕು ಹೇಳಿಯಪ್ಪಗ ವಸ್ತ್ರ ಅಥವಾ ಯೇವುದೇ ಸಾಮಾನು ಖರೀದಿಗೆ ಅಡ್ಡಿ ಮಾಡ್ತವಿಲ್ಲೆ, ಮತ್ತೆ ಫೋನು ಇಬ್ಬರೂ ಅಗತ್ಯ ಇಪ್ಪಗ ಪರಸ್ಪರ ಮಾಡಿಕೊಳ್ತೆಯ, ಇನ್ನೂ ಎಲ್ಲಾ ಆಫೀಸಿನ, ಮನೆಯ ಸಣ್ಣ, ಸಣ್ಣ, ಕಿರಿ ಕಿರಿ ತಲೆಹರಟೆ ಶುದ್ಧಿಗಳ ಎನಗೆ ಇವ್ವು ಹೇಳದ್ದರುದೇ ತೊಂದರೆಯಿಲ್ಲೆ, ಹಾಂಗೆ ಆನೂ ಅವಕ್ಕೆ ಹೇಳುತ್ತ ಕ್ರಮವೂ ಇಲ್ಲೆನ್ನೆ...?! ಅವ್ವೆಂತಕ್ಕೆ ಹೇಳುತ್ತವಿಲ್ಲೆ ಹೇಳಿ ಆನೂ ಕೇಳ್ತಿಲ್ಲೆ, ಆನೆಂತಕ್ಕೆ ಹೇಳ್ತಿಲ್ಲೆ ಹೇಳಿ ಇವ್ವೂ ಕೇಳುವ ಕ್ರಮ ಇಲ್ಲೆ! ತನಗೆ ಸಂಬಂಧ ಪಟ್ಟದ್ದರ ಹೇಳ್ತವನ್ನೇ, ಹಾಂಗೆ ಅವಕ್ಕೆ ಸಂಬಂಧ ಪಟ್ಟದ್ದರ ಆನು ಹೇಳ್ತೆನ್ನೆ ಮತ್ತೆ ಎನಗೆ ಬೇಡದ್ದಿಪ್ಪ ಬೇರೆವರ ವಿಚಾರಂಗೊ ಆದರೂ ಎಂತಕ್ಕೆ ಬೇಕು? ಅವಕ್ಕಾದರೂ ಹೇಳಿ ಅವರ ಮಂಡೆ ಆನೆಂತಕೆ ಹಾಳು ಮಾಡೇಕ್ಕು? ಸುಖಾ ಸುಮ್ಮಗೆ ಎಂತಕೆ ಮತ್ತೊಬ್ಬರ ಬಗ್ಗೆ ಮಾತಾಡೇಕು...ಇವ್ವು ಹೇಂಗಿದ್ದವೋ ಹಾಂಗೇ ಇರಾಲಿ, ಆನು ಹೇಂಗಿದ್ದೆನೋ ಹಾಂಗೇ ಇರ‍್ತೆ! ಎಂಗಳಿಬ್ಬರಲ್ಲಿ ಇದುವರೆಗೆ ಏವುದೇ ಭಿನ್ನಾಭಿಪ್ರಾಯಕ್ಕೆ ಎಡೆಯಾಯಿದಿಲ್ಲೆ ಅಲ್ಲದಾ, ಮತ್ತೆಂತರ ಚಿಂತೆ ಎನಗೆ.... ಎಂತದೇ ಆಗಲಿ, ಎಲ್ಲರ ಹಾಂಗಲ್ಲ ಎನ್ನ ಗೆಂಡ, ಎನ್ನ ಗೆಂಡನ ಹಾಂಗಿಪ್ಪವು ಹುಡುಕಿದರೂ ಲಕ್ಷಲ್ಲಿ ಒಬ್ಬ ಸಿಕ್ಕ, ಆನು ಅದೃಷ್ಠವಂತೆ ಇವ್ವು ಅಪ್ಪಟ ಚಿನ್ನ’ ಹೇಳಿ ಮನಸ್ಸಿಲಿ ಗ್ರೇಶಿಯೊಂಡು ಬಾಳೆ ಹಾಕಿದಲ್ಲಿಗೆ ಉಂಬಲೆ ಹೋತು.

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.








No comments:

Post a Comment