Friday, July 10, 2015

ನಮ್ಮ ’ಕಾರ್’ಬಾರು - ’ಅನಂತ ಪ್ರಕಾಶ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಹಾಸ್ಯ ಲೇಖನ.

ನಮ್ಮ ’ಕಾರ್’ಬಾರು

ಮಗು ಹುಟ್ಟಿದ ನಂತರ ಅದಕ್ಕೇನು ಹೆಸರಿಡ್ತೀರಾ? ಹುಡುಗಿಯ ವಿದ್ಯಾಭ್ಯಾಸ ಮುಗಿದ ಮೇಲೆ, ಆಕೆ ಮದುವೆ ಯಾವಾಗ? ಮದುವೆಯಾಗಿ ನಾಲ್ಕು ತಿಂಗಳು ಕಳೆಯುತ್ತಲೇ ಬಾಯಿ ಸ್ವೀಟ್ ಮಾಡೋದು ಯಾವಾಗ? ಬಾಡಿಗೆ ಮನೇಲಿದ್ರೆ ಸ್ವಂತ ಮನೆ ಯಾವಾಗ ಕಟ್ಟಿಸ್ತೀರಾ? ಹೀಗೆಲ್ಲಾ ಹತ್ತಿರದವರು ಕೇಳುವುದು ಸಹಜವಲ್ಲವೇ? ಹಾಗೇ ನಾನು ನನ್ನೆಜಮಾನರು ಕಾರು ಡ್ರೈವಿಂಗ್ ಕಲಿತಾಕ್ಷಣ......
"ಕಾರು ಬಿಡಲು ಕಲ್ತಾಯ್ತಲ್ಲಾ, ಇನ್ನು ಕಾರು ತಗೋತೀರಾ!?"
"ಯಾವ ಕಾರು ತಗೋತೀರಾ!? ಯಾವಾಗ ತಗೋತೀರಾ!?"
"ನಾಲ್ಕು ಜನರಿರೋ ನಿಮ್ಮ ಫ್ಯಾಮಿಲಿ ಎಷ್ಟೂ೦ತ ಟೂ ವ್ಹೀಲರ‍್ನಲ್ಲಿ ಓಡಾಡ್ತಿರಾ? ಹಾಗೆಲ್ಲಾ ಓಡಾಡೋದು ತು೦ಬಾ ರಿಸ್ಕು!  ಒಂದು ಕಾರು ತಗೊಂಬಿಡಿ!"
"ಈ ಕಾರು ಟೂ ವ್ಹೀಲರ‍್ನಷ್ಟು ರಿಸ್ಕ್ ಅಲ್ಲ. ನಾಲ್ಕು ಚಕ್ರಗಳಿರುವ ಕಾರಣ ಬ್ಯಾಲೆಂಸಿಂಗ್ ಇರುತ್ತೆ ನೋಡಿ!"
"ನಿಮ್ಗೇನಪ್ಪಾ ಸ್ವ೦ತ ಮನೆಯಾಗಿದೆ, ಇನ್ನೇನು ಒ೦ದು ಕಾರು ತಗೊ೦ಬಿಡಿ!"
"ಶುರುವಿಗೆ ಸೆಕೆ೦ಡ್ ಹ್ಯಾ೦ಡ್ ಕಾರು ತಗೊಳ್ಳಿ, ಆಮೇಲೆ ಚೆನ್ನಾಗಿ ಡ್ರೈವಿ೦ಗ್ ಅಭ್ಯಾಸವಾದ ಮತ್ತೆ ಹೊಸಾ ಕಾರು ಖರೀದಿಸಿ!"
"ಮಕ್ಕಳನ್ನು ಶಾಲೆ/ಕಾಲೇಜಿಗೆ, ಆ ಕ್ಲಾಸು, ಈ ಕ್ಲಾಸುಗಳಿಗೆಲ್ಲಾ ಕರೆದುಕೊಂಡು ಹೋಗಿ ಬರಬಹುದು, ರಜೆಯಲ್ಲಿ ಟ್ರಿಪ್ ಹೊಡೀಬೋದು!"
ಹಾಗೆ, ಹೀಗೇ ಅಂತೆಲ್ಲಾ..!
ಅವರಿವರಾಡಿದ ಮಾತುಗಳು ನನ್ನ ಹೃದಯದ ಬಾಗಿಲನ್ನು ತಟ್ಟಿದವು! 
ಇವರ ಬಳಿ ಹೇಳಿದೆ, "ಪಾಪ ನೋಡಿ, ಅವರಿಗೆಲ್ಲಾ ನಮ್ಮ ಬಗ್ಗೆ ಎಷ್ಟೊಂದು ಕನಿಕರ, ಕಾಳಜಿ ಎಲ್ಲಾ ಇದೆ, ಕಾರು ಖರೀದಿಸಿ ಅಂತ ಹೇಳುವಷ್ಟು ದೊಡ್ಡ ಮನಸ್ಸು, ಸೌಜನ್ಯ! ಯಾರಿದ್ದಾರೆ ಈ ಕಾಲದಲ್ಲಿ ಇಂತಹ ಮಾತುಗಳನ್ನಾಡುವವರು..?!" 
ಅಂತೂ ನಾವೂ ಕಾರೊಂದನ್ನು ಖರೀದಿಸೋಣ ಅಂತ ಇವರ ಹತ್ತಿರ ಈ ಮೂಲಕ ವಿಷಯ ಪ್ರಸ್ತಾಪಕ್ಕೆ ಹೆಜ್ಜೆ ಇಟ್ಟೆ!
"ನೋಡು, ನಾಲ್ಕು ಜನ ಹೇಳ್ತಾರೆ, ಕೇಳ್ತಾರೆ ಅಂತ ನಾವು ಅವರು ಹೇಳಿದ್ದಕ್ಕೆಲ್ಲಾ ಕುಣಿಯೋದಕ್ಕಾಗುವುದಿಲ್ಲ! ಕಾರು ಕೊಂಡುಕೊಂಡರೆ ಶ್ರೀಮಂತಿಕೆ ಮನೆ ಮೆಟ್ಟಿಲಿನಿಂದಲೇ ಶುರುವಾದಂತೆಯೇ...ಹಿಡಿದದ್ದಕ್ಕೆ, ಮುಟ್ಟಿದ್ದಕ್ಕೆಲ್ಲಾ ಕಾರು ಉಪಯೋಗ ಅನಿವಾರ್ಯವಾಗಿಬಿಡುತ್ತೆ. ನಡೆಯುವ ಪರಿಪಾಠವಿಲ್ಲದಾಗಿಬಿಡುತ್ತೆ. ಖರೀದಿಸೋ ಮೊದಲು ನಮಗೆ ಅದರ ಅಗತ್ಯ ಇದೆಯಾ? ಅದರ ಖರ್ಚು ವೆಚ್ಚಗಳನ್ನು ಭರಿಸುವ ಸಾಮರ್ಥ್ಯ ನಮ್ಮಲ್ಲಿದೆಯಾ?-ಪೆಟ್ರೋಲ್ ಬೆಲೆ ಬೇರೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ! ಮಕ್ಕಳ ವಿದ್ಯಾಭ್ಯಾಸಕ್ಕೆಲ್ಲಾ ತುಂಬಾ ಹಣ ಬೇಕಾಗುತ್ತೆ. ಕಾರು ಖರೀದಿ ಮಾಡಿದರೆ ಅದರಿಂದ ವಿದ್ಯಾಭ್ಯಾಸಕ್ಕೆ ತೊಡಕುಂಟಾಗುತ್ತದಯೇ? ಅಂತೆಲ್ಲಾ ನಮ್ಮಲ್ಲೇ ಪ್ರಶ್ನೆ ಮಾಡಿಕೊಂಡು ಮತ್ತೆ ಖರೀದಿಸೋ ಆಲೋಚನೆ ಮಾಡಬೇಕು" ಅಂತ ಇವರ ಉತ್ತರ! ಹೂಕೋಸಿನಂತೆ ಅರಳಿದ್ದ ನನ್ನ ಮುಖ ಚಿಕ್ಕದಾಯಿತು!
"ತುಂಬಾ ಸೆಂಟಿಮೆಂಟಲ್ ಆಗ್ಬೇಡಾ. ನಮ್ಮೂರಲ್ಲಿ ಬೇಕುಬೇಕಾದ ಸಮಯಕ್ಕೆ ಬೇಕುಬೇಕಾದಲ್ಲಿಗೆ ಬೇಕಾದಷ್ಟು ಬಸ್ಸುಗಳಿವೆ. ಹಾಗೆ ಅರ್ಜೆಂಟಿಗೆ ಅಂತ ಒಂದು ಸ್ಕೂಟರ್ ಇದೆಯಲ್ಲಾ! ನೋಡೋಣ, ಆಲೋಚನೆ ಮಾಡೋಣ" ಅಂತ ಇವರು ಹೇಳಿದ ಕಾರಣ-ಸರಿ, ಇವರಿಗೂ ಕಾರು ಖರೀದಿಸಲು ಮನಸ್ಸಾಗಲೂ ಒಂದು "ಟೈಂ" ಬರಬೇಕು ಅಂದುಕೊಂಡು ಅರೆ ಮನಸ್ಸಿನಿಂದ ಸುಮ್ಮನಾದೆ.
ಆಲೋಚನೆ ಮಾಡಿ ಅದೊಂದು ದಿನ ಕಾರು ಖರೀದಿಸುವ ನಿರ್ಧಾರಕ್ಕೆ ಬಂದೆವು! "ಹೊಸಾ ಕಾರೆಲ್ಲಾ ಬೇಡ. ’ಟ್ರೂ ವ್ಯಾಲೂ’ ಕಾರನ್ನು ಖರೀದಿಸೋಣ" ಅಂದರಿವರು.
ನಮ್ಮ ಮುಂದಿನ ಹೆಜ್ಜೆ ’ಟ್ರೂ ವ್ಯಾಲೂ’ ಕಾರುಗಳ ಡೀಲರುಗಳ ಹತ್ತಿರ! ಹೋಗಿ ನೋಡಿದಾಗ ವಿಧವಿಧದ ಕಾರುಗಳನ್ನು ಮಾರಾಟಕ್ಕೆ ನಿಲ್ಲಿಸಿದ್ದರು. ಸಾಧಾರಣ ಕಾರು ಖರೀದಿಗೆಂದು ಹೋದ ನಮಗೆ ಅಲ್ಲಿನ ಸಿಬ್ಬಂದಿಗಳು ಹೇಳಿದ ಮಾತುಗಳು, ನಾವಂದುಕೊಂಡದ್ದಕ್ಕಿಂತ ಹೆಚ್ಚು ಸೌಕರ್ಯವಿರುವ ಕಾರಿನ ಮೇಲೆ ಮನಸ್ಸನ್ನು ವಾಲುವಂತೆ ಮಾಡಿತು! ಪವರ್ ಸ್ಟೇರಿಂಗ್, ಎ.ಸಿ, ಮ್ಯೂಸಿಕ್ ಸಿಸ್ಟಂ, ಸೆಂಟ್ರಲ್ ಲಾಕಿಂಗ್ ಇರೋ ಕಾರೊಂದನ್ನು ತೋರಿಸಿ, "ನೋಡಿ ಸರ್, ಮ್ಯಾಡಮ್ ಕೂಡಾ ಡ್ರೈವ್ ಮಾಡ್ತಾರಲ್ವಾ, ಸೋ, ನಿಮಗೆ ಪವರ್ ಸ್ಟೇರಿಂಗ್ ಕಾರೇ ಬೆಟರ್. ಲೇಡೀಸ್‍ಗೆಲ್ಲಾ ನಾರ್ಮಲ್ ಸ್ಟೇರಿಂಗ್ ಕಾರು ಡ್ರೈವಿಂಗ್ ತ್ರಾಸವಾಗುತ್ತದೆ. ಮತ್ತಿನ್ನು ಮಕ್ಕಳಿಗೆಲ್ಲಾ ಜರ್ನಿ ಟೈಂನಲ್ಲಿ ಮ್ಯೂಸಿಕ್ ಬೇಕೇ ಬೇಕು. ಇದ್ರಲ್ಲಾದ್ರೆ ಮ್ಯೂಸಿಕ್ ಸಿಸ್ಟ್ಂ ಇದೆ. ಪುನ: ನೀವೇನೂ ಹೊಸದಾಗಿ ಖರೀದಿ ಮಾಡ್ಬೇಕೂಂತೇನಿಲ್ಲ ಅಂತೆಲ್ಲಾ! "ಹೌದು! ನಮಗಿದೇ ಕಾರು ಆಗಬಹುದು" ಎಂದು ನಿರ್ಧರಿಸಿದೆವು! ಇನ್ನು ಈ "ಎಲ್ಲಾ" ಇರುವ ಕಾರಿನ ಬೆಲೆ ಕೂಡಾ ಒಳ್ಳೆ ಪವರ್ ಫುಲ್ಲೇ ಆಗಿತ್ತು! ಕಾರಿನ ಬಗ್ಗೆ ಕೂಲಂಕುಷವಾಗಿ ತಿಳಿದಿರುವ ನಮ್ಮ ಪರಿಚಯದ ಒಂದಿಬ್ಬರಿಗೆ ತೋರಿಸಿ ಎರಡು ದಿನಗಳ ನಂತರ ಕಾರನ್ನು ಮನೆಗೆ ತರಿಸಿಕೊಂಡೆವು. ಅಂಗಳದಲ್ಲಿ ನಿಂತಿದ್ದ ಕಾರನ್ನು ನೋಡಿದ ಎಲ್ಲರೂ ಅದರ ಅಂದ ಚೆಂದವನ್ನು ಹೊಗಳಿದ್ದೇ ಹೊಗಳಿದ್ದು! ಮೆಚ್ಚಿದ್ದೇ ಮೆಚ್ಚಿದ್ದು!
"ರಿಯಲಿ ನಿಮ್ಮ ಛಾನ್ಸ್ ಕಣ್ರೀ. ಐದು ವರ್ಷದ ಹಿಂದಿನ ಮಾಡೆಲ್ ಕಾರು ಅನ್ನೋದಕ್ಕೇ ಆಗೋಲ್ಲ! ಒಂಚೂರೂ ಗೊತ್ತಾಗೋದೇ ಇಲ್ಲ!"
"ಎಲ್ಲೋ ಒಂದೆರಡು ವರ್ಷ ಹಿಂದಿನ ಕಾರು ಅಂತ್ಲೇ ಹೇಳಬಹುದು! ಕಾರಿನ ಹಿಂದಿನ ಮಾಲಕರು ಕಾರನ್ನು ಚೆನ್ನಾಗಿ ಮೈಂಟೇನ್ ಮಾಡಿದ್ದಾರೆ!"
"ಟ್ರೂ ವ್ಯಾಲೂ ಕಾರನ್ನು ಡೀಲರ್ ಗಳ ಹತ್ತಿರ ಕೊಂಡುಕೊಂಡದ್ದು ಒಳ್ಳೇದೇ ಆಯ್ತು ಕಣ್ರೀ...ಕಾರಿನ ಎಲ್ಲಾ ಪಾರ್ಟುಗಳು ಪಕ್ಕಾ ಆಗಿರುತ್ತವೆ. ಅಲ್ಲದೇ ಮೂರು ಸರ್ವಿಸ್‍ಗಳನ್ನು ಕೂಡಾ ಫ್ರೀ ಆಗಿ ಮಾಡಿ ಕೊಡ್ತಾರಲ್ವಾ?!"
"ಏನು?! ೩೦,೦೦೦ ಕಿಲೋಮೀಟರ್ ಅಷ್ಟೇ ಓಡಿದ್ದಾ ಈ ಕಾರು?! ಅಂದ್ಮೇಲೆ ಹೆಚ್ಚು ಓಡಿಸಲಿಲ್ಲ ಹಿಂದಿನವರು! ಬಿಡಿ ಒಳ್ಳೆದೇ ಆಯ್ತು, ಹೊಸಾ ಕಾರೇ ಸಿಕ್ಕಿತು ಅಂದುಕೊಂಡುಬಿಡಿ!"
"ಕಾರು ತೆಗೆಯೋದು ದೊಡ್ಡ ವಿಷಯವಲ್ಲ ಕಣ್ರೀ, ಮೈಂಟೇನೆನ್ಸ್ ಇದೆಯಲ್ಲಾ, ಬಹಳ ದುಬಾರಿ!"
"ಪೆಟ್ರೋಲ್ ಕಾರಿಗೆ ಪೆಟ್ರೋಲ್ ಹಾಕ್ಸಿನೇ ಸಾಕಾಗೋಗುತ್ತೆ ರೀ!"
"ಗ್ಯಾಸ್ ಕನೆಕ್ಷನ್ ಮಾಡಿಸಿಕೊಂಡುಬಿಡಿ, ಪೆಟ್ರೋಲ್‍ಗಿಂತ ವಾಸಿ! ಕಿಲೋಮೀಟರ್ ಕಾಸ್ಟ್ ಕಡಿಮೆ ಬೀಳುತ್ತೆ ಗೊತ್ತಾ?!"
"ಕಾರಿನ ಒಂದೊಂದು ಪಾರ್ಟ್ ಹಾಳಾದ್ರೂ ಮಿನಿಮಮ್ ಐದೈದು ಸಾವಿರ ರೂಪಾಯಿಗಳು ಬೇಕಾಗುತ್ತೆ!"
"ಕಾರು ಖರೀದಿಸಿ ಅದನ್ನು ನಿಭಾಯಿಸೋದು ಅಂದ್ರೆ ಮನೆಗೊಂದು ಆನೆ ತಂದು ಸಾಕಿದಂತೆ!"
ಸಲಹೆ ಸೂಚನೆಗಳ ಮಹಾಪೂರವೇ ಹರಿದು ಬಂದಿತ್ತು!
"ನೋಡಿ ನೀವೀಗಷ್ಟೇ ಡ್ರೈವಿಂಗ್ ಕಲಿತದ್ದು, ರೋಡಿನಲ್ಲಿ ಓಡಿಸುವಾಗ ಒಬ್ಬ ಒಳ್ಳೆ ಡ್ರೈವಿಂಗ್ ಗೊತ್ತಿರುವ ಯಾರನ್ನಾದ್ರೂ ನಿಮ್ಮೊಡನೆ ಕೂರಿಸಿಕೊಂಡು ಹೋಗಿ. ಅವರು  ಒಳ್ಳೆ ಗೈಡ್ ಮಾಡುವಂತಹವರಾಗಿರಬೇಕು. ನಾವಿಬ್ರೂ ಕಾರು ತೆಗೆದ ಮೊದಮೊದಲು ಹಾಗೇ ಮಾಡಿದ್ದು" ಎಂದು ಹಿಂದಿನ ಮನೆಯ ದಂಪತಿಗಳ ಸಲಹೆ! 
"ಅದು ಸರಿ, ನೀವಿಬ್ರೂ ಚೆನ್ನಾಗಿ ಡ್ರೈವಿಂಗ್ ಮಾಡ್ತೀರಿ ಅಲ್ವಾ? ನೀವೇ ಕೂತ್ಕೊಂಡುಬಿಡಿ ನಾವು  ರೋಡಿನಲ್ಲಿ ಕಾರು ಓಡಿಸುವಾಗ" ಎಂದು ಹೇಳಿದೆ.
ನಮ್ಮೊಡನೆ ಕೂರುವ ಧೈರ್ಯವಿಲ್ಲ ಎಂದು ಘೋಷಿಸಿಬಿಟ್ಟರವರು! ಅವರವರ ಅಂಗಾಂಗಗಳು, ಜೀವ ಎಲ್ಲಾ ಅವರಿಗೆ ಅಮೂಲ್ಯವಲ್ಲವೇ ಮತ್ತೆ!?
ಇನ್ನೊಬ್ಬರು, "ಅಯ್ಯೋ ಅದೆಲ್ಲಾ ಏನೂ ಬೇಡಾರೀ. ನಾನು ಕಾರು ತೆಗೆದ ಕೂಡಲೇ ನಾಲ್ಕಾರು ಬಾರಿ ಇದೇ ಲೇ‌ಔಟ್ ರೋಡಿನಲ್ಲಿ ಅಭ್ಯಾಸ ಮಾಡಿದ್ದಷ್ಟೇ. ಆಮೇಲೆ ಧೈರ್ಯ ಮಾಡಿ ಒಂದು ದಿನ ಆಗೋದಾಗ್ಲಿ ಅಂತ ರೋಡಿಗಿಳಿದೇಬಿಟ್ಟೆ! ಅಂತಹ ಕಾನ್ಫಿಡೆನ್ಸ್ ಇಟ್ಕೊಂಡ್ರೆ ಮಾತ್ರ ಆಗುತ್ತಷ್ಟೇ!" ಅಂತ ಹೇಳಿ ತನ್ನ ಕಾನ್ಫಿಡೆನ್ಸ್ ಬಗ್ಗೆ ಹೊಗಳಿಕೊಳ್ಳುತ್ತಾ, ನಮಗೆ ಕಾನ್ಫಿಡೆನ್ಸ್ ತುಂಬುತ್ತಾ ಹೇಳಿದ ಮಾತುಗಳಿವು!
ಕಾರನ್ನು ನೋಡಿದವರಿಗೆಲ್ಲಾ, ಹೊಗಳಿದವರಿಗೆಲ್ಲಾ, ಪುಕ್ಕಟೆ ಸಲಹೆ ಸೂಚನೆಗಳನ್ನು ಕೊಟ್ಟವರಿಗೆಲ್ಲಾ ಮೈಸೂರು ಪಾಕ್ ಕೊಟ್ಟು ಕಳುಹಿಸಿದೆ. ಕಾರನ್ನು ಮನೆಗೆ ತಂದ ಆ ರಾತ್ರಿ ಪೂರ್ತಿ ಕನಸುಗಳ ಸರಮಾಲೆ! - ಕಾರನ್ನು ಸ್ವತ: ಚಾಲನೆ ಮಾಡಿಕೊಂಡು ಹೋದ ಹಾಗೆ!, ಮುಂದೆ ಹೋಗಿ ಒಂದು ದೊಡ್ಡ ಹೊಂಡಕ್ಕೆ ಬಿದ್ದ ಹಾಗೆ, ಪಾರ್ಕ್ ಮಾಡಿದ ಕಾರು ಹಿಂದಿರುಗಿ ಬರುವ ವೇಳೆಗೆ ಕಳುವಾದ ಹಾಗೆ, ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿ ಒದ್ದಾಡುತ್ತಿರುವಂತೆ, ಕಾರು ಸ್ಟಾರ್ಟ್ ಆಗದೇ ಇರುವಾಗ ಹಿಂದಿರುವ ವಾಹನಗಳೆಲ್ಲಾ ಹಾರ್ನ್‍ಗಳ ಭಾರೀ ಸದ್ದು ಮಾಡುತ್ತಾ ಅವುಗಳ ಚಾಲಕರು ನಮ್ಮನ್ನು ಬಯ್ಯುತ್ತಿರುವಂತೆ ಇತ್ಯಾದಿ! ಬೆಚ್ಚಿ ಎಚ್ಚರವಾಗುತ್ತಲೇ ಅಂದುಕೊಂಡೆ, ’ಛೇ, ಸುಮ್ಮನೇ ಕಾರು ಖರೀದಿಸಿದ್ದು. ನಮ್ಮಿಂದ ಸ್ವತಂತ್ರವಾಗಿ ಚಾಲನೆ ಮಾಡಲು ಸಾಧ್ಯವೇ? ಬೇಕಿತ್ತಾ ನಮಗೆ ಕಾರು ಖರೀದಿಸುವ ಈ ಕಾರಬಾರು’ ಅಂತೆಲ್ಲಾ! ತಲೆಬುಡ ಇಲ್ಲದ ಈ ರೀತಿಯ ಕನಸ್ಸುಗಳಿಂದ ಧೃತಿಗೆಡಬಾರದು ಎಂದುಕೊಳ್ಳುತ್ತಾ ಬೆಚ್ಚಗೆ ಬೆಡ್‍ಶಿಟ್ ಹೊದೆದು ಮಲಗಿದ ನಂತರ ಸುಖವಾಗಿ ನಿದ್ದೆ ಬಂತು!
ಬೆಳಗ್ಗಿನ ತಿಂಡಿಯ ಬಳಿಕ ಕಾರಿನ ಹಿಂದೆ ಮುಂದೆ ದೊಡ್ಡದಾಗಿ ಇಂಗ್ಲಿಷ್‍ನ ’ಎಲ್’ ಅಕ್ಷರವನ್ನು ಕೆಂಪು ಬಣ್ಣದ ಸೆಲೂಟೇಪಿನಲ್ಲಿ ಅಂಟಿಸಿ ಕಾರಿನ ಬಾಗಿಲು ತೆರೆದು ಒಬ್ಬರಾದಂತೆ ಒಬ್ಬರು ಡ್ರೈವರ್ ಸೀಟಿನಲ್ಲಿ ಕುಳಿತೆವು. ಕಾಲುಗಳೆರಡನ್ನು ಕ್ಲಚ್ಚು, ಬ್ರೇಕುಗಳ ಮೇಲಿಡುತ್ತಾ ಕಾರಿಗೆ ಕೀ ಹಾಕುತ್ತಲೇ ಕಾಲು, ಕೈಗಳಲ್ಲೆಲ್ಲಾ ನಡುಕ ಹತ್ತಲು ಶುರುವಾಯಿತು! ಅದೇ ಡ್ರೈವಿಂಗ್ ಕ್ಲಾಸಿನ ಕಾರಿನಲ್ಲಾದರೆ ಹಾಗಾಗುತ್ತಿರಲಿಲ್ಲ! ಕಾರಣಗಳು ಎರಡು. ನಮ್ಮ ಪಕ್ಕದಲ್ಲಿ ಕೋಚ್ ಕುಳಿತಿರುತ್ತಿದ್ದ ಕಾರಣ  ಮೊದಲನೆಯದಾದರೆ, ಮತ್ತಿನ್ನೊಂದೇನೆಂದರೆ ಆ ಕಾರು ನಮ್ಮದಲ್ಲವಲ್ಲಾ! ಇದಾದ್ರೆ ನಮ್ಮ ಸ್ವಂತದ್ದು! ಏನಾದರೂ ಹೆಚ್ಚು ಕಡಿಮೆಯಾದರೆ?! ’ನಮ್ಮದು’ ಅಂತ ಯಾವುದೇ ವಸ್ತುವನ್ನು ಅತ್ಯಂತ ಜೋಪಾನ ಮಾಡುವುದು ಪ್ರತಿಯೊಬ್ಬರಲ್ಲೂ ಇರುವ ಒಂದು ಒಳ್ಳೆಯ ಗುಣವಲ್ಲವೇ!? ಹಾಗೆ ನಡುಗಾಟದಲ್ಲಿ ಸುಲಭದಲ್ಲೆಲ್ಲಾ ಮುಂದೆ ಸಾಗಲಿಲ್ಲ ಸ್ಟಾರ್ಟ್ ಆದ ನಮ್ಮ ಕಾರು! ಪ್ರತೀ ಸಲವೂ ಮುಂದೆ ಹೋಗಲೆತ್ನಿಸಿದಾಗಲೂ ಬಂದ್ ಬೀಳುತ್ತಿತ್ತು. ಅದರೂ ಛಲ ಬಿಡದ ತಿವಿಕ್ರಮನಂತೆ ಪ್ರಯತ್ನದ ಮೇಲೆ ಪ್ರಯತ್ನ ಮಾಡಿ ಕಾರು ಚಲಿಸಲು ಶುರುವಾಯಿತು! ನಾಲ್ಕಾರು ಬಾರಿ ಲೇ‌ಔಟ್ ನಲ್ಲೇ ಓಡಿಸಿ, ರಿವರ್ಸ್ ತೆಗೆದು ಅಭ್ಯಾಸ ಮಾಡಿದೆವು. 
ಕಾರು ತಂದು ಒಂದೇ ದಿನದಲ್ಲಿ ಶಾಲೆಯಿಂದ ಬಂದು ಕೇವಲ ಅರ್ಧ ಗಂಟೆ ಕಾರಿನೊಳಗೆ ಕಾಲ ಕಳೆದಿದ್ದ ನಮ್ಮ ಪುಟ್ಟ ಮಗಳು ಕಾರಿನ ಓಪರೇಷನ್ ಬಗ್ಗೆ ನಮಗೆ ಗೊತ್ತಿಲ್ಲದ ಅಚ್ಚರಿಗಳನ್ನೆಲ್ಲಾ ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿ ರಂಜಿಸಿದಳು. ಅಮ್ಮಾ, ಅಪ್ಪಾ, ನೋಡಿ ಈ ಸ್ವಿಚ್ ಇಂತಹದಕ್ಕೆ, ಅದು ಅದಕ್ಕೆ, ಇದನ್ನೊತ್ತಿದರೆ ಹೀಗಾಗುತ್ತದೆ, ಅದನ್ನೊತ್ತಿದರೆ ಹಾಗಾಗುತ್ತದೆ ಅಂತೆಲ್ಲಾ! ನಮಗಿಬ್ಬರಿಗೂ ಕಾರಿನೊಳಗೆ ಸ್ಟೇರಿಂಗ್, ಎಕ್ಸ್‍ಲೇಟರ್, ಕ್ಲಚ್ಚು, ಬ್ರೇಕು ಹಾಗೂ ಹಾರ್ನಿನ ಪರಿಚಯ ಮಾತ್ರ ಇತ್ತಷ್ಟೇ! ಮಗಳ ಕಾರುಭಾರು ಮುಂದುವರಿಯುತ್ತಿತ್ತು! ಸ್ವಲ್ಪ ಹೊತ್ತು ಕಳೆದು ಇಬ್ಬರ ಮುಖವನ್ನು ಸೀರಿಯಸ್ಸಾಗಿ ನೋಡುತ್ತಾ, "ಸಿ.ಡಿ ಪ್ಲೇಯರ್ ಸರಿ ಇಲ್ವಾ? ಸಿ.ಡಿ ಹಾಕಿ ನೋಡಿದೆ?!" 
"ಕಾರಿನ ಢಿಕ್ಕಿಯ ಒಳಭಾಗದಲ್ಲಿರುವ ಎರಡು ಸ್ಪೀಕರ‍್ಗಳಲ್ಲಿ ಎಡಭಾಗದ ಸ್ಪೀಕರಿಗೆ ಆ ಸ್ಪೀಕರ್ ಕವರ್ ಬೀಳಬಾರದೂಂತ ಕಪ್ಪು ಬಣ್ಣದ ಸೆಲೂಟೇಪ್‍ಗಳನ್ನು ಅಂಟಿಸಿದ್ದಾರಲ್ಲಾ?! ಗಮನಿಸಿಲ್ವಾ?"
"ಕಾರಿನ ಸೆಂಟರ್ ಲಾಕ್ ಕೀಯ ಒಂದು ಸ್ವಿಚ್ ತನ್ನ ಕಾರ್ಯನಿರ್ವಹಿಸುತ್ತಿಲ್ಲವಲ್ಲಾ!? 
"ಕಾರಿನ ಫ್ರಂಟ್ ವಿಂಡೋ ಪೂರ್ತಿ ಕ್ಲೋಸಾಗ್ತಾ ಇಲ್ವಲ್ಲಾ?! ನೋಡ್ಲಿಲ್ವಾ?!"
ಒಳ್ಳೆ ಕ್ರೈಮ್ ಬ್ರಾಂಚ್ ಇನ್ಸ್‍ಪೆಕ್ಟರ್ ನಂತೆ ಅವಳು ಕೇಳಿದ ನೇರ ಪ್ರಶ್ನೆಗಳನ್ನು ಎದುರಿಸಬೇಕಾಯಿತು!
"ಊಹೂಂ. ಅದನ್ನೆಲ್ಲಾ ಅಷ್ಟು ಕೂಲಂಕುಷವಾಗಿ ಪರೀಕ್ಷಿಸಲಿಲ್ಲಾ ಪುಟ್ಟಿ, ನಮಗೇನು ಕಾರಿನ ಬಗ್ಗೆ ಅಷ್ಟು ಗೊತ್ತಿಲ್ಲಲ್ವಾ..." ಎಂದೆವು ಮುಗ್ಧ ತಪ್ಪಿತಸ್ಥರಂತೆ. ಕಾರು ಕೊಂಡುಕೊಳ್ಳುವ ಮೊದಲು ಅದರ ಪೂರ್ಣ ಅನುಭವ ಇಲ್ಲದ ಕಾರಣ ಒಂದಿಬ್ಬರು ಕಾರಿನ ಬಗ್ಗೆ ’ಎ’ ಟು ’ಝಡ್’ ಗೊತ್ತಿರುವ ಕಾರಿನ ಎಕ್ಸ್‍ಪರ್ಟ್‍ಗಳನ್ನು ಕರೆದುಕೊಂಡು ಹೋಗಿ ಪರೀಕ್ಷಿಸಿದ್ದರೂ ಕೂಡಾ ಕೆಲವೊಂದು ಮಗಳು ಕೇಳಿದ ಅಂಶಗಳು ಅವರ ಗಮನಕ್ಕೂ ಬಾರದೇ ಹೋದದ್ದು ಮಾತ್ರ ವಿಪರ್ಯಾಸ! ಅವರಿಬ್ಬರೂ ಕಾರಿನ ಅಡಿಭಾಗ, ಮುಂದೆ, ಹಿಂದೆ ಎಲ್ಲಾ ಬಗ್ಗಿ ನೋಡಿ, ಒಂದಷ್ಟು ದೂರ ಚಾಲನೆ ಮಾಡಿನೋಡಿ ’ಎ೧ ಗ್ರೇಡ್’ ಕೊಟ್ಟುಬಿಟ್ಟಿದ್ದರು! ಸರಿ, ನಮಗಿನ್ನೇನು? ಕಣ್ಣುಮುಚ್ಚಿ, "ಎಸ್" ಅಂತ ಕಾರನ್ನು ಪಾಸ್ ಮಾಡಿದ್ದೆವು! ನಮಗಾಗ ನೆನಪಾದುದು ಆಗಾಗ ರೇಡಿಯೋ, ಟಿ.ವಿ. ಜಾಹೀರಾತುಗಳಲ್ಲೆಲ್ಲಾ ಕೇಳಿ ಬರುತ್ತಿದ್ದ "ಎಚ್ಚರ ಗ್ರಾಹಕ ಎಚ್ಚರ!" ಉದ್ಘೋಷಣೆ. ಆಗೆಲ್ಲಾ ಅದನ್ನು ’ಆ’ ಕಿವಿಯಲ್ಲಿ ಕೇಳಿ ’ಈ’ ಕಿವಿಯಲ್ಲಿ ಬಿಡುತ್ತಿದ್ದ ಕಾರಣ ಸಣ್ಣ ಗುಂಡಿಯೊಂದಕ್ಕೆ ಅದಾಗಲೇ ಬಿದ್ದಾಗಿತ್ತು! ಆದರೆ ಕಾರಿನ ಚಾಲನೆಗೆ ಸಹಕರಿಸುವ ಯಂತ್ರ, ಇತ್ಯಾದಿ ಎಲ್ಲಾ ಫಸ್ಟ್ ಕ್ಲಾಸಿದೆ ಎನ್ನುವ ಕಾರಣಕ್ಕಾಗಿ ಮಗಳು ಕಂಡುಹಿಡಿದ ಪಾಯಿಂಟ್‍ಗಳನ್ನು ’ಸೆಕೆಂಡರಿ’ ವಿಭಾಗಕ್ಕೆ ವರ್ಗಾಯಿಸಿಬಿಟ್ಟೆವು! ಅಂದರೂ ಕಾರು ಖರೀದಿಸಿದಲ್ಲಿಗೆ ಹೋಗಿ ಕೇಳಿಯೇಬಿಟ್ಟೆವು!
"ಓ! ಸಿ.ಡಿ ಪ್ಲೇಯರ್, ಸೆಂಟರ್ ಲಾಕ್ ಇವೆಲ್ಲಾ ’ಎಕ್ಸ್‍ಟ್ರಾ ಫಿಟಿಂಗ್’‍ಗಳು ಸಾರ್. ಅವೆಲ್ಲಾ ಮೈನರ್ ರಿಪೇರಿಗಳು. ಇದೇ ರೋಡಿನ ಕೊನೆಯಲ್ಲಿ ಸಿ.ಡಿ ರಿಪೇರ್ ಅಂಗಡಿಯಲ್ಲಿ ತೋರಿಸಿದ್ರೆ ಸರಿ ಮಾಡಿಕೊಡ್ತಾರೆ! ಸೆಂಟರ್ ಲಾಕ್ ಕೀ ರಿಪೇರಿ ಅಂಗಡಿ ಇಲ್ಲೇ ಪಕ್ಕದ್ದು. ಅಲ್ಲಿಗೆ ಹೋಗಿ, ಸರಿ ಮಾಡಿಕೊಡ್ತಾರೆ, ವಿಂಡೋ ನಮ್ಮಲ್ಲೇ ರಿಪೇರಿ ಮಾಡೋಣ, ಕಾರನ್ನು ಒಂದು ದಿನ ತನ್ನಿ" ಎಂದೆಲ್ಲಾ ಹೇಳಿ ಕೈತೊಳೆದುಕೊಂಡುಬಿಟ್ಟರು! ಈ ಅಂಗಡಿಗಳ ವಿಳಾಸಗಳನ್ನೆಲ್ಲಾ ಇವರ ಬಾಯಿಯಿಂದ ಕೇಳಲು ಇಲ್ಲಿವರೆಗೆ ಬರಬೇಕಿತ್ತೇ?! ಈ ’ಎಕ್ಸ್‍ಟ್ರಾ ಫಿಟ್ಟಿಂಗ್’ ಗಳೆಲ್ಲಾ ಕಾರಿನಲ್ಲಿದೆ ಅಂತ ಹೇಳಿ, ಪುಸಲಾಯಿಸಿ ತಾನೆ ಇವರು ಕಾರಿನ ಬೆಲೆಯಲ್ಲಿ ನಮಗೆ ಒಂದು ಕಾಸಿನ ಚೌಕಾಸಿ ಮಾಡಲು ಬಿಟ್ಟಿರಲಿಲ್ಲ! ಅಂದು ಈ ವಿಷಯಗಳೇ ಅವರಿಗೆ ಕಾರಿನ ಬೆಲೆ ಏರಿಸಲು ಮೇಜರ್ ಬಂಡವಾಳವಾಗಿದ್ದರೆ, ಇಂದು ಅದೇ ವಿಷಯಗಳು ಅವರಿಗೆ ಮೈನರ್ ಆಗಿದ್ದವು! ಬಂದ ದಾರಿಗೆ ಸುಂಕ ಇಲ್ಲ ಅಂತ ವಾಪಸ್ಸಾದೆವು! 
ಕಾರು ಖರೀದಿಸಿ ಐದನೇ ದಿನವದು. ಲೇ‌ಔಟ್ ಮತ್ತು ಕಡಿಮೆ ವಾಹನ ಸಂಚಾರವಿರುವ ಸ್ಥಳಗಳಲ್ಲಿ ನಮ್ಮ ಅಭ್ಯಾಸ ಸಾಗುತ್ತಿತ್ತು. ಅದೇ ಕಾರ್ಯಕ್ಕೆ ಅಂಗಳದಲ್ಲಿದ್ದ ಕಾರನ್ನು ರಿವರ್ಸ್ ತೆಗೆಯುತ್ತಿದ್ದಾಗ ಹಾಗೇ ಸೊಂಯ್ ಅಂತ ಹಿಂದೆ ಹೋದ ಕಾರು ನಮ್ಮ ಗೇಟಿನ ಕಂಬವನ್ನು ಒರೆಸಿಕೊಂಡು ಹೊರಗೆ ಬಂದಿತ್ತು! ಪರಿಣಾಮ ಕಾರಿನ ಎದುರು ಬಲಭಾಗದಲ್ಲಿ ಮರೆಮಾಚಲಾಗದ ಬಹು ದೊಡ್ಡದೂ ಅಲ್ಲದ, ತೀರಾ ಚಿಕ್ಕದೂ ಅಲ್ಲದ ಗುಳಿಯೊಂದು ಬಿದ್ದುಬಿಟ್ಟಿತ್ತು!
ಕಾರನ್ನು ಹೊಗಳುತ್ತಿದ್ದ ಬಾಯಿಗಳೆಲ್ಲಾ ಈಗ ’ರಿವರ್ಸ್ ಗೇರು’ ಹಾಕಿದ್ದವು! ಗುಳಿಯನ್ನು ಗಮನಿಸಿದ ಪ್ರತಿಯೊಬ್ಬನ ಬಾಯಿಯು, "ಅದೇನಾದದ್ದು? ಅದೇನಾದದ್ದು?", "ಛೇ, ಎಷ್ಟು ಚೆನ್ನಾಗಿತ್ತು ಕಾರು, ಶೇಪೇ ಹಾಳುಮಾಡಿಬಿಟ್ಟಿರಲ್ಲಾ?!" ಅಂತೆಲ್ಲಾ ಹೇಳ ಕೇಳತೊಡಗಿದರು!
"ಅದು ಕಾರಿಗೆ ಇವಳಿಟ್ಟ ದೃಷ್ಠಿ ಬೊಟ್ಟು" ಅಂತ ಇವರುತ್ತರ!
"ಕೆನ್ನೆ ಮೇಲೆ ಗುಳಿ ಬಿದ್ರೆ ಚೆಂದ...ಆದ್ರೆ....ಕಾರಿನ ಮೇಲೆ ಬಿದ್ರೆ ಚೆಂದ ಕಾಣ್ಸಲ್ವೇ" ಎಂದು ಹಾಸ್ಯವಾಗಿ ಇವರು ಹೇಳಿ ನನ್ನನ್ನು ಛೇಡಿಸಿದರಷ್ಟೇ ಆದರೂ, ಆ ಮಾತುಗಳು ಕಾದ ಕಬ್ಬಿಣದ ಸರಳಿನಿಂದ ಹಾಕಿದ ಬರೆಯಾಗಿತ್ತು ನನ್ನ ಪಾಲಿಗೆ! ಹೊರಗೆ ತಿರುಗಾಡಲು ಹೋದಾಗಲೆಲ್ಲಾ ಎಲ್ಲೆಲ್ಲಿ ಕಾರುಗಳು ಕಾಣ ಸಿಗುತ್ತವೆಯೋ ಅವುಗಳೆಲ್ಲವನ್ನು ಅವಕ್ಕೆಲ್ಲೆಲ್ಲಿಗೆ ಗುಳಿಗಳು, ಗೆರೆಗಳೆಲ್ಲಾ ಬಿದ್ದಿದೆ ಎಂದು ಗಮನಿಸಿ ಇವರಿಗೆ ರಿಪೋರ್ಟ್ ಮಾಡುವ ಹೊಸ ಕೆಲಸ ನನ್ನದಾಗಿತ್ತು! ನಾವು ಕಷ್ಟದಲ್ಲಿದ್ದಾಗ ಮರುಗಿ, ಕೊರಗಿ ಕುಳಿತುಕೊಳ್ಳುವುದರ ಬದಲಾಗಿ ನಮಗಿಂತ ಹೆಚ್ಚು ಕಷ್ಟದಲ್ಲಿರುವವರನ್ನು ನೋಡಬೇಕಂತೆ! ನಾನು ಗಮನಿಸಿದ ಕಾರುಗಳಲ್ಲಿ ಕೆಲವಕ್ಕೆಲ್ಲಾ ಚಂದ್ರನಂತೆ ಮೈ ಮೇಲೆಲ್ಲಾ ಗುಳಿಗಳಾಗಿದ್ದರೆ, ಇನ್ನೂ ಕೆಲವಕ್ಕೆ ತರಚಿದ ದೊಡ್ಡ, ಸಣ್ಣ ಗೀರುಗಳು, ಅಷ್ಟೂ ಅಲ್ಲದೆ ತುಂಡಾಗಿ ನೇತಾಡುತ್ತಿದ್ದ ನಂಬರು ಪ್ಲೇಟುಗಳು! ಅಬ್ಬಬ್ಬಾ! ಒಂದೇ, ಎರಡೇ?..! "ಓಹೋ ನಾವೇ ವಾಸಿ ಎಲ್ಲರಿಗೂ ಆಗುವಂತಹದ್ದೇ ಆಗಿದೆ ನಮಗೂ ಕೂಡಾ" ಅಂತ ತುಸು ಸಮಾಧಾನವಾಯಿತು! 
ಕಾರನ್ನು ಈಗಾಗಲೇ ಖರೀದಿಸಿ ಹತ್ತಾರು ವರ್ಷಗಳ ಚಾಲನೆ ಮಾಡಿದ ಅನುಭವಸ್ಥರಾದ ನಮ್ಮ ಏರಿಯಾದ ಹಲವರು ನಮ್ಮ ಕಾರಿನ ಗುಳಿಯನ್ನು ನೋಡಿ ಅನುಕಂಪದ ಮಾತುಗಳೊಂದಿಗೆ ತಮ್ಮ ತಮ್ಮ ಅನುಭವ ಕಥನಗಳನ್ನು ನಮ್ಮೆದುರು ಬಿಚ್ಚಿಟ್ಟರು!
"ಅಯ್ಯೋ, ಹಾಗೆಲ್ಲಾ ಆಗೋದು ಕಾಮನ್ ಬಿಡ್ರೀ, ನಿಮ್ಮದು ಇಷ್ಟೇ ತಾನೇ ಆದದ್ದು? ನಾವು ಕಾರು ಖರೀದಿಸಿ ಫಸ್ಟ್ ರೈಡ್‍ನಲ್ಲೇ ನಮ್ಮೆದುರು ಚಲಿಸುತ್ತಿದ್ದ ಮಿನಿ ಲಾರಿ ಸಡನ್ ಆಗಿ ಬ್ರೇಕ್ ಹಾಕಿ ನಿಲ್ಲಿಸಿದಾಗ ನಮ್ಮ ಗಮನಕ್ಕೆ ಬಾರದೇ ಅದರಡಿಗೆ ಕಾರನ್ನು ನುಗ್ಗಿಸಿಬಿಟ್ಟಿದ್ದೆವು! ಕಾರಿನ ಮೂತಿ ಕವರ್ ಹಾಗೆನೇ ಕಿತ್ತುಕೊಂಡು ಹೋಗಿತ್ತು!"
"ನಮ್ಮ ಹೊಸಾ ಕಾರನ್ನು ರಿವರ್ಸ್ ಗೇರು ಹಾಕಿ ಅಂಗಳದಲ್ಲಿ ಪಾರ್ಕ್ ಮಾಡ್ಲಿಕ್ಕೇಂತ ತರುತ್ತಿದ್ದಾಗ ಸೊಂಯ್ ಅಂತ ಹಿಂದೆ ಬಂದು ಬಂದು ಸಿಟ್‍ಔಟ್ ಪಿಲ್ಲರಿಗೆ ಗುದ್ದಿ ಕಾರಿನ ಬೆನ್ನು ಹುಡಿ ಹುಡಿಯಾಗಿತ್ತು. ಗೊತ್ತೇನ್ರೀ?!"
ಅಂತೂ ಅವರಿವರ ಕಾರುಗಳ ಕತೆ ಕೇಳಿ, ನಮ್ಮದು ’ಮಿನಿಕತೆ’ ಅನ್ನಿಸಿ ಮನಸ್ಸಂತೂ ಹಗುರವಾಯಿತು!
ಹತ್ತನೇ ದಿನ ಸಿಟಿ ಒಳಗೆ ಶಾಪಿಂಗಿಗೆ ಹೋಗುವ ಅನಿವಾರ್ಯತೆ. "ಏನು ಮಾಡುವುದು? ಸ್ಕೂಟರಿನಲ್ಲಿ ಹೋಗುವುದೋ ಇಲ್ಲಾ ಕಾರಿನಲ್ಲಿ ಹೋಗುವುದೋ?  ಅಭ್ಯಾಸ ಸರಿಯಾಗಿ ಆಗಲಿಲ್ಲವಲ್ಲ, ಸ್ವಲ್ಪ ದಿನಗಳು ಕಳೆದು ಚೆನ್ನಾಗಿ ಅಭ್ಯಾಸವಾದ ನಂತರ ಕೊಂಡುಹೋದರೆ ಸಾಕೇ?" ಅನ್ನೋ ನಾಲ್ಕಾರು ಪ್ರಶ್ನೆಗಳು ತಲೆಸುತ್ತಾ ತಿರುಗಾಡುತ್ತಿದ್ದವು. ಇಂದಲ್ಲ ನಾಳೆ ಓಡಿಸಿಕೊಂಡು ಹೋಗಲೇಬೇಕಲ್ಲವೇ, ಇಂದು ಕಾರಿನಲ್ಲಿ ಹೋದರೆ ಈ ದಿನವನ್ನು ಅಭ್ಯಾಸದ ಪಟ್ಟಿಯಲ್ಲಿ ಸೇರಿಸಬಹುದಲ್ಲವೇ ಎಂದುಕೊಂಡು ’ಎಲ್’ ಬೋರ್ಡ್ ಮೇಲೆ ಭರವಸೆಯಿಟ್ಟು, "ಏನಾಗಲಿ ಮುಂದೆ ಸಾಗು ನೀ..."ಎಂದು ಕಾರನ್ನು ಚಲಾಯಿಸಿ ಸಿಟಿಯೊಳಗೆ ಪ್ರವೇಶ ಮಾಡಿಯೇ ಬಿಟ್ಟೆವು! ಇತರ ಚಾಲಕರು ತಮ್ಮ ತಮ್ಮ ವಾಹನಗಳನ್ನು ನಮ್ಮ ವಾಹನದಿಂದ ಅಂತರವಿಟ್ಟುಕೊಂಡು ವ್ಯವಹರಿಸುತ್ತಿದ್ದರು! ’ಎಲ್’ ಬೋರ್ಡಿನ ಮಹಿಮೆ ಈಗ ಅರಿವಾಗಿ ಧೈರ್ಯ ಡಬಲ್ ಆಯಿತು! ಕೆಲಸಗಳನ್ನೆಲ್ಲಾ ಮುಗಿಸಿ ಸುಖವಾಗಿ ಮನೆಗೆ ಹಿಂದಿರುಗಿದೆವು. ಅದೇ ಸಂಜೆ ಗೆಳತಿಯೊಬ್ಬಳ ಫೋನ್ ಕರೆ, ಆಕೆಯ ನೇರ ಪ್ರಶ್ನೆ, "ಏನೇ ಕಾರು ಚಲಾಯಿಸಿಕೊಂಡು ತಿರುಗಾಡ್ಲಿಕ್ಕೆ ಶುರು ಮಾಡಿದ್ದೀರಾ ಇಲ್ವಾ?!" ಅಂತ. "ಓ ಬೇಕಾದಷ್ಟು ಸಲ ಅಭ್ಯಾಸ ಮಾಡಿ ಇವತ್ತು ಬೇರೆ ಸಿಟಿಗೆ ಹೋಗಿಬಂದೆವು ಕಣೇ" ಎಂದು ಹೇಳಿದೆ. "ಓಹೋ, ನೀವು ಪರ್ವಾಗಿಲ್ವೇ! ನನ್ನಕ್ಕ, ಭಾವ, ಇಬ್ರದ್ದೂ ಡ್ರೈವಿಂಗ್ ಕಲಿತು ಒಂದು ವರ್ಷ ಆಗಿದೆ. ಹೊಸಾ ಕಾರನ್ನು ಖರೀದಿಸಿದ್ದಾರೆ ಕೂಡಾ! ಆದ್ರೂ ಇಬ್ರಿಗೂ ಡ್ರೈವ್ ಮಾಡುವ ಕಾನ್ಫಿಡೆನ್ಸೇ ಇಲ್ಲ ಕಣೇ. ಎಲ್ಲಾದರೂ ದೂರ ಹೋಗಬೇಕಿದ್ದರೆ ಒಬ್ಬ ಡ್ರೈವರನ್ನು ಎಂಗೇಜ್ ಮಾಡಿ ಸುತ್ತಾಡಿಕೊಂಡು ಬರ್ತಾರೆ!" ಎಂದು ಆಕೆ ಹೇಳಿದಾಗ ನಮ್ಮಲ್ಲಿ ಇನ್ನಷ್ಟು ಕಾನ್ಫಿಡೆನ್ಸ್ ಬೆಳೆಯಲಿಕ್ಕೆ ಇದಕ್ಕಿಂತ ಒಳ್ಳೆ ಟಾನಿಕ್ ಬೇರೆ ಬೇಕಾಗಿರಲಿಲ್ಲ!
ಹರಿ ಹರಿ ಅಂತ ದಿನ ಹದಿನೈದಾಗಿತ್ತು. ಅಂಗಳದಿಂದ ಕಾರನ್ನು ರಿವರ್ಸ್ ತೆಗೆಯುತ್ತಿದ್ದೆ. ಪಕ್ಕದ ಮನೆಯವರ ಬೈಕ್ ರೋಡಿನಲ್ಲಿ ಇದ್ದದ್ದನ್ನು ಗಮನಿಸದೇ ಹಿಂದಿನಿಂದ ನೇರವಾಗಿ ಹೋಗಿ ಬೈಕಿಗೆ ಡಿಶುಂ ಅಂತ ಢಿಕ್ಕಿ ಹೊಡೆದದ್ದೇ ತಡ, ಬೈಕಿನ ಗಾರ್ಡ್ ತಾಗಿ ನಮ್ಮ ಕಾರಿನ ನಂಬರ್ ಪ್ಲೇಟ್  ಪುಡಿಪುಡಿಯಾಗಿ ನೆಲಕಚ್ಚಿತು! ಆಘಾತ ಸಹಿಸದ ಬೈಕ್ ಅಲ್ಲೇ ಬದಿಗಿದ್ದ ದಟ್ಟವಾದ ಪೊದೆಯ ಮೇಲೆ ಬಿದ್ದುದ್ದರಿಂದ ಅದಕ್ಕಾಗುತ್ತಿದ್ದ ಹಾನಿಯಿಂದ ತಪ್ಪಿಸಿಕೊಂಡಿತು! ಇಲ್ಲವಾದಲ್ಲಿ ಆ ಬೈಕಿಗೆ ಆಗುತ್ತಿದ್ದ ರಿಪೇರಿ ಖರ್ಚನ್ನು ನಾವೇ ಭರಿಸಬೇಕಾಗುತ್ತಿತ್ತು! "ಬಿಡಿ ಮೊದಮೊದಲು ಇದೆಲ್ಲಾ ಮಾಮೂಲು, ನನ್ನ ಬೈಕಿಗೆ ಏನಾಗಲಿಲ್ಲ. ಇಂತಹವುಗಳಿಂದಲೇ ನಾವು ಕಲಿತು ಜಾಣರಾಗೋದು!" ಎಂದರು ಅವರು!
"ಗುಳಿ ಮತ್ತು ನಂಬರು ಪ್ಲೇಟ್ ಹುಡಿಯಾದದ್ದನ್ನು ಸರಿ ಮಾಡಿಸಲು ಮಿನಿಮಮ್ ಐದು ಸಾವಿರ ರೂಪಾಯಿಗಳು ಬೇಕು ಗೊತ್ತಾ?" ಇವರು ನನ್ನನ್ನುದ್ದೇಶಿಸಿ ಹೇಳಿದಾಗ ಏನೂ ಹೇಳಲು ತೋಚದೆ ಕಣ್ಣುಗಳನ್ನು ಪಿಳಿಪಿಳಿ ಮಾಡಿದೆ. ಶಾಲೆಯಿಂದ ಬಂದು ಮಗಳು ಗೇಟು ತೆಗೆಯುತ್ತಲೇ ನಂಬರ್ ಪ್ಲೇಟ್ ಬಗ್ಗೆ ಪ್ರಶ್ನಿಸಿದಳು! ನಡೆದ ಕತೆಯನ್ನು ವಸ್ತುಶ: ವಿವರಿಸಿದೆ.
"ಎಷ್ಟು ಚೆನ್ನಾಗಿತ್ತು ಕಾರಿನ ಔಟ್ಲುಕ್. ತಂದು ಒಂದು ತಿಂಗಳು ಕೂಡಾ ಆಗ್ಲಿಲ್ಲ, ಅಷ್ಟರಲ್ಲೇ ಗೇಟಿಗೆ ಒರೆಸಿ, ಬೈಕಿಗೆ ಕುಟ್ಟಿ ಎಲ್ಲಾ ಆಯ್ತು! ಇನ್ನು ಕಾರಿನ ಒಳಗಡೆ ಏನಾದ್ರೂ ಇದೆಯಾ ಅಂತ ನೋಡು ಹಾಳುಮಾಡ್ಲಿಕ್ಕೆ!" ಎಂದು ತುಸು ಕೋಪದಿಂದಲೇ ಹೇಳಿದಳು.
"ನೋಡು ಮರಿ. ಇಂತಹವೆಲ್ಲಾ ಆಗೋದು ಕಾಮನ್. ನಡೆಯುವವರು ಎಡವುತ್ತಾರೆ ಹೊರತು ಕುಳಿತವರಲ್ಲ!", "ಮನುಷ್ಯ ಆತ ಮಾಡಿದ ತಪ್ಪುಗಳಿಂದಲೇ ಕಲಿಯುವುದು ಕಂದಾ" ಅಂತ ನೀತಿ ಬೋಧನೆ ಪಾಠ ಮಾಡಿದೆ ಅವಳಿಗೆ! 
"ಡೋಂಟ್ ವರಿ ಬೇಬಿ, ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ, ಪ್ರಾಮಿಸ್" ಎನ್ನುತ್ತಾ ಅವಳ ಹತ್ತಿರ ರಾಜಿ ಮಾಡಿಕೊಂಡೆ!
ಏನಿಲ್ಲಾಂದ್ರೂ ಕಾರಿನ ಮುಂದಿನ ಗ್ಲಾಸನ್ನೂ, ನಂಬರು ಪ್ಲೇಟನ್ನು ಸರಿ ಮಾಡಿಸಿಬಿಡೋಣವೆಂದು ಮರುದಿನ ಮೊದಲು ವರ್ಕ್ಶಾಪಿಗೆ ಕಾರಿನಲ್ಲಿ ಹೋದೆವು. ಕಾರನ್ನು ನೋಡುತ್ತಲೇ ಅಲ್ಲಿನ ಸಿಬ್ಬಂದಿಯ ಪ್ರಶ್ನೆ, "ಡೆಂಟ್(ಗುಳಿ) ಹೇಗೆ ಬಿತ್ತು?", "ನಂಬರು ಪ್ಲೇಟ್ ಹೇಗೆ ಒಡೆಯಿತು?" ಅಂತೆಲ್ಲಾ!
ಇಷ್ಟರವರೆಗೆ ಎಲ್ಲರಿಗೂ ಹೇಳಿ ಸುಸ್ತಾಗಿತ್ತು! ಇವರಿಗೂ ಎಲ್ಲರ ಹತ್ತಿರ ಹೇಳಿದ ಸತ್ಯವನ್ನೇ ಹೇಳಿದೆವು!
ವಿಂಡೋ ಮಿರರ್ ದುರಸ್ತಿ ಮಾಡಿಕೊಡುತ್ತಾ ಅವರು ಹೇಳಿದರು, "ಸರಿ, ಕಾರಿಗೆ ಇನ್ನೇನೆಲ್ಲಾ ಆಗುತ್ತೋ ಆಗಲಿ! ಮತ್ತೆ ಒಂದು ಇನ್‍ಶ್ಯೂರೆನ್ಸ್ ಕ್ಲೇಮ್ ಮಾಡಿಕೊಂಡುಬಿಡಿ!" ಅಂತ. ಅಂತೂ ನಾವುಗಳು ಇನ್ನೂ ’ಏನೆಲ್ಲಾ ಕಾರಬಾರುಗಳನ್ನು ಕಾರಿನ ಮೇಲೆ ಮಾಡುವವರಿದ್ದೇವೆ’ಎಂದು ಓರೆಗಣ್ಣಿನಿಂದ ನಮ್ಮನ್ನೂ, ಕಾರನ್ನೂ ನೋಡುತ್ತಾ ಜ್ಯೋತಿಷಿಗಳ ಹಾಗೆ ಹೇಳಿಬಿಟ್ಟರವರು! ಈ ಮುನ್ಸೂಚನೆಯಂತೂ ನಮ್ಮನ್ನು ಜಾಗ್ರತ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು!
’ಮತ್ತೇನೂ ಗುಳಿ, ಗೆರೆ, ಬರೆಗಳನ್ನೆಲ್ಲಾ ಮಾಡುವುದಿಲ್ಲ, ಜಾಗ್ರತೆ ವಹಿಸುತ್ತೇವೆ’ ಅಂತ ಗಟ್ಟಿ ಆಲೋಚನೆ ಮಾಡಿಕೊಂಡಿದ್ದೇವೆ ಈಗ ಸದ್ಯಕ್ಕೆ!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.

No comments:

Post a Comment