Saturday, April 11, 2015

"ಜೀವನ ದೀಪ" - ನನ್ನ ಕಥಾಸಂಕಲನದ (ಶೀರ್ಷಿಕೆಯ) ಒಂದು ಸಣ್ಣ ಕಥೆ

ಜೀವನ ದೀಪ
ಮೈಸೂರು ಬಸ್ ನಿಲ್ದಾಣದಲ್ಲಿ ಮಂಗಳೂರಿಗೆ ರಾತ್ರಿ ಹತ್ತು ಗಂಟೆಗೆ ಸರಿಯಾಗಿ ಹೊರಡುವ ಬಸ್ಸು ನಿಂತಿತ್ತು. ಸೂಪರ್ ಡಿಲಕ್ಸ್ ಬಸ್ ಅದು. ಬಸ್ಸಿಗೆ ಹತ್ತಿ, ಟಿಕೆಟ್ ಹಿಡಿದು ನೋಡುತ್ತಾ ತನ್ನ ಸೀಟಿನ ಸಂಖ್ಯೆ ಹದಿನೈದು, ವಿಂಡೋ ಸೈಡ್ ಎಂದು ಮತ್ತೆ ಮತ್ತೆ ದೃಢಪಡಿಸಿಕೊಂಡು ಸುಮಾರು ಇಪ್ಪತ್ತೆರಡು ಇಪ್ಪತ್ಮೂರು ವರ್ಷದ ಹುಡುಗಿಯೊಬ್ಬಳು ತನ್ನ ಸಂಖ್ಯೆಯ ಸೀಟಿನಲ್ಲಿ ಬಂದು ಕುಳಿತುಕೊಂಡಳು. ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಟೀಶರ್ಟ್ ಧರಿಸಿದ್ದ, ಮೈ ಕೈ ತುಂಬಿಕೊಂಡಿದ್ದ ಇವಳನ್ನು ಬಸ್ಸಿನಲ್ಲಿ ಅನೇಕ ಕಣ್ಣುಗಳು ನೋಡಿದವು. ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವಂತಹ ಮೋಹಕ ಚೆಲುವು ಅವಳಲ್ಲಿ ಮನೆಮಾಡಿತ್ತು.ಎಲ್ಲರಲ್ಲೂ ’ಇವಳೊಬ್ಬಳೇ ರಾತ್ರಿ ಪ್ರಯಾಣಿಸುತ್ತಿರುವಳಲ್ಲವೇ?’ಎನ್ನುವ ಪ್ರಶ್ನೆ ಎದ್ದಿತು. ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಕೆಲವರಿಗೆ, "ನನ್ನ ಸೀಟು ಆಕೆಯ ಪಕ್ಕದಲ್ಲಿದ್ದಿದ್ದರೇ..." ಎನ್ನುವ ಆಸೆಯೂ ಕಾಡಿತು. ಅವಳೊಡನೆ ಕುಳಿತುಕೊಳ್ಳುವ ಭಾಗ್ಯವಂತನಾರೋ ಅಥವಾ ಯಾರಾದರೂ ಮಹಿಳೆಯೇ ಕುಳಿತುಕೊಳ್ಳುತ್ತಾಳೋ ಎಂದು ತಿಳಿದುಕೊಳ್ಳುವ ಹುಚ್ಚು ಚಪಲವೂ ಉಂಟಾಯಿತು. ಬಸ್ಸಿನ ಮೆಟ್ಟಿಲು ಹತ್ತಿ ಬಂದವರನ್ನೆಲ್ಲಾ ಅವರೆಲ್ಲಿ ಕುಳಿತುಕೊಳ್ಳುತ್ತಾರೆಂದು ಎಲ್ಲರ ಕಣ್ಣುಗಳೂ, ಕುತ್ತಿಗೆಗಳೂ ವಿಚಾರಿಸಿಕೊಳ್ಳುತ್ತಿದ್ದವು.
     ಒಂಭತ್ತು ಗಂಟೆ ಐವತ್ತೈದು ನಿಮಿಷವಾದರೂ ಅವಳ ಪಕ್ಕದ ಸೀಟಿಗೆ ಯಾರೂ ಬರಲೇ ಇಲ್ಲ. ಇದ್ದ ಐದು ನಿಮಿಷಗಳೂ ಕಳೆದವು. ಬಸ್ಸಿನ್ನೇನು ಚಲಿಸಬೇಕು, ಅಷ್ಟರಲ್ಲೇ ಒಬ್ಬ ಸುಂದರ ಯುವಕ ಬ್ರೀಫ್‍ಕೇಸು, ಮತ್ತೊಂದು ಹ್ಯಾಂಡ್ ಬ್ಯಾಗಿನೊಂದಿಗೆ ಬಸ್ಸನ್ನೇರಿ ಬಂದು, "ನಂಬರ್ ಸಿಕ್ಸ್‍ಟೀನ್" ಎಂದು ತುಸು ಜೋರಾಗಿಯೇ ಹೇಳಿ ಟಿಕೇಟನ್ನು ಮಡಿಸಿ ಕಿಸೆಯೊಳಗಿಡುತ್ತಾ ಹುಡುಗಿಯ ಪಕ್ಕ ಆಸೀನನಾದ. ನೋಡಲು ಒಳ್ಳೆ ಸಿನೆಮಾ ಹೀರೋನಂತೆಯೇ ಕಾಣುತ್ತಿದ್ದ ಇವನನ್ನು ನೋಡಿ ಇತರ ಯುವಕರಿಗೆ ಅಸೂಯೆಯಾಯಿತು.
     ಬಸ್ಸಿನ ನಿರ್ವಾಹಕ ಹುಡುಗನ ಹತ್ತಿರ ಬಂದು ಟಿಕೇಟ್ ಕೇಳುವಾಗ ಆತ ಕೊಡುತ್ತಾ, "ಮಂಗಳೂರಿಗೆ ಎಷ್ಟೊತ್ತಿಗೆ ರೀಚ್ ಆಗುತ್ತೆ ಸರ್?" ಎಂದು ಕೇಳಿದ.
"ಮಾರ್ನಿಂಗ್ ಫೈವ್ ತರ‍್ಟಿ ಆರ್ ಸಿಕ್ಸ್" ಎಂದನಾತ.
"ನೀವೂ ಮಂಗಳೂರಿಗಲ್ಲವೇ ಮೇಡಂ?" ಎಂದು ಕೇಳಿದ ನಿರ್ವಾಹಕ ಹುಡುಗಿಯಲ್ಲಿ.
ಹೌದೆಂದು ತಲೆಯಾಡಿಸುತ್ತಾ, "ಸರ್ ರಿಸರ್ವೇಷನ್ ಮಾಡಿಸುವಾಗ್ಲೇ ನಾನು ಲೇಡೀಸ್ ಪಕ್ಕದಲ್ಲೇ ಸೀಟು ಕೊಡಿಸಲು ಹೇಳಿದ್ದೆ. ನಿಮ್ಮ ಸೀಟು ಲೇಡೀಸ್ ಪಕ್ಕದ್ದೇ ಅಂದಿದ್ದರು ಕೌಂ‍ಟರ‍್ನಲ್ಲಿ...ಆದರೆ..." ಎನ್ನುತ್ತಾ ತನ್ನ ಪಕ್ಕದಲ್ಲಿ ಕುಳಿತಿದ್ದ ಆ ಯುವಕನನ್ನೊಮ್ಮೆ ನೋಡುತ್ತಾ ತಡವರಿಸಿದಳು.
"ಬಸ್ಸಿನಲ್ಲಿ ಇದೆಲ್ಲಾ ಕಾಮನ್ ಮೇಡಂ, ರಿಸರ್ವೇಶನ್ ಮಾಡಿಸುವಾಗ ಎಲ್ಲಾ ಸಲವೂ ಲೇಡೀಸ್ ಪಕ್ಕದಲ್ಲೇ ಸೀಟು ಸಿಗುತ್ತೆ ಅಂತ ಹೇಳಾಲಿಕ್ಕಾಗುವುದಿಲ್ಲ. ಅಡ್ಜಸ್ಟ್ ಯುವರ‍್ಸೆಲ್ಫ್" ಎಂದು ಹೇಳಿ ಕಂಡಕ್ಟರ್ ಜಾಗ ಖಾಲಿ ಮಾಡಿದ.
ಯುವಕ ಯುವತಿಯನ್ನೊಮ್ಮೆ ನೋಡಿ, "ಮೇಡಂ ಇಫ್ ಯು ಫೀಲ್ ಅನ್‍ಕಂಫರ್‌ಟೇಬಲ್, ಐ ಕ್ಯಾನ್ ಟೇಕ್ ಎನದರ್ ಸೀಟ್ ಅಂಡ್ ಮೇಕ್ ಎ ಲೇಡಿ ಸಿಟ್ ಹಿಯರ್"ಎಂದ.
ಹುಡುಗ ಒಳ್ಳೆಯವನಿರಬೇಕೆಂದುಕೊಂಡು ಹುಡುಗಿ, "ನೋ ಪ್ರಾಬ್ಲಂ" ಎಂದು ಹಲ್ಲುಕಿಸಿದಳು.
ಇವನಿಂದ ಮಂಗಳೂರಿನವರೆಗೆ ಯಾವುದೇ ತೊಂದರೆ ಬರಲಿಕ್ಕಿಲ್ಲವೆಂದುಕೊಂಡು ಕಿಟಕಿಯ ಗಾಜಿನಿಂದ ಹೊರಗೆ ನೋಡುತ್ತಾ ಕುಳಿತಳು. ಒಂದೈದು ನಿಮಿಷಗಳು ಕಳೆದ ನಂತರ ಬಸ್ಸಿನ ಒಳಗಡೆಯ ಲೈಟುಗಳನ್ನೆಲ್ಲಾ ಚಾಲಕ ಆಫ್ ಮಾಡಿದ. ಬಸ್ಸಿನ ಒಳಗಡೆ ಕತ್ತಲಾವರಿಸಿತು. ಹುಡುಗಿಯ ಎದೆ ಒಮ್ಮೆಲೆ ’ಝಗ್’ ಎಂದಿತು. ಬಸ್ಸು ವೇಗವಾಗಿ ಸಾಗುತ್ತಿತ್ತು. ಮೈಸೂರನ್ನು ದಾಟಿತ್ತು. ಅಲ್ಲಲ್ಲಿ ಸ್ಟ್ರೀಟ್ ಲೈಟುಗಳು ಹೊತ್ತಿಕೊಂಡಿರುವ ಕಂಬಗಳು ಸಿಗುವಾಗಲಷ್ಟೇ ಬಸ್ಸಿನ ಒಳಗೂ ಒಮ್ಮೆಲೆ ಪ್ರಕಾಶವಾಗುತ್ತಿತ್ತು. ಆಗೆಲ್ಲಾ ಆ ಯುವತಿ ಯುವಕನನ್ನು ನೋಡುತ್ತಿದ್ದಳು. ಪ್ರತೀ ಸಲ ನೋಡಿದಾಗಲೂ ಕಣ್ಣು ಮುಚ್ಚಿ ಸೀಟಿಗೆ ತಲೆಯೊರಗಿಸಿದ್ದನಾತ. ನಿಟ್ಟುಸಿರುಬಿಟ್ಟು ತಾನೂ ನಿದ್ದೆ ಹೋದಳು.
"ಕುಶಾಲನಗರ ಇಳಿಯೋರು ಯಾರಾದ್ರಿದ್ದೀರಾ ಸಾರ್? ಕುಶಾಲನಗರ ಬಂತು...ಇಳ್ಕೊಳ್ಳಿ" ಎಂದು ಕಂಡಕ್ಟರ್ ಬೊಬ್ಬೆ ಹಾಕುವಾಗಲೇ ಆಕೆಗೆ ಎಚ್ಚರವಾದದ್ದು. ಕಣ್ಣು ಬಿಡುವಾಗ ಬಸ್ಸಿನೊಳಗಿನ ಒಂದೆರಡು ಲೈಟುಗಳು ಉರಿಯುತ್ತಿತ್ತು. ಅವಳು ಯುವಕನನ್ನು ನೋಡಿದಳು. ನಿದ್ರೆಯಿಂದ ಎಚ್ಚೆತ್ತು ತುಂಬಾ ಹೊತ್ತಾದಂತಿತ್ತು ಅವನ ಮುಖ. ಏನಾದರೂ ಆತ ತನ್ನೊಡನೆ ಮಾತನಾಡಬಹುದೇ ಎಂದು ಯೋಚಿಸಿದಳು. ಆದರೆ ಊಹೂಂ...ಇಲ್ಲ. ಅಲ್ಲಿಂದ ಮಡಿಕೇರಿಯವರೆಗೂ ಅವಳು ಎಚ್ಚರವಾಗಿಯೇ ಇದ್ದಳು. ಮಡಿಕೇರಿಯಲ್ಲಿ ’ಟೀ’, ’ಕಾಫಿ’ಗೆಂದು ಬಸ್ಸನ್ನು ನಿಲ್ಲಿಸಿರುವಾಗ ಯುವಕ ಬಸ್ಸಿನಿಂದಿಳಿದು ’ಟೀ’ ಕುಡಿಯಲು ಹೋದ. ಹೋಗುವಾಗ ತನ್ನ ಹ್ಯಾಂಡ್‍ಬ್ಯಾಗನ್ನು ತಾನು ಕುಳಿತಿದ್ದ ಸೀಟಿನ ಮೇಲಿರಿಸಿ ಹೋಗಿದ್ದ. ಇದ್ದಕ್ಕಿದ್ದಂತೆ ಯುವತಿಯ ಕಣ್ಣು ಆ ಬ್ಯಾಗಿನಲ್ಲಿದ್ದ ಲೇಬಲ್ ಮೇಲೆ ಬಿತ್ತು. "ಜೀವನ್" ಎಂದು ಓದಿದಾಗ ಅವಳಲ್ಲಿ ಟೆಂಪರೇಚರ್ ಒಮ್ಮೆಲೇ ಏರಿದಂತೆ ಅನುಭವವಾಗಿ ಅವಳದನ್ನು ತಡೆದುಕೊಂಡಳು. ತಾನು ನಾಳೆ ಮಂಗಳೂರಿನ ಹೊಟೇಲಿನಲ್ಲಿ ಭೇಟಿಯಾಗುವವನ ಹೆಸರು ಕೂಡಾ "ಜೀವನ್" ಎಂದುಕೊಂಡಳು. ಅಷ್ಟರಲ್ಲಿ ’ಟೀ’ ಮುಗಿಸಿ ಯುವಕ ಬಂದು ಸೀಟಿನಲ್ಲಿ ಕುಳಿತುಕೊಂಡ.
ಬಸ್ಸು ಹೊರಟ ನಂತರ ಯುವತಿಯ ಆಲೋಚನೆ ಹಿಂದಕ್ಕೋಡಿತು. ಒಂದು ತಿಂಗಳ ಹಿಂದೆ ಕನ್ನಡ ಮಾಸಪತ್ರಿಕೆಯಲ್ಲಿ ವೈವಾಹಿಕ ಅಂಕಣವನ್ನು ಓದುತ್ತಿದ್ದಳವಳು. ಅದರಲ್ಲಿ ಒಂದು ಜಾಹೀರಾತು ಹೀಗಿತ್ತು: "ವಧು ಬೇಕಾಗಿದೆ, ಹಿಂದು ಸ್ಫುರದ್ರೂಪಿ ಯುವಕ, ೫.೯’, ೨೮ ವರ್ಷ ಪ್ರಾಯ, ಬ್ಯಾಂಕಿನಲ್ಲಿ ಉದ್ಯೋಗ - ೨೫/೨೬ ವರ್ಷದ ವಧು ಬೇಕು. ಜಾತಿ ಅಭ್ಯಂತರವಿಲ್ಲ" ಸಂಪರ್ಕಿಸಿ: ಬಾಕ್ಸ್ ನಂಬರ್.೨೮, ವಿವೇಕ್ ಅಡ್ವಟೈಸಿಂಗ್, ಮೈಸೂರು." ಇದನ್ನು ಓದಿದವಳೇ ಆ ಯುವತಿ, ’ನನಗಂತೂ ಯಾರೂ ದಿಕ್ಕು ದೆಸೆ ಇಲ್ಲ. ಅನಾಥಾಶ್ರಮದಲ್ಲಿ ಕಳೆದೆ. ಇನ್ನೂ ಎಷ್ಟು ಸಮಯಾಂತ ಈ ಏಕಾಂಗಿ ಜೀವನ? ಏನೋ ಪುಣ್ಯದಿಂದ ಪಿ.ಯು.ಸಿ ಮುಗಿದ ಕೂಡಲೇ ಪರೀಕ್ಷೆ ಪಾಸು ಮಾಡಿ ಎಲ್.ಐ.ಸಿ ನಲ್ಲಿ ಕೆಲಸ ಪಡೆದುಕೊಂಡೆ. ಇನ್ನು ನನ್ನದೇ ಆದ ಜೀವನ, ನನ್ನ ಸಂಸಾರ ಅಂತ ಒಂದನ್ನು ನಾನೇ ರೂಪಿಸಿಕೊಂಡು ಗಂಡ, ಮನೆ, ಮಕ್ಕಳು, ಉದ್ಯೋಗ...ಆಹಾ ಅದೆಷ್ಟು ಚೆನ್ನ..." ಎಂದುಕೊಂಡು ಹಾಸ್ಟೆಲ್ ವಾರ್ಡನ್ ಬಳಿ ಬಂದು ತನ್ನ ಮನದಾಸೆ ತಿಳಿಸಿದಳು. ಅದಕ್ಕೆ ಆ ವೃದ್ಧೆ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದಳು ಕೂಡಾ.
"ದೀಪಾ, ನಿನ್ನ ಈ ಕನಸು ಕೈಗೂಡಿದರೆ ನನಗದೆಷ್ಟು ಸಂತೋಷ ಗೊತ್ತಾ" ಎನ್ನುತ್ತಾ ದೀಪಾಳನ್ನು ಅಪ್ಪಿದ್ದಳು. ಅವಳ ಅನುಮತಿಯಂತೆ ಅವಳು ಜಾಹಿರಾತಿನ ಹುಡುಗನಿಗೆ ಪತ್ರ ಬರೆದಿದ್ದಳು. ತಾನು ಅನಾಥೆ ಎನ್ನುವುದನ್ನು ಮಾತ್ರ ಬರೆದಿರಲಿಲ್ಲ. ಅವಳ ಪತ್ರ ಅವನಿಗೆ ತಲುಪಿ ಅವನಿಂದಲೂ ಆಕೆಗೊಂದು ಪತ್ರ ಬಂದಿತ್ತು. ಅದರಿಂದ ಆತ ’ಜೀವನ್’ ಎಂಬುವನೆಂದು ಪತ್ರ ಮುಖೇನ ಪರಿಚಯವಾಗಿತ್ತು. ಅವನ ಪತ್ರದಲ್ಲಿ ಆತ,
ದೀಪಾ,
     ನಿಮ್ಮ ಪತ್ರ ತಲುಪಿದೆ. ನೀವು ನಿಮ್ಮ ಒಂದು ಭಾವಚಿತ್ರವನ್ನಾದರೂ ಕಳುಹಿಸಬಾರದಿತ್ತೇ? ಹೋಗಲಿ ಬಿಡಿ, ನಾನು ನಿಮ್ಮನ್ನು ಭೇಟಿಯಾಗಲಿಚ್ಛಿಸುತ್ತೇನೆ...ನಿಮ್ಮ ಊರಿಗೆ ನಿಮ್ಮನ್ನು ಭೇಟಿಯಾಗಲು ನಾನು ಬರುವವನಿದ್ದೇನೆ. ಮಂಗಳೂರಿನ ಹೊಟೇಲ್ ಒಂದರಲ್ಲಿ ಮುಂದಿನ ಭಾನುವಾರ ಭೇಟಿಯಾಗೋಣ..ನೀವೂ, ನಿಮ್ಮ ತಂದೆ ತಾಯಿಯರೊಂದಿಗೆ ಬನ್ನಿರಿ...ಅಥವಾ ನಿಮಗೆ ಆ ದಿನ ಸೂಕ್ತವಲ್ಲವಾದರೆ ಮತ್ತು ಭೇಟಿ ಮಾಡಲು ಯಾವಾಗ, ಎಲ್ಲಿ ಸೂಕ್ತವೋ ಬರೆದು ತಿಳಿಸಿರಿ" ಎಂದು ಬರೆದಿದ್ದನು. ಅವನ ಆ ಪತ್ರಕ್ಕೆ ತನಗೂ ಅದೇ ದಿನ ಸೂಕ್ತವೆಂದು, ಹೊಟೇಲ್ ಒಂದರ ಹೆಸರನ್ನು ಸೂಚಿಸಿ ಬೆಳಗ್ಗೆ ೧೦ ಗಂಟೆಗೆ ಭೇಟಿಯಾಗೋಣ ಎಂದು ಮರುತ್ತರ ಬರೆದಿದ್ದಳವಳು.
                                                              .................
     ಬಸ್ಸಿನ ಚಾಲಕ ದೊಡ್ಡ ಬ್ರೇಕ್ ಹಾಕಿ ಕಲ್ಲುಗುಂಡಿ ಎಂಬ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸುವಾಗಲೇ ಯುವತಿ ವಾಸ್ತವಕ್ಕೆ ಬಂದದ್ದು. ಅವಳು ಕೈಗೆ ಕಟ್ಟಿದ್ದ ಬ್ರೇಸ್ಲೆಟ್ ಬಿಚ್ಚಿಕೊಂಡು ಯುವಕನ ಎಡಗಾಲಿನ ಹತ್ತಿರ ಬಿತ್ತು. ಬಸ್ಸಿನೊಳಗೆ ಲೈಟುಗಳೆಲ್ಲಾ ಉರಿಯತೊಡಗಿದವು. ಯುವಕ ಆ ಬ್ರೇಸ್‍ಲೆಟನ್ನು ಎತ್ತಿ ಅವಳ ಕೈಗೆ ಕೊಡುತ್ತಾ ಅದರ ಪಟ್ಟಿಯಲ್ಲಿದ್ದ ಹೆಸರನ್ನು ಗಮನಿಸಿದ. ’ದೀಪ’ ಹೆಸರು ಅವನಲ್ಲೂ ಸಂಚಲನ ಮೂಡಿಸಿತ್ತು. ಮೊದಲ ಬಾರಿಗೆ ಆಕೆಯ ಮುಖವನ್ನೊಮ್ಮೆ ನೋಡಿದ. ಯುವತಿ ಕೂಡಲೇ ಅದನ್ನು ಗಮನಿಸಿದಳು. ಆ ಜಾಹಿರಾತು ಕೊಟ್ಟವನು ಇವನಲ್ಲದೇ ಬೇರೆ ಯಾರೂ ಅಲ್ಲ ಎಂದು ನಿಶ್ಚಯವಾಗಿ ಅರಿತಳು. ಜೋರಾಗಿ ಮೇಲೆ ಕೆಳಗೆ ಹೋಗುತ್ತಿರುವ ಉಸಿರನ್ನು ತಡೆದುಕೊಂಡಳು.
"ನೋಡಿ ಸರ್, ಟೀ, ಕಾಫಿಗೆ ಐದ್ನಿಮಿಷ ಟೈಂ ಇದೆ" ಎನ್ನುತ್ತಾ ಕಂಡಕ್ಟರ್ ಬಸ್ಸಿನಿಂದಿಳಿದ. ಯುವಕ ಇಳಿಯಲಿಲ್ಲ. ಅವನಿಗೆ ’ದೀಪ’ ಹೆಸರು ಕುತೂಹಲ ಮೂಡಿಸಿತ್ತು. ಮತ್ತಂದುಕೊಂಡ, ’ಆ ದೀಪನ ಊರು ಮಂಗಳೂರು. ಅವಳು ಹೇಗೆ ಇಲ್ಲಿರಲಿಕ್ಕೆ ಸಾಧ್ಯ? ಅದೂ ನಾಳೆ ಭೇಟಿಯಾಗುವವಳು ಈ ರಾತ್ರಿ ಬಸ್ಸಿನಲ್ಲಿರಲು ಸಾಧ್ಯವೇ? ಛೇ ಇಲ್ಲ ಇಲ್ಲ...ಜಗತ್ತಿನಲ್ಲಿ ಎಷ್ಟು ’ದೀಪ’ಎನ್ನುವ ಹುಡುಗಿಯರಿದ್ದಾರೋ ಏನೋ...?! ಅಂದರೂ ವಿಚಾರಿಸುವುದರಲ್ಲೇನು ತಪ್ಪು? ವಿಚಾರಿಸಿಯೇ ಬಿಡೋಣ...ಏನಾದರೂ ಆಗಲಿ ಎಂದುಕೊಂಡು,
" ನೀವು ಮಂಗಳೂರಿಗಾ?, ಮಂಗಳೂರಿನವರಾ?" ಕೇಳಿದ ಮೆಲ್ಲಗೆ ಯುವತಿಯನ್ನು.
"ಹೌದು, ನಿಮ್ಮ ಊರು?"
"ಮೈಸೂರು"
"ಓದುತ್ತಿದ್ದೀರಾ?" ಕೇಳಿದ ಯುವಕ
"ಇಲ್ಲ ಎಲ್.ಐ.ಸಿ ನಲ್ಲಿ ಕೆಲಸ ಮಾಡುತ್ತಿದ್ದೇನೆ"
"ನಿಮ್ಮ ಹೆಸರು?" ಕುತೂಹಲದಿಂದ ಕೇಳಿದ ಯುವಕ.
"ದೀಪಾ"
ಇಷ್ಟು ವಿವರ ಆಕೆಯಿಂದ ಸಿಕ್ಕಿದ್ದೇ ಯುವಕನಿಗೆ ’ಇವಳನ್ನೇ ತಾನು ನಾಳೆ ಮಂಗಳೂರಿನ ಹೊಟೇಲಿನಲ್ಲಿ ಭೇಟಿಯಾಗಲಿರುವ ಹುಡುಗಿ’ ಎಂದು ತಿಳಿದುಹೋಯಿತು."ನಾನು ಜೀವನ್ ಅಂತ...ಮೈಸೂರಿನಲ್ಲಿ ಬ್ಯಾಂಕ್ ಉದ್ಯೋಗಿ... ನಿಮ್ಮನ್ನೊಂದು ಪ್ರಶ್ನೆ ಕೇಳಬಹುದೇ?"
"ಏನು?"
"ನೀವೇ ತಾನೇ ನನ್ನ ವೈವಾಹಿಕ ಜಾಹಿರಾತನ್ನು ನೋಡಿ ಅದಕ್ಕೆ ಉತ್ತರಿಸಿದವರು?"
"ಹೌದು" ಎಂದಳವಳು ತಲೆ ತಗ್ಗಿಸುತ್ತಾ. ಅವಳಿಗೆ ನಾಚಿಕೆಯೂ, ಹೆದರಿಕೆಯೂ ಆಗಿ ದೇಹದಲ್ಲಿ ಕಂಪನ ಶುರುವಾಗಿ ಬೆವರತೊಡಗಿದಳು.
ಯುವಕ ತನ್ನ ಮಾತನ್ನು ಮುಂದುವರಿಸಿದ.
"ನಾನೇ ಆ ಜೀವನ್...ನಾನು ಹೀಗೆ ...ನಾವಿಬ್ಬರೂ ಬಸ್ಸಿನಲ್ಲಿ ಸಂಧಿಸುವೆವೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ."
"....."
"ಏನಾದ್ರೂ ಮಾತನಾಡಿ...."
"....."
"ನೀವೊಬ್ಬರೇ ಪ್ರಯಾಣಿಸುತ್ತಿದ್ದೀರಾ? ನಿಮ್ಮ ತಂದೆ, ತಾಯಿ..."
"ಹೌದು ಒಬ್ಬಳೇ..."
"ನಿಮ್ಮ ಮನೆ ತಂದೆ ತಾಯಿ ಬಗ್ಗೆ ತಿಳಿಸಿ..."
"....."
ಏಕೆ ಮೌನ? ನಾಳೆ ಮಾತನಾಡಬೇಕಾದ ವಿಷಯವನ್ನು ಈಗಲೇ ಮಾತನಾಡಿದ್ದಕ್ಕೆ ಬೇಸರವೇ? ಅಥವಾ ಈ ವೇಳೆಯಲ್ಲಿ ಕೇಳಬಾರದಿತ್ತೇ?"
"ಇಲ್ಲ ಹಾಗೇನಿಲ್ಲ"
"ನೋಡಿ ಮಿಸ್ ದೀಪಾ. ನಾನೊಬ್ಬ ಅನಾಥ. ಅಮ್ಮ, ಅಪ್ಪ ಯಾರೋ ನಾನರಿಯೆ...ಮಗುವಾಗಿದ್ದ ನನ್ನನ್ನು ದೇವಸ್ಥಾನದ ಆವರಣದಲ್ಲಿ ಹೆತ್ತವರು ಬಿಟ್ಟು ಹೋಗಿದ್ದರು...ಯಾರೋ ಪುಣ್ಯಾತ್ಮರು ಅನಾಥಾಶ್ರಮಕ್ಕೆ ಸೇರಿಸಿದರಂತೆ. ನಂತರ ಅಲ್ಲೇ ಬೆಳೆದೆ. ಅಲ್ಲಿ ಪಿ.ಯು.ಸಿ ವರೆಗೆ ಓದಿಸಿದರು. ನನ್ನ ಅದೃಷ್ಠದಿಂದ ಬರೆದ ಬ್ಯಾಂಕ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಕೆಲಸವೂ ಸಿಕ್ಕಿತು. ಇದೇ ನನ್ನ ಜೀವನದಲ್ಲಿನ ಮೊದಲ ಸಂತಸದ ಘಳಿಗೆ. ಇನ್ನು ನನ್ನದೇ ಆದ ಒಂದು ಬದುಕನ್ನು ರೂಪಿಸಿಕೊಳ್ಳುವ ಆಸೆಯಿಂದ ಮದುವೆಯಾಗಲು ಹೊರಟಿರುವೆ. ಮೈಸೂರಿನಲ್ಲೇ ಸೈಟು, ಮನೆ ಮಾಡಿದ್ದೇನೆ. ಓಡಾಡಲು ಒಂದು ಸ್ಕೂಟರ್ ಇದೆ...ಅಪ್ಪ, ಅಮ್ಮ, ಬಂಧು, ಬಳಗ ಇರುವ ಹುಡುಗಿಯರು ಯಾರೂ ನನ್ನನು ಮದುವೆಯಾಗಲು ಒಪ್ಪುವುದಿಲ್ಲ...ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟೆ...ಇವಿಷ್ಟು ಇರುವ ವಿಷಯ. ಇನ್ನು ಮುಂದಿನ ಮಾತುಗಳು ನಿಮ್ಮದು..." ಎನ್ನುತ್ತಿದ್ದಂತೆ ಯುವತಿಗೆ ಅಳುವನ್ನು ತಡೆದುಕೊಳ್ಳಲಾಗಲಿಲ್ಲಿ.
"ರೀ....ದೀಪಾ ಯಾಕೇ? ಯಾಕಳುತ್ತಿದ್ದೀರಾ? ನಾನು ನನ್ನ ಬಗ್ಗೆ ಹೇಳಿದ್ದು ಖುಷಿಯಾಗಲಿಲ್ಲವೇ? ಏನಾದರೂ ಪ್ರಮಾದವಾಯಿತೇ?" ಎಂದು ಕೇಳಿದ ಯುವಕ.
"ಇಲ್ಲ ಖಂಡಿತಾ ಇಲ್ಲ ಜೀವನ್‍ರವರೇ. ದು:ಖ, ಸಂತೋಷ ಇವೆರಡರ ಮಿಶ್ರಣವೇ ಈ ಕಣ್ಣೀರು. ನಾನೂ ನಿಮ್ಮಂತೆಯೇ ಅನಾಥಾಶ್ರಮದಲ್ಲಿ ಬೆಳೆದ, ತಂದೆ, ತಾಯಿ ಯಾರು ಎಂದು ಅರಿಯದ ದುರ್ದೈವಿ" ಎಂದು ಬಿಕ್ಕಿದಳು.
ಯುವಕ ತನಗರಿವಿಲ್ಲದಂತೆ ಅವಳನ್ನು ತನ್ನ ಭುಜದಲ್ಲಿ ಒರಗಿಸಿಕೊಂಡು ತಲೆ ನೇವರಿಸಿದ...ತನ್ನ ಅನಾಥ ಬದುಕಿನ ಅನುಭವ ಅವನನ್ನು ಹಾಗೆ ಮಾಡಿಸಿತು. ಆಗಲೇ ಬಸ್ಸು ಪುತ್ತೂರಿಗೆ ತಲುಪಿತ್ತು. ಬಸ್ಸಿನೊಳಗೆ ಲೈಟುಗಳು ಮತ್ತೆ ಉರಿಯಲು ಪ್ರಾರಂಭವಾದವು. ಇಬ್ಬರೂ ಮಾತನಾಡುತ್ತಲೇ ಇದ್ದರು. ಬಸ್ಸಿನ ಕೆಲವರು ಅಪರಿಚಿರರಾದ ಇವರಿಬ್ಬರೂ ಮಾತನಾಡುತ್ತಿರುವುದನ್ನು ನೋಡಿ, "ಝಮಾನಾ ಬದಲ್ ಗಯಾ" ಎಂದು ವ್ಯಂಗ್ಯವಾಗಿ ಹೇಳಿ ಹೊಟ್ಟೆ ಉರಿಸಿಕೊಂಡರು.
ಇವರ ಹಿಂದಿನ ಸೀಟಿನ ಮಧ್ಯ ಪ್ರಾಯದವರೊಬ್ಬರು ಇವರಿಬ್ಬರನ್ನೂ ಕಲ್ಲುಗುಂಡಿಯಿಂದಲೇ ಕೆಟ್ಟ ಕುತೂಹಲದಿಂದ ಗಮನಿಸುತ್ತಲೇ ಇದ್ದರು.
"ಮಂಗಳೂರಿಗೆ ಬಸ್ಸು ಮುಟ್ಟುವಾಗ ಇಬ್ಬರಿಗೆ ಮದುವೆಯೂ ಆಗಿ ಬಿಡುತ್ತದೆ" ಎಂದು ಪಕ್ಕದಲ್ಲಿ ಕುಳಿತವರ ಹತ್ತಿರ ವ್ಯಂಗ್ಯವಾಡಿದರು.
ಇವರಾಡುವ ಯಾವುದೇ ಮಾತುಗಳು ಅವರಿಬ್ಬರಿಗೆ ಕೇಳಿಸಲೇ ಇಲ್ಲ. ನೋಡುತ್ತಿರುವುದೂ ತಿಳಿಯಲಿಲ್ಲಿ. ಎಲ್ಲರೂ ಇವರಿಬ್ಬರ ಬಗ್ಗೆ ಗುಸುಗುಸು ಮಾತಾಡಿಕೊಂಡರು.
ಮಂಗಳೂರಿಗೆ ಇನ್ನೊಂದು ಗಂಟೆ ಪ್ರಯಾಣ. ಬಸ್ಸು ಹೊರಟಿತು. ಮತ್ತೆ ಪುನ: ಬಸ್ಸಿನೊಳಗೆ ಕತ್ತಲು. ಯುವಕ ಯುವತಿ ಇಬ್ಬರಿಗೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಇಬ್ಬರೂ ತಮ್ಮ ತಮ್ಮ ನಿರ್ಧಾರವನ್ನು ಪರಸ್ಪರ ಹೇಳಿಕೊಳ್ಳಲೇ ಇಲ್ಲ. ಮೌನವೇ ಅವರಿಬ್ಬರು ಮುಂದೆ ಸತಿಪತಿಗಳಾಗುವರೆಂದು ಹೇಳಿತ್ತು.
ಮೌನ ಮುರಿದ ಯುವಕ, "ಅದು ಸರಿ ದೀಪಾರವರೇ, ನೀವು ಮೈಸೂರಿಗೆ ಬರಲು ಕಾರಣ?" ಕೇಳಿದ
"ನನ್ನ ಸಹೋದ್ಯೋಗಿ ಹಾಗೂ ಗೆಳತಿಯ ಮದುವೆಗೆಂದು ಬಂದಿದ್ದೆ. ನಾಳೆ ನಾವು ಭೇಟಿಯಾಗುವ ದಿನವಾದ್ದರಿಂದ ರಾತ್ರಿಯ ಈ ಪ್ರಯಾಣ ಅನಿವಾರ್ಯವಾಗಿತ್ತು"
ಮತ್ತೆ ಮೌನ.
ಯುವತಿಗೆ ಜೀವನ್‍ನ ಪರಿಚಯದಿಂದಾಗಿ ಯಾವುದೋ ಒಂದು ರೀತಿಯ ಬಲ ಸಿಕ್ಕಂತಾಗಿ ’ತಾನೀಗ ಎಷ್ಟು ಭದ್ರ’ ಎಂದು ಮನಸಿನಲ್ಲಿಯೇ ಖುಷಿಪಟ್ಟಳು.
ಹಾಗೂ ಹೀಗೂ ಬಸ್ಸು ಮಂಗಳೂರು ಬಸ್ಸು ನಿಲ್ದಾಣಕ್ಕೆ ಬಂದು ತಲುಪಿತು. ಪ್ರಯಾಣಿಕರೆಲ್ಲಾ ಇಳಿಯುತ್ತಾ ಇವರಿಬ್ಬರನ್ನು ನೋಡಿಕೊಂಡು ಇಳಿಯುತ್ತಿದ್ದರು. ಎಲ್ಲರೂ ಇಳಿದಾದ ನಂತರ ಕೊನೆಯಲ್ಲಿ ಇವರಿಬ್ಬರು ಇಳಿದರು. ಯುವತಿಯ ಲಗ್ಗೇಜು ಬ್ಯಾಗನ್ನು ಯುವಕ ಹೆಗಲಿಗೇರಿಸಿಕೊಂಡ. ಬಸ್ಸಿನಿಂದಿಳಿದ ಕೆಲವರು ಇವರಿಬ್ಬರನ್ನು ಗಮನಿಸುವ ಸಲುವಾಗಿಯೇ ಕೆಳಗೆ ನಿಂತು ಕಾಯುತ್ತಿದ್ದರು. ಇವರಿಬ್ಬರು ಬಸ್ಸಿನಿಂದಿಳಿದು ಒಟ್ಟಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದಂತೆ ಒಬ್ಬ "ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್ ಅಂತಾರೆ. ಆದರೆ ಈಗ ಬಸ್ಸುಗಳಲ್ಲಿ ಕೂಡಾ ಆಗುತ್ತದೆ... ಇನ್ನೊಬ್ಬರ ವಿಷಯ ನಮಗ್ಯಾಕೆ...ಕಮಾನ್ ಫ್ರೆಂಡ್" ಎಂದು ವ್ಯಂಗ್ಯವಾಗಿ ಹೇಳುತ್ತಾ ತನ್ನ ಗೆಳೆಯನ ಹೆಗಲಿಗೆ ಕೈ ಹಾಕಿಕೊಂಡು ತನ್ನ ದಾರಿ ಹಿಡಿದನು. ಮುಂದೆ ಸಾಗುತ್ತಿದ್ದಂತೆ ಯುವಕ ಹೇಳಿದ, "ನನ್ನ ಜೀವನದ ದೀಪವಾಗಿ ನೀವು ಬಂದಿರಿ"
"ಶ್...ನನ್ನನ್ನು ’ನೀವು’ ಎನ್ನಬೇಡಿ. ’ನೀನು’ ಎನ್ನಿರಿ. ನಾನಿನ್ನು ನಿಮ್ಮ ಜೀವನದ ದೀಪವಲ್ಲವೇ" ಎಂದು ಒಲವಿನಿಂದ ನುಡಿದಳು ಯುವತಿ.
ಬೆಳಗಿನ ನಸುಬೆಳಕಿನಲ್ಲಿ ಜೀವನ್, ದೀಪಾ ಇಬ್ಬರೂ ಎಲ್ಲಿಗೆಂದು ತಿಳಿಯದೇ, ಅದರ ಪರಿವೆಯೂ ಇಲ್ಲದೇ ಹೆಜ್ಜೆ ಹಾಕುತ್ತಿದ್ದರು.

ತ್ರಿವೇಣಿ ವಿ ಬೀಡುಬೈಲು


ಮಂಗಳೂರು

No comments:

Post a Comment