Saturday, April 11, 2015

"ಮರೆವಿನ ಅವಾಂತರ"- ಮುಂಬಯಿಯ "ಅಮೂಲ್ಯ" ಪತ್ರಿಕೆಯವರು ನಡೆಸಿದ ರಾಜ್ಯ ಮಟ್ಟದ ಹಾಸ್ಯ ಬರಹ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಲೇಖನ.

ಮರೆವಿನ ಅವಾಂತರ

"ಮರೆಗುಳಿತನ" ಎಂಬುದು ಎಲ್ಲರಿಗೂ ಪರಿಚಿತವೇ. ಏಕೆಂದರೆ ಮಾನವನಿಗೂ, ಅದಕ್ಕೂ ಬಹಳ ನಂಟು. ಸಾಮಾನ್ಯವಾಗಿ ಎಲ್ಲರಿಗದು ಒಂದಲ್ಲಾ ಒಂದು ಬಾರಿಯಾದರೂ ನಕ್ಷತ್ರಿಕನಂತೆ ಕಾಡಿ ಕೊನೆಗೆ ತ್ರಿಶಂಕು ಸ್ಥಿತಿಗೆ ತಲುಪಿಸಿದ ಪ್ರಸಂಗವಿರುತ್ತದೆ. ಸ್ಮಾಲ್, ಟೀನ್, ಮಿಡ್ಲ್, ಓಲ್ಡ್ ಏಜ್ ಎಂಬ ಪರಿಜ್ಞಾನವೂ ಇಲ್ಲದೇ ಅದು ಬಾಧಿಸುವುದುಂಟೇ ಉಂಟು!
     ಆಫೀಸಿಗೆ ಹೋಗಿ ಫೈಲುಗಳೋ, ಪತ್ರಿಕೆಗಳೋ ಕಣ್ಣಿಗೆ ಬಿದ್ದಾಗಲಷ್ಟೇ ನೆನಪಿಗೆ ಬರುತ್ತದೆ, "ಅಯ್ಯೋ ಕನ್ನಡಕ ಮನೇಲೇ ಬಾಕಿ ಆಯ್ತು, ಹಾಳು ಮರೆವೇ", ದಾರಿಯಲ್ಲಿ ಪೋಸ್ಟು ಡಬ್ಬಿ ಕಣ್ಮುಂದೆ ಕಂಡರೆ, "ಅಯ್ಯೋ ಕಾಗದ ಬರೆದದ್ದು ಟೇಬಲ್ ಮೇಲೇ ಬಾಕಿ...ಛೇ..ಮರೆತು ಬಂದು ಬಿಟ್ಟೆ, ಇವತ್ತು ಪೋಸ್ಟ್ ಮಾಡಿದ್ದರೆ ನಾಳೆಯೋ, ನಾಡಿದ್ದೋ ಸಿಗುತ್ತಿತ್ತು" - ಹೀಗೇ ಮರೆವಿನ ಹಾವಳಿಯಿಂದಾಗಿ ಮರೆತೂ ಮರೆತೂ ಕಾಗದ ಮನೆಯೊಳಗೋ, ಕಿಸೊಯೊಳಗೋ, ಬ್ಯಾಗಿನೊಳಗೋ ಬಾಕಿಯಾಗಿ ಯಾಗಿ ಬರೆದು ಒಂದು ತಿಂಗಳ ನಂತರವೂ ಪೋಸ್ಟ್ ಮಾಡುವ ಅಭ್ಯಾಸವಿದೆ ಕೆಲವರಿಗೆ! ಮತ್ತೆ ಕಾಗದ ಬರೆದ ತಾರೀಖು ನೋಡಿ ಪತ್ರ ಸಿಕ್ಕಿದವರ ಬೈಗುಳದ ಸುರಿಮಳೆ ನಿರಪರಾಧಿಗಳಾದ ಪೋಸ್ಟ್ ಆಫೀಸಿನವರ ಮೇಲೆ! ಶಾಲೆಯಲ್ಲಿ ಕೆಲವು ಮಕ್ಕಳಿಗೆ ಕ್ಲಾಸಿನಲ್ಲಿ ಟೀಚರ್, "ಎಲ್ಲಿ ಹೋಂ ವರ್ಕ್ ತೆಗೆಯಿರಿ ಎಲ್ಲರೂ...ಎಲ್ಲರೂ ಮಾಡಿ ಬಂದಿದ್ದೀರಿ ತಾನೇ?" ಎಂದು ಕೇಳುವಾಗಲಷ್ಟೇ ನೆನಪಿಗೆ ಬರುತ್ತದೆ ಹಿಂದಿನ ದಿನ ಟೀಚರ್ ಹೋಂವರ್ಕ್ ಕೊಟ್ಟಿದ್ದರು. ಮನೆಯಲ್ಲಿ ಮಾಡಿ ಬರಲು ಮರೆತು ಹೋಗಿದೆ ಎಂದು. ಮರೆವಿನಿಂದಾಗಿ ಹಿಂದಿನ ಕಾಲದಲ್ಲಾದರೆ ಕೋಲಿನ ರುಚಿ ಕಾಣಬೇಕಿತ್ತು ಎಳೆಯ ಕೈಗಳು...ಈಗಲಾದರೆ ಇಂಪೊಸಿಷನ್ ಅಥವಾ ಹೊರಗೆ ನಿಲ್ಲುವ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರುತ್ತದೆ! ಇನ್ನು ಟೀನ್ ಏಜ್‍ನ ಮಕ್ಕಳಂತೂ ವಾಸ್ತವವನ್ನೇ ಮರೆತು ಅಡ್ಡದಾರಿ ಹಿಡಿದು ಕೊನೆಯಲ್ಲಿ ಪಶ್ಚಾತಾಪ ಪಡುವುದುಂಟು. ಇನ್ನು ಎಲ್ಲಾ ಏಜ್‍ನವರ ಒಂದು ಸಾಮಾನ್ಯ ಸಮಸ್ಯೆ ಏನೆಂದರೆ ನೆಂಟರ, ಇಷ್ಟರ ಮನೆಗೆ ಹೋಗಿ ನಾಲ್ಕು ದಿನವಿದ್ದು ವಾಪಾಸಾಗುವಾಗಲಂತೂ ಟವಲು, ಕರ್ಚೀಪು, ಅಂಡರ್, ಇನ್ನರ್ ಗಾರ್ಮೆಂಟುಗಳು, ಬ್ರಶ್ಶು, ಟೂತ್‍ಪೇಸ್ಟು, ಸೋಪು, ಕೋಂಬು, ಹೇರುಕ್ಲಿಪ್ಪುಗಳು, ಕೊಡೆ ಇತ್ಯಾದಿಗಳನ್ನು ಮರೆತು ಬರುವುದು ಮಾಮೂಲಿ! ಮತ್ತೆ ಸ್ವಸ್ಥಾನಕ್ಕೆ ಮರಳಿದ ಮೇಲೆ ಹೊಸತ್ತರ ಖರೀದಿ ಅನಿವಾರ್ಯವಾದಾಗ ಮರೆವಿನಿಂದಾಗಿ ದುಡ್ಡೂ ದಂಡವಾಗುತ್ತದೆ. ಅಂತೂ ಇಂತೂ ಕೆಲವೆಲ್ಲಾ ಅನಾಹುತಗಳು, ಅನರ್ಥಗಳು ನಡೆದು ಹೋಗುತ್ತಲೇ ಇರುತ್ತವೆ ಈ ಮರೆವಿನಿಂದಾಗಿ.
     ಒಬ್ಬ ಮರೆವು ಹೆಚ್ಚಾಗಿ ಆಸ್ಪತ್ರೆಗೆ ಹೋಗಿ ಡಾಕ್ಟ್ರರಲ್ಲಿ ಹೇಳಿದನಂತೆ, "ಡಾಕ್ಟ್ರೇ, ಡಾಕ್ಟ್ರೇ ನನಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಈಗ ಹೇಳಿದ್ದನ್ನು ಇನ್ನೊಂದು ಘಳಿಗೆಯಲ್ಲಿ ಮರೆತಿರುತ್ತೇನೆ. ಏನಾದರೂ ಔಷಧಿ ಕೊಡಿ."
"ಎಷ್ಟು ಸಮಯದಿಂದ ಹೀಗಾಗ್ತಿದೆಯಪ್ಪಾ ನಿನಗೆ?" ಡಾಕ್ಟ್ರು ಕೇಳಿದರಂತೆ.
"ಯಾರಿಗೆ ಎಷ್ಟು ಸಮಯದಿಂದ ಏನಾಗ್ತಿರೋದು ಡಾಕ್ಟ್ರೇ" ಎಂದು ಡಾಕ್ಟ್ರರನ್ನೇ ಕೇಳಿದನಂತೆ ಆ ಪುಣ್ಯಾತ್ಮ!
ನಮ್ಮದೆಲ್ಲಾ ಅಂತಾ ಕಂಡೀಷನ್‍ಗೆ ತಲುಪಿಲ್ಲ ಬಿಡಿ. ಆದರೆ ಈ ಮರೆವಿಗೂ ನನಗೂ ಅದೇಕೋ ನಾ ತಿಳಿದ ಮಟ್ಟಿಗೆ ಹೆಚ್ಚಿನ ನಂಟು. ಇದಕ್ಕೆ ನಾನು ಮರೆತ ಮತ್ತು ದಿನಾಲೂ ಮರೆಯುತ್ತಿರುವ ಅನುಭವಗಳೇ ಜೀವಂತ ಸಾಕ್ಷಿಗಳು!
"ಭಾನುವಾರ ನನಗೆ ಹೇರ್ ಕಟ್ ಮಾಡಿಸಲು ನೆನಪು ಮಾಡು, ಸಂಜೆ ಇಂತಹವರಿಗೆ ಫೋನಿಸಲು ನೆನಪಿಸು, ನಾಡಿದ್ದು ಟೆಲಿಫೋನು ಬಿಲ್ಲು ಕಟ್ಟಲು ಕೊನೆಯ ದಿನ. ನೆನಪು ಮಾಡು, ಇಲ್ಲವಾದರೆ ದಂಡ ತೆರಬೇಕಾಗುತ್ತದೆ. ನನ್ನ ಆಫೀಸಿನ ತಲೆಬಿಸಿಯಲ್ಲಿ ನನಗೆ ನೆನಪಾಗಲ್ಲ ತಿಳೀತೇ?" ಎಂದು ನೆನಪಿಟ್ಟುಕೊಂಡು ನೆನಪಿಸಲು ಹೇಳಿದ ನನ್ನವರಿಗೆ ಯಾವಾಗಲೂ ಈ ಹಾಳು ಮರೆವಿನಿಂದಾಗಿ ಮೂರು ನಾಮ ಹಾಕಿ ಬಳಿಕ ನನಗೆ ಮಂಗಳಾರತಿ ಮಾಡಿಸಿಕೊಳ್ಳುತ್ತಿರುತ್ತೇನೆ! ನನ್ನಲ್ಲಿ ನೆನಪಿಸಲು ಹೇಳಿದ್ದರೂ ಕೂಡಾ ಎಲ್ಲವನ್ನೂ ಮರೆಯದೇ ಚಾಚೂ ತಪ್ಪದೇ ಅಚ್ಚುಕಟ್ಟಾಗಿ ಕೆಲಸ ಮಾಡಿ ಮುಗಿಸಿದ ಮೇಲೆ ನನ್ನವರು, "ನಿನಗೆ ನಾನು ನೆನಪಿಸಲು ಹೇಳಿದ್ದೆ. ಆದರೆ ನೀನು ನೆನಪಿಸಲೇ ಇಲ್ಲವಲ್ಲೇ?! ನಿನ್ನ ಹತ್ರ ಹೇಳೋದು ದಂಡ. ನಿನಗೆ ನೆನಪು ಮಾಡಲು ಹೇಳಿದ್ದನ್ನು ನನಗೆ ಹೇಳಲು ನೆನಪಿಸಲು ಒಂದು ಜನ ಬೇಕು. ಪಕ್ಕಾ ಮರೆಗುಳಿ ನೀನು" ಎಂದ ಇವರು ಈಗೀಗಂತೂ "ಅದು ನೆನಪು ಮಾಡು, ಇದು ನೆನಪು ಮಾಡು" ಎನ್ನುವುದನ್ನೇ ಬಿಟ್ಟು ಬಿಟ್ಟಿದ್ದಾರೆ!  ನನಗೇನಾದರೂ ಶೀತ, ಜ್ವರ ಹಿಡಿದರೆ ಡಾಕ್ಟರು ಕೊಟ್ಟ ಮಾತ್ರೆಯನ್ನು ಹೊತ್ತು ಹೊತ್ತಿಗೆ ತೆಗೆದುಕೊಳ್ಳಲು ಇವರು ನೆನಪು ಮಾಡಿಯೇ ಆಗಬೇಕು! ಇಂದಿಗೂ ದಿನಕ್ಕೊಂದು ಮರೆಯುವ ಪ್ರಸಂಗವಂತೂ ನಡೆದು ಬರುತ್ತಲೇ ಇದೆ...ನೋ ಆಬ್ಸೆಂಟ್, ಆಲ್‍ವೇಸ್ ಪ್ರೆಸೆಂಟ್!
ಅದೊಂದು ದಿನ ಚೂಡೀದಾರ್ ಧರಿಸಿ ತಲೆ ಬಾಚಿ, ಮುಖಕ್ಕೆ ಕ್ರೀಮ್, ಪೌಡರ್ ಲೇಪಿಸಿ ಬ್ಯಾಗ್, ಪರ್ಸಿನೊಂದಿಗೆ ಮಾರ್ಕೆಟಿಗೆಂದು ಹೊರಟೆ. ಬಾಗಿಲಿಗೆ ಬೀಗ ಹಾಕಿದ ಮೇಲೆ ತಿಳಿಯಿತು ಕರ್ಚಿಫ್ ಮರೆತಿರುವೆನೆಂದು. ಬೆವರುದ್ದಿಕೊಳ್ಳಲು ಅದಿಲ್ಲದಿದ್ದರಾಗುತ್ತದೆಯೇ? ಬೀಗ ತೆಗೆದು ಒಳಗೆ ಬಂದು ಕರ್ಚಿಫ್ ತೆಗೆದುಕೊಂಡು ಹೋಗಿ ಬಾಗಿಲಿಗೆ ಬೀಗ ಹಾಕಿದ ಮೇಲೆ ನೆನಪಾಯಿತು ಕರ್ಚಿಫ್ ತರಲು ಒಳಗೆ ಹೋಗಿದ್ದಾಗ ಬ್ಯಾಗ್, ಪರ್ಸುಗಳು ಮನೆಯೊಳಗೆ ಸೋಫಾದ ಮೇಲೆ ಬಾಕಿಯಾಗಿದೆಯೆಂದು. ಪುನ: ಬೀಗ ತೆಗೆದು ಅವೆರಡನ್ನೂ ಹಿಡಿದುಕೊಂಡು ಹೊರ ಬಂದು ಗಂಟೆ ಎಷ್ಟಾಯಿತೆಂದು ನೋಡಿಕೊಳ್ಳಲು ಕೈ ನೋಡಿಕೊಂಡಾಗ ತಿಳಿಯಿತು ವಾಚ್ ಕಟ್ಟಲಿಲ್ಲವೆಂದು. ಸರಿ. ಮತ್ತೆ ಪುನ: ಬೀಗ ತೆಗೆದು ಒಳಗೆ ಹೋಗಿ ಕೈಗೆ ವಾಚ್ ಕಟ್ಟಿಕೊಂಡು ಹೊರಬಂದು ಗೇಟಿನ ಬಳಿಗೆ ಬಂದೆ. ಇನ್ಯಾವುದೋ ಪ್ರಮುಖವಾದ ಎರಡು ವಸ್ತುಗಳನ್ನು ಮರೆತಿದ್ದೆ! ಹೀಗೇ ಬೀಗ ತೆಗೆಯುವುದೂ, ಒಳ ಬರುವುದೂ, ಹೊರಗೆ ಹೋಗುವುದು, ಮತ್ತೆ ನೆನಪಾಗುವುದು, ನಂತರ ಪುನ: ಬೀಗ ತೆಗೆದು  ಹಾಕಿ ಪುನರಪಿ ಆಗುತ್ತಲೇ ಸಾಕು ಹಿಡಿದು ಹೋಗಿ ಆ ದಿನ ಮಾರ್ಕೆಟ್ಟಿಗೆ ಹೋಗುವುದನ್ನೇ ಕ್ಯಾನ್ಸಲ್ ಮಾಡಿಬಿಟ್ಟಿದ್ದೆ! 
     ಒಂದು ಸುದಿನ ತೊಂಬತ್ತು ವರ್ಷದ ನನ್ನಜ್ಜಿ ನಮ್ಮಲ್ಲಿಗೆ ಬಂದರು. ಅವರೋ ಶರೀರದಲ್ಲೂ, ನೆನಪಿನ ಶಕ್ತಿಯಲ್ಲೂ ಬಲು ಗಟ್ಟಿ. ಓದಲು ಕನ್ನಡಕ ಕೂಡಾ ಬೇಡ! ಸಣ್ಣಂದಿನಲ್ಲಿ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಶಾಲೆಯಲ್ಲಿ ಅವರು ಕಲಿತ ಪದ್ಯಗಳು ಇನ್ನೂ ಬಾಯಿಗೆ ಬರುತ್ತದೆ! ಓದಿದ್ದೇ ಪಾಪ ಮೂರನೇ ತರಗತಿವರೆಗಂತೆ.(ನಮ್ಮಲ್ಲಿ ಕೆಲವರಿಗೆ ಹತ್ತನೇ ತರಗತಿವರೆಗೆ ದಿನಾ ಬೆಳಗ್ಗೆ ಶಾಲೆಯಲ್ಲಿ ಹೇಳುತ್ತಿದ್ದ ರಾಷ್ಟ್ರಗೀತೆಯೇ ಮರೆತು ಹೋಗಿರುತ್ತದೆ!)ಭೇಷ್ ಅಜ್ಜಿ, ನೀವು ಪ್ರಪಂಚದ ಎಂಟನೇ ಅದ್ಭುತ ಎಂದು ಹೇಳಿ ಅಜ್ಜಿಯ ಮನಸ್ಸನ್ನು ಗೆಲ್ಲುತ್ತಿದ್ದೆ! ಅಜ್ಜಿಯ ನಾಲಗೆಯ ತುದಿಯಲ್ಲಿ ಸಾಮಾನ್ಯ ನೆಗಡಿಯಿಂದ ಹಿಡಿದು ದೊಡ್ಡ ದೊಡ್ಡ ಖಾಯಿಲೆಗಳಿಗೂ ಮದ್ದು ಸದಾ ಸಿದ್ಧವಿರುತಿತ್ತು, ಯಾವ ಡಾಕ್ಟ್ರನಿಗೂ ಕಮ್ಮಿ ತಾನಲ್ಲ ಎಂಬಂತೆ! ಟಪ್ಪ ಖಾಯಿಲೆಗಳು ಗುಣವಾಗುವಂತ ಸಂಜೀವಿನಿಗಳಾಗಿದ್ದವು ಆ ಅಜ್ಜಿ ಸೂಚಿಸುವ ಮದ್ದುಗಳು! ’ಭಲೇ ಅಜ್ಜೀ, "ನಿಮ್ಮಂತಾ ಅಜ್ಜಿ ಇಲ್ಲಾ... ನನ್ನಂತಾ ಪುಳ್ಳಿ ಇಲ್ಲಾ" ಎಂದು ಹಾಡಿ ಹೊಗಳುತ್ತಾ ಅಜ್ಜಿಯನ್ನು ಮಂಚದ ಮೇಲೆ ಕೂರಿಸಿ ಅವರ ಕಾಲೊತ್ತಲು ತೊಡಗಿದೆ..."ಬೇಡ ಮಗಳೇ ನನಗೇನೂ ಕಾಲು ಬಚ್ಚುತ್ತಿಲ್ಲ. ಬಾ ಇಲ್ಲಿ ನನ್ನ ಪಕ್ಕ ಕೂರು...ಸ್ವಲ್ಪ ಹೊತ್ತು ಮಾತಾಡುವ.."ಎಂದರು.. ಇದೇ ಸುಸಮಯವೆಂದುಕೊಂಡು "ತೊಂದ್ರೆ ಇಲ್ಲ ಬಿಡಿ ಅಜ್ಜಿ...ನನಗೆ ನಿಮ್ಮ ಕಾಲೊತ್ತುವುದು ಕುಶಿಯ ಕೆಲಸ...ನೀವು ಸುಮ್ಮನಿರಿ, ಕಾಲೊತ್ತುತ್ತಾ ಮಾತನಾಡುವ" ಎಂದೆ.. ಅಜ್ಜಿಗೂ ಕುಶಿಯಾಯಿತು...
"ಅಜ್ಜೀ ನಿಮಗೆ ಎಷ್ಟೊಂದು ಮದ್ದುಗಳು ಗೊತ್ತಿದೆಯಲ್ವಾ?....ಈ ಮರೆವಿಗೆ ಏನಾದರೂ ಮದ್ದು ಗೊತ್ತಿದ್ಯಾ?" ಎಂದು ಕೇಳಿದೆ.
"ಯಾರಿಗಮ್ಮಾ ಮರೆವು? ಈಗಿನವರೆಲ್ಲಾ ಹೀಗೇ..ಹೊತ್ತು, ಹೆತ್ತು, ಮತ್ತೆ ಪುನ: ಹೊತ್ತು ಸಾಕಿ ಸಲಹಿದವರನ್ನೂ ಮರೆತು ಬಿಡ್ತಾವೆ ದರಿದ್ರ ಮುಂಡೆವು" ತುಸು ಕೋಪದಲ್ಲಿ ಈಗಿನ ಪ್ರಪಂಚದ ಸ್ಥಿತಿಗತಿಯನ್ನು ಗೊತ್ತಿದ್ದ ಅಜ್ಜಿ ಹೇಳಿದ್ದಾದರೂ ಕೂಡಾ ನನ್ನ ತಲೆಯ ಮೇಲೆ ದೊಡ್ಡ ಬಾಂಬೊಂದು ಬಿದ್ದ ಹಾಗಾಯ್ತು! ನಾನೇನು ಹೆತ್ತು ಹೊತ್ತವರನ್ನು, ಕಟ್ಟಿಕೊಂಡವರನ್ನು ಮರೆತು ಕೂತಿರಲಿಲ್ಲ!
"ಅಲ್ಲ ಅಜ್ಜೀ...ನೀವು ಡಬಲ್ ಮೀನಿಂಗ್ ಮಾಡಿಕೊಂಡುಬಿಟ್ಟಿದ್ದೀರಿ....ನಾನು ಕೇಳಿದ್ದೇ ಬೇರೆ, ನೀವು ಹೇಳ್ತಿರೋದೇ ಬೇರೆ ಅಜ್ಜಿ...ಕೆಲವು ಸಲ...ಅಲ್ಲಲ್ಲಾ ಹಲವು ಸಲ ಕೆಲವು ವಿಚಾರಗಳು ನಮ್ಮ ದಿನನಿತ್ಯ ಜೀವನದಲ್ಲಿ ಮರೆತು ಹೋಗುತ್ತಿರುತ್ತೆ...ನನಗಂತೂ ಮರೆವು ಮಾಹಾ ಶತ್ರು...ಅದಕ್ಕೆ ಏನಾದ್ರೂ ಮದ್ದು ನಿಮಗೆ ಗೊತ್ತಿದ್ಯಾ ಅಂತ ನಾನು ಕೇಳಿದ್ದಷ್ಟೇ ಅಜ್ಜೀ..."
"ಓ ಅದಕ್ಕಾ ಮಗಾ? ನೋಡು ಪುಟ್ಟಾ, ನಮ್ಮ ಗದ್ದೆ ಕರೆಯಲ್ಲೇ ಬೆಳೆಯುತ್ತಲ್ಲಾ ತಿಮರೆ ಗೊತ್ತಿದ್ಯಲ್ಲಾ ನಿನಗೆ, ಅದೇ ಒಂದೆಲಗದ ಎಲೆಗಳು...ಅವುಗಳ ತಂಬುಳಿ, ಚಟ್ನೀಂತ ಮಾಡ್ತಾ ತಿಂತಾ ಇದ್ರೆ ನೆನಪು ಶಕ್ತಿಗೆ ಒಳ್ಳೆಯದು...ನೆನಪು ಶಕ್ತಿಗೆ ಫಸ್ಟ್ ಕ್ಲಾಸ್ ಸೂತ್ರ ಅದೊಂದೇ...ಮತ್ತೆ ಮರೆವಿಗೇ ಅಂತ ಮದ್ದು ಯಾವುದು ಅಂತ ನನಗೊತ್ತಿಲ್ಲವಲ್ಲಪ್ಪಾ" ಅಂತ ಹೇಳುತ್ತಾ ತಲೆ ಮೇಲೆ ಕೈಯಿಟ್ಟರು!
"ತತ್ತೇರೇಕಿ...ವಾರದಲ್ಲಿ ಮೂರ‍್ನಾಲ್ಕು ಸಲ ತಂಬುಳಿ, ಚಟ್ನೀಂತ ಮಾಡ್ತಾನೇ ಇರ‍್ತೀನಲ್ಲಾ..."ಎಂದು ತಲೆ ಕೆರೆದುಕೊಂಡು ನನ್ನ ಮರೆವು ಯಾವ ಟಾನಿಕ್ಕು, ಔಷಧಿಗೂ, ಸಸ್ಯಗಳಿಗೂ ತಲೆ ಬಾಗಿ ಶರಣಾಗುವುದಿಲ್ಲ..., ನಾವು ಮಾಡುವ ಎಲ್ಲಾ ಕೆಲಸಗಳ ಮೇಲೆ  ಸಾವಕಾಶವಾಗಿ, ಸ್ವಲ್ಪ ಗಮನವಿಟ್ಟು, ಸಮಯ ಹೊಂದಿಸಿಕೊಂಡು ನಿಧಾನವಾಗಿ ಮಾಡುವುದೊಂದೇ ದಾರಿ ಈ ತೆರನಾದ ಮರೆವನ್ನು ದೂರ ಮಾಡಲು ಎಂದುಕೊಂಡು ಅಜ್ಜಿ ಹತ್ರ ಬೇರೆ ಟಾಪಿಕ್ ತೆಗೆದುಕೊಂಡು ಮಾತು ಮುಂದುವರಿಸಿದೆ!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು





No comments:

Post a Comment