Friday, April 17, 2015

"ಏಪ್ರಿಲ್ ಫೂಲ್" - ನನ್ನ ಕಥಾಸಂಕಲನ "ಜೀವನ ದೀಪ"ದಲ್ಲಿ ಪ್ರಕಟಗೊಂಡಿರುವ ಒಂದು ಸಣ್ಣ ಕಥೆ.

ಏಪ್ರಿಲ್ ಫೂಲ್

"ನಾಳೆ ಏಪ್ರಿಲ್ ಒಂದು. ಎಲ್ಲರೂ ಜಾಗರೂಕರಾಗಿರಿ. ಎಲ್ಲರನ್ನೂ ಫೂಲ್ ಮಾಡಿಬಿಡ್ತೇನೆ. ಮೊದಲೇ ತಿಳಿಸದೇ ಮಾಡಿಬಿಟ್ಟನಲ್ಲಾ ಎಂದುಕೊಳ್ಳಬಾರದೆಂದು ಈಗಲೇ ಹೇಳುತ್ತಿದ್ದೇನೆ, ಎಚ್ಚರಿಕೆ! ಎಚ್ಚರಿಕೆ! ಎಚ್ಚರಿಕೆ!!" ಬೀದಿಯಲ್ಲಿ ಡಂಗುರ ಸಾರುತ್ತಾ ಬರುವವನಂತೆ ಪಿಯುನ್ ನಂಜ ಆಫೀಸಿನಲ್ಲಿ ತಾನು ಹಿಡಿದುಕೊಂಡಿದ್ದ ರಟ್ಟಿನ ಫೈಲಿನ ಮೇಲೆ ಬೆರಳುಗಳಿಂದ ಸದ್ದು ಮಾಡುತ್ತಾ  ಅತ್ತಿಂದಿತ್ತ ಓಡಾಡುತ್ತಾ ಹೇಳಿದ. 
ಆಫೀಸಿನ ಅತ್ಯಂತ ಹಿರಿಯ ವ್ಯಕ್ತಿಯೆಂದರೆ ನಂಜ. ಆಗಾಗ ಟ್ರಾನ್ಸ್‍ಫರ್ ಆಗಿ ಆಫೀಸಿನ ಎಲ್ಲಾ ಸೀಟುಗಳಿಗೂ ಸಾಮಾನ್ಯವಾಗಿ ಚಿಕ್ಕ ಪ್ರಾಯದವರೇ ಅಥವಾ ಮಧ್ಯವಯಸ್ಕರು ಬರುತ್ತಿದ್ದರು. ಆಫೀಸಿನಲ್ಲಿ ಟ್ರಾನ್ಸ್‍ಫರ್ ಇಲ್ಲದೇ ಪರ್ಮನೆಂಟ್ ಉದ್ಯೋಗಿ ಎಂದರೆ ನಂಜನೇ. ನಿವೃತ್ತಿಗೆ ಎರಡೇ ವಾರವಿದ್ದರೂ ತನ್ನ ವಯಸ್ಸಿನ ಅಂತರವನ್ನು ಮರೆತು ಈಗಿನ ಕಾಲಕ್ಕೆ ತಕ್ಕ ಹಾಗೆ ತಿಳಿಹಾಸ್ಯದ ಮಾತುಗಳಿಂದ ಎಲ್ಲಾ ಸಹದ್ಯೋಗಿಗಳ ಮನಸ್ಸನ್ನು ಗೆದ್ದಿದ್ದ. ಐದು ಹೆಣ್ಣು ಮಕ್ಕಳು, ಹೆಂಡತಿ ಹಾಗೂ ಮುದಿ ತಾಯಿಯ ಜೊತೆ ಸಂಸಾರ ನಂಜನದ್ದು. ಕಿತ್ತು ತಿನ್ನುವ ಬಡತನ. ಮಕ್ಕಳ ವಿದ್ಯಾಭ್ಯಾಸ, ಆಹಾರ, ಮನೆ ಬಾಡಿಗೆ ಇವೆಲ್ಲಕ್ಕೂ ನಂಜನ ಕಮಾಯಿ ಸಾಕಾಗುತ್ತಿರಲಿಲ್ಲ. ಆದರೂ ಎಂದಿಗೂ ಇನ್ನೊಬ್ಬರಲ್ಲಿ ಕೈ ಎತ್ತಿ ಕೇಳಿದವನಲ್ಲ. ಎಂತಹ  ಪರಿಸ್ಥಿತಿಯಲ್ಲೂ ನಂಜ ಸ್ಥಿತಪ್ರಜ್ಞ. ಸಂತೋಷದ ಚಿಲುಮೆ. ಆತನ ಜೀವನವೇ ಒಂದು ಉದಾಹರಣೆಯಾಗಿತ್ತು. ಕಳೆದ ವರ್ಷ ’೧೬೧’ ನಂಬರನ್ನು ಡಯಲ್ ಮಾಡಿ ಫೋನಿನ ರಿಸೀವರನ್ನೆತ್ತಿದ ಕ್ಲರ್ಕ್ ರಾಗಿಣಿಯನ್ನು ಹಾಗೂ ಇನ್ನೂ ಇಬ್ಬರನ್ನು ಫೂಲ್ ಮಾಡಿದ್ದ. ಆದ್ದರಿಂದ ಎಲ್ಲರಿಗೂ ಏಪ್ರಿಲ್ ಒಂದರಂದು ಫೋನೆತ್ತಲು ಭಯ. "ನಾಳೆ ನಂಜನೇ ಎಲ್ಲಾ ಕಾಲ್ಸ್ ಎಟೆಂಡ್ ಮಾಡ್ಬೇಕು." ಎಂದು ಎಲ್ಲರೂ ಧ್ವನಿ ಎತ್ತಿದರು.
"ಸರಿ ಸರಿ, ಆದರೆ ಕಳೆದ ಬಾರಿ ನಾನು ಮಾಡಿದ ಪ್ರಯೋಗವನ್ನು ಯಾರೂ ನನ್ನ ಮೇಲೆ ಪ್ರಯತ್ನಿಸದಿದ್ದರಾಯಿತಷ್ಟೇ...ಹ್ಹಿ ಹ್ಹಿ ಹ್ಹಿ.." ನಗೆ ಮಾಡಿಕೊಂಡು ಹೇಳಿದ ನಂಜ.
     ಮರುದಿನ ನಂಜ ಒಳ್ಳೆಯ ಹುರುಪಿನಲ್ಲಿದ್ದನು. ಆಫೀಸಿಗೆ ಒಬ್ಬೊಬ್ಬರೇ ಬರತೊಡಗಿದರು. ನಂಜ ಬಂದು,"ಸರ್, ನಿಮ್ಮನ್ನು ಮ್ಯಾನೇಜರ್ ಕರೀತಿದ್ದಾರೆ" ಎಂದರೆ ಗುಮಾಸ್ತ ರಾಮನಾಥನಿಗೆ ’ಹೌದೋ ಅಲ್ಲವೋ’ ಎಂಬ ಸಂದೇಹ. ಅಂತೂ ಹೆದರಿಕೆಯಿಂದಲೇ ಖುರ್ಚಿಯಿಂದೆದ್ದು ಹೊರಟವನಿಗೆ ನಂಜ ಕುಣಿದಾಡುತ್ತಾ "ಏಪ್ರಿಲ್ ಫೂಲ್" ಬಿರುದು ಕೊಟ್ಟೇ ಬಿಟ್ಟ.
"ರಾಧಾ ಮ್ಯಾಡಂಗೆ ಒಂದು ಗುಡ್ ನ್ಯೂಸ್"
"ಏನು ನಂಜಪ್ಪನವರೇ ಅಂತಹ ಸುದ್ಧಿ?!" ರಾಧಾ ಮ್ಯಾಡಂ ತುಸು ಜಂಭದಿಂದಲೇ ಕೇಳಿದಳು.
"ನೀವು ಕಳೆದ ಬಾರಿ ಭರ್ತಿ ಮಾಡಿ ಸ್ಪರ್ಧೆಗೆ ಕಳುಹಿಸಿದ್ದ ಪದಬಂಧಕ್ಕೆ ೨೫೦ ರೂಪಾಯಿ ಬಹುಮಾನ ಬಂದಿದೆ. ನಿಮ್ಮ ಹೆಸರು ಪೇಪರಿನಲ್ಲಿ ಬಂದಿದೆ ನೋಡಿ."
"ಎಲ್ಲಿ?!" ಎಂದು ಕುತೂಹಲದಿಂದ ಅವನ ಕೈಯಿಂದ ಪೇಪರ್ ಕಿತ್ತುಕೊಂಡವಳಿಗೆ "ಏಪ್ರಿಲ್ ಫೂಲ್" ಹಣೆ ಪಟ್ಟಿ ಕಟ್ಟಿದ ನಂಜ. ಹೀಗೇ ಆಫೀಸಿನ ಅವಿರತ ಕೆಲಸ ಕಾರ್ಯಗಳ ನಡುವೆ ನಂಜನ ಬಲೆಗೆ ಒಬ್ಬೊಬ್ಬರೇ ಬೀಳತೊಡಗಿದರು. ಫೂಲ್ ಆದ ಎಲ್ಲರೂ ಪಾರ್ಟಿ ಕೊಡಬೇಕೆಂದು ತಾಕೀತು ಮಾಡಿದ ನಂಜ. "ಎಲ್ಲರೂ ಒಬ್ಬೊಬ್ಬರಂತೆ ಸರದಿಯಲ್ಲಿ ಒಂದೊಂದು ದಿನ ಪಾರ್ಟಿ ಕೊಡಿಸಿಯಪ್ಪಾ...ಎಲ್ಲರೂ ಇವತ್ತೇ ಕೊಟ್ಟರೆ ಆಗಲ್ಲ. ಫೂಲ್ ಆದವರದ್ದೆಲ್ಲಾ ಟ್ರೀಟ್ ತಿಂದರೆ ನನ್ನ ಹೊಟ್ಟೆ ಫುಲ್ ಆಗಿ ಅಪ್ಸ್‍ಟ್ ಆದೀತು..." ನಗುತ್ತಾ ಹೇಳಿದ.
"ಸರಿಯಾಗಿ ಏಪ್ರಿಲ್ ಒಂದು ಅಂತ ತಾರೀಖು ನೆನಪಿಟ್ಟುಕೊಂಡರೆ ಯಾರೂ ಫೂಲ್ ಆಗುತ್ತಿರಲಿಲ್ಲ!" ತನಗೇ ಬಹಳ ನೆನಪು ಎಂಬಂತೆ ಕಾಲರನ್ನು ಕೊಡವಿಕೊಂಡ ನಂಜ.
"ನಾನಂತೂ ಫೂಲ್ ಆಗೋದೇ ಇಲ್ಲಪ್ಪಾ" ಎನ್ನುತ್ತಾ ಗೆಲುವಿನ ಹಮ್ಮಿನಲ್ಲಿ ಹೇಳಿಕೊಂಡು ತನ್ನ ಕೆಲಸದಲ್ಲಿ ತೊಡಗಿದ ನಂಜ.
"ಹೇಗಾದರೂ ಮಾಡಿ ನಮ್ಮ ನಂಜನನ್ನು ಇವತ್ತು ಫೂಲ್ ಮಾಡಬೇಕಿತ್ತಲ್ಲಾ..." ರಾಗಿಣಿ ರಾಗ ಎಳೆದಳು.
"ಹೌದು, ಆದರೆ ಸಾಧಾರಣಕ್ಕೆಲ್ಲಾ ಅವ ಬಗ್ಗುವುದಿಲ್ಲ" ಹೇಳಿದಳು ರಾಧಾ.
ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ.
"ಆಫೀಸಿನಿಂದ ಮನೆಗೆ ಹೋಗುವ ಮೊದಲು ಮಿಕ್ಕುಳಿದ ಎಲ್ಲರನ್ನೂ ಫೂಲ್ ಮಾಡಿಯೇ ತೀರುತ್ತೇನೆ" ಎಂದು ಮತ್ತೊಮ್ಮೆ ಬೀಗಿದ ನಂಜ.
ಸ್ವಲ್ಪ ಹೊತ್ತಿನ ನಂತರ ಕೆಲವು ಫೈಲುಗಳನ್ನು ಹಿಡಿದು ಮೇನೇಜರ್ ಕೊಠಡಿಗೆ ಹೋದ ನಂಜ. ಒಂದೆರಡು ನಿಮಿಷಗಳಲ್ಲಿ ತುರ್ತು ಕೆಲಸದ ನಿಮಿತ್ತ ಹೊರಗೆ ಹೋದರು ಆಫೀಸಿನ ಮೇನೇಜರ್. ಆಫೀಸಿನ ಯಾರಾದರೂ ನಂಜನನ್ನು ಕೆಲಸಕ್ಕೆಂದು ಕರೆದರೆ ಆತನ ಪತ್ತೆಯೇ ಇಲ್ಲ.
"ಇದು ಇವನ ಹೊಸಾ ರೋಲು. ಎಲ್ಲರನ್ನೂ ಒಮ್ಮೆಲೇ ಫೂಲ್ ಮಾಡಲು" ಎಂದು ಎಲ್ಲರೂ ಗುಸು ಗುಸು ಪ್ರಾರಂಭಿಸಿದರು. ಎಲ್ಲರಿಗೂ ನಂಜನನ್ನು ಎಲ್ಲಿದ್ದಾನೆಂದು ಹೋಗಿ ನೋಡಲು ಭಯ. ಎಲ್ಲಿಯಾದರೂ, ಯಾವ ಬಗೆಯಿಂದಲಾದರೂ ಫೂಲ್ ಮಾಡಿ ಪಾರ್ಟಿ ಕೇಳಿದರೇ...ಎಂದು. ಆದರೂ ಗುಮಾಸ್ತ ರಮಾನಾಥ್ ಒಮ್ಮೆ ಮೇನೇಜರ್ ಕೊಠಡಿಗೆ ಇಣುಕಿ ನೋಡಿದ. ನೆಲಕ್ಕೆ ಹಾಸಿದ್ದ ಕೆಂಪು ಬಣ್ಣದ ಕಾರ್ಪೆಟ್ಟಿನ ಮೇಲೆ ಉದ್ದಕ್ಕೆ ಎದೆಯುಬ್ಬಿಸಿ ಮಲಗಿದ್ದನ್ನು ಕಂಡು ಇತರ ಸಹದ್ಯೋಗಿಗಳಲ್ಲಿ, "ನಂಜ ಹೊಸದೊಂದು ಪ್ಲಾನ್ ಹಾಕಿ ಸತ್ತವನ ಹಾಗೆ ಮಲಗಿಬಿಟ್ಟಿದ್ದಾನೆ. ಯಾರಾದರೂ ಹೋಗಿ ಮಾತನಾಡಿಸಿದರೆ ಫೂಲ್ ಆಗುವುದು ಖಂಡಿತಾ" ಎಂದ. ಎಲ್ಲರೂ ಒಬ್ಬರಾದ ನಂತರ ಒಬ್ಬರು ಸದ್ದಿಲ್ಲದೇ ಮೇನೇಜರ್ ಛೇಂಬರಿನೊಳಗೆ ಇಣುಕಿ ನೋಡಿದರು.
"ಒಳ್ಳೇ ನಂಜ. ಎಲ್ಲರನ್ನೂ ಒಟ್ಟಿಗೇ ಫೂಲ್ ಮಾಡುವ ಹೊಸ ತಂತ್ರೋಪಾಯ. ಇಷ್ಟು ಪ್ರಾಯವಾದರೂ ಮಕ್ಕಳಾಟಿಕೆ ಬಿಟ್ಟಿಲ್ಲ ಪಾಪ..." ಎನ್ನುತ್ತಾ ರಾಧಾ ಮೇಡಂ ವ್ಯಾನಿಟಿ ಬ್ಯಾಗನ್ನು ಹೆಗಲಿಗೇರಿಸಿ ಆಫೀಸಿನಿಂದ ಹೊರನಡೆದಳು.
"ಸಂಜೆ ಒಳಗೆ ಎಲ್ಲರನ್ನೂ ಫೂಲ್ ಮಾಡುವೆನೆಂದು ನಂಜ ಪಣ ತೊಟ್ಟಿದ್ದ...ಅದೇ ಕಾರಣಕ್ಕೆ ನಂಜನ ಹೊಸಾ ರೋಲು...ಫೂಲ್ ಮಾಡಲೋಸ್ಕರ ಇದೆಂತಹ ಸೀರಿಯಸ್ ಆಟಾನೋ ನಂಗೊತ್ತಿಲ್ಲಪ್ಪಾ. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಲಿಲ್ಲ. ಮಗುವಿನಂತಹ ಮನಸ್ಸಿನ ನಂಜ" ಹೇಳುತ್ತಾ ಸುಮತಿ ತನ್ನ ಚೀಲವನ್ನು ಹೆಗಲಿಗೇರಿಸಿ ತನ್ನ ಕೈನೆಟಿಕ್‍ನಲ್ಲಿ ಮನೆಯ ದಾರಿ ಹಿಡಿದಳು.
ಹೀಗೇ ಒಬ್ಬರಾದಂತೆ ಒಬ್ಬರು ಕಛೇರಿ ವೇಳೆ ಮುಗಿದಿದ್ದರಿಂದ ಮನೆಗೆ ಹಿಂದಿರುಗಿದರು. ಮತ್ತೊಬ್ಬ ಪಿಯುನ್ ಶೇಷ ಕಛೇರಿಯ ಬೀಗದ ಕೈಯನ್ನು ಹಿಡಿದು ಆಚಿಂದೀಚೆ ತಿರುಗಾಡತೊಡಗಿದ.
"ನಂಜಾ, ಏ ನಂಜಾ" ಎಂದು ನಾಲ್ಕೈದು ಬಾರಿ ಕರೆದು, "ಬಾರೋ, ಆಫೀಸಿಗೆ ಬೀಗ ಹಾಕೋ ಟೈಂ ಆಯ್ತು...ಎಲ್ರೂ ಮನೆಗೆ ಹೋದರು...ನೀನಿನ್ನು ಯಾರನ್ನೂ ಫೂಲ್ ಮಾಡೋಕ್ಕಾಗಲ್ಲ. ಎದ್ದು ಬಾ ಬೇಗ. ನನ್ಗೂ ಬೇರೆ ಕೆಲ್ಸ ಇದೆ" ಎಂದು ಗೊಣಗಾಡಿದ ಶೇಷ. ಆದರೂ ನಂಜನ ಸದ್ದೇ ಇಲ್ಲ.
"ಸರಿ ಕಡೇಗೆ ನನ್ನನ್ನಾದ್ರೂ ಫೂಲ್ ಮಾಡೋ ಆಸೇನಾ ನಿನ್ಗೆ?...ಏ....ಬಾರಪ್ಪಾ..." ಎನ್ನುತ್ತಾ ಮೇನೇಜರ್ ಕೊಠಡಿಗೆ ನುಗ್ಗಿದ ಶೇಷ. ಆದರೂ ನಂಜ ಅಲುಗಾಡಲಿಲ್ಲ.
"ಸಾಕಪ್ಪಾ ನಿಲ್ಸು ನಿನ್ನ ಏಪ್ರಿಲ್ ಫೂಲ್ ಆಟ" ಎನ್ನುತ್ತಾ ಶೇಷ ನಂಜನ ಹತ್ತಿರ ಬಂದು ಆತನನ್ನು ಅಲುಗಾಡಿಸಿದ. ಆದರೆ ನಂಜ ವಿಧಿವಶಾತ್ ಇಹಲೋಕ ತ್ಯಜಿಸಿದ್ದ. ಅವನ ಮನೆಯವರಿಗೆ ಸುದ್ಧಿ ಮುಟ್ಟಿಸಲಾಯಿತು. ಪೋಸ್ಟ್ ಮಾರ‍್ಟಂನಿಂದ ನಂಜನಿಗೆ ಬಲವಾಗಿ ಹಾರ್ಟ್ ಅಟಾಕ್ ಆದದ್ದು ಬೆಳಕಿಗೆ ಬಂತು. ಸಹೋದ್ಯೋಗಿಗಳಿಗೆಲ್ಲಾ ವಿಷಯ ತಿಳಿದು ಪ್ರತಿಯೊಬ್ಬರೂ ನಂಜನ ಅಂತಿಮ ದರ್ಶನಕ್ಕೆ ಬಂದರು.
"ಅಂತೂ ನಂಜ ನಮ್ಮನ್ನೆಲ್ಲಾ ಖಂಡಿತವಾಗಿಯೂ ಫೂಲ್ ಮಾಡಿಯೇ ಬಿಟ್ಟ." ಎಂದು ಹೇಳುತ್ತಾ ಎಲ್ಲರೂ ನಿಟ್ಟುಸಿರು ಬಿಟ್ಟು ಕಣ್ಣೀರು ಹಾಕಿದರು.
"ಒಂದಲ್ಲಾ ಒಂದು ದಿನ ಅಕಸ್ಮಾತ್ತಾಗಿ ಸಾವು ಎಲ್ಲರನ್ನೂ ಫೂಲ್ ಮಾಡಿಯೇ ಬಿಡುತ್ತದೆ. ಎಲ್ಲರ ಆಸೆ ಆಕಾಂಕ್ಷೆಗಳು, ನಿರೀಕ್ಷೆ, ಬಯಕೆಗಳೆಲ್ಲಾ ಆಗ ಫೂಲ್ ಆಗಿ ಬಿಡುತ್ತದೆ" ಎಂದು ನಾಲ್ಕು ಹನಿ ಕಂಬನಿಯೊಂದಿಗೆ ಆಫೀಸಿನ ಮೇನೇಜರ್ ಹೇಳಿದರು. ನಂಜನ ಪಾಲಿಗೆ ಏಪ್ರಿಲ್ ಒಂದನೇ ತಾರೀಖು ವಿಪರ್ಯಾಸವಾಗಿ ಫೂಲ್ ಮಾಡಿಬಿಟ್ಟಿತ್ತು. ಎಲ್ಲರ ಗಂಟಲೂ ಇನ್ನಷ್ಟು ಗದ್ಗದಿತವಾಗಿತ್ತು. ಪ್ರತಿಯೊಬ್ಬರ ಮನಸ್ಸು ನಂಜನ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಿತ್ತು.

ತ್ರಿವೇಣಿ ವಿ ಬೀಡುಬೈಲು
ಮಂಗಳೂರು

No comments:

Post a Comment