Thursday, June 25, 2015

"ಮಮ್ಮಿ" - ಸಣ್ಣ ಕಥೆ

ಮಮ್ಮಿ
ಕೆಲಸಗಳನ್ನೆಲ್ಲಾ ಮುಗಿಸಿ ಗಂಟೆ ನೋಡಿದಳು ಶ್ಯಾಮಲ. ಸಂಜೆ ಐದಾಗಿತ್ತು. ನಡುಕೋಣೆಗೆ ಬಂದು ಟಿ.ವಿ ನೋಡುತ್ತಾ ಕುಳಿತಳು. ರಾಮಣ್ಣ ಹುಡುಗನೊಂದಿಗೆ ಬರಬಹುದೆಂದುಕೊಂಡಳು.
_________________
ಹಿಂದಿನ ದಿನ ಸಂಜೆ ಗಂಡನೊಂದಿಗೆ ವಾಕಿಂಗ್ ಹೋಗಿದ್ದಳು ಶ್ಯಾಮಲ. ನಾಲ್ಕಾರು ಮನೆಗಳಿಗೆ ಹಸುವಿನ ಹಾಲು ಮಾರುವ ರಾಮಣ್ಣ ಇದಿರಾಗಿದ್ದ. ದಾರಿಯಲ್ಲೋ, ಬಸ್ಸಿನಲ್ಲೋ ಆಗಾಗ್ಗೆ ಕಂಡು ಮಾತ್ರ ಪರಿಚಯವಿದ್ದ ಕಾರಣ, ಎದುರೆದುರು ಭೇಟಿಯಾದಾಗ ಪರಸ್ಪರ ಮುಗುಳ್ನಗೆಯಾಡುತ್ತಿದ್ದರವರು. ಇವರು ವಾಸಿಸುತ್ತಿರುವ ಬೀದಿಯಿಂದ ನಾಲ್ಕನೆಯೋ ಐದನೆಯೋ ಬೀದಿಯಲ್ಲಿರಬಹುದು ರಾಮಣ್ಣನ ಮನೆ. ಎಲ್ಲಿ ಎಂದು ಖಚಿತವಾಗಿ ಗೊತ್ತಿರಲಿಲ್ಲ ಅವರಿಗೆ. ಅವನಿಗೆ ಮೂರು ಕರೆಯುವ ಹಸುಗಳಿವೆ ಎಂದು ಪಕ್ಕದ ಮನೆಯ ಪದ್ಮ ಹೇಳಿ ಗೊತ್ತಿತ್ತು.
"ಇಲ್ಲಿ ಯಾರಾದ್ರೂ ಟ್ಯೂಶನ್ ಕೊಡುವವರಿದ್ದಾರಾ?" ಎಂದು ಪ್ರಶ್ನಿಸುತ್ತಾ ರಾಮಣ್ಣ ಇವರ ಹತ್ತಿರ ಬಂದ.
"ಯಾವ ಕ್ಲಾಸಿಗೆ?" ಕೇಳಿದಳು ಶ್ಯಾಮಲ.
"ಎರಡನೇ ಕ್ಲಾಸಿಗೆ, ಇಂಗ್ಲಿಷ್ ಮೀಡಿಯಂ ಹುಡುಗ"
"ನಿಮ್ಮ ಮಗನಿಗೇನು?" ಶ್ಯಾಮಲಾಳ ಗಂಡ ರಘು ಕೇಳಿದ.
"ಅಲ್ಲ, ನನ್ನ ಅಕ್ಕನ ಮಗನಿಗೆ" ಉತ್ತರಿಸಿದ ರಾಮಣ್ಣ.
ಶ್ಯಾಮಲಳಿಗೆ ಸಂಜೆ ಹೊತ್ತು ಕಳೆಯಲು ಏನಾದರೂ ಕೆಲಸ ಬೇಕಿತ್ತು. ’ನಾನೇ ಹೇಳಿಕೊಡಬಹುದಲ್ಲವೇ’ ಎಂದಾಲೋಚಿಸಿ, "ಹುಡುಗನಿಗೆ ನಾನೇ ಪಾಠ ಹೇಳಿಕೊಡುವೆ ಬೇಕಾದ್ರೆ" ಎಂದಳು. ಸಾಕಾಷ್ಟು ಡಿಗ್ರಿ ಪಡೆದುಕೊಂಡಿದ್ದರೂ ಆಕೆಗೆ ದುರದೃಷ್ಟವಶಾತ್ ಎಲ್ಲೂ ಕೆಲಸ ಸಿಕ್ಕಿರಲಿಲ್ಲ.
"ಸರಿ ಅಮ್ಮ. ನಾಳೆ ಸಂಜೆ ಹುಡುಗನನ್ನು ಕರಕೊಂಡು ನಿಮ್ಮಲ್ಲಿಗೆ ಬರುತ್ತೇನೆ" ಎನ್ನುತ್ತಾ ಹೊರಟನಾತ.
"ನಮ್ಮ ಮನೆ ಗೊತ್ತಿದ್ಯಾ ನಿನಗೆ?" ಕೇಳಿದ ರಘು.
"ಓ ಗೊತ್ತಿದೆ ಸ್ವಾಮಿ, ಅದೇ ಆ ಬೀದಿಯ ಎರಡನೇ ಮನೆಯಲ್ಲವೇ?" ಎಂದು ಬೆರಳು ಮಾಡಿ ತೋರಿಸಿದ. "ನಿಮ್ಮ ಪಕ್ಕದ ಮನೆಗೆ ಹಾಲು ಹಾಕಲು ಬರುವಾಗ ಅಮ್ಮಾವ್ರನ್ನ ನೋಡಿದ್ದೇನೆ"ಎನ್ನುತ್ತಾ ಶ್ಯಾಮಲಾಳನ್ನು ನೋಡಿ ಹಲ್ಲುಕಿಸಿದ.
__________
"ಅಮ್ಮಾ, ಅಮ್ಮಾ" ರಾಮಣ್ಣ ಹೊರಗಿನಿಂದ ಕರೆದ.
ಶ್ಯಾಮಲ ಟಿ.ವಿ. ಆರಿಸಿ ಹೊರಗೆ ಬಂದಳು. ಸಂಜೆ ಹೇಳಿದಂತೆ ರಾಮಣ್ಣ ಹುಡುಗನೊಂದಿಗೆ ಬಂದಿದ್ದ. ಶ್ಯಾಮಲ ಅವರಿಬ್ಬರನ್ನೂ ಒಳಗೆ ಕರೆದಳು.
"ಅಮ್ಮ ನೋಡಿ ಇವನನ್ನೇ ನಾನು ನಿನ್ನೆ ಹೇಳಿದ್ದು"
"ಹೌದಾ? ಯಾವ ಕ್ಲಾಸಪ್ಪಾ ನೀನು?" ಕೇಳಿದಳು ಶ್ಯಾಮಲ ಹುಡುಗನ ತಲೆ ನೇವರಿಸುತ್ತಾ.
"ಸೆಕೆಂಡ್ ಸ್ಟಾಂಡರ‍್ಡ್" ಎಂದ.
"ಇವನಿಗೆ ಎಲ್ಲಾ ಸಬ್ಜೆಕ್ಟ್‍ಗಳನ್ನೂ ಹೇಳಿಕೊಡಬೇಕಂತೆ. ಎಷ್ಟು ಫೀಸಾಗುತ್ತೆ ಅಮ್ಮಾ?" ಕೇಳಿದ ರಾಮಣ್ಣ.
"ಹುಡುಗ ಚೆನ್ನಾಗಿ ಕಲಿತರೆ ಅದೇ ಫೀಸು, ಅಲ್ವೇನೋ" ಹುಡುಗನನ್ನು ನೋಡಿ ನಗುತ್ತಾ ಹೇಳಿದಳು ಶ್ಯಾಮಲ.
"ಹ್ಹೆ ಹ್ಹೆ ಹ್ಹೆ... ಹಾಗೆ ಹೇಳಿದರೆ ಹೇಗಮ್ಮಾ?! ಹುಡುಗನ ತಂದೆ...ಅದೇ ನನ್ನ ಭಾವ ನಿಮ್ಮ ಹತ್ತಿರ ಕೇಳಿಕೊಂಡು ಬರಲು ಹೇಳಿದ್ದರು...." ಎನ್ನುತ್ತಾ ತಡವರಿಸಿದನಾತ.
"ಅದೆಲ್ಲಾ ಏನೂ ಬೇಡ...ಮೊದಲು ಅವನು ನಾನು ಹೇಳಿಕೊಟ್ಟದ್ದನ್ನು ಚೆನ್ನಾಗಿ ಕಲಿತು ಒಳ್ಳೆಯ ಮಾರ್ಕು ತೆಗೆಯಲಿ, ಅಷ್ಟೇ ಸಾಕು" ಎನ್ನುತ್ತಾ ಪುನ: ನಕ್ಕಳು ಶ್ಯಾಮಲ.
"ಹೂಂ...ನೀವು ಹೇಗೆ ಹೇಳ್ತೀರೋ ಹಾಗೆ...ನನಗೆ ಇನ್ನೂ ನಾಲ್ಕು ಮನೆಗಳಿಗೆ ಹಾಲು ಹಾಕಲಿದೆ ಅಮ್ಮಾ... ಪಾಠ ಮುಗಿದ ನಂತರ ಹುಡುಗನನ್ನು ಕಳುಹಿಸಿಬಿಡಿ" ಎನ್ನುತ್ತಾ ಹಾಲಿನ ಕ್ಯಾನಿನೊಂದಿಗೆ ಹೊರಟು ಹೋದ ರಾಮಣ್ಣ.
ಶ್ಯಾಮಲ ಬಾಗಿಲು ಹಾಕಿ ಬಂದು ಹುಡುಗನ ಪಕ್ಕ ಕುಳಿತಳು.
"ಏನಪ್ಪಾ ನಿನ್ನ ಹೆಸರು?"
"ಪ್ರದೀಪ್" ಮುದ್ದಾಗಿ ಹೇಳಿದ ಹುಡುಗ.
"ಮನೇಲಿ ಯಾವ ಭಾಷೆ ಮಾತಾಡೋದು?"
"ತುಳು"
"ಶಾಲೆಯಲ್ಲಿ ಇಂಗ್ಲೀಷಾ?"
ಹೌದೆಂದು ತಲೆಯಾಡಿಸುತ್ತಾ, "ಕನ್ನಡ ಬರಲ್ಲ" ಎಂದ.
"ಮತ್ತೆ ಇಷ್ಟು ಚೆನ್ನಾಗಿ ಮಾತನಾಡುತ್ತಿದ್ದೀ!"
"ಸ್ವಲ್ಪ ಸ್ವಲ್ಪ ಬರುತ್ತದಷ್ಟೇ" ಎನ್ನುತ್ತಾ ನಕ್ಕ.
"ನಾನೀಗ ನಿನ್ನ ಜೊತೆ ಕನ್ನಡದಲ್ಲೇ ಮಾತಾಡೋದು ಆಯ್ತಾ...ನೋಡೋಣ ನಿನಗೆ ಬರುತ್ತೋ ಇಲ್ವೋ ಅಂತ....ಹೂಂ ಸರಿ...ಈಗ ಹೇಳು ನಿಮ್ಮ ಮನೆಯಲ್ಲಿ ಯಾರ‍್ಯಾರಿದ್ದಾರೆ?"
"ಡ್ಯಾಡಿ, ಅಜ್ಜಿ ಮತ್ತು ನಾನು"
"ಅಜ್ಜಿ ಅಂದ್ರೆ ನಿನ್ನ ಡ್ಯಾಡಿಯ ಅಮ್ಮನಾ?"
"ಹೂಂ"
"ಮಮ್ಮಿ ಎಲ್ಲಿ?"
"ಅಜ್ಜಿ ಮನೆಗೆ ಹೋಗಿದ್ದಾರೆ" ಬೇಸರದಿಂದ ಹೇಳಿದ ಪ್ರದೀಪ್.
"ಮತ್ತೆ ನಿನ್ನ ರಾಮಣ್ಣ ಮಾವ ಎಲ್ಲಿರೋದು?"
"ಅವರು ನಮ್ಮ ಮನೆಯ ಪಕ್ಕದಲ್ಲಿ"
ನೀನು ನಿನ್ನ ಡ್ಯಾಡಿಯೊಟ್ಟಿಗೆ ಬಾರದೆ ಮಾವನೊಟ್ಟಿಗೆ ಬಂದದ್ದೇಕೆ?"
"ಡ್ಯಾಡಿ ಇನ್ನೂ ಮನೆಗೆ ಬಂದಿಲ್ಲ"
"ಡ್ಯಾಡಿ ಯಾವ ಕೆಲಸದಲ್ಲಿದ್ದಾರೆ?"
"ಫ್ಯಾಕ್ಟ್ರಿಯಲ್ಲಿ ಇಂಜಿನಿಯರ್"
"ಮನೆಯಲ್ಲಿ ನಿನಗೆ ತಿಂಡಿ ಮಾಡಿಕೊಡೋದು ಯಾರು?"
"ಅಜ್ಜಿ, ಎಲ್ಲಾ ಅಜ್ಜಿನೇ ಈಗ, ಮಮ್ಮಿ ಅಜ್ಜಿ ಮನೆಗೆ ಹೋದ ಮೇಲೆ" ಎಂದು ಹೇಳಿದ ಬೇಸರದಿಂದ ತಲೆ ತಗ್ಗಿಸುತ್ತಾ.
"ಅಯ್ಯೋ ಕೇಳಿದ್ದು ತಪ್ಪಾಯಿತೇ ಎಂದಾಲೋಚಿಸಿದಳು ಶ್ಯಾಮಲ.
"ನಿನ್ನಪ್ಪ ಅಮ್ಮನಿಗೆ ನೀನೊಬ್ಬನೇ ಮಗನಾ?"
"ಅಲ್ಲ, ನನಗೆ ತಂಗಿಯೊಬ್ಬಳಿದ್ದಾಳೆ" ಹುಡುಗನ ಮುಖವರಳಿತು.
"ಹೌದಾ?!" ಆಶ್ಚರ್ಯದಿಂದ ಕೇಳಿದಳು ಶ್ಯಾಮಲ.
ಬಹುಶ: ಗಂಡ ಹೆಂಡತಿಗೆ ಜಗಳವಾಗಿ ಅಥವಾ ಅತ್ತೆ ಸೊಸೆಗೆ ಜಗಳವಾಗಿ ಪ್ರದೀಪ್‍ನ ತಾಯಿ ಕೋಪಿಸಿಕೊಂಡು ಮಗಳೊಂದಿಗೆ ತವರಿಗೆ ಹೋಗಿರಬೇಕು...ಛೇ ಎಂತಹ ಹೆಂಗಸಿರಬಹುದವಳು! ಇಂತಹ ಮುದ್ದಾದ ಹುಡುಗನನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂದಿತವಳಿಗೆ? ಪಾಪ ಪ್ರದೀಪ್ ಎಂದುಕೊಂಡಳು.
"ಮಮ್ಮಿ ಯಾವಾಗ ಹೋದದ್ದು ಪುಟ್ಟಾ? ಯಾವಾಗ ವಾಪಸು ಬರುತ್ತಾಳೆ?"
"ಅವತ್ತೇ ಹೋಗಿದ್ದಾಳೆ. ಆಮೇಲೆ ಬರಲೇ ಇಲ್ಲ. ಡ್ಯಾಡಿ ಹತ್ತಿರ ಯಾವಾಗ ಕೇಳಿದರೂ ಸ್ವಲ್ಪ ದಿನ ಬಿಟ್ಟು ಬರುತ್ತಾಳೆಂದು ಹೇಳುತ್ತಿರುತ್ತಾರೆ ಆಂಟೀ...ಇನ್ನೂ ಬಂದಿಲ್ಲ" ಹೇಳಿದ ಪ್ರದೀಪ್ ಕಣ್ಣಿನಲ್ಲಿ ನೀರು ತುಂಬಿಕೊಂಡು.
"ಯಾಕಪ್ಪಾ ಕಣ್ಣಲ್ಲಿ ನೀರು?" ತಲೆ ನೇವರಿಸುತ್ತಾ ಕೇಳಿದಳು.
"ಮಮ್ಮಿಯಿಲ್ಲದೇ ತುಂಬಾ ಬೇಜಾರು"
ಶ್ಯಾಮಲಾಳ ಮನಸ್ಸಿನಲ್ಲೀಗ ಸಂಶಯಕ್ಕೆಡೆಯೇ ಇರಲಿಲ್ಲ. ಖಂಡಿತವಾಗಿ ಜಗಳ ಮಾಡಿಕೊಂಡು ಪ್ರದೀಪ್‍ನನ್ನು ಗಂಡನೊಟ್ಟಿಗೆ ಬಿಟ್ಟು ಮಗಳೊಂದಿಗೆ ಹೋಗಿಬಿಟ್ಟಿದ್ದಾಳೆ ತವರಿಗೆ. ಪ್ರದೀಪ್‍ನನ್ನು ಸಮಾಧಾನ ಮಾಡಲೋಸ್ಕರ ಮಮ್ಮಿ ಬರುತ್ತಾಳೆ ಎಂದು ಹೇಳಿರಬೇಕು ಅವನಪ್ಪ ಎಂದುಕೊಂಡಳು. ಗಂಡ-ಹೆಂಡತಿ ಅಥವಾ ಅತ್ತೆ-ಸೊಸೆಯರ ನಡುವೆ ಮನಸ್ತಾಪವಾದಾಗ ಬದುಕಿನ ಪ್ರಮುಖ ಗಳಿಗೆಗಳನ್ನು ಕಳೆದುಕೊಳ್ಳುವ ಬದಲು, ಇಂತಹ ಮುಗ್ಧ ಮಕ್ಕಳನ್ನು ಏಕಾಂಗಿಯನ್ನಾಗಿ ಮಾಡುವ ಬದಲು, ತಮ್ಮ ಜೀವನದ, ಮಕ್ಕಳ ಮುಂದಿನ ಬೆಳವಣಿಗೆಯ, ಅವರ ಕಲಿಯುವಿಕೆಯ ಮಹದೋದ್ದೇಶಗಳನ್ನು ಯೋಚಿಸಿ ಹೊಂದಾಣಿಕೆಯಿಂದಿರಲು ಸಾಧ್ಯವಿದ್ದರೂ, ಸಾಧ್ಯವಿಲ್ಲದಂತೆ ಮಾಡಿಕೊಳ್ಳುತ್ತಿದ್ದಾರಲ್ಲಾ ಇಂತಹ ಕೆಲವರು. ಹೀಗಾದರೆ ಇಂತಹ ಮುಗ್ಧ ಮಕ್ಕಳ ಭವಿಷ್ಯ ಹೇಗೆ? ತಾಯಿಯ ಸಾನಿಧ್ಯ ಇಲ್ಲದೆ ಮಾನಸಿಕವಾಗಿ ಎಷ್ಟು ಮುದುಡಿದೆ ಈ ಮಗು! ಇನ್ನು ತಾಯಿಯೊಂದಿಗಿರುವ ಆ ಪುಟ್ಟು ಮಗಳ ಗತಿಯೇನೋ? ಛೇ ಪಾಪ ಎಂದುಕೊಂಡಳವಳು.
ಆಕೆಯ ಕುತೂಹಲ ಇನ್ನೂ ಕೆರಳಿತು.
"ಮಮ್ಮಿ ಯಾವಾಗ ಪುಟ್ಟಾ ಅಜ್ಜಿ ಮನೆಗೆ ಹೋದದ್ದು?"
"ಹೋಗಿ ತುಂಬಾ ತುಂಬಾ ದಿನ ಆಯ್ತು..." ಕೆನ್ನೆ ಮೇಲೆ ಕಣ್ಣೀರಿಳಿದು ಬಂತು.
ಛೇ ತಾಯಿಗಾಗಿ ಎಷ್ಟೊಂದು ಹಂಬಲಿಸುತ್ತಿರುವನು ಪಾಪ. ಕೇಳಬಾರದ್ದನ್ನೆಲ್ಲಾ ಕೇಳಿ ಹುಡುಗನ ಮನಸ್ಸನ್ನು ನೋಯಿಸಿದೆನೆಂದುಕೊಂಡಳು ಶ್ಯಾಮಲ.
ಕೊನೆಯ ಪ್ರಶ್ನೆ ಒಂದನ್ನು ಕೇಳಿಯೇ ಬಿಡೋಣ  ಎಂದುಕೊಂಡು ಶ್ಯಾಮಲ "ನೀನು ಮಮ್ಮಿಯೊಂದಿಗೆ ಹೋಗಲಿಲ್ಲವೇಕೆ?" ಎಂದು ಕೇಳಿದಳು.
"ಡ್ಯಾಡಿ ಬೇಡ ನಿನಗೆ ಸ್ಕೂಲಿದೆ ಎಂದು ಬಿಟ್ಟರು. ನನಗೆ ಹೋಗಲಿಕ್ಕೆ ತುಂಬಾ ಆಸೆ ಇತ್ತು..." ದು:ಖ ಉಮ್ಮಳಿಸಿ ಬಂತವನಿಗೆ.
"ಸರಿ ಪುಟ್ಟಾ, ಬಿಡು ಬೇಸರಪಟ್ಟುಕೊಳ್ಳಬೇಡ ...ಎಲ್ಲಾ ಒಂದು ದಿನ ಸರಿ ಹೋಗುತ್ತೆ ಆಯ್ತಾ... ಕಳೆದ ವರ್ಷ ಎರಡನೇ ತರಗತಿಯಲ್ಲಿದ್ದಾಗ ಟ್ಯೂಶನ್‍ಗೆ ಹೋಗುತ್ತಿದ್ದೆಯಾ ಎಲ್ಲಿಯಾದರೂ?"
"ಇಲ್ಲ, ಮಮ್ಮಿನೇ ಮನೇಲಿ ಹೇಳಿಕೊಡುತ್ತಿದ್ದಳು"
"ಓ ಹೌದಾ? ನಿನ್ನ ತಂಗಿ ಶಾಲೆಗೆ ಹೋಗುತ್ತಿದ್ದಾಳಾ? ಯಾವ ಕ್ಲಾಸು?"
"ಶಾಲೆಗೆ ಹೋಗುವುದಿಲ್ಲ" ಎಂದು ನಕ್ಕು ತಲೆ ಬಗ್ಗಿಸಿದ ಪ್ರದೀಪ್. ಯಾಕೆಂದು ಹೊಳೆಯಲಿಲ್ಲ ಶ್ಯಾಮಲಳಿಗೆ.
"ನಿನಗವಳು ಮನೇಲಿದ್ದಾಗ ಪುಸ್ತಕ, ಪೆನ್ಸಿಲ್ಲು, ಪೆನ್ನು ಇತ್ಯಾದಿಗಳನ್ನೆಲ್ಲಾ ಎಳೆದು ಉಪದ್ರ ಕೊಡುತ್ತಿದ್ದಳೇ?"
"ಇಲ್ಲ ಹ್ಹ....ಹ್ಹ...ಹ್ಹ...ಹ್ಹ...ಇಲ್ಲ" ಎನ್ನುತ್ತಾ ಗಹಗಹಿಸಿ ನಕ್ಕ ಪ್ರದೀಪ್.
"ಯಾಕೋ ನಗಾಡ್ತಾ ಇದ್ದೀಯ?" ಕುತೂಹಲದಿಂದ ಕೇಳಿದಳು ಶ್ಯಾಮಲ.
"ಅವಳಿನ್ನೂ ಚಿಕ್ಕವಳು ಆಂಟಿ"
"ಚಿಕ್ಕವಳು ಎಂದರೆ...?!"
"ಲಾಸ್ಟ್ ವೀಕ್ ಅವಳು ಹುಟ್ಟಿದ್ದು ಆಂಟೀ" ಎಂದು ಹೇಳುತ್ತಾ ಪುನ: ನಕ್ಕ.
ಶ್ಯಾಮಲಾಳಿಗೆ ಮತ್ತರಿವಾಯಿತು ಪ್ರದೀಪ್‍ನ ತಾಯಿ ಹೆರಿಗೆ ಬಾಣಂತನಕ್ಕೆಂದು ತವರಿಗೆ ಹೋಗಿದ್ದಾಳೆಂದು.
"ಎಲ್ಲಿ ನಿನ್ನ ಪುಸ್ತಕಗಳನ್ನೆಲ್ಲಾ ಬ್ಯಾಗಿನಿಂದ ತೆಗೆ... ಪಾಠ ಶುರು ಮಾಡೋಣ" ಎನ್ನುತ್ತಾ ಹಣೆಯಲ್ಲಿ ಮೂಡಿದ್ದ ಬೆವರೊರೆಸಿಕೊಂಡಳು ಶ್ಯಾಮಲ.

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.

No comments:

Post a Comment