Tuesday, June 23, 2015

"ದಿನ ಭವಿಷ್ಯ ನಿಜವಾದ ಆ ದಿನ...!" - ಜುಲೈ ೨೦೧೫ ರ ’ಹವ್ಯಕ ವಾರ್ತೆ’ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ.

ದಿನ ಭವಿಷ್ಯ ನಿಜವಾದ ಆ ದಿನ...!
ಉದಿಯಪ್ಪಗಾಣ ಕೆಲಸ ಮುಗುಶಿ ಮನಗೆ ತರುಸುವ ಮೂರು ದಿನಪತ್ರಿಕೆಗಳ ಓದುವಾ ಹೇಳಿ ಸೋಫಾಲ್ಲಿ ಬಂದು ಕೂದೆ. ಜ್ಯೋತಿಷ್ಯಾಸ್ತ್ರಲ್ಲಿ ಅಪಾರ ನಂಬಿಕೆ ಇದ್ದರುದೇ ಆನು ಈ ಪೇಪರಿಲಿ, ಮ್ಯಾಗಜಿನ್‍ಗಳಲ್ಲಿ ಬಪ್ಪಂತಾ ದಿನ ಅಥವಾ ವಾರ ಭವಿಷ್ಯವ ಓದುವ ಕ್ರಮವೇ ಇಲ್ಲೆ. ಇಲ್ಲೆ ಹೇಳಿಯೂ ಪೂರ ಹೇಳುಲೆಡಿತ್ತಿಲ್ಲೆ. ಎಂತಕೆ ಹೇಳಿರೆ ಕೆಲವೊಂದರಿ ಗೊಂತಾಗದ್ದ ಹಾಂಗೆ ಕಣ್ಣುಗೊ ಆ ಅಂಕಣಕ್ಕೆ ಹೋಗಿ ಓದಿ ಹೋಪದೂ ಇದ್ದು! ಹೆಚ್ಚಾಗಿ ಓದದ್ದೇ ಇಪ್ಪದಕ್ಕೆ ಕಾರಣ ಇಷ್ಟೇ. ಒಂದೊಂದರಲ್ಲಿ ಒಂದೊಂದು ನಮೂನೆ ಕೊಟ್ಟಿರ‍್ತವು! ನಿಂಗಳೂ ಎಷ್ಟೋ ಸರ್ತಿ, "ಇದರ ಓದುದೆಂತರ..ಒಂದೊಂದರಲ್ಲಿ ಒಂದೊಂದು ನಮೂನೆ ಬರದಿರ‍್ತವು, ಅದರ ಓದಿಯೊಂಡು ಕೂಪದು ಸುಮ್ಮಗೆ...ಒಂದೂ ಅದರಲ್ಲಿಪ್ಪ ಹಾಂಗೆ ಆವುತ್ತಿಲ್ಲೆ" ಹೇಳಿ ಉಡಾಫೆ ಮಾಡಿಪ್ಪಿ! 

ಸರಿ ಆ ದಿನ ಏಕೋ ಯೇವ ಯೇವ ಪೇಪರಿಲಿ ಎಂತೆಂತ ಕೊಟ್ಟಿದವು ನೋಡುವೋ ಹೇಳಿ ಭಾರೀ ಕುತೂಹಲಂದಲೇ ಓದಿದೆ! ಒಂದು ದಿನಪತ್ರಿಕೆಲಿ ಕೊಟ್ಟಿತ್ತವು, "ಅನಾವಶ್ಯ ತಿರುಗಾಟ"  ಹೇಳಿ! ಮತ್ತೊಂದರ ತೆರೆದು ನೋಡಿದೆ. ಅದರಲ್ಲಿ "ಅನಾವಶ್ಯ ಖರ್ಚು ತಪ್ಪಿದ್ದಲ್ಲ" ಹೇಳಿ! ಅಕೇರಿಗೆ ಎಂಗೊ ತರುಸುವ ಏಕೈಕ ಆಂಗ್ಲ ದಿನಪತ್ರಿಕೆಯ ತೆರದು ನೋಡಿದೆ. ಅದರಲ್ಲಿ "ಟುಡೇ ಯುವರ್ ಡ್ರೀಮ್ಸ್ ವಿಲ್ ಬಿ ಫುಲ್ಫಿಲ್ಡ್" ಹೇಳಿ ಇದ್ದತ್ತು! ಇವರತ್ತರೆ ಇಂತಿಂತಾ ದಿನಪತ್ರಿಕೆಲಿ ಎನ್ನ ದಿನ ಭವಿಷ್ಯವ ಹೀಂಗೀಂಗೆ ಕೊಟ್ಟಿದವು ಹೇಳಿ ಹೇಳಿಕ್ಕಿ, "ಯೇವುದರ ನಂಬುದು ಯೇವುದರ ಬಿಡುದು ಹೇಳಿ ಗೊಂತಾವುತ್ತಿಲ್ಲೆ...ಒಟ್ರಾಸಿ ಏನಾರೊಂದು ಬರದು ಹಾಕುತ್ತವು, ಜೆನರ ಮಂಗ ಮಾಡುಲೆ ಅಲ್ಲದಾ...?!" ಹೇಳಿಯೊಂಡು ನೆಗೆ ಮಾಡಿದೆ! "ನಿನಗೆ ಬೇರೆ ಕೆಲಸ ಇಲ್ಲೆ...ಹೋಗಿ ಹೋಗಿ ಅದರ ಓದುತ್ತೆನ್ನೆ" ಹೇಳಿದವಿವು! ಆನು ಅಂತೇ ಓದಿದ್ದು..ದಿನಾ ಓದುತ್ತೆನಾ...ಓದಿದ್ದರ ಹೇಳಿದ್ದಪ್ಪಾ ಹೇಳಿ ನಸುಕೋಪಲ್ಲಿ ಹೇಳಿ, "ನಿಂಗಳ ರಾಶಿದರ ಓದಿ ಹೇಳೇಕಾ?" ಕೇಳಿದೆ. "ಬೇಡ ಬೇಡ, ಇನ್ನು ಅದರ ಓದಿ ಹೇಳಿ ಮಂಡೆ ಕೆಡ್ಸಿಯೊಂಡು ಎನ್ನ ಮಂಡೆಯನ್ನೂ ಹಾಳು ಮಾಡೇಡ" ಹೇಳಿ ಡೈರೆಕ್ಟಾಗಿ ಹೇಳಿ ಬಿಟ್ಟವಿವು! ಇವು ಬೇಡ ಹೇಳಿದರೂ ಅವರ ರಾಶಿ ಭವಿಷ್ಯವನ್ನೂ ಎನ್ನಷ್ಟಕ್ಕೇ ಓದಿಗೊಂಡೆ! ಒಂದರಲ್ಲಿ,"ನಿಧಾನವೇ ಪ್ರಧಾನ, ಯೋಚಿಸಿ ಕೆಲಸ ಮಾಡಿ, ಮರೆತು ಹೋಗುವ ಸಂದರ್ಭಗಳು ಇದಿರಾಗಬಹುದು" ಒಂದರಿಯಂಗೆ ಎನ್ನ ಮನಸ್ಸಿಲಿ ದುಷ್ಯಂತ ಶಾಕುಂತಲೆ ಕತೆ ನೆಂಪಾಗಿ ಹಾಂಗೇ ಮಾಯ ಆತು! ಸಣ್ಣಕ್ಕೆ ಎನ್ನಷ್ಟಕ್ಕೇ ನೆಗೆ ಮಾಡಿಯೊಂಡು ಇನ್ನೊಂದು ಪತ್ರಿಕೆಯ ತೆರದೆ. ಅದರಲ್ಲಿ "ನಿಮ್ಮ ವೈಯುಕ್ತಿಕ ಸಮಸ್ಯೆಗಳಿಗೆ ಪರಿಹಾರವಿದೆ" ಹೇಳಿ ಇದ್ದತ್ತು! "ಹೂಂ" ಹೇಳಿ ಎನ್ನಷ್ಟಕ್ಕೇ ಹೇಳಿಯೊಂಡು ಮತ್ತೊಂದು ದಿನಪತ್ರಿಕೆಯ ಹಿಡುದೆ. ಅಷ್ಟಪ್ಪಗ ಇವ್ವು ಆಫೀಸಿಂಗೆ ಹೆರಡುವ ಹೊತ್ತಾಗಿತ್ತು. ಪೇಪರಿನ ಮಡಿಸಿ ಅಲ್ಲಿಯೇ ಮಡುಗಿ ಅಡುಗೆ ಕೋಣೆಗೆ ಹೋಗಿ ಬಾಟ್ಲಿಗೆ ನೀರು ತುಂಬುಸಿ ತಂದು ಟೀಪಾಯ್ ಮೇಲೆ ಮಡುಗಿದೆ. ಇವ್ವು ಇವಕ್ಕೆ ಬೇಕಾದ ಇತರ ವಸ್ತುಗಳ ಬ್ಯಾಗಿಂಗೆ ಹಾಕಿಕೊಂಡಿತ್ತವು. ಅಷ್ಟಪ್ಪಗ ಶಾಲೆಂದ ಮಗಳ ಫೋನು, ಅದೂ ಅದರ ಮಾಸ್ಟ್ರನ ಮೊಬೈಲಿಂದ! ಆ ನಂಬರಿನ, ಹಾಂಗೆ ಅದರ ಬೇರೆ ಟೀಚರುಗಕ್ಕಳ ನಂಬರಿನ ಒಂದಲ್ಲಾ ಒಂದು ತುರ್ತು ಸಂದರ್ಭಲ್ಲಿ ಮಗಳು ಶಾಲೆಂದ ಫೋನ್ ಮಾಡಿಪ್ಪಗ ಸೇವ್ ಮಾಡಿತ್ತೆ! ಎಂತಾತಪ್ಪಾ ಹೇಳಿಯೊಂಡು ಗಡಿಬಿಡಿಲಿ ಫೋನು ತೆಗೆದೆ, "ಹಲೋ ಅಮ್ಮ ಆನು" ಹೇಳಿತು ಮಗಳು. ಮಕ್ಕೊಗೆ ಅಗತ್ಯ ಬೇಕಪ್ಪಗೆಲ್ಲಾ ಪಾಪ ಈಗಾಣ ಮಾಸ್ಟ್ರಕ್ಕೊ ಅವರ ಮೊಬೈಲಿನ ಮಕ್ಕೊಗೆ ಮನಗೆ ಕಾಲ್ ಮಾಡುಲೆ ಕೊಡ್ತವಪ್ಪ. "ಎಂತ ಮಗು?" ಹೇಳಿ ಕೇಳಿದೆ. "ಅಮ್ಮ, ಎನ್ನ ಹಿಂದಿ ಪಾಠ ಪುಸ್ತಕದೇ ಹಾಂಗೆ ಹಿಂದಿ ನೋಟ್ಸಿನ ಈಗ ಒಂದು ಹತ್ತು ನಿಮಿಷಲ್ಲಿ ಶಾಲೆಗೆ ತಂದುಕೊಡುವೆಯಾ ಪ್ಲೀಸ್... ಮರತು ಹೋಯಿದು ತಪ್ಪಲೆ...ಈಗ ಇಂಟರ್ವೆಲ್.. ತರ‍್ಡ್ ಪೀರಿಯಡ್ ಹಿಂದಿ ಪಿರಿಯಡಮ್ಮ, ಪುಸ್ತಕ ಇಲ್ಲದ್ದರೆ ಟೀಚರ್ ಬೈಗಮ್ಮ" ಹೇಳಿ ಹೇಳಿತು. "ಆತು ನೀನೀಗ ಪುಸ್ತಕಗೊಂಕ್ಕೆ ಕಾಲ್ ಮಾಡಿ ಮಾತಾಡಿದ್ದು, ಮರತು ಬೈಯಿಂದೆ ಹೇಳುದು ಮಾಷ್ಟ್ರಂಗೆ ಗೊಂತಾಯಿದಿಲ್ಲೆಯಾ?!" ಹೇಳಿ ಕಾಳಜಿಲಿ ಕೇಳಿದೆ. "ಇಲ್ಲೆಮ್ಮಾ...ಅವ್ವು ಎನ್ನ ಸೋಶಿಯಲ್ ಸ್ಟಡೀಸ್ ಸಬ್ಜೆಕ್ಟಿಂಗಿಪ್ಪವ್ವು...ಅಮ್ಮಂಗೆ ಅರ್ಜೆಂಟು ಫೋನು ಮಾಡ್ಲಿಕ್ಕುಂಟು ಸರ್" ಹೇಳಿಯಪ್ಪಗಲೇ ಮೊಬೈಲು ಕೊಟ್ಟವಮ್ಮಾ, ಬೇಗ ತಂದು ಕೊಡಮ್ಮಾ" ಹೇಳಿ ಹೇಳಿ ಫೋನ್ ಮಡುಗಿತು. ಇವರತ್ತರೆ ಮಗಳ ಫೋನ್ ಶುದ್ಧಿ ಹೇಳಿದೆ. ಅದಕ್ಕಿವು, "ನೀನೆಂತ ಈಗ ಹೋಗಿ ಕೊಟ್ಟು ಬರೇಕು ಹೇಳಿ ಇಲ್ಲೆ..ಎಂತರ ಅಷ್ಟು ಮರತು ಹೋಪದು ಅದು? ಒಂದರಿ ಟೀಚರ್ ಕೈಯಿಂದ ಬಯ್ಸಿಕೊಳ್ಳಲಿ, ಅಂಬಗ ಬುದ್ಧಿ ಬತ್ತು...ಇನ್ನೊಂದರಿ ಮರತು ಹೋಗ ಮತ್ತೆ.." ಹೇಳಿದವಿವು. ಆದರೆ ಎನ್ನ ಮನಸ್ಸು ತಡದ್ದಿಲ್ಲೆ. "ಬೇಡ ಪಾಪ ಒಂದರಿ ಮರ‍್ತದಲ್ಲದಾ ಅದು? ಅಂಬಗಂಬಗ ಮರತು ಹೋಪ ಕೂಸಾದ್ರೆ ನಿಂಗೊ ಹೇಳುದು ಸರಿ. ಪಾಪ ಅವಕ್ಕೆ ಬೇರೆ ಇಂಟರ‍್ನಲ್ ಎಸೆಸ್‍ಮೆಂಟ್ ಮಾರ್ಕು ಹೇಳಿ ಇದ್ದು. ಪುಸ್ತಕ ತಾರದ್ದರನ್ನೇ ನೆವ ಮಡಿಕ್ಕೊಂಡು ಟೀಚರ್ ಇದಕ್ಕೆ ಕಡಮ್ಮೆ ಮಾರ್ಕು ಕೊಡುಗು ಮತ್ತೆ..! ಶಾಲೆ ಹೆಚ್ಚು ದೂರ ಇಲ್ಲೆನ್ನೇ..ನಾಲ್ಕೇ ನಾಲ್ಕು ಕಿಲೋಮೀಟರ್. ನಿಂಗಳದ್ದು ಪೂರಾ ಹೆರಟಾಯಿದಿಲ್ಲೆನ್ನೇ..ನಿಂಗೊ ಹೆರಟು ರೆಡಿ ಆಗಿ..ಮಗಳಿಂಗೆ ಬೇಗ ಬೇಕಡ ಪುಸ್ತಕಂಗೊ..ಇದಾ ಆನೀಗ ಹಾಕಿಕೊಂಡಿಪ್ಪ ಚೂಡೀದಾರೇ ಸಾಕು, ಈಗಷ್ಟೇ ಮಿಂದು ಬದಲಿಸಿದ್ದು... ಲಾಯ್ಕಿದ್ದು... ಸ್ಕೂಟರಿಲಿ ಹೀಂಗೆ ಹೋಗಿ ಹಾಂಗೆ ಬಂದು ಬಿಡ್ತೆ...ಹತ್ತು ನಿಮಿಷಲ್ಲಿ ಬಂದು ನಿಂಗೊಗೆ ಆಫೀಸಿಂಗೆ ಹೋಪಲೆ ಸ್ಕೂಟರ್ ಕೊಡ್ತೆ... ಹಾಂಗೂ ತಡವಾದರೆ ಕಾರ್ ಇದ್ದನ್ನೇ..ನಿಂಗೊ ಅದರಲ್ಲಿ ಹೋಗಿ" ಹೇಳಿಯೊಂಡು ಆನು ಮಗಳ ಎರಡು ಪುಸ್ತಕಂಗಳ ಪ್ಲಾಸ್ಟಿಕ್ ಚೀಲಲ್ಲಿ ಹಾಕಿ ಸ್ಕೂಟರಿಲಿ ರೊಂಯನೆ ಹೋಗಿ ಕೊಟ್ಟಿಕ್ಕಿ ಬಂದೆ...ಇವ್ವು ಹೆರಟು ಸ್ಕೂಟರಿಂಗೆ ಕಾದೊಂಡಿತ್ತವು. ಆನು ಬಂದ ಕೂಡ್ಲೇ ಹೇಳಿದವಿವ್ವು, "ಮಗಳಿಂಗಿದಾ ಸ್ಟ್ರಿಕ್ಟ್‍ಲಿ ಹೇಳೇಕು ಇನ್ನು ಮುಂದೆ ಮರವಲಾಗ ಹೇಳಿ. ಇಲ್ಲಿ ದಿನಾ ತೆಕ್ಕಂಡು ಹೊಗಿ ಕೊಡ್ಲೆಡಿತ್ತೆಲ್ಲೆ, ಅದೇ ಕೆಲಸ ಅಲ್ಲ ಹೇಳಿ" ! "ಆತಪ್ಪಾ ಅದು ಹಾಂಗೆಲ್ಲ ಮರೆತ್ತಿಲ್ಲೆ..ಇಂದು ಒಂದು ದಿನ ಹಾಂಗಾತು ಹೇಳಿರೆ ಯೇವಾಗಲೂ ಹಾಂಗಾಯೆಕ್ಕು ಹೇಳಿ ಇದ್ದಾ...?! ಪಾಪ ಅದು..!" ಹೇಳಿ ಮಗಳ ಸಮರ್ಥಿಸಿಕೊಂಡಿದ್ದಾಂಗೆ, ಹೇಳಿದ್ದರ ಪೂರ ಕೇಳ್ಸಿಕೊಳ್ಳದ್ದೇ ನಸು ಕೋಪಲ್ಲಿ ಇವು ಸ್ಕೂಟರಿಲಿ ಹೋಗಿಯೂ ಆತು!
ಇವ್ವು ಆಫೀಸಿಂಗೆ ಹೋಗಿ ಹತ್ತೇ ನಿಮಿಷ, ಇವರ ಕಾಲ್! ಎಂಗೊ ಕಾಲ್ ಮಾಡಿ ಮಾತಾಡುದೇ ಪರಸ್ಪರ ಎಂತಾರು ಉಪಕಾರ ಬೇಕಪ್ಪಗ ಅಥವಾ ಎಂತಾರು ಅರ್ಜೆಂಟ್ ಇದ್ದರೆ ಮಾಂತ್ರ! ಎಂತಕಾದಿಕಪ್ಪಾ ಹೇಳಿ ಎರಡು ರಿಂಗಪ್ಪಗಲೇ ತೆಗದು, "ಹಲೋ ಎಂತ?" ಹೇಳಿ ಕೇಳಿದೆ. "ಅದೂ ಬ್ಯಾಂಗಿಂಗೆ ಕನ್ನಡ್ಕ ಹಾಕಿಯೊಂಡು ಬಪ್ಪಲೆ ಬಿಟ್ಟು ಹೋತು...ಎನ್ನ ಟೇಬಲ್ ಮೇಲೇ ಇದ್ದು..." ಹೇಳಿ ನಿಲ್ಲಿಸಿದವು. "ಅದಕ್ಕೆ ಎಂತ ಮಾಡೇಕು ಆನೀಗ? ತಂದು ಕೊಡೇಕ್ಕಾ ಅಲ್ಲಾ ನಿಂಗೊ ಮನೆಗೆ ಬಂದು ತೆಕ್ಕಂಡು ಹೋವುತ್ತೀರಾ?" ಕೇಳಿದೆ. "ಮನಗೆ ಬತ್ತರೆ ನಿನಗೆ ಕಾಲ್ ಮಾಡ್ತಿತ್ತೆನಾ?! ಇಲ್ಲಿಗೆ ಬಂದು ಎತ್ತಿದ ಕೂಡ್ಲೇ ಹೇಂಗೆ ಹೆರಟು ಮನಗೆ ಬಪ್ಪದು?! ನಿನಗೆ ತಂದು ಕೊಡ್ಲೆಡಿಗಾ?" ಕೇಳಿದವಿವು. "ಅರ್ಜೆಂಟಿದ್ದಾ ಕನ್ನಡ್ಕ? ಬಸ್ಸಿಲಿ ಬರೇಕಾ ಅಲ್ಲ ಕಾರಿಲಿ ಬರೇಕಾ ಕನ್ನಡ್ಕ ತೆಕ್ಕಂಡು?" ಹೇಳಿ ಕೇಳಿದೆ. ನಿನಗೆ ಹೇಂಗೆ ಬೇಕೋ ಹಾಂಗೆ ತೆಕ್ಕಂಡು ಬಾ...ಒಟ್ಟು ಎನಗೆ ಅರ್ಧ ಗಂಟೆಲಿ ಕನ್ನಡ್ಕ ಸಿಕ್ಕಿರೆ ಆತು" ಹೇಳಿ ಫೋನು ಮಡುಗಿದವು! ಕುಶಿಲಿ ಕೊಣುದು ಕುಪ್ಪಳಿಸುವ ಹಾಂಗಾತೆನಗೆ! ಸಿಕ್ಕಿದ್ದೇ ಛಾನ್ಸ್, ಈ ಸಂದರ್ಭವ ಸದುಪಯೋಗ ಪಡಿಸಿಕೊಳ್ಳೇಕು ಹೇಳಿ ಗ್ರೇಶಿಯೊಂಡು ಬೇಗ ಬೇಗ ಡ್ರೆಸ್ ಬದಲಿಸಿ ಕಾರಿಲಿ ಬಂದು ಕೂದು ಸ್ಟಾರ‍್ಟ್ ಮಾಡಿ, ಎ.ಸಿ. ಆನ್ ಮಾಡಿ, ಪೆನ್ ಡ್ರೈವಿಲಿಪ್ಪ ಹಳೇ ಕನ್ನಡ ಹಾಡುಗಳ ಹಾಕಿಯೋಂಡು ದೊಡ್ಡದಾಗಿ ವಾಲ್ಯುಮ್ ಕೊಟ್ಟು ನಿಧಾನಕ್ಕೆ ಬೇಕಪ್ಪಗ ನಿಧಾನ, ಸ್ಫೀಡ್ ಬೇಕಪ್ಪಗ ಸ್ಫೀಡಿಲಿ ಹೋಗಿ ಇವರ ಆಫೀಸಿಂಗೆತ್ತಿ ಇವರ ಕನ್ನಡ್ಕವ ಹಸ್ತಾಂತರಿಸಿದೆ. ವಾಪಸ್ಸು ಬಪ್ಪಾಗ ರಜ್ಜ ಲಾಂಗ್ ರೂಟ್ ಆಗಿಯೇ ಮನಗೆ ಬಂದೆ! ಒಂದರಿ ಒಬ್ಬನೇ ಡ್ರೈವ್ ಮಾಡಿಯೊಂಡು, ಎ.ಸಿ ಹಾಕಿಯೊಂಡು, ಎನಗಿಷ್ಟ ಇಪ್ಪ ಹಳೇ ಕನ್ನಡ ಚಿತ್ರಗೀತೆಗಳ ಪ್ಲೇ ಮಾಡಿಯೊಂಡು, ಅದರ ಮಾಧುರ್ಯವ ಅನುಭವಿಸುತ್ತಾ ಲಾಂಗ್ ಡ್ರೈವ್‍ನ ಮಜ ಅನುಭವಿಸೇಕು ಹೇಳಿ ಎಷ್ಟೋ ವರ್ಷಂದ ಆಸೆ ಇದ್ದತ್ತು! ಇಲ್ಲದ್ದರೆ ಕಾರಿಲಿ ಎಂಗೊಲ್ಲಾ ಸಂಸಾರ ಸಮೇತ ಒಟ್ಟಾಗಿ ಎಲ್ಲಿಗಾದ್ರೂ ಹೋಪಗ ಮಕ್ಕೊಗೆ ಹಿಂದಿ ಹಾಡುಗೊ ಬೇಕಾದರೆ, ಎನಗೆ ಹಳೇ ಕನ್ನಡ ಚಿತ್ರಗೀತೆಗೊ, ಇವಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಅಥವಾ ಭಕ್ತಿಗೀತೆ, ಒಬ್ಬಂಗೆ ಎ.ಸಿ ಬೇಕಾದರೆ, ಇನ್ನೊಂಬ್ಬಂಗೆ ಬೇಡ...ಅಕೇರಿಗೆ ಎಲ್ಲೋರಿಂಗೂ ಲಡಾಯಿಯಾಗಿ ಎನಗೆಂತ ಬೇಕೋ ಅದು ಸಿಕ್ಕಿಕೊಂಡಿತ್ತಿಲ್ಲೆ! ಹಾಂಗೆ ಏಕಾಂಗಿಯಾಗಿ ಕಾರಿಲಿ ಲಾಂಗ್ ಡ್ರೈವಿನ ಕೊದಿ ಹಿಡುದಾಯಿಕ್ಕು ಎನಗೆ! ಇರಾಲಿ ಅದೆಂತದೇ ಇರಲಿ ಅಂತೂ ಒಂದು ಗಂಟೆ ಏಕಾಂಗಿಯಾಗಿ ಕಾರಿಲಿ ಎನಗೆ ಬೇಕಾದಂಗೆ ಎಲ್ಲ ಸೆಟ್ ಮಾಡಿಯೊಂಡು, ಅನುಭವಿಸಿ ಮನೆಗೆ ಎತ್ತಿದೆ! 
ಮಗಳು ಶಾಲೆಂದ ಎತ್ತಿಯಪ್ಪದ್ದೇ ಹೇಳಿದೆ, " ಮಗಾ ನಿನ್ನ ಛಾನ್ಸ್ ಇಂದು, ಅಪ್ಪ ನೀನು ಪುಸ್ತಕ ಮರತು ಹೋದಕ್ಕೆ ಎಂತ ಹೇಳವು...ಎಂತಕೆ ಗೊಂತಿದ್ದಾ? ಅಪ್ಪ ಇಂದು ಆಫೀಸಿಂಗೆ ಹೋಪಗ ಕನ್ನಡ್ಕ ಮರದು ಹೋಗಿತ್ತವು! ಮತ್ತೆ ಆನು ಕಾರಿಲಿ ಹೋಗಿ ಕೊಟ್ಟು ಬಂದದು... ನಿನಗೆ ಸ್ಕೂಟರಿಲಿ, ಅಪ್ಪಂಗೆ ಕಾರಿಲಿ" ಹೇಳಿ ಚಪ್ಪಾಳೆ ತಟ್ಟಿ ಮಕ್ಕಳ ಹಾಂಗೆ ನೆಗೆ ಮಾಡಿದೆ. ಮಗಳು ಆಶ್ಚರ್ಯಲ್ಲಿ ಕೇಳಿತು, "ಅಪ್ಪ ಕನ್ನಡ್ಕ ಮರತು ಹೋಗಿತ್ತವಾ? ಒಂದು ದಿನ ಆದರೂ ಹಾಂಗೆ ಮರತು ಹೋದ್ದೇ ಇಲ್ಲೆನ್ನೆಮ್ಮಾ ಹೇಳಿ!" "ಅದೆಂತದೇ ಇರಾಲಿ ಮಗಾ ನಿನಗಂತೂ ಇಂದು ಬೈಗುಳ ಇಲ್ಲೆ ಹೇಳಿದೆ"

ಕಸ್ತಲಪ್ಪಗ ಇವು ಬಂದವು...ಮಗಳ ಹತ್ತರ ಇವ್ವು, ಇವರತ್ತರೆ ಮಗಳು ಇಬ್ಬರೂ ಪರಸ್ಪರ ಪುಸ್ತಕ, ಕನ್ನಡ್ಕದ ವಿಚಾರ ಮಾತಾಡಿಕೊಂಡಿದವಿಲ್ಲೆ! ಇರುಳು ಉಂಡೆಲ್ಲಾ ಆದ ಮತ್ತೆ ದಿನ ಇಡೀ ನಡದ್ದರ ಮೆಲುಕು ಹಾಕಿದೆ.. ಎಲ್ಲಾ ದಿನಪತ್ರಿಕೆಗಳ ದಿನಭವಿಷ್ಯ ಎನ್ನ ಅಣುಕಿಸಿದ ಹಾಂಗಾತು...! ಆಲೋಚನೆ ಮಾಡಿ ನೋಡಿಯಪ್ಪಗ ಎಲ್ಲಾ ದಿನಪತ್ರಿಕೆಗಳಲ್ಲಿ ಮುದ್ರಿತವಾದ ಎಂಗಳಿಬ್ಬರ ದಿನಭವಿಷ್ಯಂಗೊ ನಿಜವಾಗಿತ್ತು!!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು.

No comments:

Post a Comment