Friday, May 15, 2015

ಮರಯದ್ದೇ ಓದಿ...! -೨೦೧೫ ಜೂನ್ ತಿಂಗಳ ’ಹವ್ಯಕ ವಾರ್ತೆ’ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಮರಯದ್ದೇ ಓದಿ...!

ಮರವು ಆರಿಂಗಿಲ್ಲೆ ಹೇಳಿ ನೋಡುವಾ?! ಎಲ್ಲೋರಿಂಗೂ ಇಪ್ಪ ಕಾಮನ್ ಡಿಸೀಸ್ ಅದು! ಸಾಮಾನ್ಯವಾಗಿ ಅದು ಒಂದಲ್ಲಾ ಒಂದು ರೀತಿಲಿ ನಕ್ಷತ್ರಿಕನ ಹಾಂಗೆ ಕಾಡಿ ಅಕೇರಿಗೆ ತ್ರಿಶಂಕು ಸ್ಥಿತಿಗೆ ತಂದು ಮಡುಗುತ್ತು ಪರಿಸ್ಥಿತಿಯ! "ಮರದತ್ತು" ಅಥವಾ "ಮರದೇ ಹೋತು" ಹೇಳಿರೆ ನಂಬುವ್ವವ್ವು ನಂಬುತ್ತವು. ಇಲ್ಲದ್ದರೆ ಹೇಳಿದ್ದರ ನಂಬದ್ದೇ "ಮರದತ್ತು ಹೇಳಿ ಹೇಳುಲೆ ಇದ್ದನ್ನೆ ಕುಂಟು ನೆವ" ಹೇಳಿ ಡೈರೆಕ್ಟಾಗಿ ಅಥವಾ ಇನ್‍ಡೈರೆಕ್ಟಾಗಿ ಟಾಂಟು ಕೊಡುತ್ತವು! ಸಣ್ಣ ಮಕ್ಕಳಿಂದ ಹಿಡುದು ಪಾಪ ಮುದಿ ಪ್ರಾಯದವರ ಬೆನ್ನು ಕೂಡಾ ಬಿಟ್ಟಿದಿಲ್ಲೆ ಅದು! ’ಅಯ್ಯೋ ಮರದೇ ಹೋತು’ ಹೇಳಿ ಹೇಳುದರ ಸಾಮಾನ್ಯವಾಗಿ ಎಲ್ಲೋರು ದಿನಲ್ಲಿ ನಾಲ್ಕು ಸರ್ತಿ ಆದರೂ ಹೇಳುವ ಮಂತ್ರ! ಮಕ್ಕೊ ಎಲ್ಲಿಯಾದರೂ, "ಕಲ್ತದ್ದು ಮರದೇ ಹೋವುತ್ತು, ಪರೀಕ್ಷೆಗಪ್ಪಗ ನೆಂಪೇ ಒಳಿತ್ತಿಲ್ಲೆ, ಎಂತ ಮಾಡುದು" ಹೇಳಿ ಅಬ್ಬೆ ಅಪ್ಪನ ಹತ್ತರೆ ರಾಗ ಎಳದರೆ ಕೂಡ್ಲೆ ಅವಕ್ಕಿಬ್ರಿಂಗೂ ಕೋಪ ಬತ್ತು. "ಎಂತ ಇಷ್ಟು ಸಣ್ಣ ಪ್ರಾಯಲ್ಲಿ ಮರವದು? ಪ್ರಾಯ ಎಷ್ಟಾತು ನಿನಗೆ? ಅಜ್ಜ/ಅಜ್ಜಿಯಾದೆಯ ನೀನು?" ಹೇಳಿ ಕೇಳಿಕ್ಕಿ ಹೀಯಾಳಿಸಿ ಬಿಡ್ತವು! ಹಾಂಗೆ ಹೇಳುವವ್ವು ಎಷ್ಟು ನೆಂಪಿಲಿ ಮಡಿಕೊಳ್ತವು ಹೇಳಿ ಆ ದೇವರಿಂಗೆ ಮಾಂತ್ರ ಗೊಂತು. ಒಂದು ಸಣ್ಣ ಎರಡಂಕೆಯ ಕೂಡಿಸುವ, ಕಳವ, ಗುಣಾಕಾರ ಅಥವಾ ಭಾಗಾಕಾರ ಮಾಡುವ ಲೆಕ್ಕಕ್ಕೇ ತಲೆಕೆರೆದು ಕ್ಯಾಲುಕುಲೇಟರಿಂಗೆ ಶರಣಪ್ಪವ್ವೇ ಹೆಚ್ಚಿನ ಜೆನಂಗ! ಕಲ್ತ ಆ ’ಲೆಕ್ಕಶಾಸ್ತ್ರ’ ಮರವಿನ ವಶವಾಗಿರ‍್ತು!

     ಅದು ಬಿಡಿಯಪ್ಪಾ..., ಕೆಲವು ಸಲ ಎಂತಾವುತ್ತು ಹೇಳಿರೆ ದೊಡ್ಡ ದೊಡ್ಡ ಜೆಂಭರಗಳ ಹೇಳಿರೆ ಮದುವೆ, ಉಪನಯನ, ಮನೆ ಒಕ್ಕಲು, ವಿಶೇಷವಾದ ಹೋಮ ಪೂಜೆ ಮಾಡುವಾಗ ಆರಿಂಗೆಲ್ಲಾ ಹೇಳಿಕೆ ಹೇಳೇಕು ಹೇಳಿ ಮೆದುಳೇ ಬುಡ ಮೇಲಪ್ಪಾಂಗೆ ಆಲೋಚನೆ ಮಾಡಿ ಹೆಸರುಗಳ ಪಟ್ಟಿ ಮಾಡಿದ್ದರುದೇ ಕೆಲವೊಬ್ಬರ ಹೆಸರುಗಳ ಲಿಸ್ಟಿಲಿ ಬರವಲೆ ಮರತು ಹೋಗಿರ‍್ತು! ಮತ್ತೆ ಜೆಂಭರ ಎಲ್ಲಾ ಮುಗುದ ಮೇಲೆ ರಜ್ಜ ಸಮಯ ಕಳುದು ನಮ್ಮಲ್ಲಿ ನಡೆದ ಜೆಂಭರದ ಆಮಂತ್ರಣ ಸಿಕ್ಕದ್ದವರ ಎದುರೆದುರು ಕಂಡಪ್ಪಗ ನೆಂಪಿಂಗೆ ಬತ್ತು, "ಛೇ ಅವಕ್ಕೆ ಹೇಳುಲೆ ಬಿಟ್ಟು ಹೋಯಿದು, ಮರದೇ ಹೋಗಿತ್ತನ್ನೇ, ಈಗ ಕಾಂಬಗ ನೆಂಪಾಯೆಕ್ಕಾ" ಹೇಳಿ. ಹಾಂಗೆ ಅವ್ವು ಸಿಕ್ಕಿಯಪ್ಪಗ, "ನಿಂಗೊಗೆ ಹೇಳಿಕೆ ಹೇಳುಲೆ ಮರದೋತು" ಹೇಳಿ ಹೇಳುಲೆ ಗೊಂತಿದ್ದಾ? ಮರ್ಯಾದೆಯ ಪ್ರಶ್ನೆ! ಅದರ ಬದಲಾಗಿ, "ಛೇ ನಿಂಗೊಗೆ ಇನ್ವಿಟೇಶನ್ ಕೊಡ್ಲೆ ಬಿಟ್ಟೇ ಹೋತು...ಛೇ" ಹೇಳಿದರೆ ಒಂದು ರೀತಿಲಿ ಹೇಳಿದವ್ಕೂ, ಕೇಳಿಸಿಕೊಂಡವ್ಕೂ ಸಮಾಧಾನ! ಅಂಬಗ, "ಅಪ್ಪಪ್ಪಾ...ಹಾಂಗಾವುತ್ತು...ದೊಡ್ಡ ಕಾರ್ಯಕ್ರಮಂಗಳ ನಡಶುವ ತಲೆಬೆಶಿಲಿ ಹಾಂಗಪ್ಪದು ಸರ್ವೇ ಸಾಮಾನ್ಯ, ಎನಗುದೇ ಎಷ್ಟೋ ಸಲ ಹಾಂಗಾಯ್ದು, ತೊಂದರೆ ಇಲ್ಲೆ ಬಿಡಿ, ಒಟ್ಟಾರೆ ಕಾರ್ಯಕ್ರಮ ಲಾಯಕ್ಕಲ್ಲಿ ಆತನ್ನೆ, ಅದು ಮುಖ್ಯ" ಹೇಳಿ ಆಚ ಹೊಡೆಂದ ಉತ್ತರ ಬಂದಪ್ಪಗ ಸಮಾಧಾನ ಮಾಡಿಕೊಳ್ತವು ಇಬ್ಬರುದೇ! ಹೀಂಗೆ ಸಮಾಧಾನ ಪಟ್ಟುಕೊಂಬವವ್ವು ಕೆಲವು ಜೆನದ ಗುಂಪಾದರೆ ಇನ್ನೂ ಕೆಲವು ಟೈಪ್ ಜೆನಂಗಳ ಗುಂಪಿನ ಆಲೋಚನೆಯೇ ಬೇರೆ! "ಬೇಕು ಹೇಳಿಯೇ ಹೇಳಿಕೆ ಹೇಳಿದ್ದವಿಲ್ಲೆ, ಎಂತರ ಮರವದು ಅಷ್ಟುದೇ!? ಉಪಕಾರ ಬೇಕಪ್ಪಗ ಎಂಗಳ ಮರದ್ದವಿಲ್ಲೆ ಆಯಿಕ್ಕು, ಎಷ್ಟು ಅಹಂಕಾರ ಇರೇಕು ಅವಕ್ಕೆ, ಪಾಪ ಪುಣ್ಯ ಗ್ರೇಶಿ ಉಪಕಾರ ಮಾಡಿ ಅವರ ’ಮೇಲೆ’ ಮಡುಗಿದ್ದು ಹೆಚ್ಚಾತು. ಈಗ ಕೈಲಿ ಪೈಸೆ ಬೇಕಾಷ್ಟು ಓಡಾಡ್ತ ಇದ್ದು, ನಮ್ಮ ಪಾಪದವರ ಎಲ್ಲಿ ಕಾಣುತ್ತು, ಬುದ್ಧಿ ಕಲುಶೇಕವಕ್ಕೆ, ಎಲ್ಲಿಯಾದರೂ ಕಂಡರೆ ಮಾತಾಡ್ಸುದು ಹೋಗಲಿ, ಮೋರೆ ಕೂಡಾ ನೋಡ್ಲೇ ಆಗ" ಹೇಳಿ ಕಟುವಾದ ನಿರ್ಧಾರಕ್ಕೆ ಬಂದುಬಿಡ್ತವು. ಮತ್ತೆಲ್ಲಿಯಾದರೂ ಸಿಕ್ಕಿದರೂ, ಅವರ ಮಾತಾಡಿಸಲೂ ಅವಕಾಶ ಕೊಡದ್ದೇ ಕುಂಡೆ, ಮೋರೆ ತಿರುಗಿಸಿಯೊಂಡು, "ಹೂಂಹ್" ಹೇಳಿಯೊಂಡು ಸುಂಟರಗಾಳಿ ಸ್ಪೀಡಿಲಿ ಹೇಳಿಕೆ ಹೇಳದ್ದವರ ದಾಂಟಿಯೊಂಡು ಹೋಗಿ ಬಿಡ್ತವು. ಎಂತಕ್ಕಪ್ಪ ಹೀಂಗಾಡ್ತವು ಹೇಳಿ ಪೇಚಿಗೆ ಸಿಲುಕಿಸಿ ಬಿಡ್ತು ಅವರ ನಡೆ ನುಡಿಗೊ! ಸಿಕ್ಕಿದೋರತ್ತರೆಲ್ಲಾ ಹೇಳಿಕೆ ಹೇಳದ್ದರ ಡಂಗುರ ಸಾರಿ ಊರಿಡೀ ಪ್ರಚಾರ ಮಾಡಿಬಿಡ್ತವು! ಇರಾಲಿ ನಮಗೂ ಒಂದು ಕಾಲ ಬತ್ತು ಅವಕ್ಕೆ ಬುದ್ಧಿ ಕಲಶುಲೆ ಹೇಳಿ ಸಮಯಾವಕಾಶಕ್ಕೆ ಕಾದು ಅವರ ಮನೆಲೆಂತಾರು ಜೆಂಭರ ಆದರೆ ಹೇಳಿಕೆ ಹೇಳದ್ದೇ ಬಡ್ಡಿ ಸಮೇತ ಅಸಲು ತೀರಿಸಿಬಿಡ್ತವು! ಅಂಬಗ ಗೊಂತಾವುತ್ತು ಓಹೋ ಎಡೆಮರೆವಿಂದಾಗಿ ಅವಕ್ಕೆ ನಮ್ಮ ಜೆಂಭರಕ್ಕೆ ಹೇಳಿಕೆ ಹೇಳದ್ದಕ್ಕೆ ಅವ್ವು ಇಷ್ಟೆಲ್ಲಾ ಅವಾಂತರ ಆದ್ದು, ಈಗ ಟಿಟ್ ಫಾರ್ ಟ್ಯಾಟ್ ಮಾಡಿದ್ದವು ಹೇಳಿ! ಅಂತೂ ’ಮರವೇ’ ಒಂದು ಕ್ಷುಲ್ಲಕ ಕಾರಣ ಆಗಿ ಅವರ ಸಂಬಂಧವೇ ಹದಗೆಡುವಂತೆ ಮಾಡುವಷ್ಟು ಪವರ್‌ಪುಲ್ ಆಗಿಬಿಡ್ತು!
ಗೆಂಡ ಹೆಂಡತಿಗೊಕ್ಕೆ ಜೆಗಳ ಮಾಡುಲೆ ಟಾಪಿಕ್ ಬೇಕಾಷ್ಟು ಸಿಕ್ಕುತ್ತು! ಮರವು ಕೂಡಾ ಆ ಲಿಸ್ಟಿಲಿ ಸದಾ ಇರ‍್ತು! ಗೆಂಡ ಎಲ್ಲಿಯಾದರೂ ಆಫೀಸಿಲಿ ಕಂಡಾಬಟ್ಟೆ ಕೆಲಸ ಇದ್ದ ಕಾರಣಂದ ಮನಗೆ ತಡವಾಗಿ ಬಂದ ಹೇಳಿರೆ ಹೆಂಡತಿ ಆಸರಿಂಗೆ ಕೊಡುವ ಮೊದಾಲೇ ಪ್ರವಚನ ಶುರು ಮಾಡುತ್ತು, "ನಿಂಗೊಗೆಲ್ಲಾ ಎಂತಕೆ ಮದುವೆ ಮುಂಜಿ ಎಲ್ಲಾ? ದಿನದ ೨೪ ಗಂಟೆ ಕೆಲಸ ಕೆಲಸ ಹೇಳಿ ಮುಳುಗಿರ‍್ತಿ...ಎನ್ನ ಮದುವೆ ಆಯಿದಿ ಹೇಳಿ ನೆಂಪಿದ್ದಾ ನಿಂಗೊಗೆ? ಪಾಪ ಅದೊಂದೇ ಇರ‍್ತು ಮನೆಲಿ ಹೇಳಿ ನೆಂಪು ಒಂದರಿಯಾದರೂ ಬಂದದ್ದಿದ್ದಾ?!" ಹೇಳಿ ಎಲ್ಲಾ! ಅದು ಬಿಡಿ ಸಣ್ಣ ವಿಷಯ. ಎಲ್ಲಿಯಾದರೂ ವರ್ಷಕ್ಕೊಂದರಿ ಬಪ್ಪಂತಾ ಹುಟ್ಟಿದ ದಿನವ ಹೆಂಡತಿ ಮರತರೆ ದೊಡ್ಡ ವಿಷಯ ಆವುತ್ತಿಲ್ಲೆ. ಎಲ್ಲಿಯಾದರೂ ಅದರ ಗೆಂಡ ಮರತ ಹೇಳಿರೆ ಅವನ ಗತಿ ಗೋವಿಂದ! ಆನೆಂತ ಇಲ್ಲಿ ವಿವರಿಸುತ್ತಿಲ್ಲೆ...ನಿಂಗೊ ನಿಂಗಳೇ ಗೇಶಿಗೊಳ್ಳಿ ಎಂತೆಂತೆಲ್ಲಾ ಅಸ್ತ್ರವ ಉಪಯೋಗಿಸುವಿ ಪಾಪದ ಗೆಂಡನ ಮೇಲೆ ಅವ್ವು ಮರತದಕ್ಕೆ ಹೇಳಿ! ಇನ್ನು ಸೀರೆ, ಒಡವೆಗಳ ಗೆಂಡ ಆದವ ಮರೆಯದ್ದೇ ಸರ್‌ಪ್ರೈಸ್ ಆಗಿ ಅಂಬಗಂಬಗ ತಂದು ಹೆಂಡತಿಗೆ ಕೊಟ್ಟಿದಾ ಹೇಳಿರೆ ಬೀಸುವ ದೊಣ್ಣೆಂದ ಗೆಂಡ ತಪ್ಪಿಸಿಕೊಂಡಾಗೆ! ಅಲ್ಲದ್ದರೆ ಹುಟ್ಟಿದ ದಿನವ ಮರತ್ತದ್ದರ ಒಟ್ಟಿಂಗೆ ಬೇರೆಲ್ಲಾ ವಿಷಯಂಗೊಕ್ಕೂ ಮಂಗಳಾರತಿ ಮಾಡ್ಸಿಕೊಳ್ಳೇಕಾವುತ್ತು! ಅಂತೂ ಇಂತೂ ’ಮರವು’ ಹೇಳುತ್ತದು ಕೆಲವರಿಂಗೆ ವರವಾದರೆ ಹಲವರಿಂಗೆ ಶಾಪವಾಗಿ ಪರಿಣಮಿಸುತ್ತು!
     ಹೇಳಿದ ಹಾಂಗೆ ಮರವು ಆನು ಮಹಾ ದೋಸ್ತುಗೊ. "ಅಪ್ಪೋ, ಭಾನುವಾರ ಎನಗೆ ಹೇರ್ ಕಟ್ ಮಾಡ್ಸುಲೆ ನೆಂಪು ಮಾಡು, ಇಂತವರಿಂಗೆ ಹೊತ್ತಪ್ಪಗ ಕಾಲ್ ಮಾಡುಲೆ ನೆಂಪು ಮಾಡು, ನಾಳ್ತಿಂಗೆ ಫೋನು ಬಿಲ್ಲು ಕಟ್ಟುಲೆ ಕಡೇ ದಿನ, ನೆಂಪು ಮಾಡು, ಕಟ್ಟದ್ದರೆ ಫೈನ್ ಕಟ್ಟೇಕಾವುತ್ತು..., ಎನ್ನ ಆಫೀಸು ಕೆಲಸಂಗಳ ತಲೆಬೆಶಿಲಿ ನೆಂಪು ಒಳಿತ್ತಿಲ್ಲೆ. ನೆಂಪು ಮಾಡಾತಾ" ಹೇಳಿ ಹೇಳಿದ ಇವಕ್ಕೆ ಯೇವಾಗಲೂ ಮೂರು ನಾಮ ಹಾಕಿ ಎನಗೆ ಮಂಗಳಾರತಿ ಮಾಡಿಸಿಕೊಂಬದು ಕ್ರಮ! ಎನ್ನ ಫ್ರೆಂಡು ಕೆಲವೊಂದು ಸಲ ಕೆಲವು ವಿಷಯಂಗಳ ನೆಂಪು ಮಾಡುಲೆ ಬೇಕಾಗಿಯೇ ಪಾಪ ಕಾಲ್ ಮಾಡಿಯೋ, ಸಂದೇಶದ ಮಾಡಿಯೋ ತಿಳಿಸಿಕೊಂಡಿರ‍್ತು...ಜೊತೆಗೆ ಒಂದು ಸಣ್ಣ ಪ್ರೀತಿಯ ಟಾಂಟೂ ಕೊಡ್ತು, "ಅರಣೆ ಹಾಂಗೆ ಮರವ ಸ್ವಭಾವ ನಿನಗೆ ಹೇಳಿ ಎನಗೆ ಗೊಂತಿದ್ದು, ಹಾಂಗೆ ನೆಂಪು ಮಾಡಿದ್ದು ನಿನಗೆ ಪುಟ್ಟಾ" ಹೇಳಿ!

     ಒಂದು ದಿನ ತೊಂಭತ್ತು ವರುಷದ ಎನ್ನ ಅಜ್ಜಿ ಎಂಗಳಲ್ಲಿಗೆ ಬಂದಿತ್ತಿದ್ದವು. ಬಂದರೆ ಅವ್ವು ಸಾಮಾನ್ಯ ಎರಾಡು ತಿಂಗಳಿದ್ದೇ ಹೋಪದು...ಪ್ರತೀ ಸರ‍್ತಿ ಆ ಎರಾಡು ತಿಂಗಳುಗಳ ಲಾಯ್ಕಲ್ಲಿ ವಿನಿಯೋಗ ಮಾಡಿಕೊಂಬ ಅಭ್ಯಾಸ ಎಂಗಳದ್ದು. ಆನು ಸಣ್ಣಾದಿಪ್ಪಗ ಅವ್ವು ಹೇಳಿಕೊಂಡಿದ್ದ ಮಕ್ಕಳ ಕಥೆಗಳ ಎಲ್ಲಾ ಹೇಳ್ಸುದು ಎನ್ನ ಮಕ್ಕೊಗೆ ಕೇಳ್ಸುವ ನೆಪಲ್ಲಿ. ಮಕ್ಕಳ ಬದಲು ಆನು ಅಜ್ಜಿ ಹತ್ತರೆ ಕಥೆ ಹೇಳುಲೆ ಹೇಳಿರೆ "ಎಂತರ ಮಗಳೂ ಇಷ್ಟು ದೊಡ್ಡ ಆಯಿದೆ, ಇನ್ನೂ ಕಥೆ ಹೇಳೆಕ್ಕಾ ನಿನಗೆ?" ಹೇಳಿ ಒಂದರಿ ನಸು ಕೋಪಲ್ಲಿ, ಆಶ್ಚರ್ಯಲ್ಲಿ ಕೇಳುಗು. ಮತ್ತೆ ಅಜ್ಜಿಯೇ ಎನ್ನ ಮಕ್ಕಳೂ ಬಂದು ಕೂದ ಮತ್ತೆ ಕಾಗೆ ಗುಬ್ಬಕ್ಕನ ಕತೆ, ಏಡಿನ ಕುಂಜ್ಞಿ ಒಂದೇ ಕಾಡಿನ ದಾರಿಲಿ ಅಜ್ಜಿ ಮನೆಗೆ ಹೋಗಿ ವಾಪಾಸ್ಸು ಬಪ್ಪಾಗ ಹುಲಿ ಕೈಯಿಂದ ತಪ್ಪಿಸಿಕೊಂಬಲೆ ಡೋಲಿನ ಒಳ ಕೂದು ಅದರ ಉರುಳಿಸಿಕೊಂಡು ಬಂದು ಮನೆ ಸೇರಿದ ಕತೆ, ಪುಚ್ಚೆ ಕುಂಜ್ಞಿಗಳ ಕಥೆ, ರಾಕ್ಷಸನ ಕಥೆ ಎಲ್ಲಾ ಅಂದಿನ ಉತ್ಸಾಹಲ್ಲೇ ಹೇಳುಗು! ಕಥೆ ಹೇಳುವ ಶೈಲಿದೇ, ಕಥೆಯ ಸಾಲುಗೊ ಕೂಡಾ ಒಂದೂ ಆಚೀಚೆ ಆದ್ದೇ ಇಲ್ಲೆ! ಅಜ್ಜಿಯ ಬಾಯಿಂದ ಲೊಟ್ಟೆ ಕಥೆ ಆದರೂದೇ ಕೇಳುಲೆ ಲಾಯ್ಕಾಯಿಕ್ಕೊಂಡಿತ್ತು. ಒಳುದ ಬೇರೆ ಸಮಯಲ್ಲಿ ಅದೂ ಇದೂ ಮಾತಾಡುದು, ಅಜ್ಜಿಯ ಕುಶಾಲು ಮಾಡುದು ಎಲ್ಲಾ! ಅಜ್ಜಿಗೂ ಒಂದು ರೀತಿಲಿ ಮಜ..ಅವ್ವುದೇ ಪ್ರತಿಯೊಂದು ಕ್ಷಣವ ಎಂಗಳಷ್ಟು ಕುಶಿಲೇ ಅನುಭವಿಸುತ್ತಿದ್ದವು. ಒಂದು ಆಶ್ಚರ್ಯ ಹೇಳಿರೆ ಅವ್ವು ಕಲ್ತದೇ ಮೂರನೇ ಕ್ಲಾಸಿನವರೆಗಡ. ಅಂಬಗ ಶಾಲೆಲಿ ಕಲ್ತ ಪದ್ಯಂಗಳ ಈ ಪ್ರಾಯಲ್ಲೂ ಒಂದು ಗೆರೆ ಕೂಡಾ ಮಿಸ್ ಆಗದ್ದ ಹಾಂಗೆ ಹಾಡಿ ಎಂಗಳ ತೋರುಬೆರಳಿನ ಎಂಗೊಗೇ ಗೊಂತಿಲ್ಲದ ಹಾಂಗೆ ಮೂಗಿನ ಮೇಲೆ ಮಡುಗಿಸಿ, ಎಂಗಳ ಬಾಯಿಂದ, "ಅಜ್ಜೀ ನಿಂಗಳ ಮೆಮರಿ ಪವರಿಂಗೆ ಹ್ಯಾಟ್ಸ್ ಆಫ್" ಹೇಳಿ ಶಹಭಾಸ್‍ಗಿರಿ ಪಡಕೊಂಡಿತ್ತವು!(ನಮ್ಮಲ್ಲಿ ಹಲವರಿಂಗೆ ಹತ್ತನೇ ತರಗತಿವರೆಗೆ ಪ್ರತಿನಿತ್ಯ ಶಾಲೆಲಿ ಬಾಯಿಪಾಠ ಹೇಳಿಕೊಂಡಿದ್ದ ರಾಷ್ಟ್ರಗೀತೆಯೇ ಮರತು ಹೋಗಿರ‍್ತು!) ಯೇವ ಖಾಯಿಲೆಗೂ ಅಜ್ಜಿಯ ನಾಲಗೆಯ ಕೊಡಿಲಿ ಮದ್ದುಗೊ ಎವರ್ ರೆಡಿ! ಅಜ್ಜಿಯ ಪ್ರಿಸ್‍ಕ್ರಿಪ್ಶನ್‍ನ ಹಾಂಗೆ ತಕ್ಕಂಡರೆ ಟಪ್ಪ ಕಾಯಿಲೆಗೊ ಗುಣ ಅಪ್ಪಂತಾ ಮದ್ದುಗೊ ಆಗಿತ್ತಿದ್ದವು. "ಎಂತೋ ಒಂದು ಒಳ್ಳೆ ಮದ್ದಿದ್ದಪ್ಪಾ, ಆದರೆ ಈಗ ನೆಂಪಿಂಗೆ ಬತ್ತಿಲ್ಲೆ, ಮರತಿದು" ಹೇಳಿ ಅಜ್ಜಿ ಹೇಳುದರ ಒಂದರಿಯಾದರೂ ಕೇಳಿದ್ದಿಲ್ಲೆ ಆನು. ನವಗೋ ದಿನನಿತ್ಯ ದಿನಪತ್ರಿಕೆಗಳಲ್ಲಿ ಬಪ್ಪಂತಾ ಮದ್ದುಗಳ ಎಷ್ಟು ಭಕ್ತಿಲಿ ಓದಿ, ಎಲ್ಲಿಯಾದರೂ ಮರದರೇ ಹೇಳಿ ಕಟ್ ಮಾಡಿ ಸಂಗ್ರಹಿಸಿ ಮಡಿಗಿದ್ದರುದೇ ನೆಂಪಿಲಿ ಒಳಿವದು ಅಷ್ಟಕ್ಕಷ್ಟೇ! ಓದಿದ್ದು ನೆಂಪೂ ಒಳಿತ್ತಿಲ್ಲೆ, ಕಟ್ ಮಾಡಿ ಮಡುಗಿದ್ದರ ಮತ್ತೆ ತೆಗದು ಓದುಲೆ ಪುರುಸುತ್ತು ಅದರ ಮೊದಲೇ ಆವುತ್ತಿಲ್ಲೆ! ಅವಶ್ಯ ಇಪ್ಪಗ ಪುನ: ಕಟ್ ಮಾಡಿ ಮಡುಗಿದ್ದ ಪೇಪರಿನ ರೆಫರ್ ಮಾಡದ್ದರೆ ರೋಗವೊಂದು, ಮದ್ದೊಂದು ಆಗಿಹೋಕು! ಹಾಂಗಿತ್ತ ಕನ್‍ಫ್ಯೂಶನ್ ಆಗಿ ಹೋವುತ್ತು ಈ ಮರವಿಂದಾಗಿ. ಅಜ್ಜಿ ಇನ್ನೊಂದು ಮೆಮರಿ ಟೆಸ್ಟಿಲಿ ಕೂಡಾ ಪಾಸಾಗಿತ್ತವು ಎನ್ನ ಲೆಕ್ಕಲ್ಲಿ! ಎಂತಕೆ ಕೇಳಿ, ’ಮದ್ದುಗಳ ಎಲ್ಲಾ ಅಜ್ಜಿ ಆ ಕ್ಷಣಂಗೊಕ್ಕೆ ಬಾಯಿಗೆ ಬಂದದರ ಬಂಡಲ್ ಬಿಡುದಾ ಅಲ್ಲ ನಿಜವಾಗಿ ಅಜ್ಜಿಗೆ ಗೊಂತಿಪ್ಪ ಮದ್ದುಗಳಾ’ ಹೇಳಿ ಅಜ್ಜಿಯ ಟೆಸ್ಟ್ ಮಾಡುಲೆ ಬೇಕಾಗಿಯೇ ಸುಮಾರು ಸಲ ಅಂತೇ "ಅಜ್ಜಿ ಅದಕ್ಕೆಂತ ಮದ್ದು, ಇದಕ್ಕೆಂತ ಮದ್ದು" ಹೇಳಿ ಕೇಳಿ ನೋಡಿಯಪ್ಪಗ ಅಜ್ಜಿ ಒಂದು ಸಲ ಹೇಳಿದ್ದಕ್ಕೂ ಇನ್ನೊಂದು ಸಲ ಹೇಳಿದ್ದಕ್ಕೂ ಬ್ಯಾಲೆನ್ಸ್ ಶೀಟಿಗಿಂತ ಲಾಯ್ಕಲ್ಲಿ ಟ್ಯಾಲಿ ಆಯಿಕ್ಕೊಂಡಿದ್ದತ್ತು! "ಭಲೇ ಅಜ್ಜಿ! ನಿಂಗಳಂತ ಅಜ್ಜಿ ಇಲ್ಲೆ, ಎನ್ನಂತ ಪುಳ್ಳಿ ಇಲ್ಲೆ" ಹೇಳಿ ಚಿತ್ರಗೀತೆಯ ಸಾಲೊಂದರ ಬದಲಿಸಿ ಹಾಡಿ ಅಜ್ಜಿಯ ಕುಶಿ ಪಡಿಸಿದೆ. ಅಜ್ಜಿಯ ಕರಕ್ಕೊಂಡು ಹೋಗಿ ಮಂಚಲ್ಲಿ ಕೂರ‍್ಸಿ ಕೇಳಿದೆ, "ಅಜ್ಜಿ, ನಿಂಗೊಗೆ ಮರವದಕ್ಕೆಂತಾರು ಮದ್ದು ಗೊಂತಿದ್ದಾ?" ಹೇಳಿ.
"ಆರಿಂಗೆ ಒಪ್ಪಕ್ಕೋ ಮರವು? ಈಗಾಣವೆಲ್ಲಾ ಹಾಂಗೆ ಹೆತ್ತು ಹೊತ್ತವರೆಲ್ಲಾ ಮರದು ಕೂದಿರ‍್ತವು ಹಾಳಾದವ್ವು" ಹೇಳಿ ಈಗಾಣ ಪ್ರಪಂಚದ ಪರಿಸ್ಥಿತಿಯ ನೋಡಿ, ಕೇಳಿ, ಓದಿ ತಿಳುಕೊಂಡಿದ್ದ ಅಜ್ಜಿ ರಜ್ಜ ಆವೇಶಲ್ಲೇ ಹೇಳಿದವಾದರುದೇ ಎನ್ನ ತಲೆಯ ಮೇಗೆ ಒಂದು ಬಾಂಬು ಬಿದ್ದ ಹಾಂಗಾತು. ಆನು ಆರನ್ನುದೇ ಮರದು ಕೂದಿತ್ತಿಲ್ಲೆನ್ನೆಪ್ಪಾ ಹೇಳಿ ಗ್ರೇಶಿಕೊಂಡೆ. 
"ಅದು ಹಾಂಗಲ್ಲಜ್ಜಿ, ನಿಂಗೊ ಡಬ್ಬಲ್ ಮೀನಿಂಗ್ ಮಾಡಿಕೊಂಡುಬಿಟ್ಟಿದಿ...ಆನು ಕೇಳಿದ್ದೇ ಬೇರೆ, ನಿಂಗೊ ಹೇಳ್ತಾ ಇಪ್ಪದೇ ಬೇರೆ...! ಆನು ಈ ದಿನನಿತ್ಯಲ್ಲಿ ಕೆಲವು ವಿಷಯಂಗಳ ಮರವದಿದ್ದನ್ನೇ, ಅದರಿಂದ ಹೇಂಗೆ ಮುಕ್ತಿ ಪಡವದು, ಅದಕ್ಕೆಂತಾರೂ ಮದ್ದು ಗೊಂತಿದ್ದಾ ಹೇಳಿ ಕೇಳಿದಜ್ಜೀ..." ಹೇಳಿ ರಾಗ ಎಳಾದೆ.
"ಅಯ್ಯೋ ಅದಕ್ಕೆಂತ ಮದ್ದು ಎನಗೆ ಗೊಂತಿಲ್ಲೆನ್ನೆಪ್ಪಾ, ಆದರೆ ಗೆದ್ದೆ ಕರೆಲಿ ನಮ್ಮ ಜಾಲಿಲೆಲ್ಲಾ ಇಪ್ಪ ಉರಗೆಯ ಚಟ್ನಿ, ತಂಬುಳಿ ಹೇಳಿ ಅಂಬಗಂಬಗ ಮಾಡಿಕೊಂಡಿರ‍್ತೆನ್ನೆ ನೀನು, ಅದು ನೆಂಪು ಶಕ್ತಿಗೆ ಒಳ್ಳೆದು ಮಗಳೇ" ಹೇಳಿ ಪ್ರೀತಿಲಿ ಹೇಳಿದವು.
ತತ್ತೇರೆಕಿ ವಾರಲ್ಲಿ ಕಡಮ್ಮೆ ಹೇಳಿರೆ ಎರಡು ಸಲ ತಿಂತೆನ್ನಪ್ಪಾ ಅಜ್ಜಿ ಹೇಳಿದ್ದರಾ ಮತ್ತೆಂತಕೆ ಈ ನಮೂನೆಯ ಮರವು ಎನಗೆ?! ಹೇಳಿ ತಲೆ ಮೇಗೆ ಕೈ ಮಡುಗಿ ಐದು ನಿಮಿಷ ಹಾಂಗೆ ಕೂದೆ. ಮತ್ತಾತು ಮಾಡುವ ಕೆಲಸಂಗಳ ಮೇಲೆ ರಜ್ಜ ಗಮನ ಮಡುಗಿ, ಗಡಿಬಿಡಿ ಮಾಡಿಕೊಳ್ಳದ್ದೇ ರಜ್ಜ ಹೆಚ್ಚು ಸಮಯ ತೆಕ್ಕೊಂಡು ನಿಧಾನವಾಗಿ ಆಯಾಯ ಸಂದರ್ಭಂಗಳ ಮಾತ್ರ ಆ ಕ್ಷಣಕ್ಕೆ ತಲೆಲಿ ಮಡಿಕ್ಕೊಂಡು ಎಂತೆಂತ ಮಾಡೇಕು ಹೇಳಿ ಚೆನ್ನಾಗಿ ಆಲೋಚನೆ ಮಾಡಿ ಕೆಲಸ ಮಾಡುದೊಂದೇ ದಾರಿ...ಎನ್ನ ಮರವಿಂಗೆ ಯಾವ ಸಸ್ಯಂಗೊ, ಟಾನಿಕ್ಕುಗೊ, ಮಾತ್ರೆಗೊ ಬೇಡ ಹೇಳಿ ಮನಸ್ಸಿಲ್ಲೇ ಗೇಶಿಗೊಂಡು ಬೇರೆ ಟಾಪಿಕ್ ತೆಕ್ಕೊಂಡು ಅಜ್ಜಿಯ ಹತ್ತರೆ ಮಾತು ಮುಂದುವರೆಸಿದೆ!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು.

No comments:

Post a Comment