Saturday, February 28, 2015

ನಿದ್ದೆ ಬೇಡದ್ದವು ಆರಿದ್ದವು...?! -೨೭ ಒಕ್ಟೋಬರ್ ೨೦೧೨ರವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ



ನಿದ್ದೆ ಬೇಡದ್ದವು ಆರಿದ್ದವು...?!


ಒರಗುದು ಹೇಳಿರೆ ಆರಿಂಗೆ ಕುಶಿ ಇಲ್ಲೆ ಹೇಳಿ?! ನಿನಗೆ ದೋಸೆ ಇಷ್ಟವಾ, ಇಡ್ಲಿ ಇಷ್ಟವಾ, ಕಾಫಿ ಇಷ್ಟವಾ, ಚಾಯ ಇಷ್ಟವಾ ಹೇಳಿಯೆಲ್ಲಾ ಕೇಳುವ ಹಾಂಗೆ ಒರಕ್ಕು ಇಷ್ಟವಾ ಹೇಳಿ ಕೇಳುತ್ತ ಕ್ರಮ ಇಲ್ಲೆ. ಆದರೆ ನಿಂಗೊ ಎಲ್ಲಿಯಾರು ದಿನಪತ್ರಿಕೆ, ವಾರಪತ್ರಿಕೆಲೆಲ್ಲಾ ಸಿನೆಮಾ ಪುಟಲ್ಲಿ ಹೀರೋಯಿನ್ ಗಳ ಇಂಟರ್ ವ್ಯೂ ಓದಿದ್ದರೆ ಖಂಡಿತಾ ನೆಂಪಿಕ್ಕು. ಸಂದರ್ಶಕರು "ನಿಮ್ಮ ಫ್ರೀ ಟೈಂನಲ್ಲಿ ಏನು ಮಾಡ್ತೀರಿ?" ಹೇಳಿ ಕೇಳಿದವು ಹೇಳಿಯಾದರೆ, ಒಂದೆರಡು ಹವ್ಯಾಸಂಗಳ ಹೇಳಿಕ್ಕಿ, "ಟೈಂ ಸಿಕ್ಕಾಗೆಲ್ಲಾ ನಿದ್ರೆ ಮಾಡೋದು ಹೇಳಿದರೆ ನಂಗಿಷ್ಟ!" ಹೇಳಿ ಹೇಳ್ತವು! ದಿನಪತ್ರಿಕೆ, ವಾರಪತ್ರಿಕೆಲಿ ಮಾತ್ರ ಅಲ್ಲ, ಟಿ.ವಿ ಲಿದೇ ಇಂಟರ್ ವ್ಯೂ ಮಾಡುವಾಗಲೂ ಆನು ನೋಡಿದೆ, ಕೇಳಿದ್ದೆ! ಎಲ್ಲೋರೂ ಹಾಂಗಿಪ್ಪ ಪ್ರಶ್ನೆಗೆ ಔಟ್ ಆಫ್ ಟಾಪಿಕ್ ಉತ್ತರ ಹೇಳುತ್ತವಿಲ್ಲೆಪ್ಪಾ! ಕೆಲವೊಂದು ಒರಕ್ಕಿಷ್ಟಯಿಪ್ಪ ಹೀರೋಯಿನ್ ಗಳು ಮಾತ್ರ! ಅದೆಂತಕೋ ಹೀರೋಗಳ ಇಂಟರ್ ವ್ಯೂಲಿ ಹಾಂಗೆ ಹೇಳಿದ್ದರ ಆನೆಲ್ಲಿಯೂ ಓದಿದ ಹಾಂಗಿಲ್ಲೆ! ನೋಡಿದ್ದೂ ಇಲ್ಲೆ! ಅದು ಹೀರೋಯಿನ್ ಗೊಕ್ಕೆ ಮಾತ್ರ ಇಷ್ಟವಾ?! ಎಲ್ಲರಿಂಗೂ ಇಷ್ಟವೇ ಅಲ್ಲದಾ?! ಅದರಲ್ಲಿ ಇಷ್ಟ, ಕಷ್ಟ ಹೇಳಿ ಎಂತ ಇದ್ದು? ಅದು ಅನಿವಾರ್ಯ ಅಲ್ಲದಾ ಹೇಳೀ?  ಹಾಂಗೊಂದರಿ ಆರನ್ನಾರೂ ಸೀದಾ ಒರಕ್ಕಿಷ್ಟವಾ ಹೇಳಿ ಕೇಳಿರೆ, ಅವು ಗ್ರೇಶುಗು ಇವಕ್ಕೆಂತ ಸರಿ ಒರಕ್ಕಾಯಿದಿಲ್ಲೆಯಾ ಅಥವಾ ಒಂದು ಸುತ್ತು ಕಡಮ್ಮೆಯೋ ಹೇಳಿ!  ಹೊಡಿ ಮಕ್ಕೊ ಅಲ್ಲಿ ಬೇನೆ, ಇಲ್ಲಿ ಬೇನೆ, ಬಚ್ಚುತ್ತು ಹೇಳಿ ಎಲ್ಲಾ ಹೇಳಿರೆ ದೊಡ್ಡೋರು ಇಷ್ಟೇ ಹೇಳುಗು,"ಮದ್ದು ಗಿಟ್ಟಿ, ಕೈಕಾಲುಗಳ ಒತ್ತಿ ಕೊಡ್ತೆ ಮಗಾ, ಮತ್ತೆ ಲಾಯ್ಕಲ್ಲಿ ಒರಗಿ ಎದ್ದಪ್ಪಗ ಬೇನೆ, ಬಚ್ಚುದು ಎಲ್ಲಾ ಕಡಮ್ಮೆ ಆವುತ್ತು" ಹೇಳಿ. ಅವು ಹೇಳಿದ ಹಾಂಗೆ ಲಾಯ್ಕ ಒರಗಿ ಎದ್ದಪ್ಪಗ ಬೇನೆ, ಬಚ್ಚುದು ಎಲ್ಲಾ ಗುಡ್ಡೆ ಹತ್ತಿ ಹೋಗಿರುತ್ತು! ಹಾಂಗಾರೆ ಒರಕ್ಕು ಒಂದು ಔಷಧಿಯೇ ಸರಿ. ಅಪ್ಪು. ಅದೊಂದು ದೇಹಕ್ಕೆ, ಮನಸ್ಸಿಂಗೆ ಎರಡಕ್ಕೂ ಆರಾಮ ಕೊಡುವ ಒಂದು ವ್ಯಾಯಾಮದ ಹಾಂಗೆ! ವ್ಯಾಯಾಮದ ಹಾಂಗೆ ಎದ್ದು ಬಗ್ಗಿ ಮಾಡುವ ಕಷ್ಟ ಎಂತ ಕರ್ಮವೂ ಇಲ್ಲೆ. ಹಸೆ ಬಿಡಿಸಿ, ಮನುಗಿದರೆ, ಮುಗುದತ್ತು! ಕೆಲವೊಂದರಿ ಅಷ್ಟು ಕಷ್ಟ ಪಡೇಕಾದ್ದೂ ಇಲ್ಲೆ. ಕೂದಲ್ಲಿಗೇ ಆರಾಮಲ್ಲಿ ಒರಕ್ಕು ಬತ್ತು! ಆರಾರು ಒಂದು ನಮೂನೆ ಮಾತಾಡಿಕೊಂಡಿದ್ದರೆ, ವಿಚಿತ್ರವಾಗಿ ವರ್ತಿಸುತ್ತಾ ಇದ್ದವು ಹೇಳಿರೆ ಅವಂಗೆಲ್ಲಿಯೋ ರಜ್ಜ ಒರಕ್ಕು ಕಡಮ್ಮೆಯಾದಿಕ್ಕು ಹೇಳಿ ಹೇಳುತ್ತ ಕ್ರಮವೂ ಇದ್ದಲ್ಲದಾ?! ಅಪ್ಪ, ಅಮ್ಮ ಅವರವರ ಮಕ್ಕೊಗೆ ಏವಾಗಲೂ ಇರುಳು ಹೇಳುತ್ತ ಕ್ರಮ ಇದ್ದು," ಮಗಾ ಗಂಟೆ ೯ ಆತು, ಇನ್ನು ಒರಗು, ಬೇಗ ಒರಗಿ, ಬೇಗ ಏಳೇಕು ಹೇಳಿ ಎಲ್ಲಾ. ಆದರೆ ಈಗಾಣ ಮಕ್ಕಳೋ?! ಅವು ಎಡಿಗಾಷ್ಟು ಲೇಟಾಗಿ ಒರಗಿ, ಎಡಿಗಾಷ್ಟು ತಡವಾಗಿ ಏಳುತ್ತ ಕ್ರಮ.  ಅದು ಈಗಾಣ ಫ್ಯಾಶನ್ ಆಗಿಹೋಯಿದು! ರಜೆ ಇದ್ದರೆ ಕತೆ ಮುಗುದಾಂಗೆ! ಗಂಟೆ ಒಂಭತ್ತಾದರೂ ಏಳುವ ಆಲೋಚನೆಯೇ ಇಲ್ಲವೇ ಇಲ್ಲೆ. ಏಳಿಸುಲೆ ಹೆರಟರೆ ದಿನಿಗೇಳಿ....ದಿನಿಗೇಳಿ ದೊಂಡೆ ಪಸೆ ಆರಿಹೋವುತ್ತಷ್ಟೇ! ನಮ್ಮ ಮನೇಲಿ ಮಾತ್ರ ಹೀಂಗೋ ಹೇಳಿ ಗ್ರೇಶಿ ಬೇಜಾರು ಮಾಡಿಕೊಂಬದು ಸುಮ್ಮಗೆ!  ಎಲ್ಲಾ ಅಮ್ಮಂದಿರು ಸೇರಿ ಮಾತ್ನಾಡಿಯಪ್ಪಗ ಎಲ್ಲರ ಮನೆ ಮಕ್ಕಳ ಕತೆಯೂ ಅಷ್ಟೇ! ಎಲ್ಲರ ಮನೆ ದೋಸೆಲಿಯೂ ಒಟ್ಟೆಗಳೇ! ಎನ್ನ ಅಮ್ಮ ಎಂಗೊ ಕಾಲೇಜಿಂಗೆಲ್ಲಾ ಹೋಯಿಕೊಂಡಿಪ್ಪಗ ಮಕ್ಕೊಗೆ ಚಹ ಕೊಟ್ಟರೆ ರಜ ಎಚ್ಚರಲ್ಲಿದ್ದು ಹೆಚ್ಚು ಹೊತ್ತು ಕೂದು ಓದುಗು ಹೇಳಿ ಚಾಯ ಮಾಡಿ ಕೊಟ್ಟು ಅವರ ಕೆಲಸ ಮಾಡಿಕೊಂಡಿದ್ದರೆ, ಇತ್ಲಾಗಿ ಎಂಗಳ ಕತೆಯೇ ಬೇರೆ! ಅಮ್ಮ ಮಾಡಿ ಕೊಟ್ಟ ಬೆಶಿ ಬೆಶಿ ಚಾಯ ಕುಡುದು ಅಲ್ಲಿಗೆ ಒರಗಿಕೊಂಡಿತ್ತಿದೆಯ! ಆದರೆ ಈಗ ಅದೇ ಚಾಯ ಮಾಡಿ ಅಕಸ್ಮಾತ್ ನಿರ್ವಾಹ ಇಲ್ಲದ್ದೇ ಕುಡ್ದತ್ತು ಹೇಳಿ ಆದರೆ ಗತಿ ಗೋವಿಂದ! ಎಷ್ಟು ಹೊಡಚಿದರೂ ಒರಕ್ಕೇ ಬತ್ತಿಲ್ಲೆ! ಆಂದು ಅಮ್ಮ ಕೊಟ್ಟ ಆ ಚಾಯ ಸರಿಯಾಗಿ ಕೆಲಸ ಮಾಡಿದ್ದರೆ ಭಾರೀ ಒಳ್ಳೆದಾವುತ್ತಿತ್ತು! 
ಈ ಒರಕ್ಕು ಎಷ್ಟರ ಮಟ್ಟಿನ ಅಪಾಯ ತೈಂದು ಹೇಳಿ ಕಳುದ ವಾರ ವಿಜಯ ಕರ್ನಾಟಕ ಓದಿದ ಮತ್ತೆ ಗೊಂತಾತು! ಮದುವೆಯಾದ ಲಾಗಾಯ್ತು ಹೆಂಡತಿ ಗೆಂಡನ ಸುಖ ದು:ಖ ಒಂದನ್ನೂ ವಿಚಾರಿಸಿಕೊಳ್ಳದ್ದೇ ಅವ ಆಫೀಸಿಂದ ಬಪ್ಪಗಳೂ, ಆಫೀಸಿಂಗೆ ಹೋಪಾಗಲೂ ಅವನ ಅಸ್ತಿತ್ವವೇ ಇಲ್ಲೆ ಹೇಳುವ ಹಾಂಗೆ ಒರಗಿಕೊಂಡಿತ್ತಡ! ಅವ ಅವನಷ್ಟಕ್ಕೆ ಉದಿಯಪ್ಪಗ ಎದ್ದು ಆಫೀಸಿಂಗೆ ಹೋದ ಮತ್ತೆ ಇದು ಒರಕ್ಕಿಂದ ಎದ್ದುಕೊಂಡಿತ್ತಡ! ಹಾಂಗೆ ಅವಂಗೆ ಇದರ ಒರಕ್ಕಿನ ಕಂಡು ಬೊಡುದು ಹೋಗಿ ಡೈವೊರ್ಸ್ ಕೊಟ್ಟುಬಿಟ್ಟಡ! ಹಾಂಗೇ ಆಯ್ಯೇಕ್ಕದಕ್ಕೆ ಹೇಳಿ ಗ್ರೇಶಿಕೊಂಡಿತ್ತೆ. ಆದರೆ ಆ ಲೇಖನದ ಕೊನೆಯ ವಾಕ್ಯ ಹೇಳಿತ್ತು ಎಂತ ಹೇಳಿರೆ ಆ  ಹೆಂಡತಿಗೆ ತನ್ನ ತಪ್ಪಿನ ಅರಿವಾಗಿ ಮತ್ತೆ ಗೆಂಡ ಹೆಂಡತಿ ಒಂದಾದವಡ. ಪ್ರಾಯಶ್ಚಿತ್ತಕ್ಕೆ ಮಿಗಿಲಾದ ಶಿಕ್ಷೆ ಬೇರೆಂತ ಬೇಕು ಅಲ್ಲದಾ?! ಎಚ್ಚರಲ್ಲಿದ್ದೊಂಡು ಪಿರಿಪಿರಿ ಮಾಡುವಷ್ಟು ದೊಡ್ಡ ತಪ್ಪಲ್ಲ ಒರಗುದು! ಎಂತ ಹೇಳುತ್ತೀ?!
ಹುಟ್ಟಿದ ಎಲ್ಲಾ ಪ್ರಾಣಿ, ಪಕ್ಷಿ, ಮನುಪ್ಯರಿಂಗೆ ಒರಕ್ಕು ಬೇಕೇ ಬೇಕು. ಈ ಮನುಷ್ಯನ ಹೊರತಾಗಿ ಎಲ್ಲಾ ಜೀವಿಗೊಕ್ಕುದೇ ನಿಗದಿತ ಸಮಯಕ್ಕೆ ಸರಿಯಾಗಿ ಒರಗಿ ಏಳುತ್ತ ಕ್ರಮ ಇದ್ದು. ಉದಿಯಪ್ಪಗ ಹಕ್ಕಿಗೊ ಎಲ್ಲಾ ಎದ್ದು ಚಿಲಿಪಿಲಿ ಶಬ್ದ ಮಾಡಿಯೊಂಡು, ಲವಲವಿಕೆಲಿರುತ್ತವು. ಎಂಗಳೆಲ್ಲರ ಕತೆಯೇ ಬೇರೆ. ಕೆಲವೋರು ಇರುಳು ಎಂಟು ಗಂಟೆಗೆ ಒರಗಿದರೆ, ಇನ್ನೂ ಕೆಲವೋರು ಎಂಟೂವರೆ, ಒಂಭತ್ತು,ಒಂಭತ್ತೂವರೆ, ಹತ್ತು, ಹನ್ನೊಂದು.... ಹನ್ನೆರಡು....ಹೀಂಗೆಲ್ಲಾ. ಅದೇ ರೀತಿ ಉದಿಯಪ್ಪಗ ಏಳುವ ಸಮಯಲ್ಲಿ ಕೂಡಾ ಕಂಡಾಬಟ್ಟೆ ವ್ಯತ್ಯಾಸ ಇದ್ದು! ಎದ್ದ ಮತ್ತೆ, ಮತ್ತೆ ಪುನ: ಉದಾಸೀನ ಬಿಡ್ತಿಲ್ಲೆ. ಹಾಸಿಗೆಯಿಂದ ಎದ್ದು ಬಂದು ಖುರ್ಶಿಲಿ ಕೂದು, ಅಲಿದೇ ಒರಕ್ಕು ತೂಗುದು. ಮತ್ತೆ ರಜ ಹೊತ್ತು ಕಳುದು, ಕೆಲಸಂಗಳ ಗ್ರೇಶಿ, ಹರುದುಬಿದ್ದು ಹೇಂಗೆಲ್ಲಾ ಒಟ್ರಾಶಿ ಕೆಲಸ ಮಾಡಿ ಮುಗುಶುದಷ್ಟೇ! ಹೀಂಗೆಲ್ಲಾ ಮಾಡುವವು ಹಲವರಷ್ಟೇ ಅಪ್ಪಾ, ಕೆಲವೂರು ಸಮಯ ಪರಿಪಾಲನೆ ಮಾಡುವವೂ ಇದ್ದವು! ಹೀಂಗೆ ಸರೀ ಒರಕ್ಕಾಗದ್ದೆಯೋ, ಎಂತದ್ದೋ, ಕೆಲವು ಜನಂಗ ಆಫೀಸುಗಳಲೆಲ್ಲಾ ಅವರವರ ಖುರ್ಶಿಗಳಲ್ಲಿ ಕೂದು ಒರಕ್ಕು ತೂಗಿಕೊಂಡಿರುತ್ತವು, ಹಾಂಗೇ ಮನೇಲಿದೇ ಟಿ.ವಿ. ನೋಡಿಕೊಂಡೇ, ಸಿನೆಮಾ ತಿಯೇಟರುಗಳಲ್ಲಿ ಸಿನೆಮಾ ನೋಡಿಯೊಂಡೇ! ಮತ್ತೆ ಈಗೀಗಂತೂ ಕೆಮಿಗೆ ಹೆಡ್ ಫೋನ್ ಹಾಕ್ಯೋಂಡು ಕೆಮಿ ತಮಟೆ ಒಡವ ಹಾಂಗೆ ವಾಲ್ಯುಮಿಲಿ ಮಡುಗಿ ಮೊಬೈಲಿಲಿ ಪದ್ಯ ಕೇಳಿಯೊಂಡೇ ಅದರ ಕೆಮಿಯಿಂದ ತೆಗೆಯದ್ದೇ, ಆಫ್ ಕೂಡಾ ಮಾಡದ್ದೇ  ಒರಗಿಕೊಂಡಿರುತ್ತವು! ಹೀಂಗೆಲ್ಲಾ ಒರಗುವ ಕ್ರಮ ಇಪ್ಪವರ ಮೆಲ್ಲ ಹಂದಿಸಿ ಕೇಳಿ ನೋಡಿ, "ಎಂತ ಒರಕ್ಕು ಬಂದಿತ್ತಾ ಹೇಳಿ?" ಸುಲಭಲ್ಲೆಲ್ಲಾ ಒಪ್ಪಿಕೊಳ್ಳವು ಒರಕ್ಕು ಬಂದಿತ್ತು ಹೇಳಿ! " ಎಂತದನ್ನೋ ಆಲೋಚನೆ ಮಾಡಿಯೊಂಡಿತ್ತೆ, ಹಾಂಗೆ ರಜ ಕಣ್ಣು ಅಡ್ಡ ಹೋದ್ದಷ್ಟೇ ಹೇಳಿ ಹೇಳುತ್ತವು! ’ಒರಗುದು’, ’ಕಣ್ಣು ಅಡ್ಡ ಹೋಪದು’ ಎರಡರ ಅರ್ಥ ಒಂದೇ ಆದ ಕಾರಣ ಅವು, ಅವು ಮಾಡಿದ ಘನಕಾರ್ಯವ ಒಪ್ಪಿಕೊಂಡ ಹಾಂಗೆಯೇ! ಎಂತಾರೂ ಈ ಒರಕ್ಕು ಕಡಮ್ಮೆಯಾದರೂ, ಹೆಚ್ಚಾದರೂ, ಕಷ್ಟ ಕಷ್ಟವೇ.
ಕೆಲವೊರು ಹೇಳುತ್ತ ಕ್ರಮ ಇದ್ದು ಮಧ್ಯಾಹ್ನ ಉಂಡಿಕ್ಕಿ ರಜ ಒರಗಿದರೆ ಒಳ್ಳೆದು ಹೇಳಿ. ಇರುಳೋ, ಹಗಲೋ, ಒಂದು ರಜವೋ, ರಜ ಹೆಚ್ಚೋ ಒರಗಿದರೆ ಮೋರೆ ನೋಡುವಾಗಲೇ ಗೊಂತಾವುತ್ತು! ಅವು, ಇವು ಎಲ್ಲಾ ಕೇಳುಲೆ ಶುರು ಮಾಡ್ತವು," ಎಂಥ ಕಣ್ಣು ಬೀಗಿದ್ದು ಹೇಳಿ! ಅಂಬಗ ಇಪ್ಪದು ಎರಡೇ ಉತ್ತರಂಗೊ. "ರಜ ಒರಕ್ಕು ಹೆಚ್ಚಾಗಿ ಆದಿಕ್ಕು" ಅಥವಾ "ರಜ ಒರಕ್ಕು ಕಡಮ್ಮೆಯಾಗಿ ಆದಿಕ್ಕು" ಹೇಳಿ! ಇನ್ನೂ ಕೆಲವು ಜನಂಗ ಹೇಳುತ್ತವು, ಒರಗಿದ ಆ ಒರಕ್ಕಿದ್ದಲ್ಲದಾ ಅದು ನಿರಂತರವಾಗಿದ್ದರೆ ಮಾತ್ರ ಅದು ಸರಿಯಾದ ಪೂರ್ಣ ಪ್ರಮಾಣದ ಒರಕ್ಕಡ! ಅಂಬಗಂಬಗ ಎಚ್ಚರಿಕೆ ಆಯಿಕೊಂಡಿದ್ದರೆ ಅದು ಒರಕ್ಕೇ ಅಲ್ಲಡ! ಹಾಂಗೆ ಒರಕ್ಕಾದವೆಲ್ಲಾ ಹೇಳುದರ ನಿಂಗೊಲ್ಲಾ ಕೇಳಿಕ್ಕು, " ಒರಕ್ಕೇ ಸರಿ ಆಯಿದಿಲ್ಲೆ ಮಾರಾಯ. ಅಂಬಗಂಬಗ ಎಚ್ಚರಿಕೆ ಆಯಿಕೊಂಡಿದ್ದತ್ತು, ಅರೆ ಒರಕ್ಕಾದಷ್ಟೇ ಹೇಳಿ! ಅವು ಹೇಳುದೂ ಸರಿಯೇ, ನಮಗೂ ಹಾಂಗೆ ಆಯಿದಲ್ಲದಾ ಕೆಲವೊಂದರಿ! ಹವಾಗುಣಕ್ಕೆ ತಕ್ಕ ಹಾಂಗೆ ನಮ್ಮ ಒರಕ್ಕಿಲಿ ಕೂಡಾ ಬದಲಾವಣೆ ಅಪ್ಪದು ಒಂದು ವಿಶೇಷವೇ! ಛಳಿಗಾಲಲ್ಲಿ ಬೆಶ್ಚಂಗೆ ಹೊದದು ಮನುಗಿದರೆ ಒರಕ್ಕಿನ ಕೈಯಿಂದ ತಪ್ಪಿಸಿಕೊಂಬದು ರಜ ಕಷ್ಟವೇ! ಉದಿಯಾದರೂ ಏಳುಲೆ ಮನಸ್ಸು ಬತ್ತಿಲ್ಲೆ! ಮಳೆಗಾಲದ ಕತೆಯೂ ಇದುವೇ! ಇನ್ನು ಶೆಕೆಗಾಲಲ್ಲಿ ಒರಕ್ಕಿಗೆ ಭಂಗ ಆವುತ್ತಿಲ್ಲೆ ಕರೆಂಟ್ ಸಹಾಯಂದ ಫ್ಯಾನ್ ಅಥವಾ ಎ.ಸಿ. ಅವುಗಳ ಕೆಲಸ ಮಾಡಿಯೊಂಡಿದ್ದರೆ! ಅವೆಲ್ಲಾ ಇಲ್ಲೆ ಹೇಳಿಯಾದರೆ ಒರಕ್ಕಿಲಿ ಖಂಡಿತಾ ರಿಯಾಯಿತಿ ಸಿಕ್ಕಿದ ಹಾಂಗೆ! ಮತ್ತಿನ್ನೊಂದು ಎಂತ ಹೇಳಿರೆ ಆರಾರು ನಮ್ಮ ಮನೆಗೆ ಆತ್ಮೀಯರು, ಅತೀ ಹತ್ರಾಣವು ಬಂದಿಪ್ಪಾಗ ಇರುಳಿಡೀ ಮಾತಾಡಿಕೊಂಡಿದ್ದರೂ ಅವರ ಒರಕ್ಕು ನಮ್ಮ ಒರಕ್ಕು ಎರಡೂ ಹತ್ತರೆ ಬಂದು ಉಪದ್ರ ಕೊಡ್ತಿಲ್ಲೆಪ್ಪಾ! ಅದರ ಪರಿಣಾಮ ಗೊಂತಪ್ಪದು ಅವ್ವು ವಾಪಾಸು ಹೋದ ಮತ್ತೆಯೇ! 
ಮನುಷ್ಯಂಗೆ ದಿನಲ್ಲಿ ಬರೀ ನಾಲ್ಕು ಗಂಟೆ ಒರಕ್ಕು ಸಾಕು ಹೇಳಿ ಕೆಲವು ಜನಂಗೊ ಹೇಳುತ್ತರೆ, ಅದನ್ನೇ ಐದು, ಆರು, ಏಳು, ಎಂಟು ಗಂಟೆಗಳವರೆಗೆ ಎಳವವೂ ಇದ್ದವು! ಕೆಲವು ಜನ ವಾರಲ್ಲಿ ಒಂದೇ ದಿನ ರಜೆ ಇಪ್ಪದು ಹೇಳಿ ಇಡೀ ದಿನ ಒರಗುವವೂ ಇದ್ದವು! ಒರಕ್ಕಿನ ಬಗ್ಗೆ ಆರು ಎಷ್ಟು ಒಳ್ಳೆ ನಮೂನೆಯ ಪ್ರವಚನ ಮಾಡಿದರೂ ಅಷ್ಟೇ, ಕೇಳಿದರೂ ಅಷ್ಟೇ! ’ಆ’ ಕೆಮಿಲಿ ಕೇಳಿಕ್ಕಿ, ’ಈ’ ಕೆಮಿಲಿ ಬಿಡುದಾತಷ್ಟೇ! ಒರಕ್ಕಿನ ಬಗ್ಗೆ ಭಾಷಣವ ಕೇಳಿದವ್ವು ಪಾಲಿಸದ್ರೂ ಸರಿ, ಇನ್ನೂಬ್ಬಂಗೆ ಉಪದೇಶ ಮಾಡುಲೆ ಆದರೂ ಒಂದಲ್ಲಾ ಒಂದು ದಿನ ಉಪಕಾರಕ್ಕೆ ಬತ್ತು! ಕೇಳಿ ತಿಳುದ ವಿಚಾರವ ಹೇಳುಲೆ ಎಂತಾಯೇಕು?! ಹೇಳಿದರೆ ಕೇಳುವವಕ್ಕೂ ಕೊಶಿ ಆವುತ್ತು! ಹೇಳಿದವಂಗೂ ತನಗೆ ವಿಷಯ ಗೊಂತಿತ್ತನ್ನೇ ಹೇಳಿ ಸಮಾಧಾನ! ಹಾಂಗೇ ಟೈಂ ಪಾಸ್ ಆದಾಂಗೂ ಆವುತ್ತು! 
ಎಂತದ್ದೇ ಆಗಲಿ ಆರು ಎಂತ ಹೇಳಿದರೂ ತಲೆಬೆಶಿ ಮಾಡಿಕೊಂಬದು ಬೇಡ. ಅವ್ವವು, ಅವಕವಕ್ಕೆ ಬೇಕಾದಾಂಗೆ ಬೇಕುಬೇಕಾದ ಸಮಯಕ್ಕೆ ಬೇಕುಬೇಕಾದಲ್ಲಿ, ಒರಗಿ ಎದ್ದುಕೊಂಡರಷ್ಟೇ ಸಮಾಧಾನ, ಸಂತೃಪ್ತಿ ಎಲ್ಲಾ! ಇದರ ಓದಿ ನಿಂಗೊಗೆಲ್ಲಾ ಆವಳಿಕೆ ಬಂತಾಯಿಕ್ಕಲ್ಲದಾ?!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು


Friday, February 27, 2015

ದೂರದ ಬೆಟ್ಟ ನುಣ್ಣಗೆ...! - ಜೂನ್ ೨೦೧೩ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ

ದೂರದ ಬೆಟ್ಟ ನುಣ್ಣಗೆ?!


ಪೇಟೆಲಿಪ್ಪವಕ್ಕೆ ಎಂತ ಕೆಲಸಾ, ಹೇಳಿ,ಕೆಲವು ಜನಂಗೊ ಹೇಳುದರ ನಿಂಗೊಲ್ಲಾ ನೋಡಿಪ್ಪಿ,ಕೇಳಿಪ್ಪಿ,ನಿಂಗಳ ಪೈಕಿಲಿದೇ ಆರಾದರೊಬ್ಬ ಹಾಂಗೆ ಹೇಳಿದವಿಕ್ಕು!ಇಷ್ಟರವರೆಗೆ ಹೇಳದ್ದರೆ ಒಂದು ದಿನ ಹೇಳುಗು!ಪೇಟೆಲಿಪ್ಪೋರೆಲ್ಲಾ ಸುಖಲಿದ್ದವು,ಸುತ್ತಾಡಿಯೊಂಡಿರುತ್ತವು,ಆರಾಮಲ್ಲಿ ಕುರ್ಚಿ ಬೆಶಿ ಮಾಡಿಕೊಂಡು,ಮನುಗಿಯೊಂಡು,ಟಿ.ವಿ ನೋಡಿಯೊಂಡೇ ಇಪ್ಪದು ಹೇಳಿ ಕೆಲವರ ಲೆಕ್ಕಾಚಾರ. ಅಲ್ಲಾ- ಹಳ್ಳಿಲಾಗಲೀ, ಪೇಟೆಲಾಗಲೀ ಕೆಲಸ ಇಲ್ಲೆ, ಅಲ್ಲಿ ಸುಖ, ಇಲ್ಲಿ ಕಷ್ಟ ಹೇಳಿ ಸಲೀಸಾಗಿ ಹೇಳುಲೆ ಖಂಡಿತಾ ಸಾಧ್ಯವೇ ಇಲ್ಲೆ,ರಜ ಆಲೋಚನೆ ಮಾಡಿದರೆ!ಕೆಲಸ ಎಲ್ಲಿ ಮಾಡಿದರೂದೇ ಮುಗಿಯದ್ದಷ್ಟಿದ್ದು.ಮಾಡದ್ದರೆ ಎಲ್ಲಿದೇ ಇಲ್ಲೆ ಅಷ್ಟೇ!ವಸ್ತ್ರ, ಪಾತ್ರಂಗಳ ತೊಳವದು,ಮನೆ ಉಡುಗಿ ಉದ್ದುದು,ಅಡಿಗೆ ಮಾಡಿ ತಿಂಬದು,ಮಕ್ಕಳ ಚಾಕರಿ,ಜಾಗೆ ವ್ಯವಸ್ಥೆ ಎಲ್ಲಾ ಇದ್ದು ಹೇಳಿಯಾದರೆ ನೆಟ್ಟಿಕ್ಕಾಯಿ ಬೆಳಕೊಂಬದು,ಹಪ್ಪಳ ಸಂಡಗೆ ಮಾಡುದು,ಹೆಮ್ಮಕ್ಕೊ ಹೆರ ಕೆಲಸಕ್ಕೆ ಹೋಗಿ ದುಡಿವದು ಎಲ್ಲಾ ಹಳ್ಳಿಲೂ ಇದ್ದು,ಪೇಟೆಲಿದೇ ಇದ್ದದ್ದೇ.ಎರಡೂ ಕಡೆಗಳಲ್ಲಿದೇ ಸಾಕ್ಷಾತ್ ಎರಡು ಕೈಗಳಲ್ಲೇ  ಕೆಲಸಂಗಳೆಲ್ಲಾ ಮಾಡೇಕು!ಎಂತ ಪೇಟೆಲಿಪ್ಪೋರ ಹತ್ತರೆ ಮ್ಯಾಜಿಕ್ ಸ್ಟಿಕ್ ಇದ್ದಾ ಅಥವಾ ಅಲ್ಲಾವುದ್ದೀನ್ ಲ್ಯಾಂಪಿದ್ದಾ ಕೆಲಸಂಗೊ ಎಲ್ಲಾ ತನ್ನಿಂದ ತಾನೇ ಅಪ್ಪಲೆ!?ಹಳ್ಳಿಯಾಗಲೀ,ಢಿಲ್ಲಿಯಾಗಲೀ ಅವಕ್ಕವಕ್ಕೆ ಗೊಂತು ಅವಕ್ಕೆ ಎಷ್ಟು,ಎಂತೆಲ್ಲಾ ಕೆಲಸಂಗೊ ಇರುತ್ತು ಹೇಳಿ!ಅದರೆಲ್ಲಾ ಇನ್ನೊಬ್ಬ ಅಳದು ತೂಗಿ ಅವು ಸುಖಲ್ಲಿದ್ದವು,ಎಂಗೊ ಕಷ್ಟಲ್ಲಿದ್ದೆಯ ಹೇಳುವ ಹಾಂಗೇ ಇಲ್ಲೆ ಎನ್ನ ಪ್ರಕಾರ.ಇನ್ನು ಆ ಮನೆಯ ಹೆಮ್ಮಕ್ಕೊ ಕೆಲಸಕ್ಕೆ ಹೋವುತ್ತವಾದರೆ ಕತೆ ಬೇಡ,ಒಂದು ರಜ ಪುರುಸೊತ್ತು ಸಿಕ್ಕಿದರೆ ಪುಣ್ಯ.ಮನೆ ಆಫೀಸು ಹೇಳಿ ದುಡುದು ದುಡುದು ಬೊಡುದು ಹೋಗಿರುತ್ತು.ಹಾಂಗೆ ಅವರ ಕೈಹಿಡುದ್ದವಕ್ಕೆ ಕೂಡಾ!ಮಕ್ಕೊಗುದೇ!ಹಾಂಗೆ ಎಲ್ಲಿಯಾರೂ ಎರಡು ದಿನ ರಜೆ ಸಿಕ್ಕಿತ್ತು ಹೇಳಿಯಾದರೆ ಅಂಬಗಳೂ ಉದಿಯಂದ ಕಸ್ತಲೆವರೆಗೆ ಕೆಲಸ ಇರುತ್ತು.ಇದರೆಲ್ಲಾ ಹೇಂಗಪ್ಪಾ ಹಳ್ಳಿಲ್ಲಿಪ್ಪವ್ಕೆ ಹೇಳುದು ಹೇಳಿ ಪೇಟೆಯವರ ತಲೆಬೆಶಿ!ಅವರ ವಾದವೇ ಅವಕ್ಕೆ!ಇವರ ವಾದವೇ ಇವಕ್ಕೆ!ಈ ಕೆಲಸಂಗಳೆಲ್ಲಾ ಮುಗುಶಿ ರಜ ವಾಕಿಂಗ್ ಹೋದ ಶುದ್ದಿಯೋ,ಇಲ್ಲಾ ಒಂದೆರಡು ದಿನ ಎಲ್ಲಿಯಾದರೂ ಸುತ್ತಾಡಿಕೊಂಡು ಬಂದ ಶುದ್ದಿ ಹಳ್ಳಿಯವರ ಕೆಮಿಗೆ ಬಿದ್ದತ್ತು ಹೇಳಿಯಾದರೆ ಪೇಟೆಲಿಪ್ಪವು ಕೆಲಸ ಇಲ್ಲದ್ದೇ ತಿರುಗಾಡುಲೆ ಹೋದದ್ದು ಹೇಳಿಯೇ ಲೆಕ್ಕ!ಪೇಟೆಲಿ ಒಂದು ಕಡೆಂದ ಇನ್ನೊಂದು ಕಡೆಗೆ ಹೋಗಿ ಬಪ್ಪದು ಹೇಳಿದರೂ ಒಂದು ದೊಡ್ಡ ಕೆಲಸವೇ!ಒಂದೊಂದು ಒಂದೊಂದು ದಿಕ್ಕಿಲಿರುತ್ತು!ಒಂದು ಕಡೆಂದ ಇನ್ನೊಂದು ಕಡೆಗೆ ಎತ್ತಿಯಪ್ಪಗ ಎಷ್ಟೋ ಹೊತ್ತು ಬೇಕಾವುತ್ತು.ಮತ್ತೆ ವಾಪಸ್ಸು ಬಪ್ಪಲೆ ಮತ್ತೊಂದಷ್ಟು ಹೊತ್ತು!ಹಾಂಗೆಲ್ಲಾ ತಿರುಗಾಡಿ ಕೆಲಸ ಮುಗುಶಿ ಬಂದಪ್ಪಗ ಆರಿಂಗೆ ಬೇಕು ಈ ಸಿಟಿ ಜೀವನ,ಧೂಳು,ಹೊಗೆ,ಕಸ,ಕೊಳಕ್ಕು ಗಾಳಿ ಇದರ ಎಡೆಲಿ ಹೇಳಿ ಅನ್ನಿಸಿಬಿಡ್ತು.ಹಳ್ಳಿಲಿಪ್ಪೋರು ಎಂತಾರೂ ಕೆಲಸ ಆಯೇಕು ಹೇಳಿದರೆ ಒಂದೂ ಕಷ್ಟವ ಹೇಳದ್ದೇ ಮಾಡಿಕೊಡುತ್ತ ಸಹೃದಯಿಗೊ ಪೇಟೆವು.ಹಾಂ ಹೇಳಿದ ಹಾಂಗೆ ಪೇಟೆಲಿ ಮನೇಲಿಪ್ಪ ಹೆಮ್ಮಕ್ಕೊಗುದೇ ಕೆಲಸಂಗಳ ರಾಶಿ ಇರುತ್ತು.ಎಲ್ಲಿಯೋ ಕೆಲವು ಮನೆಗಳಲ್ಲಿ ಕೆಲಸಕ್ಕೆ ಜನ ಮಡುಗಿಕೊಂಡವಕ್ಕೆ ರಜ ಪುರುಸೊತ್ತಿರುತ್ತೋ ಎಂತೋ,ಅಷ್ಟೇ.ಈ ಹಳ್ಳಿಲಿಪ್ಪೋರ ಹಾಂಗೆ ತೋಟದ ಕೆಲಸ,ಹಾಲು ಕರವ ಕೆಲಸ ಮಾಂತ್ರ ಇರುತ್ತಿಲ್ಲೆ ಹೇಳಿ ಅಷ್ಟೇ!ಅದರನ್ನೇ ಹಳ್ಳಿರಿಪ್ಪೋರು ಹೇಳುದು!ಆದ ಕಾರಣ ಪೇಟೆಲಿಪ್ಪವು ಅವು ಹಾಂಗೆ ಹೇಳುತ್ತವು ಹೇಳಿ ಅಪಾರ್ಥ ಗ್ರೇಶೋದು ಬೇಡ,ತಲೆಕೆಡಿಶಿಕೊಂಬದೂ ಬೇಡ.ಪಾಪ ಅವಕ್ಕುದೇ ಗೊಂತಿದ್ದು ಪೇಟೆಲಿಪ್ಪೋರಿಂಗೆ ಕೆಲಸ ಇರುತ್ತು ಹೇಳಿ.ಹೇಳುದೊಂದು ಅವರ ಕ್ರಮ ಅಷ್ಟೇ....!ಹಾಂಗೆ ಈಗ ಪೇಟೆಲಿಪ್ಪೋರುದೇ ಹಳ್ಳಿಲಿಪ್ಪೋರ ಮೇಲೆ ಕಣ್ಣು ಹಾಕುತ್ತವಿಲ್ಲೆಯಾ?!"ಅವಕ್ಕೆಂತ ನಮ್ಮ ಹಾಂಗೆ ಎಲ್ಲದಕ್ಕು ಪೈಸೆ ಕೊಟ್ಟು ತರೇಕಾದ್ದಿಲ್ಲೆ,ನೆಟ್ಟಿಕ್ಕಾಯಿ ಎಲ್ಲಾ ಬೆಳೆತ್ತು,ಬೇಕಾದ್ದೆಲ್ಲಾ ಆವುತ್ತು ತೋಟಲ್ಲಿ"ಹೇಳಿ!ಅಡಕ್ಕೆ,ಗೆಣಮೆಣಸಿಂಗೆಲ್ಲಾ ಚಿನ್ನದಂತ ರೇಟಾಯಿದು,ನಮ್ಮ ಹಾಂಗೋ!ನಾವಿಲ್ಲಿ ಪೇಟೆಲಿ ಕೂದು ಪ್ರತಿಯೊಂದಕ್ಕು ಪೈಸೆ ಕೊಟ್ಟು ಮುಗುಶುದಷ್ಟೇ,ನೀರಿಂಗೆ,ಗಾಳಿಗೆ,ಬೆಳಕಿಂಗೆ,ಕೂದ್ದಕ್ಕೆ, ನಿಂತದ್ದಕ್ಕೆ ಎಲ್ಲಾ!ಹಳ್ಳಿಯವಕ್ಕೆ ಇದರ ಎಲ್ಲಾ ಚಿಂತೆ ಇದ್ದಾ!"ಹೇಳಿಯೆಲ್ಲಾ!?ನೆಟ್ಟಿಕ್ಕಾಯಿ,ಅಡಕ್ಕೆ,ಗೆಣಮೆಣಸ್ಸೆಲ್ಲಾ ತೋಟಲ್ಲಿ ನೆಟ್ಟು ಈಟು ಎಲ್ಲಾ ಹಾಕಿ, ಕೆಲಸದವಕ್ಕೆ ಸಂಬಳಕೊಟ್ಟು,ಊಟ,ಕಾಫಿ ತಿಂಡಿಕೊಟ್ಟು ಕೆಲಸ ಮಾಡಿಸಿಯೊಂಡು,ಅವುದೇ ಅವರೊಟ್ಟಿಂಗೆ ತೋಟಲ್ಲಿ ತಿರುಗಿ,ದುಡುದು ಮಾಡದ್ದರೆ ಅಪ್ಪದೆಲ್ಲಿಂದ?ಪೇಟೆಯವು ಹೇಳುದರ ಕೇಳಿದರೆ ಆರಾದರೂ ಗ್ರೇಶುಗು ಹಳ್ಳಿಲಿ ಎಲ್ಲಾ ಛೂಮಂತರ್ ಮಂತ್ರಂದ ಅಪ್ಪದಾಯಿಕ್ಕು ಹೇಳಿ!ಈ ಹಳ್ಳಿಯವು ಕಷ್ಟಪಟ್ಟು ಬೆಳೆದರೆ ತಾನೇ ಪೇಟೆಲಿಪ್ಪೋರಿಂಗೆ ಆಹಾರ ಎಲ್ಲಾ ಸಿಕ್ಕುದು?ನೀರಿಂಗೆ ಪೇಟೆವು ಮಾಂತ್ರ ಪೈಸೆ ಕೊಡುದಲ್ಲ.ಹಳ್ಳಿಲೂ ತೋಟಕ್ಕೆ,ನೆಟ್ಟಿಕಾಯಿ ಗಿಡಂಗೊಕ್ಕೆಲ್ಲಾ ನೀರು ಹಾಕೇಕಾದರೆ,ಮನೆ ಖರ್ಚಿಂಗುದೇ ಪಂಪ್ ಓಡ್ಸೇಕಾವುತ್ತು,ಅಡಕ್ಕೆ ಸೆಸಿ,ತೆಂಗಿನ ಸೆಸಿಗೊಕ್ಕೆಲ್ಲಾ ಸ್ಪ್ರಿಂಕ್ಲರ್ ಲಿ ನೀರು ಹಾಕೇಕಾವುತ್ತು.ಪಂಪ್ ಓಡಿಸುವ ಡೀಸಲ್ಲಿಂಗೆ ಪೈಸೆಯಲ್ಲದ್ದೆ ಮತ್ತೆಂತ ಕೊಡುದವು?!ಇರುಳು ಚಾರ್ಜರ್ ಲೈಟು ಅಥವಾ ಗ್ಯಾಸ್ ಲ್ಯಾಂಪ್ ಹಿಡುಕೊಂಡು ತೋಟದ ರಕ್ಷಣೆಗಾಗಿ ತಿರುಗಾಡ್ತಾ ಇರುತ್ತವು!ಮನೇಲಿದೇ ಲೈಟು,ಫ್ಯಾನ್ ಇರುತ್ತು!ಈಗ ಅವು ಬೆಳಕಿಂಗೂ,ಗಾಳಿಗೂ ಪೈಸೆ ಕೊಟ್ಟ ಹಾಂಗೇ ಅಲ್ಲದಾ?! ಅಲ್ಲಿದೇ ಪೇಟೆಲ್ಲಿಪ್ಪೋರು ಹೇಳುದೆಂತರ ಗೊಂತಿದ್ದಾ? ಹಳ್ಳಿಲಿ ಕರೆಂಟು,ಫೋನ್ ಬಿಲ್ಲೆಲ್ಲಾ ಕಡಮ್ಮೆ,ರೂರಲ್ ಅಲ್ಲದಾ ಹೇಳಿ! ಇಪ್ಪ ಜಾಗೆಲಿ ಗಿಡಂಗಳ ಎಲ್ಲಾ ಚೆಂದಕ್ಕೆ ನೆಟ್ಟು, ಶಕ್ತಿಯನ್ನೂ,ಯುಕ್ತಿಯನ್ನೂ ಉಪಯೋಗಿಸಿ ಗಂಟೆಗಟ್ಟಲೆ ದುಡಿದಿರುತ್ತವು. ತಲೆಲಿಯೇ ಹಟ್ಟಿ ಗೊಬ್ಬರವ, ಸ್ಲರಿಯ ಎಲ್ಲಾ ಹೊತ್ತು ಗಿಡಂಗಳ ಬುಡಕ್ಕೆ ಹಾಕಿ ಪೋಚುಕಾನ ಮಾಡಿರುತ್ತವು.ಪೇಟೆಂದ ಅವರ ಪೈಕಿ ಆರಾದರೂ ಹೋದವು ಹೇಳಿಯಾದರೆ ಒಂದು ವಾರಕ್ಕಪ್ಪಷ್ಟು ನೆಟ್ಟಿಕಾಯಿಯ ಪ್ರೀತಿಲಿ ಕೊಟ್ಟು ಕಳುಶುತ್ತವು,ಹೀಂಗಿಪ್ಪದು ಪೇಟೆಲಿ ಸಿಕ್ಕುತ್ತಿಲ್ಲೆನ್ನೇ,ಎಲ್ಲದಕ್ಕೂದೇ ಪೈಸೆ ಕೊಟ್ಟೇ ತೆಗೆದು ತಿನ್ನೇಕನ್ನೇ ಪಾಪ ಹೇಳಿಯೊಂಡು.ಅಷ್ಟೇ ಅಲ್ಲದ್ದೇ ಊರಿಂದ ಲಾರಿಯೋ,ಜೀಪೋ,ಕಾರೋ ಎಂತಾರೂ ಪೇಟೆಗೆ ಬಪ್ಪಲಿದ್ದು ಹೇಳಿಯಾದರೆ ಅವರ ಧಾರಾಳತನಕ್ಕೆಡೆಯ್ಯೇ ಇರುತ್ತಿಲ್ಲೆ.ಸಾವಯವಲ್ಲಿ ಬೆಳದ ಬೆಂಡೆ,ತೊಂಡೆ,ಅಲ್ತ್ಂಡೆ,ಹರಿವೆ,ದಾರಳೆ,ಪಟಕಲ,ಹಾಗಲ,ಸೌತೆಕ್ಕಾಯಿ,ಜೀಗುಜ್ಜೆ ತರಕಾರಿಗಳ, ಹಲಸು, ಮಾವಿನಹಣ್ಣಿನ ಸಮಯಲ್ಲಿ ಹಲಸು ಮಾವಿನಹಣ್ಣು, ಪೇರಳೆ, ಚಿಕ್ಕು ಹೀಂಗೆಲ್ಲಾ ಗೋಣಿ ಚೀಲಲ್ಲಿ ಹಾಕಿ ಪಾರ್ಸಲ್ ಕಳುಶುತ್ತವು ಇಲ್ಲೆ ಹೇಳಿಯಾದರೆ ಅವ್ವೇ ಬಪ್ಪಗ ದೊಡ್ಡ ಕಟ್ಟ ಮಾಡಿ ತತ್ತವು. ಹಳ್ಳಿಲಿ ಅವರ ಪರಿಸ್ಥಿಯ ಆರೂ ಕೇಳುವವ್ವೇ ಇಲ್ಲೆ.ಒಂದು ಹೊಡೇಲಿ ಕೆಲಸದಾಳುಗಳು ಸಿಕ್ಕುತ್ತವಿಲ್ಲೆ, ಮತ್ತೆ ಮನೆವ್ವೇ ಎಲ್ಲಾ ಕೂಡಿ ಮಾಡೇಕಾದ ಅನಿವಾರ್ಯತೆ ಆದರೆ,ಮಧ್ಯಾಹ್ನ ಮಂಗ,ಮುಜುಗಳು ಕಾಟ ಕೊಟ್ಟರೆ,ಇರುಳು ಕಾಟಿ, ಕಾಡು ಹಂದಿ!ಇವರೆಲ್ಲರ ಕೈಯಿಂದ ತೋಟವ ವರಕ್ಕುಗೆಟ್ಟು ರಕ್ಷಿಸಿಕೊಳ್ಳೇಕು ಬೇರೆ.ಇತ್ತಿಚೆಗಂತೂ ದನಗಳ್ಳರ ಹಾವಳಿಂದಾಗಿ ಹಟ್ಟಿಗುದೇ ಪಾರ ಕೂರೇಕಾವುತ್ತು.ಪೇಟೆಲಾದರೆ ಗೇಟು ಬುಡಲ್ಲಿ ಪ್ಯಾಕೆಟ್ ಹಾಲಿಂಗುದೆ,ಪೇಪರಿಂಗುದೆ ಕಾದು ಕೂದರೆ ಮುಗುದತ್ತು!ಹಳ್ಳಿಯವಕ್ಕೆ ಕಾಲ ಕಾಲಕ್ಕೆ ತೋಟಕ್ಕೆ ಸ್ಪೇ ಮಾಡೇಕು,ಪೇಟೆಲಾದರೆ ಮನೆ ಒಳ ನುಸಿ,ಜರಳೆ ಕಾಟಂದ ತಪ್ಪಿಸಿಕೊಂಬಲೆ ಸ್ಪ್ರೇ ಮಾಡಿದರೆ ಮುಗುದತ್ತು!ಪೇಟೆಯವುಕ್ಕುದೇ ಗೊಂತಿದ್ದು ಹಳ್ಳಿಯವಕ್ಕೂ ಪೈಸೆ ಖರ್ಚು ತಮ್ಮ ಹಾಂಗೇ ಇದ್ದು,ಪ್ರತಿಯೊಂದು ವಸ್ತುವಿಗೆ ಹಳ್ಳಿಯವು ಪೇಟೆಗೆ ಬಂದೇ ತೆಕ್ಕೊಂಡು ಹೋಗಿ ಆಯೇಕು,ಕಷ್ಟ ಇದ್ದು,ಕೆಲಸಂಗಳ ಒಟ್ಟಿಂಗೆ ಹೇಂಗೆ ಹಸಬಡಿತ್ತವು ಹೇಳಿ ಎಲ್ಲಾ.ಆದರೂ ಹೇಳುದೊಂದು ಅವರ ಕ್ರಮ ಅಷ್ಟೇ!ಅದಕ್ಕೆಲ್ಲಾ ಮಂಡೆಬೆಶಿಮಾಡಿಕೊಳ್ಳದ್ದರಾತು! 
ಈಗ ಇಬ್ಬರಿಂಗೂ ರಜ ತೃಪ್ತಿ ಆದಿಕ್ಕಲ್ಲದಾ?!ಅದು ಹಾಂಗೆ ಒಬ್ಬನ ಇನ್ನೊಬ್ಬ ಬೈದಪ್ಪಾಗ,ಅವರ ಹೊಗಳಿಯಪ್ಪಾಗ ಎಲ್ಲಾ ಕೊಶಿ,ತೃಪ್ತಿ ಅಪ್ಪದು ಸಹಜವೇ!ಈಗೊಂದು ಮಿಕ್ಸ್ ಡ್ ಸುದ್ದಿ!ಪೇಟೇಲಿಪ್ಪೋರು ಅವರ ಸುತ್ತಮುತ್ತಲಿಪ್ಪ ಕೆಲವು ಸ್ಥಳಂಗಳೆಲ್ಲಾ ಅವು ಅಲ್ಲಿಯೇ ಎಷ್ಟೋ ವರ್ಷಂದ ಇದ್ದರೂ ಹೋಗಿರುತ್ತವಿಲ್ಲೆ.ಇಲ್ಲೇ ಹತ್ತರೆ ಇಪ್ಪದಲ್ಲದಾ,ಒಂದಲ್ಲಾ ಒಂದು ದಿನ ಹೋದರಾತು ಹೇಳಿ ಹೇಳಿಯೊಂಡೇ ಮುಂದುಹಾಕಿರುತ್ತವು!ಆದರೆ ಹಳ್ಳಿಲಿಪ್ಪೋರು ಜೀಪು,ಕಾರು ಅಥವಾ ಬಸ್ಸು ಮಾಡಿಯೊಂಡೋ ಪೇಟೆಗೆ ಎಡೆ ಮಾಡಿಯೊಂಡು ಬಂದು ನೋಡಿ ಹೋಗಿರುತ್ತವು!ಹಾಂಗೆ ಹೇಂಗೂ ಪೇಟೆಗೆ ಬಂದದ್ದೇ ಇದ್ದಲ್ಲದಾ ಹೇಳಿ ಕೆಲವು ಫ್ಯಾಶನ್ ಲಿ ಫೇಮಸ್ ಹೇಳಿ ಹೆಸರು ಪಡೆದ ಚಿನ್ನ,ವಸ್ತ್ರದ ಅಂಗಡಿ,ಮಾಲಿಂಗೆಲ್ಲಾ ಹೋಗಿ ಹೊಸ ಹೊಸ ವಿನ್ಯಾಸದ ವಸ್ತ್ರ,ಚಿನ್ನ ಎಲ್ಲಾ ನಾಲ್ಕು ನಾಲ್ಕು ನಮೂನೆದರ ತೆಗೆದಿರುತ್ತವು.ಆದರೆ ಪೇಟೆಲಿಪ್ಪೋರು ಇಲ್ಲೇ ಇದ್ದನ್ನೇ ನಾಳೆ ಹೋಪ,ನಾಡಿದ್ದು ಹೋಪ,ಆಫರ್ ಇಪ್ಪಾಗ ಹೋಪ ಹೇಳಿ ದಿನಂಗಳ ಮುಂದೂಡಿಯೊಂಡೇ ಇರುತ್ತವು!ಪೇಟೆ ಹೆಮ್ಮಕ್ಕೊ, ಹಳ್ಳಿ ಹೆಮ್ಮಕ್ಕೊ ಎಲ್ಲಿಯಾರೂ ಮದುವೆ, ಉಪನಯನ, ಪೂಜೆಲಿ ಒಟ್ಟು ಸೇರಿಪ್ಪಗ ಗೊಂತಾವುತ್ತು ಹೀಂಗಿಪ್ಪಾ ಹೊಸಾ ಐಟಂಗೊ ಪೇಟೆಗೆ ಬೈಂದು,ಹೋಗಿ ತೆಕ್ಕೊಂಬಲೇ ಪುರುಸೊತ್ತಾಯಿದಿಲ್ಲೆ,ಹಳ್ಳಿಯವ್ವು ನಮ್ಮಿಂದ ಫಾರ್ವರ್ಡ್ ಇದ್ದವು ಹೇಳಿ!ಪೇಟೇಲಿಪ್ಪೋರತ್ತರಿಲ್ಲದ್ದ ಒಡವೆ,ವಸ್ತ್ರ ಅಡಿಯಿಂದ ಮುಡಿಯವರೆಗೂ ಅವರ ಹತ್ತರೆ ಇರುತ್ತು!ಹಾಂಗೆ ಹಳ್ಳಿಲಿಪ್ಪೋರು ಹಳ್ಳಿಯ ಪ್ರಸಿದ್ಧಿ ಪಡದ ಗುಡ್ಡೆಗೇ ಮನೆ ಹತ್ತರೆ ಇದ್ದರುದೇ ಒಂದರಿಯಾದರೂ ಹತ್ತಿರುತ್ತವಿಲ್ಲೆ ಕೆಲಸದ ಹರಗಣಂದಾಗಿ!ಆದರೆ ಅದೇ ಗುಡ್ಡೆಯ,ಪೇಟೆಲಿಪ್ಪೋರು ಬಂದು ಹತ್ತಿ ಟ್ರೆಕ್ಕಿಂಗ್ ಮಾಡಿ,ಮಜಾ ಮಾಡಿ ಹೋಗಿರುತ್ತವು!
ಹಳ್ಳಿಯಲ್ಲಿಪ್ಪ ಕೆಲವು ಜನಂಗ ತೋಟ ನಿರ್ವಹಣೆ ಕಷ್ಟ ಹೇಳಿ ತೋಟ ಎಲ್ಲಾ ಮಾರಿಕ್ಕಿ ಬಂದು ಪೇಟೆಲಿ ಕೂರೇಕು ಹೇಳಿ ಆಲೋಚನೆ ಮಾಡಿಯೊಂಡಿದ್ದರೆ,ಪೇಟೆಲಿಪ್ಪ ಕೆಲವು ಜನಂಗೊ ಅವ್ವು ಮಾಡ್ತಾ ಇಪ್ಪ ಕೆಲಸಂದ ನಿವೃತ್ತಿ ಆದ ಕೂಡಲೇ ಅಥವಾ ವಾಲೆಂಟರಿ ರಿಟೈರ್ ಮೆಂಟ್ ತೆಕ್ಕೊಂಡಾದರೂ ಸರಿ ಒಂದರಿ ಪೇಟೆ ಬಿಟ್ಟು ಹಳ್ಳಿಗೆ ಹೋಗಿ ಜಾಗೆ ಮಾಡಿ ಸೆಟಲ್ ಆಯೇಕು ಹೇಳಿ ಯೋಜನೆ ಹಾಕಿಯೊಂಡು ಕೂಯ್ದವು.ಒಟ್ಟಾರೆ ಅಲ್ಲಿ ಇಪ್ಪವಕ್ಕೆ ಇಲ್ಲಿದ್ದರೆ ಚೆಂದಾ ಹೇಳಿ ಕಂಡರೆ,ಇಲ್ಲಿಪ್ಪವಕ್ಕೆ ಅಲ್ಲಿದ್ದರೆ ಚೆಂದಾ ಹೇಳಿ ಕಾಂಬದು!ಇನ್ನು ಮುಂದಾದರೂ ಪೇಟೆಲಿಪ್ಪವು  ಹಳ್ಳಿಲಿಪ್ಪೋರ,ಹಳ್ಳಿಲಿಪ್ಪೋರು ಪೇಟೆಯವರ ಹಗುರಲ್ಲಿ ಕಾಂಬದೂ ಬೇಡ,ಹಗುರವಾಗಿ ಮಾತನಾಡುದೂ ಬೇಡ.ದೂರದ ಬೆಟ್ಟ ಏವಾಗಲೂ ನುಣ್ಣಗೇ ಕಾಂಬದು!


ಚೆಲುವೆಯೇ ನಿನ್ನ ನೋಡಲು...! - ಮಾರ್ಚ್ ೨೦೧೪ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ

ಚೆಲುವೆಯೇ ನಿನ್ನ ನೋಡಲು...!

ಡೊಂಕಿಪ್ಪ ನಾಯಿ ಬಾಲವ ನೆಟ್ಟಗೆ ಮಾಡುಲೆ ಆರಿಂದಾದರೂ ಸಾಧ್ಯ ಇದ್ದಾ ಹೇಳಿ?! ಆದರೆ ಸುರುಟಿಕೊಂಡಿಪ್ಪ ಮನುಷ್ಯರ ತಲೆಕಸವಿನ ನೆಟ್ಟಗೆ ಮಾಡ್ಲೆಡಿತ್ತು! ಉದ್ದ ಕಾಂಬಾಂಗೆ ಮಡ್ಲೆಡಿತ್ತು, ಕುಂಟ ಮಾಡ್ಲೆಡಿತ್ತು, ನೆಟ್ಟಂಗಿಪ್ಪದರ ಗುಂಗುರು ಕೂಡಾ ಮಾಡ್ಲೆಡಿತ್ತು, ಒಟ್ಟಾರೆ ಒಂದು ಮನುಷ್ಯನ ಗುರುತೇ ಸಿಕ್ಕದ್ದ ಹಾಂಗೆ ಕ್ಷಣ ಮಾತ್ರಲ್ಲಿ ಮಾಡಿಬಿಡ್ಲೆಡಿಗು. ನಮ್ಮ ಸುತ್ತಾಮುತ್ತಾ ಇಪ್ಪ ಬ್ಯೂಟಿ ಪಾರ್ಲರ‍್ಗಳ ಚಮತ್ಕಾರ ಇದು! ಮಾಡಿಸಿಕೊಂಡವರ ಯಶೋಗಾಥೆಯೂ ಅಪ್ಪು ಇದು!

     ಆಧುನಿಕ ಕಾಲದ ಕೂಸುಗಳ,ಹೆಮ್ಮಕ್ಕಳ, ಹಾಂಗೇ ಕೆಲವು ಹಳೇ ಕಾಲದ ಹೆಮ್ಮಕ್ಕಳ ಗಮನಿಸಿ ನೋಡಿಯಪ್ಪಗ ಹೇಂಗಿಪ್ಪವು ಹೀಂಗೂ ಅಪ್ಪಲಕ್ಕು ಹೇಳುತ್ತ ಕಟು ಸತ್ಯವ ಅವರ ಅಡಿಯಿಂದ ಮುಡಿಯವರೆಗೆ ಗಮನಿಸಿ ನೋಡಿ ತಿಳುಕೊಂಬಲಕ್ಕು! ಬೇರೆವ್ವು ಎಲ್ಲಾ ಅವರನ್ನೇ ಗಮನ ಕೊಟ್ಟು ನೋಡಲಿ ಹೇಳಿಯೇ ಮಾಡುದವು. ಹಾಂಗಾದ ಕಾರಣ ಅಂತವರ ಕಣ್ತುಂಬ ನೋಡುಲೆ ನಿಂಗೊಲ್ಲಾ ಹೆದರೇಕು ಹೇಳಿಯೇ ಇಲ್ಲೆ! ಧೈರ್ಯವಾಗಿ ಕಣ್ತುಂಬಾ ನೋಡಿ ಅವರ ಸೌಂದರ್ಯದ ಗುಟ್ಟಿನ ಬಗ್ಗೆ ಪಿ.ಹೆಚ್.ಡಿ ಕೂಡಾ ಮಾಡ್ಲಕ್ಕು! ಒಂದು ಸಲ ಸೊಂಟಕ್ಕೊರೆಗಿಪ್ಪ ಸುರುಟಿಕೊಂಡಾಂಗಿಪ್ಪ ತಲೆ ಕಸವು ಇನ್ನೊಂದು ಸಲ ನೋಡುವಾಗ ಕೂದಲಿನ ತಲೆಯಿಂದ ನೆಟ್ಟಗೆ ಇಳಿ ಬಿಟ್ಟಿರ‍್ತವು, ಫಳಫಳನೆ ಹಾವಿನ ಮೈ ಹಾಂಗೆ ಹೊಳಕ್ಕೊಂಡಿರ‍್ತು ಬೇರೆ! ಅದೇ  ಜೆನದ ಅದೇ ತಲೆಕಸವಿನ ರಜ ಸಮಯ ಕಳುದು ನೋಡಿದರೆ ಇನ್ನೊಂದು ಸ್ವರೂಪಲ್ಲೀ!-ಒಂದೋ ಹೆಗಲಿಂಗೊರೆಗೆ ಬಾಬ್ ಕಟ್ ಮಾಡಿಸಿಕೊಂಡಿಪ್ಪಲೂ ಸಾಕು, ಸ್ಪ್ರಿಂಗಿನ ಹಾಂಗೆ ಸುರುಳಿ ಸುರುಳಿಯಾಗಿ ಋಷಿಗಳ ತಲೆಕಸವಿನ ಹಾಂಗೆ ಇಳಿಬಿಟ್ಟುಕೊಂಡಿಪ್ಪಲೂ ಸಾಧ್ಯತೆ ಇರ‍್ತು, ಕೆಲವೊಂದರಿ ಕರೆಂಟು ಶಾಕ್ ಹೊಡದ ಹಾಂಗೆ ಕಂಡೊಂಡಿರ‍್ತು, ಅಡ್ಡಡ್ಡಕ್ಕೆ ಎಲಿ ತಿಂದ ಹಾಂಗೆ ಕಾಂಬಾಂಗೂ ಇರ‍್ತು, ಅಷ್ಟು ಕೂದಲುಗಳ ಹಿಡುದು ಕಟ್ಟಿದ್ದರೂ ಕೂಡಾ, ಅಡ್ಡಾದಿಡ್ಡಿ ಕತ್ತರಿಸಿದ ಆ ಕೂದಲುಗಳ ಉದ್ಡೇಶಪೂರ್ವಕವಾಗಿಯೇ ಕಣ್ಣಿಂಗೆ, ಹಣೆಗೆ ಬೀಳುವ ಹಾಂಗೆ ಮಾಡಿರ‍್ತವು. ಓದುವಾಗ, ಬರವಾಗ ಎಲ್ಲಾ ಉಪದ್ರವೇ ಆವುತ್ತಿಲ್ಲೆ ಹೇಳಿ ಅವಕ್ಕೆಲ್ಲಾ!! ಹಾಂಗೆ ಕಣ್ಣಿಂಗೆ ಅಡ್ಡ ಬಂದ ಕೂದಲಿನ ಅಂಬಗಂಬಗ ಒತ್ತರೆ ಮಾಡುದೇ ಒಂದು ಕೊಶಿ ಅವಕ್ಕೆ! ಬೋಳು ಮಂಡೆಯ ಒಂದು ಸ್ಟೈಲಿನ ಬಿಟ್ಟು ನೂರೆಂಟು ಸ್ಟೈಲುಗೊ ಈಗ ಚಾಲ್ತಿಲಿದ್ದು! ಬಾಬ್ ಕಟ್, ಶಾರ‍್ಟ್ ಕಟ್, ಲೇಯರ್ ಕಟ್, ಮಶ್ರೂಮ್ ಕಟ್, ವೆಜ್ ಕಟ್ ಇಷ್ಟು ಹೆಸರುಗೊ ಮಾಂತ್ರ ಎನಗೆ ಗೊಂತಿಪ್ಪದು.ಇನ್ನೂ ಹಲವು ನಮೂನೆ ಇರೇಕು!ನಿಜವಾಗಿ ಹೇಳ್ತರೆ ಕೆಲವರ ಎಲ್ಲಾ ನೋಡಿದರೆ ಹೆದರಿಕೆಯೇ ಆವುತ್ತು! ಅಪ್ಪೋ ಅಲ್ಲದಾ?! ತಲೆ ಕಸವಿನ ಆರೈಕೆಗೆ, ಅದರ ಚೆಂದ ಕಾಂಬಾಂಗೆ ಮಡುಲೆ ಎಷ್ಟು ಪೈಸೆ ಖರ್ಚು ಮಾಡ್ಲೂ ರೆಡಿ! ಹೊಟ್ಟೆಗೆ ಆ ಆ ಸಮಯಕ್ಕೆ ಸರಿಯಾಗಿ ಪೌಷ್ಠಿಕಾಂಶ ಇಪ್ಪ ಆಹಾರ ತಿಂತವೋ ಇಲ್ಲೆಯೋ, ಅಂತೂ ಚೆಂದ ಒಂದು ಕಾಂಬಲೆ ಎಷ್ಟುದೇ ಪೈಸೆ, ಸಮಯವ ಖರ್ಚು ಮಾಡುಲೂ ರೆಡಿ ಇರ‍್ತವು! ಅದಕ್ಕಲ್ಲದಾ ಹೇಳಿ ಇತ್ತೀಚೆಗೆ ನಾಯಿಕೊಡೆಗಳ ಹಾಂಗೆ ಬ್ಯೂಟೀ ಪಾರ್ಲರ‍್ಗೊ ಹುಟ್ಟಿಕೊಂಡಿಪ್ಪದು! ಪಾಪ ರೈತರು ಬೆಳೆ ಬೆಳೆಯೇಕಾದರೆ ಮಳೆ ಬಂದೇ ಆಯೇಕು. ಇಲ್ಲದ್ದರೆ ವರ್ಷ ಪೂರ್ತಿ ಚಿಂತೆಲಿ ಹಣೆ ಹಣೆ ಚಚ್ಚಿಕೊಂಡೇ ಇರೇಕು. ಬ್ಯೂಟೀ ಪಾರ್ಲರ್ ಮಡಿಕೊಂಡಿಪ್ಪವ್ಕೆಲ್ಲಾ ವರ್ಷ ಪೂರ್ತಿ ಸುಗ್ಗಿ ಕಾಲ ಹೇಳಿಯೇ ಹೇಳುಲಕ್ಕು! ಅವಕ್ಕೆ ಈಗಿನ ಕಾಲದ ಕೂಸುಗಳು,ಹೆಮ್ಮಕ್ಕಳು,ಕೆಲವು ಹಳೇಕಾಲದ ಹೆಮ್ಮಕ್ಕಳೇ ಕಚ್ಚಾವಸ್ತುಗೊ! ಈಗ ತಲೆಕಸವಿನ ಮಾಂತ್ರ ಚೆಂದ ಮಾಡಿದರೆ ಸಾಕಾ? ಮೋರೆ, ಹುಬ್ಬು, ಕೊರಳು, ಕೈ, ಕಾಲು, ಉಗುರು, ಚರ್ಮ ಎಲ್ಲಾ ಚೆಂದ ಕಾಣೇಡದಾ?! ಕೈ ಕಾಲು ಉಗುರುಗಳ ಕ್ಲೀನ್, ಚೆಂದ ಎಲ್ಲಾ ಮಾಡುಲೆ ಬ್ಯೂಟೀಶ್ಯನ್ ಹತ್ತರೆಯೇ ಹೋಯೆಕ್ಕಾ ಹೇಳಿ ಇನ್ನೊಂದು ಜಿಜ್ಞಾಸೆ ಎನ್ನದು! ಮನೇಲೇ ಒಂದು ಹಳೇ ಹಲ್ಲುಜ್ಜುವ ಬ್ರಶ್, ಸ್ಕ್ರಬ್ಬರುಗಳ ಎಲ್ಲಾ ತೆಕ್ಕಂಡು ಸೋಪಿಲೋ, ಕಡ್ಲೆ ಹುಡಿಲೋ, ನಿಂಬೆ ಕಡಿಲಿಯೋ  ಇಲ್ಲೆ ಹೇಳಿಯಾದರೆ ಇನ್ನೆಂತರನ್ನಾರೂ ಉಪಯೋಗಿಸಿ ಲಾಯ್ಕ ತಿಕ್ಕಿ ತೊಳದರೆ ಕ್ಲೀನ್ ಆವುತ್ತಿಲ್ಲೆಯಾ ಹೇಳೀ?! ಬ್ಯೂಟಿ ಪಾರ್ಲರ‍್ಗೊಕ್ಕೆ ಅಂಬಗಂಬಗ ಹೋಗಿ ಇದರೆಲ್ಲಾ ಮಾಡಿಸಿಕೊಂಡು ಗೊಂತಿಪ್ಪ ಒಂದಿಬ್ಬರ ಹತ್ತರೆ ಎನ್ನ ಮನಸ್ಸಿಲಿ ಮೂಡಿದ ಪ್ರಶ್ನೆ ಕೇಳಿ ನೋಡಿದೆ. ಅಂಬಗ ಅವು ಎಂತ ಹೇಳಿದವು ಗೊಂತಿದ್ದಾ,"ಅಲ್ಲಿ ಹೋಗಿ ಮೆನಿಕ್ಯುರ್, ಪೆಡಿಕ್ಯುರ್(ಕೈಕಾಲು ಉಗುರುಗಳ ಕ್ಲೀನ್ ಮಾಡುಸುದರ ಹೆಸರುಗೊ) ಮಾಡಿಸಿದರೆ, ಎಷ್ಟು ಲಾಯ್ಕಾವುತ್ತು ಗೊಂತಿದ್ದಾ ನಿನಗೆ, ಅವ್ವು ಉಗುರುಗಳ ಕ್ಲೀನ್ ಮಾಡಿಕೊಂಡಿದ್ದಾಂಗೇ ಸುಖಾ ಆವುತ್ತು, ಬಚ್ಚುದೆಲ್ಲಾ ಹೋವುತ್ತು, ವರಕ್ಕು ಬಂದ ಹಾಂಗಾಗಿ ಹಾಯೆನಿಸುತ್ತು" ಹೇಳಿ! ಅದಪ್ಪು ಹೇಳಿ ಕಂಡತ್ತೆನಗೆ. ನಾವು ನಾವೇ ನಮ್ಮ ನಮ್ಮ ಕೈಕಾಲು ಒತ್ತಿಕೊಂಡರೆ ಲಾಯ್ಕಾವುತ್ತಾ? ಇಲ್ಲೆನ್ನೇ?! ಮತ್ತೊಬ್ಬ ಒತ್ತಿ ಕೊಟ್ಟರೇ ಸುಖಾ ಆಪ್ಪದಲ್ಲದಾ!! ಹಾಂಗೇ ಉಗುರುಗಳ,ಕೈಕಾಲುಗಳ ಅವರ ಕೈಯಿಂದ ತೊಳಶಿಕೊಂಡಪ್ಪಗ ಅಪ್ಪದಾಯಿಕ್ಕು!ಈ ಲಾಯ್ಕವೋ, ಎಂತ ಕರ್ಮವೋ ನಾವೇ ತೊಳಕೊಂಡರೂ ಕ್ಲೀನ್ ಹೇಳಿ ಒಂದು ಆದರೆ ಸಾಕಾವುತ್ತಿಲ್ಲೆಯಾ ಹೇಳಿ ಎನ್ನ ಜಿಜ್ಞಾಸೆ! ಮೋರೆಯ ಚೆಂದ ಮಾಡುಸುವಾಗಲೂ ಅವರ ಕೈಯಿಂದಲೇ ತಿಕ್ಕಿಸಿಕೊಂಡರೆ ಹಾಂಗೇ ಅಪ್ಪದಡಪ್ಪಾ! ಆನು ಒಂದರಿ ಬ್ಯೂಟೀ ಪಾರ್ಲರಿಂಗೆ ಹೋಯಿದೆ ಅನಿವಾರ್ಯವಾಗಿ ಎನ್ನ ನೆರೆಕರೆಯ ಫ್ರೆಂಡಿನೊಟ್ಟಿಂಗೆ. ಆ ಜೆನಕ್ಕೆ ಆರಾದರು ಒಬ್ಬ ಜತೆಗೆ ಬೇಕಿತ್ತಡ ಅಲ್ಲಿಗೆ ಹೋಪಲೆ, ಅದರ ಮಗಳು ಊರಿಂಗೆ ಹೋಗಿತ್ತು, ಹಾಂಗಾಗಿ ಎನ್ನ ಹತ್ತರೆ, "ನನ್ನೊಟ್ಟಿಂಗೆ ಬ್ಯೂಟೀ ಪಾರ್ಲರಿಗೆ ಬರ‍್ತೀರಾ,ಯಾರೂ ಕಂಪನಿ ಇಲ್ಲ" ಹೇಳಿ ಕೇಳಿಯಪ್ಪಗ,ಇಲ್ಲೆ ಹೇಳಿ ಹೇಳುಲಾಯಿದಿಲ್ಲೆ. ನೆರೆಕರೆವ್ವಲ್ಲದಾ? ಅವ್ವು ಸಮಯ ಬಂದಪ್ಪಗ ನಮಗೆ ಸಹಾಯಕ್ಕೆ ಒದಗುವ ಹಾಂಗೆ ನಾವುದೇ ಅವರ ಕಷ್ಟ ಸುಖಕ್ಕೆ ಆಗೇಡದಾ ಹೇಳಿ ಗ್ರೇಶಿ,"ಆಯ್ತಪ್ಪ ಅದಕ್ಕೇನಂತೆ, ಖಂಡಿತಾ ಬರ್ತೇನೆ" ಹೇಳಿ ಭರವಸೆ ಕೊಟ್ಟೆ! ಹಾಂಗೆ ಒಂದರಿ ಬ್ಯೂಟೀ ಪಾರ್ಲರ್ ಬಗ್ಗೆ ರಜ್ಜ ತಿಳುಕೊಂಡ ಹಾಂಗೂ ಆತು, ಇದೊಂದು ಸುವರ್ಣಾವಕಾಶ ಹೇಳಿ ಗ್ರೇಶಿಗೊಂಡು ಅದರೊಟ್ಟಿಂಗೆ ಹೋಗಿತ್ತೆ. ಅಲ್ಲಿ ಮೂರು ಆರಾಮ ಕುರ್ಚಿಗೊ ಇತ್ತವು. ಅವರವರ ಅಂದ, ಚೆಂದ ಹೆಚ್ಚಿಸಿಕೊಂಬಲೆ ಬಂದ ಗಿರಾಕಿಗಳೇ ಇತ್ತಿದವಲ್ಲಿ! ಅಲ್ಲಿಪ್ಪ ಮೂರು ಕುರ್ಚಿಗಳಲ್ಲಿ ಮೂರು ಜೆನಂಗ ಮೋರೆಗೆ, ಕೊರಳಿಂಗೆ ಎಂತೋ ಬೆಣ್ಣೆ ಹಾಂಗಿಪ್ಪ ವಸ್ತುವಿನ ಮೆತ್ತಿಸಿಕೊಂಡು ಲೋಕಜ್ಞಾನವೇ ಇಲ್ಲದ್ದ ಹಾಂಗೆ ಕಣ್ಮುಚ್ಚಿ ಕುರ್ಚಿಗೆ ಎರಾಗಿ ಕೂದೊಂಡಿತ್ತಿದವು. ಅಲ್ಲಾ ಇವಕ್ಕೆಲ್ಲಾ ಮನೇಲೇ ಟೊಮೇಟೋ ಹಣ್ಣಿನ ರಸವನ್ನೋ, ಜೇನನ್ನೋ, ಹಾಲಿನ ಕೆನೆಗೆ ನಿಂಬೆಹುಳಿ ಎಸರು ಹಿಂಡಿ ಅದಕ್ಕೆ ರಜ್ಜ ಅರಶಿನ ಪುಡಿ ಹಾಕಿ ಮಿಶ್ರಣ ಮಾಡಿ ಹಾಕಿಕೊಂಡು ತೊಳಕೊಂಬಲೆಡಿತ್ತಿಲ್ಲೆಯಾ ಹೇಳಿ ಒಂದರಿಯಂಗೆ ಅನ್ನಿಸಿಬಿಟ್ಟತ್ತು! ಇಂತಾ ಹತ್ತು ಜೆನಂಗಳಿಂದಾಗಿ ಒಟ್ಟಾರೆ ಅಲ್ಲಿ ಹೌಸ್ ಫುಲ್ ಆಗಿತ್ತು! "ಸ್ವಲ್ಪ ಹೊತ್ತು ವೈಟ್ ಮಾಡ್ಬೇಕು ಆಯ್ತಾ ಮ್ಯಾಡಮ್" ಹೇಳಿ ಹೇಳಿತು ಬ್ಯೂಟೀಶಿಯನ್ ಪರಿಚಯದ ನೆಗೆ ಮಾಡಿಯೊಂಡು ಎನ್ನ ಫ್ರೆಂಡಿಂಗೆ! ಇನ್ನೆಂತ ಮಾಡುದು ಡಾಕ್ಟ್ರನ ಭೇಟಿಗೆ ಕಾದು ಕೂಪ ರೋಗಿಯ ಹಾಂಗೆ ಇಲ್ಲಿಯೂ ಕೂಪ ಪರಿಸ್ಥಿತಿ ಬಂತನ್ನೆಪ್ಪಾ ಹೇಳಿ ಮನಸ್ಸಿಲ್ಲಿಯೇ ಗ್ರೇಶಿಕೊಂಡೆ. ಆ ರೂಮಿನ ತುಂಬಾ ಎಂತದೋ ರಾಸಾಯನಿಕ ವಸ್ತುಗಳ ಕಮಟು ವಾಸನೆ!ಒಂದು ಹೆಮ್ಮಕ್ಕೊ ಅಂತೂ ತಲೆ ಕಸುವಿಂಗೆ ಎಂತದೋ ಮೆತ್ತಿಸಿಕೊಂಡು ಒಂದು ಮೂಲೆಲಿ ಕೂದೊಂಡಿಪ್ಪದು ಕಂಡತ್ತು. ಎನ್ನ ಫ್ರೆಂಡಿನ ಹತ್ತರೆ ಅದು ಎಂತರ ಹೇಳಿ ಕೇಳಿದೆ. ಅದು ಹೇಳಿತು, ಅದು ಅದರ ಕೂದಲಿನ ಶಾಶ್ವತವಾಗಿ ನೆಟ್ಟಗೆ ಮಾಡ್ಸಿಕೊಂಬಲೆ ಬೇಕಾಗಿ ಬಂದದು ಹೇಳಿ. ಹಾಂಗೆ ಮಾಡ್ಸುಲೆ ಎಷ್ಟು ಪೈಸೆ ಅಕ್ಕು ಹೇಳಿ ಕೇಳಿದೆ ಅದರತ್ತರೆ. ಅದು "ಎಂಟು ಸಾವಿರ ರೂಪಾಯಿ" ಹೇಳಿ ಹೇಳಿದ್ದರ ಕೇಳಿಯಪ್ಪಗ ತಲೆತಿರುಗಿ ಆನು ಬೀಳುದೊಂದೇ ಬಾಕಿ! ಛೇ ಇಂದ್ರಾಣ ಎಂಟು ಸಾವಿರ ರೂಪಾಯಿಲಿ ಎರಡೂವರೆ ಗ್ರಾಂ ಚಿನ್ನ ಸಿಕ್ಕುಗನ್ನೇ ಹೇಳಿ ಮನಸ್ಸಿಲ್ಲೇ ಲೆಕ್ಕ ಹಾಕಿದೆ. ಎಂಗೊ ಇಬ್ರೂ ಕಾದು ಕೂದು ಒಂದು ಗಂಟೆ ಅಪ್ಪಗ ಎನ್ನ ಫ್ರೆಂಡಿನ ಸರದಿ. ಆ ಕಾಲಿಯಾದ ಖುರ್ಚಿಗಳಿಂದ ಎದ್ದು ಹೋದವ್ವೆಲ್ಲಾ ಅವರವರ ಪರ್ಸುಗಳಿಂದ ನೋಟುಗಳ ಅಟ್ಟಿಯನ್ನೇ ಬ್ಯೂಟೀಷಿಯನ್ನಿನ ಕೈಯಲ್ಲಿ ಕೊಟ್ಟಿಕ್ಕಿ ಅಲ್ಲಿಂದ ಜಾಗೆ ಖಾಲಿ ಮಾಡಿಕೊಂಡಿತ್ತವು! ಎನ್ನ ಫ್ರೆಂಡ್ ಕಣ್ಣಿನ ಹುಬ್ಬಿನ ಕಾಮನಬಿಲ್ಲಿನ ಹಾಂಗೆ ಮಾಡಿಸಿಕೊಂಡು ಕುರ್ಚಿಯಿಂದ ಇಳುದು ಬಂತು. ಮೂವತ್ತು ರೂಪಾಯಿ ಕೊಟ್ಟು, ಬೂಟೀಷಿಯನ್ನಿಂಗೆ ಥ್ಯಾಂಕ್ಯು ಹೇಳಿ ಹೆರಟತ್ತು. ಬರೇ ಹತ್ತು ನಿಮಿಷದ ಒಳಾಣ ಕೆಲಸ! ಛೇ ಇಷ್ಟು ಸಣ್ಣ ಕೆಲಸಕ್ಕೆ ಇಷ್ಟು ಹೊತ್ತು ಕಾದು ಕೂರೇಕಾತನ್ನೇ ಹೇಳಿ ಹೇಳಿಕೊಂಡೆ ಎನ್ನಷ್ಟಕ್ಕೇ. ಅಂತೂ ಪುಕ್ಕಟೆ ವಿಶ್ವರೂಪದರ್ಶನ ಆತನ್ನೆ ಎನಗೆ ಬ್ಯೂಟೀ ಪಾರ್ಲರಿಂದು ಹೇಳಿ ಮನಸ್ಸಿಲ್ಲೇ ಖುಷಿ ಪಟ್ಟುಕೊಂಡು ಫ್ರೆಂಡಿನೊಟ್ಟಿಂಗೆ ಮನೆ ಕಡೆಂಗೆ ಹೆಜ್ಜೆ ಹಾಕಿ ಬೀಸ ನಡದೆ!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು 
ಮೊಬೈಲ್ ನಂಬ್ರ: 9481921108

Thursday, February 26, 2015

ಎಲ್ಲೋರು ಮಾಡುದು ಹೊಟ್ಟೆಗಾಗಿ...! - ಮೇ ೨೦೧೩ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ

ಎಲ್ಲೋರು ಮಾಡುದು ಹೊಟ್ಟೆಗಾಗಿ...!
ಕಂಡಾಬಟ್ಟೆ ತೋರದವ ಒಬ್ಬ ಡಾಕ್ಟ್ರನ ಹತ್ತರೆ ಹೋಗಿ,"ಎನ್ನ ಶರೀರವ ಸಪೂರ ಮಾಡಿಯೊಂಬಲೆ ಎಂತಾರು ಔಷಧಿ ಇದ್ದೋ" ಹೇಳಿ ಕೇಳಿದಡ. ಡಾಕ್ಟ್ರು ಹೇಳಿದವಡ,"ಅದಕ್ಕೆಲ್ಲಾ ಎಂತ ಔಷಧಿಯೂ ಬೇಡ. ಇರುಳಪ್ಪಗ ಎರಡೇ ಎರಡು ಚಪಾತಿ ತಿಂದು ಮನುಗಿ, ಅಷ್ಟೇ ಸಾಕು ಹೇಳಿ. "ಆತು ಡಾಕ್ಟ್ರೇ, ನಿಂಗೊ ಹೇಳಿದ ಹಾಂಗೇ ಮಾಡ್ತೆ. ಆದರೆ ಈ ಚಪಾತಿಗಳ ಊಟಕ್ಕೆ ಮೊದಾಲು ತಿನ್ನೇಕ್ಕಾ? ಊಟದ ನಂತರವಾ?" ಹೇಳಿ ಪ್ರಶ್ನೆ ಮಾಡಿದನಡ ಆ ಪುಣ್ಯಾತ್ಮ!!
ಒಂದ್ನಿಮಿಷ...ಒಂದ್ನಿಮಿಷ....ಇಷ್ಟು ಓದಿಯಪ್ಪದ್ದೇ ಹಲ್ಲುಬಿಟ್ಟು ಆ ಮನುಷ್ಯನ ಗ್ರೇಶಿಯೊಂಡು ನೆಗೆ ಮಾಡ್ಲೆ ಶುರು ಮಾಡೇಡಿ ಅಥವಾ ಮೂಗಿನ ಮೇಲೆ ಬೆರಳು ಮಡುಗೇಡಿ! ಹೆಚ್ಚು ಕಡಮ್ಮೆ ಹಾಂಗೆ ಪ್ರಶ್ನೆ ಮಾಡದ್ದರೂದೇ ಅದೇ ಗುಂಪಿಂಗೆ ಸೇರಿದವ್ವೇ! ಅಂವ ಪಾಪ ಕೇಳಿದ ಅಷ್ಟೇ!! ಎಲ್ಲೋರೂ ತಿಂಬ್ರಾಂಡಿಗಳೇ! ಉದಿಯಪ್ಪಗಣ ಕಾಫಿ, ತಿಂಡಿಯ ಮನೆಲಿ ಗಡದ್ದಾಗಿ ತಿಂದು ಢರ್ರನೆ ತೇಗಿದ್ದರೂ ಕೂಡಾ ಎಲ್ಲಿಯಾದರೂ ನೆಂಟರಿಷ್ಟರ, ಅಕ್ಕಪಕ್ಕದವರ, ಫ್ರೆಂಡುಗಳ ಮನೆಗೋ ಹೋದತ್ತು ಹೇಳಿಯಾದರೆ, ಅಲ್ಲಿ ಅವ್ವೆಲ್ಲಿಯಾದರೂ ತಿಂಬಲೆ, ಕುಡಿವಲೆ ಕೊಟ್ಟರೆ ಸುತಾರಾಂ ಬಿಡ್ತಿಲ್ಲೆಯ! ಔಪಚಾರಿಕವಾಗಿ, "...ಮನೆಲಿ ಈಗಷ್ಟೇ ಕಾಫಿ, ತಿಂಡಿ ಎಲ್ಲಾ ಮುಗುಶಿ ಬಂದದು....ಎಂತದ್ದೂ ಬೇಡ.....ಹಾಂಗೂ ನಿಂಗೊಗೆ ಕೊಡೇಕು ಹೇಳಿಯಾದರೆ ಒಂದು ರಜ್ಜ ಸಾಕು....." ಹೇಳಿ ಹೇಳ್ತೆಯ. ಅಂಬಗ ಅವ್ವು ಸುಮ್ಮಗಿರ‍್ತವಾ? "ಎಂತದ್ದೂ ಆವುತ್ತಿಲ್ಲೆ. ತಿಂಡಿ ತಿಂದು ಈಗ ಅರ್ಧ ಗಂಟೆ ಆಯಿದಿಲ್ಲೆಯಾ? ಅದು ನಿಂಗೊ ಇಲ್ಲಿಗೆ ಬಂದು ಎತ್ತಿಯಪ್ಪಗ ಕರಗಿಕ್ಕು...ತಿನ್ನಿ...ಹಾಂಗೆಂತಾರೂ ಆದರೆ ಆನು ನೋಡಿಯೊಂಬೆ..." ಹೇಳಿಯೊಂಡು ತಟ್ಟೆ ತುಂಬಾ ತಿಂಡಿ, ಗ್ಲಾಸು ತುಂಬಾ ಕಾಫಿಯನ್ನೋ, ಇಲ್ಲೆ ನಿಂಗೊಗೆ ಇಷ್ಟ ಇಪ್ಪ ಪಾನೀಯವ ತುಂಬು ಹೃದಯಂದ ಕೊಡ್ತವು. "ಛೇ..ನಿಂಗೊ ಯೇವಾಗಲೂ ಹೀಂಗೇ....ತಿನ್ಸದ್ದೆ ಕಳ್ಸಿದ ಜೆನವೇ ಅಲ್ಲ...ನಿಜವಾಗಿಯಾದ್ರೂ ಬೇಡ ಇತ್ತು...." ಹೇಳಿ ಹೇಳಿಯೊಂಡೇ ಕೈಗೂ, ಬಾಯಿಗೂ ಕೆಲಸ ಕೊಡ್ತೆಯ! ಮತ್ತಿನ್ನು ಉದಿಯಪ್ಪಗ ಮನೆಂದ ತಿಂಡಿ, ಕಾಫಿ ಮುಗುಶಿಕ್ಕಿ ಹನ್ನೊಂದು ಗಂಟೆ ಒಳ ಎಲ್ಲಿಯಾದರೂ ಮದುವೆ ಮನೆಗೋ, ಉಪನಯನದ ಮನೆಗೋ, ಮನೆ ಒಕ್ಕಲಿಂಗೋ ಹೋಗಿ ಎತ್ತಿಕೊಂಡತ್ತು ಹೇಳಿಯಾದರೆ, ಅದೇ ಸಮಯಕ್ಕೆ ಅಕಸ್ಮಾತ್ ಅಲ್ಲಿ ಅವ್ವು ಉದಿಯಪ್ಪಗಣ ತಿಂಡಿ, ಕಾಫಿ ಸರಬರಾಜಿನ ಕ್ಲೋಸ್ ಮಾಡಿರದಿದ್ದರೆ ಖಂಡಿತಾ ಸಿಕ್ಕಿದ ಅವಕಾಶವ ತಪ್ಪುಸದ್ದೇ ಕೈಕಾಲು ತೊಳದ ಶಾಸ್ತ್ರ ಮಾಡಿ, ಕೂದು ಗಡದ್ದಾಗಿ ತಿಂಬ ಕ್ರಮವ ಹೆಚ್ಚಾಗಿ ಫಾಲೋ ಮಾಡುವವಿದ್ದವು! ಇನ್ನೆಂತ ರಜ್ಜ ಹೊತ್ತಿಲಿ ಮೃಷ್ಠಾನ್ನ ಭೋಜನ ಇದ್ದು ಹೇಳಿ ಗೊಂತಿದ್ದರೂ, ಗೊತ್ತು ಗುರಿ ಇಲ್ಲದ್ದೇ ಹೊಟ್ಟೆ ತುಂಬುಸುವ ಕಾಯಕ ನಿರಾಯಾಸವಾಗಿ, ನಿರಾತಂಕವಾಗಿ ಸಾಗಿರ‍್ತು! ಒಟ್ಟಾರೆ ಸಿಕ್ಕಿದ ಅವಕಾಶವ ಬಿಡ್ಲೆ ಆರುದೇ ತಯಾರಿಲ್ಲೆ! ಇನ್ನು ಮನೇಲೇ ಇಪ್ಪೋರು ಎಡೆಹೊತ್ತಿಲಿ ತಿಂಬಲೆ ಹೇಳಿ ಡಬ್ಬಗಳಲ್ಲಿ, ಫ್ರಿಡ್ಜಿಲೆಲ್ಲಾ ವಿವಿಧ ನಮೂನೆಯ ತಿಂಡಿಗಳ ಮನೇಲಿ ಮಾಡಿದ್ದರನ್ನೋ, ಹೆರಂದ ತಂದದ್ದರನ್ನೋ ದಾಸ್ತಾನು ಮಡುಗಿರ‍್ತವು ಮನೆ ಒಳವೇ ಹೋವುತ್ತಾ ಬತ್ತಾ ತಿಂಬಲೆ! ಆಫೀಸಿಂಗೆ ಹೋದವ್ವು ಎಂತ ತಿನ್ನದ್ದೇ ಕೂರ‍್ತವಾ? ಅಲ್ಲಿಯೇ ಆಫೀಸಿನ ಅಥವಾ ಆಫೀಸಿನ ಹತ್ತರೆ ಇಪ್ಪ ಕ್ಯಾಂಟೀನ್‍ಗಳ ತಟ್ಟೆ, ಗ್ಲಾಸುಗಳ ಹಳತ್ತು ಮಾಡಿರ‍್ತವು!
ಇನ್ನು ಫ್ಯಾಮಲಿ ಮೀಟಿಂಗೋ. ಆಫೀಸು ಮೀಟಿಂಗೋ ಎಂತಾರೂ ಇದ್ದರೆ ಅಲ್ಲಿ ಕಾರ್ಯಕ್ರಮದ ಶುರುವಿಲೋ, ನಡಿವಿಲೋ, ಅಕೇರಿಲೋ ಸಿಕ್ಕುವ ಒಂದು ಗ್ಲಾಸ್ ಕಾಫಿ, ಟೀ, ಬಾದಾಮಿ ಹಾಲಿಂಗೋ, ಅದರೊಟ್ಟಿಂಗೆ ಸಿಕ್ಕುವ ಒಂದು ಹಿಡಿ ಉಪ್ಪಿಟ್ಟಿಂಗೋ, ಕರಿದ ಕುರುಕುಲು ತಿಂಡಿಗೊ, ಸ್ವೇಟಿಂಗೋ ಜೀವ ಬಿಡುವವ್ವು ಎಷ್ಟು ಜೆನ ಇಲ್ಲೆ?! ಮೀಟಿಂಗಿಂಗೆ ಹೋಪ ಮೊದಾಲು ಹೆಂಡತಿ ಮಕ್ಕಳನ್ನುದೇ ಹೆರಡ್ಲೆ ಹೇಳಿಕ್ಕಿ, "ಇದಾ, ನಿಂಗಳೂ ಬನ್ನಿ...ಮೀಟಿಂಗಿಲಿ ಕಾಫಿ, ತಿಂಡಿ ಎಲ್ಲಾ ಇರ‍್ತು. ತಿಂದಿಕ್ಕಿ, ರಜ್ಜ ಹೊತ್ತು ಕೂದಾಂಗೆ ಮಾಡಿ ನಿಂಗೊ ಎಲ್ಲಾ ಸೀದಾ ಮನೆಗೆ ಬನ್ನಿ, ಆನು ಮೀಟಿಂಗ್ ಮುಗುಶಿಯೊಂಡು ಬತ್ತೆ" ಹೇಳಿ ಅವರ ಎಲ್ಲಾ ಬಪ್ಪಲೆ ಮಾಡಿ ಮೀಟಿಂಗಿಲಿ  ಕೋರಂ ಜಾಸ್ತಿ ಮಾಡುವ್ವವ್ವು ಎಷ್ಟು ಜೆನಂಗೊ ಇಲ್ಲೆ?! ಎಲ್ಲಿಯಾದರೂ ಮೀಟಿಂಗು ಶುರುವಾಗಿ ಇನ್ನೂ ಕಾಫಿ, ತಿಂಡಿ ಸಿಕ್ಕದ್ದರೆ ಯೇವಾಗ ಬತ್ತಪ್ಪಾ ಈ ತಿಂಡಿ, ಕಾಫಿ ಎಲ್ಲಾ ಹೇಳಿ ಮನಸ್ಸು ಹಾತೊರೆತ್ತಾ ಇರ‍್ತು! ಮನೇಲಿ ಕಾಫಿ, ತಿಂಡಿ ಮುಗುಶಿ ಬಂದಿದ್ದರೂ ಸಮ, ಹಶುವಿದ್ದರೂ ಸಮ, ಇಲ್ಲದ್ದರೂ ಸಮ! ಅಂತಲ್ಲೆಲ್ಲಾ ಒಂದೋ ಕಾಫಿ, ತಿಂಡಿ ಇಲ್ಲದ್ದರೆ, "ಕಾಫಿ, ತಿಂಡಿ ಇಲ್ಲದ್ದೇ ಎಂತಾ ಪೊಟ್ಟು ಮೀಟಿಂಗೋ..." ಹೇಳಿ ಬೈದು ಬಪ್ಪೋರೂ ಇದ್ದವು!
ಮತ್ತೆ ತರತರದ ಖಾದ್ಯಂಗಳ ತಿಂಬಲೆ ಬೇಕಾಗಿಯೇ ವಾರಾಂತ್ಯ ಸ್ಪೆಷಲ್ಲು, ಪಾರ್ಟಿ, ಟ್ರೀಟ್ ಹೇಳಿ ಹೆಸರು ಹೇಳಿಯೊಂಡು ದೊಡ್ಡ, ದೊಡ್ಡ ಸ್ಟಾರ್ ಹೋಟೇಲುಗೊಕ್ಕೆ, ಐಸ್‍ಕ್ರೀಂ ಪಾರ್ಲರ‍್ಗೊಕ್ಕೆ ಖಾಯಂ ಭೇಟಿ ಆಯಿಕ್ಕೊಂಡೇ ಇರ‍್ತು! ಇಷ್ಟೆಲ್ಲಾ ಮುಗುದ ಮತ್ತೂ ಮಾರ್ಗದ ಬದಿಲಿ ಧೂಳು ಮಿಶ್ರಿತ ಪಾನೀಪೂರೀ, ಭೇಲ್‍ಪೂರೀ, ಚರ‍್ಮುರಿಗಳನ್ನೆಲ್ಲಾ ಬಿಡುವ ಮಾತೇ ಇಲ್ಲೆ! ಎಂತದ್ದು ಎಲ್ಲಿ ಸಿಕ್ಕಿದರೂ ಸಮ, ಇಪ್ಪದು ಒಂದೇ ಮಂತ್ರ...ಸ್ವಾಹಾ....!  ಒಟ್ಟಾರೆ ಕೈಗೂ ಬಾಯಿಗೂ ಯಾವಾಗಲೂ ಪುರುಸೊತ್ತಿಲ್ಲೆ!
ಯಾವಾಗಲೂ, ಎಲ್ಲಾ ಕಾಲಲ್ಲಿಯೂ, ಎಲ್ಲೋರೂ ನೆಂಪು ಮಡಿಕೊಳ್ಳೇಕ್ಕಾದ ವಾಕ್ಯ ಒಂದಿದ್ದು. ’ನಾವೆಲ್ಲಾ ಬದುಕುದಕ್ಕೋಸ್ಕರ ತಿನ್ನೇಕಷ್ಟೇ ಹೊರತು ತಿಂಬಲೆ ಬದುಕುದಲ್ಲ’. ನಮ್ಮ ನಮ್ಮ ಸ್ವಸ್ಥ ಆರೋಗ್ಯಕ್ಕೆ ನವು ತಿಂಬ ಆಹಾರವೇ ಕಾರಣ. ಬೇಡದ್ದರೆಲ್ಲಾ ಹಶುವಿಲ್ಲದ್ದರೂದೇ ತಿಂದೊಡೇ ಇದ್ದರೆ, ಆ ತಿಂದ ಆಹಾರವೇ ಅನಾರೋಗ್ಯಕ್ಕೂ ಮೂಲ ಕಾರಣ ಎಂಬ ಸತ್ಯವ ತಿಳುದಿರೇಕು. ಅತಿಯಾದರೆ ಅಮೃತವೂ ವಿಷ. ಒಬ್ಬ ಎಷ್ಟು ತಿನ್ನುತ್ತಾ ಹೇಳುದು ಮುಖ್ಯ ಅಲ್ಲ. ಯಾವ ಯಾವ ಹೊತ್ತಿಲಿ ಎಷ್ಟೆ ಷ್ಟು  ಪ್ರಮಾಣಲ್ಲಿ, ಎಂತರೆಲ್ಲಾ ತಿಂದರೆ ಅಕ್ಕು ಹೇಳಿ ತಿಳುಕೊಂಡು, ಆಹಾರ ಕ್ರಮ ಅನುಸರಿಸೋದು ಒಳ್ಳೆದು. ಉದಿಯಪ್ಪಗಣ ಬ್ರೇಕ್ ಫಾಸ್ಟ್ ರಾಜನ ಊಟದ ಹಾಂಗಿರೇಕಡ. ಅಂಬಗ ಎಷ್ಟು ಪೌಷ್ಠಿಕಾಂಶ ಇಪ್ಪ ಆಹಾರವ ತಿನ್ನುತ್ತೋ ಅಷ್ಟು ಒಳ್ಳೆದು. ಇನ್ನು ಮಧ್ಯಾನ್ಹದ ಊಟ ಸಾಮಾನ್ಯ ಜೆನರ ಊಟದ ಹಾಂಗಿರೇಕು, ಇರುಳಪ್ಪಗಣ ಆಹಾರ ಭಿಕ್ಷುಕರ ಊಟದ ಹಾಂಗಿರೇಕಡ. ಈ ಮೂರು ಹೊತ್ತಿನ ಎಡೇಲಿ ಅಂಬಗಂಬಗ ಕಾಟಾಂಕೋಟಿ ತಿಂಬ ಬಾಯಿ ಚಪಲಕ್ಕೆ ಕಡಿವಾಣ ಹಾಕೇಕು ಹೇಳಿ ಬೇರೆ ಹೇಳೇಡ ಅಲ್ಲದಾ?!

ತ್ರಿವೇಣಿ ವಿ. ಬೀಡುಬೈಲು,
ಮಂಗಳೂರು.

ಸಂಗಾತಿ, ನೀನಾದೆ ನನ್ನ ಬಾಳಿನ ದೊಡ್ಡ ಸಂಗತಿ...! - ಏಪ್ರಿಲ್ ೨೦೧೪ರ ಹವ್ಯಕ ವಾರ್ತೆ ಪುಸ್ತಕದಲ್ಲಿ ಪ್ರಕಟವಾದ ಹಾಸ್ಯ ಲೇಖನ


ಸಂಗಾತಿ, ನೀನಾದೆ ನನ್ನ ಬಾಳಿನ ದೊಡ್ಡ ಸಂಗತಿ...!

ಬಾಳಿಲಿ ಗೆಂಡಿಂಗೆ ಒಂದು ಹೆಣ್ಣು, ಹೆಣ್ಣಿಂಗೆ ಒಂದು ಗೆಂಡು, ಅರ್ಥಾತ್ ಮದುವೆ ಅನಿವಾರ್ಯವೇ ಅಲ್ಲದಾ? ಸರಿಯಾಗಿ ಆಲೋಚನೆ ಮಾಡಿ ನೋಡಿದರೆ ಅನಿವಾರ್ಯ ಅಪ್ಪು ಹೇಳಿದೇ ಹೇಳುಲಕ್ಕು, ಇನ್ನೂ ಕೂಲಂಕುಷವಾಗಿ ಗಮನಿಸಿ ನೋಡಿಯಪ್ಪಗ ಮದುವೆ ಆಯೇಕು ಹೇಳಿ ಏನಿಲ್ಲೆ, ಆದವರ ಅವಸ್ಥೆ ಕಾಣ್ತಿಲ್ಲೆಯಾ ಹೇಳುತ್ತ ನಿರ್ಧಾರಕ್ಕೂ ಬಪ್ಪಲಕ್ಕು! ಮದುವೆ ಆಗಿ ಒಬ್ಬನ ಒಬ್ಬ ಬೆಂಡೆತ್ತುದರ ಕಂಡು, ನೋಡಿ ನೋಡಿ ಬೊಡುದು ಬೇಸರ ಬಂದು ಹೋದವರ ಅನಿಸಿಕೆ-’ಸಂನ್ಯಾಸಿ ಸುಖಿ, ಸಂಸಾರಿ ದುಖಿ:’ ಹೇಳಿ!! ಸುತ್ತಾಮುತ್ತಾ ಇಪ್ಪ ಜೋಡಿಗಳ ಬರೇ ನೋಡಿ ಮಾಂತ್ರ ಸಂಸಾರದ ಬಗ್ಗೆ ಮನಸ್ಸಿಲಿ ಒಂದು ಕ್ಷಣಕ್ಕೆ ಬಂದು ಹೋಪಂತ ವೈರಾಗ್ಯ ಅದು!! ಬರೇ ನೋಡಿದರೆ ಅನುಭವಕ್ಕೆ ಬತ್ತೋ?! ಇಲ್ಲೆನ್ನೆ?! ನಮ್ಮದು ಹಾಂಗಾಗ, ನಾವೂ ಮದುವೆಯಾಗಿ ದಂಪತಿ ಹೇಳಿರೆ ಹೀಂಗಿರೇಕು ಹೇಳಿ ಸಮಾಜಕ್ಕೆ ತೋರಿಸಿ ಆದರ್ಶ ದಂಪತಿಗೊ ಹೇಳ್ಸಿಕೊಳ್ಳೇಕು ಹೇಳಿ ಎಲ್ಲಾ ಗ್ರೇಶುದು..ಮತ್ತೆ ಹೋಗಿ ಬೇರೆವ್ವು ಬಿದ್ದ ಗುಂಡಿಗೆ ಬಿದ್ದಪ್ಪಗ...ಬೇಡಪ್ಪಾ, ಬೇಡ ಇತ್ತು, ನೋಡಿದ ಉದಾಹರಣೆಗಳಿಂದ ಕಲಿಯೇಕಿತ್ತು, ಗೊಂತಿದ್ದೂ ಗೊಂತಿದ್ದು ಮೋಸ ಹೋದೆನ್ನೇ ಹೇಳಿ ಮತ್ತೆ ಹಲುಬುವವ್ವು ಎಷ್ಟು ಜೆನಂಗ ಇಲ್ಲೆ?! ಇನ್ನೊಂಬಂಗೆ ಮಾದರಿ ಆವುತ್ತೆಯಾ ಹೇಳಿ ಗಟ್ಟಿ ಮನಸ್ಸು ಮಾಡಿಕೊಂಡು ಮದುವೆಯೇನೋ ಆಗಿ ಬಿಡ್ತವು! ಸೃಷ್ಠಿ, ಸ್ಥಿತಿ, ಲಯಂಗೊಕ್ಕೂ ಈ ಸಂಬಂಧವೇ ಕಾರಣ! ಗೆಂಡಂಗೆ ಹೆಂಡತಿ, ಹೆಂಡತಿಗೆ ಗೆಂಡ, ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರೋ, ಒಬ್ಬನ ನೆತ್ತರ ಇನ್ನೊಬ್ಬ ಹೀರುವ ಉಂಬುಳುಗಳೋ, ಅಂತೂ ಸಂಬಂಧಲ್ಲಿ ಗೆಂಡಹೆಂಡತಿಗೊ! ’ನೀನನಗಿದ್ದರೆ ನಾ ನಿನಗೆ’ ಈ ತತ್ವವ ಪಾಲಿಸುತ್ತಾ ಪರಸ್ಪರ ಸಹಕರಿಸುತ್ತಾ, ವ್ಯವಹರಿಸುತ್ತಾ, ದಿನನಿತ್ಯ ಆದ್ದರ ಪರಸ್ಪರ ಹೇಳಿಕೊಂಡು, ಅನುಮಾನಕ್ಕೆಡೆ ಇಲ್ಲದ್ದ ಹಾಂಗೆ ನಡಕೊಂಡು, ಒಬ್ಬಂಗೊಬ್ಬ ಆಸರೆ ಆಗಿದ್ದರೆ ಮಾಂತ್ರ ಪರಸ್ಪರ ಪ್ರೀತಿ, ವಾತ್ಸಲ್ಯ, ಸಹಕಾರ, ಕರುಣೆ, ಕಾತುರ ಎಲ್ಲಾ ಇರ‍್ತು ಒಬ್ಬಂಗೆ ಇನ್ನೊಬ್ಬನ ಮೇಲೆ. ಆದರೆ ಎಲ್ಲಾ ಗೆಂಡುಮಕ್ಕೊ ಶ್ರೀರಾಮಚಂದ್ರನ ಹಾಂಗಿಪ್ಪೋರು ಇರ‍್ತವಿಲ್ಲೆ, ಎಲ್ಲಾ ಹೆಮ್ಮಕ್ಕಳುದೇ ಸತ್ಯವಾನ್ ಸಾವಿತ್ರಿ ಹಾಂಗಿಪ್ಪೋರೂ ಇರ‍್ತವಿಲ್ಲೆನ್ನೇ!! ಹಾವು-ಮುಂಗುಸಿ, ಸಿಂಹ-ಜಿಂಕೆ, ಪುಚ್ಚೆ-ಎಲಿ, ಗುರು-ಶಿಷ್ಯ, ಕಳ್ಳ-ಪೊಲೀಸ್, ನಾಯಿ-ಪುಚ್ಚೆ, ಇಲ್ಲೇ ಹೇಳಿಯಾದರೆ ಇಬ್ರೂ ಜೋರಿನವ್ವು - ಹುಲಿ, ಸಿಂಹ, ಚಿರತೆಗಳ ಹಾಂಗೆ ಗುರ್ ಗುರ್ ಹೇಳಿಕೊಂಡೇ ಇಪ್ಪಂತಾ ಗುಣದವ್ವು ಇಲ್ಲೆ ಹೇಳಿಯಾದರೆ ಇಬ್ರೂ ಬ್ಯಾಟರಿ ಮುಗುಕ್ಕೊಂಡು ಬಂದ ರೇಡಿಯೋದ ಹಾಂಗೆ, ಯೇವಾಗಲೂ, ’ಎನ್ನಂತ ಒಳ್ಳೆ ಜೆನಕ್ಕೆ ಇಂತದ್ದೇ/ಇಂತವ್ವೇ ಸಿಕ್ಕೇಕಾತಾ? ಎಲ್ಲಾ ಎನ್ನ ಪೂರ್ವ ಜನ್ಮದ ಕರ್ಮ’ ಹೇಳಿ ಚಂಯಿ ಚಂಯಿ ಹೇಳಿಕೊಂಡು, ಹಣೆ ಹಣೆ ಚಚ್ಚಿಕೊಂಡಿಪ್ಪವ್ವು! ಇನ್ನು ಕೆಲವು ಕಡೆಗಳಲ್ಲಿ ಆರಾದರೊಬ್ಬ ರೇಡಿಯೋದ ಹಾಂಗೆ ಮಾತಾಡಿಕೊಂಡೇ..., ಇನ್ನೊಬ್ಬ ಕೆಮಿಗೆ ಕೇಳಿ ಕೂಡಾ ಪ್ರತಿಕ್ರಿಯೆ ನೀಡದೇ, ಮಾತಾಡಿದರೆ ಎಂತ ಎಡವಟ್ಟಾವುತ್ತೋ, ಎಲ್ಲಿ ಸಿಕ್ಕಿಹಾಕಿಕೊತ್ತೆನೋ, ಇಲ್ಲೆ ಹೇಳಿಯಾದರೆ ಎಂತಕೆ ಸುಮ್ಮಗೆ ಉತ್ತರ ಕೊಡುದು!? ಮಾತಿಂಗೆ ಮಾತು ಕೊಟ್ಟರಲ್ಲದಾ ಈ ಜೆಗಳ ಜಂಜಾಟ ಎಲ್ಲಾ ಬಪ್ಪದು, ಬೆಂಕಿಗೆ ತುಪ್ಪ ಸುರುದಾಂಗೆ ಅಕ್ಕು ಆನುದೇ ಮಾತಾಡಿದರೆ, ಆರಿಂಗೆ ಬೇಕಪ್ಪಾ ಇದೆಲ್ಲಾ, ಮಾತಾಡುದರ ಎಲ್ಲಾ ಬೇಕಾದಷ್ಟು ಮಾತಾಡಿ ಮುಗುಶಲಿ, ಆನು ಮನಸ್ಸಿಂಗೆ ತೆಕ್ಕೊಳ್ಳದ್ದರೆ ಮುಗುದತ್ತು ಹೇಳಿ ತುಟಿ ಬಿಗಿಹಿಡುದಿಕೊಂಡಿಪ್ಪವ್ವು-ಇತ್ಯಾದಿ ಇತ್ಯಾದಿ ಬಗೆವ್ವಿರ‍್ತವು ಗೆಂಡ ಹೆಂಡತಿಯಕ್ಕೋ ಹೇಳಿ ವಿಂಗಡಿಸುಲಕ್ಕು!! ಈ ಎಲ್ಲಾ ಟೈಪಿನವ್ವು ಒಂದಲ್ಲಾ ಒಂದು ರೀತಿಲಿ ಅವರ ಕೈಹಿಡುದವಕ್ಕೆ ಡೇಂಜರೇ! ಈ ಎಲ್ಲಾ ವಿಧಂಗಳೊಟ್ಟಿಂಗೆ, ಒಂದೇ ಗುಣಂಗಳ ಹೊಂದಿದ ಇಬ್ರೂ ಪರಸ್ಪರ ವಿಧೇಯರೇ ಆಗಿಪ್ಪ, ಪರಸ್ಪರ ಹೊಂದಾಣಿಕೆ ಇಪ್ಪ, ಕಾಳಜಿ ಇಪ್ಪ, ನಮ್ಮಲ್ಲಿ ಮೇಲು-ಕೀಳು, ಭೇದ-ಭಾವ ಇಲ್ಲೆ, ನಾವಿಬ್ಬರೂ ಒಂದೇ, ದೇಹ ಎರಡು, ಪ್ರಾಣ ಒಂದು ಹೇಳಿ ಸ್ನೇಹಿತರ ಹಾಂಗಿಪ್ಪ ಎಷ್ಟೋ ಜೋಡಿಗೊ ಸುಖಲ್ಲಿದ್ದವು!  

     ಕೆಲವೊಂದು ಬಾಳಸಂಗಾತಿಗೊಕ್ಕೆ ಪರಸ್ಪರ ಒಂದೂ ಕ್ಷಣವೂ ಬಿಟ್ಟಿಪ್ಪಲೆಡಿತ್ತಿಲ್ಲೆ! ಗಳಿಗೆಗೊಂದರಿ ಫೋನು ಮೆಸೇಜು, "ಎಲ್ಲಿದ್ದೆ?", "ಹೇಂಗಿದ್ದೆ?" , "ಎಂತ ಮಾಡ್ತಾ ಇದ್ದೆ?" , "ಬೋರಾವುತ್ತಾ?" , "ಬರೇಕಾ?" , "ಹುಷಾರಿದ್ದೆಯಾ?" , "ಐ ಮಿಸ್ ಯೂ" ಹೇಳಿ ಎಲ್ಲಾ! ಇಬ್ರೂ ಹೀಂಗಿಪ್ಪ ಸ್ವಭಾವದವ್ವಾದರೆ ಪರ್ವಾಗಿಲ್ಲೆ...ಇಲ್ಲೆ ಹೇಳಿಯಾದರೆ ಗತಿ ಗೋವಿಂದ...ಎಲ್ಲಿಯಾದರು ಗೆಂಡ ಅಥವಾ ಹೆಂಡತಿ ಪ್ರೀತಿಲೇ ಹೀಂಗೆ ಅಂಬಗಂಬಗ ಸಂಪರ್ಕಿಸಿಕೊಂಡೇ ಇದ್ದತ್ತು ಹೇಳಿಯಾದರೆ ಈ ಅತಿ ಪ್ರೀತಿಯೇ ಅವಿಬ್ರಿಂಗೆ ಮುಳುವಾವುತ್ತು! "ಎಂತಕೆ ಹೀಂಗೆ ಕಾಲು, ಮೆಸ್ಸೇಜು ಮಾಡಿ ವಿಚಾರ‍್ಸಿಕೊಂಡಿಪ್ಪದು...ಆರೊಂಟ್ಟಿಂಗಾರೂ, ಎಲ್ಲಿಗಾದರೂ ಹೋದರೆ ಹೇಳಿ ಎನ್ನ ಮೇಲೆ ಅನುಮಾನವಾ?" ಹೇಳಿ ಶುರುವಾವುತ್ತು ಚರ್ಚೆ. ಹಾಂಗೆ ಹೇಳಿ ಶುರು ಅಪ್ಪ ಇವರ ಮಾತುಕತೆ ಹೋಯಿಕೈವರೆಗೂ ಹೋದರೂ ಹೋತು...! ಮತ್ತೆ ಕಣ್ಣೀರ ಧಾರೆಯೇ ಮುಂದಿನ ಕತೆ! ಒಬ್ಬನ ಒಬ್ಬ ಅರ್ಥ ಮಾಡಿಕೊಂಬ ಗೋಜಿಗೇ ಹೋವುತ್ತವಿಲ್ಲೆ!  "ಎಷ್ಟೆಲ್ಲಾ ಒಳ್ಳೊಳ್ಳೆ ಸಂಬಂಧಗಳ ಬಂದದರ ಬಿಟ್ಟು ಹೋಗಿ ಹೋಗಿ ನಿಂಗಳ ಮದುವೆ ಆದೆನ್ನೆ" ಹೇಳಿ ಹೆಂಡತಿ ಹೇಳಿದರೆ, "ಹೋಗಿ ಹೋಗಿ ನಿನ್ನ ಕಟ್ಟಿಕೊಂಡು ಸೋತೆನ್ನೇ" ಹೇಳಿ ಗೆಂಡ! ಹೀಂಗೇ ಮುಂದುವರುದು ಮೊದಾಲು ಹಾಲು ಜೇನಿನಂತಿದ್ದ ಅವರಿಬ್ಬರ ಸಂಬಂಧ ಹಾವು-ಮುಂಗುಸಿ ತರ ಆಗಿಬಿಡ್ತು! ಇನ್ನು ಸಿಂಹ-ಜಿಂಕೆಯ ಹಾಂಗಿಪ್ಪ ಸತಿಪತಿ ಕತೆಗೆ ಬಪ್ಪ! ಇಲ್ಲಿ ಒಂದೋ ಗೆಂಡ ಸಿಂಹ, ಇಲ್ಲೆ ಹೇಳಿಯಾದರೆ ಹೆಂಡತಿ ಸಿಂಹಿಣಿ, ಮತ್ತೆ ಆರು ಹೆದರುತ್ತವೋ ಅವ್ವು ಜಿಂಕೆ!! ಕೆಲವು ದಿಕ್ಕೆ ಗೆಂಡ ಜೋರು, ಕೆಲವು ದಿಕ್ಕೆ ಹೆಂಡತಿ ಜೋರು! ಈ ಎರಡೂ ಸ್ಥಿತಿ ಇಬ್ರಿಂಗೂ ಭಯಂಕರ ಅನುಭವವೇ! ಒಂದೋ ಹೆಂಡತಿ ಜೋರಿಂದಾದರೆ, ಗೆಂಡನಾದವ "ಅಮಾವ್ರ ಗೆಂಡ" ಹೇಳಿ ಬಿರುದು ಪಡೆತ್ತ ಮತ್ತೆ ಅವನ ಹಿಂದದ, ಮುಂದಂದ ಅವನ ಸಹೋದ್ಯೋಗಿಗಳ ಕೈಯಿಂದ, ಫ್ರೆಂಡ್‍ಗಳ ಕೈಯಿಂದ ಕರೆಸಿಕೊಳ್ತ! ಅವನ ಈ ಸ್ಥಿತಿ ಅವಂಗೆ ನುಂಗಲಾರದ ತುತ್ತಾಗಿರ‍್ತು! ಹೆಂಡತಿ ಜೋರಿದ್ದರೆ ಅದಕ್ಕೆ ಅದರ ಗೆಂಡನೋ, ಅವನ ಮನೆವ್ವೋ ಅಥವಾ ಆ ಹೆಮ್ಮಕ್ಕಳ ಗೊಂತಿಪ್ಪ ಜೆನಂಗಳೋ, "ಮಹಾ ಕಾಳಿ" ಹೇಳಿಯೋ, "ರಾಟಾಳಿ" ಹೇಳಿಯೋ  ನಾಮಕರಣ ಮಾಡಿಬಿಡ್ತವು! ಗೆಂಡ ಜೋರಿನವನಾದರೆ ಹೆಂಡತಿಯ ಬಗ್ಗೆ ಎಲ್ಲೋರಿಂಗೂ ಕನಿಕರ...ಅದಾದ ಕಾರಣ ಹಾಂಗಿಪ್ಪ ಜೋರಿನ ಗೆಂಡನೊಟ್ಟಿಂಗೆ ಬದುಕುತ್ತಾ ಇದ್ದು, ಆನಾದರೆ ಯೇವಾಗ್ಲೋ ನೀನಲ್ಲದ್ದರೆ ನಿನ್ನಜ್ಜ ಹೇಳಿ ಬಿಟ್ಟು ಹೋಗಿಬಿಡ್ತಿತ್ತೆ ಹೇಳಿ ಎಲ್ಲಾ ಹೇಳಿ ಅದಕ್ಕೆ ಇನ್‍ಡೈರೆಕ್ಟಾಗಿ ಕೀ ಕೊಟ್ಟು ಅದರ ತಲೆಕೆಡಿಸಿಬಿಡ್ತವು! ಮತ್ತೆ ಅದರ ಸ್ಥಿತಿ ಶೋಚನೀಯವೇ! ಈಗ ಗುರು ಶಿಷ್ಯರ ಹಾಂಗಿಪ್ಪ ಜೋಡಿಗಳ ಕಥೆ ವ್ಯಥೆ! ಇಲ್ಲಿ ಒಂದೋ ಗೆಂಡ ಗುರುವಾಗಿರ‍್ತ, ಇಲ್ಲದ್ದರೆ ಅವನ ಅರ್ಧಾಂಗಿ ಅವಂಗೆ ಗುರುವಾಗಿರ‍್ತು! ಮದುವೆಗೆ ಮೊದಾಲು ಮನೆ, ಅಬ್ಬೆ, ಅಪ್ಪಂಗೆ, ಅಣ್ಣ, ತಮ್ಮ, ಅಕ್ಕತಂಗೆಗೊಕ್ಕೆಲ್ಲಾ ಅಚ್ಚುಮೆಚ್ಚಿನವ ಆಗಿತ್ತವ, ಎಲ್ಲೋರ ಸಂಪರ್ಕ ಮಡಿಕ್ಕೊಂಡು ಪ್ರೀತಿಂದ ಅವರೊಟ್ಟಿಂಗೆ ಓಡಾಡಿಕೊಂಡಿದ್ದವ, ಮದುವೆ ಆದ ಕ್ಷಣಂದಲೇ ಹೆಂಡತಿಗೆ ದಾಸ ಆಗಿಬಿಡ್ತ! ಹೆಂಡತಿ ಹಾಕಿದ ಲಕ್ಷ್ಮಣ ರೇಖೆಯ ಅಪ್ಪಿ ತಪ್ಪಿಯೂ ದಾಂಟುತ್ತನ್ನಿಲ್ಲೆ! ಹೆಂಡತಿ ಮೇಲೆ ಅಪಾರ ನಂಬಿಕೆ, ಅದು ಹೇಳಿದ್ದೆಲ್ಲವೂ ಸತ್ಯವೇ, ವೇದವಾಕ್ಯವೇ ಅವಂಗೆ! ಅದರ ಕಣ್ಣಿಂದ ಒಂದು ಹನಿ ನೀರು ಬಂದರೂ ಸಹಿಸುಲೆಡಿತ್ತಿಲ್ಲೆ ಅವಂಗೆ! ಹುಟ್ಟಿದ ಲಾಗಾಯ್ತು ಅಬ್ಬೆ, ಅಪ್ಪನೊಟ್ಟಿಂಗೇ ಇದ್ದಲ್ಲಿಂದ, "ಬಾಡಿಗೆ ಮನೆ ಮಾಡಿ ನಾವು ಬೇರೆ ಇಪ್ಪಾ" ಹೇಳಿ ಹೆಂಡತಿ ಒಂದೇ ಒಂದು ಸಲ ರಾಗ ಎಳದರೂ "ಎಸ್" ಹೇಳಿ ಅದರ ಆರ್ಡರಿನ ಪಾಸು ಮಾಡಿ ಏಕ್‍ದಂ ಅದರ ಕಟ್ಟಿಕೊಂಡು ಹೋಗಿ ಬೇರೆ ಕೂಪವ್ವು ಎಷ್ಟು ಜೆನಂಗಳೂ ಇದ್ದವು! ಅಥವಾ ಇಪ್ಪ ಆಸ್ತಿಲಿ ಗೆಂಡನ ಕೈಲಿ ಪಾಲು ಕೇಳಿಸಿ ಬೇರೆ ಮನೆ ಮಾಡಿ ಕೂದವ್ವು ಎಷ್ಟು ಜೆನಂಗ ಇಲ್ಲೆ?! ಅಂಬಗ ಅಬ್ಬೆ, ಅಪ್ಪ, ಒಡಹುಟ್ಟಿದವರ ಕಣ್ಣೀರು ನೆಲಕ್ಕಂಗೆ ಬೀಳೇಕಷ್ಟೇ!! ಮತ್ತೆ ಎಷ್ಟೋ ವರ್ಷ ಕಳುದು ಈ ಗೆಂಡ ಮಹಾಶಯಂಗೆ ಜ್ಞಾನೋದಯ ಅಪ್ಪಾಗ ಹೆಂಡತಿ ಹೇಳಿದ್ದರ ಕೇಳಿ ಕೆಟ್ಟೆ ಹೇಳಿ ಅನ್ನಿಸಿಯಪ್ಪಗ ಸಮಯ ಮೀರಿ ಹೋಗಿರ‍್ತು, ಅಬ್ಬೆ, ಅಪ್ಪ ಫೋಟೋದೊಳಾದಿಕ್ಕಿ ಇರ‍್ತವು! ಒಡಹುಟ್ಟಿದವರೊಟ್ಟಿಂಗೆ ಸಂಪರ್ಕ ಮಡಿಕ್ಕೊಳ್ಳದ್ದೇ, ಅವ್ವೆಲ್ಲಿದ್ದವು, ಹೇಂಗಿದ್ದವು ಹೇಳಿಯೂ ಗೊಂತಿರ‍್ತಿಲ್ಲೆ!! ಇನ್ನು ಗೆಂಡ ಗುರುವಿನ ಸ್ಥಾನಲ್ಲಿ ಇದ್ದರೆ ಅವ ಹೆಂಡತಿ ಕೈಲಿ ’ಎ’ ಟೂ ’ಝೆಡ್’ ಕೆಲಸಂಗಳ ಎಲ್ಲಾ ಮಡ್ಸುದು, ಅದರ ಅಪ್ಪನ ಮನೆಂದ ಪೈಸೆ, ಒಡವೆ ತಪ್ಪಲೆ ಕಳುಸುದು, ಹೆಂಡತಿ ವಿಧೇಯ ಶಿಷ್ಯೆಯ ಹಾಂಗೆ ಅವ ಹೇಳಿದ ಕೆಲಸಂಗಳ ಎಲ್ಲಾ ಮಾಡುದು, ಅಪ್ಪನ ಮನಗೆ ಹೋಗಿ ಅವ ಕೇಳಿದ್ದರ ತಂದು ಅವನ ವಶಕ್ಕೆ ಒಪ್ಸುದು! ಅಪ್ಪನ ಮನೆವ್ವು ಪಾಪ ಮಗಳು ಸುಖವಾಗಿರಾಲಿ ಹೇಳಿ ಪೈಸೆಯನ್ನೋ, ಬಂಗಾರವನ್ನೋ, ಒಟ್ಟಾರೆ ಅದು ಕೇಳಿದ್ದರ ಕೊಟ್ಟು ಕಳುಶುದು! ಗೆಂಡನ ಆಸೆಬುರುಕುತನ, ಸ್ವಾರ್ಥ ಎಲ್ಲಾ ತಿಳುದ ಮತ್ತೆ ಹೆಂಡತಿಗೆ ಜ್ಞಾನೋದಯ ಅಪ್ಪಾಗ ಅಪ್ಪನ ಮನೆಯ ಆಸ್ತಿಯ ಪೂರಾ ನುಂಗಿ ನೀರುಕುಡುದಾಗಿರ‍್ತು ತನ್ನ ಗೆಂಡಂಗೆ! ಪರಿಸ್ಥಿತಿ ಕೈಮೀರಿ ಹೋದ ಮತ್ತೆ ಪರಿತಪಿಸಿ ಎಂತ ಪ್ರಯೋಜನ?! ಇನ್ನು ಕಳ್ಳ ಪೊಲೀಸ್ ಕತೆ! ಗೆಂಡಂಗೋ, ಇಲ್ಲೆ ಹೇಳಿಯಾದರೆ ಹೆಂಡತಿಗೆ ಒಬ್ಬನ ಮೇಲೊಬ್ಬಂಗೆ ಏವಾಗಲೂ ಡೌಟೋ ಡೌಟು! ಹೇಂಗಾರೂ ಮಾಡಿ ಸಿಕ್ಕುಸಿಬೀಳಿಸೇಕು ಹೇಳಿ ಒಬ್ಬನ ಹಿಂದಂದ ಇನ್ನೊಬ್ಬ ಪೊಲೀಸನ ಹಾಂಗೆ ಕಣ್ಣಿಟ್ಟಿರ‍್ತವು! ಹೋದಲ್ಲಿಂದ ತಪಾಸಣೆ ಮಾಡುಲೆ ಹೇಳಿ ಮನಗೆ ಬೇಗ ವಾಪಸ್ಸು ಬಪ್ಪದು, ಆರಾರತ್ತರೆ ಮಾತಾಡಿದ್ದವು ಹೇಳಿ ಮೊಬೈಲಿನ ಲಾಗಿನ ಚೆಕ್ ಮಾಡುದು, ಕೆಲಸ ಮಾಡ್ತಾ ಇಪ್ಪ ಆಫೀಸಿಂಗೂ ಬಂದು ಒಂದೆರಡು ರೌಂಡು ಹೊಡದು, ಸಹೋದ್ಯೋಗಿಗಳೊಟ್ಟಿಂಗೆ ಓರೆಯಾಗಿ ಮಾತಾಡಿಕ್ಕಿ, ರಜ್ಜ ಹೊತ್ತು ಕಾವಲು ಕೂದು ಸಿ.ಬಿ.ಐ ಕೆಲಸ ಮಾಡಿಕ್ಕಿ ಹೋಪದು, ದಾರಿಲಿ ಹೋಪ ಕೂಸುಗಳ, ಹೆಮ್ಮಕ್ಕಳ ಮೇಲೆ ಗೆಂಡನ ಕಣ್ಣು ಬೀಳುತ್ತಾ ಹೇಳಿ ಹೆಂಡತಿ ಹದ್ದಿನ ಕಣ್ಣಿಲಿ ನೋಡುದು, ಒಟ್ಟಾರೆ ಹೀಂಗೆಲ್ಲಾ ಪರಸ್ಪರ ಹೊಂಚು ಹಾಕುದು, ಆಪಾದನೆ ಹೊರುಸುದು, ವಾದ ಮಾಡುದು, ಮನೆಲಿ ಒಬ್ಬನ ಒಬ್ಬ ಕೂಡಿ ಹಾಕುದು ಇತ್ಯಾದಿ ಇತ್ಯಾದಿ! ಇಂತಹವರ ಚಾಲಾಕುತನದ ಎದುರು ನಿಜವಾದ ಕಳ್ಳ, ಪೊಲೀಸ್, ಸಿ.ಬಿ.ಐಯವ್ವು ದಂಡ! ಪಾತ್ರೆ ಪಗಡಿ, ಲಟ್ಟಣಿಗೆ, ಸಟ್ಟುಗಂಗ ಮಾತಾಡುವ ಕೆಲವು ಮನೆಯ ದಂಪತಿಗೊ,"ಜೆಗಳ, ಹುಸಿಕೋಪ, ಮುನಿಸು, ರಾಜಿ ಇಲ್ಲದ್ದ ದಾಂಪತ್ಯ ಎಂತರಾ...?!" ಹೇಳಿ ರಾಗ ಎಳಾದು, "ನಮ್ಮ ಸಂಸಾರ ಆನಂದ ಸಾಗರ" ಹೇಳಿ ಜೆಂಭಕೊಚ್ಚಿಕೊಂಬುವ್ವವ್ವಿದ್ದವು!!

    ದಿನಪತ್ರಿಕೆಗಳಲ್ಲಿ, ಮಾಸಪತ್ರಿಕೆಗಳಲ್ಲಿ, ಟಿ.ವಿಯ ಹಾಸ್ಯ ಕಾರ್ಯಕ್ರಮಂಗಳಲ್ಲಿ ಓದುಗಂಗೆ/ವೀಕ್ಷಕಂಗೆ ಹಾಸ್ಯದ ರಸದೌತಣ ಕೊಡುದು ಆ ಬರಹಗಾರರ/ಭಾಷಣಕಾರರ ಹಾಸ್ಯ! ಅವಕ್ಕೆಲ್ಲಾ ಓದುಗರ/ಸಭಿಕರ ಮನರಂಜಿಸುಲೆ ಬೇಕಾಬಿಟ್ಟಿಯಾಗಿ ಸಿಕ್ಕುವ ವಸ್ತುವೇ ಗೆಂಡ ಹೆಂಡತಿ ವಿಷಯಂಗೊ! ಅಲ್ಲಿ ಬರದ, ಭಾಷಣಲ್ಲಿ ಹೇಳುವ ಹಾಸ್ಯ ತುಣುಕುಗೊ ಎಲ್ಲಾ ದಂಪತಿಗಳ ಎಡವಟ್ಟುಗಳೇ! ಓದಿದ/ಕೇಳಿದ ಎಲ್ಲರನ್ನೂ ಒಂದು ಕ್ಷಣಕ್ಕೆ ಪೇಚಿಗೆ ಸಿಕ್ಕಿಸಿಬಿಡ್ತವು! ಎಲ್ಲವೂ ಒಂದಲ್ಲಾ ಇನ್ನೊಂದು ಮನೆಲಿ ನಿತ್ಯ ನಡವ ಘಟನೆಗಳೇ! ಎಲ್ಲೋರ ಮನೆ ದೋಸೆಯೂ ತೂತೇ! ಎಲ್ಲೋರೂ ತಮ್ಮ ತಮ್ಮ ಮನೆಲಪ್ಪ ಕತೆಗಳನ್ನೇ ಓದಿ/ಕೇಳಿ ನೆಗೆ ಮಾಡುದೇ ಮಾಡುದು! ಅಷ್ಟು ನೆಗೆಪಾಟಲಿನ ವಸ್ತುವಾಗಿ ಬಿಟ್ಟಿದು ಗೆಂಡ ಹೆಂಡತಿಯಕ್ಕಳ ಕತೆಗೊ! ಈ ಮೇಲೆ ಆನು ಕೊಟ್ಟ(ಹಾವು-ಮುಂಗುಸಿ, ಸಿಂಹ-ಜಿಂಕೆ.....) ಉದಾಹರಣೆಗಳಲ್ಲಿ ನಿಂಗೊ ಯಾವ ಗುಂಪಿಂಗೆ ಸೇರಿದವ್ವು ಹೇಳಿ ನಿಂಗಳೇ ಗೇಶಿಗೊಂಡು ಅಂತೆ ಒಂದರಿ ನೆಗೆ ಮಾಡಿಬಿಡಿ ಆತಾ? ಇಲ್ಲಿ ಬರದ್ದು ನಿಂಗಳ ಜೀವನಲ್ಲಿ ಆಗಿದ್ದರೆ ಅದು ಕಾಕತಾಳೀಯ ಅಷ್ಟೇ! ಇದು ನಮ್ಮಲ್ಲಿ ಆರನ್ನೂ ಉದ್ದೇಶಿಸಿ ಬರದ್ದಲ್ಲ ಆತಾ!

    ಕೆಲವು ಜೆನಂಗ ಗ್ರೇಶುವ ಹಾಂಗೆ ಸಂನ್ಯಾಸಿ ಸುಖಿಯೂ ಅಲ್ಲ, ಸಂಸಾರಿ ದುಖಿ:ಯೂ ಅಲ್ಲ! ಗೆಂಡ ಹೆಂಡತಿ ಮೊದಾಲು ಗೆಳೆಯರಯೇಕು, ಪರಸ್ಪರರ ಇಷ್ಟಂಗಳ, ಕಷ್ಟಂಗಳ ತಿಳುದುಕೊಳ್ಳೇಕು, ವಿಚಾರ ವಿನಿಮಯ ಮಾಡಿಕ್ಕೊಳ್ಳೇಕು, ಪರಸ್ಪರ ಕಷ್ಟಂಗಳಿಗೆ ಸ್ಪಂದಿಸೇಕು, ಅವಂಗೆ/ಅದಕ್ಕಾದ ಬೇನೆ, ಕಷ್ಟ ಎನ್ನದು ಹೇಳುತ್ತ ಕಾಳಜಿ ಇರೇಕು, ಎಲ್ಲದರಲ್ಲೂ ಸಂತೃಪ್ತಿ ಕಾಣೇಕು, ಆನೇ ಮೇಲು, ನೀನು ಕೀಳು ಹೇಳಿ ನಡಕೊಂಬಲಾಗ, ಪ್ರತಿಯೊಬ್ಬಂಗೂ ಅವಂದೇ ಆದ ಸ್ವಾತಂತ್ರ್ಯ ಇದ್ದು ಅದು ಒಂದು ಮಿತಿಲಿರೇಕು ಹಾಂಗೆ ಅದರ ಪರಸ್ಪರ ಒಪ್ಪಿಕೊಳ್ಳೇಕು, ತಾನು ಹೇಳಿದ್ದೇ ಅಂತಿಮ, ಆನು ಹಾಕಿದ ಗೆರೆಯ ಆರೂ ದಾಂಟುಲಾಗ, ಎನ್ನಿಷ್ಟದ ಹಾಂಗೇ ನಡಯೇಕು ಹೇಳುತ್ತ ಅಹಂ ಇಬ್ರಿಂಗೂ ಇಪ್ಪಲಾಗ, ಪರಸ್ಪರ ಯಾವ ವಿಷಯಲ್ಲೂ ಹದ್ದುಮೀರಿ ಹೋಪಲಾಗ, ಪರಸ್ಪರ ಸಮಯಕೊಟ್ಟುಗೊಂಡು, ಒಬ್ಬನ ಒಬ್ಬ ಸರಿಯಾಗಿ ಅರ್ಥಮಾಡಿಕೊಂಬದು-ಹೀಂಗಿಪ್ಪ ದಂಪತಿಗಳ ಜೀವನ ಸುಖಮಯವಾಗಿರ‍್ತು, ಹೀಂಗಿಪ್ಪ ಸಂಸಾರಿ ಸುಖಿ ಆಗಿಕ್ಕಲ್ಲದಾ?! ಅಲ್ಲಾ ಇದರೆಡೆಲಿಯೂ ಎಂತಾರೂ ಅಸಮಾಧಾನಕ್ಕೆ ಕಾರಣ ಅಪ್ಪಂತಾ ಸಂಗತಿ ಬಕ್ಕಾ?!

ತ್ರಿವೇಣಿ ವಿ ಬೀಡುಬೈಲು
Mangalooru.

Wednesday, February 25, 2015

ಹವಾನಿಯಂತ್ರಿತ ಹೊಟೇಲಿಲಿ ಒಂದು ದಿನ...-ಹವ್ಯಕ ವಾರ್ತೆ ಮಾರ್ಚ್ ೨೦೧೩ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಒಂದು ದಿನ ಮಕ್ಕೊ ಎನ್ನ ಹತ್ತರೆ ಹೇಳಿದವು,"ಅಮ್ಮಾ, ಎಂಗಳ ಕ್ಲಾಸ್ ಮೇಟ್ಸ್ ಎಲ್ಲಾ ಎಷ್ಟು ಸರ್ತಿ ದೊಡ್ಡ ದೊಡ್ಡ ಎ.ಸಿ ಹೋಟೆಲಿಂಗೆಲ್ಲಾ ಹೋವುತ್ತವು ಗೊಂತಿದ್ದಾ,ಅಲ್ಲಿಯೇ ಬರ್ತ್ ಡೇ ಪಾರ್ಟಿ,ಅಪ್ಪ ಅಮ್ಮನ ಮ್ಯಾರೇಜ್ ಆನಿವರ್ಸರಿ,ವಾರಕ್ಕೊಂದರಿ ಹಾಂಗಿಪ್ಪ ಹೋಟೇಲಿಲೆಲ್ಲಾ ಉಂಬದು ಎಲ್ಲಾ ಎಲ್ಲಾ ಮಾಡ್ತವು,ಅಲ್ಲಿಗೆ ನಾವು ಎಲ್ಲಾ ಹೋಗಿ ಸೆಲಬ್ರೇಟ್ ಮಾಡೇಕು ಹೇಳಿ ಎಂಗೊ ಹೇಳ್ತಿಲ್ಲೆಯಾ,ಬಟ್ ಒಂದರಿ ನಾವು ಹೋಪಮ್ಮಾ,ಅಪ್ಪಂಗೆ ಹೇಳಿ ಒಪ್ಪಿಸು"ಹೇಳಿ ರಾಗ ಎಳದು ಎನ್ನ ಮಧ್ಯವರ್ತಿ ಮಾಡಿ ಬಿಟ್ಟವು! ಸ್ಪೆಷಲಿ ಅಪ್ಪನ ಮೂಲಕವೇ ಮಕ್ಕೊಗೆ ಆಯೇಕ್ಕಾದ ಕೆಲಸಂಗಳ ಇಬ್ಬರಿಂಗೂ ಒಂದು ರಜ್ಜವ್ವೂ ಬೇನೆ ಆಗದ್ದ ಹಾಂಗೆ ಸಂಧಾನ ಮಾಡುವ ಈ ಅಮ್ಮನ ಬ್ರೋಕರ್ ಕೆಲಸ ಮಹಾ ಕಷ್ಟದ್ದು! ಅನುಭವಿಸಿದವಕ್ಕೆ ಗೊಂತಿಕ್ಕು!

ಎನ್ನ ಕೈಯಾರೆ ಮಾಡಿದ ಮನೆ ಊಟವೇ ಲಾಯ್ಕ ಹೇಳಿ ದ್ಯೂಟಿ ಮುಗುಶಿ ಮಧ್ಯಾನ್ಹವೋ, ಇರುಳೋ, ಹೊತ್ತು ಮೀರಿದರೂ, ಬೇರೆ ಹೋಟೆಲಿಲ್ಲೆಲ್ಲಾ ಉಣ್ಣದ್ದೆ ಸೀದಾ ಮನಗೇ ಬಂದು ಉಂಬ ಇವರ ಹತ್ತರೆ ಹೇಂಗಪ್ಪಾ ವಿಷಯ ಪ್ರಸ್ತಾಪ ಮಾಡುದು ಹೇಳಿ ಎನ್ನ ತಲೆಬೆಶಿ ಒಂದು ಹೊಡೇಲಿ, ಈ ಮಕ್ಕಳ ಒತ್ತಾಯ ಇನ್ನೊಂದು ಕರೇಲಿ. ಸಣ್ಣಂದಲೇ ಭಂಗಲ್ಲಿ ಬೆಳದು ಬಂದ ಕಾರಣ ಕಷ್ಟ ಪಟ್ಟು ದುಡುದ ಪೈಸೆಯ ಖರ್ಚು ಮಾಡುವಾಗಲೂ ರಜ್ಜ ಜಾಗ್ರತೆ ಎಂಗೊಗೆ. ಈಗಾಣ ಗಂಡುಮಕ್ಕೊಗೆಲ್ಲಾ ಅವರವರ ಹೆಂಡತಿಯಕ್ಕೊ ಅಲ್ಲಿಗೆ ಹೋಯೇಕು, ಇಲ್ಲಿಗೆ ಹೋಯೇಕು ಹೇಳಿ ಕೇಳೇಕು,ಮನವೊಲಿಸೇಕು ಹೇಳಿಯೇ ಇಲ್ಲೆ.ಅವ್ವೇ ಹೆಂಡತಿ ಮಕ್ಕಳ ಎಲ್ಲಾ ದಿಢೀರಾಗಿ ಹೆರಡುಲೆ ಹೇಳಿ,ಸರ್ ಪ್ರೈಸ್ ಕೊಟ್ಟು,ಕಾರಿಲೋ,ಸ್ಕೂಟರಿಲೋ ಕೂರಿಸಿಯೊಂಡು ರೊಂಯ್ಯನೆ ಹೋಗಿ ಬೇಕು ಬೇಕಾದ್ದರೆಲ್ಲಾ ತಿಂದು,ತೇಗಿ ಬತ್ತವು!ಆದರೆ ಈ ೬೦,೭೦ರ ದಶಕಗಳಲ್ಲಿ ಹುಟ್ಟಿದ ಕೆಲವು ಗೆಂಡಂದಿರ ಈ ಹೆಂಡತಿ, ಮಕ್ಕೊ ಹೇಂಗಾರು ಮಾಡಿ ಅವರ ಒಪ್ಪಿಸಲೇ ಬೇಕಾದಂತಹ ಪರಿಸ್ಥಿತಿ!ಅವ್ವೇ ಆಗಿ ಈಗಿನ ಕಾಲಕ್ಕನುಗುಣವಾಗಿ ನಡಕೊಂಬಂತಹ ಮನೋಭಾವವೂ ಅವರಲ್ಲಿರುತ್ತಿಲ್ಲೆ! ಈಗ ಎನಗೆ ಈ ಮಕ್ಕಳ ಅಪ್ಪನ ಒಪ್ಪಿಸುದೊಂದೇ ದೊಡ್ಡ ಕೆಲಸ!ಮುಂದಿನ ಕೆಲಸ ಸುಲಾಭವೇ ಎಂತಕೆ ಹೇಳಿರೆ ಅಂತಹ ’ಹೋಟೇಲ್’ಯಿಂಗೆ ಹೋಗಿ ಅಲ್ಲಿಯಾಣ ವ್ಯವಸ್ಥೆಗಳ ಎಲ್ಲಾ ನೋಡಿಯಾದರೂ  ಬರೇಕು ಒಂದರಿ ಹೇಳಿ ಎನಗೂ ಅಂದೇ ಮನಸ್ಸಿಲ್ಲಿ ಮೂಡಿದ ಆಸೆಯ ಒಳವೇ ಬಚ್ಚಿಟ್ಟುಕೊಂಡಿತ್ತೆ! 

     ಒಂದು ದಿನ ಮಧ್ಯಾನ್ಹ ಎನ್ನ ಅಡುಗೆಯ ಹೊಗಳಿಯೊಂಡು ಉಂಡೊಂಡಿಪ್ಪಾಗ ಇದೇ ಒಳ್ಳೇ ಟೈಂ ಹೇಳಿ ಧೈರ್ಯ ಮಾಡಿ ಇವರ ಹತ್ತರೆ ಕೇಳಿಯೇಬಿಟ್ಟೆ,"ಅಪ್ಪೋ, ಈ ಮಕ್ಕೊ ಎಲ್ಲಾ ಆಸೆ ಪಡ್ತವು, ಒಂದರಿ ಆ ದೊಡ್ಡ ಎ.ಸಿ. ಹೋಟೇಲಿಂಗೆ ಹೋಪನಾ,ಈ ಮಕ್ಕಳ ಶಾಲೆಲಿ ಬೇರೆ ಮಕ್ಕೊ ಎಲ್ಲಾ ಅಲ್ಲಿಗೆ ಹೋದ ಶುದ್ಧಿ ಹೇಳುದರ ಕೇಳೀ ಕೇಳೀ,ಇವಕ್ಕಿಬ್ರಿಂಗೂ ಅಲ್ಲಿಗೆ ಒಂದರಿ ಹೋಯೇಕು,ಅಲ್ಲಿ ಉಣ್ಣೇಕು ಹೇಳಿ ಆಸೆ ಆಯಿದು"ಹೇಳಿ ಡೈರೆಕ್ಟಾಗಿ ಮಕ್ಕಳ ಎದುರಿಂದಲೇ ವಿಷಯ ಮಂಡನೆ ಮಾಡಿದೆ!"ಆತು ಹೋಪ,ಯಾವಾಗ ಹೋಪ ಹೇಳಿ ಆಲೋಚನ ಮಾಡಿ ಹೇಳು,ಆ ದಿನವೇ ಹೋಪ"ಹೇಳಿ ಹೇಳಿದವಿವು!ಇಷ್ಟು ಸಲೀಸಾಗಿ ಒಪ್ಪುತ್ತಿದ್ದವು ಹೇಳಿ ಗೊಂತಿದ್ದರೆ ಯೇವಾಗಲೋ ಕೇಳುಲಾವುತ್ತಿತ್ತನ್ನೇ ಹೇಳಿ ಅನ್ನಿಸಿತು!ಇವಕ್ಕೆ ಆಧುನಿಕತೆಯ ಗಾಳಿ ರಜ್ಜ ಸೋಕಿದ್ದು ಹೇಳಿ ಅಂದಾಜು ಮಾಡಿದೆ ಮನಸಿಲ್ಲಿ!ಮಕ್ಕೊ ಈಗ ಲಗಾಮಿಲ್ಲದ ಮಂಗಂಗಳ ಹಾಂಗೆ ಖುಶಿ ಪಟ್ಟವು!ನಾಳೆಯೇ ಹೋಪಮ್ಮಾ ಹೇಳಿ ಗೌಜಿ ಮಾಡಿದವು!ಅಪ್ಪನೂ ಅಸ್ತು ಹೇಳಿದವು!

     ಬೆರಳೆಣಿಕೆಯಷ್ಟಿಪ್ಪ ಅಂತಹ ಹೋಟೇಲುಗಳಲ್ಲಿ ಯೇವ ಹೋಟೇಲಕ್ಕು ಹೇಳಿ ಎನ್ನತ್ತರೆ ಕೇಳಿದವಿವು. ಆನು ಅದೇ ಪ್ರಶ್ನೆಯ ದೊಡ್ಡ ಮಗಳತ್ತರೆ ಕೇಳಿದೆ.ಎಂತಕೆ ಹೇಳಿರೆ ಅದುವೇ ಎಂಗೊ ನಾಲ್ಕು ಜನಂಗಳ ಪೈಕಿ ರಜ್ಜ ಎಕ್ಸ್ ಪೀರಿಯನ್ಸ್ ಡ್!ಒಂದರಿ ಅದರ ಬೆಸ್ಟ್ ಫ್ರೆಂಡಿನ ಫ್ಯಾಮಲಿ ಒಟ್ಟಿಂಗೆ ಅಂತಹ ಒಂದು ಹೋಟೇಲಿಂಗೆ ಹೋಗಿ ಉಂಡು ಬೈಂದು!ಅದು ಒಂದು ಹೋಟೇಲಿನ ಹೆಸರು ಹೇಳಿತು.ಸರಿ ಅಲ್ಲಿಗೇ ಹೋದೆಯ.ಬಾಗಿಲಿನ ಒಳ ನುಗ್ಗೇಕಾದರೇ ಅಲ್ಲಿಯಾಣ ಸೆಕ್ಯುರಿಟಿ ನೆಗೆಮಾಡಿಕೊಂಡು,"ಬನ್ನಿ ಸರ್,ಬನ್ನಿ ಮೇಡಂ" ಹೇಳಿ ಒಳ ಕರಕೊಂಡು ತಂಪು ತಂಪು ಫ್ರಂಟ್ ಆಫೀಸಿಂಗೆ ಹೋದಪ್ಪಗ ಎನಗಂತೂ ಹಾಯೆನಿಸಿತು!"ಟೇಬಲ್ ಕಾಲಿ ಇಲ್ಲ, ಸ್ವಲ್ಪ ವೇಟ್ ಮಾಡಿ ಸರ್" ಹೇಳಿ ಅಲ್ಲಿಯಾಣ ಸಿಬ್ಭಂದಿ ಸೋಫಾಲ್ಲಿ ಕೂದು ರಜ್ಜ ಹೊತ್ತು ಕಾವಲೆ ಹೇಳಿದ.ಮೃದುವಾದ ಆ ಸೋಫಲ್ಲಿ ಕೂದ ಮತ್ತೆ ಇನ್ನಷ್ಟು ಹಾಯೆನಿಸಿತು ಎನಗೆ,ಮಕ್ಕಳ ಹತ್ತರೆ ಹೇಳಿದೆ!"ಹೂಂ ಅದಕ್ಕೆ ಹೇಳಿದ್ದು ಹೋಪಾ ಹೇಳಿ...!"ಸಣ್ಣ ಮಗಳು ಓರೆ ಕಣ್ಣಿಲಿ ಎನ್ನ ನೋಡಿ ಟೋಂಟು ಕೊಟ್ಟತ್ತು!ಅರ್ಧ ಗಂಟೆ ಕೂದೆಯ.ಹೊಟ್ಟೆಲಿಪ್ಪ ಹುಳುಗೊ ಕೂಗುಲೆ ಶುರುಮಾಡಿದವು."ಎಂಗಳ ತಾಳ್ಮೆಯ ಪರೀಕ್ಷೆ ಮಾಡುತ್ತಿದ್ದವೋ ಹೇಂಗೆ?"ಹೇಳಿ ದೊಡ್ಡ ಮಗಳ ಹತ್ತರೆ ಕೇಳಿದೆ."ಅಷ್ಟು ಡಿಮಾಂಡಮ್ಮಾ ಈ ಹೋಟೇಲಿಂಗೆ,ಅದಕ್ಕೇ ಹೇಳಿದ್ದು ಒಂದರಿ ಹೋಪಾ ಹೇಳಿ...!ಇನ್ನು ಊಟ ಉಂಡು ನೋಡು ಹೇಂಗಿರುತ್ತು ಹೇಳಿ"ಹೇಳಿ ಎನ್ನ ಆಶೆಯ,ಹಸಿವಿನ ಹೆಚ್ಚು ಮಾಡಿಸಿತು!

     ಮತ್ತೈದೇ ನಿಮಿಷ...ಎಂಗಳ ಸರದಿ ಬಂದಪ್ಪಗ ಒಳ ಹೋಗಿ ಕೂದೆಯ. ಟೇಬಲ್ ಮೇಲೆ ೨ ದೊಡ್ಡ ದೊಡ್ಡ ೬ ಪುಟಂಗಳ ಮೆನು ಪುಸ್ತಕ ಕೊಟ್ಟವು!ಒಂದರ ಮಕ್ಕೊ ತೆಗದು ಯೇವೆಲ್ಲಾ ಐಟಂಗಳ ಆರ್ಡರ್ ಮಾಡುದು ಹೇಳಿ ನೋಡುಲೆ ಶುರುಮಾಡಿದವು. "ಅಪ್ಪಾ, ಅಮ್ಮಾ, ಇನ್ನೊಂದು ಪುಸ್ತಕವ ನಿಂಗೊ ಇಬ್ರೂ ನೋಡಿ ಬೇಗ ನಿಂಗೊಗೆ ಎಂತೆಂತ ಬೇಕು ಹೇಳಿ ಸೆಲೆಕ್ಟ್ ಮಾಡಿ..."ಮಕ್ಕೊ ಅಂಬರಪು ಮಾಡಿ ಹೇಳಿದಾಗ ಆನು ಪುಸ್ತಕವ ಕೈಯಲ್ಲಿ ಹಿಡುದು ಓದುಲೆ ಶುರುಮಾಡಿದೆ.ಎಲ್ಲಾ ಇಂಗ್ಲಿಷಿಲೇ! ಸ್ಟಾರ್ ಟರ್ ಸ್, ಸಾಲಾಡ್ಸ್, ಡೆಸರ್ಟ್ಸ್, ನಾರ್ತ್ ಇಂಡಿಯನ್ ತಾಲಿ,ಸೌತ್ ಇಂಡಿಯನ್ ತಾಲಿ,ಸ್ಯಾಂಡ್ ವಿಚಸ್,ಮಿಲ್ಕ್ ಶೇಕ್.......ಹೀಂಗೆ ಗೊಂತಿಪ್ಪ ಹೆಸರುಗಳೊಟ್ಟಿಂಗೆ ಇನ್ನೂ ನೂರೆಂಟು ಬಗೆಯ ಒಂದೂ ಗೊಂತಿಲ್ಲದ ಶಾಕಪಾಕದ ಹೆಸರುಗೊ!ಹೋಟೇಲಿಂಗೆ ಉಂಬಲೆ ಬಪ್ಪವಂಗೆ ಇಂಗ್ಲಿಷ್ ಖಡ್ಡಾಯವಾಗಿ ಗೊಂತಿರಲೇಬೇಕು ಹೇಳಿ ಅಂದುಕೊಂಡೆ.ಎಂಗೊಗೆ ಇಂಗ್ಲಿಷ್ ಫಸ್ಟ್ ಕ್ಲಾಸಾಗಿ ಗೊಂತಿದ್ದರೂ ಅಲ್ಲಿ ಮಾತ್ರ ಒಂದು ಉಪಯೋಗಕ್ಕೆ ಬಯಿಂದಿಲ್ಲೆ!ಇತ್ತೀಚೆಗೆ’ಇಂಗ್ಲಿಷ್ ವಿಂಗ್ಲಿಷ್’ ಸಿನೆಮಾಲ್ಲಿ ಶ್ರೀದೇವಿ ನ್ಯೂಯಾರ್ಕಿಂಗೆ ಹೋದಿಪ್ಪಗ ಇಂಗ್ಲಿಷ್ ಗೊಂತಿಲ್ಲದೇ ಒದ್ದಾಡಿ ಭಂಗ ಬಂದ ಸೀನ್ ನೆಂಪಾಗಿ ಸಣ್ಣಕ್ಕೆ ಬೆಗರಿತು.ವೈಟರ್ ಬಂದಪ್ಪಗ ಎಂಗೊ ಹೇಂಗಪ್ಪಾ ಆರ್ಡರ್ ಮಾಡುದು ಹೇಳಿ ಗ್ರೇಶಿಯೊಂಡು ಇತ್ತೆಯ!ಮಗಳೇ ಈ ತಾಲಿ ಹೇಳಿದರೆ ಎಂತಾ?"ಹೇಳಿ ಕೇಳಿದೆ"ಅಯ್ಯೋ ಅಮ್ಮಾ,ಇಲ್ಲಿ ನಾವು ಒಂದು ಪ್ಲೇಟ್ ಊಟ ಹೇಳಿ ಹೇಳ್ತಿಲ್ಲೆಯಾ ಹಾಂಗೇ ಉತ್ತರ ಭಾರತಲ್ಲೆಲ್ಲಾ ತಾಲಿ ಹೇಳಿದರೆ ಅದೇ ಅರ್ಥ"ಹೇಳಿ ಹೇಳಿತು!"ಮಕ್ಕಳೇ,ಈ ಪುಸ್ತಕವ ಓದಿ ತಿಳ್ಕೊಳ್ಳೇಕಾರೆ ಎಟ್ ಲೀಸ್ಟ್ ಒಂದು ಗಂಟೆಯಾದರೂ ಬೇಕು,ಹಶು ತಡವಲೆಡಿತ್ತಿಲ್ಲೆ!ನಿಂಗೊ ಇಬ್ರಿಂಗು ಎಂತ ಅಕ್ಕೋ ಅದೇ ಎಂಗೊಗುದೇ ಅಕ್ಕು ಹೇಳಿ ಹೇಳಿದೆ."ಅದು ಹಾಂಗಲ್ಲಮ್ಮಾ,ಈ ಪುಸ್ತಕಲ್ಲಿಪ್ಪದರ ಓದಿ ಮೊದಾಲು ಕಾಂಬಿನೇಷನ್ ಮಾಡಿ ಮತ್ತೆ ಆರ್ಡರ್ ಮಾಡುದು ಇಲ್ಲಿಯಾಣ ಕ್ರಮ,ಕಮಾನ್ ಹರಿ ಅಪ್..."ಮಗಳು ಹೇಳಿಯೊಂಡಿದ್ದಾಂಗೆ ವೈಟರ್ ಬಕ್ಕು, ಅವು ಲಾಯ್ಕಲ್ಲಿ ಇಂಗ್ಲಿಷಿಲ್ಲಿ ಕೇಳ್ತವು ಎಂತೆಲ್ಲಾ ಬೇಕು ಹೇಳಿ.....!"ಮಗಳು ಹೇಳಿಯೊಂಡಿದ್ದಾಂಗೆ ವೈಟರ್ ಪ್ರತ್ಯಕ್ಷ್ಯ!ಒಂದು ಸಣ್ಣ ಪುಸ್ತಕ,ಪೆನ್ ಹಿಡಿದು,"ಎಸ್ ಸರ್ ಓರ್ಡರ್ ಪ್ಲೀಸ್" ಹೇಳಿ ಹೇಳಿಯಪ್ಪಗ ಇವು ಉತ್ತರ ಕೊಡದಿಪ್ಪ ಕಾರಣ ಆನೇ ಮುಂದುವರದು ಹೇಳಿದೆ"ಎರಡು ಸೌಥ್ ಇಂಡಿಯನ್ ತಾಲಿ" ದಕ್ಷಿಣ ಭಾರತದ್ದಾದರೆ ಲಾಯ್ಕಿಕ್ಕು ಹೇಳಿ ಅಂದಾಜು ಮಾಡಿ ಹೇಳಿದೆ!ಈ ’ತಾಲಿ’ ಹೇಳಿ ಆ ಊತ್ತರ ಭಾರತಲ್ಲಿ ಚಾಲ್ತಿಯಲ್ಲಿಪ್ಪ ಶಬ್ದವ ಸೌಥ್ ಇಂಡಿಯನ್ ಒಟ್ಟಿಂಗೆ ಎಂತಕೆ ಸೇರಿಸಿದವು ಹೇಳಿ ಇಂದಿಗೂ ಗೊಂತಿಲ್ಲೆ ಎನಗೆ!ದೊಡ್ಡ ಮಗಳು ಹೇಳಿತು," ನಾರ್ತ್ ಇಂಡಿಯನ್ ತಾಲಿ ಒಂದು"ಹೇಳಿ."ಮತ್ತೊಂದು ಎಕ್ಸ್ ಟ್ರಾ ಪ್ಲೇಟ್" ಹೇಳಿ ಆರ್ಡರ್ ಮಾಡಿದವಿವು!ಕಾರಣ ಸಣ್ಣ ಮಗಳು ತಿಂಬದು ಅಷ್ಟಕ್ಕಷ್ಟೇ,ಎಂಗಳ ಪಾಲಿಂದರಿಂದಲೇ ಅದಕ್ಕೂ ರಜ್ಜ ಕೊಟ್ಟರೆ ಸಾಕು,ಸುಮ್ಮಗೆ ಅದಕ್ಕೂ ಊಟ ಆರ್ಡರ್ ಮಾಡಿ ವೇಷ್ಟಪ್ಪದು ಬೇಡಾ ಹೇಳಿ ಉದ್ದೇಶ ಅಷ್ಟೇ.ಮಕ್ಕೊಗೆ ’ಎಕ್ಸ್ ಟ್ರಾ’ ಪ್ಲೇಟ್ ಆರ್ಡರ್ ಮಾಡಿದ್ದು ಖುಷಿ ಆಯಿದಿಲ್ಲೆ.ಸಣ್ಣ ಮಗಳು ಹೇಳಿತು,"ಬೇರೆ ಹೋಟೇಲುಗಳಲ್ಲಾದರೆ ಪರ್ವಾಗಿತ್ತಿಲ್ಲೆ,ಇಲ್ಲಿ ಫುಲ್ ಆರ್ಡರ್ ಕೊಡೇಕು...ಒಂದೂ ಗೊಂತಾವುತ್ತಿಲ್ಲೆ ನಿಂಗೊಗಿಬ್ರಿಂಗೆ...!"ಹೇಳಿ.ವೈಟರ್ ಪುಸ್ತಕಲ್ಲಿ ಎಲ್ಲಾ ಬರಕೊಂಡು ಕೇಳಿದ,"ಮಿನರಲ್ ವಾಟರ್ ಆರ್ ನಾರ್ಮಲ್ ವಾಟರ್...ಹಾಟ್ ಆರ್ ಕೋಲ್ಡ್?" ಬ್ಯಾಗಿಲಿ ಒಂದು ಲೀಟರು ಮನೆಂದ ತಂದ ನೀರೇ ಇತ್ತಿದು, ಹಾಂಗಾದ ಕಾರಣ ಮಗಳ ಹತ್ತರೆ ಹೇಳಿದೆ,ನೀರಿದ್ದಲ್ಲದಾ,ನೀರು ಬೇಡಾ ಹೇಳಿ.ಅದು ಹೇಳಿತು,"ಅಮ್ಮಾ,ಆ ಬಾಟ್ಲಿಯ ಹೆರ ತೆಗೆದು ಮರ್ಯಾದೆ ಕಳಕೊಳ್ಳೇಡ,ಇಲ್ಲೆಲ್ಲಾ ಆ ಕ್ರಮ ಇಲ್ಲೆ!"ಹೇಳಿ ವೈಟರ್ ನತ್ತರೆ ಸ್ಟೈಲಾಗಿ ಹೇಳಿತು,"ವಿ ವಾಂಟ್ ಮಿನರಲ್ ವಾಟರ್....ಕೋಲ್ಡ್..ಟೂ ಬಾಟಲ್ಸ್" ಹೇಳಿ!ಊಟಕ್ಕೆ ಸಂಬಂಧಪಟ್ಟ ವೈಟರಿನ ಉಪ ಪ್ರಶ್ನೆಗಳಲ್ಲಿ ಗೊಂತಿಪ್ಪದಕ್ಕೆಲ್ಲಾ ’ಎಸ್’ ಗೊಂತಿಲ್ಲದ್ದಕ್ಕೆಲ್ಲಾ ’ನೋ’ಹೇಳಿ ಹೇಂಗೋ ಸುಧರಿಸಿ ಆರ್ಡರ್ ಕೊಟ್ಟು ಕಳಿಶಿದೆಯಾ.ಇಷ್ಟೆಲ್ಲಾ ಅಪ್ಪಗ ಒಂದು ಇಂಟರ್ ವ್ಯೂವಿಂಗೆ ಹೋದ ಅನುಭವ ಆಗಿತ್ತು!ಮಕ್ಕೊಗೆ ರಜ್ಜ ಹೊತ್ತು ಪುಸ್ತಕ ನೋಡಿ ಲಾಯ್ಕಿಲಿ ಕಾಂಬಿನೇಷನ್ ಮಾಡಿ ಆರ್ಡರ್ ಮಾಡೇಕು ಹೇಳಿ ಇತ್ತಿದು.ಪಾಪ ಅವು ಅದರ ಎಂಗಳ ಎದುರು ಹೇಳುವ ಧೈರ್ಯ ಮಾಡಿದ್ದಿಲ್ಲೆ ಹೇಳಿ ಕಾಣ್ತು ಎಂಗಳ ಹಶು,ಅರ್ಜೆಂಟೆಲ್ಲಾ ಗಮನಿಸಿ!

ವೈಟರ್ ಹೋಗಿ ೫ ನಿಮಿಷದ ಮತ್ತೆ ಒಂದು ಬೋಗುಣಿಲಿ ಟೊಮೇಟೋ ಸೂಪ್ ತಂದು ಮಡುಗಿದ.ಈಗ ಎಂತರ ಮಾಡುದು?ಒಬ್ಬನೇ ತಿಂಬಲಾವುತ್ತಾ?ತಿಂತರೆ ಆರು ತಿಂಬದು ಹೇಳಿ ಮೌನವಾಗಿ ಎಲ್ಲರ ಒಳವೂ ಪ್ರಶ್ನೆ ಮೂಡಿತು!"...ಅದಕ್ಕೇ ಹೇಳಿದ್ದು ಎನಗುದೇ ಊಟ ಆರ್ಡರ್ ಮಾಡೇಕಾತು ಹೇಳಿ...,ಎನಗೆ ಬರೀ ಎಕ್ಸ್ ಟ್ರಾ ಪ್ಲೇಟ್ ಮಾತ್ರ ಅಲ್ಲದಾ ಹೇಳಿದ್ದು?!ಅಕ್ಕ ಆರ್ಡರ್ ಮಾಡಿದ’ನಾರ್ತ್ ಇಂಡಿಯನ್ ತಾಲಿ’ಯ ಒಂದು ಭಾಗ ಇದು,ಇದು ಅಕ್ಕಂದು,ಎನಗೆಲ್ಲಿದ್ದು?ಇದರೆಲ್ಲಾ ಪ್ಲೇಟಿಲಿ ಹಾಕಿ ತಿಂಬಲೆಡಿತ್ತಾ...."ಹೇಳಿ ಸಣ್ಣ ಮಗಳು ಹೇಳಿಯೊಂಡಿಪ್ಪಗ ಅದರ ಕಣ್ಣ ಕರೇಲಿ ನೀರು ಬಂದು ನಿಂದತ್ತು. ಆನು ಹೇಳಿದೆ,"ಹೇಂಗೂ ಟೇಬಲ್ ಮೇಲೆ ಪ್ರತಿಯೊಬ್ಬಂಗೂ ಎರಡೆರಡು ಸ್ಪೂನ್ ಇದ್ದಲ್ಲದಾ, ನಿಂಗೊ ಇಬ್ರೂ ಅದರಲ್ಲಿ ತೆಗದು ಕುಡೀರಿ" ಹೇಳಿ!ದೊಡ್ಡ ಮಗಳು ಹೇಳಿತು,"ಇಲ್ಲಿ ಹಾಂಗೆಲ್ಲಾ ಮಾಡ್ತ ಕ್ರಮ ಇಲ್ಲೆಮ್ಮಾ...ಛೇ ಹತ್ತರಾಣ ಟೇಬಲಿನವು ನಮ್ಮನ್ನೇ ನೋಡ್ತಾ ಇದ್ದವು...,ಇದೆಂತರ ನಾಲ್ಕು ಜನಂಗಕ್ಕೆ ಒಂದೇ ಬೌಲಿಲಿ ಸೂಪಾ ಹೇಳಿ!"ಹಾಂಗೇ ಹೇಳಿಯೊಂಡು ಬೌಲಿಂಗೆ ಮಕ್ಕೊ ಸ್ಪೂನ್ ಹಾಕಿ ಒಂದೊಂದು ಚಮಚ ಕುಡುದವು ಮತ್ತೆ ಹೇಳಿದವು,"ಅಪ್ಪಾ,ಅಮ್ಮಾ,ನಿಂಗಳೂ ಟೇಸ್ಟ್ ನೋಡಿ,ಎಂಜಲಾಯಿದಿಲ್ಲೆ ಹೇಳಿ!...." ಅಂಬಗಲೇ ಅಂದಾಜು ಮಾಡಿದೆ ಮಕ್ಕೊಗದು ಮೆಚ್ಚಿದ್ದಿಲ್ಲೆ ಹೇಳಿ!ಸರಿ ಇವುದೇ ಆನುದೇ ಒಂದೊಂದು ಸ್ಫೂನಿಲಿ ಕುಡುದೆಯಾ....ಒಂದು ಚೂರೂದೇ ಲಾಯ್ಕಿತ್ತಿಲ್ಲೆ!ಇವು ಹೇಳಿದವು,ನೀನು ಮನೆಲಿ ಮಾಡುವ ಸೂಪೇ ಸೂಪರ್ ಹೇಳಿ!ಕುಡಿವಲೆಡಿಯದ್ದೇ ಸ್ಪೂನಿನ ಕೆಳ ಮಡುಗಿ ಮಕ್ಕೊಗೆ ಕುಡಿವಲೆ ಹೇಳಿದೆಯ.ಆದರೆ ಅವಕ್ಕದು ಬೇಡ!ಹತ್ತರಿಪ್ಪವ್ವೆಲ್ಲಾ ಸಮಾ ಕುಡುದುಕೊಂಡು,ನಕ್ಕಿಕೊಂಡಿತ್ತವು!ಅದು ಹೇಂಗಾರು ಮೆಚ್ಚುತ್ತೋ ಹೇಳಿ ಗ್ರೇಶಿಯೇ ವಾಕರಿಕೆ ಬಂದ ಹಾಂಗತು ಎಂಗೊಗೆ."ಅಮ್ಮಾ ಇದರ ಮೊದಾಲು ಕುಡುದು ಮುಗುಶೇಕಾದ್ದು ಕ್ರಮ ಹೇಳಿತು ಮಗಳು!ಎಲ್ಲರೂ ಎನಗೆ ಬೇಡ,ಎನಗೆ ಬೇಡ ಹೇಳಿ ಹೇಳಿಯೊಂಡಿಪ್ಪಗಲೇ ದೊಡ್ಡ ಮಗಳು ಆರ್ಡರ್ ಮಾಡಿದ ನಾರ್ತ್ ಇಂಡಿಯನ್ ತಾಲಿ ಬಂದತ್ತು,ಮತ್ತೊಂದು ಕಾಲಿ ಪ್ಲೇಟ್ ಸಣ್ಣ ಮಗಳಿಂಗೆ!ಇಬ್ರೂ ಪಾಲು ಮಾಡಿಯೊಂಡವು,ಮತ್ತೆ ಎಂಗೊಗೆ ರುಚಿ ನೋಡುಲೆ ಹೇಳಿದವು.ಅಂಬಗ ಎಂಗಳ ದಕ್ಷಿಣ ಭಾರತದ ’ತಾಲಿ’ ಬಂತು!ಇವರ ಪ್ಲೇಟಿಂದ ಪೂರೀ ಹಾಂಗೇ ಎನ್ನ ಪ್ಲೇಟಿಂದ ಚಪಾತಿಯ ಅತ್ತಿತ್ತ ಹಂಚಿಕೊಂಡೆಯ.ಇಬ್ರಿಂಗೂ ಸಣ್ಣ ಸಣ್ಣ ಗಿಣ್ಣಾಲಿಲಿ ಒಂದೊಂದು ಮುಷ್ಠಿ ಅಶನದೇ ಇತ್ತಿದು!ಸುಮಾರು ಹತ್ತು ಗಿಣ್ಣಾಲುಗಳಲ್ಲಿ ಅದೆಂತೆಂತೋ ಅಶನಕ್ಕೆ ಕೂಡಿಕೊಂಬಲೆ ಹೇಳಿ ಬೇರೆ ಬೇರೆ ಐಟಂಗೋ!ಅಷ್ಟರ ಎಲ್ಲಾ ಹಾಕಿ ರುಚಿ ನೋಡುಲೆ ಅವು ಕೊಟ್ಟ ಅಶನ ಸಾಲ! ಪುನ: ಅಶನ ಆರ್ಡರ್ ಮಾಡದ್ದೇ ಕೆಲವುದರೆಲ್ಲಾ ಹಾಂಗೇ ತಿಂದೆಯ!ಮಕ್ಕೊ ಹೇಳಿಯೊಂಡೇ ಇತ್ತವು ಹತ್ತರಾಣವು ನಮ್ಮ ನೋಡಿ ಮಾಜಾ ತೆಕ್ಕೊತ್ತಾ ಇದ್ದವು ಹೇಳಿ!ನಮ್ಮ ಊಟವ ನಾವು ಹೇಂಗೆ ಬೇಕಾದರೂ ಮಾಡ್ತು,ಎಂತ ಬೇಕಾದರೂ ಮಾಡ್ಲಿ ಅವು,ನಮಗವರ ಪರಿಚಯ ಇಲ್ಲೆನ್ನೆ,ನಾಳಂಗೆ ಅವರ ಮೋರೆ ನಾವು ನೋಡ್ಲಿಲ್ಲೆನ್ನೇ ಹೇಳಿ ಎಂಗೊ ಇಬ್ರೂ ಸಮರ್ಥಿಸಿಕೊಂಡು ಉಂಡೊಂಡಿತ್ತೆಯ.ಮಕ್ಕಳೂ ತಿಂದೊಂಡಿತ್ತವು.ಇವು ರಜ್ಜ ಹೊತ್ತಪ್ಪಗ ಪಾಯಸ ಬಡಿಸಿಯೊಂಡು ’ಸುರ್ ಪುರ್ ಸುರ್ ಪುರ್’ಹೇಳಿ ಶಬ್ದ ಮಾಡಿಯೊಂಡು ಸುರಿವಲೆ ಶುರುಮಾಡಿದವು! "ಅಪ್ಪಾ ಇಲ್ಲಿ ಮನೇಲಿ, ಮದುವೆ,ಜೆಂಬರಲೆಲ್ಲಾ ತಿಂದ ಹಾಂಗೆ ಫಾಸ್ಟಾಗಿ,ಸೌಂಡ್ ಮಾಡಿಯೊಂಡು ತಿಂಬ ಕ್ರಮ ಇಲ್ಲೆ!...ನಿಧಾನವಾಗಿ ಸೌಂಡಿಲ್ಲದ್ದೇ ಸ್ಪೂನಿಲಿ ಸ್ಟೈಲಾಗಿ ತಿನ್ನೇಕು ಗೊಂತಿದ್ದಾ...."ಹೇಳಿ ಹತ್ತರಾಣ ಟೇಬಲ್ ನವರ ತೋರಿಸಿದವು.ಒಂದರಿ ಸುತ್ತ ನೋಡಿಯಪ್ಪಗ ಮಕ್ಕೊ ಹೇಳಿದ್ದು ಸರಿ ಹೇಳಿ ಕಂಡತ್ತು!ಅಂತೂ ಇಂತೂ ಉಂಡಾತು!ಇವು ಹೇಳಿಯೊಂಡೇ ಇತ್ತವು ಮಕ್ಕಳ ಹತ್ತರೆ,"ಇಲ್ಲಿಯಾಣ ಒಂದು ಅಡುಗೆದೇ ಅಮ್ಮನ ಕೈಅಡುಗೆಯ ರುಚಿಗೆ ಬಯಿಂದಿಲ್ಲೆ.ಬಪ್ಪಲೂ ಇಲ್ಲೆ.ಅಮ್ಮನಿಗೆ ಅಮ್ಮನೇ ಸಾಟಿ ಹೇಳಿ!ಮತ್ತೆ ಪುನ: ವೈಟರ್ ಬಂದ ಡೆಸರ್ಟ್ಸ್ ಯಾವುದಕ್ಕು ಹೇಳಿ ಕೇಳಿಯೊಂಡು! ದೊಡ್ಡ ಮಗಳು ಐಸ್ಕ್ರೀಂ ಹೇಳಿದರೆ, ಸಣ್ಣದು ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ಹೇಳಿತು. ಎಂಗೊಗೆ ಎಂತ ಬೇಡ ಹೇಳಿ ಹೇಳಿದೆಯಾ. ಮಕ್ಕೊ ಈಗ ರಜ್ಜ ಚುರುಕಾದವು.ಅವರ ಐಸ್ ಕ್ರೀಂನ ಪಾಲಾಗಲೀ,ಮಿಲ್ಕ್ ಶೇಕಿನ ಪಾಲಾಗಲೀ ಎಂಗೊಗಿಬ್ರಿಂಗೂ ಕೊಡ್ತಿಲ್ಲೆಯಾ,ನಿಂಗೊಗೆಂತಾರು ಬೇಕಾದ್ರೆ ಆರ್ಡರ್ ಮಾಡಿ,ಹತ್ತರಾಣ ಟೇಬಲ್ಲಿನವು ಇವೆಂತ ಕುರೆ ಕಟ್ಟುದು ಹೇಳಿ ಇನ್ನೂದೇ ಎಂಗಳ ನೋಡಿ ನೆಗೆ ಮಾಡುದು ಬೇಡ ಹೇಳಿ ಖಡಾಖಂಡಿತವಾಗಿ ಹೇಳಿಬಿಟ್ಟವು!ಅಲ್ಲಿ ಅವು ಕೊಟ್ಟ ಒಂದು ಮುಷ್ಠಿ ಅಶನ,ರಜ್ಜ ಪಾಯಸ ತಿಂದು ಹೊಟ್ಟೆ ತುಂಬದ್ದರುದೇ ಇನ್ನೆಂತದೂ ಬೇಡ,ಸಾಕಪ್ಪಾ ಸಾಕು ಹೇಳಿ ಅನ್ನಿಸಿಬಿಟ್ಟಿತ್ತು!ಮಕ್ಕೊಗೆ ಐಸ್ಕ್ರೀಂ, ಮಿಲ್ಕ್ ಶೇಕ್ ಬಂತು. ಅವು ಎಂಗೊಗೆ ಕೊಡ್ತಿಲ್ಲೆ ಹೇಳಿದರುದೇ ಟೇಸ್ಟ್ ನೋಡುಲೆ ಹೇಳಿದವು ಪಾಪ!ಈಗ ವೈಟರ್ ನಾಲ್ಕು ಸಣ್ಣ ಸಣ್ಣ ಗಿಣ್ಣಾಲುಗಳಲ್ಲಿ ಉಗುರು ಬೆಶ್ಚಗೆ ನೀರು,ಅದರೊಳ ಕಾಲು ಕಡಿ ನಿಂಬೆ ತುಂಡು ಹಾಕಿ ತಂದ ಎಂಗೊಗೆ ಕೈ ತೊಳವಲೆ ಹೇಳಿ.ಈ ನಾಲ್ಕು ತುಂಡುಗಳ ಸೇರಿಸಿದರೆ ಒಂದು ನಿಂಬೆಹುಳಿ!ಛೇ ನಾಲ್ಕು ಗ್ಲಾಸ್ ಶರಬತ್ತಾವುತ್ತಿತ್ತನೇ ಹೇಳಿ ಮನಸ್ಸಿಲ್ಲೇ ಗ್ರೇಶಿಕೊಂಡೆ.ಒಂದು ರಜ್ಜ ಹೊತ್ತಪ್ಪಗ ವೈಟರ್ ಒಂದು ಫೈಲಿನಾಕಾರದ ಪುಸ್ತಕ ತಂದ.ಅದರೊಳ ಒಂದು ಸಣ್ಣ ಬಿಲ್,ದೊಡ್ಡ ಮೊತ್ತದ್ದು!ಬಿಲ್ ಎದೆಯ ’ಝಲ್’ ಅನ್ನಿಸಿತು!೬೦೦ ರೂಪಾಯಿ,ಅದರಲ್ಲಿಮಿನರಲ್ ವಾಟರ್ ೨ ಬಾಟ್ಲಿಗುದೇ ತಲಾ ೨೫ ರೂಪಾಯಿ ಹಾಕಿದ್ದರ ಕಂಡು ಟೇಬಲ್ ಮೇಲಿದ್ದ ಬಾಟಲುಗಳ ನೀರು ಕುಡುದು ಕಾಲಿ ಮಾಡುಲೆ ಹೇಳಿದೆ ಇವರತ್ತರದೇ,ಮಕ್ಕೊಗುದೇ,ಹಾಂಗೇ ಆನುದೇ ಗಟಗ್ಟ ಕುಡುದೆ!ಬಿಲ್ ತಪ್ಪಾಗ ವೈಟರ್ ಅದರೊಟ್ಟಿಂಗೆ ಸಿಹಿ ಇಪ್ಪ ಸೋಂಪು ತೈಂದ, ೨ ಸಣ್ಣ ಗಿಣ್ಣಾಲಿಲಿ. ಆದರೆ ಅದು ಮಾತ್ರ ತುಂಬ ಇತ್ತಿದು!ಆನು ಹೇಳಿದೆ,"ಇದನ್ನೆಲ್ಲಾ ತಿಂದು ಕಾಲಿ ಮಾಡಿದರುದೇ ೬೦೦ ರೂಪಾಯಿ ಬಿಲ್ ಹೆಚ್ಚೇ ಆತು"ಹೇಳಿ!ಮಕ್ಕಳದ್ದೊಂದೇ ಗೌಜಿ,"ಹಾಂಗೆಲ್ಲಾ ಬಿಲ್ ಜಾಸ್ತಿ ಆತು..." ಹೇಳಿ ಎಲ್ಲಾ ಹೇಳ್ತ ಕ್ರಮ ಇಲ್ಲಿಲ್ಲೆ ಹೇಳಿ.....! ಅವ ಬಿಲ್ಲಿಲಿ ನಮೂದಿಸಿದಷ್ಟು ಪೈಸೆ ಕೊಟ್ಟು ಕಳಿಸಿದೆಯ ವೈಟರಿನ!ಪುನ: ಎಂಗಳ ಟೇಬಲಿನ ಹತ್ತರೆ ಬಂದು ರಶೀದಿ ಕೊಟ್ಟು ಅವ ಹೋದ ನಂತರ ಎಂಗೊಲ್ಲಾ ಕುರ್ಚಿಂದ ಎದ್ದೆಯಾ. ಮಕ್ಕೊ ಹೇಳಿದವು,"ಅಪ್ಪಾ ಇಲ್ಲಿಂದೆಲ್ಲಾ ಹಾಂಗೇ ಹೋವುತ್ತ ಕ್ರಮ ಇಲ್ಲೆ,ಟಿಪ್ಸ್ ಮಡುಗೇಕು ಹೇಳಿ!ಸರಿ ಹೇಳಿ ಇವು ೫ ರೂಪಾಯಿ ತೆಗದು ಮಡುಗುಲೆ ಹೆರಟವು!"ಅಪ್ಪಾ ಅಟ್ ಲೀಸ್ಟ್ ಮಿನಿಮಮ್ ೨೦ ರೂಪಾಯಿಯನ್ನಾದರೂ ಮಡುಗೇಕು ಗೊಂತಿದ್ದಾ? ಕಳುದ ಸಲ ಎನ್ನ ಫ್ರೆಂಡಿನ ಫ್ಯಾಮಲಿ ಒಟ್ಟಿಂಗೆ ಬಂದಿಪ್ಪಾಗ ಅವು ೫೦ ರೂಪಾಯಿ ಮಡುಗಿತ್ತವು ಗೊಂತಿದ್ದಾ....." ಸರಿ ಮಕ್ಕಳೇ ಈ ಲೋಕಲ್ಲಿ ಇನ್ನೂದೇ ಕಲಿಯೇಕಾದ್ದು ಸುಮಾರಿದ್ದು ಹೇಳಿಯೊಂಡು,ನಮ್ಮ ಮನಸ್ಸಿಂಗೆ ಸಾಕು ಅನ್ನಿಸಿದ ಹತ್ತು ರೂಪಾಯಿಯ ಆ ಪುಸ್ತಕಾಕಾರದ ಫೈಲಿನೆಡೆಲಿ,ಮುಚ್ಚಿ ಮಡುಗಿಕ್ಕಿ ಹೆರ ಬಂದೆಯ. ವಾಪಸ್ಸು ಹೋಯಿಯೊಂಡಿಪ್ಪಾಗ ದಾರಿಲಿ ಎನ್ನ ಹತ್ತರೆ ಕೇಳಿದವಿವು,"ಉದಿಯಪ್ಪಗ ನೀನು ಮಾಡಿದ ಇಡ್ಲಿ ಒಳುದ್ದಲ್ಲದಾ ಮನೇಲಿ? ಎನಗೆ ಹೋಗಿ ತಿನ್ನೇಕು, ಹಶು ಇನ್ನೂದೇ ಹೋಯಿದಿಲ್ಲೆ.."ಹೇಳಿ!!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು

Tuesday, February 24, 2015

ಸಿಂಗಾರದ ಹೊರೆಯೇಕೆ...-ಹವ್ಯಕ ವಾರ್ತೆ ಫೆಬ್ರವರಿ ೨೦೧೫ ರಲ್ಲಿ ಪ್ರಕಟವಾದ ಹಾಸ್ಯ ಲೇಖನ.

ಸಿಂಗಾರದ ಹೊರೆಯೇಕೆ...!?


ಈ ಡ್ರೆಸ್‍ಗಳ ಬಗ್ಗೆ,ತಲೆಕಸವಿನ ಹಲವು ನಮೂನೆ ಸ್ಟೈಲುಗಳ ಬಗ್ಗೆ, ಮೋರೆಯ ಅಂದ,ಚೆಂದ ಮಾಡ್ಸುದರ ಬಗ್ಗೆ ಕಾಳಜಿ ವಹಿಸುತ್ತ ಜೆನರ ನೋಡಿದರೆ ಆಶ್ಚರ್ಯ ಆವುತ್ತು! ಇಂತದ್ದಕ್ಕೆಲ್ಲಾ ಇವೆಲ್ಲಾ ಇಷ್ಟು ಸಮಯವ ಹೇಂಗೆ ಮಾಡಿಕೊತ್ತವು ಹೇಳಿ ಎಷ್ಟೋ ಸರ್ತಿ ಆಲೋಚನೆ ಆಯಿಕ್ಕೊಂಡಿರ‍್ತು! ಆನು ಉದಿಯಪ್ಪಗ ಎದ್ದಿಕ್ಕಿ ರಜ್ಜ ಕೆಲಸಂಗಳ ಮುಗುಶಿಕ್ಕಿ ಲಾಯ್ಕಕ್ಕೆ ಮಿಂದು ಒಂದು ತೊಳದು ಕ್ಲೀನಿಪ್ಪ ಚೂಡೀದಾರನ್ನೋ, ಸೀರೆಯನ್ನೋ ಹಾಕಿಯೊಂಡು, ಮೋರಗೆ ರಜ್ಜ ಪೌಡರ್ ಹಾಕಿದಾಂಗೆ ಮಾಡಿ ತೊಗರೀಬೇಳೆ ಗಾತ್ರದ ಒಂದು ಕೆಂಪು ಸ್ಟಿಕ್ಕರ್ ಬಿಂದಿಯ ಹಣೆಗೆ ಅಂಟಿಸಿ, ತಲೆಯ ಲಾಯ್ಕಲ್ಲಿ ಬಾಚಿ ಹೆಗಲಿಂದ ರಜ್ಜ ಕೆಳಂಗೆ ಇಪ್ಪಷ್ಟೂ ತಲೆಕಸವಿನ  ಸೇರಿಸಿ ಒಂದು ದೊಡ್ಡ ಕಪ್ಪು ರಬ್ಬರ್ ಬ್ಯಾಂಡ್ ಹಾಕಿ ಮಡಿಸಿ ಕಟ್ಟಿದರೆ ಎನ್ನ ಅಲಂಕಾರ ಮುಗುತ್ತು! ಆಫೀಸು, ಮನೆ, ಬ್ಯಾಂಕಿಂಗೆ ಪೈಸೆ ಕಟ್ಟುಲೋ, ತೆಗೆವಲೋ, ಮಕ್ಕಳ ಸಂಗೀತ, ಡ್ಯಾನ್ಸ್ ಕ್ಲಾಸಿಂಗೆ ಬಿಡ್ಲೋ, ಅಂಗಡಿಗೆ ಸಾಮಾನು ತಪ್ಪಲೆ ಹೋಪಾಗಲೋ.....ಎಲ್ಲಾ ಕಡೆಂಗೂ ಅದೇ ಡ್ರೆಸ್, ಅದೇ ಕೆಂಪು ದೊಡ್ಡ ಬಿಂದಿ, ಅದೇ ತಲೆಕಸವಿನ ಸ್ಟೈಲು....ಒಟ್ಟಾರೆ ಹೇಳ್ತರೆ ಅದೇ ಅವತಾರ! ಆ ಡ್ರೆಸ್ಸಿನ ಬದಲು ಮಾಡುದು ಇರುಳಪ್ಪಗ ಮಿಂದಿಕ್ಕಿ ನೈಟಿ ಹಾಕಿಕೊಂಬಗ ಮಾಂತ್ರ! ಅಂಬಗಂಬಗ ವಸ್ತ್ರ ಬದಲು ಮಾಡುದು, ಅಲಂಕಾರ ಮಡಿಕೊಂಬದು ಎನ್ನ ಕೈಯಲ್ಲಾಗದ ಕೆಲಸಂಗೊ! ಹಾಂಗೆ ಆನಿದ್ದೆ ಹೇಳಿ ಎನ್ನಾಂಗೆ ಎಲ್ಲೋರೂ ಇರೇಕು ಹೇಳಿ ಹೇಳುತ್ತ ಜೆನ ಆನಲ್ಲ! ಹಾಂಗೆಲ್ಲಾ ಅಲಂಕಾರ ಮಾಡಿಯೊಳ್ಳಿ ಹೇಳಿ ಪ್ರೋತ್ಸಾಹ ಮಾಡುವ ಜೆನವೂ ಆನಲ್ಲ! ಚೆಂದಕ್ಕೆ ಡ್ರೆಸ್ ಮಾಡಿದವರ ನೋಡ್ಲೆ ಮಾಂತ್ರ ಎಂತದೇ ಹೇಳಿ ಎನಗಂತೂ ಕುಶಿ ಆವುತ್ತು! ಎನ್ನಂತಾ ನಮೂನೆಯವ್ವು ಬೇಕಾಷ್ಟು ಜೆನಂಗ ಇದ್ದವು ಸಮಾಜಲ್ಲಿ! ಮದುವೆಗೆ, ಪೂಜೆಗೆ, ಇತ್ಯಾದಿ ಕಾರ್ಯಕ್ರಮಂಗೊಕ್ಕೆ ಹೋಪಾಗ ಒಳ್ಳೆ ಡ್ರೆಸ್ ಹಾಕಿಕಾ ಹೇಳಿ ಮನೆಲಿ ಆರಾದರೂ ಒತ್ತಾಯ ಮಾಡಿದರೆ ಆನು ಹೇಳುದಿಷ್ಟೇ,"ಎನಗೆ ಸರಳವಾಗಿಪ್ಪಲೆ ಇಷ್ಟ, ಪ್ಲೀಸ್ ಎನ್ನಷ್ಟಕ್ಕೆ ಎನಗಿಷ್ಟದ ಹಾಂಗಿಪ್ಪಲೆ ಬಿಡಿ, ಹರುದ್ದರ, ಕೊಳಕ್ಕಾದ್ದರ ಹಾಕುತ್ತಿಲ್ಲೆನ್ನೇ ಆನು! ನಿಂಗೊಲ್ಲಾ ಒತ್ತಾಯ ಮಾಡುದೂ, ಕೆಪ್ಪೆಯ ತಕ್ಕಡಿ ಮೇಲೆ ಕೂರುಸುದೂ ಎರಡೂ ಒಂದೇ!" ಹೇಳಿ ನೆಗೆ ಮಾಡಿಕೊಂಡು ಹೇಳಿ ತಪ್ಪಿಸಿಕೊಂಡುಬಿಡ್ತೆ! ಅಂಬಗ ಅವ್ವೆಲ್ಲಾ, "ನಿನಗೆ ಹೇಳುದು ದಂಡ" ಹೇಳಿ ಮೋರೆಯ ತಿರುಗಿಸಿ ಹೋಗಿಬಿಡ್ತವು. ಯಾವ ವಿಷಯವೇ ಇರಲಿ, ಆರು ಎಷ್ಟೇ ಸಲಹೆ, ಸೂಚನೆಗಳ ಕೊಟ್ಟರೂ ಅಂತಿಮ ತೀರ್ಮಾನ ನಮ್ಮದೇ ಆದರೆ ಮಾಂತ್ರ ತೃಪ್ತಿ ಇರ‍್ತಲ್ಲದಾ?!



     ನಮ್ಮ ಸಮಾಜಲ್ಲಿ ಮೋರೆ ನೋಡಿ, ಧರಿಸಿದ ವಸ್ತ್ರವ ನೋಡಿ ಮಣೆ ಹಾಕುವವ್ವು ಬೇಕಾದಷ್ಟು ಜೆನಂಗ ಇದ್ದವು! ಎನಗೊಂದು ನಾಲ್ಕು ಜೆನ ಫ್ರೆಂಡುಗೊ ಇದ್ದವು. ಅವ್ವು ಇದುವರೆಗೂ ಎನ್ನ ಸರಳತೆಯಿಂದಾಗಿ ಎನ್ನಂದ ದೂರ ಆಯಿದವಿಲ್ಲೆ ಹೇಳುದು ಎನ್ನ ಜೀವನಲ್ಲಿ ಅತ್ಯಂತ ಖುಷಿಯ ವಿಚಾರ. ಅವೆಲ್ಲಾ ಅತೀ ಶೃಂಗಾರ ಮಾಡಿಕೊಳ್ಳದ್ದರೂದೇ ಎನ್ನಷ್ಟು ಶೃಂಗಾರ ಮಾಡಿಕೊಂಬದರ ತಾತ್ಸಾರ ಮಡುವ ಜೆನಂಗ ಅಂತೂ ಅಲ್ಲ. ಕಣ್ಣುಗಳ ಹುಬ್ಬಿನ ಕಾಮನಬಿಲ್ಲಿನ ಹಾಂಗೆ ಮಾಡಿಯೊಂಡು, ತಲೆ ಕಸವಿನ ಕಟ್ಟುವ ಸ್ಟೈಲು, ಕೆಮಿ, ಕೈಕಾಲಿನ ಆಭರಣಂಗಳ ಕೆಲವು ಸಂದರ್ಭಗಳಲ್ಲಿ ಬದಲಿಸಿ ಹಾಕಿಕೊಂಬದು, ಹೇಳಿರೆ ಹೋಪ ಸಭೆ, ಸಮಾರಂಭಂಗೊಕ್ಕೆ ತಕ್ಕ ಹಾಂಗೆ ಎನ್ನಂದ ಹೆಚ್ಚು ಶೃಂಗಾರಕ್ಕೆ ಬೆಲೆ ಕೊಡುವ ಅಭ್ಯಾಸ ಇಪ್ಪವಷ್ಟೇ! ನಾಲ್ಕು ಜೆನದ ಆ ಟೀಮಿಲಿ ಇತ್ತೀಚೆಗಷ್ಟೇ ಎನಗೆ ಅತ್ಯಂತ ಆತ್ಮೀಯಳಾದ ಒಂದು ಗೆಳತಿ ಇದ್ದು! ಬಾಕಿ ಇಪ್ಪ ಮೂರು ಜೆನ ಫ್ರೆಂಡುಗೊ ಎನಗೆ, "ಹಾಂಗೆ ಡ್ರೆಸ್ ಮಾಡು, ಹೀಂಗೆ ಮಾಡು, ಆ ನಮೂನೆಲಿ ತಲೆ ಕಟ್ಟು, ಹೀಂಗೆಲ್ಲಾ ಮಾಡಿದರೆ ನಿನ್ನ ಲುಕ್ಕೇ ಛೇಂಜಾವುತ್ತು ಹೇಳಿ ವರ್ಷಾನುಗಟ್ಟಲೆಯಿಂದ ಪ್ರಯತ್ನಿಸುತ್ತಾ ಬಂದಿತ್ತಿದ್ದವು. ಅವು ಹೇಳುದರ ಎಲ್ಲಾ ಆಚ ಕೆಮಿಲಿ ಕೇಳಿ, ಈಚ ಕೆಮಿಲಿ ಬಿಡುದು, ಪುನ: ಅವು ಹೇಳುದು, ಆನು ಅವು ಹೇಳಿದ್ದರ ಕೇಳಿ ಹೂಂಗುಟ್ಟುದು ಇಷ್ಟೇ ಆಯಿಕ್ಕೊಂಡಿತ್ತು! ಆದರೆ ಎನ್ನ ಹೊಸಾ ಫ್ರೆಂಡ್ ಹಾಂಗಲ್ಲ! "ಮನೆಲಿ ಎಂತ ಬೇಕಾದರೂ ಹಾಕಿಕೊ ಮಾರಾಯ್ತಿ, ಸಭೆ, ಸಮಾರಂಭಂಗೊಕ್ಕೆ ಹೋಪಗಲಾದರೂ ರಜ್ಜ ಡ್ರೆಸ್ ಸೆನ್ಸ್ ಬೆಳೆಶಿಕೋ, ತಲೆಯ ಬೇರೆ ಸ್ಟೈಲಿಲಿ ಕಟ್ಟು..., ಹಣೆಗೆ ನೀನು ಹಾಕುವ ಕೆಂಪು ಬಿಂದಿಯನ್ನೇ ಹಾಕು, ಆದರೆ ಆ ಕೆಂಪು ಬಿಂದಿಯ ನಡೂಕಿಲಿ ಕಲ್ಲಿಪ್ಪದರ ಹಾಕು..., ನಿಜವಾಗಿ ನೀ ಹೀಂಗೆಲ್ಲಾ ಮಾಡಿದರಿದ್ದನ್ನೆ, ಎಷ್ಟು ಲಾಯ್ಕ ಕಾಂಬೆ ಗೊಂತಿದ್ದಾ ನಿನಗೆ, ನೀನೇ ನೋಡಿದ್ದಿಲ್ಲೆಯಾ, ಮುದಿ ಪ್ರಾಯದವಕ್ಕೆ ಕೂಡಾ ಎಷ್ಟು ಸೌಂದರ್ಯ ಕಾಳಜಿ ಇರ‍್ತು ಹೇಳಿ, ನೀನುದೇ ರಜ್ಜ ಸೌಂದರ್ಯ ಪ್ರಜ್ಜೆ ಬೆಳೆಶಿಕೋ ಪುಟ್ಟಾ" ಹೇಳಿ ಎನಗೆ ಅದರ ಅಕ್ಕರೆಯ ಸಲಹೆ! "ನೀನು ಹೇಳುದು ಸರಿ ಮಾರಾಯ್ತಿ ಪ್ರಾಯದವರ ಕೆಲವರ ನೋಡಿದ್ದೆಪ್ಪಾ ನೋಡಿದ್ದೆ, ಒಲೆಯ ಬೂದಿ ಮೇಲೆ ಮನುಗಿ, ಮೈಕೊಡಪದ್ದೇ ಎದ್ದು ಬಂದ ನಾಯಿ, ಪುಚ್ಚೆಗಳ ಹಾಂಗಿರ‍್ತು ಒಬ್ಬೊಬ್ಬನ ಮೋರೆಲಿ ಪೌಡರು..ಹ್ಹ..ಹ್ಹ..ಹ್ಹಾ... ಆದರೆ ಆನು ಹಾಂಗಪ್ಪಲೆ ತಯಾರಿಲ್ಲೆ.... ನೋಡಿ ಸ್ವಾಮಿ, ನಾವಿರೋದೇ ಹೀಗೇ" ಹೇಳಿ ತಮಾಷೆ ಮಾತಿಲಿ ತೇಲಿಸಿಬಿಟ್ಟಪ್ಪಗ, "ಎಂತ ಮಾರಾಯ್ತಿ, ಆನಿಷ್ಟು ಹೊತ್ತು ಗಾಳಿಗೆ ಗುದ್ದಿದ್ದಾ?!, ನೀನು ಹೀಂಗೆಲ್ಲಾ ಉತ್ತರ ಕೊಟ್ಟು ತಪ್ಪಿಸಿಕೊಂಬಲೆ ಸಾಧ್ಯ ಇಲ್ಲೆ, ನಿನ್ನ ಹೀಂಗೇ ಇಪ್ಪಲೆ ಬಿಡ್ತೆ ಹೇಳಿ ಕನಸ್ಸಿಲಿಯೂ ಗ್ರೇಶಡ ನೀನು!" ಹೇಳಿ ಛಲ ಬಿಡದ ತಿವಿಕ್ರಮನ ಹಾಂಗೆ ಎನ್ನ ಬೆನ್ನು ಬಿಟ್ಟಿದಿಲ್ಲೆ! ಅದು ಹಾಂಗೇ ಅಲ್ಲದಾ ನಮಗೆ ಅತ್ಯಂತ ಆಪ್ತರಾದವ್ವು ನಮ್ಮ  ವೈಯುಕ್ತಿಕ ವಿಚಾರಂಗೊಕ್ಕೆ ಮನಸ್ಸು, ತಲೆ, ಪೈಸೆ ಎಲ್ಲಾ ಹಾಕಿ ಹೇಂಗಾರೂ ನಮ್ಮ ಸಮ ಮಾಡುಲೆ ನೋಡ್ತವು! ಅದು ಅವರ ಆತ್ಮೀಯತೆಯ, ನಿಷ್ಕಲ್ಮಶ ಹೃದಯದ ಸಂಕೇತ. ಎಂಗೊ ಪ್ರತೀ ಸರ‍್ತಿ ಭೇಟಿ ಆದಿಪ್ಪಗ ಅದು ಎನಗೆ ಹಾಂಗಿರು, ಹೀಂಗಿರು ಹೇಳುದು, ಆನು ಹೂಂ ಗುಟ್ಟಿಕೊಂಡೇ ಇಪ್ಪದು....ಹೀಂಗೇ ಆಗಿ ಹೋತು!  ಅದು ರಜ್ಜ ಸಮಯ ನೋಡಿತು, ಹೇಳಿ ಹೇಳಿ ಪಾಪ ಅದಕ್ಕೆ ಬೊಡುದತ್ತು ಹೇಳಿ ಕಾಣ್ತು! ಒಂದು ದಿನ ಎಂಗಳ ಮನೆಗೆ ಬಂದಿಪ್ಪಗ ಎನ್ನ ಹತ್ತರೆ ಕೂದೊಂಡಿದ್ದ ಆ ಜೆನ ಸೀದಾ ಎನ್ನ ತಲೆಕಸವಿಂಗೆ ಕಟ್ಟಿತ್ತಿದ್ದ ಕಪ್ಪು ರಬ್ಬರ್ ಬ್ಯಾಂಡಿನ ಎಳದು ತೆಗದು, "ಇದಾ ನಿನ್ನ ತಲೆಕಸವಿನ ಕೊಡಿ ಹೇಂಗಿದ್ದು ನೋಡು, ಕೊಡಿಯ ರಜ್ಜ ಕತ್ತರಿಸಿ ತೆಗದರೆ ಲಾಯ್ಕ, ಇದೊಳ್ಳೆ ಚೈನಾ ದೇಶದವ್ವು ಉದ್ದಕ್ಕೆ ಇಳಿಬಿಟ್ಟ ಗಡ್ಡದ ಕೊಡಿಯ ಹಾಂಗಿದ್ದು ಹೇಳಿಯಪ್ಪಗ ಎನಗುದೇ, ಎನ್ನ ಮಕ್ಕಗುದೇ ನೆಗೆ ತಡಕೊಂಬಲಾಯಿದಿಲ್ಲೆ! "ಓ ಮಾರಾಯ್ತಿ...ತಲೆಕಸವಿನ ಈ ಸಪುರ ಕೊಡಿಯೇ ಮಡಿಸಿಕಟ್ಟುವ ಎನ್ನ ಜುಟ್ಟಿಂಗೆ ಆಧಾರ, ಅದು ಎನಗೆ ಬೇಕು,ಅದರ ನೀನು ಕತ್ತರಿಸಿ ತೆಗದರೆ ಎನ್ನ ಪರಿಸ್ಥಿತಿ ಎಂತಕ್ಕು? ಎನ್ನ ಕೂದಲು ಒಂದು ನಿಯಮಕ್ಕೆ ಒಗ್ಗಿ ಹೋಯಿದು, ಎಷ್ಟೋ ವರ್ಷದ ಲಾಗಾಯ್ತು ಉದ್ದವೂ ಬತ್ತಿಲ್ಲೆ, ಗಿಡ್ಡವೂ ಆವುತ್ತಿಲ್ಲೆ. ಅದು ಇದ್ದ ಹಾಂಗೇ ಇರಾಲಿ ಮಾರಾಯ್ತಿ" ಹೇಳಿ ಎನ್ನ ತಲೆಕಸವಿನ ಮೇಲೆ ಎನಗಿಪ್ಪ ಪ್ರೀತಿ ಮತ್ತು ಹಕ್ಕು ತೋರಿಸಿದೆ! ಮಕ್ಕೊ ಇಬ್ರೂ ಹೇಳಿದವು, "ಅತ್ತೆ, ಅಮ್ಮಂಗೆ ಹೇಳುದು ಸುಮ್ಮಗೆ, ಎಂಗೊಗಂತೂ ಹೇಳೀ ಹೇಳಿ ಬೊಡುದತ್ತು, ಅಮ್ಮನ ಇನ್ನೂ ಮೂರು ಫ್ರೆಂಡುಗಳ ಅವಸ್ಥೆಯೂ ಹೀಂಗೇ, ಅಮ್ಮನ ವಾದವೇ ಅಮ್ಮಂಗೆ! ಇನ್ನು ನಿಂಗೊ ಹೇಳಿ ಅಮ್ಮನ ಸರಿ ಮಾಡುಲೆ ಮಾಂತ್ರ ಬಾಕಿ ಇಪ್ಪದು"! ಅದಕ್ಕಷ್ಟೇ ಸಾಕಾತು. ಅದು ಮಕ್ಕೊ ಹೇಳಿದ್ದರ ಸವಾಲಾಗಿ ತೆಕ್ಕಂಡು, "ಇದಾ ಮಕ್ಕಳೇ ಒಂದು ಕತ್ತರಿ ತನ್ನಿ" ಹೇಳಿ ತರಿಸಿಕೊಂಡು ಎನಗೆ ಹೇಳಿ ಅದು ಪೇಟೆಂದ ಪೈಸೆ ಕೊಟ್ಟು ತಂದ ಹೊಸಾ ಕ್ಲಿಪ್ಪಿನ ತೋರಿಸಿ ಹೇಳಿತು, "ಇದಾ ಮಾರಾಯ್ತಿ, ಇದು ನಿನಗಾಗಿ ತಂದದು..ನಿನ್ನ ತಲೆಕಸವಿನ ಕೊಡಿಯ ರಜ್ಜ ಕಟ್ ಮಾಡಿ ಮತ್ತೆ ಹೇಳಿಕೊಡ್ತೆ ಹೇಂಗೆ ಕಟ್ಟಿದರೆ ನಿನಗೆ ಲಾಯ್ಕ ಕಾಣ್ತು" ಹೇಳಿ ಹೇಳಿಯಪ್ಪಗ, "ಇಷ್ಟು ಒತ್ತಾಯ ಮಾಡ್ತಾ ಇದ್ದನ್ನೆ, ಹೊಸಾ ಕ್ಲಿಪ್ಪು ಕೂಡಾ ತೈಂದನ್ನೆಪ್ಪಾ...., ಬಾಕಿ ಇಪ್ಪ ಮೂರೂ ಫ್ರೆಂಡುಗೊ ಕೂಡಾ ಎಷ್ಟೋ ಸಮಯಂದ, "ನಿನ್ನ ಸ್ಟೈಲು ಚೇಂಜು ಮಾಡು" ಹೇಳಿ ಹೇಳಿಕೊಂಡೇ ಬೈಂದವು, ಅವರನ್ನು ಒಂದರಿಯಂಗೆ ಖುಷಿ ಪಡಿಸಿದ ಹಾಂಗೂ ಆತು ಹೇಳಿ ಗೇಶಿಕೊಂಡು, "ಆತಂಬಗ" ಹೇಳಿ ಕಣ್ಣು ಮುಚ್ಚಿಯೊಂಡು ಕಷ್ಟಲ್ಲೇ ಒಪ್ಪಿಗೆ ಕೊಟ್ಟೆ! "ಜಾಣ ಮರಿ" ಹೇಳಿ ಎನ್ನ ಹೊಗಳಿ ಅಟ್ಟಕ್ಕೇರಿಸಿ ತಲೆಕಸವಿನ ಕೊಡಿಯ ಕ್ಷಣ ಮಾತ್ರಲ್ಲಿ ಕತ್ತರಿಸಿಯೇ ಬಿಟ್ಟತ್ತು!...ಹಾಂಗೇ ಬಾಚಣಿಕೆ ತೆಕ್ಕಂಡು ಎನ್ನ ತಲೆಯ ಬಾಚಿ ತಲೆಯ ಎರಡೂ ಹೊಡೆಂದ ರಜ್ಜ ರಜ್ಜ ತಲೆಕಸವಿನ ಹಿಡುದು ಅದರೆಲ್ಲಾ ತಲೆಯ ಹಿಂಭಾಗದ ಮಧ್ಯಭಾಗಕ್ಕೆ ತಂದು ಒಟ್ಟು ಮಾಡಿಕ್ಕಿ, ಅದು ತಂದ ಕ್ಲಿಪ್ಪಿನ ಸಿಕ್ಕುಸಿ, ಕ್ಲಿಪ್ಪಿನ  ಜತೆಲಿ ತಂದಿದ್ದ ನಡೂಕಿಲಿ ಕಲ್ಲಿಪ್ಪ ಕೆಂಪು ಸ್ಟಿಕ್ಕರ್ ಬಿಂದಿಯ ಎನ್ನ ಹಣೆಗೆ ಆಂಟಿಸಿಕ್ಕಿ ಎನ್ನ ಕೈಗೆ ಕನ್ನಡಿಯ ಒಡ್ಡಿ ಕೇಳಿತು, "ಈಗ ಹೇಂಗೆ ಕಾಣ್ತೆ ನೀನೇ ನೋಡು, ಷೋಡಶಿ ಹಾಂಗೆ ಕಾಣ್ತೆ ಗೊಂತಿದ್ದಾ! ಆ ನಿನ್ನ ಕಪ್ಪು ಬಣ್ಣದ ಪತಾಕೆಲಿ(ರಬ್ಬರ್ ಬ್ಯಾಂಡಿಲಿ)ಜುಟ್ಟು ಕಟ್ಟಿಕೊಂಡಿಪ್ಪಾಗ ಮುದಿ ಪ್ರಾಯದವರ ಹಾಂಗೆ ಕಂಡೊಂಡಿತ್ತೆ ಗೊಂತಿದ್ದಾ?!" ಹೇಳಿ ಹೇಳಿತು! ಕನ್ನಡಿ ಒಳಾಣ ಎನ್ನ ಚಿತ್ರವ ಕಣ್ಣಿಲಿ ಕಣ್ಣಿಟ್ಟು ನೋಡಿಯಪ್ಪಗ ಬದಲಾವಣೆ ಕಂಡದಂತೂ ನಿಜ! ಆದರೂ ಹೇಳಿದೆ, "ಈ ಚೆಂದ ಆರಿಂಗಿಪ್ಪದು ಮಾರಾಯ್ತಿ? ಅದು ಸರಿ ಈ ಕ್ಲಿಪ್ಪಿನ ಸಿಕ್ಕುಸುಲೆ ಎನಗೆ ಅರಡಿಯೇಕನ್ನೇ" ಹೇಳಿ ಹೇಳಿದೆ. ಹಾಂಗೇ ಅದು ಹಾಕಿದ್ದರ ತೆಗದು ಆನೇ ಆ ಕ್ಲಿಪ್ಪಿನ ಎನ್ನ ತಲೆಕಸವಿನ ಒಟ್ಟು ಮಾಡಿ ಸಿಕ್ಕುಸುಲೆ ಹೆರಟೆ. ಆ ಕ್ಲಿಪ್ಪಿಂಗೆ ಎನ್ನ ಅಭ್ಯಾಸ ಇಲ್ಲದ್ದ ಕಾರಣವೋ ಎಂತೋ, ಅದರ ಎರಡು ಬೆರಳುಗಳ ಸಹಾಯಂದ ಹಿಡುದು ಬಾಯಿ ಬಿಡಿಸಿ, ತಲೆಕಸವಿಂಗೆ ಸಿಕ್ಕುಸ್ಸೇಕು ಹೇಳಿ ಅಪ್ಪಾಗ ಅದು ಅಷ್ಟು ದೂರ ಹೋಗಿ ಬಿದ್ದತ್ತು!! ಎರಡು, ಮೂರು ಸಲವೂ ಹಾಂಗೇ ಆಯೇಕ್ಕಾ?! ಅದರ ಬೇಟೆ ಆಡುವ ಕೆಲಸವೇ ಆಗಿಹೋತು ಎನಗೆ! ಎನ್ನ ಫ್ರೆಂಡ್‍ದೇ, ಮಕ್ಕಳುದೇ ಎನ್ನ ಅವಸ್ಥೆ ನೋಡಿ ಬಿದ್ದು ಬಿದ್ದು ನೆಗೆ ಮಾಡುಲೆ ಶುರು ಮಾಡಿದವು! "ಅಲ್ಲಾ ಮಾರಾಯ್ತಿ, ಸ್ಕೂಟರು, ಕಾರು ಎಲ್ಲಾ ಬಿಡುವ ನಿನಗೆ ಈ ಒಂದು ಸಣ್ಣ ಕ್ಲಿಪ್ಪಿನ ಹ್ಯಾಂಡಲ್ ಮಾಡ್ಲೆಡಿತ್ತಿಲ್ಲೆಯಾ?! "ಹೇಳಿ ಫ್ರೆಂಡ್ ನೆಗೆ ತಡಕ್ಕೊಂಬಲೆ ಎಡಿಯದ್ದೇ ಕೇಳಿದ ಪ್ರಶ್ನೆ ಎನಗೆ ನೆಗೆ ಬರ‍್ಸಿತು! "ಆ ವಿದ್ಯೆಯಾದರೆ ನಮ್ಮ ಜೀವನಲ್ಲಿ ಉಪಯೋಗಕ್ಕೆ ಬತ್ತು, ಈ ಸ್ಟೈಲು ಯಾವ ಉಪಯೋಗಕ್ಕೆ, ಯಾವ ಕರ್ಮಕ್ಕೆ, ಆರಿಂಗೆ ಬೇಕಾಗಿ" ಹೇಳಿ ಅದರ ಮನಸ್ಸಿಲಿಯೇ ಬೈದೆ! ಅಂತೂ ಅದು ವಾಪಸ್ಸು ಹೋಪನ್ನಾರ ಮಹಾಭಂಗಲ್ಲಿ ಅದೇ ಕ್ಲಿಪ್ಪಿಲಿತ್ತಿದ್ದೆ. ಮನೆಗೆ ಎತ್ತಿದ ಮತ್ತೂ ಮೆಸ್ಸೇಜು ಮಾಡಿ ಕೇಳಿಕೊಂಡಿದ್ದತ್ತು, "ಅದೇ ಆನು ಹಾಕಿದ ಕ್ಲಿಪ್ಪೇ ಇದ್ದಾ ತಲೆಲಿ, ಅಲ್ಲಾ ಆ ನಿನ್ನ ಕರಿ ಪತಾಕೆಯ ಮುಡಿಗೇರಿಸಿದ್ದೆಯಾ?!" ಹೇಳಿ! ಹಾಂಗೆ ಧೈರ್ಯ ತುಂಬುಲೆ ಈ ಮೆಸ್ಸೇಜಿನ ಹಿಂದದ ಇನ್ನೊಂದು ಮೆಸ್ಸೇಜು ಬೇರೆ! "ಕ್ಲಿಪ್ಪಿನ ಹೇಂಗೆ ತಲೆಕಸವಿಂಗೆ ಸಿಕ್ಕುಸುದು ಹೇಳಿ ಆಲೋಚನೆ ಮಾಡೇಡ ಬಂಗಾರಿ....ನಾಲ್ಕು ಸಲ ತೆಗದು ಹಾಕಿ ಅಪ್ಪಾಗ ನಿನಗೆ ಅಭ್ಯಾಸ ಆವುತ್ತು ಆತ ಪುಟ್ಟಾ..." ಹೇಳಿ!



     ಎನ್ನ ಹೊಸಾ ಫ್ರೆಂಡ್, ಹಳೇ ಫ್ರೆಂಡುಗೊ, ಮಕ್ಕೊ ಎಲ್ಲಾ ಹೇಳುದರಲ್ಲಿ ಸತ್ಯಾಂಶ ಅಂತೂ ಖಂಡಿತಾ ಇದ್ದು! ಲಾಯ್ಕಲ್ಲಿ ಡ್ರೆಸ್ ಮಾಡಿ, ಅದು ಹೇಳಿದ ಹಾಂಗೆ ತಲೆ ಕಟ್ಟಿಕ್ಕಿ, ಕಲ್ಲಿಪ್ಪ ಕೆಂಪು ಬಿಂದಿಯ ಹಣೆಗಿಟ್ಟರೆ ಲಾಯ್ಕ ಕಾಣ್ತೆ! "ನಿನ್ನಲ್ಲಿ ಬದಲಾವಣೆ ತಪ್ಪಲೆ ಇಷ್ಟು ವರ್ಷಂದ ಪ್ರಯತ್ನ ಪಟ್ಟರೂ ಎಂಗಳ ಕೈಯಿಂದ ಆಗಿತ್ತಿಲ್ಲೆನ್ನೇ, ನಿನ್ನ ಹೊಸಾ ಫ್ರೆಂಡ್ ಗ್ರೇಟ್ ಮಾರಾಯ್ತಿ" ಹೇಳಿ ಎನ್ನ ಹೊಸಾ ಫ್ರೆಂಡಿನ ಸಾಹಸವ ಹೊಗಳಿದವು ಹಳೇ ಫ್ರೆಂಡುಗೊ! ಎನ್ನ ಯಜಮಾನರಂತೂ ಒಂದು ಪಂಚಿಂಗ್ ಡೈಲಾಗ್ ಹೇಳಿದವು, "ನೀನು ಮೊದಾಲು ನಾಲ್ಕು ಜೆನರಲ್ಲಿ ಎದ್ದು ಕಂಡೊಂಡಿತ್ತೆ, ಈಗಲೂ ಕೂಡಾ ನಾಲ್ಕು ಜೆನರ ಎಡೆಲಿ ಎದ್ದು ಕಾಣ್ತೆ" ಹೇಳಿ! ಈ ಮಾತಿನ ಕೂಲಂಕುಷವಾಗಿ ಪರಿಶೀಲಿಸಿದರೆ ಎಷ್ಟೂ ಅರ್ಥಂಗೊ ಇದ್ದು! ಅವ್ವು ಯಾವ ಅರ್ಥಲ್ಲಿ ಹೇಳಿದ್ದೋ ಎನಗಂತೂ ಗೊಂತಿಲ್ಲೆ, ತನಿಖೆ ಮಾಡುಲೆ ಹೆರಟರೆ ಎನ್ನ ಖುಶಿ ಪಡಿಸುವಂತಹ ಉತ್ತರ ಬಕ್ಕಷ್ಟೇ ಅವರ ಬಾಯಿಂದ!! ಒಂದೆರಡು ಕಡೆಂಗೆ ಈ ಹೊಸಾ ಸ್ಟೈಲಿಲಿ ಹೋದಿಪ್ಪಗ ಅದುವರೆಗೆ ಎನ್ನ ಗುರ‍್ತ ಇದ್ದು ಕೂಡಾ ಎಷ್ಟೋ ಸಲ ನೆಗೆ ಕೂಡಾ ಮಾಡದ್ದೆ ಕಡೆಗಣಿಸಿದ್ದ ಕೆಲವು ಜೆನಂಗ, ಹೊಸಾ ಸ್ಟೈಲಿಲಿ ಎನ್ನ ನೋಡಿ, ಪರಿಚಯದ ನಾಲ್ಕು ಮಾತಾಡಿದವು ಕೂಡಾ!! ಕೆಲವು ಜೆನಂಗ ಎನ್ನ ಬದಲಾವಣೆಯ ನೋಡಿ ಬಾಯಿ ಬಿಟ್ಟಿದವಿಲ್ಲೆ! ಹೇಳಿದರೆಲ್ಲಿ ಕಡಮ್ಮೆ ಆದರೆ ಹೇಳಿ ಹೆದರಿಕೆಯಾ ಇಲ್ಲಾ ಅಹಂ ಹೇಳಿಯಾ ಅರ್ಥ ಆಯಿದಿಲ್ಲೆ! ಇನ್ನೂ ಕೆಲವು ಜೆನಂಗ, ’ಯೌವನ್ನಲ್ಲಿ ಇಷ್ಟು ದಿನ ಶೋಕಿ ಮಾಡದ್ದ ಈ ಜೆನಕ್ಕೆ ಎಂತ ಮರುಳಪ್ಪ ನಲ್ವತ್ತು ವರ್ಷ ತುಂಬಿಕೊಂಡು ಬಂದ ಹಾಂಗೇ....’ ಹೇಳುವ ಹಾಂಗೆ ನೋಡಿದ ಹಾಂಗನ್ನಿಸಿತೆನಗೆ! ತಮ್ಮನ ಹೆಂಡತಿ ಹೇಳಿತು, "ಅತ್ತಿಗೇ..ಲಾಯ್ಕ ಕಾಣ್ತಾ ಇದ್ದೆ ಈ ಹೊಸಾ ಸ್ಟೈಲಿಲಿ...ಯು ಆರ್ ನಾಟಿ ಎಟ್ ಫಾರ‍್ಟೀ...ವೆರಿ ಗುಡ್" ಹೇಳಿ! 

     ಆದರೆ ನಾವು ಎಷ್ಟು ಲಾಯ್ಕದ ಡ್ರೆಸ್ ಹಾಕಿಕೊಂಡರೂ ಅಪರಿಚಿತರಿಂಗೆ ಅದು ಬೇಡ ಅಲ್ಲದಾ?! ಆತ್ಮೀಯರಿಂಗೆ, ಸ್ನೇಹಿತರಿಂಗೆ ನಮ್ಮ ಶೃಂಗಾರಕ್ಕಿಂತಲೂ ನಾವೇ ಮುಖ್ಯ ಹೇಳಿ ಹೇಳುದರ ಆನು ನಂಬಿದ್ದೆ...ರಾಷ್ಟಕವಿ ಕುವೆಂಪು ಅವರ ಪದ್ಯದ ಸಾಲುಗೊ, ’ನಿನ್ನೆಡೆಗೆ ಬರುವಾಗ ಸಿಂಗಾರದ ಹೊರೆಯೇಕೆ, ಸಡಗರದ ಮಾತುಗಳ ಬಿಂಕವೇಕೆ....’ಎಂತಾ ಅರ್ಥಗರ್ಭಿತ ಅಲ್ಲದಾ? ಪಾಪ ಎನ್ನಲ್ಲಿ ಬದಲಾವಣೆ ತಪ್ಪಲೆ ಹೆರಟ ಫ್ರೆಂಡಿಂಗೆ ನಿರಾಶೆ ಮಾಡದ್ದೇ, ಆನು ಹಾಕಿಕೊಂಬ ಡ್ರೆಸ್ಸಿಲಿ ವಿಶೇಷ ಬದಲಾವಣೆ ತಾರದ್ದರುದೇ, ಎನಗೆ ಅದು ಹೇಳಿಕೊಟ್ಟ ಪ್ರೀತಿಯ ಪರಿಯಿಂದಾಗಿ, ಅದು ಹೇಳಿಕೊಟ್ಟ ರೀತಿಲೇ ತಲೆಕಟ್ಟುತ್ತಾ ಇದ್ದೆ, ಹಾಂಗೇ ಅದುವೇ ಎನಗಾಗಿ ಖರೀದಿಸಿ ತಂದು, ಆತ್ಮೀಯವಾಗಿ ಆದೇಶ ನೀಡಿ ಕೊಟ್ಟ ನಡೂಕಿಲಿ ಕಲ್ಲಿಪ್ಪ ಕೆಂಪು ಬಿಂದಿಯ ಕೂಡಾ ಹಾಕುತ್ತಾ ಇದ್ದೆ ಹಣೆಗೆ ಒಂದು ತಿಂಗಳ ಲಾಗಾಯ್ತು!!

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು